ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಮಹಾತ್ಮ ಫುಲೆ: ಇಂದಿಗೂ ಭಾರತಕ್ಕೆ ದಾರಿ ದೀಪ

ಮಹಾತ್ಮ ಫುಲೆ ಅವರು ಕೇವಲ ಒಬ್ಬ ಮಹಾನ್ ಸುಧಾರಕರಷ್ಟೇ ಅಲ್ಲ, ಅವರ ಜೀವನವು ನೈತಿಕ ಧೈರ್ಯ, ನಿರಂತರ ಅನ್ವೇಷಣೆ ಮತ್ತು ಸಾಮಾಜಿಕ ಒಳಿತಿಗಾಗಿ ಅಚಲವಾದ ಬದ್ಧತೆಯಿಂದ ಕೂಡಿತ್ತು. ತಾವು ಕಟ್ಟಿದ ಸಂಸ್ಥೆಗಳು ಮತ್ತು ಮುನ್ನಡೆಸಿದ ಚಳುವಳಿಗಳಿಗಾಗಿ ಮಹಾತ್ಮ ಫುಲೆ ಅವರು ಸ್ಮರಣೀ ಯರು. ಅದೇ ಸಮಯದಲ್ಲಿ, ನಮ್ಮ ನಾಗರಿಕತೆಯ ಪಯಣಕ್ಕೆ ಅವರ ದೊಡ್ಡ ಕೊಡುಗೆ ಎಂದರೆ ಅವರು ಜನರಲ್ಲಿ ಮೂಡಿಸಿದ ಭರವಸೆ, ತುಂಬಿದ ಆತ್ಮವಿಶ್ವಾಸ ಮತ್ತು ಅವರ ಪ್ರಖರ ಆಲೋಚನೆಗಳು ಇಂದಿಗೂ ದೇಶದ ಕೋಟ್ಯಂತರ ಜನರಿಗೆ ನೀಡುತ್ತಿರುವ ಅತೀವ ಶಕ್ತಿಯಾಗಿದೆ.

ಮಹಾತ್ಮ ಫುಲೆ: ಇಂದಿಗೂ ಭಾರತಕ್ಕೆ ದಾರಿ ದೀಪ

-

Profile
Ashok Nayak Apr 11, 2026 11:18 AM

ಸಂಸ್ಮರಣೆ

ಶ್ರೀ ನರೇಂದ್ರ ಮೋದಿ

ಇಂದು, ಏಪ್ರಿಲ್ 11, ನಮ್ಮೆಲ್ಲರಿಗೂ ಅತ್ಯಂತ ವಿಶೇಷವಾದ ದಿನ. ಇದು ಭಾರತದ ಶ್ರೇಷ್ಠ ಸಮಾಜ ಸುಧಾರಕರಲ್ಲಿ ಒಬ್ಬರು ಮತ್ತು ತಲೆಮಾರುಗಳಿಗೆ ಮಾರ್ಗದರ್ಶಕರಾಗಿರುವ ಮಹಾತ್ಮ ಜ್ಯೋತಿ ರಾವ್ ಫುಲೆ ಅವರ ಜನ್ಮದಿನೋತ್ಸವ. ಪ್ರಸಕ್ತ ವರ್ಷ ಈ ಸಂದರ್ಭವು ಇನ್ನೂ ಹೆಚ್ಚಿನ ಪ್ರಾಮುಖ್ಯತೆ ಯನ್ನು ಪಡೆದಿದೆ. ಏಕೆಂದರೆ ಇದು ಅವರ 200ನೇ ಜಯಂತಿ ಆಚರಣೆಯ ಆರಂಭವನ್ನು ಸೂಚಿಸುತ್ತದೆ.

ಮಹಾತ್ಮ ಫುಲೆ ಅವರು ಕೇವಲ ಒಬ್ಬ ಮಹಾನ್ ಸುಧಾರಕರಷ್ಟೇ ಅಲ್ಲ, ಅವರ ಜೀವನವು ನೈತಿಕ ಧೈರ್ಯ, ನಿರಂತರ ಅನ್ವೇಷಣೆ ಮತ್ತು ಸಾಮಾಜಿಕ ಒಳಿತಿಗಾಗಿ ಅಚಲವಾದ ಬದ್ಧತೆಯಿಂದ ಕೂಡಿತ್ತು. ತಾವು ಕಟ್ಟಿದ ಸಂಸ್ಥೆಗಳು ಮತ್ತು ಮುನ್ನಡೆಸಿದ ಚಳುವಳಿಗಳಿಗಾಗಿ ಮಹಾತ್ಮ ಫುಲೆ ಅವರು ಸ್ಮರಣೀಯರು. ಅದೇ ಸಮಯದಲ್ಲಿ, ನಮ್ಮ ನಾಗರಿಕತೆಯ ಪಯಣಕ್ಕೆ ಅವರ ದೊಡ್ಡ ಕೊಡುಗೆ ಎಂದರೆ ಅವರು ಜನರಲ್ಲಿ ಮೂಡಿಸಿದ ಭರವಸೆ, ತುಂಬಿದ ಆತ್ಮವಿಶ್ವಾಸ ಮತ್ತು ಅವರ ಪ್ರಖರ ಆಲೋಚನೆಗಳು ಇಂದಿಗೂ ದೇಶದ ಕೋಟ್ಯಂತರ ಜನರಿಗೆ ನೀಡುತ್ತಿರುವ ಅತೀವ ಶಕ್ತಿಯಾಗಿದೆ.

1827ರಲ್ಲಿ ಮಹಾರಾಷ್ಟ್ರದ ಪುಣೆಯಲ್ಲಿ ಜನಿಸಿದ ಮಹಾತ್ಮ ಫುಲೆ ಅವರು ಸಾಮಾನ್ಯ ಹಿನ್ನೆಲೆ ಯಿಂದ ಬಂದವರು. ಆದರೆ, ಅವರ ಆರಂಭಿಕ ಸಂಕಷ್ಟಗಳು ಅವರ ಕಲಿಕೆ, ಧೈರ್ಯ ಅಥವಾ ಸಮಾಜದ ಬಗೆಗಿನ ಬದ್ಧತೆಗೆ ಎಂದಿಗೂ ಅಡ್ಡಿಯಾಗಲಿಲ್ಲ. ಸವಾಲುಗಳು ಏನೇ ಇರಲಿ, ಕಷ್ಟಪಟ್ಟು ಕೆಲಸ ಮಾಡಬೇಕು, ಜ್ಞಾನವನ್ನು ಪಡೆಯಬೇಕು ಮತ್ತು ಸುಮ್ಮನೆ ಕುಳಿತುಕೊಳ್ಳುವ ಬದಲಿಗೆ ಆ ಸವಾಲುಗಳನ್ನು ಎದುರಿಸಬೇಕು ಎಂಬುದು ಅವರ ಜೀವನದುದ್ದಕ್ಕೂ ಪಾಲಿಸಿಕೊಂಡು ಬಂದ ಗುಣವಾಗಿತ್ತು.

ತಮ್ಮ ಶಾಲಾ ದಿನಗಳಿಂದಲೂ, ಯುವ ಜ್ಯೋತಿರಾವ್ ಅವರು ತೀವ್ರ ಕುತೂಹಲಿಗಳಾಗಿದ್ದರು ಮತ್ತು ಅತೀವ ಓದುಗರಾಗಿದ್ದರು. ಅವರು ತಮ್ಮ ವಯಸ್ಸಿನ ಮಕ್ಕಳು ಓದಬೇಕೆಂದು ನಿರೀಕ್ಷಿಸಿದ್ದ ಕ್ಕಿಂತ ಹೆಚ್ಚಿನ ಪುಸ್ತಕಗಳನ್ನು ಓದುತ್ತಿದ್ದರು. ನಾವು ಎಷ್ಟು ಹೆಚ್ಚು ಪ್ರಶ್ನೆಗಳನ್ನು ಹುಟ್ಟು ಹಾಕುತ್ತೇವೆಯೋ, ಅಷ್ಟು ಹೆಚ್ಚು ಜ್ಞಾನವು ಅವುಗಳಿಂದ ಹೊರಹೊಮ್ಮುತ್ತದೆ ಎಂದು ಅವರು ಹೇಳುತ್ತಿದ್ದರು. ಬಾಲ್ಯದಿಂದಲೇ ಅವರಿಗೆ ಲಭಿಸಿದ್ದ ವಿಮರ್ಶಾ ಮನೋಭಾವವು ಅವರ ಪ್ರಯಾಣ ದುದ್ದಕ್ಕೂ ಸ್ಥಿರವಾಗಿ ಉಳಿದಿತ್ತು ಎಂಬುದು ಇದರಿಂದ ಸ್ಪಷ್ಟವಾಗುತ್ತದೆ.

ಇದನ್ನೂ ಓದಿ: Jyotibha Phule State Award: ಡಾ.ಕಾಂತು ಇಂಡಿ ಇವರಿಗೆ ಜ್ಯೋತಿಭಾ ಪುಲೆ ರಾಜ್ಯಪ್ರಶಸ್ತಿ

ತಮ್ಮ ಜೀವನದುದ್ದಕ್ಕೂ ಕಲಿಕೆ ಮತ್ತು ಶಿಕ್ಷಣವು ಮಹಾತ್ಮ ಫುಲೆ ಅವರ ಉದ್ದೇಶದ ಕೇಂದ್ರಬಿಂದು ವಾಗಿತ್ತು. ಜ್ಞಾನವು ಕೇವಲ ಕೆಲವರ ಪಾಲಿನ ಸ್ವತ್ತಲ್ಲ, ಬದಲಾಗಿ ಅದು ಎಲ್ಲರಿಗೂ ಹಂಚಲ್ಪಡ ಬೇಕಾದ ಶಕ್ತಿ ಎಂಬುದನ್ನು ಅವರು ಬಹಳ ಸ್ಪಷ್ಟವಾಗಿ ಗುರುತಿಸಿದ್ದರು. ಕಲಿಕೆಯ ಅವಕಾಶವು ಅನೇಕರಿಗೆ ನಿರಾಕರಿಸಲ್ಪಟ್ಟಿದ್ದ ಕಾಲದಲ್ಲಿ, ಅವರು ಹೆಣ್ಣುಮಕ್ಕಳಿಗಾಗಿ ಮತ್ತು ಔಪಚಾರಿಕ ಶಿಕ್ಷಣದಿಂದ ಹೊರಗುಳಿದವರಿಗಾಗಿ ಶಾಲೆಗಳನ್ನು ತೆರೆದರು.

ತಾಯಂದಿರ ಮೂಲಕ ಮಕ್ಕಳಲ್ಲಿ ಉಂಟಾಗುವ ಯಾವುದೇ ಸುಧಾರಣೆಯು ಅತ್ಯಂತ ಅಮೂಲ್ಯ ವಾದುದು. ಆದ್ದರಿಂದ, ಶಾಲೆಗಳನ್ನು ತೆರೆಯುವುದಾದರೆ, ಅವುಗಳನ್ನು ಮೊದಲು ಹೆಣ್ಣು ಮಕ್ಕಳಿ ಗಾಗಿ ತೆರೆಯಬೇಕು ಎಂದು ಅವರು ಹೇಳುತ್ತಿದ್ದರು. ತರಗತಿಯು ನ್ಯಾಯ ಮತ್ತು ಸಮಾನತೆಯ ಸಾಧನವಾಗುವಂತಹ ಹೊಸ ಸಾಮಾಜಿಕ ಕಲ್ಪನೆಯನ್ನು ಸೃಷ್ಟಿಸಲು ಅವರು ಕೆಲಸ ಮಾಡಿದರು.

ಶಿಕ್ಷಣದ ಬಗ್ಗೆ ಅವರಿಗಿದ್ದ ದೂರದೃಷ್ಟಿಯು ನಮಗೆ ಹೆಚ್ಚಿನ ಸೂರ್ತಿ ನೀಡುತ್ತದೆ. ಕಳೆದ ದಶಕ ದಲ್ಲಿ, ನಾವು ಸಂಶೋಧನೆ ಮತ್ತು ನಾವೀನ್ಯತೆಯನ್ನು ಭಾರತದ ಯುವಜನರ ಮೂಲಾಧಾರ ವನ್ನಾಗಿ ಮಾಡಲು ಕೆಲಸ ಮಾಡಿದ್ದೇವೆ. ಯುವ ಮನಸ್ಸುಗಳನ್ನು ಪ್ರಶ್ನಿಸಲು, ಅನ್ವೇಷಿಸಲು ಮತ್ತು ಆವಿಷ್ಕರಿಸಲು ಪ್ರೋತ್ಸಾಹಿಸುವ ಪರಿಸರ ವ್ಯವಸ್ಥೆಯನ್ನು ನಿರ್ಮಿಸಲು ಪ್ರಯತ್ನಿಸಲಾಗುತ್ತಿದೆ.

ಜ್ಞಾನ, ಕೌಶಲ್ಯ ಮತ್ತು ಅವಕಾಶಗಳಲ್ಲಿ ಹೂಡಿಕೆ ಮಾಡುವ ಮೂಲಕ, ಭಾರತವು ತನ್ನ ಯುವ ಜನತೆಯ ಸಮಸ್ಯೆಗಳನ್ನು ಬಗೆಹರಿಸುವವರನ್ನಾಗಿ ಮತ್ತು ರಾಷ್ಟ್ರೀಯ ಪ್ರಗತಿಯ ಚಾಲಕರನ್ನಾಗಿ ಸಬಲೀಕರಿಸುತ್ತಿದೆ. ತಮ್ಮ ಜ್ಞಾನ ಮತ್ತು ಬುದ್ಧಿವಂತಿಕೆಯಿಂದಾಗಿ ಮಹಾತ್ಮ ಫುಲೆ ಅವರು ಕೃಷಿ, ಆರೋಗ್ಯ ಮತ್ತು ಗ್ರಾಮೀಣಾಭಿವೃದ್ಧಿಯಂತಹ ಕ್ಷೇತ್ರಗಳಲ್ಲಿ ಬಲವಾದ ತಿಳುವಳಿಕೆಯನ್ನು ಬೆಳೆಸಿಕೊಂಡಿದ್ದರು.

phule

ನಮ್ಮ ರೈತರು ಮತ್ತು ಕಾರ್ಮಿಕರಿಗೆ ಆಗುವ ಅನ್ಯಾಯವು ನಮ್ಮ ಸಮಾಜವನ್ನು ದುರ್ಬಲ ಗೊಳಿಸುತ್ತದೆ ಎಂದು ಅವರು ಆಗಾಗ್ಗೆ ಹೇಳುತ್ತಿದ್ದರು. ಸಾಮಾಜಿಕ ಅಸಮಾನತೆಗಳು ಹೊಲಗಳಲ್ಲಿ ಅಥವಾ ಹಳ್ಳಿಗಳಲ್ಲಿ ದೈನಂದಿನ ಜೀವನದಲ್ಲಿ ಹೇಗೆ ವ್ಯಕ್ತ ವಾಗುತ್ತವೆ ಎಂಬುದನ್ನು ಅವರು ಕಂಡಿದ್ದರು. ಆದ್ದರಿಂದ, ಅವರು ಬಡವರು, ತುಳಿತಕ್ಕೊಳ ಗಾದವರು ಮತ್ತು ಸಮಾಜದ ಅಂಚಿ ನಲ್ಲಿರುವವರಿಗೆ ಘನತೆಯನ್ನು ಖಚಿತಪಡಿಸಿಕೊಳ್ಳಲು ತಮ್ಮನ್ನು ತೊಡಗಿಸಿಕೊಂಡರು.

ಅದೇ ಸಮಯದಲ್ಲಿ, ಸಾಮಾಜಿಕ ಸಾಮರಸ್ಯವನ್ನು ಕಾಪಾಡಲು ಅವರು ಸಾಧ್ಯವಿರುವ ಎಲ್ಲ ಪ್ರಯತ್ನಗಳನ್ನು ಮಾಡಿದರು. ಮಹಾತ್ಮ ಫುಲೆ ಅವರು ಅಭಿಪ್ರಾಯಪಟ್ಟಂತೆ, ಸಮಾಜದಲ್ಲಿ ಎಲ್ಲರಿಗೂ ಸಮಾನ ಹಕ್ಕುಗಳು ಸಿಗುವವರೆಗೆ ನಿಜವಾದ ಸ್ವಾತಂತ್ರ್ಯ ಸಿಗುವುದಿಲ್ಲ. ಅದಕ್ಕಾಗಿ, ಅವರು ಈ ದೃಷ್ಟಿಕೋನವನ್ನು ಕಾರ್ಯರೂಪಕ್ಕೆ ತರುವಂತಹ ಸಂಸ್ಥೆಗಳನ್ನು ಕಟ್ಟಿದರು, ಸಮ ಸಮಾಜಕ್ಕೆ ಕೊಡುಗೆ ನೀಡಿದರು. ಅವರು ಸ್ಥಾಪಿಸಿದ ‘ಸತ್ಯಶೋಧಕ ಸಮಾಜ’ವು ಆಧುನಿಕ ಭಾರತದ ಪ್ರಮುಖ ಸಮಾಜ ಸುಧಾರಣಾ ಚಳುವಳಿಗಳಲ್ಲಿ ಒಂದಾಗಿದೆ.

ಇದು ಸಮಾಜ ಸುಧಾರಣೆ, ಸಮುದಾಯ ಸೇವೆ ಮತ್ತು ಮಾನವ ಘನತೆಯನ್ನು ಹೆಚ್ಚಿಸುವಲ್ಲಿ ಮುಂಚೂಣಿಯಲ್ಲಿತ್ತು. ಇದು ಮಹಿಳೆಯರು, ಯುವಕರು ಮತ್ತು ಹಳ್ಳಿಗಳಲ್ಲಿ ವಾಸಿಸುವವರ ಪರಿಣಾಮಕಾರಿ ಧ್ವನಿಯಾ ಯಿತು. ನ್ಯಾಯ, ಪ್ರತಿಯೊಬ್ಬ ವ್ಯಕ್ತಿಯ ಗೌರವ ಮತ್ತು ಸಾಮೂಹಿಕ ಪ್ರಗತಿಯ ಮನೋಭಾವವನ್ನು ಕೇಂದ್ರದಲ್ಲಿ ಇರಿಸುವ ಮೂಲಕ ಸಮಾಜವನ್ನು ಬಲಪಡಿಸ ಬಹುದು ಎಂಬ ಮಹಾತ್ಮ ಫುಲೆ ಅವರ ಅಚಲ ನಂಬಿಕೆಯನ್ನು ಈ ಚಳುವಳಿಯು ಪ್ರತಿಬಿಂಬಿ ಸಿತು. ಅವರ ವೈಯಕ್ತಿಕ ಜೀವನವೂ ಸಹ ಧೈರ್ಯದ ಮಹಾನ್ ಪಾಠಗಳನ್ನು ಒಳಗೊಂಡಿದೆ.

ಸದಾ ಜನರ ನಡುವೆ ಇರುತ್ತಾ, ಅವರಿಗಾಗಿ ಅಹೋರಾತ್ರಿ ಶ್ರಮಿಸಿದ್ದು ಫುಲೆ ಅವರ ಆರೋಗ್ಯದ ಮೇಲೆ ತೀವ್ರ ಪರಿಣಾಮ ಬೀರಿತು. ಆದರೆ ಎಂತಹ ಗಂಭೀರ ಆರೋಗ್ಯ ಸವಾಲುಗಳೂ ಅವರ ಸಂಕಲ್ಪವನ್ನು ಕುಗ್ಗಿಸಲು ಸಾಧ್ಯವಾಗಲಿಲ್ಲ. ಪಾರ್ಶ್ವವಾಯುವಿನಂತಹ ಕಠಿಣ ಸ್ಥಿತಿಗೆ ಒಳಗಾದ ನಂತರವೂ, ಅವರು ತಮ್ಮ ದೂರದೃಷ್ಟಿಯ ಗುರಿಗಳನ್ನು ಈಡೇರಿಸಲು ಕೆಲಸ ಮಾಡುವುದನ್ನು ಮುಂದುವರಿಸಿದರು.

ಹೌದು, ಅವರ ದೇಹಕ್ಕೆ ಕಠಿಣ ಪರೀಕ್ಷೆ ಎದುರಾಗಿತ್ತು. ಆದರೆ, ಸಮಾಜದ ಬಗೆಗಿನ ಅವರ ಬದ್ಧತೆ ಮಾತ್ರ ಕಿಂಚಿತ್ತೂ ಕದಲಲಿಲ್ಲ. ಇಂದಿಗೂ, ವಿಶೇಷವಾಗಿ ಸಂಘರ್ಷಗಳ ನಡುವೆ ಧೈರ್ಯವನ್ನು ಹುಡುಕುವ ಕೋಟ್ಯಂತರ ಜನರಿಗೆ ಅವರ ಜೀವನದ ಈ ಆಯಾಮವು ಅತ್ಯಂತ ಶಕ್ತಿಶಾಲಿ ಪ್ರೇರಣೆ ಯಾಗಿದೆ.

ಮಹಾತ್ಮ ಫುಲೆ ಅವರ ಸ್ಮರಣೆಯು ನಮ್ಮ ರಾಷ್ಟ್ರದ ಶ್ರೇಷ್ಠ ಸುಧಾರಕರಲ್ಲಿ ಒಬ್ಬರಾದ ಸಾವಿತ್ರಿ ಬಾಯಿ ಫುಲೆ ಅವರ ಉಲ್ಲೇಖವಿಲ್ಲದೆ ಎಂದಿಗೂ ಪೂರ್ಣಗೊಳ್ಳದು. ಭಾರತದ ಪ್ರವರ್ತಕ ಮಹಿಳಾ ಶಿಕ್ಷಕಿಯಾಗಿ, ಅವರು ಹೆಣ್ಣುಮಕ್ಕಳ ಶಿಕ್ಷಣದ ಕ್ರಾಂತಿಯಲ್ಲಿ ನಿರ್ಣಾಯಕ ಪಾತ್ರ ವಹಿಸಿದರು ಮತ್ತು ಅವರ ಕನಸುಗಳಿಗೆ ರೆಕ್ಕೆ ಕಟ್ಟಿದರು.

ಮಹಾತ್ಮ ಫುಲೆ ಅವರ ನಿಧನದ ನಂತರವೂ ಸಾವಿತ್ರಿಬಾಯಿ ಅವರು ಸುಧಾರಣೆಯ ಆ ಜ್ಯೋತಿ ಯನ್ನು ಎತ್ತಿ ಹಿಡಿದರು. 1897ರಲ್ಲಿ ಪ್ಲೇಗ್ ಸಾಂಕ್ರಾಮಿಕ ಹರಡಿದಾಗ, ಅವರು ರೋಗ ಪೀಡಿತರ ಸೇವೆಗೆ ಎಷ್ಟರಮಟ್ಟಿಗೆ ಸಮರ್ಪಿಸಿಕೊಂಡರೆಂದರೆ, ಅವರು ಸ್ವತಃ ಅದೇ ಕಾಯಿಲೆಗೆ ತುತ್ತಾಗಿ ಕೊನೆಗೆ ತಮ್ಮ ಪ್ರಾಣವನ್ನೇ ಅರ್ಪಿಸಿದರು.

ನಮ್ಮ ಪುಣ್ಯಭೂಮಿಯು ಕಾಲಕಾಲಕ್ಕೆ ಮಹಾನ್ ಪುರುಷರು ಮತ್ತು ಮಹಿಳೆಯರ ಆಶೀರ್ವಾದಕ್ಕೆ ಪಾತ್ರವಾಗಿದೆ; ಇವರು ತಮ್ಮ ಉದಾತ್ತ ಆಲೋಚನೆ, ಅಪ್ರತಿಮ ತ್ಯಾಗ ಮತ್ತು ಕರ್ತವ್ಯ ನಿಷ್ಠೆಯ ಮೂಲಕ ಸಮಾಜವನ್ನು ಬಲಪಡಿಸಿದ್ದಾಆರೆ. ಇವರು ಬದಲಾವಣೆಗಾಗಿ ಯಾರೋ ಬರುತ್ತಾರೆಂದು ಕಾಯಲಿಲ್ಲ, ಬದಲಾಗಿ ತಾವೇ ಆ ಬದಲಾವಣೆಯ ಮೂಲಶಕ್ತಿಯಾದರು.

ನೂರಾರು ವರ್ಷಗಳಿಂದ ನಮ್ಮ ನಾಡಿನಲ್ಲಿ ಸಾಮಾಜಿಕ ಸುಧಾರಣೆಯ ಕರೆಯು ಸಮಾಜದ ಒಳಗಿ ನಿಂದಲೇ ಮೊಳಗುತ್ತಾ ಬಂದಿದೆ. ಜನಸಾಮಾನ್ಯರ ಕಷ್ಟ-ಕಾರ್ಪಣ್ಯಗಳನ್ನು ಕಣ್ಣಾರೆ ಕಂಡು, ಅದನ್ನು ‘ಹಣೆಬರಹ’ ಎಂದು ಒಪ್ಪಿಕೊಳ್ಳಲು ನಿರಾಕರಿಸಿದ ಧೀಮಂತ ವ್ಯಕ್ತಿಗಳಿಂದ ಈ ಕ್ರಾಂತಿ ಉದ್ಭವಿಸಿದೆ. ಮಹಾತ್ಮ ಜ್ಯೋತಿರಾವ್ ಫುಲೆ ಅಂತಹ ಕ್ರಾಂತಿಕಾರಿ ಧ್ವನಿಗಳಲ್ಲಿ ಒಬ್ಬರು.

2022ರಲ್ಲಿ ಪುಣೆಗೆ ಭೇಟಿ ನೀಡಿದಾಗ ಅಲ್ಲಿನ ಅವರ ಭವ್ಯ ಪ್ರತಿಮೆಗೆ ನಾನು ಗೌರವ ಸಲ್ಲಿಸಿದ್ದನ್ನು ಪ್ರೀತಿಯಿಂದ ನೆನಪಿಸಿಕೊಳ್ಳುತ್ತೇನೆ. ನಾವು ಅವರ ದ್ವಿಶತಮಾನೋತ್ಸವದ ವರ್ಷದ ಆರಂಭವನ್ನು ಗುರುತಿಸುತ್ತಿರುವಾಗ, ಮಹಾತ್ಮ ಜ್ಯೋತಿರಾವ್ ಫುಲೆ ಅವರಿಗೆ ಸಲ್ಲಿಸುವ ಅತ್ಯಂತ ಸೂಕ್ತ ಗೌರವ ವೆಂದರೆ ‘ನವೀಕರಣ’.

ಅವರಿಗೆ ಹತ್ತಿರವಾದ ಶಿಕ್ಷಣದಂತಹ ವಿಷಯಗಳಿಗೆ ನಮ್ಮ ಬದ್ಧತೆಯನ್ನು ನವೀಕರಿಸುವುದು. ಅನ್ಯಾಯದ ಬಗ್ಗೆ ನಮ್ಮ ಸಂವೇದನಾಶೀಲತೆಯನ್ನು ನವೀಕರಿಸುವುದು. ಸಮಾಜವು ಒಳಗಿ ನಿಂದಲೇ ತನ್ನನ್ನು ತಾನು ಸುಧಾರಿಸಿಕೊಳ್ಳಬಲ್ಲದು ಎಂಬ ನಮ್ಮ ನಂಬಿಕೆಯನ್ನು ನವೀಕರಿಸು ವುದು.

ನೈತಿಕ ಸ್ಪಷ್ಟತೆ ಮತ್ತು ಸಾರ್ವಜನಿಕ ಉದ್ದೇಶದೊಂದಿಗೆ ಸೇರಿದಾಗ ಸಮುದಾಯದ ಶಕ್ತಿಯು ಭಾರತದಲ್ಲಿ ಅದ್ಭುತಗಳನ್ನು ಸಾಧಿಸಬಲ್ಲದು ಎಂದು ಅವರ ಜೀವನ ನಮಗೆ ಹೇಳುತ್ತದೆ. ಅದಕ್ಕಾಗಿಯೇ ಅವರು ಇಂದಿಗೂ ಲಕ್ಷಾಂತರ ಜನರಿಗೆ ಶಕ್ತಿ ನೀಡುತ್ತಾರೆ. ಅದಕ್ಕಾಗಿಯೇ ಅವರ ಮಾತುಗಳು ಮತ್ತು ಕೆಲಸಗಳು ಇಂದಿಗೂ ಭರವಸೆಯನ್ನು ನೀಡುತ್ತವೆ ಮತ್ತು ಅದಕ್ಕಾಗಿಯೇ, ಅವರು ಜನಿಸಿದ ಎರಡು ನೂರು ವರ್ಷಗಳ ನಂತರವೂ ಮಹಾತ್ಮ ಜ್ಯೋತಿರಾವ್ ಫುಲೆ ಅವರು ಕೇವಲ ಭೂತಕಾಲದ ವ್ಯಕ್ತಿಯಲ್ಲ, ಬದಲಾಗಿ ಭಾರತದ ಭವಿಷ್ಯಕ್ಕೆ ದಾರಿದೀಪವಾಗಿದ್ದಾರೆ.