Dr Srinivas Prasad Column: ಮೊಹಮ್ಮದ್ ರಫಿ: ಮನದಾಳವನ್ನು ಮುಟ್ಟಿದ ಮೋಡಿಗಾರ
1980ರ ಜುಲೈ 31ರಂದು 55ನೇ ವಯಸ್ಸಿಗೇ ರಫಿ ಅಸ್ತಂಗತರಾದಾಗ, “ನಾನು ನನ್ನ ಧ್ವನಿಯನ್ನೇ ಕಳೆದು ಕೊಂಡೆ" ಎಂದು ಕಂಬನಿ ಮಿಡಿದಿದ್ದರು ಶಮ್ಮಿ ಕಪೂರ್. ಇವರಿಬ್ಬರ ‘ಚಾಹೇ ಕೋಯಿ ಮುಝೆ ಜಂಗಲಿ ಕಹೇ’ ಹಾಡಿನಲ್ಲಿ ‘ಯಾ ಹೂ..’ ಎಂದು ಹಾಡಿದ್ದು ರಫಿಯವರಲ್ಲ, ಪ್ರಯಾಗ್ ರಾಜ್; ಇದನ್ನು ಸ್ವತಃ ಶಮ್ಮಿ ಕಪೂರ್ ಅವರೇ ದೃಢೀಕರಿಸಿದ್ದಾರೆ.
-
ರಾಗಮಾಲಿಕೆ
ಡಾ.ಶ್ರೀನಿವಾಸ್ ಪ್ರಸಾದ್
ಸೌ ಬಾರ್ ಜನಂ ಲೇಂಗೇ, ಸೌ ಬಾರ್ ಫನಾ ಹೋಂಗೆ, ಏ ಜಾನೇ ವಫಾ ಫಿರ್ ಭಿ ಹಂ ತುಂ ನ ಜುದಾ ಹೋಂಗೇ..’ ಎಂದುಲಿದು, ಈ ಗೀತೆಯಂತೆ ಇಂದಿಗೂ ಅಮರ ಮಧುರವಾಗಿ ಉಳಿದಿರುವ ಚಿರಸ್ಮರ ಣೀಯ ಕಂಠದ ಒಡೆಯ ಮೊಹಮ್ಮದ್ ರಫಿ. ಈ ಐಂದ್ರಜಾಲಿಕ ಗಾನಗಾರುಡಿಗನ ಆ ನೆನಪಿನ ನೆಪದಲ್ಲಿ ಆ ಸಿಹಿ ಕೊರಳಿನ ಮಾಲೀಕನಿಗೊಂದು ನುಡಿಮುಡಿಪು.
ಜೀವನ್‌ಲಾಲ್ ಮಟ್ಟೂ, ವಾಹೀದ್ ಖಾನ್, ಗುಲಾಮ್ ಅಲಿ ಖಾನ್‌ರಂಥ ಸಂಗೀತ ದಿಗ್ಗಜರಿಂದ ವಿಶೇಷವಾಗಿ ಕಿರಾನಾ ಘರಾನಾದಲ್ಲಿ ನುರಿತ ರಫಿಯವರ ಗಂಟಲು ಈ ಕಾರಣದಿಂದಲೇ ಹಿಂದಿ ಚಿತ್ರಗೀತೆಗಳ ರಾಗಾಧಾರಿತ ಹಾಡುಗಳನ್ನು ಅತ್ಯಂತ ಸರಾಗವಾಗಿ, ಸುಲಲಿತವಾಗಿ ಅನುರಣಿಸು ತ್ತಲೇ ಇರುವಂತೆ ಮಾಡಿದೆ.
ದರ್ಬಾರಿ ಕಾನಡಾ ರಾಗದ ‘ಓ ದುನಿಯಾ ಕೆ ರಖ್‌ವಾಲೆ (ಚಿತ್ರ: ಬೈಜುಬಾವ್ರಾ) ಮತ್ತು ಅದೇ ಸಿನಿಮಾದ ಭೈರವಿ ರಾಗದ ‘ತು ಗಂಗಾ ಕೀ ಮೌಜ್’ ಹಾಡುಗಳದ್ದು ಮಾಸದ ಮಾಧುರ್ಯ.
ದಿಲೀಪ್ ಕುಮಾರ್ ನಾಯಕರಾಗಿದ್ದ, ನೌಷಾದ್ ಸಂಗೀತದ, 1960ರಲ್ಲಿ ತೆರೆಕಂಡ ‘ಕೊಹಿನೂರ್’ ಚಿತ್ರದಲ್ಲಿ ರಫಿಯವರು ಹಾಡಿದ, ‘ಮಧುವನ್ ಮೆ ರಾಧಿಕಾ ನಾಚೇ’ ಮತ್ತು ‘ಬೇಟಿ ಬೇಟೆ’ ಸಿನಿಮಾ ದಲ್ಲಿರುವ ‘ರಾಧಿಕೆ ತೂನೇ ಬಾನ್ಸುರಿ’ (ಕನ್ನಡದ ‘ತಂದೆ ಮಕ್ಕಳು’ ಚಿತ್ರದಲ್ಲಿ ಇದೇ ಹಾಡಿನ ಧಾಟಿ ಯಲ್ಲಿ ‘ರಾಧಿಕೆ ನಿನ್ನ ಸರಸವಿದೇನೆ’ ಎಂಬ ಗೀತೆಯನ್ನು ಎಸ್.ಪಿ. ಬಾಲಸುಬ್ರಹ್ಮಣ್ಯಂ ಹಾಡಿದ್ದಾರೆ.
‘ಈ ಹಾಡನ್ನು ಹಾಡುವಾಗ ನನ್ನ ಮನಸ್ಸಿನಲ್ಲಿ ರಫಿ ಅವರೇ ತುಂಬಿಕೊಂಡಿದ್ದರು; ಆದರೆ ನನಗೆ ಖಂಡಿತ ಅವರ ಮಟ್ಟಕ್ಕೆ ಹಾಡಲು ಸಾಧ್ಯವಾಗಲಿಲ್ಲ’ ಎನ್ನುವ ಮೂಲಕ ರಫಿಯವರ ಗುಣಗಾನ ಮಾಡಿದ್ದರು ಎಸ್‌ಪಿಬಿ) ಹಾಡುಗಳನ್ನು ಈಗಲೂ ಮೆಲುಕು ಹಾಕುವವರಿದ್ದಾರೆ.
ಇದನ್ನೂ ಓದಿ: Rangaswamy Mookanahalli Column: ಕಳೆದುಕೊಳ್ಳುವ ಮುನ್ನ, ಉಳಿಸಿಕೊಳ್ಳಲು ಯತ್ನಿಸೋಣವೇ ?
ಮಿಕ್ಕಂತೆ, ‘ದಿಲ್ ಪುಕಾರೇ ಆರೇ ಆರೇ ಆರೇ’, ‘ಪುಕಾರ್ ಥಾ ಚಲಾ ಹೂ ಮೇ’, ‘ಖೋಯಾ ಖೋಯಾ ಚಾಂದ್ ಖುಲಾ ಆಸ್‌ಮಾನ್’, ‘ಬಹಾರೋ ಫೂಲ್ ಬರ್‌ಸಾವೋ’, ‘ದಿಲ್ ಕೆ ಝರೋಕೆ ಮೆ ತುಝ್ಕೊ ಬಿಠಾಕರ್’ ಮುಂತಾದ ಹಾಡುಗಳಲ್ಲಿ ಹೊಮ್ಮಿರುವ ರಫಿಯವರ ಇಂಚರವನ್ನು ಹೇಗೆ ಮರೆಯ ಲಾದೀತು? ಎಲ್ಲ ರೀತಿಯ, ಭಿನ್ನ ಭಾವಧಾರೆಗಳ ಹಾಡುಗಳಿಗೂ ಅತ್ಯಂತ ಸಮರ್ಥ ಮತ್ತು ಸಮರ್ಪಕವಾಗಿ ಹೊಂದುತ್ತಿದ್ದ ಅಪ್ರತಿಮ ಗಾಯಕರು ರಫಿ.
ನಾಯಕಿಯನ್ನು ಛೇಡಿಸುವ ‘ಬದನ್ ಪೆ ಸಿತಾರೆ ಲಪೇಟೇ ಹುವೆ’, ತುಂಟತನದ ‘ತೇರೀ ಪ್ಯಾರೀ ಪ್ಯಾರೀ ಸೂರತ್ ಕೋ’ದಂಥ ಹಾಡುಗಳೇ ಇರಲಿ, ‘ಹಂ ಕಾಲೇ ಹೈ ತೋ ಕ್ಯಾ ಹುವಾ ದಿಲ್‌ವಾಲೇ ಹೈ’ದಂಥ ಗೀತೆಗಳೇ ಆಗಲಿ ರಫಿಯವರ ಅನನ್ಯತೆ ಅಲ್ಲಿ ಎದ್ದು ಕಾಣುತ್ತದೆ.
‘ಏ ಮೇರಾ ಪ್ರೇಮ್‌ಪತ್ರ್ ಪಢ್‌ಕರ್’, ‘ಲಿಖೇ ಜೋ ಖತ್ ತುಝೆ’, ‘ತುಮ್ ಬಿನ್ ಜಾವೂ ಕಹಾಂ’, ‘ದರ್ದೆ ದಿಲ್ ದರ್ದೇ ಜಿಗರ್’ ಈ ಹಾಡುಗಳಲ್ಲೂ ರಫಿ ಅವರದ್ದು ಸಾಟಿಯಿರದ ಕಂಠ. ‘ಯಾದ್ ನ ಜಾಯೇ’, ‘ಟೂಟೆ ಹುಯೆ ಖ್ವಾಬೋಮೆ’ ಮುಂತಾದ ವಿಷಾದ ಗೀತೆಗಳು ಈಗಲೂ ಕಾಡುತ್ತವೆ.
ಶಶಿಕಪೂರ್ ಅವರ ‘ಜಬ್ ಜಬ್ ಫೂಲ್ ಖಿಲೆ’ ಚಿತ್ರಕ್ಕಾಗಿ ಹಾಡಿದ ‘ಪರ್ದೇಸಿಯೋಂಸೆ ನ ಅಖಿಯಾ ಮಿಲಾನಾ’ ಹಾಡಿನಲ್ಲಿ ಹೊಮ್ಮಿರುವ ರಫಿಯವರ ಮನಮೋಹಕ ಧ್ವನಿಗೆ ತಲೆದೂಗದವ ರುಂಟೇ?!“ ಒಂದು ವೇಳೆ ರಫಿ ಇಲ್ಲದೇ ಹೋಗಿದ್ದಿದ್ದರೆ ನಾನೂ ಇರಲಿಕ್ಕಾಗುತ್ತಿರಲಿಲ್ಲ" ಅಂದಿದ್ದರು ಸಂಗೀತ ನಿರ್ದೇಶಕ ಒ.ಪಿ.ನಯ್ಯರ್. ‘
ಆಸ್‌ಪಾಸ್’ ಸಿನಿಮಾಗೆ ಹಾಡಿದ ‘ಏ ಶಾಮ್ ಕ್ಯೂ ಉದಾಸ್ ಹೈ’ ರಫಿ ಅವರ ಕೊನೆಯ ಗೀತೆ. 1980ರ ಜುಲೈ 31ರಂದು 55ನೇ ವಯಸ್ಸಿಗೇ ರಫಿ ಅಸ್ತಂಗತರಾದಾಗ, “ನಾನು ನನ್ನ ಧ್ವನಿಯನ್ನೇ ಕಳೆದು ಕೊಂಡೆ" ಎಂದು ಕಂಬನಿ ಮಿಡಿದಿದ್ದರು ಶಮ್ಮಿ ಕಪೂರ್. ಇವರಿಬ್ಬರ ‘ಚಾಹೇ ಕೋಯಿ ಮುಝೆ ಜಂಗಲಿ ಕಹೇ’ ಹಾಡಿನಲ್ಲಿ ‘ಯಾ ಹೂ..’ ಎಂದು ಹಾಡಿದ್ದು ರಫಿಯವರಲ್ಲ, ಪ್ರಯಾಗ್ರಾಜ್; ಇದನ್ನು ಸ್ವತಃ ಶಮ್ಮಿ ಕಪೂರ್ ಅವರೇ ದೃಢೀಕರಿಸಿದ್ದಾರೆ.
‘ಬಾರ್ ಬಾರ್ ದೇಖೋ’, ‘ಓ ಹಸೀನಾ ಝುಲೋ ವಾಲಿ’, ‘ಬದನ್ ಪೆ ಸಿತಾರೆ ಲಪೇಟೆ’ ಸೇರಿದಂತೆ ಅನೇಕ ಗೀತೆಗಳಲ್ಲಿ ಈ ಜೋಡಿಯು ಮೋಡಿಮಾಡಿದೆ. ಇವು ಅವಿಸ್ಮರಣೀಯ ಗೀತಗುಚ್ಛಗಳು. ರಫಿ ಸಾಬ್ ಅಸ್ತಮಿಸಿದಾಗ ಲಕ್ಷ ಲಕ್ಷ ಜನ ಸೇರಿದ್ದರು; ರಫಿಯವರ ಅಭಿಮಾನಿಯಾಗಿದ್ದ ಖ್ಯಾತ ಹಿನ್ನೆಲೆ ಗಾಯಕ ಪಿ.ಬಿ.ಶ್ರೀನಿವಾಸ್ ಅವರು ಕೂಡ ಈ ಕಾರಣದಿಂದಾಗಿ ರಫಿಯವರ ಮೃತದೇಹವನ್ನು ದರ್ಶನ ಮಾಡಲಾಗದೆ ವಾಪಸ್ ಬಂದುಬಿಟ್ಟಿದ್ದರು.
ಯೇಸುದಾಸ್, ಎಸ್‌ಪಿಬಿ, ಸೋನು ನಿಗಮ್ ಮುಂತಾದವರಿಗೂ ಅಚ್ಚುಮೆಚ್ಚಿನ ಆರಾಧ್ಯ ದೈವ ವಾಗಿದ್ದವರು ಮೊಹಮ್ಮದ್ ರಫಿ. ‘ಕ್ಯಾ ಹುವಾ ತೇರಾ ವಾದಾ’ ಗೀತೆಯ ಗಾಯನಕ್ಕೆ ರಾಷ್ಟ್ರಪ್ರಶಸ್ತಿಗೆ ಭಾಜನರಾದ ರಫಿಯವರು ‘ಒಂದೇ ಬಳ್ಳಿಯ ಹೂಗಳು’ ಚಲನಚಿತ್ರದ ‘ನೀನೆಲ್ಲಿ ನಡೆವೆ ದೂರ’ ಎಂಬ ಏಕೈಕ ಕನ್ನಡ ಗೀತೆಗೂ ದನಿಯಾಗಿದ್ದಾರೆ. ತೆಲುಗಿನಲ್ಲಿ ಕೂಡ ಎನ್.ಟಿ.ರಾಮರಾವ್ ಅವರಿ ಗಾಗಿ ಹಾಡಿದ್ದಾರೆ; ‘ಭಲೇ ತಮ್ಮುಡು’, ‘ಆರಾಧನಾ’ ಮುಂತಾದ ಚಿತ್ರಗಳು ಇದಕ್ಕೆ ಉದಾ ಹರಣೆ.
ಮೊಹಮ್ಮದ್ ರಫಿ ಮತ್ತು ಕಿಶೋರ್ ಕುಮಾರ್ ಅವರದ್ದು, ‘ಸ್ನೇಹ-ಸೌಹಾರ್ದ’ದ ಅರ್ಥವನ್ನು ತಿಳಿಸಿಕೊಟ್ಟ ಪ್ರಖ್ಯಾತ ಗಾಯಕ ಜೋಡಿ ಎನ್ನಬೇಕು. ಹಿಂದಿ ಚಿತ್ರರಂಗದ ಈ ಇಬ್ಬರು ಅತ್ಯದ್ಭುತ ಗಾಯಕರ ಹಾಡುಗಳಿಗೆ ಇಂದಿಗೂ ಬೇಡಿಕೆಯಿದೆ, ಶ್ರೇಷ್ಠತೆಯ ಮೌಲ್ಯಗಳಿವೆ. ಅವರ ಕಂಠ ಮಾಧುರ್ಯದಿಂದಾಗಿ ಇಂದಿಗೂ ಚಿರಸ್ಮರಣೀಯವಾಗಿರುವ ಹಾಡುಗಳು ಸಾಕಷ್ಟಿವೆ.
ಆದರೆ, ಒಂದಿಷ್ಟು ಅತಿರೇಕದ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ‘ಕಿಶೋರ್ ಹೆಚ್ಚೋ, ರಫಿ ಹೆಚ್ಚೋ’ ಎಂಬ ವಾದದ ಕಿಡಿ ಹೊತ್ತಿಸಿ, ಅವರಿಬ್ಬರ ನಡುವೆ ವೈಮನಸ್ಯ ಇತ್ತೆಂದು ಸುಖಾ ಸುಮ್ಮನೆ ಸುಳ್ಳು ಸುದ್ದಿಗಳನ್ನು ಹರಿ ಬಿಟ್ಟಿದ್ದು ಹಾಗೂ ತನ್ಮೂಲಕ ತಂತಮ್ಮ ಬೇಳೆಯನ್ನು ಬೇಯಿಸಿಕೊಂಡಿದ್ದು ವಿಪರ್ಯಾಸಕರ ಮತ್ತು ಅನಾರೋಗ್ಯಕರ ಸಂಗತಿ!
ಬದುಕಿದ್ದಷ್ಟೂ ಕಾಲ ಆತ್ಮೀಯ ಗೆಣೆಕಾರರಾಗಿದ್ದ ಈ ಅನ್ಯೋನ್ಯ ಗಾಯಕ ಜೋಡಿಯ ವ್ಯಕ್ತಿತ್ವ ಗಳಿಗೆ ಹೀಗೆ ಮಸಿ ಹಚ್ಚುವ ಕೆಲಸ ಅವ್ಯಾಹತವಾಗಿ ನಡೆಯುತ್ತಲೇ ಇದೆ. ಆದರೆ ವಾಸ್ತವ ಸಂಗತಿ ಇದಕ್ಕೆ ತದ್ವಿರುದ್ಧವಾಗಿದೆ. ಇದು ಅವರಿಬ್ಬರ ಸ್ನೇಹ ಅದೆಷ್ಟು ಆಳವಾಗಿತ್ತು, ಗೌರವ ಪೂರ್ಣ ವಾಗಿತ್ತು ಎಂಬುದರ ದ್ಯೋತಕವೂ ಹೌದು.
ವಿಭಿನ್ನ ಮಾದರಿಗಳ ಪ್ರತಿಭಾ ಸ್ವರೂಪಗಳಾಗಿದ್ದ ರಫಿ ಮತ್ತು ಕಿಶೋರ್, ತಮ್ಮದೇ ಆದ ಗಾಯನ ಶೈಲಿಗಳ ಮೂಲಕ ಸಂಗೀತ ರಸಿಕರ ಹೃದಯಕ್ಕೆ ಲಗ್ಗೆ ಹಾಕಿದವರು. ಈ ಪೈಕಿ ಕಿಶೋರ್ ಕುಮಾರ್ ಅವರು ಶಾಸೀಯ ಸಂಗೀತವನ್ನು ಕಲಿತವರೇ ಅಲ್ಲ; ಆದರೆ ರಫಿಯವರು ಗ್ವಾಲಿಯರ್ ಘರಾನಾ, ಕಿರಾನಾ ಘರಾನಾಗಳಲ್ಲಿ ನುರಿತಿದ್ದು ಶಾಸ್ತ್ರೀಯ ಸಂಗೀತವನ್ನು ಚೆನ್ನಾಗಿ ಬಲ್ಲವರಾಗಿದ್ದರು.
ಮತ್ತೊಂದೆಡೆ ಕಿಶೋರ್ ಕುಮಾರ್ ಅವರು ಗಾಯಕರಾಗಿದ್ದುದರ ಜತೆಜತೆಗೆ ನಟ, ನಿರ್ಮಾಪಕ, ಗೀತರಚನೆಕಾರ, ಸಂಗೀತ ನಿರ್ದೇಶಕ, ಸಂಕಲನಕಾರ, ಪ್ರಸಾದನ ಪಟು, ಚಿತ್ರಕಥಾ ರಚನೆಗಾರ, ನಿರ್ದೇಶಕ- ಹೀಗೆ ಬಹುಮುಖ ಪ್ರತಿಭೆ ಎನಿಸಿಕೊಂಡಿದ್ದರು. ಒಮ್ಮೆ, ಕಿಶೋರ್ ನಾಯಕರಾಗಿದ್ದ ‘ರಾಗಿಣಿ’ ಚಿತ್ರದ ‘ಮನ್ ಮೋರಾ ಬಾವ್ರಾ’ ಹಾಡನ್ನು ಹಾಡುವ ವಿಷಯ ಬಂದಾಗ ಕಿಶೋರ್ ಅದಕ್ಕಾಗಿ ಹಾತೊರೆಯಲಿಲ್ಲ; ಬದಲಿಗೆ, ಶುದ್ಧ ಶಾಸ್ತ್ರೀಯ ತಳಹದಿಯ ಈ ಹಾಡನ್ನು ರಫಿ ಯವರು ಹಾಡಲಿ ಎಂದು ಸಂಗೀತ ನಿರ್ದೇಶಕ ಒ.ಪಿ.ನಯ್ಯರ್ ಅವರಿಗೆ ಹೇಳಿ ಒಪ್ಪಿಸಿ, ತಮ್ಮ ಅಭಿನಯಕ್ಕೆ ರಫಿಯವರಿಂದಲೇ ಹಾಡಿಸಿಕೊಂಡರು.
ಆ ಹಾಡಿನ ತುಟಿಚಲನೆಗೆ ಮಾತ್ರ ತಮ್ಮನ್ನು ಸೀಮಿತಗೊಳಿಸಿಕೊಂಡರು. ಇದೇ ರೀತಿಯಲ್ಲಿ, ಕಿಶೋರ್ ಕುಮಾರ್ ಅಭಿನಯದ ‘ಅಜಬ್ ಹೈ ದಾಸ್ತಾನ್ ತೇರಿ ಹೋ ಜಿಂದಗಿ’, ‘ಮಸೀಹ ಬನ್ ಕೆ ಬೀಮಾರೋಂಕೆ ಚಲೇ ಹೂ ಕಹಾಂ’ದಂಥ ಗೀತೆಗಳಿಗೆ ರಫಿಯವರು ದನಿಯಾಗಿದ್ದಾರೆ.
ಕಿಶೋರ್ ತುಟಿಚಲನೆ, ರಫಿ ಗಾಯನ ಸೊಗಸಾಗಿ ಮೇಳೈಸಿವೆ. ಕಿಶೋರ್ ಬಗ್ಗೆ ರಫಿಯವರಿಗೆ ಅದೆಷ್ಟು ಅಭಿಮಾನವಿತ್ತೆಂದರೆ, ಕಿಶೋರ್ ನಿರ್ಮಿಸಿದ ಚಿತ್ರಕ್ಕೆ ಹಾಡಲು ರಫಿ ಕೇವಲ 1 ರುಪಾಯಿ ಸಂಭಾವನೆ ಪಡೆದಿದ್ದರು, ತನ್ಮೂಲಕ ತಮ್ಮಿಬ್ಬರ ನಡುವಿನ ಬಾಂಧವ್ಯದ ಗಟ್ಟಿತನವನ್ನು ಎತ್ತಿ ಹಿಡಿದಿದ್ದರು.
ಮುಂದೆ , ‘ನಯಾ ಅಂದಾಜ್’ ಚಿತ್ರಕ್ಕಾಗಿ ‘ಮೇರೆ ನೀಂದೋಮೆ ತುಮ್’ ಗೀತೆಯನ್ನು ಕಿಶೋರ್ ಮತ್ತು ಶಂಷಾದ್ ಬೇಗಂ ಹಾಡುತ್ತಿರುವಾಗ ಅಲ್ಲಿಗೆ ಬಂದ ರಫಿಯವರು, ಕಿಶೋರ್ ಅವರ ದನಿಗೆ ಕರಗಿ ಕಣ್ಣೀರಾಗಿ ಅವರನ್ನು ಮನಸಾರೆ ಅಭಿನಂದಿಸಿದ್ದುಂಟು.
ಇದಷ್ಟೇ ಅಲ್ಲದೆ, ‘ಫಂತೂಷ್’ ಚಿತ್ರದ ‘ದುಃಖಿ ಮನ್ ಮೇರೆ’ ಹಾಡನ್ನು ಕಿಶೋರ್ ಹಾಡಿದಾಗ, “ನಾನು ಕಿಶೋರ್ ತರಹ ಹಾಡಲು ಸಾಧ್ಯವೇ ಇಲ್ಲ; ಅವರಷ್ಟು ಚೆನ್ನಾಗಿ ಈ ಹಾಡನ್ನು ಬೇರೆ ಯಾರೂ ಹಾಡಲಾರರು" ಎಂದು ಮೊದಲು ಬಹಿರಂಗವಾಗಿ ಹೇಳಿದವರು ರಫಿ ಸಾಬ್!
ಇದೇ ರೀತಿಯಲ್ಲಿ, ‘ಲಾಲ್ ಕಿಲಾ’ ಚಿತ್ರದ ‘ನ ಕಿಸೀ ಕಿ ಆಂಖೋ ಕಾ ನೂರ್ ಹೂಂ’ ಎಂಬ ರಫಿ ಹಾಡನ್ನು ಕೇಳಿದ ಕಿಶೋರ್ ಅವರು ಸಂದರ್ಶನವೊಂದರಲ್ಲಿ, “ರಫಿ ಸಾಬ್ ತರಹ ಹಾಡಲು ಇನ್ನೊಬ್ಬರಿಗೆ ಸಾಧ್ಯವಾಗುವುದಾದರೆ ಅದು ರಫಿಯವರಿಂದ ಮಾತ್ರ" ಎಂದಿದ್ದರು.
‘ಆರಾಧನಾ’ ಚಿತ್ರದ ಮೂಲಕ ಕಿಶೋರ್ ಕುಮಾರ್ ಮತ್ತು ರಾಜೇಶ್ ಖನ್ನಾ ಜೋಡಿಯ ಜಮಾನಾ ಶುರುವಾಗಿ ಜನಪ್ರಿಯವಾಯಿತು, ಪರಿಣಾಮವಾಗಿ ರಫಿಯವರಿಗೆ ಅವಕಾಶಗಳು ಕಡಿಮೆಯಾಗ ತೊಡಗಿದವು. ಆಗ ಯಾರೋ, “ಕಿಶೋರ್ ಅವರಿಂದ ನಿಮಗೆ ಅವಕಾಶಗಳು ಕಡಿಮೆಯಾಗುತ್ತಿವೆ ಯಲ್ಲಾ?" ಎಂದು ಕೆಣಕಿದಾಗ ರಫಿಯವರು ಶಾಂತಚಿತ್ತರಾಗಿ “ಈಗ ಕಿಶೋರ್ ಸಮಯ, ಅವರು ಚೆನ್ನಾಗಿ ಹಾಡ್ತಿದ್ದಾರೆ. ಹಾಡಲಿ ಬಿಡಿ" ಎಂದು ಉತ್ತರಿಸಿದ್ದರು.
ಕೆಣಕಿದವರು ತೆಪ್ಪಗಾಗಿದ್ದರು! ಒಮ್ಮೆ ಕಿಶೋರ್ ಸಮ್ಮುಖದಲ್ಲಿ ರಫಿಯವರನ್ನು ಒಬ್ಬಾತ ಹಿಗ್ಗಾ ಮುಗ್ಗಾ ಬೈಯತೊಡಗಿದ. ಆಗ ಕಿಶೋರ್, “ರಫಿಯವರನ್ನು ಬೈಯುತ್ತೀಯಾ? ಅವರ ಯೋಗ್ಯತೆ ನಿನಗೇನು ಗೊತ್ತು?" ಎಂದು ಹೇಳಿ ಕೆನ್ನೆಗೆ ಬಾರಿಸಿದರು. ರಫಿ ನಿಂದಕ ತಕ್ಷಣವೇ ಅಲ್ಲಿಂದ ಜಾಗ ಖಾಲಿ ಮಾಡಿದ.
ರಾಜಕೀಯ ಪಕ್ಷವೊಂದರ ಪ್ರಚಾರಕ್ಕೆ ಹೋಗಲು ಕಿಶೋರ್ ಕುಮಾರ್ ಒಪ್ಪದಿದ್ದಾಗ, ಆಕಾಶವಾಣಿ ಯಲ್ಲಿ ಕಿಶೋರ್ ಹಾಡುಗಳ ಪ್ರಸಾರವು ನಿಷೇಧಕ್ಕೊಳಪಟ್ಟಿತು. ಆಗ, ಸಂಗೀತ ನಿರ್ದೇಶಕ ಕಲ್ಯಾಣ್ ಜಿ ಅವರನ್ನು ಜತೆಗಿಟ್ಟುಕೊಂಡು, ಸಂಬಂಧಪಟ್ಟ ವ್ಯಕ್ತಿಯನ್ನು ಭೇಟಿಮಾಡಿ, ಸದರಿ ನಿಷೇಧವನ್ನು ತೆರವುಗೊಳಿಸಿಕೊಂಡು ಬಂದ ಉದಾರ ವ್ಯಕ್ತಿ ಮೊಹಮ್ಮದ್ ರಫಿಯವರು. ಇನ್ನು, ಟ್ಯಾಕ್ಸ್ ಕಟ್ಟ ಲಾಗದೆ ಕಿಶೋರ್ ಕುಮಾರ್ ಆರ್ಥಿಕ ಸಂಕಷ್ಟಕ್ಕೆ ಈಡಾಗಿದ್ದಾಗ, ಲೈವ್ ಶೋ ಮಾಡುವಂತೆ ಸಲಹೆ ನೀಡಿದ್ದು ರಫಿಯವರೇ.
ಪರಿಣಾಮವಾಗಿ ಕಿಶೋರ್ ಕುಮಾರ್ ಅವರು ಲೈವ್ ಶೋಗಳ ವೈಭವವನ್ನು ಜಗಜ್ಜಾಹೀರು ಗೊಳಿಸಿದರು. ರಫಿಯವರು ಮರಣಿಸಿದಾಗ ಚಿಕ್ಕಮಗುವಿನ ಹಾಗೆ ಅತ್ತಿದ್ದ ಕಿಶೋರ್, ತಮ್ಮ ಮಾತೃಭಾಷೆ ಬಂಗಾಳಿಯಲ್ಲಿ ‘ಸೆ ಜಾನೋ ಆಜೋ’ ಎಂಬ ಹಾಡಿನ ಮೂಲಕವೇ ತಮ್ಮೀ ಗೆಳೆಯನಿಗೆ ‘ಗೀತ-ಶ್ರದ್ಧಾಂಜಲಿ’ ಅರ್ಪಿಸಿದ್ದರು.
ರಫಿಯವರು ಸಂಗೀತ ರಸಿಕರನ್ನು ಅಗಲಿ ಸಾಕಷ್ಟು ವರ್ಷಗಳಾಗಿದ್ದರೂ, ಅವರ ಹಾಡುಗಳ ಗುಂಗು ಇನ್ನೂ ಮಾಯವಾಗಿಲ್ಲ. ಅಂಥ ಗಾನಗಾರುಡಿಗನಿಗೆ ಹೀಗೊಂದು ಗೌರವಪೂರ್ವಕ ಅಕ್ಷರಾಂಜಲಿ...
(ಲೇಖಕರು ಉಪನ್ಯಾಸಕರು)