Mohan Vishwa Column: ಗಾಂಧಿ ಆದರ್ಶ ವಿರೋಧಿಗಳ ಬಾಯಲ್ಲಿ ನರೇಗಾ ಮಾತು
ನರೇಗಾ ಕೇಂದ್ರದ ಯೋಜನೆಯಾದರೂ ಅದರ ಅನುಷ್ಠಾನದ ಜವಾಬ್ದಾರಿ ಸ್ಥಳೀಯ ಪಂಚಾಯಿತಿ ಯದ್ದಾಗಿದೆ. ಹಾಗಾಗಿ ಅನುಷ್ಠಾನದಲ್ಲಿ ರಾಜ್ಯ ಸರಕಾರ ಮತ್ತು ಪಂಚಾಯಿತಿಗಳ ಪಾತ್ರ ದೊಡ್ಡದಿದೆ. ಗ್ರಾಮೀಣ ಭಾಗದ ಪ್ರಮುಖ ಯೋಜನೆಯಾಗಿದ್ದ ನರೇಗಾದಲ್ಲಿ ಅನೇಕ ಕಡೆ ಭ್ರಷ್ಟಾಚಾರದ ಕೂಗು ಕೇಳಿ ಬಂದಿತ್ತು.
-
ವೀಕೆಂಡ್ ವಿತ್ ಮೋಹನ್
ಬಿತ್ತನೆ ಮತ್ತು ಕೊಯ್ಲಿನ ಸಂದರ್ಭದಲ್ಲಿ ಪರಿಷ್ಕೃತ ಯೋಜನೆಯಲ್ಲಿ ಉದ್ಯೋಗ ಖಾತ್ರಿಗೆ ಬ್ರೇಕ್ ನೀಡಲಾಗಿದೆ. ರೈತರಿಗೆ ಉಂಟಾಗುವ ಕೂಲಿಯಾಳುಗಳ ಸಮಸ್ಯೆಯನ್ನು ಬಗೆಹರಿಸಲು ಕೈಗೊಂಡಿರುವ ಈ ನಿರ್ಧಾರದ ಬಗ್ಗೆ ಇಂದು ರಾಜಕೀಯ ಮಾಡುತ್ತಿದ್ದಾರೆ ಕಾಂಗ್ರೆಸ್ಸಿಗರು.
ಗ್ರಾಮೀಣ ಭಾಗದ ಬಡ ಕೂಲಿ ಕಾರ್ಮಿಕರಿಗೆ ಉದ್ಯೋಗಾವಕಾಶ ಕಲ್ಪಿಸುವಲ್ಲಿ ಪ್ರಾರಂಭವಾದ ಯೋಜನೆ ‘ನರೇಗಾ’. ಇದರ ಪೂರ್ಣ ಹೆಸರು ‘ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ’. ಭಾರತದ ಹಳ್ಳಿಗಳು ಮೊದಲು ಅಭಿವೃದ್ಧಿಯಾದರೆ ಇಡೀ ದೇಶವೇ ಅಭಿವೃದ್ಧಿ ಯಾಗುತ್ತದೆಯೆಂಬುದು ಮಹಾತ್ಮ ಗಾಂಧಿಯವರ ಗ್ರಹಿಕೆಯಾಗಿತ್ತು.
ಆ ನಿಟ್ಟಿನಲ್ಲಿ ಈ ಯೋಜನೆಯಲ್ಲಿ ಗ್ರಾಮೀಣ ಭಾಗದಲ್ಲಿ ಕೂಲಿ ಕಾರ್ಮಿಕರಿಗೆ ವರ್ಷದಲ್ಲಿ 100 ದಿನದ ಉದ್ಯೋಗಾವಕಾಶವು ಖಾತ್ರಿಯಾಗಿತ್ತು. ಭಾರತ ಇಂದು ಜಪಾನ್ ದೇಶವನ್ನು ಹಿಂದಿಕ್ಕಿ ಜಗತ್ತಿನ ಆರ್ಥಿಕತೆಯಲ್ಲಿ ನಾಲ್ಕನೇ ಸ್ಥಾನಕ್ಕೆ ತಲುಪಿದೆ. ದೇಶವು 2047ರ ಹೊತ್ತಿಗೆ ಸಂಪೂರ್ಣವಾಗಿ ಅಭಿವೃದ್ಧಿ ಹೊಂದಿ ‘ವಿಕಸಿತ ಭಾರತ’ವಾಗಬೇಕೆಂಬುದು ಪ್ರಧಾನಿ ನರೇಂದ್ರ ಮೋದಿಯವರ ಗುರಿ.
ಈ ಗುರಿಸಾಧನೆಯ ಭಾಗವಾಗಿ ನಗರಗಳ ಜತೆಗೆ ಗ್ರಾಮೀಣ ಅಭಿವೃದ್ಧಿಗೂ ಹೆಚ್ಚಿನ ಮಹತ್ವ ನೀಡುವ ನಿಟ್ಟಿನಲ್ಲಿ ಕಳೆದ ಹತ್ತು ವರ್ಷಗಳಿಂದ ಅನೇಕ ಯೋಜನೆಗಳನ್ನು ಜಾರಿಗೆ ತರಲಾಯಿತು. ಆ ಸಾಲಿನಲ್ಲಿ ಹಿಂದಿನ ಕಾಂಗ್ರೆಸ್ ಸರಕಾರ 2006ರಲ್ಲಿ ಜಾರಿಗೆ ತಂದಿದ್ದ ನರೇಗಾ ಯೋಜನೆಯಲ್ಲಿ ಪಾರದರ್ಶಕತೆ ತರಲು ಕೆಲವು ಬದಲಾವಣೆಗಳನ್ನು ಮಾಡಲಾಗಿತ್ತು.
ನರೇಗಾ ಕೇಂದ್ರದ ಯೋಜನೆಯಾದರೂ ಅದರ ಅನುಷ್ಠಾನದ ಜವಾಬ್ದಾರಿ ಸ್ಥಳೀಯ ಪಂಚಾಯಿತಿ ಯದ್ದಾಗಿದೆ. ಹಾಗಾಗಿ ಅನುಷ್ಠಾನದಲ್ಲಿ ರಾಜ್ಯ ಸರಕಾರ ಮತ್ತು ಪಂಚಾಯಿತಿಗಳ ಪಾತ್ರ ದೊಡ್ಡ ದಿದೆ. ಗ್ರಾಮೀಣ ಭಾಗದ ಪ್ರಮುಖ ಯೋಜನೆಯಾಗಿದ್ದ ನರೇಗಾದಲ್ಲಿ ಅನೇಕ ಕಡೆ ಭ್ರಷ್ಟಾಚಾರದ ಕೂಗು ಕೇಳಿ ಬಂದಿತ್ತು.
ಇದನ್ನೂ ಓದಿ: Mohan Vishwa Column: ನಟೋರಿಯಸ್ ಡ್ರಗ್ಸ್ ಪ್ರದೇಶ: ಗೋಲ್ಡನ್ ಕ್ರೆಸೆಂಟ್
ಹೊರ ರಾಜ್ಯದ ಕೂಲಿಕಾರ್ಮಿಕರನ್ನು ಕರೆತಂದು ಸ್ಥಳೀಯ ಕೂಲಿ ಕಾರ್ಮಿಕರ ಜತೆ ಸೇರಿಸಿ ಗುತ್ತಿಗೆದಾರ ತನ್ನ ಕೆಲಸ ಮಾಡಿಕೊಳ್ಳುವುದು, ಕೂಲಿ ಕಾರ್ಮಿಕರ ಎಟಿಎಂ ಕಾರ್ಡುಗಳನ್ನು ಕಸಿದುಕೊಳ್ಳುವುದು, ಜಾಬ್ ಕಾರ್ಡ್‌ನಲ್ಲಿ ಸಣ್ಣ ಮಕ್ಕಳು, ಸತ್ತವರ ಹೆಸರನ್ನು ಸೇರಿಸಿ ಅವರ ಹೆಸರಿ ನಲ್ಲಿ ಹಣ ಪಡೆದಿರುವುದು ಮುಂತಾದ ಪ್ರಕರಣಗಳು ಬೆಳಕಿಗೆ ಬಂದಿದ್ದವು.
ಭ್ರಷ್ಟಾಚಾರವನ್ನು ಕಡಿಮೆ ಮಾಡಿ ಮತ್ತು ನರೇಗಾ ಯೋಜನೆಯಲ್ಲಿ ಮತ್ತಷ್ಟು ಪಾರದರ್ಶಕತೆ ಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ‘ಡಿಬಿಟಿ’ ಮತ್ತು ಆಧಾರ್ ಕಾರ್ಡ್ ಜೋಡಣೆಯಂಥ ಅನೇಕ ಸುಧಾರಣೆಗಳು ಕಳೆದ ಹತ್ತು ವರ್ಷಗಳಿಂದ ಜಾರಿಯಲ್ಲಿವೆ.
ಈಗ ನರೇಗಾದಲ್ಲಿ ಮತ್ತಷ್ಟು ಸುಧಾರಣೆಗಳನ್ನು ತರುವ ನಿಟ್ಟಿನಲ್ಲಿ, ಇನ್ನು ಮುಂದೆ ಈ ಯೋಜನೆ ಯನ್ನು ‘ವಿಕಸಿತ ಭಾರತ ಉದ್ಯೋಗ ಖಾತ್ರಿ ಮತ್ತು ಆಜೀವಿಕ ಮಿಷನ್ (ಗ್ರಾಮೀಣ)’ ಅಥವಾ ’ VB G RAM G ’ಎಂಬ ಹೆಸರಿನಲ್ಲಿ ಕರೆಯಲಾಗುತ್ತದೆ. ಪರಿಷ್ಕೃತ ಯೋಜನೆಯಲ್ಲಿ ವರ್ಷದಲ್ಲಿ 100 ದಿನವಿದ್ದ ಉದ್ಯೋಗ ಖಾತ್ರಿಯನ್ನು 125 ದಿನಕ್ಕೆ ಏರಿಸಲಾಗಿದೆ.
ಕೇಂದ್ರ ಮತ್ತು ರಾಜ್ಯದ ಪಾಲನ್ನು ಕ್ರಮವಾಗಿ ಶೇ 60 ಮತ್ತು 40ಕ್ಕೆ ಪರಿಷ್ಕರಿಸಲಾಗಿದೆ. ಬಯೋ ಮೆಟ್ರಿಕ್ ಮೂಲಕ ಕಾರ್ಮಿಕರ ಕೆಲಸದ ಹಾಜರಾತಿ ಪಡೆಯುವುದು, ಎರಡು ವರ್ಷಕ್ಕೊಮ್ಮೆ ಯೋಜನೆಯ ಸಾಮಾಜಿಕ ಲೆಕ್ಕ ಪರಿಶೋಧನೆ, ವಾರಕ್ಕೊಮ್ಮೆ ಕಾರ್ಮಿಕರಿಗೆ ಕಡ್ಡಾಯವಾಗಿ ಹಣ ನೀಡುವುದು, ಮಹಾತ್ಮ ಗಾಂಧಿಯವರ ಕನಸಾಗಿದ್ದ ಗ್ರಾಮೀಣ ಭಾಗದ ಅಭಿವೃದ್ಧಿಯ ಕಡೆಗೆ ಹೆಚ್ಚಿನ ಗಮನ ಹರಿಸುವುದು ಮತ್ತು ಯೋಜನೆಯಲ್ಲಿ ಮತ್ತಷ್ಟು ಪಾರದರ್ಶಕತೆಯನ್ನು ಜಾರಿಗೆ ತಂದು ಕೂಲಿ ಕಾರ್ಮಿಕರಿಗೆ ಹೆಚ್ಚಿನ ಉದ್ಯೋಗ ಕಲ್ಪಿಸುವುದು ಪರಿಷ್ಕೃತ ಯೋಜನೆಯ ಮೂಲ ಉದ್ದೇಶವಾಗಿದೆ.
ಆದರೆ, ಪರಿಷ್ಕೃತ ಯೋಜನೆಯ ಬಗ್ಗೆ ಹೆಚ್ಚಾಗಿ ಚರ್ಚಿಸುವ ಬದಲು, ಕಾಂಗ್ರೆಸ್ ಮತ್ತು ಅದರ ಮಿತ್ರಪಕ್ಷಗಳು ಯೋಜನೆಯ ಹೆಸರು ಬದಲಾವಣೆಯ ಬಗ್ಗೆ ರಾಜಕೀಯ ಮಾಡುತ್ತಿವೆ. ವರ್ಷದಲ್ಲಿ ಎರಡು ತಿಂಗಳುಗಳ ಕಾಲ, ಬಿತ್ತನೆ ಮತ್ತು ಕೊಯ್ಲಿನ ಸಂದರ್ಭದಲ್ಲಿ ಪರಿಷ್ಕೃತ ಯೋಜನೆಯಲ್ಲಿ ಉದ್ಯೋಗ ಖಾತ್ರಿಗೆ ಬ್ರೇಕ್ ನೀಡಲಾಗಿದೆ.
ರೈತರಿಗೆ ಕೃಷಿ ಚಟುವಟಿಕೆ ಸಂದರ್ಭದಲ್ಲಿ ಉಂಟಾಗುವ ಕೂಲಿಯಾಳುಗಳ ಸಮಸ್ಯೆಯನ್ನು ಬಗೆಹರಿಸುವ ನಿಟ್ಟಿನಲ್ಲಿ ಕೈಗೊಂಡಿರುವ ಈ ನಿರ್ಧಾರದ ಬಗ್ಗೆ ಇಂದು ರಾಜಕೀಯ ಮಾಡುತ್ತಿದ್ದಾರೆ ಕಾಂಗ್ರೆಸ್ಸಿಗರು; ಆದರೆ 2011ರಲ್ಲಿ ಕೇಂದ್ರದಲ್ಲಿದ್ದ ಕಾಂಗ್ರೆಸ್ ಸರಕಾರದ ಅವಧಿಯಲ್ಲಿ ಕೃಷಿ ಸಚಿವ ರಾಗಿದ್ದ ಶರದ್ ಪವಾರ್ ಅವರು, ನರೇಗಾ ಯೋಜನೆಗೆ ವರ್ಷದಲ್ಲಿ ಮೂರು ತಿಂಗಳುಗಳ ಕಾಲ ಬ್ರೇಕ್ ನೀಡಬೇಕೆಂದು ಹೇಳಿದ್ದರು ಎಂಬುದನ್ನು ಇವರು ಮರೆತು ಬಿಡುತ್ತಾರೆ.
ಮತ್ತೊಂದೆಡೆ ’ VB G RAM G ’ ಯೋಜನೆಯಲ್ಲಿ ಕೇಂದ್ರ ಮತ್ತು ರಾಜ್ಯದ ಪಾಲನ್ನು ಶೇ 60 ಮತ್ತು 40ಕ್ಕೆ ಪರಿಷ್ಕರಿಸಿರುವ ಬಗ್ಗೆ ಕಾಂಗ್ರೆಸ್ಸಿಗರು ಇಂದು ಮಾತನಾಡುತ್ತಿದ್ದಾರೆ; ಇವರು ಕೇಂದ್ರದಲ್ಲಿ ಅಧಿಕಾರದಲ್ಲಿದ್ದಾಗ, ವಿತ್ತ ಸಚಿವರಾಗಿದ್ದ ಪಿ.ಚಿದಂಬರಂ 2013ರಲ್ಲಿ ಇದೇ ವಿಷಯದ ಬಗ್ಗೆ ಚರ್ಚಿಸಿದ್ದರೆಂಬ ಮಾತುಗಳು ಅಂದೇ ಕೇಳಿಬಂದಿದ್ದವು.
ತಾವು ಅಧಿಕಾರದಲ್ಲಿದ್ದಾಗ ಮಾಡಿರುವುದನ್ನು ಮತ್ತೊಬ್ಬರು ಮಾಡಹೊರಟರೆ, ಅದನ್ನೂ ಕಾಂಗ್ರೆಸ್ಸಿಗರು ವಿರೋಧಿಸುವುದು ಹಾಸ್ಯಾಸ್ಪದವಾಗಿದೆ. ಮಹಾತ್ಮ ಗಾಂಧಿಯವರ ರಾಮರಾಜ್ಯದ ಕನಸನ್ನು ನನಸಾಗಿಸುವ ನಿಟ್ಟಿನಲ್ಲಿ ಗ್ರಾಮೀಣಾಭಿವೃದ್ದಿ ಪ್ರಮುಖವಾಗಿದೆ. ಕೇಂದ್ರ ಸರಕಾರ ಆ ನಿಟ್ಟಿನಲ್ಲಿ ನರೇಗಾ ಯೋಜನೆಯನ್ನು ಪರಿಷ್ಕರಿಸಿದರೆ ಕಾಂಗ್ರೆಸ್ಸಿಗರಿಗೆ ಎಲ್ಲಿಲ್ಲದ ಉರಿ. ಮಹಾತ್ಮ ಗಾಂಧಿಯವರ ಆದರ್ಶಗಳ ಬಗ್ಗೆ ಉದ್ದದ ಭಾಷಣ ಮಾಡುವ ಕಾಂಗ್ರೆಸ್ಸಿಗರು, ಗಾಂಧಿಯವರ ಅನೇಕ ವಿಚಾರಗಳನ್ನು ವಿರೋಧಿಸುತ್ತಾ ಬಂದಿದ್ದಾರೆ.
ಮುಸಲ್ಮಾನರ ಓಲೈಕೆಗಾಗಿ ಮಹಾತ್ಮ ಗಾಂಧಿಯವರ ಅನೇಕ ಆದರ್ಶಗಳನ್ನು ಸತತವಾಗಿ ವಿರೋಧಿಸಿಕೊಂಡು ಬಂದವರು, ಇಂದು ನರೇಗಾ ಯೋಜನೆಯ ಹೆಸರು ಬದಲಾವಣೆ ವಿರುದ್ಧ ಪ್ರತಿಭಟನೆ ಮಾಡುತ್ತಿದ್ದಾರೆ. ಮಹಾತ್ಮ ಗಾಂಧಿಯವರಿಗೆ ‘ಭಗವದ್ಗೀತೆ’ಯ ಬಗ್ಗೆ ಅಪಾರ ಗೌರವ ವಿತ್ತು.
ಭಗವದ್ಗೀತೆಯಲ್ಲಿರುವ ಜೀವನ ಸಂದೇಶಗಳ ಬಗ್ಗೆ ಅವರು ಹಲವರಿಗೆ ಹೇಳುತ್ತಿದ್ದರು. ಹಲವು ಸಮಾರಂಭಗಳಲ್ಲಿ ಭಗವದ್ಗೀತೆಯನ್ನು ಉಡುಗೊರೆಯಾಗಿ ನೀಡುತ್ತಿದ್ದರು. ಸ್ವಾತಂತ್ರ್ಯಾನಂತರ ಮಹಾತ್ಮ ಗಾಂಧಿಯವರ ಹೆಸರನ್ನು ಹೈಜಾಕ್ ಮಾಡಿದ ಕಾಂಗ್ರೆಸ್ ಪಕ್ಷದ ನಾಯಕರು ಭಗವದ್ಗೀತೆ ಯ ಅಂಶಗಳನ್ನು ತಾವುಗಳೇ ಅಳವಡಿಸಿಕೊಳ್ಳಲಿಲ್ಲ. ಶಾಲೆಗಳಲ್ಲಿ ಭಗವದ್ಗೀತೆಯನ್ನು ಮಕ್ಕಳಿಗೆ ‘ನೈತಿಕ ವಿಜ್ಞಾನ’ದ ಪಾಠವನ್ನಾಗಿಸಲು ಮುಂದಾದರೆ ‘ಜಾತ್ಯತೀತತೆ’ ಹೆಸರಿನಲ್ಲಿ ವಿರೋಧಿಸು ವುದು ಕಾಂಗ್ರೆಸ್ ಪಕ್ಷದ ಚಾಳಿ.
ಸ್ವಾತಂತ್ರ್ಯಾನಂತರ ಅಧಿಕಾರದ ಚುಕ್ಕಾಣಿ ಹಿಡಿದ ಕಾಂಗ್ರೆಸ್ ಪಕ್ಷವು ಎಡಚರರಿಗೆ ಶಾಲಾ ಪಠ್ಯ ಪುಸ್ತಕ ರಚನೆಯ ಜವಾಬ್ದಾರಿಯನ್ನು ನೀಡಿ, ವಿದೇಶಿ ನೀತಿಗಳನ್ನು ಜಾರಿಗೆ ತಂದು ಮಹಾತ್ಮ ಗಾಂಧಿಯವರು ಭಗವದ್ಗೀತೆಗೆ ನೀಡಿದ್ದ ಪ್ರಾಮುಖ್ಯವನ್ನು ಹೊಸೆದು ಹಾಕಿತು.
‘ರಘುಪತಿ ರಾಘವ ರಾಜಾರಾಮ್, ಪತಿತ ಪಾವನ ಸೀತಾರಾಮ್, ಈಶ್ವರ ಅಲ್ಲಾ ತೇರೋ ನಾಮ’ ಎಂಬ ಮಾತನ್ನು ಮಹಾತ್ಮ ಗಾಂಧಿಯವರು ಸದಾ ಹೇಳುತ್ತಿದ್ದರು. ಅವರ ಹೆಸರನ್ನು ಹೈಜಾಕ್ ಮಾಡಿರುವ ಕಾಂಗ್ರೆಸ್ ಪಕ್ಷವು ಮುಸಲ್ಮಾನರನ್ನು ಓಲೈಸಲು ರಾಮ ಹಾಗೂ ಈಶ್ವರನ ಹೆಸರನ್ನೇ ಕೈಬಿಟ್ಟಿದೆ.
ಮಹಾತ್ಮ ಗಾಂಧಿಯವರಿಗೆ ಶ್ರೀರಾಮಚಂದ್ರ ಹಾಗೂ ಶ್ರೀಕೃಷ್ಣನ ಮೇಲೆ ಅಪಾರ ಭಕ್ತಿಯಿತ್ತು. ಗಾಂಧಿಯವರ ಹೆಸರನ್ನು ರಾಜಕೀಯಕ್ಕಾಗಿ ಬಳಸಿಕೊಂಡ ನೆಹರು ಕುಟುಂಬದ ಕುಡಿಗಳು ರಾಮನ ಅಸ್ತಿತ್ವವನ್ನೇ ಪ್ರಶ್ನಿಸಿದ್ದರು. ‘ರಾಮಸೇತು’ವಿನ ವಿಷಯದಲ್ಲಿ 2007ರಲ್ಲಿ ಸರ್ವೋಚ್ಚ ನ್ಯಾಯಾ ಲಯದಲ್ಲಿ, ವಾಲ್ಮೀಕಿ ಬರೆದಿರುವ ‘ರಾಮಾಯಣ’ ಗ್ರಂಥವನ್ನು ಉಲ್ಲೇಖಿಸಿ ರಾಮನನ್ನು ಕೇವಲ ಗ್ರಂಥಕ್ಕೆ ಸೀಮಿತಗೊಳಿಸಿದ್ದರು.
ಶ್ರೀರಾಮನು ಕೇವಲ ರಾಮಾಯಣ ಗ್ರಂಥದಲ್ಲಿರುವ ಕಾಲ್ಪನಿಕ ಪಾತ್ರಧಾರಿಯಾಗಿದ್ದು ಆತನ ಇರುವಿಕೆಗೆ ಯಾವುದೇ ಸಾಕ್ಷಿ ಸಿಕ್ಕಿಲ್ಲವೆಂದು ನ್ಯಾಯಾಲಯದಲ್ಲಿ ಅಫಿಡವಿಟ್ ಸಲ್ಲಿಸಿದ್ದರು. ಶ್ರೀರಾಮ ಹೆಂಡ ಕುಡಿಯುತ್ತಿದ್ದನೆಂದು ಹೇಳಿದ ಕರ್ನಾಟಕದ ಎಡಚರ ಪಟಾಲಂನ ಸಾಹಿತಿ ‘ಭಗವಾನ್’ ಪರವಾಗಿ ನಿಂತದ್ದು ಕಾಂಗ್ರೆಸ್ ಪಕ್ಷ.
ರಾಮಮಂದಿರದ ಪರವಾಗಿ ಸರ್ವೋಚ್ಚ ನ್ಯಾಯಾಲಯ ತೀರ್ಪನ್ನು ನೀಡಿದಾಗ ಕಾಂಗ್ರೆಸ್ಸಿನವರ ಮುಖ ಇಂಗು ತಿಂದ ಮಂಗನಂತಾಗಿತ್ತು. ‘ರಾಮಮಂದಿರದ ಜಾಗದಲ್ಲಿ ಆಸ್ಪತ್ರೆ ನಿರ್ಮಾಣ ಮಾಡಿ’ ಎಂದು ಆಗ ಹೇಳಿದ್ದು ಕಾಂಗ್ರೆಸ್. ನ್ಯಾಯಾಲಯದ ತೀರ್ಪಿನ ಪರವಾಗಿ ಇಂದಿಗೂ ಕಾಂಗ್ರೆಸ್ ಗಟ್ಟಿಯಾಗಿ ನಿಂತಿಲ್ಲ.
ರಾಮನ ಭಂಟ ಹನುಮನ ಜಯಂತಿಗೆ ಅನುಮತಿ ನೀಡಲು ನಿರಾಕರಿಸುವ ಕಾಂಗ್ರೆಸ್, ಟಿಪ್ಪು ಸುಲ್ತಾನನ ಜಯಂತಿಗೆ ನಿರಾಯಾಸವಾಗಿ ಅವಕಾಶ ನೀಡುತ್ತದೆ. ಮಹಾತ್ಮ ಗಾಂಧಿಯವರಿಗೆ ಶ್ರೀರಾಮ ಹಾಗೂ ಕೃಷ್ಣನ ಮೇಲಿದ್ದ ಭಕ್ತಿಯಲ್ಲಿ ಕನಿಷ್ಠ ಪಾಲು ಕಾಂಗ್ರೆಸ್ಸಿಗರಿಗಿದ್ದಿದ್ದರೆ, ಹಿಂದೂ ಗಳು ಕಾಂಗ್ರೆಸ್ ಆಡಳಿತದಲ್ಲಿ ಉಸಿರು ಬಿಗಿಹಿಡಿದು ಜೀವನ ನಡೆಸುವ ಪರಿಸ್ಥಿತಿ ಎದುರಾಗಿರುತ್ತಿರ ಲಿಲ್ಲ.
ಮಹಾತ್ಮ ಗಾಂಧಿಯವರು ಗೋವುಗಳಿಗೆ ಹೆಚ್ಚಿನ ಮಹತ್ವ ನೀಡುತ್ತಿದ್ದರು. ಗೋವುಗಳನ್ನು ರಕ್ಷಿಸು ವುದು ನಮ್ಮೆಲ್ಲರ ಜವಾಬ್ದಾರಿಯೆಂದು ಹೇಳಿದ್ದರು. ಇಂದು ಗೋವುಗಳನ್ನು ಕಟುಕರಿಂದ ರಕ್ಷಿಸಲು ಕಾನೂನನ್ನು ಜಾರಿಗೆ ತಂದರೆ ಜಾತ್ಯತೀತತೆಯ ಹೆಸರಿನಲ್ಲಿ ಮುಸಲ್ಮಾನರನ್ನು ಓಲೈಸಲು ಮೊದಲು ವಿರೋಧಿಸುವುದು ಕಾಂಗ್ರೆಸ್ ಪಕ್ಷ. ತಮ್ಮ ಹೆಸರಿನಲ್ಲಿ ‘ಗಾಂಧಿ’ಯನ್ನು ಸೇರಿಸಿಕೊಂಡು ಅವರ ತತ್ವ ಮತ್ತು ಚಿಂತನೆಗಳಿಗೆ ಸದಾ ಅವಮಾನ ಮಾಡಿಕೊಂಡು ಬರುತ್ತಿರುವ ‘ನೆಹರು’ ವಂಶಸ್ಥರಿಗೆ, ಗಾಂಧಿಯೆಂಬ ಪದವು ಮತಬ್ಯಾಂಕ್ ಆಗಿ ಮಾತ್ರ ಕಾಣುತ್ತದೆ.
ತಮ್ಮ ಆಡಳಿತದಲ್ಲಿ ಪ್ರತಿಯೊಂದು ವಿಷಯದಲ್ಲಿಯೂ ಸುಳ್ಳುಗಳ ಸರಮಾಲೆಯನ್ನೇ ಹೆಣೆದು ಕೊಂಡು ಬಂದಿರುವ ಕಾಂಗ್ರೆಸ್, ಮಹಾತ್ಮ ಗಾಂಧಿಯವರ ಸತ್ಯನಿಷ್ಠ ಜೀವನ ಹೋರಾಟದ ವಿರುದ್ಧವೇ ನಡೆದುಬಂದಿದೆ. ಕಾಂಗ್ರೆಸ್ ಒಂದು ರಾಜಕೀಯ ಪಕ್ಷವಾಗಿ ಎಂದೂ ಬ್ರಿಟಿಷರ ವಿರುದ್ಧ ಹೋರಾಡಲಿಲ್ಲ.
ಹೋರಾಟ ಮಾಡಿದ ಸಾವಿರಾರು ಸ್ವಾತಂತ್ರ್ಯ ವೀರರಿಗೆ ಮೋಸ ಮಾಡಿ ಸಂಘಟನೆಯೊಂದನ್ನು ಪಕ್ಷವಾಗಿ ಪರಿವರ್ತಿಸಿ ಮಹಾತ್ಮ ಗಾಂಧಿಯವರ ಆಶಯದ ವಿರುದ್ಧ ನಡೆದುಕೊಂಡದ್ದು ನೆಹರು. ಜನರ ಮುಂದೆ ಅನುಕಂಪ ಗಿಟ್ಟಿಸುವ ಸಲುವಾಗಿ ಅವರು ಮಹಾತ್ಮ ಗಾಂಧಿಯವರ ಹೆಸರನ್ನು ಹೈಜಾಕ್ ಮಾಡಿ ಅಧಿಕಾರ ಅನುಭವಿಸಿದರು.
ಮಹಾತ್ಮ ಗಾಂಧಿಯವರ ಹೆಸರನ್ನು ತಮ್ಮ ಹೆಸರಿನ ಪಕ್ಕ ಸೇರಿಸಿಕೊಳ್ಳುವ ಮೂಲಕ ಸಾವಿರಾರು ಕೋಟಿ ಅಕ್ರಮ ಸಂಪತ್ತನ್ನು ಲೂಟಿ ಹೊಡೆದ ಕಾಂಗ್ರೆಸ್ ಪಕ್ಷದ ನಾಯಕರು, ಮೂರರಿಂದ ನಾಲ್ಕು ತಲೆಮಾರಿಗಾಗುವಷ್ಟು ಅಸ್ತಿ ಮಾಡಿಕೊಂಡರೆಂಬ ಸತ್ಯವನ್ನು ಅವರದ್ದೇ ಪಕ್ಷದ ರಾಜ್ಯದ ನಾಯಕ ರೊಬ್ಬರು ಬಹಿರಂಗವಾಗಿ ಹೇಳಿದ್ದರು.
ಮಹಾತ್ಮ ಗಾಂಧಿಯವರ ತತ್ವಗಳ ವಿರುದ್ಧ ಆಡಳಿತ ನಡೆಸಿ, ಸಮಾಜವನ್ನು ಆ ತತ್ವಗಳಿಂದ ದೂರ ಮಾಡಿದ ಕೀರ್ತಿ ಕಾಂಗ್ರೆಸ್ ಪಕ್ಷಕ್ಕೆ ಸಲ್ಲಬೇಕು. ಸದಾ ಮಹಾತ್ಮ ಗಾಂಧಿಯವರ ಆದರ್ಶದ ವಿರುದ್ಧ ನಡೆದುಕೊಂಡು ಬಂದಿರುವ ಕಾಂಗ್ರೆಸ್ ಪಕ್ಷಕ್ಕೆ ಅವರ ಹೆಸರಿನ ಬಗ್ಗೆ ಮಾತನಾಡುವ ಯಾವ ನೈತಿಕತೆಯೂ ಇಲ್ಲ. ಕಾಂಗ್ರೆಸ್ಸಿಗರು ಮಹಾತ್ಮ ಗಾಂಧಿಯವರ ಬಗ್ಗೆ ಮಾತನಾಡಿದಾಗ, ‘ಭೂತದ ಬಾಯಲ್ಲಿ ಭಗವದ್ಗೀತೆ’ ಎಂಬ ಗಾದೆಮಾತು ನೆನಪಾಗುತ್ತದೆ!