Vishweshwar Bhat Column: ‘ಪಾರ್ಕ್ ರೋ’: ಅಮೆರಿಕದ ಫ್ಲೀಟ್ ಸ್ಟ್ರೀಟ್
ಅಮೆರಿಕದ ಪತ್ರಿಕೋದ್ಯಮದ ಸುವರ್ಣಯುಗದ ಇತಿಹಾಸವನ್ನು ಕೆದಕಿದಾಗ, ಲಂಡನ್ನ ಐತಿಹಾಸಿಕ ಫ್ಲೀಟ್ ಸ್ಟ್ರೀಟ್ಗೆ ಸರಿಸಾಟಿಯಾಗಿ ನಿಲ್ಲುವ ಏಕೈಕ ಹೆಸರು ನ್ಯೂಯಾರ್ಕ್ ನಗರದ ಮ್ಯಾನ್ಹ್ಯಾಟನ್ ನಲ್ಲಿರುವ ‘ಪಾರ್ಕ್ ರೋ’. ಹತ್ತೊಂಬತ್ತನೇ ಶತಮಾನದ ಮಧ್ಯಭಾಗದಿಂದ ಇಪ್ಪತ್ತನೇ ಶತಮಾನದ ಆರಂಭದವರೆಗೆ ಈ ಬೀದಿಯು ಅಮೆರಿಕದ ಪತ್ರಿಕಾ ರಂಗದ ಶಕ್ತಿಕೇಂದ್ರ ವಾಗಿತ್ತು.
-
ಸಂಪಾದಕರ ಸದ್ಯಶೋಧನೆ
ಅಮೆರಿಕದ ಪತ್ರಿಕೋದ್ಯಮದ ಸುವರ್ಣಯುಗದ ಇತಿಹಾಸವನ್ನು ಕೆದಕಿದಾಗ, ಲಂಡನ್ನ ಐತಿಹಾಸಿಕ ಫ್ಲೀಟ್ ಸ್ಟ್ರೀಟ್ಗೆ ಸರಿಸಾಟಿಯಾಗಿ ನಿಲ್ಲುವ ಏಕೈಕ ಹೆಸರು ನ್ಯೂಯಾರ್ಕ್ ನಗರದ ಮ್ಯಾನ್ಹ್ಯಾಟನ್ನಲ್ಲಿರುವ ‘ಪಾರ್ಕ್ ರೋ’. ಹತ್ತೊಂಬತ್ತನೇ ಶತಮಾನದ ಮಧ್ಯಭಾಗದಿಂದ ಇಪ್ಪತ್ತನೇ ಶತಮಾನದ ಆರಂಭದವರೆಗೆ ಈ ಬೀದಿಯು ಅಮೆರಿಕದ ಪತ್ರಿಕಾ ರಂಗದ ಶಕ್ತಿಕೇಂದ್ರ ವಾಗಿತ್ತು.
ನ್ಯೂಯಾರ್ಕ್ ಸಿಟಿ ಹಾಲ್ನ ಪಕ್ಕದ ಹಾದುಹೋಗುವ ಈ ಬೀದಿಯನ್ನು ಇತಿಹಾಸಕಾರರು ಮತ್ತು ಪತ್ರಕರ್ತರು ಪ್ರೀತಿಯಿಂದ ಹಾಗೂ ಗೌರವದಿಂದ ‘ನ್ಯೂಸ್ ಪೇಪರ್ ರೋ’ (Newspaper Row) ಎಂದು ಕರೆಯುತ್ತಿದ್ದರು. ಅಂದು ಅಮೆರಿಕದ ರಾಜಕೀಯ, ಸಾಮಾಜಿಕ ಮತ್ತು ಸಾಂಸ್ಕೃತಿಕ ದಿಕ್ಕನ್ನೇ ಬದಲಿಸಿದ ಪ್ರಮುಖ ಪತ್ರಿಕೆಗಳೆಲ್ಲವೂ ಇದೇ ಒಂದು ಬೀದಿಯಲ್ಲಿ ಮೈದಳೆದು, ಇಡೀ ದೇಶದ ಸಾರ್ವಜನಿಕ ಅಭಿಪ್ರಾಯವನ್ನು ರೂಪಿಸುವ ಕಾರ್ಖಾನೆಯಂತೆ ಕಾರ್ಯನಿರ್ವಹಿಸು ತ್ತಿದ್ದವು.
ಪಾರ್ಕ್ ರೋ ಅಮೆರಿಕದ ಪತ್ರಿಕೋದ್ಯಮದ ಕೇಂದ್ರಬಿಂದುವಾಗಲು ಅದರ ಭೌಗೋಳಿಕ ಸ್ಥಾನವೇ ಪ್ರಮುಖ ಕಾರಣವಾಗಿತ್ತು. ಸಿಟಿ ಹಾಲ್ (ನಗರಪಾಲಿಕೆ ಕಚೇರಿ), ನ್ಯಾಯಾಲಯಗಳು, ಬ್ರೂಕ್ಲಿನ್ ಸೇತುವೆ ಮತ್ತು ಪ್ರಮುಖ ಸಾರಿಗೆ ಕೇಂದ್ರಗಳಿಗೆ ಈ ಬೀದಿಯು ಅತ್ಯಂತ ಸಮೀಪದಲ್ಲಿತ್ತು. ಸುದ್ದಿಗಳನ್ನು ಕ್ಷಣಮಾತ್ರದಲ್ಲಿ ಸಂಗ್ರಹಿಸಲು ಮತ್ತು ಮುದ್ರಣಗೊಂಡ ಪತ್ರಿಕೆಗಳನ್ನು ನಗರದ ಮೂಲೆಮೂಲೆಗೆ ಹಾಗೂ ರೈಲುಗಳ ಮೂಲಕ ದೇಶದ ಇತರ ಭಾಗಗಳಿಗೆ ರವಾನಿಸಲು ಇದು ಅತ್ಯಂತ ಪ್ರಶಸ್ತ ಸ್ಥಳವಾಗಿತ್ತು.
ಇದನ್ನೂ ಓದಿ: Vishweshwar Bhat Colum: ನಮ್ಮ ಅಂಗಳ ಗುಡಿಸಿ, ನಮ್ಮ ಮಲ್ಲಿಗೆ ನಮಗೇ ಮುಡಿಸಿದರು !
ಇದೇ ಕಾರಣಕ್ಕೆ ನ್ಯೂಯಾರ್ಕ್ನ ಬಹುತೇಕ ಎಲ್ಲ ಪ್ರಮುಖ ದಿನಪತ್ರಿಕೆಗಳು ತಮ್ಮ ಸಂಪಾದಕೀಯ ಕಚೇರಿಗಳು ಮತ್ತು ಬೃಹತ್ ಮುದ್ರಣ ಯಂತ್ರಗಳನ್ನು ಇಲ್ಲಿ ಸ್ಥಾಪಿಸಿದವು. ಹಗಲು ರಾತ್ರಿ ಎನ್ನದೇ ಮುದ್ರಣ ಯಂತ್ರಗಳ ಸದ್ದು, ಕಾಗದದ ರಾಶಿಗಳು ಮತ್ತು ಸುದ್ದಿಗಾಗಿ ಓಡಾಡುವ ವರದಿಗಾರರಿಂದ ಈ ಬೀದಿ ಸದಾ ಗಿಜಿಗುಡುತ್ತಿತ್ತು. ಈ ಐತಿಹಾಸಿಕ ಬೀದಿಯಲ್ಲಿ ಅಂದಿನ ಕಾಲದ ದಿಗ್ಗಜ ಪತ್ರಿಕೆ ಗಳೆಲ್ಲವೂ ಒಂದರ ಪಕ್ಕ ಒಂದರಂತೆ ನೆಲೆನಿಂತಿದ್ದವು.
ಇಂದು ಜಾಗತಿಕ ಮಟ್ಟದಲ್ಲಿ ಖ್ಯಾತಿ ಪಡೆದಿರುವ ‘ದಿ ನ್ಯೂಯಾರ್ಕ್ ಟೈಮ್ಸ್’ ತನ್ನ ಆರಂಭಿಕ ದಶಕಗಳಲ್ಲಿ ಪಾರ್ಕ್ ರೋನ ಕಾರ್ಯನಿರ್ವಹಿಸುತ್ತಿತ್ತು. 1851ರಲ್ಲಿ ಸ್ಥಾಪನೆಯಾದ ಈ ಪತ್ರಿಕೆಯು 1857ರಲ್ಲಿ ಪಾರ್ಕ್ ರೋಗೆ ಸ್ಥಳಾಂತರಗೊಂಡು, ಇಲ್ಲಿಂದಲೇ ತನ್ನ ಗಂಭೀರ ಹಾಗೂ ವಸ್ತುನಿಷ್ಠ ಪತ್ರಿಕೋದ್ಯಮದ ಅಡಿಪಾಯವನ್ನು ಭದ್ರಪಡಿಸಿಕೊಂಡಿತು. ಟೈಮ್ಸ್ ಪತ್ರಿಕೆಯ ಕಟ್ಟಡದ ಸುತ್ತಮುತ್ತಲೇ ಇತರ ಪ್ರತಿಸ್ಪರ್ಧಿ ಪತ್ರಿಕೆಗಳ ಕಚೇರಿಗಳಿದ್ದವು, ಇದು ಪತ್ರಕರ್ತರ ನಡುವೆ ನಿರಂತರ ವಾದ ಬೌದ್ಧಿಕ ಮತ್ತು ವೃತ್ತಿಪರ ಪೈಪೋಟಿಗೆ ವೇದಿಕೆಯಾಗಿತ್ತು.
ಪಾರ್ಕ್ ರೋನ ಇತಿಹಾಸದಲ್ಲಿ ಅತ್ಯಂತ ಪ್ರಭಾವಶಾಲಿಯಾಗಿ ಮೆರೆದ ಮತ್ತೊಂದು ಪತ್ರಿಕೆ ಎಂದರೆ ‘ನ್ಯೂಯಾರ್ಕ್ ವರ್ಲ್ಡ್’. ಪತ್ರಿಕೋದ್ಯಮದ ದಂತಕಥೆ ಜೋಸೆಫ್ ಪುಲಿಟ್ಜರ್ 188ರಲ್ಲಿ ಈ ಪತ್ರಿಕೆ ಯನ್ನು ಖರೀದಿಸಿದ ನಂತರ, ಪಾರ್ಕ್ ರೋನ ಚಿತ್ರಣವೇ ಬದಲಾಯಿತು. ಜನಸಾಮಾನ್ಯರ ಭಾಷೆಯಲ್ಲಿ ಸುದ್ದಿಗಳನ್ನು ನೀಡುವ ಮೂಲಕ, ತನಿಖಾ ವರದಿಗಳು ಮತ್ತು ಆಕರ್ಷಕ ವಿನ್ಯಾಸಗಳ ಮೂಲಕ ಪುಲಿಟ್ಜರ್ ಪತ್ರಿಕೋದ್ಯಮದಲ್ಲಿ ಹೊಸ ಕ್ರಾಂತಿಯನ್ನೇ ಸೃಷ್ಟಿಸಿದರು.
‘ನ್ಯೂಯಾರ್ಕ್ ವರ್ಲ್ಡ್’ ಪತ್ರಿಕೆಯ ಪ್ರಸಾರ ಸಂಖ್ಯೆ ಗಗನಕ್ಕೇರಿತು ಮತ್ತು ಪಾರ್ಕ್ ರೋ ಅಮೆರಿಕದ ಅತ್ಯಂತ ಶಕ್ತಿಶಾಲಿ ಮಾಧ್ಯಮ ಕೇಂದ್ರವಾಗಿ ಗುರುತಿಸಲ್ಪಟ್ಟಿತು. ಇದೇ ಬೀದಿಯಲ್ಲಿದ್ದ ಮತ್ತೊಂದು ಪ್ರಮುಖ ಸ್ತಂಭವೆಂದರೆ ಹೊರೆಸ್ ಗ್ರೀಲಿ ಸ್ಥಾಪಿಸಿದ ‘ನ್ಯೂಯಾರ್ಕ್ ಟ್ರಿಬ್ಯೂನ್’. ಅಮೆರಿಕದ ಅಂತರ್ಯುದ್ಧದ ಸಂದರ್ಭದಲ್ಲಿ ಗುಲಾಮಗಿರಿ ವಿರೋಧಿ ನಿಲುವು ಮತ್ತು ಪ್ರಗತಿಪರ ವಿಚಾರಗಳಿಗೆ ಹೆಸರಾಗಿದ್ದ ಈ ಪತ್ರಿಕೆಯು ಪಾರ್ಕ್ ರೋನ ಘನತೆಯನ್ನು ಹೆಚ್ಚಿಸಿತ್ತು.
ಟ್ರಿಬ್ಯೂನ್ ಪತ್ರಿಕೆಯ ಕಟ್ಟಡವು ಅಂದಿನ ಕಾಲದ ಪತ್ರಕರ್ತರು, ಬರಹಗಾರರು ಮತ್ತು ಚಿಂತಕರ ನೆಚ್ಚಿನ ತಾಣವಾಗಿತ್ತು. ಇವುಗಳ ಜತೆಗೆ ‘ನ್ಯೂಯಾರ್ಕ್ ಸನ್’, ‘ನ್ಯೂಯಾರ್ಕ್ ಹೆರಾಲ್ಡ್’ ಮತ್ತು ‘ನ್ಯೂಯಾರ್ಕ್ ಇವಿನಿಂಗ್ ಪೋಸ್ಟ್’ನಂಥ ಪತ್ರಿಕೆಗಳೂ ಇದೇ ಪರಿಸರದಲ್ಲಿ ತಮ್ಮ ಅಸ್ತಿತ್ವವನ್ನು ಕಂಡುಕೊಂಡಿದ್ದವು.
ಪಾರ್ಕ್ ರೋನ ಇತಿಹಾಸದಲ್ಲಿ ಅತ್ಯಂತ ರೋಚಕ ಮತ್ತು ವಿವಾದಾತ್ಮಕ ಅಧ್ಯಾಯವೆಂದರೆ ‘ನ್ಯೂಯಾರ್ಕ್ ಜರ್ನಲ್’ ಪತ್ರಿಕೆಯ ಪ್ರವೇಶ. 1895ರಲ್ಲಿ ವಿಲಿಯಂ ರಾಂಡೋಲ್ಫ್ ಹರ್ಸ್ಟ್ ಈ ಪತ್ರಿಕೆಯನ್ನು ಖರೀದಿಸಿ, ಜೋಸೆಫ್ ಪುಲಿಟ್ಜರ್ ಅವರ ‘ನ್ಯೂಯಾರ್ಕ್ ವರ್ಲ್ಡ್’ ಪತ್ರಿಕೆಗೆ ನೇರ ಸವಾಲು ಎಸೆದರು. ಇಬ್ಬರೂ ದಿಗ್ಗಜರು ಒಂದೇ ಬೀದಿಯಲ್ಲಿ (ಪಾರ್ಕ್ ರೋನಲ್ಲಿ) ಮುಖಾಮುಖಿ ಯಾಗಿ ನಿಂತು ನಡೆಸಿದ ಪ್ರಸಾರ ಸಂಖ್ಯೆಯ ಯುದ್ಧವು ಪತ್ರಿಕೋದ್ಯಮದ ಇತಿಹಾಸದಲ್ಲಿ ‘ಯೆ ಜರ್ನಲಿಸಂ’ ಎಂಬ ಹೊಸ ಪದದ ಹುಟ್ಟಿಗೆ ಕಾರಣವಾಯಿತು.