Roopa Gururaj Column: ಎದುರುಬದುರಾಗಿರುವ ಜಗನ್ಮೋಹಿನಿ ಕೇಶವಸ್ವಾಮಿ, ಉಮಾ ಕಮಂಡಲೇಶ್ವರ ಸ್ವಾಮಿ ದೇವಾಲಯಗಳು
ಭಾರತದಲ್ಲಿ ಜಗನ್ಮೋಹಿನಿ ದೇವಿಯ ದೇವಾಲಯಗಳು ಕೇವಲ ಎರಡು ಇವೆ. ಮೊದಲನೆಯದು ಆಂಧ್ರ ಪ್ರದೇಶದ ರ‍್ಯಾಲಿ ಗ್ರಾಮದಲ್ಲಿ, ಮತ್ತೊಂದು ಗೋವಾದ ಪೋಂಡಾ, ಮ್ಹಾಲಸಾ ನಾರಾಯಣೀ ದೇವಸ್ಥಾನದಲ್ಲಿದೆ. ಗೋವಾದಲ್ಲಿ ಜಗನ್ಮೋಹಿನಿಯ ವಿಗ್ರಹವು ಕಾಳಿ, ಉಮಾ ಮತ್ತು ಲಕ್ಷ್ಮೀ ದೇವಿಯರ ಸಂಯುಕ್ತರೂಪವಾಗಿಯೇ ಪೂಜಿಸಲ್ಪಡುತ್ತದೆ ಎನ್ನುವುದು ವಿಶೇಷ.
-
ಒಂದೊಳ್ಳೆ ಮಾತು
ಭಾರತದಲ್ಲಿ ಜಗನ್ಮೋಹಿನಿ ದೇವಿಯ ದೇವಾಲಯಗಳು ಕೇವಲ ಎರಡು ಇವೆ. ಮೊದಲನೆಯದು ಆಂಧ್ರ ಪ್ರದೇಶದ ರ‍್ಯಾಲಿ ಗ್ರಾಮದಲ್ಲಿ, ಮತ್ತೊಂದು ಗೋವಾದ ಪೋಂಡಾ, ಮ್ಹಾಲಸಾ ನಾರಾಯಣೀ ದೇವಸ್ಥಾನ ದಲ್ಲಿದೆ. ಗೋವಾದಲ್ಲಿ ಜಗನ್ಮೋಹಿನಿಯ ವಿಗ್ರಹವು ಕಾಳಿ, ಉಮಾ ಮತ್ತು ಲಕ್ಷ್ಮೀ ದೇವಿಯರ ಸಂಯುಕ್ತರೂಪವಾಗಿಯೇ ಪೂಜಿಸಲ್ಪಡುತ್ತದೆ ಎನ್ನುವುದು ವಿಶೇಷ.
ರ‍್ಯಾಲಿ, ಪೂರ್ವ ಗೋದಾವರಿ ಜಿಲ್ಲೆ, ಆಂಧ್ರ ಪ್ರದೇಶದಲ್ಲಿ ಇರುವ ಜಗನ್ಮೋಹಿನಿ ದೇವಾಲಯ, ಅಧಿಕೃತವಾಗಿ ಶ್ರೀ ಜಗನ್ಮೋಹಿನಿ ಕೇಶವ ಮತ್ತು ಗೋಪಾಲಸ್ವಾಮಿ ದೇವಸ್ಥಾನ. ಇದು ಅಪರೂ ಪದ ಏಕಶಿಲಾ ವಿಗ್ರಹಕ್ಕಾಗಿ ಪ್ರಸಿದ್ಧವಾದ ಒಂದು ವಿಶಿಷ್ಟ ಹಿಂದೂ ದೇವಾಲಯವಾಗಿದೆ. ಈ ವಿಗ್ರಹದ ಮುಂಭಾಗದಲ್ಲಿ ವಿಷ್ಣುವಿನ ರೂಪ ಮತ್ತು ಹಿಂಭಾಗದಲ್ಲಿ ಮೋಹಿನಿ ರೂಪದ ದರ್ಶನ ವಾಗುವುದು ಶಿಲ್ಪಕಲೆಯ ಅದ್ಭುತ ಕೌಶಲ್ಯ, ದೇವರ ಪಾದಗಳಿಂದ ಗಂಗೆಯು ಹರಿಯುತ್ತಿರುತ್ತಾಳೆ.
ದೇವಾಲಯದ ಆವರಣದಲ್ಲಿ ಶಿವನಿಗೆ (ಉಮಾ ಕಮಂಡಲೇಶ್ವರಸ್ವಾಮಿ) ಸಮರ್ಪಿಸಿದ ಉಪ ದೇವಾಲಯವೂ ಇದೆ, ಆದ್ದರಿಂದ ಇದು ಅತ್ಯಂತ ಪವಿತ್ರ ತೀರ್ಥಕ್ಷೇತ್ರಗಳಲ್ಲೊಂದಾಗಿ ಭಕ್ತರಿಂದ ವಿಶೇಷವಾಗಿ ಪೂಜಿಸಲ್ಪಡುತ್ತದೆ.
ಇದನ್ನೂ ಓದಿ: Roopa Gururaj Column: ವಿದ್ಯಾರ್ಥಿಯ ಶಿಸ್ತಿಗೆ ಸಿಕ್ಕ ಮನ್ನಣೆ
ಪ್ರಾಚೀನ ಕಾಲದಲ್ಲಿ ಈ ಸ್ಥಳವನ್ನು ರತ್ನಪುರಿ ಎಂದೂ ಕರೆಯಲಾಗುತ್ತಿತ್ತು. ಗರ್ಭಗುಡಿಯಲ್ಲಿ (ಮೂಲ ವಿಗ್ರಹ) ಚನ್ನಕೇಶವಸ್ವಾಮಿ ನಾಲ್ಕು ಭುಜಗಳೊಂದಿಗೆ ಶಂಖ, ಚಕ್ರ, ಗದೆಯನ್ನು ಹಾಗೂ ಅಭಯಮುದ್ರಯಲ್ಲಿ ಕಂಗೊಳಿಸುತ್ತಾನೆ. ಮೂಲ ವಿಗ್ರಹದ ಮೇಲ್ಭಾಗದಲ್ಲಿ ಆದಿಶೇಷನನ್ನು ಕಾಣಬಹುದು. ಮೂಲ ವಿಗ್ರಹದ ಹಿಂಭಾಗದಲ್ಲಿ ಜಗನ್ಮೋಹಿನಿಯ ರೂಪ ಸೌಂದರ್ಯ ಕಣ್ಸೆಳೆ ಯುವಂತಿದೆ.
ಜಗನ್ಮೋಹಿನಿಯ ಉದ್ದವಾದ ಕೂದಲು, ಬಲ ಕಾಲಿನ ತೊಡೆಯ ಹಿಂಭಾಗದ ಮೇಲೆ ಇರುವ ಮಚ್ಚೆ ಸಹ ಕಪ್ಪುಕಲ್ಲಿನಲ್ಲಿ ಅದ್ಭುತವಾಗಿ ಗೋಚರವಾಗುತ್ತದೆ. ಶ್ರೀಚನ್ನಕೇಶವಸ್ವಾಮಿಯ ಅಭಯಮುದ್ರೆಯಲ್ಲಿ ಹಸ್ತರೇಖೆಗಳನ್ನೂ ಸಹ ಸ್ಪಷ್ಟವಾಗಿ ಕಾಣಬಹುದು. ಜಗನ್ಮೋಹಿನಿಯ ಕಾಲಿಗೆ ಧರಿಸಿದ ನೂಪುರಗಳೂ ಸಹ ಸ್ಪಷ್ಟವಾಗಿ ಕಾಣಿಸುತ್ತವೆ. ಮಹಾ ವಿಷ್ಣುವಿನ ಪವಿತ್ರ ಪಾದಗಳ ಬಳಿಯಲ್ಲಿ ಪದ್ಮಾಸನದಲ್ಲಿ ಕುಳಿತಿರುವ ಗಂಗಾದೇವಿಯ ಮೂರ್ತಿ ಇದೆ. ಚನ್ನಕೇಶವಸ್ವಾಮಿಯ ಪವಿತ್ರ ಪಾದಗಳಿಂದ ನಿರಂತರವಾಗಿ ನೀರು ಹರಿದು ಬರುತ್ತಿರುವುದನ್ನು ಕಾಣಬಹುದು.
‘ಭಾಗವತ’ದ ಪ್ರಕಾರ, ದೇವತೆಗಳು ಮತ್ತು ರಾಕ್ಷಸರು ಅಮೃತವನ್ನು ಹಂಚಿಕೊಳ್ಳುವ ವಿಷಯದಲ್ಲಿ ಕದನಕ್ಕಿಳಿದಾಗ ಮಹಾವಿಷ್ಣು ಮೋಹಿನಿಯಾಗಿ ಅಮೃತವನ್ನು ರಾಕ್ಷಸರಿಗೂ, ದೇವತೆಗಳಿಗೂ ಸಮನಾಗಿ ಹಂಚುವುದಾಗಿ ಎಲ್ಲರ ಮನವೊಲಿಸಿದ, ಆದರೆ ಜಗತ್ತಿನ ಶಾಂತಿ ಕಲ್ಯಾಣಕ್ಕಾಗಿ ದೇವತೆ ಗಳಿಗೆ ಮಾತ್ರ ಅಮೃತವನ್ನು ನೀಡಿ ರಾಕ್ಷಸರಿಗೆ ಮೋಸ ಮಾಡಿ ಅಲ್ಲಿಂದ ಮಾಯವಾದನು.
ಮಾಯವಾಗುವ ಮೊದಲು ಮೊಹಿನಿಯ ಜಡೆಯಿಂದ ಒಂದು ಹೂವು ಭೂಮಿಗೆ ಬಿದ್ದ ಸ್ಥಳವೇ ‘ರ‍್ಯಾಲಿ’. ತೆಲುಗಿನಲ್ಲಿ ‘ರ‍್ಯಾಲಿ’ ಎಂದರೆ ‘ಬೀಳು’ ಎಂದು ಅರ್ಥ, ಅಲ್ಲೇ ಜಗನ್ಮೋಹಿನಿ ಕೇಶವ ಸ್ವಾಮಿ ದೇವಸ್ಥಾನ. ಅದರ ಎದುರಿರುವ ಮತ್ತೊಂದು ವಿಶೇಷ ದೇವಸ್ಥಾನ ಉಮಾ ಕಮಂಡಲೇಶ್ವರನದ್ದು. ಪುರಾಣಗಳ ಪ್ರಕಾರ, ರಾಕ್ಷಸ ಮಹಿಷಿಗೆ ಬ್ರಹ್ಮದೇವರಿಂದ, ವಿಷ್ಣು ಮತ್ತು ಶಿವರಿಂದ ಜನಿಸಿದ ಪುತ್ರ ಮಾತ್ರ ತನ್ನನ್ನು ಕೊಲ್ಲಬಲ್ಲನು ಎಂಬ ವರ ಪ್ರಾಪ್ತವಾಗಿತ್ತು.
ಪರಶಿವನ ಮನವಿಯಂತೆ ಮಹಾವಿಷ್ಣು ಮೋಹಿನಿ ಅವತಾರವನ್ನು ಧರಿಸಿ, ಶಿವ ಮತ್ತು ಮೋಹಿನಿ ಯ ಸಮಾಗಮದಿಂದ ಪುತ್ರ ಹರಿಹರಸುತ ಜನ್ಮ ತಾಳುತ್ತಾನೆ. ಅವನು ಮಹಿಷಾಸುರನ ಸೋದರಳಿ ಯನಾದ ಮಹಿಶಿಯನ್ನು ಸಂಹರಿಸುತ್ತಾನೆ.
ಅದೇ ಸ್ಥಳದಲ್ಲಿ ಬ್ರಹ್ಮದೇವರು ತಮ್ಮ ಕಾಮಂಡಲದಿಂದ ಶಿವಲಿಂಗವನ್ನು ಪ್ರತಿಷ್ಠಾಪಿಸಿದರು. ಆದ್ದರಿಂದ ರ‍್ಯಾಲಿಯಲ್ಲಿ ಶಿವನು ‘ಶ್ರೀ ಉಮಾ ಕಮಂಡಲೇಶ್ವರ ಸ್ವಾಮಿ’ ಎಂದು ಪೂಜಿಸ ಲ್ಪಡುತ್ತಾನೆ. ಅದೇ ರೀತಿ, ವಿಷ್ಣುವಿನ ಬೆನ್ನಿನ ಭಾಗದಲ್ಲಿ ಮೋಹಿನಿ ರೂಪವಿರುವುದರಿಂದ ವಿಷ್ಣುವನ್ನು ಇಲ್ಲಿ ‘ಶ್ರೀಜಗನ್ಮೋಹಿನಿ ಕೇಶವಸ್ವಾಮಿ’ ಎಂದು ಆರಾಧಿಸುತ್ತಾರೆ.
ಶ್ರೀಜಗನ್ಮೋಹಿನಿ ಕೇಶವಸ್ವಾಮಿ ದೇವಸ್ಥಾನವು ಪೂರ್ವ ದಿಕ್ಕಿಗೆ ಮುಖ ಮಾಡಿದ್ದರೆ , ಶ್ರೀಉಮಾ ಕಾಮಂಡಲೇಶ್ವರಸ್ವಾಮಿ ದೇವಸ್ಥಾನವು ಪಶ್ಚಿಮ ದಿಕ್ಕಿಗೆ ಮುಖವಾಗಿ ನಿಂತಿದೆ ಅಂದರೆ ಎರಡೂ ದೇವಸ್ಥಾನಗಳು ಪರಸ್ಪರ ಮುಖಾಮುಖಿಯಾಗಿ ನಿರ್ಮಿಸಲ್ಪಟ್ಟಿದೆ.
ಇಂತಹ ಅಪರೂಪದ ವಾಸ್ತುಶಿಲ್ಪವಿರುವ ದೇವಸ್ಥಾನಗಳಿಗೆ ಭೇಟಿ ನೀಡಿ ವಿಶಿಷ್ಟ ಶಿಲ್ಪ ಕಲೆ ಯನ್ನು, ದೇವತಾ ದರ್ಶನವನ್ನು ಮಾಡುವ ಅವಕಾಶ ಮಾಡಿಕೊಳ್ಳಿ. ನಮ್ಮ ಸನಾತನ ಧರ್ಮ, ಪುರಾಣ ಪುಣ್ಯ ಕಥೆಗಳು ದೇವಸ್ಥಾನಗಳ ಐತಿಹ್ಯಗಳನ್ನು ತಿಳಿದುಕೊಳ್ಳುವ ಆಸಕ್ತಿ ಬೆಳೆಸಿ ಕೊಳ್ಳೋಣ.