ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Naveen Sagar Column: ಗುಲಾಬಿ ತೋಟದಲ್ಲಿ ಬೆಟ್ಟದ ಹೂವಿನ ಘಮಘಮ

ಇನ್ ಫ್ಯಾಕ್ಟ್‌ ನನಗೆ ಗುಲ್ಝಾರ್ ಪರಿಚಯವಾದದ್ದೇ ರಾಖೀ ಮೂಲಕ. ‘ರಾಖೀ ಗಂಡ ಅಂತೆ’ ಅಂತ ದೊಡ್ಡವರು ಮಾತಾಡಿಕೊಳ್ಳುತ್ತಿದ್ದಾಗ ಕೇಳಿಸಿಕೊಂಡದ್ದಷ್ಟೆ. ಅದು ಹಿಂದೂ ಹೆಸರೆಂದು ಅನಿಸಿರ ಲಿಲ್ಲ. ಅದೆಷ್ಟೋ ವರ್ಷ ಮುಸಲ್ಮಾನ ಅಂತಲೇ ಅಂದುಕೊಂಡಿದ್ದೆ. ರವಿ ಬೆಳಗೆರೆಯ ಬರಹ ಓದಲು ಶುರು ಮಾಡಿದಾಗ ಪರಿಚಯಕ್ಕೆ ಬಂದ ಗಾಲಿಬ, ಸಾಹಿರ್ ಲೂಧಿಯಾನ್ವಿ ಸಾಲಿನಲ್ಲಿ ಗುಲ್ಝಾರ್ ಕೂಡ ಇದ್ದರು.

Naveen Sagar Column: ಗುಲಾಬಿ ತೋಟದಲ್ಲಿ ಬೆಟ್ಟದ ಹೂವಿನ ಘಮಘಮ

-

ಪದಸಾಗರ

ರುಡಾಲಿ ಚಿತ್ರದ ’ದಿಲ್ ಹೂಂ ಹೂಂ ಕರೇ ಗಬರಾಯೇ.....’ ಈ ಹಾಡಿನ ಗುಂಗು ನನ್ನನ್ನು ಗುಲ್ಝಾರ್ ಎಂಬ ಭಾವಮಾಂತ್ರಿಕನಿಗೆ ಪರಿಚಯಿಸಿದ್ದು. ಆ ಚಿತ್ರದ ಪ್ರತಿ ಹಾಡೂ ಇನ್ನಿಲ್ಲದಂತೆ ಕಾಡಿದಾಗ, ಕಾಡ್ತಾ ಇರೋದು ಸಂಗೀತವಲ್ಲ ಸಾಹಿತ್ಯ ಎಂಬುದು ಖಾತರಿಯಾದಾಗ ಗುಲ್ಝಾರ್ ಬಗ್ಗೆ ಓದಲು ಹಾತೊರೆದಿದ್ದೆ.

ಗುಲ್ಝಾರ್‌ರನ್ನು ಓದುವ ಮೊದಲು ಗುಲ್ಝಾರ್ ಬಗ್ಗೆ ಓದಬೇಕನಿಸಿದ್ದು ಯಾಕೋ ಗೊತ್ತಿಲ್ಲ. ಇಷ್ಟೊಂದು ಭಾವುಕವಾಗಿ, ಉತ್ಕಟವಾಗಿ ಬರೆಯುವ ವ್ಯಕ್ತಿ ಹೇಗಿರಬಹುದು ಎಂಬುದೇ ಸಾಮಾನ್ಯ ವಾಗಿ ಮೊದಲ ಕುತೂಹಲವಾಗಿರುತ್ತದೆ. ಆದರೆ ಅಂದಿಗೆ ಗುಲ್ಝಾರ್ ಬಗ್ಗೆ ಓದಲು ಹುಡುಕಿದಾಗೆಲ್ಲ ಸಿಕ್ಕಿದ್ದು ಗುಲ್ಝಾರರ ಸಾಹಿತ್ಯ ಮಾತ್ರ. ಅವರ ಹಾಡುಗಳು ಮಾತ್ರ.

ಇನ್ ಫ್ಯಾಕ್ಟ್‌ ನನಗೆ ಗುಲ್ಝಾರ್ ಪರಿಚಯವಾದದ್ದೇ ರಾಖೀ ಮೂಲಕ. ‘ರಾಖೀ ಗಂಡ ಅಂತೆ’ ಅಂತ ದೊಡ್ಡವರು ಮಾತಾಡಿಕೊಳ್ಳುತ್ತಿದ್ದಾಗ ಕೇಳಿಸಿಕೊಂಡದ್ದಷ್ಟೆ. ಅದು ಹಿಂದೂ ಹೆಸರೆಂದು ಅನಿಸಿರ ಲಿಲ್ಲ. ಅದೆಷ್ಟೋ ವರ್ಷ ಮುಸಲ್ಮಾನ ಅಂತಲೇ ಅಂದುಕೊಂಡಿದ್ದೆ. ರವಿ ಬೆಳಗೆರೆಯ ಬರಹ ಓದಲು ಶುರು ಮಾಡಿದಾಗ ಪರಿಚಯಕ್ಕೆ ಬಂದ ಗಾಲಿಬ, ಸಾಹಿರ್ ಲೂಧಿಯಾನ್ವಿ ಸಾಲಿನಲ್ಲಿ ಗುಲ್ಝಾರ್ ಕೂಡ ಇದ್ದರು.

ಆ ನಂತರ ತಿಳಿದಿದ್ದು, ಗುಲ್ಝಾರ್ ಎಂಬುದು ಕಾವ್ಯನಾಮ ಅಂತ. ಸಂಪೂರನ್ ಸಿಂಗ್ ಕಾಲ್ರಾ, ಗುಲ್ಝಾರ್ ದೀನ್ವೀ ಎಂಬ ಹೆಸರಲ್ಲಿ ಬರೆಯಲು ಶುರು ಮಾಡಿ, ನಂತರ ಗುಲ್ಝಾರ್ ಎಂಬುದಷ್ಟೇ ಉಳಿದು ಅದೇ ಖ್ಯಾತವಾಯ್ತು ಅಂತ.

ಇದನ್ನೂ ಓದಿ: Naveen Sagar Column: ನಡೆಸಿದಂತೆ ನಡೆದುಹೋದ ಬೊಂಬೆಯಾಟದ ಪಾತ್ರಧಾರಿ

‘ಮಾಚಿಸ್’ ಮತ್ತು ‘ಹುತುತೂ’ ಚಿತ್ರದ ಗೀತೆಗಳನ್ನು ಹುಚ್ಚಿಗೆ ಬಿದ್ದಂತೆ ಕೇಳಿದ್ದ ನನಗೆ ನಂತರದಲ್ಲಿ ಹಳೆಯ ಗುಲ್ಝಾರ್ ಗೀತೆಗಳನ್ನೆಲ್ಲ ಹುಡುಕಿ ಹುಡುಕಿ ಕೇಳುವಂತೆ ಮಾಡಿದ್ದು ‘ತುಜ್ ಸೇ ನಾರಾಜ್ ನಹೀ ಜಿಂದಗೀ, ಹೈರಾನ್ ಹೂಂ ಮೈ’ ಎಂಬ ಗೀತೆ.

ಉರ್ದು ಭಾಷೆ ಇಷ್ಟು ಇಂಪಾಗಿರಬಹುದು. ಉರ್ದುವಿನಲ್ಲಿ ಇಷ್ಟೊಂದು ಚೆಂದಚೆಂದದ ಪದಗಳಿರ ಬಹುದು, ಹಿಂದಿಯೊಂದಿಗೆ ಅದನ್ನು ಅಷ್ಟು ಚೆನ್ನಾಗಿ ಬೆರೆಸಬಹುದು ಅಂತ ಅನಿಸಿದ್ದೇ ಗುಲ್ಝಾರ್ ಸಾಹಿತ್ಯದಿಂದ. ತೊಂಬತ್ತರ ಹೊಸ್ತಿಲು ದಾಟಿ ಮುನ್ನಡೆದಿರುವ ಗುಲ್ಝಾರ್ ಇಂದಿಗೂ ಯುವ ಪೀಳಿಗೆಗೆ ಕಿಚ್ಚು ಹಚ್ಚಬಲ್ಲ ‘ಚಯ್ಯ ಚಯ್ಯ’, ‘ಬೀಡೀ ಜಲೈಲೇ ಜಿಗರ್ ಸೆ ಪಿಯಾ.. ಜಿಗರ್ ಮಾ ಬಡೀ ಆಗ್ ಹೈ’ ಥರದ ಹಾಡುಗಳನ್ನು ಬರೆಯುವ ನಿಗಿನಿಗಿ ಯೌವನವನ್ನು ಎದೆಯೊಳಗೆ ಕಾಪಿಟ್ಟು ಕೊಂಡಿದ್ದಾರೆ.

ಆದರೆ ಇತ್ತೀಚಿನ ವರ್ಷಗಳಲ್ಲಿ ಅವರ ಹಾಡುಗಳಿಗಿಂತ ಹೆಚ್ಚು ಹುಚ್ಚು ಹಿಡಿಸಿದ್ದು ಶಾಯರಿಗಳು. ನಾಲ್ಕು ಸಾಲು, ಎರಡು ಸಾಲು, ಕೆಲವೊಮ್ಮೆ ಒಂದೇ ಸಾಲಿನಲ್ಲಿ ಇಡೀ ಹೇಳಿ ಬಿಡುವ ಆ ಸಾಲು ಗಳನ್ನು ಏನೆಂದು ಕರೆಯಬೇಕೋ ಗೊತ್ತಿಲ್ಲ. ಅವುಗಳ ತೂಕವೇ ಬೇರೆ. ಅವು ಫಿಲಾಸಫಿಗಳೋ, ಪ್ರೇಮಕ್ಕೆ, ವಿರಹಕ್ಕೆ, ಮೋಸಕ್ಕೆ ಉತ್ತರವಾಗಿ ಸೃಷ್ಟಿಯಾದ ಸ್ವಗತಗಳೋ, ಹೃದಯದ ಪಿಸುಗುಡು ವಿಕೆಯೋ, ನಿಟ್ಟುಸಿರೋ ಸುಲಭಕ್ಕೆ ಅರ್ಥವಾಗುವುದಿಲ್ಲ.

Screenshot_1 ಋ

ಪ್ರತಿಯೊಬ್ಬರ ನೋವಿಗೂ ತಮ್ಮಂದು ಮುಲಾಮಿದೆ ಎಂಬಂತೆ ಬರೆಯುವ, ಒರಗಲು ತಮ್ಮ ದೊಂದು ಹೆಗಲಿದೆ ಎಂಬಂತೆ ಸಾಂತ್ವನ ನೀಡುವ, ಜಗತ್ತು ಇಷ್ಟೇ ನೀ ಗಟ್ಟಿಯಾಗು ಎಂಬಂತೆ ತಲೆದಡವಿ ಬುದ್ಧಿ ಹೇಳುವ ಗುಲ್ಝಾರ್ ಅದು ಹೇಗೆ ಸಮಸ್ತ ಜಗತ್ತಿನ ಭಾವಗಳನ್ನು ಅರ್ಥ ಮಾಡಿ ಕೊಂಡಿರಬಹುದು ಅನಿಸದಿರದು.

ಗುಲ್ಝಾರ್ ಅಂದರೆ ಹೂದೋಟ ಅಂತ ಅರ್ಥ. ನಿಜ ಇದಕ್ಕಿಂತ ಚೆಂದದ ಹೂದೋಟ ಇರಲು ಸಾಧ್ಯವೇ ಇಲ್ಲ. ಕನ್ನಡದಲ್ಲಿ ಗುಲ್ಝಾರ್‌ರನ್ನು ಅಷ್ಟೇ ಚೆನ್ನಾಗಿ ಭಾವಾನುವಾದಿಸಿ ತರುತ್ತಿರುವವರು ‘ಬೆಟ್ಟದ ಹೂ’. ಗುಲ್ಝಾರ್ ಎಂಬ ಹೂದೋಟದ ಬೆಟ್ಟದ ಹೂ. ನೀಲಿ ಬಣ್ಣದ ಹೂವಿನ ಚಿತ್ರದ ಫೇಸ್ ಬುಕ್ ಪ್ರೊಫೈಲಿನಲ್ಲಿ ದಿನವೂ ಗುಲ್ಝಾರ್ ಸಾಲುಗಳನ್ನು ಸಮರ್ಥವಾಗಿ ಅನುವಾದಿಸಿ ತರುವ ಬೆಟ್ಟದ ಹೂ ನಿಮ್ಮೊಳಗೆ ಗುಲ್ಝಾರ್‌ರನ್ನು ಇನ್ನಷ್ಟು ಮತ್ತಷ್ಟು ಓದಬೇಕೆನಿಸುವಂತೆ ಮಾಡುತ್ತಾರೆ.‘

ಬೆಟ್ಟದ ಹೂ’ ಬರೆದ ಗುಲ್ಝಾರ್ ಸಾಲುಗಳ ಭಾವಾನುವಾದದ ಅಂಥ ಒಂದಷ್ಟು ಸಾಲುಗಳನ್ನು ನೀವೇ ಒಮ್ಮೆ ಓದಿಕೊಳ್ಳಿ.

ನಾನೆಂದರೆ ಅದೆಷ್ಟು ದ್ವೇಷವಿತ್ತೋ!

ಅಂಗೈಗೆರೆಯಲ್ಲಿರುವ ನನ್ನನ್ನು ಅಳಿಸಲು,

ತನ್ನ ಕೈಗಳನ್ನೇ ಸುಟ್ಟುಕೊಂಡನಂತೆ...

***

ಖುಷಿಯಷ್ಟೇ ನನ್ನ ಜತೆ ಮುನಿಸಿಕೊಳ್ಳುವುದು;

ನೋವಿಗೆ ಅಂಥ ನಖರಾಗಳಿಲ್ಲ.

***

ಖುಷಿಯನ್ನು ಒಂದೇ ಶಬ್ದದಲ್ಲಿ ಬರೆಯುವ ಸವಾಲಿತ್ತು.

ಎಲ್ಲರೂ ಪುಸ್ತಕವನ್ನು ಹುಡುಕುತ್ತಿದ್ದರೆ,

ನಾ ನಿನ್ನ ಹೆಸರು ಬರೆದು ಬಂದೆ.

***

ನೀ ಬಿಟ್ಟು ಹೋಗಿದ್ದಕ್ಕೆ ದುಃಖವಾಗಲಿಲ್ಲ;

ತಿರುಗಿಯೂ ನೋಡಲಿಲ್ಲ ಅಂತ, ಎದೆ ಒಡೆಯಿತು...

***

ಪದಗಳಿಗೂ ಸ್ವಾದವಿದೆ;

ಬಡಿಸುವ ಮೊದಲು, ರುಚಿ ನೋಡಬೇಕು.

***

ಜನರು ಯೋಗಕ್ಷೇಮ ವಿಚಾರಿಸುವುದು,

ಎಲ್ಲಿ ಅವರಿಗಿಂತ ನಾವು ಬೆಳೆದುಬಿಟ್ಟೆವಾ ಎಂದು

ತಿಳಿಯಲಿಕ್ಕೆ!

***

ನೀ ತಪ್ಪಾಗಿ ಅರ್ಥೈಸಿಕೊಂಡಿದ್ದು ಒಳ್ಳೆಯದೇ ಆಯಿತು;

ನನಗೂ, ನನ್ನನ್ನು ಸಾಬೀತುಪಡಿಸಿಕೊಂಡು ಸುಸ್ತಾಗಿತ್ತು.

***

ಎಲ್ಲಾ ವಯಸ್ಸಲ್ಲೂ ಪ್ರೇಮದ ಜರೂರತ್ತಿದೆ;

ಯಾವ ವಯಸ್ಸಲ್ಲಿ ಹೃದಯ ಹೃದಯವಾಗಿರುವುದಿಲ್ಲ ಹೇಳಿ?!

***

ಹೇಗಾದರೂ ಅವನಿಗೆ ಈ ಸಂದೇಶ ತಲುಪಿಸಿ ಬಿಡಿ;

ಅವ ವಂಚಿಸಿದ ಮೇಲೂ, ನಾನಿನ್ನೂ ಸತ್ತಿಲ್ಲವೆಂದು...

***

ಶತ್ರುವಾಗಿ ನನ್ನನ್ನು ಗೆಲ್ಲಲು ಹೊರಟ;

ಮಿತ್ರನಾಗಿದ್ದರೆ ನಾನೇ ಸೋಲುತ್ತಿದ್ದೆ!

***

ಇದು ಜಗತ್ತು ಸಾಹೇಬ್!

ಇಲ್ಲಿ ಚೆಂದದ ಮೊಗಕ್ಕೋಸ್ಕರ,

ಚೆಂದದ ಹೃದಯದವರನ್ನು

ಬಿಟ್ಟುನಡೆಯಲಾಗುವುದು...

***

ವಿಷ ಕೊಟ್ಟಿದ್ದರೆ ಜಗತ್ತಿಗೆ ತಿಳಿಯುತ್ತಿತ್ತು.

ಅವ ಜಾಣ; ಔಷಧ ಕೊಡುವುದನ್ನು ನಿಲ್ಲಿಸಿದ.

***

ಶಪಿಸುವವರ ಸಭೆ ನಡೆದಿತ್ತು.

ನಾನೂ ಮನಸಾರೆ ಶಪಿಸಿದೆ;

ಅವನಿಗೂ ಪ್ರೇಮವಾಗಲಿ...

ಪ್ರೇಮವಾಗಲಿ... ಪ್ರೇಮವಾಗಲಿ...!

***

ವ್ಯತ್ಯಾಸವಿತ್ತು ನಮ್ಮಿಬ್ಬರ ಪ್ರೇಮದಲ್ಲಿ;

ನನಗೆ ‘ಅವನ’ ಇತ್ತು, ಅವನಿಗೆ ನನ್ನಲ್ಲಿ ಸಹ’ ಇತ್ತು.

***

ಅದೇಕಿಂಥ ನಿಶ್ಶಬ್ದ ಪ್ರೇಮ ನಿನ್ನದು?

ಈ ಅದೃಷ್ಟಹೀನನಿಗೆ ಯಾರೂ ಇಲ್ಲ ಎಂದು,

ಜನ ಭಾವಿಸುತ್ತಿದ್ದಾರೆ.

***

ಗೊತ್ತಿದ್ದವರೇ ತಾನೇ ಹೆಚ್ಚು ನೋಯಿಸುವುದು?

ಅಪರಿಚಿತರು ಪಾಪ, ಡಿಕ್ಕಿ ಹೊಡೆದಿದ್ದಕ್ಕೂ ಕ್ಷಮೆ

ಕೇಳುತ್ತಾರೆ.

***

ಪ್ರೇಮವೆಂಬುದು, ಇಬ್ಬರ ನಡುವಿನ ನಶೆ.

ಯಾರಿಗೆ ಮೊದಲು ಎಚ್ಚರಾಗುವುದೋ,

ಅವರೇ ದ್ರೋಹಿಗಳು!

***

ಪ್ರೇಮದ ತಲಾಶಿನಲ್ಲಿ ಏಕೆ ಅಲೆಯುತ್ತೀರಿ?

ಪ್ರೇಮವೇ ಬರುತ್ತದೆ...

ಯಾರನ್ನು ಮುಗಿಸಬೇಕಿದೆಯೋ ಅವರನ್ನು

ಹುಡುಕಿಕೊಂಡು!

***

ಸದಾ ನಗುವ ನನ್ನ ಅಭ್ಯಾಸ,

ಇಷ್ಟು ತುಟ್ಟಿಯಾಗುವುದೆಂದು ಭಾವಿಸಿರಲಿಲ್ಲ.

ಅವ ದೂರವಿzಗಲೂ ನಗುತ್ತಿz;

ಖುಷಿಯಲ್ಲಿದ್ದೇನೆ ಎನ್ನಿಸಿ, ಬಿಟ್ಟುಹೋದ!

***

ಯಾರು ಹೇಳುತ್ತಾರೆ ನಾನು ಸುಳ್ಳು ಹೇಳುವುದಿಲ್ಲ

ಎಂದು?

ಒಮ್ಮೆ ನನ್ನ ಯೋಗಕ್ಷೇಮ ವಿಚಾರಿಸಿ ನೋಡಿ...

***

ಬದುಕು ಏಕಿಷ್ಟು ಪಾಠಗಳನ್ನು ಹೇಳುತ್ತಿದೆಯೋ

ತಿಳಿಯುತ್ತಿಲ್ಲ;

ನಾನೇನು ಶಾಶ್ವತವಾಗಿ ಇಲ್ಲೇ ಉಳಿಯಬೇಕಿದೆಯಾ?!

***

ಈಗ ಹೇಳಿ. ಇವೆಲ್ಲವೂ ನಿಮ್ಮೊಳಗೂ ಇದ್ದ ಭಾವಗಳೇ ಅಲ್ಲವೇ? ಇಷ್ಟೇ ಇಷ್ಟು ಪದಗಳಲ್ಲಿ ಇಷ್ಟು ಸಶಕ್ತವಾಗಿ ಹೇಳಲಾಗಿಲ್ಲವಷ್ಟೇ. ನಮ್ಮನ್ನು ಅರೆದುಕುಡಿದು ಗುಲ್ಝಾರ್ ಹೇಳಿದ್ದಾರಷ್ಟೆ.

ಬಾಲ್ಯದಿಂದ ಮುಪ್ಪಿನ ತನಕ ಉತ್ಕಟವಾಗಿ ಭಾವುಕವಾಗಿ ಜೀವಿಸಿರದ ಹೊರತು ಇಂಥ ಸಾಲುಗಳು ಹುಟ್ಟಲು ಸಾಧ್ಯವೇ ಇಲ್ಲ. ಗುಲ್ಝಾರ್ ಅಂಥzಂದು ಜೀವನ ಜೀವಿಸಿದ್ದಾರೆ. ಅವರು ಬರೆದ ಪ್ರತಿ ಹಾಡುಗಳಲ್ಲೂ ಅವರದೇ ಜೀವನದ ಪ್ರತಿಬಿಂಬಗಳಿದ್ದವು. ‘ತುಜ್ ಸೆ ನಾರಾಜ್ ನಹೀ ಜಿಂದಗೀ’ ಗೀತೆ ಬರೆಯುವ ಗುಲ್ಝಾರ್ ತಮ್ಮ ಬಾಲ್ಯದ ನೆನಪುಗಳನ್ನು ಗೀತೆಯಾಗಿಸಿದ್ದರು. ‘ಇಜಾಜತ್’ ಚಿತ್ರದ ಗೀತೆ ಬರೆಯುವ ಹೊತ್ತಿಗೆ ರಾಖೀ ಜತೆಗಿನ ಅವರ ದಾಂಪತ್ಯ ಜೀವನ ಹೊಯ್ದಾಡುತ್ತಿತ್ತು.

ಹಸಿಹಸಿ ಗದ್ಯದಂತೆ ಬರೆದು ಕೊಡುತ್ತಿದ್ದ ಅವರ ಹಾಡುಗಳಿಗೆ ಟ್ಯೂನ್ ಹಾಕಲಾರದೇ ಆರ್.ಡಿ. ಬರ್ಮನ್ ಕೇಳುತ್ತಿದ್ದರಂತೆ- “ಇದಕ್ಕೆ ಸಂಗೀತ ಹೇಗೆ ಮಾಡಲಿ, ಮೀಟರೇ ಇಲ್ಲವಲ್ಲ" ಅಂತ. ಅದಕ್ಕೆ ಗುಲ್ಝಾರ್ ಉತ್ತರಿಸುತ್ತಾ “ಇದನ್ನು ಹಾಡು ಅಂತ್ಯಾಕೆ ಪರಿಗಣಿಸ್ತೀರಿ? ಗಟ್ಟಿಯಾಗಿ ಓದ್ತಾ ಇರೋ ಡೈರಿ ಅಂದುಕೊಳ್ಳಿ" ಅಂದಿದ್ದರಂತೆ!

ಗುಲ್ಝಾರ್ ಇಂದಿಗೂ ತಮ್ಮ ಲೇಖನಿಗೆ ಹಸಿರು ಬಣ್ಣದ ಇಂಕ್ ತುಂಬಿಸಿ ಬರೆಯುತ್ತಾರಂತೆ. ಹಸಿರು ಬಣ್ಣದ ಅಕ್ಷರ ಮೂಡ್ತಾ ಇದ್ದರೆ, ಪ್ರಕೃತಿ ಮಧ್ಯ ಕುಳಿತು ಬರೆದಂತೆ ಅನಿಸುತ್ತದೆ, ಕವಿತೆ ಹಸಿರಿ ನಲ್ಲಿದ್ದರೆ ಚೆನ್ನಾಗಿ ಉಸಿರಾಡುತ್ತದೆ ಅಂತ ಬಹಳ ಸೀರಿಯಸ್ಸಾಗಿ ನಂಬಿದ್ದರಂತೆ ಗುಲ್ಝಾರ್.

ಬಹಳ ಮೆಲುದನಿಯಲ್ಲಿ ಮಾತನಾಡುವ ಗುಲ್ಝಾರ್ ಅವರನ್ನು ಒಮ್ಮೆ ಯಾರೋ ಕೇಳಿದರಂತೆ, “ಅದ್ಯಾಕೆ ಅಷ್ಟು ಕ್ಷೀಣಧ್ವನಿಯಲ್ಲಿ ಮಾತನಾಡ್ತೀರಿ?" ಅಂತ. “ನಾನು ಅಷ್ಟು ಸಣ್ಣಧ್ವನಿಯಲ್ಲಿ ಮಾತನಾಡಿದರೆ ಕೇಳುಗರು ನನ್ನ ಹತ್ತಿರ ಬರುತ್ತಾರೆ. ಕೇಳಿಸಿಕೊಳ್ಳಲು ಹತ್ತಿರ ಬಂದಷ್ಟೂ ಆ ಸಾಮೀಪ್ಯ ಒಂದು ಕನೆಕ್ಷನ್ ಉಂಟುಮಾಡುತ್ತದೆ" ಅಂದಿದ್ದರಂತೆ.

ಗುಲ್ಝಾರ್ ಕವಿತೆಗಳು, ಶಾಯರಿಗಳು, ಗೀತೆಗಳು ಎಲ್ಲವೂ ಹಾಗೆಯೇ. ಎದೆಗೆ ಕಿವಿಯಿಟ್ಟು ಕೇಳಿಸಿ ಕೊಳ್ಳುವಂಥವು. ನೇರ ಎದೆಗೇ ಇಳಿಯುವಂಥವು.

‘ಆಂಧಿ’ ಚಿತ್ರದ ‘ತೇರೆ ಬಿನಾ ಜಿಂದಗೀ ಸೇ ಕೋಯಿ..’, ‘ದಿಲ್ ಸೆ’ ಚಿತ್ರದ ‘ಯೆ ಅಜನಬಿ ತೂ ಭೀ ಕಭೀ..’,‘ಘರೋಂಡಾ’ ಚಿತ್ರದ ‘ದೋ ದಿವಾನೇ ಶಹರ್ ಮೆ..’, ‘ಗೋಲ್‌ಮಾಲ್’ ಚಿತ್ರದ ‘ಆನೇವಾಲಾ ಪಲ್.. ಜಾನೇವಾಲಾ ಹೈ..’ ಪಟ್ಟಿ ಮಾಡುತ್ತಾ ಹೋದರೆ ಬೆಸ್ಟ್ ಆಫ್ ಗುಲ್ಝಾರ್ ಅಂತಲೇ ನೂರಾರು ಗೀತೆಗಳು ಸಿಗುತ್ತವೆ.

ಆದರೆ ಅವರ ಚುಟುಕು ಶಾಯರಿಗಳು ಕೊಡುವ ಸುಖ ಸಾಂತ್ವನದ ತೂಕವೇ ಬೇರೆ. ‘ಬೆಟ್ಟದ ಹೂ’ ಬರೆದ ಅನುವಾದಗಳನ್ನು ಓದಿದ ನಂತರ ಒಮ್ಮೆ ಅವುಗಳ ಒರಿಜಿನಲ್ ಸಾಲುಗಳನ್ನು ಓದಿ. ಉರ್ದು ಮತ್ತು ಹಿಂದಿಗೆ ಅಡಿಕ್ಟ್ ಆಗದಿದ್ದಲ್ಲಿ ಹೇಳಿ. ನಿಮಗೂ ಅನುವಾದಿಸಬೇಕು ಎಂಬಾಸೆ ಬರದಿದ್ದರೆ ಹೇಳಿ...