Mohan Vishwa Column: ಸಾಂಸ್ಕೃತಿಕ, ಆರ್ಥಿಕ ಶಕ್ತಿಯ ಸಂಕೇತ ಮಹಾಕುಂಭ
ಇಸ್ಲಾಂ ಮತ್ತು ಕ್ರಿಶ್ಚಿಯನ್ ಧರ್ಮದ ಬಗ್ಗೆ ಹೆಚ್ಚಾಗಿ ಮಾತನಾಡುವುದಿಲ್ಲ. ತಮ್ಮ ನಾಸ್ತಿಕತೆಯ ಪ್ರದರ್ಶನಕ್ಕೆ ಎಡಚರರು ಹಿಂದೂ ದೇವರನ್ನು ಮಾತ್ರ ಟಾರ್ಗೆಟ್ ಮಾಡುತ್ತಾರೆ. ಹಿಂದೂಗಳು ಸಹಿಷ್ಣುಗಳು ಅವರ ನಂಬಿಕೆ, ಆಚಾರ, ವಿಚಾರ, ಸಂಸ್ಕೃತಿಗಳ ಬಗ್ಗೆ ಕೆಟ್ಟದಾಗಿ ಮಾತನಾಡಿ ದರೂ ತಮ್ಮ ವಿರುದ್ಧ ತಿರುಗಿಬೀಳುವುದಿಲ್ಲವೆಂಬ ಧೈರ್ಯ ಎಡಚರ ವಲಯದಲ್ಲಿದೆ
Source : Vishwavani Daily News Paper
ನಾಸ್ತಿಕನೆಂದರೆ ಧರ್ಮಾತೀತವಾಗಿ ದೇವರನ್ನು ನಂಬದವನು, ಆದರೆ ಭಾರತದಲ್ಲಿ ಕಾಣ ಸಿಗುವ ಈಗಿನ ಬಹುತೇಕ ನಾಸ್ತಿಕರು ಕೇವಲ ಹಿಂದೂ ಆಚರಣೆಗಳನ್ನು ನಂಬುವುದಿಲ್ಲ. ಇಸ್ಲಾಂ ಮತ್ತು ಕ್ರಿಶ್ಚಿಯನ್ ಧರ್ಮದ ಬಗ್ಗೆ ಹೆಚ್ಚಾಗಿ ಮಾತನಾಡುವುದಿಲ್ಲ. ತಮ್ಮ ನಾಸ್ತಿಕತೆಯ ಪ್ರದರ್ಶನಕ್ಕೆ ಎಡಚರರು ಹಿಂದೂ ದೇವರನ್ನು ಮಾತ್ರ ಟಾರ್ಗೆಟ್ ಮಾಡು ತ್ತಾರೆ.
ಹಿಂದೂಗಳು ಸಹಿಷ್ಣುಗಳು ಅವರ ನಂಬಿಕೆ,ಆಚಾರ, ವಿಚಾರ, ಸಂಸ್ಕೃತಿಗಳ ಬಗ್ಗೆ ಕೆಟ್ಟ ದಾಗಿ ಮಾತನಾಡಿದರೂ ತಮ್ಮ ವಿರುದ್ಧ ತಿರುಗಿಬೀಳುವುದಿಲ್ಲವೆಂಬ ಧೈರ್ಯ ಎಡಚರ ವಲಯದಲ್ಲಿದೆ. ಹಿಂದೂ ದೇವರುಗಳನ್ನೇ ಟಾರ್ಗೆಟ್ ಮಾಡಿ, ವಿಜ್ಞಾನವನ್ನು ಮುನ್ನೆಲೆಗೆ ತಂದು ವಿತಂಡವಾದದ ಮೂಲಕ ಆಕರ್ಷಕ ಪದಪುಂಜಗಳನ್ನು ಬಳಸಿ ಮಾತನಾಡು ತ್ತಾರೆ.
ಮುಗ್ಗರಿಸಿ ಬಿದ್ದನಂತರ, ಜಟ್ಟಿ ಕೆಳಗೆ ಬಿದ್ದರೂ ಮೀಸೆ ಮಣ್ಣಾಗಲಿಲ್ಲವಂತೆ ಎಂಬ ಗಾದೆ ಮಾತಿನಂತೆ ತಮ್ಮ ವರಸೆಯನ್ನು ಮುಂದುವರೆಸಿಕೊಂಡು ಬಂದಿದ್ದಾರೆ. ಅಯೋಧ್ಯೆ ಯಲ್ಲಿ ಪ್ರಭು ಶ್ರೀರಾಮಚಂದ್ರನ ದೇವಸ್ಥಾನ ಕಟ್ಟುವ ಸಂದರ್ಭದಲ್ಲಿ, ದೇವಸ್ಥಾನದ ಬದಲು ಆಸ್ಪತ್ರೆ ಅಥವಾ ಶಾಲೆಗಳನ್ನು ಕಟ್ಟಿ ಎಂದು ಹೇಳಿದ್ದರು. ಆದರೆ ಇತರೆ ಧರ್ಮದ ಬಗ್ಗೆ ಇದೇ ದಾಟಿಯಲ್ಲಿ ಮಾತನಾಡುವ ಧೈರ್ಯ ಎಡಚರರಿಗಿಲ್ಲ.
ಹಳ್ಳಿಗಳಲ್ಲಿ ಮಾರಿದೇವಿಯ ಜಾಗದಲ್ಲಿ ಶ್ರೀರಾಮನನ್ನು ತಂದುಬಿಟ್ಟರು ಎಂಬ ಹೊಸ ನಿರೂಪಣೆಯನ್ನು ಪ್ರಾರಂಭಿಸಿದ್ದರು, ಮಾರಿಯಮ್ಮ ಮತ್ತುಶ್ರೀರಾಮ ಇಬ್ಬರೂ ಹಿಂದೂಗಳು ಪೂಜಿಸುವ ದೇವರುಗಳು.ಆದರೆ ಹಿಂದೂಗಳು ಹಳ್ಳಿಯ ದೇವಸ್ಥಾನದಲ್ಲಿ ಪೂಜಿಸುವ ಮಾರಿಯಮ್ಮನ ಜಾಗದಲ್ಲಿ, ಅನೇಕ ಕಡೆ ‘ಮೇರಿ’ ಅಮ್ಮ ಬಂದಿರುವುದರ ಬಗ್ಗೆ
ಎಡಚರರು ತುಟಿ ಬಿಚ್ಚುವುದಿಲ್ಲ. ಸೇವೆಯ ಹೆಸರಿನಲ್ಲಿ ನಡೆಯುತ್ತಿರುವ ಮತಾಂತರದ ಬಗ್ಗೆ ಮಾತನಾಡುವುದಿಲ್ಲ, ಅನೇಕ ಚರ್ಚುಗಳ ವಾಸ್ತುಶಿಲ್ಪ ಹಿಂದೂ ದೇವಾಲಯಗಳನ್ನು ಹೋಲುತ್ತಿರುತ್ತದೆ, ಅದರ ಬಗ್ಗೆ ಮಾತನಾಡುವುದಿಲ್ಲ.
ಉತ್ತರಪ್ರದೇಶದ ಪ್ರಯಾಗ್‌ರಾಜನಲ್ಲಿ 144 ವರ್ಷಗಳ ಬಳಿಕ ಮಹಾಕುಂಭಮೇಳ ನಡೆಯು ತ್ತಿದೆ. ಹಿಂದಿನ ಮಹಾಕುಂಭಮೇಳದಲ್ಲಿ ನಾವು ಹುಟ್ಟಿರಲಿಲ್ಲ, ಮುಂದಿನ ಮಹಾಕುಂಭ ಮೇಳದಲ್ಲಿ ನಾವು ಬದುಕಿರುವುದಿಲ್ಲ. ಅಯೋಧ್ಯೆಯ ರಾಮಮಂದಿರವನ್ನು ವಿರೋಧಿ ಸಿದ್ದ ಎಡಚರ ಗುಂಪು ಮಹಾಕುಂಭಮೇಳದ ಬಗ್ಗೆಯೂ ತಮ್ಮ ಅಪಸ್ವರವನ್ನು ಮುಂದು ವರೆಸಿವೆ. ಇಂಗ್ಲೆಂಡಿನ ‘ಬಿಬಿಸಿ’ ಸಂಸ್ಥೆ ಹಿಂದೂ ಸ್ವಾಮೀಜಿಗಳು ಕುಂಭಮೇಳದಲ್ಲಿ ಬೆತ್ತಲೆಯಾಗಿ ಕಾಣಿಸಿಕೊಳ್ಳುತ್ತಾರೆಂದು ವರದಿ ಮಾಡುವ ಮೂಲಕ ಅವಮಾನ ಮಾಡಿದೆ.
ಉತ್ತರಪ್ರದೇಶದ ಯೋಗಿ ಆದಿತ್ಯನಾಥ್ ನೇತೃತ್ವದ ಸರಕಾರ ಮಹಾಕುಂಭಮೇಳಕ್ಕೆ 7500 ಕೋಟಿ ರು. ಹಣವನ್ನು ಮೀಸಲಿಟ್ಟಿರುವುದನ್ನು ವಿರೋಧಪಕ್ಷಗಳು ಟೀಕಿಸಿದ್ದವು. ಪ್ರಯಾಗ ರಾಜದಲ್ಲಿ ನಡೆಯುತ್ತಿರುವ ಮಹಾಕುಂಭಮೇಳ ಜಗತ್ತಿನ ಅತೀ ದೊಡ್ಡ ಧಾರ್ಮಿಕ ಕಾರ್ಯಕ್ರಮ. ಮಹಾಕುಂಭದಲ್ಲಿ ಸುಮಾರು 40 ಕೋಟಿ ಜನರು ಭಾಗವಹಿಸುವ ನಿರೀಕ್ಷೆ ಯಿದೆ.
ಮೇಳದ ಮೊದಲ ದಿನವೇ ಒಂದೂವರೆ ಕೋಟಿ ಜನರು ತ್ರಿವೇಣಿ ಸಂಗಮದಲ್ಲಿ ಸ್ನಾನ ಮಾಡಿ ಕುಂಭಮೇಳದಲ್ಲಿ ಭಾಗವಹಿಸಿದ್ದರು. ಹಿಂದೂಗಳ ಆಚರಣೆಗಳಿಂದ ಬಡವರಿಗೆ ಏನು ಸಿಗುತ್ತದೆ ಎನ್ನುವವರಿಗೆ, ಮಹಾಕುಂಭಮೇಳ ಆರ್ಥಿಕವಾಗಿ ದೊಡ್ಡಮಟ್ಟದ ಆದಾಯವನ್ನು ಅಲ್ಲಿನ ಜನರಿಗೆ ನೀಡುತ್ತಿದೆಯೆಂಬುದನ್ನು ತೋರಿಸಿ ಕೊಡುತ್ತಿದೆ. ಮಹಾ ಕುಂಭಮೇಳದಿಂದ ಸುಮಾರು ಎರಡು ಟ್ರಿಲಿಯನ್ನಷ್ಟು ವ್ಯವಹಾರ ಆಗುತ್ತದೆಯೆಂದು ಅಂದಾಜಿಸಲಾಗಿದೆ.
ಮಹಾಕುಂಭಕ್ಕಾಗಿ ಭಾರತೀಯ ರೈಲ್ವೆ ಇಲಾಖೆ 13000 ರೈಲುಗಳ ವ್ಯವಸ್ಥೆ ಮಾಡಿದೆ. ದೇಶದ ಮೂಲೆಮೂಲೆಗಳಿಂದ ಬರುವ ಜನರು ರೈಲಿನಲ್ಲಿ ಪ್ರಯಾಣಿಸುವಾಗ, ಮಾರ್ಗ ಮಧ್ಯದ ನಿಲ್ದಾಣದಲ್ಲಿ ಸಣ್ಣಪುಟ್ಟ ವ್ಯಾಪಾರ ಮಾಡಿ ಜೀವನ ನಡೆಸುವ ಬಡಕುಟುಂಬ ಗಳಿಗೆ ಆದಾಯ ಹೆಚ್ಚಾಗುವುದನ್ನು ಎಡಚರರು ಹೇಳುವುದಿಲ್ಲ.
ಸುಮಾರು ಒಂದೂವರೆ ತಿಂಗಳ ಮಹಾಕುಂಭದಲ್ಲಿ ವಸತಿ ವ್ಯವಸ್ಥೆಯಿಂದಲೇ ಹೋಟೆಲ್ ಉದ್ಯಮಕ್ಕೆ ಅಂದಾಜು 40000 ಕೋಟಿ ರು. ವ್ಯಾಪಾರವಾಗಲಿದೆಯೆಂದು ಅಂದಾಜು ಮಾಡಲಾಗಿದೆ. ಹಿಂದೂಗಳ ಮಹಾಕುಂಭಮೇಳದ ಸಲುವಾಗಿ ಒಂದು ಹೋಟೆಲ್ ಒಂದೂವರೆ ತಿಂಗಳುಗಳ ಕಾಲ ಭರ್ತಿಯಾದರೆ, ಅಲ್ಲಿ ಕೆಲಸ ಮಾಡುವ ಅಡುಗೆಯವರು, ರೂಮ್ ವ್ಯವಸ್ಥಾಪಕರು, ರೂಮ್ ಬಾಯ, ಹೊಟೇಲ್ ಸ್ವಚ್ಛಗೊಳಿಸುವವರು, ಡ್ರೈವರ್, ಬಟ್ಟೆ ಒಗೆಯುವ ಧೋಭಿಗಳ ಕುಟುಂಬಕ್ಕೂ ಉತ್ತಮ ಆದಾಯ ಬರುವುದರ ಬಗ್ಗೆ ಎಡಚರರು ಮಾತನಾಡುವುದಿಲ್ಲ.
ಮಹಾಕುಂಭದ ಸಂದರ್ಭದಲ್ಲಿ ಸ್ಥಳೀಯ ಅಂಗಡಿಗಳಲ್ಲಿ ಮಾರಾಟವಾಗುವ ಆಹಾರ ಪದಾರ್ಥಗಳು ಮತ್ತು ಪಾನೀಯಗಳಿಂದ 20000 ಕೋಟಿ ರು. ವ್ಯಾಪಾರವನ್ನು ನಿರೀಕ್ಷಿ ಸಲಾಗಿದೆ. ಹಿಂದೂ ಧರ್ಮದ ಒಂದೇ ಒಂದು ಆಚರಣೆಯ ಸಲುವಾಗಿ ಸಣ್ಣಪುಟ್ಟ ಗೂಡಂ ಗಡಿಗಳನ್ನು ನಡೆಸುತ್ತಿರುವವರ ವ್ಯಾಪಾರ ಹೆಚ್ಚಾಗುವುದನ್ನು ಎಡಚರರು ಮಾತ ನಾಡುವುದಿಲ್ಲ.
ಜಗತ್ತಿನಲ್ಲಿ ಎಡಚರರು ಅತಿಯಾದ ಪ್ರಚಾರ ನೀಡಿರುವ ಅನೇಕ ಕಾರ್ಯಕ್ರಮಗಳು ಅಥವಾ ಆಚರಣೆಗಳು, ಹಿಂದೂ ಧರ್ಮದಲ್ಲಿನ ಮಹಾಕುಂಭ ಮೇಳದ ಕಾಲು ಭಾಗದಷ್ಟು ಆದಾಯವನ್ನೂ ನೀಡುವುದಿಲ್ಲ. ತಮ್ಮ ಕಣ್ಣಮುಂದೆ ಇಷ್ಟೆಲ್ಲ ಸತ್ಯಗಳನ್ನು ಕಂಡ ನಂತರವೂ, ಎಡಚರರು ಬದಲಾಗುವುದಿಲ್ಲ, ಮತ್ತದೇ ತಲೆಬುಡವಿಲ್ಲದ ವಿತ್ತಂಡವಾದ ಮಾಡುತ್ತಲೇ ಇರುತ್ತಾರೆ. ಯೋಗಿ ಆದಿತ್ಯನಾಥ್ ಉತ್ತರಪ್ರದೇಶದ ಮುಖ್ಯಮಂತ್ರಿ ಯಾದಾಗ ಅವರ ಸನ್ಯಾಸತ್ವವನ್ನು ಅಣಕಿಸಿ ಮಾತನಾಡಿದ್ದರು, ಇಂದು ಅವರ ಅವಧಿ ಯಲ್ಲಿ ಉತ್ತರಪ್ರದೇಶ ಅಪರಾಧ ಮುಕ್ತ ರಾಜ್ಯವಾಗುತ್ತಿದೆ.
ಉತ್ತರಪ್ರದೇಶವನ್ನು 1952 ರಿಂದಲೂ ಪ್ರತಿನಿಧಿಸುತ್ತಿರುವ ನೆಹರು, ಇಂದಿರಾಗಾಂಧಿ, ರಾಜೀವ್ ಗಾಂಧಿ, ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಅಲ್ಲಿನ ಅಭಿವೃದ್ಧಿಯ ಕಡೆಗೆ ಗಮನವನ್ನೇ ಹರಿಸಲಿಲ್ಲ. ಉತ್ತರಪ್ರದೇಶವನ್ನು ದೆಹಲಿಯ ಗದ್ದುಗೆ ಏರುವುದಕ್ಕೆ ಬಳಸಿ ಕೊಂಡರೆ ಹೊರತು, ಆ ರಾಜ್ಯದ ಅಭಿವೃದ್ಧಿಯ ಕಡೆಗೆ ಗಮನ ಹರಿಸಿರಲಿಲ್ಲ.
ಇಂದು ಅದೇ ಪಕ್ಷದ ನಾಯಕರು ಬೆಂಗಳೂರಿನಲ್ಲಿ ಕುಳಿತು, ಉತ್ತರಪ್ರದೇಶಕ್ಕೆ ಹೆಚ್ಚಿನ ತೆರಿಗೆ ಹಣ ಹೋಗುತ್ತಿದೆಯೆಂಬ ಹೇಳಿಕೆ ನೀಡುತ್ತಾರೆ. ತಮ್ಮದೇ ಪಕ್ಷದ ನೆಹರು ಕುಟುಂಬದ
ಬೇರುಗಳು ಪ್ರತಿನಿಧಿಸಿದ್ದ ರಾಜ್ಯವನ್ನು ತಮ್ಮ ಪಕ್ಷವೇ ಅಧೋಗತಿಗೆ ತಂದಿದ್ದ ಸತ್ಯವನ್ನು ಹೇಳುವುದಿಲ್ಲ. ತಾವುಗಳೂ ಅಭಿವೃದ್ಧಿ ಮಾಡಲಿಲ್ಲ, ಮಾಡುವವರನ್ನು ಟೀಕೆ ಮಾಡುವು ದನ್ನು ಬಿಡುವುದಿಲ್ಲ. ತಮ್ಮ ಟೀಕೆಗಳಿಗೆ ಹಿಂದೂ ಧರ್ಮದ ಆಚರಣೆಗಳನ್ನು ಮುನ್ನೆಲೆಗೆ ತಂದು ಹಿಂದೂಗಳಿಗೆ ಅವಮಾನ ಮಾಡುವ ಕೆಲಸವನ್ನು ಮಾಡುತ್ತಲೇ ಇದ್ದಾರೆ.
ಮಹಾಕುಂಭಮೇಳಕ್ಕೆ ಆಗಮಿಸುವ ಭಕ್ತಾದಿಗಳು ಖರೀದಿಸುವ ಧೂಪ, ಅಗರಬತ್ತಿ, ದೀಪ, ದೀಪದ ಎಣ್ಣೆ, ದೀಪದ ಬತ್ತಿಗಳು, ಪೂಜೆ ವಸ್ತುಗಳ ವ್ಯವಹಾರ ಸುಮಾರು 20000 ಕೋಟಿ ರು.ವಾಗಬಹುದೆಂದು ಅಂದಾಜಿಸಲಾಗಿದೆ. ಒಂದು ಕಾಲದಲ್ಲಿ ಭಗವದ್ಗೀತೆಯನ್ನು ಮುದ್ರಿಸುವ ಉತ್ತರಪ್ರದೇಶದ ಗೋರಖ್‌ಪುರದ ಗೀತಾ ಪ್ರೆಸ್ ಅನ್ನು ಕೋಮುವಾದಿ ಎಂದು ಎಡಚರರು ದೂರಿದ್ದರು. ಮಹಾಕುಂಭಮೇಳದಲ್ಲಿ ಕೋಟಿಗಟ್ಟಲೆ ಭಗವದ್ಗೀತೆ ಪುಸ್ತಕಗಳು ಮಾರಾಟವಾಗಲಿವೆ.
ಉದ್ಯಮಿ ಗೌತಮ್ ಅದಾನಿ ಮಹಾಕುಂಭಮೇಳದಲ್ಲಿ ಒಂದು ಕೋಟಿಯಷ್ಟು ‘ಆರತಿ ಸಂಗ್ರಹ’ ಪುಸ್ತಕವನ್ನು, ಮೇಳಕ್ಕೆ ಆಗಮಿಸುವ ಜನರಿಗೆ ಉಚಿತವಾಗಿ ನೀಡಲು ‘ಗೀತಾ ಪ್ರೆಸ್’ ಸಂಸ್ಥೆಯೊಂದಿಗೆ ಒಪ್ಪಂದ ಮಾಡಿಕೊಂಡಿದ್ದಾರೆ. ಭಾರತದಲ್ಲಿರುವ ಪ್ರತಿಷ್ಠಿತ ಬಹು ರಾಷ್ಟ್ರೀಯ ಕಂಪನಿಗಳ ದೊಡ್ಡ ದೊಡ್ಡ ಜಾಹೀರಾತುಗಳು ಮಹಾಕುಂಭಮೇಳದಲ್ಲಿ
ರಾರಾಜಿಸುತ್ತಿವೆ, ಜಾಹೀರಾತುಗಳ ಮೂಲಕವೇ ಸಾವಿರಾರು ಕೋಟಿ ಆದಾಯ ನಿರೀಕ್ಷಿ ಸಲಾಗಿದೆ.
40 ಕೋಟಿ ಜನರು ಸೇರುವ ಕಾರ್ಯಕ್ರಮವನ್ನು ಸದುಪಯೋಗ ಪಡಿಸಿಕೊಳ್ಳುವ ಸಲುವಾಗಿ ಸಾವಿರಾರು ಕಂಪನಿಗಳು ತಮ್ಮ ನೂತನ ಉತ್ಪನ್ನಗಳನ್ನು ಮಾರ್ಕೆಟಿಂಗ್ ಮಾಡಲು ಮಹಾಕುಂಭಮೇಳವನ್ನು ಬಳಸಿಕೊಳ್ಳುತ್ತಿವೆ. ಮಾರ್ಕೆಟಿಂಗ್ ಮಾಡಲು ಸ್ಥಳೀಯರನ್ನೇ ಬಳಸಿಕೊಳ್ಳುವುದರಿಂದ, ಲಕ್ಷಾಂತರ ಜನರಿಗೆ ಉದ್ಯೋಗಾವಕಾಶ ಸಿಗಲಿದೆ. ಹಿಂದೂಗಳ ಆಚರಣೆಗಳಿಂದ ಬಡವರಿಗೆ ಏನು ಉಪಯೋಗವೆಂದು ವಾದ ಮಾಡುವ ಎಡಚರರಿಗೂ ಹಲವು ಉದ್ಯೋಗಗಳು ಕುಂಭಮೇಳದಲ್ಲಿ ದೊರೆಯಲಿದೆ.
ಬಹುರಾಷ್ಟ್ರೀಯ ಕಂಪನಿಗಳು ಕುಂಭಮೇಳದಲ್ಲಿ ನೀಡುವ ಜಾಹೀರಾತುಗಳ ಬಗ್ಗೆ ತಿಂಗಳು ಗಟ್ಟಲೆ ಚರ್ಚೆ ನಡೆಸಿವೆ. ಅಲ್ಲಿಗೆ ಬರುವ ಜನರನ್ನು ತಮ್ಮ ಉತ್ಪನ್ನಗಳತ್ತ ಆಕರ್ಷಿಸುವ ಹಲವು ವಿಧಾನಗಳ ಬಗ್ಗೆ ಚರ್ಚಿಸಿವೆ. ಕ್ರಿಯಾಶೀಲವಾದ ಅನೇಕ ಜಾಹೀರಾತುಗಳನ್ನು ನೀಡುವ ಮೂಲಕ ಜನರನ್ನು ತಮ್ಮೆಡೆಗೆ ಆಕರ್ಷಿಸುವ ಕೆಲಸವನ್ನು ಮಾಡಿವೆ.
ಭಾರತದ ದೊಡ್ಡ ಮಾರುಕಟ್ಟೆಯ ಅನೇಕ ಗ್ರಾಹಕರು ಒಂದೆಡೆ ಸಿಗುವಾಗ ಜಿದ್ದಿಗೆ ಬಿದ್ದು ಒಬ್ಬರಿಗಿಂತಲೂ ಮತ್ತೊಬ್ಬರು ತಮ್ಮ ಉತ್ಪನ್ನಗಳ ಮಾರ್ಕೆಟಿಂಗ್‌ನಲ್ಲಿ ತೊಡಗಿದ್ದಾರೆ. ಯೋಗಿಯವರನ್ನು ಕೇವಲ ಒಬ್ಬರು ಸನ್ಯಾಸಿಯೆಂದು ಟೀಕಿಸಿದವರಿಗೆ, ಸರಿಯಾದ ಉತ್ತರ ಮಹಾಕುಂಭಮೇಳದ ಮೂಲಕ ಸಿಗುತ್ತಿದೆ. ಜಗತ್ತಿನಲ್ಲಿ ಅಧಿಕ ಪ್ರಚಾರ ಪಡೆದಿರುವ ಅನೇಕಆಚರಣೆಗಳಲ್ಲಿ ಕಾಣಿಸದ ದೊಡ್ಡಮಟ್ಟದ ಮಾರುಕಟ್ಟೆ ಮಹಾಕುಂಭಮೇಳದಲ್ಲಿ ಕಾಣಿಸುತ್ತಿದೆ.
ಮಹಾಕುಂಭದ ಪರಿಣಾಮ ಮುಂದಿನ ದಿನಗಳಲ್ಲಿ ಭಾರತದಲ್ಲಿ ನಡೆಯುವ ಅನೇಕ ಹಿಂದೂ ಧಾರ್ಮಿಕ ಕಾರ್ಯಕ್ರಮಗಳು ಬಹುರಾಷ್ಟ್ರೀಯ ಕಂಪನಿಗಳ ಕಣ್ಣಿಗೆ ನೇರವಾಗಿ ಬೀಳುತ್ತವೆ. ಒಂದು ಕಾಲದಲ್ಲಿ ಹಿಂದೂ ದೇವರುಗಳನ್ನು ಅವಮಾನಿಸಿ ಚಲನಚಿತ್ರ ಗಳನ್ನು ನಿರ್ಮಾಣ ಮಾಡಲಾಗುತ್ತಿತ್ತು, ಹಿಂದೂ ದೇವರುಗಳನ್ನು ಅವಮಾನಿಸಿದ ಚಿತ್ರ ಗಳನ್ನು ನೋಡಿ ಹೆಚ್ಚಿನ ವ್ಯಾಪಾರ ಮಾಡುತ್ತಿದ್ದವರು ಹಿಂದುಗಳೇ ಹೊರತು ಹೊರಗಿನ ವರಲ್ಲ.
ಬಾಲಿವುಡ್ ಅಂಗಳದಲ್ಲಿ ದಾವೂದ್ ಇಬ್ರಾಹಿಂ ಕಾಲಿಟ್ಟ ನಂತರವಂತೂ, ಪ್ರತಿಯೊಂದು ಚಲನಚಿತ್ರದಲ್ಲೂ ಹಿಂದೂಗಳ ಅವಹೇಳನ ಸಾಮಾನ್ಯ ವಾಗಿರುತ್ತಿತ್ತು. ಸಾಧುಗಳನ್ನು ಕೆಟ್ಟದಾಗಿ ಬಿಂಬಿಸಿ, ಹಿಂದೂ ದೇವತೆಗಳನ್ನು ನಗೆಪಾಟಲಿಗೆ ಗುರಿಯಾಗಿಸುವ ಕೆಲಸ ಸರಾಗವಾಗಿ ನಡೆಯುತ್ತಿತ್ತು. ಇತರ ಧರ್ಮದವರನ್ನು ಚಲನಚಿತ್ರದಲ್ಲಿ ಅಮಾಯಕರೆಂದು ತೋರಿಸಿ, ಹಿಂದೂ ಗಳನ್ನು ಉಗ್ರವಾಗಿ ತೋರಿಸುತ್ತಿದ್ದರು. ಹಿಂದೂ ಸ್ವಾಮೀಜಿ ಗಳ ಬಗ್ಗೆ ಮಾತ್ರ ಚರ್ಚೆ ಮಾಡುವ ಎಡಚರರು, ಪಾದ್ರಿಗಳು ಮತ್ತು ಮೌಲ್ವಿಗಳ ಬಗ್ಗೆ ಎಂದಿಗೂ ಮಾತನಾಡುವುದಿಲ್ಲ.
ಹಿಂದೂಗಳ ಆಚರಣೆಗಳನ್ನು ಅಣಕಿಸುವವರೂ ಸಹ ಒಂದಲ್ಲ ಒಂದು ರೀತಿಯಲ್ಲಿ ಮಹಾಕುಂಭದ ಲಾಭವನ್ನು ಪಡೆದುಕೊಂಡಿರುತ್ತಾರೆ. ಹಿಂದೂ ಧರ್ಮವನ್ನು ಮಾರಣಾಂತಿಕ ರೋಗಗಳಿಗೆ ಹೋಲಿಸಿದ್ದ ತಮಿಳುನಾಡಿನ ಉದಯನಿಧಿ ಸ್ಟಾಲಿನ್ ಮತ್ತು ಎ.ರಾಜ, ತಮಿಳುನಾಡಿನಿಂದ ಮಹಾಕುಂಭಮೇಳಕ್ಕೆ ಆಗಮಿಸುವ ಜನಗಣತಿಯನ್ನೊಮ್ಮೆ ಮಾಡಿದರೆ ಚೆನ್ನಾಗಿರುತ್ತದೆ.
ಪ್ರಭು ಶ್ರೀರಾಮನ ಅಸ್ತಿತ್ವವನ್ನು ಪ್ರಶ್ನಿಸಿದವರು ಅಯೋಧ್ಯೆಯಲ್ಲಿ ಆಗುತ್ತಿರುವ ಬದಲಾವಣೆಗಳನ್ನು ಗಮನಿಸುತ್ತಿದ್ದಾರೆ. ದೆಹಲಿಯಲ್ಲಿ ಆಮ್ ಆದ್ಮಿ ಪಕ್ಷ ಅರ್ಚಕರಿಗೆ ಸರಕಾರದಿಂದ ಹಣಸಹಾಯ ಮಾಡುವ ಯೋಜನೆಯನ್ನು ತನ್ನ ಪ್ರಣಾಳಿಕೆಯಲ್ಲಿ ಘೋಷಿಸಿದೆ. 144 ವರ್ಷಗಳ ನಂತರ ನಡೆಯುತ್ತಿರುವ ಮಹಾಕುಂಭಮೇಳ ಉತ್ತರ ಪ್ರದೇಶದ ಆರ್ಥಿಕತೆಗೆ ಉತ್ತೇಜನ ನೀಡುವುದರ ಜೊತೆಗೆ, ಭಾರತದ ಆರ್ಥಿಕ ವೇಗಕ್ಕೆ ಬೇರೆಯದ್ದೇ ಆಯಾಮವನ್ನು ನೀಡುವುದರಲ್ಲಿ ಯಾವುದೇ ಅನುಮಾನವಿಲ್ಲ.
ಮಹಾಕುಂಭಮೇಳವು ಸ್ಥಳೀಯ ವ್ಯಾಪಾರ, ಉದ್ಯೋಗ ಸೃಷ್ಟಿ ಮತ್ತು ಪ್ರವಾಸೋದ್ಯಮಕ್ಕೆ ಪ್ರಬಲ ವೇಗವರ್ಧಕಗವಾಗಿ ಕಾರ್ಯನಿರ್ವಹಿಸುತ್ತದೆ ಮತ್ತು ಗಣನೀಯವಾಗಿ ಆರ್ಥಿಕ ಬೆಳವಣಿಗೆಗೆ ಚಾಲನೆ ನೀಡುತ್ತಿದೆ. ಮಹಾಕುಂಭಮೇಳ ಕೇವಲ ಹಿಂದೂಗಳ ನಂಬಿಕೆ ಮತ್ತು ಆಧ್ಯಾತ್ಮಿಕತೆಯ ಕೇಂದ್ರವಾಗಿರದೆ, ಭಾರತದ ಸಾಂಸ್ಕೃತಿಕ ಮತ್ತು ಆರ್ಥಿಕ ಶಕ್ತಿಯ
ಸಂಕೇತವಾಗಿದೆ. ಈ ಮೇಳವು ಭಾರತದ ಧಾರ್ಮಿಕ ಆರ್ಥಿಕತೆಯನ್ನು ಜಾಗತಿಕ ಹಂತಕ್ಕೆ ಕೊಂಡೊಯ್ಯುತ್ತದೆ ಮತ್ತು ಉತ್ತರ ಪ್ರದೇಶವನ್ನು ಧಾರ್ಮಿಕ ಮತ್ತು ಸಾಂಸ್ಕೃತಿಕ ಪ್ರವಾಸೋದ್ಯಮದ ಪ್ರಮುಖ ತಾಣವಾಗಿಸುತ್ತದೆ.
ಇದನ್ನೂ ಓದಿ: Mohan Vishwa Column: ಅಮೆರಿಕದಲ್ಲಿ ಯಹೂದಿ ಗಳ ಜಾಗಕ್ಕೆ ಭಾರತೀಯರು !