Vishweshwar Bhat Column: ಬೇಕಾದರೆ ತುತ್ತು ಅನ್ನಕ್ಕೆ ಬೇಡಬಹುದು, ಪ್ರಶಸ್ತಿಗೆ ಬೇಡಬಾರದು !
ಸೂಪರ್ ಪವರ್ ಅನ್ನಿಸಿಕೊಂಡ ಪ್ರಜೆಗಳು ಇಂದು ಜಗತ್ತಿನ ಕಣ್ಣೆದುರು ಕೇವಲ ಉಚಿತ ಮನರಂಜನೆ ಯ ಪ್ರೇಕ್ಷಕರಾಗಿ ನಿಂತಿzರೆ. ಇಂಥ ಅದ್ಭುತ, ಅಪ್ರತಿಮ, ಅತಿಮಾನುಷ ನಾಯಕನನ್ನು ಹೊತ್ತು ಮೆರೆಯುತ್ತಿರುವ ಆ ಅಮೆರಿಕನ್ ನಾಗರಿಕರನ್ನು ಕಂಡರೆ ನಿಜಕ್ಕೂ ‘ಅಯ್ಯೋ ಪಾಪ’ ಎನ್ನಿಸದೇ ಇರದು.
-
ನೂರೆಂಟು ವಿಶ್ವ
ಜಗತ್ತಿನ ಅತ್ಯಂತ ಬಲಿಷ್ಠ ರಾಷ್ಟ್ರ, ಜಾಗತಿಕ ಸೂಪರ್ ಪವರ್ ಎನಿಸಿಕೊಂಡ ಅಮೆರಿಕದ ಪ್ರಜೆ ಗಳನ್ನು ನೋಡಿದರೆ ನಿಜಕ್ಕೂ ಒಮ್ಮೊಮ್ಮೆ ಕನಿಕರವಾಗುತ್ತದೆ. ಅವರ ಹಣೆಬರಹವನ್ನು ನೆನೆದು ಕರುಳು ಹಿಂಡಿದಂತಾಗುತ್ತದೆ. ಎಂಥಾ ದೇಶಕ್ಕೆ ಅದೆಂಥ ಅಧ್ಯಕ್ಷ ಎಂದು ವ್ಯಥೆಯಾಗುತ್ತದೆ. ಜಗತ್ತಿನ ಇತಿಹಾಸದ ಇಂಥ ಒಬ್ಬ ಸರ್ವಜ್ಞ, ಸಕಲಕಲಾವಲ್ಲಭ ನಾಯಕ ಯಾರಿಗಾದರೂ ಸಿಕ್ಕಿದ್ದಾರೆಯೇ? ಹವಾಮಾನ ಬದಲಾವಣೆಯಿಂದ ಹಿಡಿದು ಅರ್ಥಶಾಸ್ತ್ರದ ತನಕ, ವೈರಾಲಜಿಯಿಂದ ಹಿಡಿದು ವಿಶ್ವಶಾಂತಿಯವರೆಗೆ ಎಲ್ಲದಕ್ಕೂ ಕೇವಲ ಒಂದು ಟ್ವೀಟ್ನ ಪರಿಹಾರ ಕೊಡುವ ಮಹಾನ್ ನಾಯಕ ಅವರ ಪಾಲಿಗೆ ಸಿಕ್ಕಿದ್ದು ಅದೆಂಥ ಪಾಪಕರ್ಮವೋ?! ಬೆಳಗ್ಗೆ ಎದ್ದರೆ ಸಾಕು, ಕ್ಯಾಪಿಟಲ್ ಹಿಲ್ನಿಂದ ವೈಟ್ಹೌಸ್ವರೆಗೆ ನಡೆಯುವ ನಾಟಕಗಳನ್ನು ನೋಡಲು ಅಮೆರಿಕನ್ನರಿಗೆ ಪ್ರತ್ಯೇಕ ನೆಟ್ಫ್ಲಿಕ್ಸ್ ಚಂದಾದಾರಿಕೆಯ ಅಗತ್ಯವೇ ಇಲ್ಲ.
ದೇಶದ ಆರ್ಥಿಕತೆ, ವಿದೇಶಾಂಗ ನೀತಿಗಳು ಹೇಗೆ ಸಾಗಬೇಕೆಂಬ ಗಂಭೀರ ಚರ್ಚೆಗಳ ಬದಲು, ಅಧ್ಯಕ್ಷರ ಕೂದಲಿನ ಶೈಲಿ, ಅವರ ಹೊಸ ಕ್ಯಾಪ್ಷನ್ಗಳು ಮತ್ತು ಯಾರ್ಯಾರಿಗೆ ಯಾವ ಹೊಸ ಅಡ್ಡಹೆಸರು ಇಟ್ಟರು ಎಂಬುದೇ ಅಲ್ಲಿನ ದಿನನಿತ್ಯದ ಬ್ರೇಕಿಂಗ್ ನ್ಯೂಸ್. ಪ್ರಜಾಪ್ರಭುತ್ವದ ದಾರಿದೀಪವೆಂದು ಬೀಗುತ್ತಿದ್ದ ಜನರಿಗೆ ಈಗ ದಿನಬೆಳಗಾದರೆ ಸಾಕು, ‘ಇವತ್ತು ನಮ್ಮ ನಾಯಕ ಯಾವ ದೇಶದ ಮೇಲೆ ಸುಂಕ ಹೇರುತ್ತಾನೋ’ ಅಥವಾ ‘ಯಾವ ಮಿತ್ರರಾಷ್ಟ್ರವನ್ನು ಬೈಯು ತ್ತಾನೋ’, ’ಯಾವ ದೇಶದ ಮೇಲೆ ಕದನ ಸಾರುತ್ತಾನೋ’ ಎಂಬ ಆತಂಕ.
ಸೂಪರ್ ಪವರ್ ಅನ್ನಿಸಿಕೊಂಡ ಪ್ರಜೆಗಳು ಇಂದು ಜಗತ್ತಿನ ಕಣ್ಣೆದುರು ಕೇವಲ ಉಚಿತ ಮನರಂಜನೆಯ ಪ್ರೇಕ್ಷಕರಾಗಿ ನಿಂತಿzರೆ. ಇಂಥ ಅದ್ಭುತ, ಅಪ್ರತಿಮ, ಅತಿಮಾನುಷ ನಾಯಕನನ್ನು ಹೊತ್ತು ಮೆರೆಯುತ್ತಿರುವ ಆ ಅಮೆರಿಕನ್ ನಾಗರಿಕರನ್ನು ಕಂಡರೆ ನಿಜಕ್ಕೂ ‘ಅಯ್ಯೋ ಪಾಪ’ ಎನ್ನಿಸದೇ ಇರದು. ಟ್ರಂಪ್ ಹುಚ್ಚಾಟದ ಮುಂದಿನ ಸರಣಿಯಾಗಿ, ಈ ವರ್ಷವೂ ನೊಬೆಲ್ ಪ್ರಶಸ್ತಿ ತನಗೆ ದಕ್ಕದೇ ಹೋಗಿದ್ದಕ್ಕೆ ಟ್ರಂಪ್ ಅವರು ನೊಬೆಲ್ ಶಾಂತಿ ಪ್ರಶಸ್ತಿಯ ಆಯ್ಕೆ ಸಮಿತಿಯ ವಿರುದ್ಧ ವಾಗ್ದಾಳಿ ನಡೆಸಿದ್ದು ನಗೆಪಾಟಲಿಗೆ ಗುರಿಯಾಗಿದೆ.
ಇದನ್ನೂ ಓದಿ: Vishweshwar Bhat Column: ಅನುಭವ ನುಡಿಗಟ್ಟಾದಾಗ
ದಕ್ಷಿಣ ಆಫ್ರಿಕಾದ ಭಾರತೀಯ ಮೂಲದ ಖ್ಯಾತ ನ್ಯಾಯಶಾಸ್ತ್ರಜ್ಞೆ ನವಿ ಪಿಳ್ಳೈ ಅವರಿಗೆ ಈ ವರ್ಷದ ನೊಬೆಲ್ ಶಾಂತಿ ಪ್ರಶಸ್ತಿ ಘೋಷಣೆಯಾದ ಬೆನ್ನ, ನೊಬೆಲ್ ಶಾಂತಿ ಪ್ರಶಸ್ತಿ ನೀಡುವ ಸ್ವತಂತ್ರ ಸಮಿತಿಯನ್ನೇ ಗುರಿಯಾಗಿಸಿಕೊಂಡು, ‘ನನ್ನನ್ನು ಬಿಟ್ಟು ಬೇರೆಯವರಿಗೆ ಹೇಗೆ ಕೊಟ್ಟಿರಿ?’ ಎಂದು ಆಕ್ರೋಶ ಹಾಕಿದ್ದು ಅಮೆರಿಕದಂಥ ದೇಶದ ಅಧ್ಯಕ್ಷನ ನೈತಿಕ ಅಧಃಪತನ. ಈ ಘಟನೆಯು ರಾಜತಾಂತ್ರಿಕ ಸಂಯಮದ ಕೊರತೆಯಷ್ಟೇ ಅಲ್ಲ, ಅಂತಾರಾಷ್ಟ್ರೀಯ ಸಂಸ್ಥೆಗಳ ತೀರ್ಮಾನ ಗಳನ್ನು ಕೇವಲ ವೈಯಕ್ತಿಕ ಪ್ರತಿಷ್ಠೆಯ ನೆಲೆಯಲ್ಲಿ ಅಳೆಯುವ ಅಪಾಯಕಾರಿ ಹಾಗೂ ನೀಚ ಪ್ರವೃತ್ತಿಯನ್ನು ಹೊರಹಾಕಿದಂತಾಗಿದೆ.
ನವಿ ಪಿಳ್ಳೈ ಅವರ ಸಾಧನೆ ಜಾಗತಿಕ ಮಟ್ಟದಲ್ಲಿ ಅಪಾರ ಗೌರವಕ್ಕೆ ಪಾತ್ರವಾದದ್ದು. ವರ್ಣಭೇದ ನೀತಿಯ ವಿರುದ್ಧ ಹೋರಾಡಿದ, ರವಾಂಡಾ ನರಮೇಧದ ವಿಚಾರಣೆ ನಡೆಸಿದ ನ್ಯಾಯಮಂಡಳಿಯ ನೇತೃತ್ವ ವಹಿಸಿದ್ದ ಮತ್ತು ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಆಯುಕ್ತರಾಗಿ ನಿಸ್ವಾರ್ಥ ಸೇವೆ ಸಲ್ಲಿಸಿದ ಹಿನ್ನೆಲೆ ಅವರದ್ದು. ಅಂಥ ಗೌರವಾನ್ವಿತ ವ್ಯಕ್ತಿಯನ್ನು ‘ಆಕೆ ಯಾರಿಗೂ ಗೊತ್ತಿಲ್ಲದ ಮಹಿಳೆ’ ಎಂದು ಜರಿಯುವುದು, ಆಕೆಯ ಸಾಧನೆಯನ್ನು ಯಕಶ್ಚಿತ ಎಂದು ತಳ್ಳಿಹಾಕುವುದು ಮತ್ತು ಅವರ ಜಾಗತಿಕ ಕೊಡುಗೆಯನ್ನು ಏಕಪಕ್ಷೀಯವಾಗಿ ಹೀಯಾಳಿಸುವುದು ಅಮೆರಿಕದಂಥ ಅಧ್ಯಕ್ಷನಿಗೆ ಶೋಭೆ ತರುವಂಥದ್ದಲ್ಲ.
ಇಷ್ಟಕ್ಕೆ ಸುಮ್ಮನಾಗದ ಟ್ರಂಪ್, ‘ನಾನು ಎಂಟು ಯುದ್ಧಗಳನ್ನು ನಿಲ್ಲಿಸಿದ್ದೇನೆ, ನಾನು ನೆರವು ನೀಡಿದ, ಯುದ್ಧ ನಿಲ್ಲಿಸಿದ ದೇಶಗಳ ಪ್ರತಿಯೊಬ್ಬ ಅಧ್ಯಕ್ಷರು ಮತ್ತು ಪ್ರಧಾನಮಂತ್ರಿಗಳು ನಾರ್ವೇಜಿಯನ್ ನೊಬೆಲ್ ಸಮಿತಿಗೆ ಪತ್ರಗಳನ್ನು ಕಳುಹಿಸಿ, ನೊಬೆಲ್ ಶಾಂತಿ ಪ್ರಶಸ್ತಿಯನ್ನು ನನಗೇ ಕೊಡಬೇಕೆಂದು ಒತ್ತಾಯ ಮಾಡಿದ್ದಾರೆ.
ಇರಾನ್ ಹಾಗೂ ರಷ್ಯಾ/ಉಕ್ರೇನ್ ಯುದ್ಧಗಳನ್ನು ಇತ್ಯರ್ಥಪಡಿಸಲು ಅಥವಾ ಗೆಲ್ಲಲು ಸಜ್ಜಾಗಿ ದ್ದೇನೆ. ಹಾಗೆ ನೋಡಿದರೆ ನನಗೆ ಒಂದಲ್ಲ, ಎಂಟು ನೊಬೆಲ್ ಪ್ರಶಸ್ತಿಗಳು ಬರಬೇಕಿತ್ತು. ನಿಮ್ಮ ಅಧ್ಯಕ್ಷನಾಗಿ ನನ್ನಿಂದ ಪ್ರತಿನಿಧಿಸಲ್ಪಟ್ಟ ಅಮೆರಿಕಕ್ಕೆ ಈ ಸಲ ನೊಬೆಲ್ ಶಾಂತಿ ಪ್ರಶಸ್ತಿ ಸಿಗಬೇಕಿತ್ತು, ಆದರೆ ಸಿಗಲಿಲ್ಲ. ಇದು ನಾರ್ವೆಯ ಮೇಲಿನ ಅಳಿಸಲಾಗದ ಕಳಂಕ, ಇದನ್ನು ಎಂದಿಗೂ ಮರೆಯಲಾಗುವುದಿಲ್ಲ’ ಎಂದು ಹೇಳಿರುವುದು ಟ್ರಂಪ್ ಬಗ್ಗೆ ಸರ್ವತ್ರ ಅಸಹ್ಯ, ವಾಕರಿಕೆ ಮೂಡಿಸಿಬಿಟ್ಟಿದೆ.
ಇಂಥ ಬಹಿರಂಗ ಸ್ವಯಂ-ಪ್ರಶಂಸೆ ಮತ್ತು ಅರ್ಹತಾವಾದಗಳು ಇತಿಹಾಸದಲ್ಲಿ ಅಪರೂಪ ವಾಗಿದ್ದು, ಇದು ನಾಯಕತ್ವದ ನಡೆವಳಿಕೆಯ ಗಡಿಗಳನ್ನೇ ಮರುಪರಿಶೀಲಿಸುವಂತೆ ಮಾಡಿವೆ. ಐತಿಹಾಸಿಕವಾಗಿ ನೋಡಿ ದರೆ, ವಿಶ್ವದ ಪ್ರಭಾವಿ ನಾಯಕರು ಗೌರವ ಮತ್ತು ಪುರಸ್ಕಾರಗಳನ್ನು ವಿನಮ್ರತೆಯಿಂದ ಸ್ವೀಕರಿಸುವುದು ಅಥವಾ ತಿರಸ್ಕರಿಸುವುದು ಸಾಮಾನ್ಯ ಸಂಪ್ರದಾಯವಾಗಿತ್ತು. ಆದರೆ ಪ್ರಶಸ್ತಿ ನೀಡುವ ಸ್ವತಂತ್ರ ಸಮಿತಿಯನ್ನೇ ಗುರಿಯಾಗಿಸಿಕೊಂಡು, ‘ನನ್ನನ್ನು ಬಿಟ್ಟು ಬೇರೆಯವರಿಗೆ ಹೇಗೆ ಕೊಟ್ಟಿರಿ?’ ಎಂದು ಆಕ್ರೋಶ ಹೊರಹಾಕುವುದು ಆಧುನಿಕ ರಾಜಕೀಯದಲ್ಲೂ ವಿರಳ.
ಅಮೆರಿಕದ ಅಧ್ಯಕ್ಷೀಯ ಇತಿಹಾಸವನ್ನು ಗಮನಿಸಿದರೆ, ಅಲ್ಲಿನ ನಾಯಕರು ಯಾವಾಗಲೂ ಒಂದು ಬಗೆಯ ಸಾಂಸ್ಥಿಕ ಘನತೆಯನ್ನು ಕಾಪಾಡಿಕೊಂಡು ಬಂದವರು. ಜಾರ್ಜ್ ವಾಷಿಂಗ್ಟನ್ನಿಂದ ಹಿಡಿದು ಜೋ ಬೈಡನ್ವರೆಗೆ ಯಾರೂ ತಮ್ಮ ವೈಯಕ್ತಿಕ ಕೊಡುಗೆಗಳಿಗೆ ಸಾರ್ವಜನಿಕವಾಗಿ ಪ್ರಶಸ್ತಿಗಳನ್ನು ಅಂಗಲಾಚಿ ಬೇಡಲಿಲ್ಲ.
ಪ್ರಶಸ್ತಿಗಳು ತಮ್ಮ ಕಾರ್ಯಕ್ಕೆ ಸಿಗುವ ಉಪಉತ್ಪನ್ನಗಳೇ ಹೊರತು, ಅದೇ ಅಧಿಕಾರದ ಗುರಿಯಲ್ಲ ಎಂಬುದು ಹಿಂದಿನ ನಾಯಕರ ಸ್ಪಷ್ಟ ನಿಲುವಾಗಿತ್ತು. ಆದರೆ ಟ್ರಂಪ್ ಅವರ ಶೈಲಿಯು ರಾಜಕೀಯ ಅಧಿಕಾರವನ್ನು ಕಾರ್ಪೊರೇಟ್ ಪ್ರಚಾರದಂತೆ ಮತ್ತು ವೈಯಕ್ತಿಕ ಬ್ರ್ಯಾಂಡಿಂಗ್ ನಂತೆ ಬಳಸಿ ಕೊಳ್ಳುವ ವಿಶಿಷ್ಟ, ಲಜ್ಜೆಗೆಟ್ಟ ವಿಕೃತ ಮಾದರಿಯಾಗಿದೆ. ನೊಬೆಲ್ ಶಾಂತಿ ಪ್ರಶಸ್ತಿಯ ಇತಿಹಾಸದ ಅಮೆರಿಕದ ನಾಲ್ವರು ಅಧ್ಯಕ್ಷರು ಈ ಗೌರವಕ್ಕೆ ಪಾತ್ರರಾಗಿದ್ದಾರೆ - ಥಿಯೋಡರ್ ರೂಸ್ವೆಲ್ಟ್, ವುಡ್ರೋ ವಿಲ್ಸನ್, ಜಿಮ್ಮಿ ಕಾರ್ಟರ್ ಮತ್ತು ಬರಾಕ್ ಒಬಾಮಾ.
2009ರಲ್ಲಿ ಅಧಿಕಾರ ವಹಿಸಿಕೊಂಡ ಕೆಲವೇ ತಿಂಗಳುಗಳಲ್ಲಿ ಒಬಾಮಾ ಅವರಿಗೆ ಪ್ರಶಸ್ತಿ ಘೋಷಣೆ ಯಾದಾಗ, ಸ್ವತಃ ಒಬಾಮಾ ಅವರೇ ‘ನಾನು ಈ ಗೌರವಕ್ಕೆ ಸಂಪೂರ್ಣ ಅರ್ಹನಲ್ಲ, ಇದನ್ನು ಮುಂದಿನ ಕೆಲಸಕ್ಕೆ ಸಿಕ್ಕ ಜವಾಬ್ದಾರಿಯಾಗಿ ಸ್ವೀಕರಿಸುತ್ತೇನೆ’ ಎಂದು ವಿನಮ್ರವಾಗಿ ಪ್ರತಿಕ್ರಿಯಿ ಸಿದ್ದರು. ಇದಕ್ಕೆ ತದ್ವಿರುದ್ಧವಾಗಿ, ತನಗೆ ಸಿಗಲಿಲ್ಲವೆಂಬ ಕಾರಣಕ್ಕೆ ಸಮಿತಿಯನ್ನು ಹಳಿಯುವುದು ಟ್ರಂಪ್ ಅವರ ರಾಜತಾಂತ್ರಿಕ ಪ್ರಬುದ್ಧತೆಯ ಕೊರತೆಯನ್ನು ಎತ್ತಿ ತೋರಿಸುತ್ತದೆ.
ಹಿಂದಿನ ವರ್ಷವೂ ನೊಬೆಲ್ ಪ್ರಶಸ್ತಿ ಆಯ್ಕೆ ಸಮಿತಿ ವಿರುದ್ಧ ಹರಿಹಾಯ್ದಿದ್ದ ಟ್ರಂಪ್, ‘ನನಗಿಂತ ಒಬಾಮಾ ಯಾವ ರೀತಿಯಲ್ಲಿ ಈ ಪ್ರಶಸ್ತಿಗೆ ಅರ್ಹ?’ ಇಂದು ಕೇಳಿ ತಮ್ಮೊಳಗಿನ ಹುಳಿಪಿತ್ತವನ್ನು ಹೊರಹಾಕಿದ್ದರು. ಸನ್ಮಾನ-ಪ್ರಶಸ್ತಿಗಳ ಬಗ್ಗೆ ಹಪಹಪಿಸುವುದು, ಅಮೆರಿಕದಂಥ ದೇಶದ ಅಧ್ಯಕ್ಷರು ಮಾನಮರ್ಯಾದೆ ಬಿಟ್ಟು ಬೇಡುವುದು ಅಸಹ್ಯದ ಅತಿರೇಕವೇ ಸರಿ. ಇತಿಹಾಸದಲ್ಲಿ ಇಂಥ ನಡೆವಳಿಕೆಯನ್ನು ಪ್ರದರ್ಶಿಸಿದ ನಾಯಕರು ಇದ್ದಾರೆಯೇ? ಇಲ್ಲವೇ ಇಲ್ಲ ಎನ್ನುವಷ್ಟು ಅಪರೂಪ.
ಹಾಂ...ಈ ವಿಷಯದಲ್ಲಿ ಟ್ರಂಪ್ಗೆ ಪ್ರಬಲ ಪೈಪೋಟಿ ನೀಡುವ ಒಬ್ಬನನ್ನು ಹುಡುಕಬಹುದು. ಆತ ರೋಮನ್ ಚಕ್ರವರ್ತಿ ನೀರೋ! ಆತ ತಾನೇ ವಿಶ್ವದ ಶ್ರೇಷ್ಠ ಕಲಾವಿದ, ಅಪ್ರತಿಮ ಗಾಯಕ, ಕವಿ ಮತ್ತು ನಟ ಎಂಬ ಭ್ರಮೆಯ ಹೆಚ್ಚು ಕಾಲ ಕಳೆದವ. ಆಡಳಿತದ ಗಂಭೀರ ಜವಾಬ್ದಾರಿಗಳನ್ನು ಬದಿಗೊತ್ತಿ, ವೇದಿಕೆಗಳ ಮೇಲೆ ವೀಣೆ ನುಡಿಸುತ್ತಾ ತಾಸುಗಟ್ಟಲೆ ಹಾಡುವುದು ಆತನ ಹುಚ್ಚಾಗಿತ್ತು.
ಸಾರ್ವಜನಿಕರು ಆತನ ರಾಗಾಲಾಪನೆಯನ್ನು ಕೇಳಲೇಬೇಕೆಂಬ ಕಡ್ಡಾಯ ನಿಯಮವಿತ್ತು. ಆತನ ಕಚೇರಿ ನಡೆಯುವಾಗ ಪ್ರೇಕ್ಷಕರು ಎದ್ದು ಹೋಗದಂತೆ ಸಭಾಂಗಣದ ಬಾಗಿಲುಗಳನ್ನೇ ಮುಚ್ಚಿಸಲಾಗುತ್ತಿತ್ತು. ಆತನ ಕಲೆಯ ಅಸಂಬದ್ಧತೆಯನ್ನು ಸಹಿಸಲಾಗದೇ ಕೆಲವರು ಗೋಡೆ ಹಾರಿ ಓಡಿಹೋದರೆ, ಇನ್ನು ಕೆಲವರು ಸತ್ತಂತೆ ನಟಿಸಿ ಅಲ್ಲಿಂದ ಪಾರಾಗುತ್ತಿದ್ದರು. ಕ್ರಿ.ಶ.67ರಲ್ಲಿ ಗ್ರೀಸ್ ಪ್ರವಾಸ ಕೈಗೊಂಡ ನೀರೋ, ಅಲ್ಲಿನ ಪ್ರತಿಷ್ಠಿತ ಒಲಿಂಪಿಕ್ ಸೇರಿದಂತೆ ಎಲ್ಲ ಕ್ರೀಡಾ ಮತ್ತು ಸಾಂಸ್ಕೃತಿಕ ಕೂಟಗಳಲ್ಲಿ ಭಾಗವಹಿಸಿ ತಾನೇ ಶ್ರೇಷ್ಠನೆಂದು ಸಾಬೀತುಪಡಿಸಲು ಹೊರಟ.
ರಥ ಓಡಿಸುವ ಸ್ಪರ್ಧೆಯಲ್ಲಿ ರಥದಿಂದ ಕೆಳಗೆ ಬಿದ್ದು ಸ್ಪರ್ಧೆಯನ್ನೇ ಪೂರ್ಣಗೊಳಿಸದಿದ್ದರೂ, ತೀರ್ಪುಗಾರರ ಮೇಲೆ ಕಟ್ಟಪ್ಪಣೆ ವಿಧಿಸಿ ತಾನೇ ವಿಜೇತನೆಂದು ಘೋಷಿಸಿಕೊಂಡ. ಆ ಪ್ರವಾಸದಲ್ಲಿ ಆತ ಸ್ಪರ್ಧಿಸಿದ ಪ್ರತಿಯೊಂದು ಹಾಡುಗಾರಿಕೆ ಮತ್ತು ರಂಗಭೂಮಿ ಸ್ಪರ್ಧೆಯಲ್ಲೂ ಪ್ರಥಮ ಬಹುಮಾನವನ್ನೇ ಬಾಚಿಕೊಂಡ.
ಸುಮಾರು 1800ಕ್ಕೂ ಹೆಚ್ಚು ಪ್ರಶಸ್ತಿಗಳೊಂದಿಗೆ ರೋಮ್ಗೆ ಮರಳಿದ. ಆತನ ಅತಿಯಾದ ಕಲಾಪ್ರೇಮ ಹಾಗೂ ಆತ್ಮಪ್ರಶಂಸೆಯ ದುರಂತವೆಂದರೆ, ಕೊನೆಗಾಲದಲ್ಲಿ ಆತ್ಮಹತ್ಯೆ ಮಾಡಿ ಕೊಳ್ಳುವಾಗಲೂ ಆತ, ‘ನಾನು ಅದೆಂಥ ಅದ್ಭುತ ಕಲಾವಿದ ಎಂಬು ದು ನಿಮಗೆಲ್ಲ ಗೊತ್ತು. ನನಗೆ ಈ ಸಮಯದಲ್ಲಿ ಅತೀವ ದುಃ ಖವಾಗುತ್ತಿದೆ, ಯಾಕೆ ಗೊತ್ತಾ? ನನ್ನ ಸಾವಿನೊಂದಿಗೆ ಕಲೆ, ಸಂಸ್ಕೃತಿಯೇ ನಾಶವಾಗುತ್ತದೆ ಎಂಬುದನ್ನು ಯೋಚಿಸಿ’ ಎಂದು ಉದ್ಗರಿಸಿದ್ದ.
ಈ ಸಂಗತಿಗಳೇನಾದರೂ ಟ್ರಂಪ್ ಕಿವಿಗೆ ಬಿದ್ದರೆ, ಅವರು ನೀರೋಗೆ ಪ್ರಬಲ ಪ್ರತಿಸ್ಪರ್ಧೆ ಒಡ್ಡಿದರೆ ಆಶ್ಚರ್ಯವೇನಿಲ್ಲ. ಟ್ರಂಪ್ ಅವರ ಈ ವರ್ತನೆಯನ್ನು ಕೇವಲ ‘ನಿರ್ಲಜ್ಜತೆ’ ಎಂದು ಜರಿದು ಬಿಡುವ ಬದಲು, ಅವರ ರಾಜಕೀಯ ತಂತ್ರಗಾರಿಕೆಯ ಭಾಗವಾಗಿ ನೋಡುವುದು ಸೂಕ್ತ. ಅವರು ತಮ್ಮ ಬೆಂಬಲಿಗರ ಮುಂದೆ ಯಾವಾಗಲೂ ‘ಅಮೆರಿಕದ ಹಿತಾಸಕ್ತಿಗಳ ಪರವಾಗಿ ನಿಲ್ಲುವ ಏಕೈಕ ಹೋರಾಟಗಾರ’ ಎಂಬ ಚಿತ್ರಣವನ್ನು ನಿರ್ಮಿಸಲು ಯತ್ನಿಸುತ್ತಾರೆ.
‘ಜಾಗತಿಕ ಗಣ್ಯರು ಅಮೆರಿಕವನ್ನು ಮತ್ತು ನನ್ನನ್ನು ವಂಚಿಸುತ್ತಿದ್ದಾರೆ’ ಎಂಬ ಆಖ್ಯಾನವನ್ನು ಸೃಷ್ಟಿಸುವ ಮೂಲಕ, ಅವರು ತಮ್ಮ ರಾಜಕೀಯ ನೆಲೆಯನ್ನು ಭದ್ರಪಡಿಸಿಕೊಳ್ಳುವ ತಂತ್ರವನ್ನು ಅನುಸರಿಸುತ್ತಾರೆ. ಇಲ್ಲಿ ಮತ್ತೊಂದು ಪ್ರಮುಖ ಅಂಶವೆಂದರೆ ಶಾಂತಿಯ ವ್ಯಾಖ್ಯಾನ. ಟ್ರಂಪ್ ಅವರ ದೃಷ್ಟಿಯಲ್ಲಿ ಶಾಂತಿ ಎಂದರೆ ಕೇವಲ ವ್ಯವಹಾರಿಕ ಒಪ್ಪಂದಗಳು, ರಾಜತಾಂತ್ರಿಕ ಒತ್ತಡಗಳು ಮತ್ತು ಗಡಿ ವಿವಾದಗಳ ತಕ್ಷಣದ ತೇಪೆ ಹಚ್ಚುವಿಕೆ.
ಅಬ್ರಹಾಂ ಒಪ್ಪಂದಗಳಂಥ ಬೆಳವಣಿಗೆಗಳನ್ನು ಅವರು ದೊಡ್ಡ ಸಾಧನೆಗಳೆಂದು ಬಿಂಬಿಸುತ್ತಾರೆ. ಆದರೆ ನೊಬೆಲ್ ಸಮಿತಿಯ ದೃಷ್ಟಿಯಲ್ಲಿ ಶಾಂತಿ ಎನ್ನುವುದು ಕೇವಲ ಯುದ್ಧದ ಅನುಪಸ್ಥಿತಿ ಯಲ್ಲ. ಅದು ಮಾನವ ಹಕ್ಕುಗಳ ರಕ್ಷಣೆ, ಸಾಮಾಜಿಕ ನ್ಯಾಯ, ತುಳಿತಕ್ಕೊಳಗಾದವರ ಪರ ಧ್ವನಿ ಎತ್ತುವುದು ಮತ್ತು ದೀರ್ಘಕಾಲೀನ ಪ್ರಜಾಸತ್ತಾತ್ಮಕ ಮೌಲ್ಯಗಳ ಸ್ಥಾಪನೆ. ನವಿ ಪಿಳ್ಳೈ ಅವರ ಜೀವಮಾನದ ಸಾಧನೆ ಈ ಎರಡನೆಯ ವರ್ಗಕ್ಕೆ ಸೇರುತ್ತದೆ. ಇದು ಟ್ರಂಪ್ಗೆ ಅಪಥ್ಯವಾಗುತ್ತಿದೆ. ತಮ್ಮನ್ನು ನೊಬೆಲ್ ಶಾಂತಿ ಪ್ರಶಸ್ತಿಗೆ ನಾಮನಿರ್ದೇಶನ ಮಾಡಲು ವಿದೇಶಿ ಪ್ರಧಾನಿಗಳು ಮತ್ತು ಅಧ್ಯಕ್ಷರಿಂದ ಪತ್ರ ಬರೆಸಿದ್ದೆ ಎಂದು ಟ್ರಂಪ್ ಹೇಳಿಕೊಳ್ಳುವುದು ಅವರ ಕ್ಷುಲ್ಲಕ ನಡೆಯನ್ನು ಅನಾವರಣಗೊಳಿಸುತ್ತದೆ.
ಪ್ರಶಸ್ತಿಗಾಗಿ ಅಧಿಕೃತ ಅಥವಾ ಅನಧಿಕೃತ ಲಾಬಿ ನಡೆಸುವುದು ಮತ್ತು ಅದನ್ನು ಬಹಿರಂಗವಾಗಿ ಹೇಳಿಕೊಳ್ಳುವುದು ಪ್ರಶಸ್ತಿಯ ಮೌಲ್ಯವನ್ನೇ ಕುಗ್ಗಿಸುತ್ತದೆ. ನೊಬೆಲ್ ಸಮಿತಿಯು ಇಂಥ ರಾಜಕೀಯ ಒತ್ತಡಗಳಿಗೆ ಮಣಿಯದೇ ತನ್ನ ಸ್ವತಂತ್ರ ನಿರ್ಧಾರಗಳನ್ನು ಕಾಯ್ದುಕೊಳ್ಳುವು ದಕ್ಕಾಗಿಯೇ ಜಾಗತಿಕವಾಗಿ ಮನ್ನಣೆ ಪಡೆದಿದೆ.
ನಾರ್ವೆ ದೇಶದ ಮೇಲೆ ಈ ನಿರ್ಧಾರವು ‘ಎಂದಿಗೂ ಅಳಿಸಲಾಗದ ಕಳಂಕ’ ಎಂದು ಕರೆದಿರುವುದು ಅಂತಾರಾಷ್ಟ್ರೀಯ ರಾಜತಾಂತ್ರಿಕ ನಿಯಮಗಳ ಸ್ಪಷ್ಟ ಉಲ್ಲಂಘನೆಯೇ ಸರಿ. ನೊಬೆಲ್ ಸಮಿತಿಯು ನಾರ್ವೆ ಸಂಸತ್ತಿನಿಂದ ನಿಯೋಜಿಸಲ್ಪಟ್ಟ ಸ್ವತಂತ್ರ ಸಂಸ್ಥೆಯಾಗಿದ್ದರೂ, ಅದು ನಾರ್ವೆ ಸರಕಾರದ ಆಡಳಿತಾತ್ಮಕ ನಿಯಂತ್ರಣಕ್ಕೆ ಒಳಪಟ್ಟಿಲ್ಲ. ಇಂಥ ಸೂಕ್ಷ್ಮತೆಯನ್ನು ಕಡೆಗಣಿಸಿ ಒಂದು ಸಾರ್ವಭೌಮ ರಾಷ್ಟ್ರದ ಮೇಲೆ ಕಳಂಕದ ಆರೋಪ ಹೊರಿಸುವುದು ಅಮೆರಿಕದ ವಿದೇಶಾಂಗ ನೀತಿಯ ಘನತೆಗೆ ಧಕ್ಕೆ ತಂದಂತೆ.
ಇಂಥ ಪ್ರವೃತ್ತಿಯನ್ನು ಅತಿಯಾದ ‘ಆತ್ಮರತಿ’ ಅಥವಾ ನಾರ್ಸಿಸಿಸಂ (Narcissism) ಅಂತಾರೆ. ಇಂಥ ವ್ಯಕ್ತಿತ್ವ ಹೊಂದಿದ ಟ್ರಂಪ್, ತಮ್ಮ ಸಣ್ಣ ಕೆಲಸವನ್ನೂ ಜಗತ್ತು ಅತಿ ದೊಡ್ಡ ಸಾಧನೆಯೆಂದು ನಂಬುತ್ತದೆ ಮತ್ತು ಇತರರ ನೈಜ ಸಾಧನೆಗಳನ್ನು ಒಪ್ಪಿಕೊಳ್ಳಲು ನಿರಾಕರಿಸುತ್ತದೆ ಇಂದು ಭಾವಿಸುತ್ತಾರೆ. ‘ನಾನು ಎಂಟು ಯುದ್ಧಗಳನ್ನು ನಿಲ್ಲಿಸಿದೆ, ನನಗೆ ಎಂಟು ಪ್ರಶಸ್ತಿಗಳನ್ನು ನೀಡಬೇಕಿತ್ತು’ ಎಂಬ ಹೇಳಿಕೆಯು ವಾಸ್ತವ ಪ್ರಜ್ಞೆಗಿಂತ ಹೆಚ್ಚಾಗಿ ಆತ್ಮಪ್ರಶಂಸೆಯ ಪರಾಕಾಷ್ಠೆ ಯನ್ನು ಮರೆಯುತ್ತದೆ.
ಇತಿಹಾಸದಲ್ಲಿ ನಿಜವಾದ ಶಾಂತಿಪ್ರವರ್ತಕರು ತಮ್ಮ ತ್ಯಾಗಕ್ಕೆ ಪ್ರತಿಯಾಗಿ ಪ್ರಶಸ್ತಿಗಳನ್ನು ಬಯಸಿದವರಲ್ಲ. ಐದು ಬಾರಿ ನಾಮನಿರ್ದೇಶನಗೊಂಡರೂ, ಮಹಾತ್ಮ ಗಾಂಧೀಜಿಯವರಿಗೆ ನೊಬೆಲ್ ಶಾಂತಿ ಪ್ರಶಸ್ತಿ ಸಿಗಲಿಲ್ಲ. ಆದರೆ ಅವರು ಎಂದಿಗೂ ಆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಲಿಲ್ಲ. ಇದರಿಂದ ಗಾಂಧೀಜಿ ವ್ಯಕ್ತಿತ್ವಕ್ಕೆ ಗುಲಗುಂಜಿಯಷ್ಟೂ ಹಿನ್ನಡೆಯಾಗಲಿಲ್ಲ. ಇಂದಿಗೂ ಗಾಂಧೀಜಿಯವರ ಶಾಂತಿ ಮತ್ತು ಅಹಿಂಸೆಯ ಸಂದೇಶ ಪ್ರಶಸ್ತಿಗಳಿಗಿಂತ ಎಷ್ಟೋ ಎತ್ತರದಲ್ಲಿ ನಿಂತಿದೆ. ಸ್ವತಃ ನೊಬೆಲ್ ಸಮಿತಿಯೇ ನಂತರದ ವರ್ಷಗಳಲ್ಲಿ ಗಾಂಧಿಯವರಿಗೆ ಪ್ರಶಸ್ತಿ ನೀಡದಿರುವುದು ತಮ್ಮ ಐತಿಹಾಸಿಕ ಪ್ರಮಾದ ಎಂದು ಒಪ್ಪಿಕೊಂಡಿದೆ.
ಜೀವ ಹೋಗುವಾಗ ‘ತುತ್ತು ಅನ್ನ ನೀಡಿ’ ಎಂದು ಬೇಡಬಹುದು, ಆದರೆ ಪ್ರಶಸ್ತಿಗೆ ಮಾತ್ರ ಬೇಡಬಾರದು. ಅದು ಕರ್ತವ್ಯದ ಫಲವಾಗಿ ತಾನಾಗಿಯೇ ಬರಬೇಕು. ಈ ಘಟನೆಯು ಸಮಕಾಲೀನ ಸಾರ್ವಜನಿಕ ಜೀವನದಲ್ಲಿ ಮೌಲ್ಯಗಳು ಹೇಗೆ ಬದಲಾಗುತ್ತಿವೆ, ಕುಸಿಯುತ್ತಿವೆ ಎಂಬುದನ್ನು ಕಟುವಾಗಿ ಎಚ್ಚರಿಸುತ್ತದೆ. ಗಂಭೀರ ರಾಜತಾಂತ್ರಿಕತೆ ಮತ್ತು ದಣಿವರಿಯದ ಮಾನವ ಹಕ್ಕುಗಳ ಹೋರಾಟವನ್ನು ಸೋಶಿಯಲ್ ಮೀಡಿಯಾ ವೇದಿಕೆಗಳಲ್ಲಿ ಹಗುರವಾಗಿ ಕಾಣುವುದು, ಜಾಗತಿಕ ವೇದಿಕೆಗಳಲ್ಲಿ ನಾಯಕರ ನಡುವಿನ ಸಂಭಾಷಣೆಯ ಗುಣಮಟ್ಟ ಕೆಳಕ್ಕಿಳಿಯುತ್ತಿರುವುದರ ಸ್ಪಷ್ಟ ಸಂಕೇತ.
ಯಾವುದೇ ರಾಷ್ಟ್ರದ ನಾಯಕನಿಗೆ ಇರಬೇಕಾದ ಕನಿಷ್ಠ ಸೌಜನ್ಯ ಮತ್ತು ನಮ್ರತೆ ಇಲ್ಲಿ ಸಂಪೂರ್ಣ ವಾಗಿ ಮರೆಯಾಗಿದೆ. ಅಧಿಕಾರ ಮತ್ತು ಪ್ರಚಾರದ ಬಲದಿಂದ ತಾತ್ಕಾಲಿಕವಾಗಿ ಗಮನ ಸೆಳೆಯ ಬಹುದು, ಆದರೆ ಇತಿಹಾಸವು ನಾಯಕರನ್ನು ಅಳೆಯುವುದು ಅವರು ಪಡೆದ ಪದಕಗಳ ಆಧಾರದ ಮೇಲಲ್ಲ, ಬದಲಿಗೆ ಅವರು ಬಿಟ್ಟುಹೋದ ಶಾಶ್ವತ ಮೌಲ್ಯಗಳ ಆಧಾರದ ಮೇಲೆ. ಪ್ರಶಸ್ತಿಯನ್ನು ಒತ್ತಾಯಿಸಿ ಪಡೆಯಲು ಯತ್ನಿಸುವುದು ಅಥವಾ ಸಿಗದಿದ್ದಾಗ ಸಿಟ್ಟುಗೊಳ್ಳುವುದು ನಾಯಕನ ಆಂತರಿಕ ಅಸುರಕ್ಷತೆಯನ್ನು ಜಗಜ್ಜಾಹೀರು ಮಾಡುತ್ತದೆ.
ಇದು ಇತಿಹಾಸದ ಪುಟಗಳಲ್ಲಿ ಅಧ್ಯಕ್ಷೀಯ ಸ್ಥಾನದ ಘನತೆಯನ್ನು ಹೆಚ್ಚಿಸುವ ಬದಲು, ನಾಯಕತ್ವದ ಕ್ಷುಲ್ಲಕ ನಡೆಯ ನಿದರ್ಶನವಾಗಿ ಶಾಶ್ವತ ದಾಖಲಾಗುತ್ತದೆ. ಡೊನಾಲ್ಡ್ ಟ್ರಂಪ್ ಅವರ ಈ ನಡೆವಳಿಕೆಯು ಅಮೆರಿಕದ ಅಧ್ಯಕ್ಷೀಯ ಸ್ಥಾನಕ್ಕಂಟಿದ ಅಳಿಸಲಾಗದ ಕಳಂಕ ಹಾಗೂ ಅತಿರೇಕದ ಅಹಂಕಾರದ ಪರಮಾವಧಿ.
ನವಿ ಪಿಳ್ಳೈ ಅವರಂಥ ನಿಸ್ವಾರ್ಥ ಹೋರಾಟಗಾರ್ತಿಯ ಜೀವಮಾನದ ತ್ಯಾಗವನ್ನು ಕೇವಲ ಪ್ರಚಾರದ ಅಮಲಿನಲ್ಲಿ ತುಚ್ಛೀಕರಿಸಿ, ಅಂಗಡಿಯಲ್ಲಿ ದಿನಸಿ ಕೇಳುವಂತೆ ಅಥವಾ ಭಿಕ್ಷೆ ಬೇಡುವಂತೆ, ‘ದಮ್ಮಯ್ಯ, ನನಗೆ ಪ್ರಶಸ್ತಿ ಕೊಡಿ’ ಎಂದು ಜಗತ್ತಿನೆದುರು ಗೋಳಾಡುವುದು ನಾಯಕತ್ವದ ಲಕ್ಷಣವಲ್ಲ. ಅದು ಆತ್ಮಗೌರವವೇ ಇಲ್ಲದ ಆತ್ಮರತಿಯ ಪರಮ ದೌರ್ಬಲ್ಯ. ಶಾಂತಿಯೆಂಬ ಪವಿತ್ರ ಮೌಲ್ಯವನ್ನು ತನ್ನ ಸ್ವಂತ ಪ್ರತಿಷ್ಠೆಯ ವಹಿವಾಟು ಮಾಡಿಕೊಂಡ ಇಂಥ ಕ್ಷುಲ್ಲಕ ಮತ್ತು ಸ್ವಾರ್ಥಿ ಮನಸ್ಥಿತಿಯನ್ನು ಇತಿಹಾಸವು ಅತ್ಯಂತ ನಿರ್ಲಜ್ಜ ಹಾಗೂ ಹಾಸ್ಯಾಸ್ಪದ ನಾಯಕತ್ವದ ಕರಾಳ ನಿದರ್ಶನವೆಂದೇ ದಾಖಲಿಸಲಿದೆ.