Narayana Yaji Column: ಭೌಮಸ್ವರ್ಗದಲ್ಲಿ ಸೀತೆಯನ್ನು ಹುಡುಕುವ ಚಿಂತೆ
ನಾರಾಯಣ ಯಾಜಿ ಅಂಕಣ: ಸುಂದರಕಾಂಡ ರಾಮಾಯಣದ ಬಹು ಸುಂದರ ಭಾಗ. ʼಸುಂದರʼ ಎಂಬುದು ಹನುಮಂತನನ್ನು ಉದ್ದೇಶಿಸಿದ ಪದ. ಭರತ ದ್ವೀಪಖಂಡದ ತುದಿಯಿಂದ ಹಾರಿ ನೂರು ಯೋಜನ ದೂರದ ಸಮುದ್ರವನ್ನು ದಾಟಿ ಸುವರ್ಣಲಂಕೆಯನ್ನು ಸೇರಿ ಅಲ್ಲಿ ಸೀತಾಮಾತೆಯನ್ನು ಹುಡುಕುವ ಆಂಜನೇಯನ ಬೆಕ್ಕಸ ಬೆರಗಾಗುವಂಥ ಸಾಹಸವನ್ನು ಕವಿ ವಾಲ್ಮೀಕಿಗಳು ಇಲ್ಲಿ ಸೊಗಸಾಗಿ ಬಣ್ಣಿಸಿದ್ದಾರೆ. ಸುಂದರಕಾಂಡದ ಈ ಭಾಗವನ್ನು ಲೇಖಕರು ಇಲ್ಲಿ ವಿಶ್ಲೇಷಿಸಿದ್ದಾರೆ.
ಸಮುದ್ರಲಂಘನ ವೇಳೆ ಸಿಂಹಿಕೆಯನ್ನು ಸಂಹರಿಸಿದ ಹನುಮಂತ -
-- ನಾರಾಯಣ ಯಾಜಿ
ಅರ್ಥಾನರ್ಥಾನ್ತರೇ ಬುದ್ಧಿರ್ನಿಶ್ಚಿತಾಪಿ ನ ಶೋಭತೇ ৷
ಘಾತಯನ್ತಿ ಹಿ ಕಾರ್ಯಾಣಿ ದೂತಾಃ ಪಣ್ಡಿತಮಾನಿನಃ৷৷ಸುಂ.2.40৷৷
ರಾಜನು ಮಂತ್ರಿಗಳೊಡನೆ ಕಾರ್ಯಾಕಾರ್ಯಗಳನ್ನು ಚನ್ನಾಗಿ ಸಮಾಲೋಚಿಸಿ ನಿರ್ಣಯಿಸಿದ ಬುದ್ಧಿಯೂ ಕೂಡ ಅವಿವೇಕಿಯಾದ ದೂತರಿಂದ ಕಾರ್ಯರೂಪಕ್ಕೆ ಬರದೇ ಕೆಟ್ಟುಹೋಗಬಹುದು. ಅನುಷ್ಠಾನಕ್ಕೆ ಸಮರ್ಥನಾದ ದೂತನ ಅಗತ್ಯವಿದೆ ಎನ್ನುವುದನ್ನು ಹೇಳುವ ತಾತ್ಪರ್ಯ ಇಲ್ಲಿದೆ.
ಸುಂದರ ಕಾಂಡದಲ್ಲಿ ಬಹುಮುಖ್ಯವಾದ ವಿಷಯವನ್ನು ಗಮನಿಸಬೇಕಾದುದು ಹನುಮಂತನ ಕಾರ್ಯಪ್ರಜ್ಞೆ ಮತ್ತು ಹಲವು ಬಗೆಯ ಸನ್ನಿವೇಶವನ್ನು ನಿಭಾಯಿಸುವ ಆತನ ರಾಜನೀತಿ. ಕೇವಲ ಸೀತಾನ್ವೇಷಣೆಯ ಗೂಢಚಾರನಾಗಿ ಲಂಕೆಗೆ ಆತ ಹೋಗಲಿಲ್ಲ, ರಾಮನ ಅಂತರಂಗದಲ್ಲಿರುವ ಭಾವನೆಗಳನ್ನು ಅರ್ಥಮಾಡಿಕೊಂಡೇ ಸಾಗಿದ್ದ. ಆತನ ಮುಂದೆ ಇದ್ದ ಗುರಿ ಲಂಕಾಪಟ್ಟಣ. ವಾಲ್ಮೀಕಿ ಹನುಮಂತನ ಹಾರುವ ಸಿದ್ಧತೆಯ ಕುರಿತು ವಿವರಿಸುವ ಸಾಲು ತುಂಬಾ ಕುತೂಹಲಕರವಾಗಿವೆ. ಹಿಂದಿನ ಸಂಚಿಕೆಯಲ್ಲಿ ವಿವರಿಸಿದಂತೆ ಲಂಕೆಯತ್ತಲೇ ತನ್ನ ಮನಸ್ಸನ್ನು ಕೇಂದ್ರೀಕರಿಸಿ (ಜಗಾಮ ಲಙ್ಕಾಂ ಮನಸಾ ಮನಸ್ವೀ) ಹಾರಲುಪಕ್ರಮಿಸಿದನು.
ಹಾರುವಾಗಿನ ಸಿದ್ದತೆಯನ್ನು ವಿವರವಾಗಿ ವಾಲ್ಮೀಕಿ ವರ್ಣಿಸುತ್ತಾನೆ. ಅದರಲ್ಲಿ ಗಮನ ಸೆಳೆಯುವುದು ಹಾರುಜಿಗಿತಕ್ಕೆ ಸಿದ್ದನಾಗುವ ವ್ಯಕ್ತಿ ಹೇಗೆ ತನ್ನ ದೇಹದ ಉಸಿರನ್ನು ಕಟ್ಟಿ, ಮಂಡಿಯನ್ನು ಬಗ್ಗಿಸಿ, ದೇಹದ ಭಾರವೆಲ್ಲವೂ ಸೊಂಟದ ಮೇಲೆ ಇರುವಂತೆ ಸ್ವಲ್ಪ ನಡು ಬಗ್ಗಿಸಿ, ತದನಂತರದಲ್ಲಿ ಉಸಿರನ್ನು ಒಳಕ್ಕೆಳೆದು ಶಕ್ತಿಗಳನ್ನು ಸಂಚಯಿಸಿ ಒಮ್ಮೆಲೇ ಹಾರುತ್ತಾನೆ. ಈ ಎಲ್ಲ ಸಿದ್ಧತೆಗಳನ್ನು ಮಾಡುವಾಗ “ತೇಜಃ ಸತ್ತ್ವಂ ತಥಾ ವೀರ್ಯಮಾವಿವೇಶ ಸ ವೀರ್ಯವಾನ್” ತೇಜಸ್ಸು, ಶಕ್ತಿ, ವೀರ್ಯಗಳೊಳಗೆ ಹನುಮಂತನು ಸೇರಿಕೊಂಡವು. ಯಾವದೇ ಒಂದು ಶಾರೀರಿಕ ಕ್ರಿಯೆಯಲ್ಲಿ ತೊಡಗುವಾಗ ತೇಜಸ್ಸು, ಶಕ್ತಿ, ವೀರ್ಯಗಳನ್ನು ನಮ್ಮೊಳಗೆ ಸೇರಿಸಿಕೂಳ್ಳುವುದು ಸಹಜಕ್ರಿಯೆ. ಆದರೆ ಇಲ್ಲಿ ಹನುಮಂತನೇ ಸತ್ವ-ತೇಜಸ್ಸು-ವೀರ್ಯದೊಳಗೆ ಸೇರಿಕೊಂಡ ಎನ್ನುವುದು ವಿಶೇಷ.
ಭಗವಂತನನ್ನು ಕುರಿತು ಧ್ಯಾನ ಅಥವಾ ಅರ್ಚನೆ “ಸೋಹಂಭಾವ”ದಿಂದಿರಬೇಕು ಎನ್ನುತ್ತದೆ. ಉಸಿರನ್ನು ಒಳಗೆಳೆದುಕೊಳ್ಳುವಾಗ “ಪ್ರಪಂಚದ ಎಲ್ಲಾ ಸಾತ್ವಿಕ ಶಕ್ತಿಗಳು ನಮ್ಮೊಡನೆ ಸೇರಲಿ ಎನ್ನುವ ಭಾವದಲ್ಲಿ ಲೀನವಾಗುವುದು. “I’m that- ಅವನೇ ನಾನು” ಎನ್ನುವಲ್ಲಿ ದೈವವನ್ನು ಆಹ್ವಾನಿಸಿ ಆತ್ಮದಲ್ಲಿ ಏಕತ್ವ ಅರಿಯುವುದು. ಮತ್ತೊಂದು ಭಾವದ ಧ್ಯಾನ “ಹಂಸಃ” ಎನ್ನುವುದು. ಇದು ಜೀವಾತ್ಮನು ಪರಮಾತ್ಮನೆಂಬ ಏಕತ್ವವನ್ನು ತೋರಿಸುತ್ತದೆ. ಸಾಮಾನ್ಯವಾಗಿ ಧ್ಯಾನದಲ್ಲಿ ಉಸಿರಾಟದೊಂದಿಗೆ ಜಪ ಮಾಡುತ್ತಾರೆ. ಉಸಿರೆಳೆಯುವಾಗ: ಸೋ, ಉಸಿರು ಬಿಡುವಾಗ: ಹಂ; ಇವೆರಡು ಸೇರಿದರೆ “ಸೋಹಂ”. ಎರಡನೆಯದು “ಹಂಸಃ” -“ನಾನೇ ಅದು” "ನಾನು" ಎಂಬ ಅರಿವಿನಿಂದ "ಅದು" (ಪರಬ್ರಹ್ಮ) ತಲುಪುವ ದಾರಿ. ಇಲ್ಲಿ ಹನುಮಂತ ಆಯ್ದುಕೊಂಡ ಮಾರ್ಗ ’ಹಂಸಃ’ ಎನ್ನುವ ಭಾವ. ’ಸೋಹಂ’ ಎಂದರೆ ಪರಮಾತ್ಮನಿಂದ ನನ್ನತ್ತ ಎನ್ನುವ ’ಸೋಹಂ’ ಅಲ್ಲ; ’ಹಂಸಃ- ಎಂದರೆ ನನ್ನಿಂದ ಪರಮಾತ್ಮದತ್ತ”. ಸಮುದ್ರದ ನೀರು ಮೋಡವಾಗಿ ಮಳೆಯಾಗಿ ಸಾಗರ ಸೇರುವ ಕ್ರಿಯೆ ’ಸೋಹಂ’; ಸಾಗರದೊಳಗೇ ಲೀನವಾಗಿ ಸಾಗರವೇ ಆಗಿಬಿಡುವುದು ’ಹಂಸಃ’. ಸೀತಾನ್ವೇಷಣೆಯಲ್ಲಿ ತೊಡಗುವಾಗ ತನ್ನಲ್ಲಿ ಶಕ್ತಿ ಮತ್ತು ಚೈತನ್ಯಗಳು ಸೇರಿಸಿಕೊಂಡರೆ ಅದು ದ್ವಂದ್ವಭಾವವಾಗುತ್ತದೆ. ತಾನೇ ಅವುಗಳೊಳಗೆ ಸೇರುವ ಅದ್ವೈತ ಭಾವವಿಲ್ಲಿದೆ. ರಾಮನ ತೇಜಸ್ಸ್ಸು, ಸತ್ವ ಮತ್ತು ವೀರ್ಯಗಳಲ್ಲಿ ಹನುಮಂತ ಸೇರಿಕೊಂಡು ತೇಜೋಮಯನೂ, ಸತ್ವಮಯನೂ, ವೀರ್ಯಮಯನು ಆದನು ಎನ್ನುವ ಭಾವ ಇಲ್ಲಿದೆ. ಅದನ್ನೇ ಮುಂದಿನ ಮಾತಿನಲ್ಲಿ ಆತ ಹೇಳುತ್ತಾನೆ. ಮೊದಲಿಗೆ ಮನಸ್ಸಿನಲ್ಲಿಯೇ ಲಂಕೆಯ ಕುರಿತು ಧ್ಯಾನಿಸಿದ ಆತ ತನ್ನ ಹಾರುವ ವೇಗವನ್ನು ಇತರ ವಾನರರಿಗೆ ಬಣ್ಣಿಸುವಾಗ ಮನೋವೇಗದಲ್ಲಿ ಎನ್ನುವುದಿಲ್ಲ.
ಯಥಾ ರಾಘವನಿರ್ಮುಕ್ತಃ ಶರಃ ಶ್ವಸನವಿಕ್ರಮಃ.
ಗಚ್ಛೇತ್ತದ್ವದ್ಗಮಿಷ್ಯಾಮಿ ಲಙ್ಕಾಂ ರಾವಣಪಾಲಿತಾಮ್৷৷ಸುಂ.1.39৷৷
ರಾಮನಿಂದ ಬಿಟ್ಟ ಬಾಣ ಹೇಗೆ ಹಾರುತ್ತದೆಯೋ ಅದೇ ರೀತಿ ನಾನು ರಾವಣನಿಂದ ಪಾಲಿಸಲ್ಪಡುವ ಲಂಕಾಪಟ್ಟಣಕ್ಕೆ ವೇಗವಾಗಿ ಹೋಗುತ್ತೇನೆ. ಆತನ ಪ್ರಕಾರ ರಾಮಬಾಣದ ವೇಗ ಮನೋವೇಗವನ್ನು ಮೀರಿಸುತ್ತದೆ. ರಾಮಕಾರ್ಯಕ್ಕಾಗಿ ತನ್ನನ್ನು ತಾನು ಅರ್ಪಿಸಿಕೊಂಡ ಬಗೆಯನ್ನು ಇಲ್ಲಿ ವಿವರಿಸಲಾಗಿದೆ. ಸಮುದ್ರ ಲಂಘನದ ವಿವರಣೆಯನ್ನು ವಾಲ್ಮೀಕಿ ಸುಂದರವಾಗಿ ವಿವರಿಸಿದ್ದಾರೆ. ಆತ ಸಮುದ್ರದ ಮೇಲೆ ಎಷ್ಟು ಎತ್ತರದಲ್ಲಿ ಹಾರುತ್ತಿದ್ದನು ಎಂದರೆ ಆಗಸದಲ್ಲಿ ಹಾರುವಾಗ ಅವನ ನೆರಳು ಹತ್ತು ಯೋಜನಗಳಷ್ಟು ಅಗಲವಾಗಿ ಮೂವತ್ತು ಯೋಜನಗಳಷ್ಟು ಉದ್ದವಾಗಿ ಕೆಳಗಡೆ ಸಮುದ್ರದ ಮೇಲೆ ಹರಡಿಕೊಂಡಿತ್ತು.
ರಾಜಕಾರ್ಯದಲ್ಲಿ ತೊಡಗುವವನು ಯಾವುದನ್ನೂ ಸಹ ಅಲಕ್ಷ್ಯ ಮಾಡಬಾರದು ಎನ್ನುವುದನ್ನು ಮೈನಾಕ ಪರ್ವತ ಮತ್ತು ಸರ್ಪಗಳ ತಾಯಿಯಾದ ಸುರಸೆಯ ಪ್ರಕರಣಗಳಲ್ಲಿ ಗಮನಿಸಬಹುದು. ಸೀತಾನ್ವೇಷಣೆ ಎನ್ನುವುದು ದೇವತೆಗಳಿಗೂ ಸಂತಸ ತರುವ ವಿಷಯ. ತಾವೂ ಈ ಸಂದರ್ಭದಲ್ಲಿ ಸಹಾಯ ಮಾಡಬೇಕೆನ್ನುವುದು ಸಮುದ್ರರಾಜನ ಅಪೇಕ್ಷೆ. ತನ್ನೊಡಲಲ್ಲಿದ್ದ ’ಮೈನಾಕ’ ಎನ್ನುವ ಪರ್ವತಕ್ಕೆ ಸಮುದ್ರದ ಮೇಲೆ ಎದ್ದು ನಿಲ್ಲು, ನಿರಂತರವಾಗಿ ಹಾರಾಡುವ ಹನುಮಂತನಿಗೆ ಕ್ಷಣಕಾಲವಾದರೂ ಆ ಪರ್ವತದ ಮೇಲೆ ವಿಶ್ರಾಂತಿ ಸಿಕ್ಕು ಮತ್ತೆ ಅಲ್ಲಿಂದ ಲಂಘಿಸಲಿ ಎಂದು ಸಲಹೆ ನೀಡುತ್ತಾನೆ. ಮೈನಾಕ ಸರಿಯೆಂದು ಮುಗಿಲಿನೆತ್ತರಕ್ಕೆ ಎದ್ದು ನಿಂತು ಹನುಮಂತನ ಹಾರುವಿಕೆಗೆ ಅಡ್ಡಬಂದರೆ ತನ್ನ ಎದೆಯಿಂದಲೇ ಅದನ್ನು ಪ್ರವಹಿಸಿ ಪರ್ವತದ ಶಿಖರವನ್ನು ನೆಲಕ್ಕುರುಳಿಸಿ ಮುಂದೆ ಹಾರುತ್ತಾನೆ. ಆಗ ಮೈನಾಕ ತಾನು ಹನುಮಂತನ ತಂದೆಯಾದ ವಾಯುವಿನಿಂದ ಉಪಕೃತನಾದುದರಿಂದ ಒಂದೇ ಸಮನ ಹಾರುತ್ತಿರುವ ಹನುಮಂತನಿಗೆ ಕ್ಷಣಕಾಲ ತನ್ನಲ್ಲಿ ವಿಶ್ರಮಿಸಲು ಅವಕಾಶ ನೀಡುವ ಸಲುವಾಗಿ ಬೆಳೆದೆ ಎನ್ನುವ ವಿನಂತಿಯನ್ನೂ ಸಹ ನಯವಾಗಿಯೇ ತಿರಸ್ಕರಿಸುತ್ತಾನೆ. ರಾಜಕಾರ್ಯಕ್ಕೆ ಹೊರಟಿರುವ ತಾನು ಎಲ್ಲಿಯೂ ವಿಶ್ರಮಿಸಲಾರೆ ಎಂದು ಪ್ರತಿಜ್ಞೆ ಮಾಡಿದ್ದೇನೆ ಎನ್ನುತ್ತಾ ಮುಂದೆ ಹಾರುತ್ತಾನೆ.
ಇನ್ನೊಂದು ಇಂತಹುದೇ ಸಮಸ್ಯೆ ಎದುರಾದುದು ಸರ್ಪಗಳ ತಾಯಿಯದ ಸುರಸೆಯ ಪ್ರಕರಣ. ಮೈನಾಕ ಪರ್ವತ ಎತ್ತರಕ್ಕೆ ಬೆಳೆದರೆ ಇಲ್ಲಿ ಸುರಸೆ ಅಗಲವಾದ ಬಾಯಿಯನ್ನು ತೆರೆದು ಆತನ ಮಾರ್ಗಕ್ಕೆ ಅಡ್ಡಲಾಗಿ ನಿಲ್ಲುತ್ತಾಳೆ. ಬ್ರಹ್ಮನೇ ಆಕೆಗೆ ಸಮುದ್ರದಲ್ಲಿ ಮೇಲೆ ಹಾರಾಡುವ ಯಾರನ್ನಾದರೂ ತಿನ್ನಬಹುದೆನ್ನುವ ವರಕೊಟ್ಟಿದ್ದ. ಆಕೆಯ ಬಾಯಿಗಿಂತಲೂ ದೊಡ್ಡದಾಗಿ ಬೆಳೆಯುತ್ತಾ ಬೆಳೆಯುತ್ತಾ ಒಮ್ಮೆಲೇ ಸೂಕ್ಷ್ಮಾಕಾರವಾಗಿ ಸುರಸೆಯ ಬಾಯಿಯನ್ನು ಹೊಕ್ಕು ಅಲ್ಲಿಂದ ಹೊರಬಂದು ಆಕೆಯನ್ನು ಮೆಚ್ಚಿಸುತ್ತಾನೆ. ಇವೆರಡೂ ದೇವತೆಗಳು ಲಂಕೆಗೆ ಹೋಗಿ ಬಲಿಷ್ಠನಾದ ರಾವಣನ ಸೆರೆಯಲ್ಲಿರುವ ಸೀತೆಯನ್ನು ಹುಡುಕಲು ಹನುಮಂತನಿಗೆ ಸಾಧ್ಯವೋ ಎನ್ನುವುದನ್ನು ಪರೀಕ್ಷಿಸಲು ದೇವತೆಗಳು ಒಡ್ಡಿರುವ ಪರೀಕ್ಷೆಯಾಗಿತ್ತು. ಬಲ ಮತ್ತು ಉಪಾಯ, ಎರಡರಲ್ಲಿಯೂ ಗೆದ್ದ ಆತನಿಗೆ ನಿಜವಾದ ಸವಾಲು ಒದಗಿದ್ದು ಮುಂದೆ ಸಿಂಹಿಕೆ ಎನ್ನುವ ರಕ್ಕಸಿಯ ಎದುರಿನಲ್ಲಿ. ಆಕಾಶದಲ್ಲಿ ಹಾರುತ್ತಿರುವ ಜೀವಿಗಳ ನೆರಳನ್ನು ಹಿಡಿದು ಸೆಳೆದು ಭಕ್ಷಿಸುವ ವರವನ್ನು ಆಕೆ ಪಡೆದಿದ್ದಳು. ಸಿಂಹಿಕೆಯ ಕುರಿತು ಸುಗ್ರೀವ ಮಾರುತಿಯನ್ನು ಹಿಂದೆಯೇ ಎಚ್ಚರಿಸಿದ್ದ. ಕಿಷ್ಕಿಂಧಾ ಕಾಂಡದಲ್ಲಿ ದಕ್ಷಿಣ ಸಮುದ್ರದ ಮಧ್ಯದಲ್ಲಿ “ಅಙ್ಗಾರಕೇತಿ ವಿಖ್ಯಾತಾ ಛಾಯಾಮಾಕ್ಷಿಪ್ಯ ಭೋಜನೀ” ನೆರಳನ್ನು ಹಿಡಿದು ತಿನ್ನುವ ರಾಕ್ಷಸಿಯೋರ್ವಳು ಇದ್ದಾಳೆ ಎನ್ನುವ ಎಚ್ಚರಿಕೆಯನ್ನು ಮೊದಲೇ ಕೊಟ್ಟಿದ್ದ. ಸಮಗ್ರ ಭೂಪ್ರದೇಶದ ಪರಿಚಯ ಸುಗ್ರೀವನಿಗಿದೆ ಎನ್ನುವ ಕಬಂಧನ ಮಾತಿಗೆ ಇದೊಂದು ನಿದರ್ಶನವಾಗಿದೆ. ಇದನ್ನು ಗ್ರಹಿಸಿದ ಆಂಜನೇಯ ಸೂಕ್ಷ್ಮಾಕಾರದಿಂದ ಆಕೆಯ ಉದರದೊಳಗೆ ಹೊಕ್ಕು ಅಲ್ಲಿ ಬೃಹತ್ತಾಗಿ ಬೆಳೆದು ಸಿಂಹಿಕೆಯನ್ನು ಸೀಳಿಬಿಟ್ಟ. ಅಲ್ಲಿಯೂ ನಿಲ್ಲದೇ ನೇರವಾಗಿ ಹಾರಿಬಂದವನೇ ತ್ರಿಕೂಟ ಪರ್ವತದ ಮೇಲಿದ್ದ ಲಂಕೆಯನ್ನು ನೋಡಿದ. ಹಾರುವಾಗ ಬೃಹತ್ತಾಗಿ ಬೆಳೆದ ಶರೀರವನ್ನು ತನ್ನ ಸಹಜರೂಪಕ್ಕೆ ಇಳಿಸಿಕೊಂಡು ಲಂಕೆಯನ್ನು ಪ್ರವೇಶಿಸಿದ.
ಇಲ್ಲಿಂದ ಮುಂದೆ ಲಂಕೆಯ ವರ್ಣನೆ ವಾಲ್ಮೀಕಿಯ ನುಡಿಗಳಲ್ಲಿ ಬಲು ಸುಂದರವಾಗಿ ವರ್ಣಿತವಾಗಿವೆ. ಹನುಮಂತ ಮಹೇಂದ್ರಾಚಲದಿಂದ ಹಾರಿ ಬಂದು ಲಂಕೆಯನ್ನು ಸುತ್ತುವರೆದಿರುವ ತ್ರಿಕೂಟಾಚಲ ಪರ್ವತದ ಶಿಖರಗಳೊಂದರ ಮೇಲೆ ಕುಳಿತಾಗ ಲಂಕೆಯ ಸೌಂದರ್ಯವನ್ನು ನೋಡಿ ಬೆರಗಾಗಿಬಿಟ್ಟನಂತೆ. ಆತನಿಗೆ ’ಲಂಕೆ ಭೌಮಸ್ವರ್ಗ’ವಾಗಿ ಕಂಡಿತು. ಸುಂದರಕಾಂಡದಲ್ಲಿ ಸೌಂದರ್ಯವರ್ಣನೆಯ ಯಾವ ಅವಕಾಶವನ್ನೂ ಸಹ ಕವಿ ಬಿಡುವುದಿಲ್ಲ.
ವಾಲ್ಮೀಕಿ ರಾಮಾಯಣವು ಕಾವ್ಯಸೌಂದರ್ಯದ ಕಣಜ. ಅದರಲ್ಲಿಯೇ ಸುಂದರಕಾಂಡವು ಹನುಮಂತನ ಪರಾಕ್ರಮವನ್ನೂ, ಧೈರ್ಯವನ್ನೂ, ಭಕ್ತಿಯನ್ನೂ ಚಿತ್ರಿಸುವ ಅದ್ಭುತ ಭಾಗ. ಸಮುದ್ರವನ್ನು ದಾಟಿ ತ್ರಿಕೂಟ ಪರ್ವತದ ಮೇಲೆ ಹೊಳೆಯುತ್ತಿದ್ದ ಲಂಕಾಪುರವನ್ನು ಹನುಮಂತನು ಕಣ್ತುಂಬಿ ನೋಡುವ ದೃಶ್ಯವು ಓದುಗರ ಮನಸ್ಸನ್ನು ಮೋಹಗೊಳಿಸುತ್ತದೆ. ವಾಲ್ಮೀಕಿಯ ಅಲಂಕಾರಿಕ ಕಲ್ಪನೆ ಲಂಕೆಯನ್ನು ಭೂಮಿಯ ಸ್ವರ್ಗವೆಂದು ರೂಪಕಗೊಳಿಸುತ್ತದೆ.
ಇದನ್ನೂ ಓದಿ: Narayana Yaji Column: ಸೀತಾನ್ವೇಷಣೆಗೆ ಹೊರಟಿತು ವಾನರರ ದಂಡು
ಸಿತಾಭ್ರಸದೃಶೈಶ್ಚಿತ್ರೈಃ ಪದ್ಮಸ್ವಸ್ತಿಕಸಂಸ್ಥಿತೈಃ৷
ವರ್ಧಮಾನಗೃಹೈಶ್ಚಾಪಿ ಸರ್ವತಃ ಸುವಿಭೂಷಿತಾ৷৷ಸು.ಕಾಂ.4.7৷৷
ಬಿಳಿಯ ಮೋಡಕ್ಕೆ ಸದೃಶವಾಗಿದ್ದ, ಶುಭಪ್ರದವಾಗಿದ್ದ, ಪದ್ಮ-ಸ್ವಸ್ತಿಕ ಮತ್ತು ವರ್ಧಮಾನಗಳೆಂಬ ಆಕೃತಿಗಳಿಂದ ಕೂಡಿದ, ಎಲ್ಲೆಡೆಯೂ ಸಿಂಗರಿಸಿದ್ದ ರಾಕ್ಷಸರ ಮನೆಗಳಿಂದ ಲಂಕೆ ಪ್ರಜ್ವಲಿಸುತ್ತಿತ್ತು.
ರಾಮಾಯಣ ಕವಿ ಬಾಲಕಾಂಡದಲ್ಲಿ ಅಯೋಧ್ಯೆಯ ವರ್ಣನೆಯನ್ನು ಬಹಳ ಸುಂದರವಾಗಿ ಅದೇರೀತಿ ಕಿಷ್ಕಿಂಧೆಯ ಪಟ್ಟಣವನ್ನೂ ಸಹ ವರ್ಣಿಸಿದ್ದಾನೆ. ಇದೀಗ ಮೂರನೆಯದಾಗಿ ರಾಕ್ಷಸರ ಪಟ್ಟಣವಾದ ಲಂಕೆಯ ವೈಭವವವನ್ನು ಸುಂದರಕಾಂಡದಲ್ಲಿ ಅಷ್ಟೇ ಸುಂದರವಾಗಿ ವರ್ಣಿಸಲಾಗಿದೆ. ಅಯೋಧ್ಯೆ ಮನುವಿನ ಕಾಲಕ್ಕೆ ನಿರ್ಮಿತ ಪಟ್ಟಣವಾದರೆ ಲಂಕೆ ದೇವ ಶಿಲ್ಪಿ ವಿಶ್ವಕರ್ಮನಿಂದಲೇ ಕುಬೇರನಿಗಾಗಿ ವಿಶೇಷವಾಗಿ ನಿರ್ಮಿಸಲ್ಪಟ್ಟಿತ್ತು ಎಂದು ಇದೇ ಕಾಂಡದಲ್ಲಿ ಹೇಳಲ್ಪಟ್ಟಿದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಲಂಕಾ ಮತ್ತು ಇಂದ್ರಪ್ರಸ್ಥ ನಗರಗಳು ಪ್ರಮಾಣಬದ್ಧ ವಾಸ್ತುಶಾಸ್ತ್ರದ ಪ್ರಕಾರ ಕಟ್ಟಿದ ನಗರಗಳಾಗಿವೆ. ಹನುಮಂತ ಸಮುದ್ರವನ್ನು ಉಲ್ಲಂಘಿಸಿ ನೇರವಾಗಿ ತ್ರಿಕೂಟ ಪರ್ವತದ ಮೇಲೆ ಇಳಿದಾಗ ಕಂಡ ತ್ರಿಕೂಟ ಪರ್ವತದ ಮೇಲಿರುವ ಲಂಕೆಯನ್ನು ಕಂಡಾಗ ಬೆರಗಾಗಿಬಿಟ್ಟನಂತೆ.
ಇದನ್ನೂ ಓದಿ: Narayanaa Yaji Column: ಲೋಕವನ್ನು ಹರುಷಗೊಳಿಸಿದ ಸುಂದರಕಾಂಡದ ಸುಂದರ
ಸಮುದ್ರದ ಮಧ್ಯದಲ್ಲಿ ಕಮಲದ ಹೂವಿನಂತೆ ಅರಳಿಕೊಂಡಿದ್ದ ಲಂಕೆಯು ತ್ರಿಕೂಟ ಪರ್ವತದ ಮೇಲೆ ಚಿನ್ನದ ಪ್ರಾಸಾದಗಳಿಂದ ಹೊಳೆಯುತ್ತಿತ್ತು. ಮುತ್ತು, ವಜ್ರ, ಮಾಣಿಕ್ಯ, ಪಚ್ಚೆ ಮುಂತಾದ ರತ್ನಗಳಿಂದ ಕಂಗೊಳಿಸುತ್ತಿದ್ದ ಆ ನಗರವು "ಮಣಿಮಯ ದ್ವೀಪದಂತೆ” ಮಿನುಗುತ್ತಿತ್ತು. ಕೋಟೆಯ ಗೋಡೆಗಳು ಕಿರಣಗಳನ್ನು ಚೆಲ್ಲುತ್ತಿದ್ದರೆ, ಗೋಪುರಗಳು ಸೂರ್ಯನ ಕಿರಣಗಳಿಗೆ ಪ್ರತಿಸ್ಪರ್ಧಿಗಳಂತೆ ಬೆಳಗುತ್ತಿದ್ದುವು. ಪರ್ವತದ ಶಿಖರಭಾಗದಲ್ಲಿ ರಾವಣನಿಂದ ಪರಿಪಾಲಿಸಲ್ಪಡುವ ಈ ನಗರ ಆಕಾಶದಲ್ಲಿ ತೇಲುತ್ತಿರುವುದೋ ಎಂಬಂತೆ ಕಾಣುತ್ತಿತ್ತು.
ನಗರವನ್ನು ಸುತ್ತುವರಿದ ಭದ್ರವಾದ ಕೋಟೆ
ಲಂಕೆಯ ಕೋಟೆಯು ಕೇವಲ ಕಲ್ಲಿನ ಕಟ್ಟಡವಲ್ಲ; ಅದು ರಾವಣನ ಶೌರ್ಯ ಮತ್ತು ಪ್ರಭುತ್ವದ ಪ್ರತಿಮೆಯೇ ಆಗಿತ್ತು. ಅಗಾಧವಾದ ಗೋಡೆಗಳು ವಜ್ರದಂತೆ ಗಟ್ಟಿಯಾಗಿದ್ದರೆ, ದ್ವಾರಗಳು ಕಬ್ಬಿಣದ ಕವಚದಂತೆ ಕಂಗೊಳಿಸುತ್ತಿದ್ದುವು. ಆ ದ್ವಾರಗಳ ಬಳಿ ನಿಂತಿದ್ದ ರಾಕ್ಷಸ ಸೈನಿಕರು, ಗಂಧರ್ವರಿಗೂ ಭಯ ಹುಟ್ಟಿಸುವಷ್ಟು ಕ್ರೂರರಾಗಿದ್ದರು. ಕೋಟೆಯ ಮೇಲ್ಭಾಗದಲ್ಲಿ ಹೊಳೆಯುತ್ತಿದ್ದ ಚಿನ್ನದ ಕಲಶಗಳು ನಗರವನ್ನು ಆಕಾಶಮಂಡಲದೊಂದಿಗೆ ಸೇರಿಸುತ್ತಿದ್ದಂತೆ ತೋರುತ್ತಿದ್ದುವು. ಒಂದು ಸ್ತ್ರೀಸ್ವರೂಪವಾಗಿ ಲಂಕೆಯನ್ನು ವಾಲ್ಮೀಕಿ ವರ್ಣಿಸುತ್ತಾನೆ. ಇಳಕಲು ಪ್ರದೇಶದಿಂದ ಕೂಡಿರುವ ಗೋಡಗಳೇ ಕಟಿಪ್ರದೇಶವಾಗಿತ್ತು. ಸಾಗರ ಮತ್ತು ವನಗಳು ಅದರ ವಸ್ತ್ರರೂಪದಲ್ಲಿದ್ದವು. ಶತಘ್ನಿ ಮತ್ತು ಶೂಲಗಳು ತಲೆಗೂದಲಿನ ತುದಿಗಳಂತಿದ್ದವು. ಎತ್ತರದ ಉಪ್ಪರಿಗೆಗಳು ಕರ್ಣಾಭರಣಗಳಾಗಿದ್ದವು, ವಿಶ್ವಕರ್ಮನ ಮನಸಂಕಲ್ಪದಿಂದಲೇ ಲಂಕಾ ನಗರಿ ನಿರ್ಮಾಣವಾಗಿತ್ತು. ಭೋಗವತಿಯು ಸರ್ಪಗಳಿಂದ ತುಂಬಿರುವಂತೆ, ಊಹೆಗೂ ನಿಲುಕದ ಲಂಕಾಪಟ್ಟಣವು ಘೋರರೂಪಿಗಳಾದ ರಾಕ್ಷಸರಿಂದ ನಿಬಿಡವಾಗಿತ್ತು. ಕ್ರೂರನೂ ಘೋರರೂಪಿಯೂ ಆದ ರಾವಣನಿಂದ ಪಾಲಿಸಲ್ಪಡೂವ ಈ ನಗರದಲ್ಲಿ ಸೀತಾದೇವಿಯನ್ನು ಎಲ್ಲಿ ಹುಡುಕಲಿ ಎಂದು ಚಿಂತಿತನಾದ. ಬಂದ ಹಾದಿಯನ್ನು ಕಂಡಾಗ ಕಣ್ಣೆವೆಯಿಕ್ಕುವತ್ತ ಹರಡಿರುವ ವಿಶಾಲವಾದ ಸಾಗರ, ನಡುವೆ ಯಾರಿಗೂ ಅರಿವಾಗದಂತೆ ಇರುವ ಕನಕ ಲಂಕೆ, ಮಹಾಕ್ರೂರಿ ರಾವಣ, ಇವೆಲ್ಲದರ ನಡುವೆ ಎಲ್ಲೋ ಇದ್ದಿರುವ ಸೀತಾದೇವಿ ಇವರುಗಳನ್ನು ಕಂಡಾಗ ಸುಗ್ರೀವನ ಮಹಾಸೈನ್ಯದಲ್ಲಿರುವ ಅಂಗದ, ನೀಲ, ವಾನರರ ರಾಜನಾದ ಸುಗ್ರೀವ ಮತ್ತು ನಾನು, ಈ ನಾಲ್ವರು ಮಾತ್ರವೇ ಇಲ್ಲಿಗೆ ಬರಲು ಸಾಧ್ಯ. ಸೈನ್ಯವನ್ನು ಹೇಗೆ ಕರೆತರುವುದು ಎಂದು ಚಿಂತಿತನಾದ. ಎಂತಿದ್ದರೂ ಮೊದಲು ಸೀತೆಯನ್ನು ಹುಡುಕಿ ಆಮೇಲೆ ಮುಂದಿನ ವಿಚಾರ ಎಂದು ಸೀತೆಯನ್ನು ಹುಡುಕಲು ಉದ್ಯುಕ್ತನಾದ.
ಇದನ್ನೂ ಓದಿ: Narayana Yaji Column: ರಾಮಾಯಣದಲ್ಲಿನ ವಿಲಕ್ಷಣ ಪ್ರಸಂಗ- ಅಂಗದ ಬಂಡಾಯ; ಹನುಮನ ಶಮನ