ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Thimmanna Bhagwat Column: ಮಂತ್ರಿಗಳ ಆಡಳಿತಾವಧಿ: ರಾಜ್ಯಪಾಲರ ಅಧಿಕಾರ ಔಪಚಾರಿಕವೇ ?

ಪಶ್ಚಿಮ ಬಂಗಾಳದ ವಿಧಾನ ಸಭೆಗೆ ಚುನಾವಣೆ ನಡೆದು ಆಡಳಿತಾರೂಢ ಟಿಎಂಸಿ ಪಕ್ಷಕ್ಕೆ ಬಹುಮತ ಲಭಿಸಿಲ್ಲ. ಹಾಲಿ ವಿಧಾನ ಸಭೆಯ ಅವಧಿ ಮೇ 7ಕ್ಕೆ ಮುಗಿಯುತ್ತದೆ. ಬಹುಮತ ಪಡೆಯದ ಕಾರಣಕ್ಕೆ ಹಾಲಿ ಮುಖ್ಯಮಂತ್ರಿ ಅಧಿಕಾರದಲ್ಲಿ ಮುಂದುವರೆಯಲು ಹಕ್ಕುದಾರರಲ್ಲ. ಅಲ್ಲದೆ ಅವರ ಪ್ರಸಕ್ತ ಅವಧಿ ಕೂಡಾ ಮೇ 7ಕ್ಕೆ ಮುಗಿಯುತ್ತದೆ.

ಮಂತ್ರಿಗಳ ಆಡಳಿತಾವಧಿ: ರಾಜ್ಯಪಾಲರ ಅಧಿಕಾರ ಔಪಚಾರಿಕವೇ ?

-

Profile
Ashok Nayak May 7, 2026 7:13 AM

ಕಾನೂನು ಸೆನ್ಸ್‌

ತಿಮ್ಮಣ್ಣ ಭಾಗ್ವತ್

ಯಾವದೇ ರಾಜ್ಯದ ವಿಧಾನ ಸಭೆಗೆ ಐದು ವರ್ಷಕ್ಕೊಮ್ಮೆ ನಡೆಯುವ ಚುನಾವಣೆಯಲ್ಲಿ ಆಡಳಿತಾ ರೂಢ ಪಕ್ಷಕ್ಕೇ ಬಹುಮತ ಬಂದರೂ ಹಾಲಿ ಮುಖ್ಯಮಂತ್ರಿ ಹಾಗೂ ಮಂತ್ರಿಮಂಡಲ ರಾಜೀನಾಮೆ ನೀಡುವುದು ಕೇವಲ ಸಂಪ್ರದಾಯವಲ್ಲ. ಅದು ಅಲಿಖಿತ ನಿಯಮ ಕೂಡಾ. ಹೊಸದಾಗಿ ಚುನಾ ಯಿತರಾದ ಸದಸ್ಯರು ಆಯ್ಕೆ ಮಾಡಲಾಗುವ ನಾಯಕನನ್ನು ಹೊಸ ಅವಧಿಗೆ ಮುಖ್ಯಮಂತ್ರಿ ಯನ್ನಾಗಿ ನೇಮಿಸಲು ರಾಜ್ಯಪಾಲರಿಗೆ ಅನುವು ಮಾಡಿಕೊಡಲು ಇದು ಅನಿವಾರ್ಯ.

ಹಿಂದಿನ ವಿಧಾನಸಭಾ ಸದಸ್ಯರೆಲ್ಲರ ಅವಧಿ ಕೂಡಾ ಮುಗಿಯುವುದರಿಂದ ಹೊಸ ಶಾಸಕಾಂಗ ಸಭೆ ಕಾರ್ಯ ನಿರ್ವಹಿಸುವಾಗ ಹೊಸ ಮಂತ್ರಿಮಂಡಲ ರಚನೆಯಾಗುತ್ತದೆ. ಶಾಸಕಾಂಗ ಸಭೆಯ ಅವಧಿ, ಅದು ಮೊದಲೇ ವಿಸರ್ಜನೆಯಾಗದಿದ್ದಲ್ಲಿ ಐದು ವರ್ಷಕ್ಕೆ ಕೊನೆಗೊಳ್ಳುತ್ತದೆ.

ಹೀಗಾಗಿ ಹಿಂದಿನ ಶಾಸಕಾಂಗ ಸಭೆಯ ಸದಸ್ಯರು ಐದು ವರ್ಷ ಮುಗಿದ ತಕ್ಷಣ ಸದಸ್ಯರಾಗಿ ಉಳಿಯುವುದಿಲ್ಲ. ಇದು ಮುಖ್ಯಮಂತ್ರಿ ಹಾಗೂ ಇತರ ಮಂತ್ರಿಗಳಿಗೂ ಅನ್ವಯಿಸುತ್ತದೆ. ಇದು ಸಂವಿಧಾನದ ಕುರಿತು ಸಾಮಾನ್ಯ ಜ್ಞಾನವಿರುವವರೆಲ್ಲರಿಗೆ ತಿಳಿದಿರುವ ವಿಷಯ.

ಪಶ್ಚಿಮ ಬಂಗಾಳದ ವಿಧಾನ ಸಭೆಗೆ ಚುನಾವಣೆ ನಡೆದು ಆಡಳಿತಾರೂಢ ಟಿಎಂಸಿ ಪಕ್ಷಕ್ಕೆ ಬಹುಮತ ಲಭಿಸಿಲ್ಲ. ಹಾಲಿ ವಿಧಾನ ಸಭೆಯ ಅವಧಿ ಮೇ 7ಕ್ಕೆ ಮುಗಿಯುತ್ತದೆ. ಬಹುಮತ ಪಡೆಯದ ಕಾರಣಕ್ಕೆ ಹಾಲಿ ಮುಖ್ಯಮಂತ್ರಿ ಅಧಿಕಾರದಲ್ಲಿ ಮುಂದುವರೆಯಲು ಹಕ್ಕುದಾರರಲ್ಲ. ಅಲ್ಲದೆ ಅವರ ಪ್ರಸಕ್ತ ಅವಧಿ ಕೂಡಾ ಮೇ 7ಕ್ಕೆ ಮುಗಿಯುತ್ತದೆ.

ಇದನ್ನೂ ಓದಿ: Thimmanna Bhagwat Column: ಕೇಂದ್ರ ರೂಪಿಸಿದ ಮಾದರಿ ಕಾಯ್ದೆ ಕರ್ನಾಟಕಕ್ಕೆ ಏಕೆ ಬೇಡ ?

ಆದರೆ, ತಾನು ರಾಜೀನಾಮೆ ನೀಡುವುದಿಲ್ಲ ಎಂದು ಆ ಪಕ್ಷದ ಅಧಿನಾಯಕಿ ಅವರು ಹೇಳುತ್ತಿದ್ದಾರೆ. ಹಾಗೆ ಹೇಳಲು ಅವರು ನೀಡುವ ಕಾರಣ ರಾಜ್ಯದಲ್ಲಿ ನಡೆದ ಚುನಾವಣೆಯ ಮತ ಎಣಿಕೆಯಲ್ಲಿ ಮೋಸ ಮಾಡಿ ತಮ್ಮ ಪಕ್ಷಕ್ಕೆ ಸಿಗಬೇಕಾದ ಕನಿಷ್ಠ ನೂರು ಸೀಟುಗಳನ್ನು ಕಸಿದುಕೊಳ್ಳಲಾಗಿದೆ ಎಂಬುದು. ಅವರ ಈ ಹೇಳಿಕೆಯನ್ನು ಕಾಂಗ್ರೆಸ್ ಪಕ್ಷ ಸೇರಿದಂತೆ ಕೆಲವು ವಿರೋಧ ಪಕ್ಷಗಳು ಸಮರ್ಥಿಸಿವೆ.

ಆದರೆ, ಸುದೀರ್ಘ ಅವಧಿಗೆ ರಾಜಕಾರಣದಲ್ಲಿರುವ ಅವರು ರಾಜತಾಂತ್ರಿಕ ವ್ಯವಸ್ಥೆಯ ಮೂಲ ಅಂಶಗಳನ್ನೇ ಅನುಸರಿಸದಿರುವುದು ಖೇದದ ಸಂಗತಿ. ಕಾನೂನು ಪದವೀಧರರೆಂದು ಹೇಳಿಕೊಂಡು ಸುಪ್ರೀಂ ಕೋರ್ಟಿಗೆ ತಮ್ಮ ವಾದ ಮಂಡಿಸಲು ತೆರಳಿದ ಅವರಿಗೆ ಈ ಸಾಮಾನ್ಯ ಅಂಶ ತಿಳಿಯ ದ್ದೆಂದು ಹೇಳಲಾಗದು.

ಯಾವುದೇ ರಾಜ್ಯದ ಶಾಸಕಾಂಗದ ಚುನಾವಣೆ ನಡೆದ ನಂತರ ಆಡಳಿತಾರೂಢ ಪಕ್ಷವೇ ಪುನಃ ಅಧಿಕಾರಕ್ಕೆ ಬಂದರೂ ಹಾಲಿ ಮುಖ್ಯಮಂತ್ರಿ ಮತ್ತು ಅವರ ಮಂತ್ರಿಮಂಡಲದ ಇತರ ಸದಸ್ಯರು ರಾಜ್ಯಪಾಲರಿಗೆ ರಾಜೀನಾಮೆ ಸಲ್ಲಿಸಬೇಕಾಗುತ್ತದೆ. ಯಾಕೆಂದರೆ ಹೊಸ ಶಾಸಕಾಂಗ ಪಕ್ಷ ಸಭೆ ಸೇರಿ ಹೊಸ ನಾಯಕನನ್ನು ಆಯ್ಕೆ ಮಾಡಬೇಕಾಗುತ್ತದೆ ಮತ್ತು ಅಂಥ ನಾಯಕರು ರಾಜ್ಯಪಾಲರಿಗೆ ಸರಕಾರ ರಚಿಸುವ ಬೇಡಿಕೆ (claim) ಮಂಡಿಸಬೇಕಾಗುತ್ತದೆ.

ರಾಜ್ಯಪಾಲರಿಗೆ ಅವರು ಬಹುಮತ ಪಡೆದಿರುವುದು ಮನವರಿಕೆಯಾದರೆ ಅವರು ಅಂಥ ನಾಯಕ ರನ್ನು ಸರಕಾರ ರಚಿಸಲು ಆಹ್ವಾನಿಸುತ್ತಾರೆ ಮತ್ತು ನಂತರ ಹೊಸ ಮಂತ್ರಿಮಂಡಲ ರಚನೆ ಯಾಗುತದೆ. ಇದು ಕೇವಲ ಸಂಪ್ರದಾಯವಲ್ಲ. ಬದಲಾಗಿ ಸಂವಿಧಾನ ರೀತ್ಯಾ ಅನುಸರಿಸಬೇಕಾದ ಕ್ರಮ. ಆದರೆ, ಚುನಾವಣೆಯಲ್ಲಿ ಬಹುಮತವನ್ನೇ ಪಡೆಯದ ಪಕ್ಷದ ಮುಖ್ಯಮಂತ್ರಿಗಳು ತಾನು ರಾಜೀನಾಮೆ ನೀಡುವುದಿಲ್ಲ ಎಂದರೆ ಅದು ಕೇವಲ ರಾಜಕೀಯ ಕ್ರಮವೆನಿಸದು.

Mamata B

ಅದು ಸಂವಿಧಾನದ ವಿಧಿಗಳ ಸ್ಪಷ್ಟ ಉಲ್ಲಂಘನೆ ಮತ್ತು ಅಧಿಕಾರ ವ್ಯಾಪ್ತಿಯನ್ನು ಮೀರಿದ ಕ್ರಮ ವೆನಿಸುತ್ತದೆ. ಮೇ 7ರ ನಂತರ ಅಧಿಕಾರದಲ್ಲಿರಲು ಹಕ್ಕು ಕಳೆದುಕೊಂಡ ನಾಯಕಿಯು ಮೊಂಡು ಹಠ ಮಾಡಿ ಕುರ್ಚಿ ಬಿಟ್ಟು ಕೊಡುವುದಿಲ್ಲವೆಂದರೆ ಕುರ್ಚಿಯಿಂದ ಎತ್ತು ಹೊರಗೆ ಹಾಕುವುದು ಅನಿವಾರ್ಯವಾಗುತ್ತದೆ ಎಂದು ಕೆಲವು ನಾಯಕರು ಹೇಳುತ್ತಿದ್ದಾರೆ. ಆದರೆ ಸಂವಿಧಾನದಲ್ಲಿ ಮುಖ್ಯಮಂತ್ರಿಯನ್ನು ಕಿತ್ತು ಹಾಕುವ (Dismissal) ವ್ಯವಸ್ಥೆ ಇಲ್ಲ. ಅವರು ಸಾಂವಿಧಾನಿಕವಾಗಿ ಅಧಿಕಾರ ಕಳೆದುಕೊಂಡರೆ ಅಧಿಕಾರ ಚಲಾಯಿಸುವಂತಿಲ್ಲ.

ಬಹುಮತ ಕಳೆದುಕೊಂಡ ಮುಖ್ಯಮಂತ್ರಿಯೊಬ್ಬರು ರಾಜೀನಾಮೆ ನೀಡದಿದ್ದರೆ ಏನು ಮಾಡ ಬೇಕೆಂದು ಸಂವಿಧಾನ ನೇರವಾಗಿ ಹೇಳುವದಿಲ್ಲ. ರಾಜ್ಯಪಾಲರು ಮುಖ್ಯಮಂತ್ರಿಯೊಬ್ಬರನ್ನು ಮುಂದುವರಿಸಲು ಇಚ್ಛಿಸದಿದ್ದರೆ ಏನು ಮಾಡಬೇಕೆಂಬುದೂ ಸ್ಪಷ್ಟವಿಲ್ಲ. ಪಶ್ಚಿಮ ಬಂಗಾಳದ ಪ್ರಸಕ್ತ ಸನ್ನಿವೇಶ ಕೆಲಮಟ್ಟಿಗೆ ಸಾಂವಿಧಾನಿಕ ಬಿಕ್ಕಟ್ಟು ಎಂದೇ ಹೇಳಬೇಕಾಗುತ್ತದೆ.

ಕನಿಷ್ಠ ಪಕ್ಷ ಇದು ಹೊಸ ಮುಖ್ಯಮಂತ್ರಿ ಆಯ್ಕೆಯಾಗಿ ಪ್ರತಿಜ್ಞಾವಿಧಿ ನೆರವೇರುವ ವರೆಗಿನ ಮಧ್ಯಂತರ ಗೊಂದಲವಂತೂ ಹೌದು. 1997ರಲ್ಲಿ ಬಿಹಾರದ ಅಂದಿನ ಮುಖ್ಯಮಂತ್ರಿ ಲಲ್ಲೂ ಪ್ರಸಾದ ಯಾದವ ಅವರ ವಿರುದ್ಧ ಸಿಬಿಐ ಆರೋಪ ಪಟ್ಟಿ ಸಲ್ಲಿಸಿದಾಗ ತಾನು ರಾಜೀನಾಮೆ ನೀಡುವುದಿಲ್ಲವೆಂದು ಪಟ್ಟು ಹಿಡಿದಿದ್ದರು.

ಆಮ್ ಆದ್ಮಿ ಪಕ್ಷದ ಅರವಿಂದ ಕೇಜ್ರಿವಾಲ್ ಜೈಲು ಸೇರಿದರೂ ರಾಜೀನಾಮೆ ನೀಡಲಿಲ್ಲ. ಈ ಎರಡೂ ಸಂದರ್ಭಗಳಲ್ಲಿ ಸಾಂವಿಧಾನಿಕ ಬಿಕ್ಕಟ್ಟು ಎದುರಾಗಿತ್ತು. ಕೇಜ್ರಿವಾಲ್ ಪ್ರಕರಣದಲ್ಲಿ ಅವರನ್ನು ಕಿತ್ತೊಗೆಯಬೇಕೆಂಬ ಮನವಿಯನ್ನು ದಿಲ್ಲಿ ಉಚ್ಚ ನ್ಯಾಯಾಲಯ ಕೂಡಾ ಪುರಸ್ಕರಿಸದೆ ಅದು ಅವರ ವೈಯಕ್ತಿಕ ಇಚ್ಛೆ ಎಂದಿತ್ತು.

2011ರಲ್ಲಿ ಕರ್ನಾಟಕದ ಅಂದಿನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪರವರು ತಮ್ಮ ವಿರುದ್ಧ ಲೋಕಾಯುಕ್ತ ವರದಿ ಬಂದ ನಂತರ ಆರಂಭದಲ್ಲಿ ನಿರಾಕರಿಸಿದರೂ ನಂತರ ರಾಜೀನಾಮೆ ನೀಡಿದ್ದರಿಂದ ಸಾಂವಿಧಾನಿಕ ಬಿಕ್ಕಟ್ಟು ತಲೆದೋರುವದು ತಪ್ಪಿತ್ತು. ಅಂಥ ಸಂದರ್ಭಗಳಲ್ಲಿ ಸಾಂವಿಧಾನಿಕ ಬಿಕ್ಕಟ್ಟು ಎದುರಾಗಲು ಕಾರಣವೆಂದರೆ ಸಂವಿಧಾನದಲ್ಲಿ ಚುನಾಯಿತ ಮುಖ್ಯ ಮಂತ್ರಿಯೊಬ್ಬರನ್ನು ಕಿತ್ತೊಗೆಯಲು ಅಂತರ್ಗತ ವ್ಯವಸ್ಥೆ ಇಲ್ಲ. ಅದು ಹೆಚ್ಚಾಗಿ ನೈತಿಕ ಹೊಣೆಗಾರಿಕೆ ಅಥವಾ ಕೋರ್ಟಿನ ಆದೇಶದ ಮೂಲಕವೇ ನಡೆಯಬೇಕಾಗುತ್ತದೆ.

ರಾಜ್ಯಪಾಲರ Pleasure ಕೇವಲ ಅಲಂಕಾರಿಕ ಅಥವಾ ಔಪಚಾರಿಕ ವಿವೇಚನಾಧಿಕಾರವಾಗುತ್ತದೆ. ಇಂಥ ಸಂದರ್ಭಗಳನ್ನು ಬಹುಷಃ ಸಂವಿಧಾನ ನಿರ್ಮಾತೃಗಳು ಊಹಿಸಿರಲಿಕ್ಕಿಲ್ಲ. ಅಂಥ ವ್ಯವಸ್ಥೆ ಯನ್ನು ಮುಂದಿನ ದಿನಗಳಲ್ಲಿ ಸಂವಿಧಾನದಲ್ಲಿ ಅಳವಡಿಸುವದು ಅನಿವಾರ್ಯ ವಾಗಬಹು ದೇನೋ.

ಭಾರತದ ಸಂವಿಧಾನದ 164ನೇ ವಿಧಿಯ ಪ್ರಕಾರ ರಾಜ್ಯದ ಮಂತ್ರಿಗಳು ತಮ್ಮ ಹುದ್ದೆಯಲ್ಲಿ ರಾಜ್ಯಪಾಲರು ಇಚ್ಛಿಸುವವರೆಗೆ ಮಾತ್ರ ಇರಬಹುದು. (Ministers shall hold office during the pleasure of the Governor). ಇದು ಮುಖ್ಯಮಂತ್ರಿಗಳಿಗೂ ಅನ್ವಯಿಸುತ್ತದೆ. ಮೇಲ್ನೋಟಕ್ಕೆ ಇದು ಅನಿಯಮಿತ ಅಧಿಕಾರವೆನಿಸಿದರೂ ರಾಜ್ಯಪಾಲರ ಈ ವಿವೇಚನಾಧಿಕಾರಕ್ಕೆ ಅನೇಕ ಮಿತಿಗಳಿವೆ.

ಸಾಮಾನ್ಯವಾಗಿ ಅವರು ಮುಖ್ಯಮಂತ್ರಿಗಳ ಸಲಹೆಯ ಮೇರೆಗೆ ಕಾರ್ಯ ನಿರ್ವಹಿಸಬೇಕಾಗುತ್ತದೆ. ಈ ಅಧಿಕಾರದ ಕುರಿತು ಅನೇಕ ಕಾನೂನು ಜಟಾಪಟಿಗಳು ನಡೆದಿವೆ. 310ನೇ ವಿಧಿಯೂ ರಾಜ್ಯ ಪಾಲರ Pleasure ಕುರಿತು ಹೇಳುತ್ತದೆ. ಅಲ್ಲಿರುವುದು ಸರಕಾರಿ ನೌಕರರ ಬಗ್ಗೆ. ಅಲ್ಲಿ ಕೂಡಾ ಮಂತ್ರಿ ಮಂಡಲದ ಸಲಹೆಯಿಲ್ಲದೆ ರಾಜ್ಯಪಾಲರು ಕ್ರಮ ಕೈಗೊಳ್ಳುವಂತಿಲ್ಲ.

155, 164 ಅಥವಾ 310 ರಲ್ಲಿ ಹೇಳಲಾದ ರಾಷ್ಟ್ರಪತಿ/ರಾಜ್ಯಪಾಲರ pleasure ನ ಮೂಲ ಬ್ರಿಟನ್ನಿನ ರಾಜ ಆಡಳಿತದ ವ್ಯವಸ್ಥೆ. ಆದರೆ ಅಲ್ಲಿಗಿಂತ ಭಾರತದಲ್ಲಿ ಈ ಅಧಿಕಾರಕ್ಕೆ ಹೆಚ್ಚಿನ ಮಿತಿಯಿದೆ. ಅಂಥ ನಿರ್ಣಯಗಳು ಕೋರ್ಟುಗಳ ವಿಮರ್ಶೆಗೆ ಒಳಪಡುತ್ತವೆ ಮತ್ತು ಸಾಮಾನ್ಯವಾಗಿ ಆ ಅಧಿಕಾರದ ಚಲಾವಣೆ ಮಂತ್ರಿಮಂಡಲದ ಸಲಹೆಯ ಮೇರೆಗೆ ಚಲಾಯಿಸಲ್ಪಡುತ್ತದೆ ಮತ್ತು ಮಂತ್ರಿಮಂಡಲವು ಸಂಸತ್ತಿಗೆ / ವಿಧಾನ ಮಂಡಲಕ್ಕೆ ಉತ್ತರದಾಯಿಯಾಗಿರುತ್ತದೆ. ಈ ಕಾರಣಕ್ಕೆ ಯಾವ ಹಂತದಲ್ಲೂ ಸರ್ವಾಧಿಕಾರಕ್ಕೆ ಅವಕಾಶವಿರುವದಿಲ್ಲ.

ಆದರೆ, ರಾಜ್ಯಪಾಲರು ತಮ್ಮ ವಿವೇಚನಾಧಿಕಾರವನ್ನು ಮುಖ್ಯಮಂತ್ರಿಯ ಕುರಿತಾಗಿಯೇ ಚಲಾಯಿಸಬೇಕಾಗಿ ಬಂದಾಗ ಅವರು ಮಂತ್ರಿಮಂಡಲದ ಸಲಹೆಯನ್ನು ಅವಲಂಬಿಸಲು ಸಾಧ್ಯ ವಾಗುವದಿಲ್ಲ. ಮಂತ್ರಿಮಂಡಲ ವಿಧಾನ ಸಭೆಯ ಬಹುಮತ ಹೊಂದಿದೆಯೋ ಇಲ್ಲವೋ ಎಂಬು ದನ್ನು ಪರಿಗಣಿಸುವದು ರಾಜ್ಯಪಾಲರ ವಿವೇಚನಾಧಿಕಾರ. ಆ ಕುರಿತು ಅವರು ಸಮರ್ಪಕ ನಿಯಮಾವಳಿ ಪಾಲಿಸಬೇಕಾಗುತ್ತದೆ. ಆದರೆ ಇಲ್ಲಿ ಬಗೆಹರಿಸಬೇಕಾದ ಪ್ರಶ್ನೆ ಬಹುಮತದ್ದಲ್ಲ.

ಮೇ 7ಕ್ಕೆ ವಿಧಾನ ಸಭೆಯ ಅವಧಿ ಮುಗಿದ ನಂತರ ಯಾರು ಮುಖ್ಯಮಂತ್ರಿಯಾಗಿರಬೇಕು ಎಂಬುದು ನಿರ್ಣಯವಾಗಬೇಕಾದ ಪ್ರಶ್ನೆ. ಹೊಸ ಮೂಖ್ಯಮಂತ್ರಿ ಆಯ್ಕೆಯಾಗುವ ವರೆಗೆ ಹಾಲಿ ಮುಖ್ಯಮಂತ್ರಿ ರಾಜೀನಾಮೆ ನೀಡಿದರೂ ಉಸ್ತುವಾರಿ ಮುಖ್ಯಮಂತ್ರಿಯಾಗಿ ಮುಂದುವರಿಯ ಬೇಕೆಂದು ಅವರನ್ನು ಸಾಮಾನ್ಯವಾಗಿ ವಿನಂತಿಸಲಾಗುತ್ತದೆ.

ಆದರೆ ಮಮತಾ ಬ್ಯಾನರ್ಜಿಯವರು ರಾಜೀನಾಮೆ ನೀಡದೇ ಸೆಡ್ಡು ಹೊಡೆದರೆ ರಾಜ್ಯಪಾಲರು ಅವರನ್ನು ಉಸ್ತುವಾರಿ ಮುಖ್ಯಮಂತ್ರಿಯಾಗಿ ಮಂದುವರಿಸುವ ಸಾಧ್ಯತೆ ಕಡಿಮೆ. ಆಗೆ ತಾವೇ ಅಽಕಾರ ಕೈಗೆತ್ತಿಕೊಳ್ಳುವ ಅನಿವಾರ್ಯತೆ ಅವರಿಗೆ ಬರುತ್ತದೆ. ಹಾಗೆ ಮಾಡಬೇಕಾದಲ್ಲಿ ಅವರು ರಾಷ್ಟ್ರಪತಿ ಆಡಳಿತವನ್ನು ಮಧ್ಯಂತರವಾಗಿ ತರಲು ಉಪಕ್ರಮಿಸಬೇಕು ಮತ್ತು ಆ ಮೂಲಕ ರಾಜ್ಯದ ಅಧಿಕಾರ ಸೂತ್ರವನ್ನು ಕೈಗೆ ತೆಗೆದುಕೊಳ್ಳಬೇಕಾಗುತ್ತದೆ.

ಟಿಎಂಸಿ ಪಕ್ಷದ ನಾಯಕಿ ಚುನಾವಣಾ ಆಯೋಗದ ವಿರುದ್ಧ ಆಪಾದನೆ ಮಾಡುತ್ತಿರುವುದು ಹೊಸದೇನಲ್ಲ. ಇನ್ನು ಕಾಂಗ್ರೆಸ್ ಪಕ್ಷದ ನಾಯಕರು ಕೂಡಾ ವೋಟ್ ಚೋರಿ ಎಂಬ ಹೆಸರಿನಲ್ಲಿ ದೇಶಾದ್ಯಂತ ಅಭಿಯಾನವನ್ನೇ ಮಾಡಿದ್ದರು. ಎಸ್‌ಐಆರ್ ವಿರುದ್ಧ ಕೂಡಾ ಈ ನಾಯಕರು ನೇರವಾಗಿ ಆಕ್ಷೇಪಿಸಿದ್ದರು.

ಸುಪ್ರೀಂ ಕೋರ್ಟಿಗೆ ಕೂಡಾ ಪ್ರಕರಣ ದಾಖಲಾಗಿ ಎಸ್‌ಐಆರ್ ವಿರುದ್ಧ ತಡೆ ನೀಡಲು ಸುಪ್ರೀಂ ಕೋರ್ಟ್ ನಿರಾಕರಿಸಿತು. ಎಸ್‌ಐಆರ್ ಮೂಲಕ ಮತದಾರರ ಹೆಸರನ್ನು ಅಳಿಸಲಾದ ಹೆಚ್ಚಿನ ಕಡೆ ಟಿಎಂಸಿಯೇ ಗೆದ್ದು ಬಂದಿರುವುದನ್ನು ಕೆಲವು ರಾಜಕೀಯ ವಿಶ್ಲೇಷಕರು ಎತ್ತಿ ತೋರಿಸಿದ್ದಾರೆ.

ಹಾಗಾಗಿ ಎಸ್‌ಐಆರ್‌ ತಮ್ಮ ಸೋಲಿಗೆ ಕಾರಣ ಎಂಬುದನ್ನು ಸಾಬೀತು ಮಾಡಲು ಟಿಎಂಸಿಗೆ ಸಾಧ್ಯ ವಾಗುತ್ತಿಲ್ಲ. ಆದ್ದರಿಂದ ಅವರ ಆಕ್ಷೇಪಣೆ ಕೇವಲ ಮತ ಎಣಿಕೆಗೆ ಮಾತ್ರ ಸೀಮಿತವಾಗಿರಬೇಕಾದ್ದು ಅನಿವಾರ್ಯ. ಮತ ಎಣಿಕೆಯ ಕುರಿತು ಆಕ್ಷೇಪಣೆ ಸಲ್ಲಿಸಲು ಅವರಿಗೆ ಸಾಕಷ್ಟು ಅವಕಾಶಗಳಿವೆ. ಮರು ಎಣಿಕೆ ಅಥವಾ ಮರು ಚುನಾವಣೆಗೆ ಕೂಡಾ ಹೈಕೋರ್ಟಿಗೆ ಅರ್ಜಿ ಸಲ್ಲಿಸಬಹುದು.

ಮರು ಚುನಾವಣೆ ನಡೆದ ಪೂರ್ವನಿದರ್ಶನಗಳು ಅನೇಕ ಇವೆ. ಅಂಥ ಅವಕಾಶಗಳನ್ನು ಉಪಯೋಗಿಸಿಕೊಂಡು ಸಂವಿಧಾನ ರೀತ್ಯಾ ನಡೆದುಕೊಂಡರೆ ಸುದೀರ್ಘ ರಾಜಕಾರಣದ ಹಿನ್ನೆಲೆ ಯಿರುವ ಮಮತಾ ಬ್ಯಾನರ್ಜಿಯವರ ಘನತೆ ಗೌರವಗಳು ಉಳಿಯಲಿವೆ ಎಂಬುದು ಜನರ ಭಾವನೆ.

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಿಜವಾದ ಪ್ರಭುಗಳು ಮತದಾರರು ಎಂಬುದನ್ನು ರಾಜಕಾರಣಿಗಳು ತಿಳಿದಿರಬೇಕು. ಅವರು ಇಚ್ಛಿಸುವ ವರೆಗೆ ಮಾತ್ರ ತಮಗೆ ಅಧಿಕಾರವಿರುತ್ತದೆ ಹೊರತು ಅದು ಶಾಶ್ವತ ವಲ್ಲ ಎಂಬುದನ್ನು ಒಪ್ಪಿಕೊಳ್ಳುವ ವಿನಯ ತೋರಿಸಬೇಕು. ಇಲ್ಲವಾದರೆ ಅದು ಕಾನೂನು ರಹಿತ (Lawlessness) ವ್ಯವಸ್ಥೆಯನ್ನು ಅಥವಾ ಅರಣ್ಯ ನ್ಯಾಯವನ್ನು ಸೃಷ್ಟಿಸ ಹೊರಟಿದ್ದಾರೆ ಎನ್ನಬೇಕಾಗುತ್ತದೆ. ಅದಕ್ಕೆ ಇನ್ನೊಂದು ಹೆಸರೇ ಗೂಂಡಾಗಿರಿ.