ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Roopa Gururaj Column: ತುಳಸಿದಾಸರಿಗೆ ರಾಮನಾಗಿ ದರ್ಶನ ನೀಡಿದ ಪುರಿ ಜಗನ್ನಾಥ

ನೀವೇಕೆ ಪ್ರಸಾದ ವಾಪಸ್ಸು ತೆಗೆದುಕೊಂಡು ಹೋಗಲು ಹೇಳುವಿರಿ? ಎಂದು ಕೇಳಿದಾಗ, ನನ್ನ ಇಷ್ಟದೈವ ರಾಮನ ಪೂಜೆ ಮಾಡಿ ಅವನಿಗೆ ಅರ್ಪಿಸದೆ ಏನನ್ನೂ ಸೇವಿಸುವಹಾಗಿಲ್ಲ. ಅಲ್ಲದೆ ನಿನ್ನ ಜಗನ್ನಾಥನ ಪ್ರಸಾದವನ್ನು ನನ್ನ ರಾಮನಿಗೆ ಹೇಗೆ ನೈವೇದ್ಯ ಮಾಡಲಿ? ಆದುದರಿಂದ ಈ ಪ್ರಸಾದವನ್ನು ಸ್ವೀಕರಿಸಲಾರೆ ಎಂದರು.

ತುಳಸಿದಾಸರಿಗೆ ರಾಮನಾಗಿ ದರ್ಶನ ನೀಡಿದ ಪುರಿ ಜಗನ್ನಾಥ

ಒಂದೊಳ್ಳೆ ಮಾತು

rgururaj628@gmail.com

ಒಂದು ದಿನ ತುಳಸಿದಾಸರಿಗೆ, ಪುರಿ ಜಗನ್ನಾಥನಲ್ಲಿ ರಾಮನ ದರ್ಶನವಾಗುತ್ತದೆ ಎಂಬ ಸುದ್ದಿ ಯಾರಿಂದಲೋ ತಿಳಿದು ಬಂದಿತು. ರಾಮನ ದರ್ಶನ ಮಾಡುವ ಸಲುವಾಗಿ ರಾಮನ ಭಕ್ತರಾಗಿದ್ದ ತುಳಸಿದಾಸರು ಯಾತ್ರಿಕರ ಜೊತೆ ಪಾದಯಾತ್ರೆ ಮಾಡುತ್ತಲೇ ಪುರಿ ಕ್ಷೇತ್ರಕ್ಕೆ ರಾಮನ ದರ್ಶನ ಮಾಡಲು ಹೊರಟರು. ಕಷ್ಟಪಟ್ಟು ನಡೆದು ಬಹಳ ದಿನಗಳ ಮೇಲೆ ಪುರಿ ಕ್ಷೆತ್ರವನ್ನು ತಲುಪಿದರು.

ಅವರಿಗೆ ಇಷ್ಟದೈವವಾದ ರಾಮನ ದರ್ಶನ ಮಾಡಲು ಕಾತರದಿಂದ ದೇವಸ್ಥಾನದ ಒಳಗೆ ಬಂದು ಗರ್ಭಗುಡಿಯೊಳಗೆ ನೋಡಿದ ಅವರಿಗೆ ನಿರಾಸೆಯಾಯಿತು. ಇದೇನು, ದುಂಡನೆಯ ನಯನವುಳ್ಳ ಮರದ ದೇವರು, ನನ್ನ ರಾಮನಾಗಲು ಹೇಗೆ ಸಾಧ್ಯ? ರಾಮನೆಲ್ಲಿ ? ಎಂಬ ಬೇಸರದಿಂದ ಹೊರ ಬಂದು ಮರದ ಕೆಳಗೆ ಕುಳಿತರು. ಅಷ್ಟೊಂದು ಕಷ್ಟಪಟ್ಟು ಇಷ್ಟು ದೂರ ಬಂದರೂ ನನಗೆ ರಾಮನ ದರ್ಶನವಾಗಲಿಲ್ಲ ಎಂದು ಬೇಸರದಿಂದ ಚಿಂತಿಸುತ್ತಲೇ ಕತ್ತಲಾಯಿತು.

ಇದನ್ನೂ ಓದಿ: Roopa Gururaj Column: ತಾವೇ ನೀಡಿದ ವರದಿಂದ ಹತರಾದ ಮಧು ಕೈಟಭ

ಆ ಹೊತ್ತಿಗೆ ಪುಟ್ಟ ಬಾಲಕನೊಬ್ಬ ಕೈಯಲ್ಲಿ ಕುಡಿಕೆ ತುಂಬಾ ಪ್ರಸಾದ ಹಿಡಿದು ತಂದು ಇಲ್ಲಿ ತುಳಸಿದಾಸರು ಎಂದರೆ ಯಾರು ಎಂದು ಅಲ್ಲಿದ್ದವರನ್ನೆಲ್ಲ ಕೇಳುತ್ತಾ ಬಂದನು. ತುಳಸಿದಾಸರು ಅವನನ್ನು ನೋಡಿ ದೇವಸ್ಥಾನದವರಿಗೆ ನಾನು ಬಂದಿರುವ ವಿಚಾರ ಈ ಹುಡುಗನಿಗೆ ಹೇಗೆ ತಿಳಿಯಿತು ಎಂದು ಯೋಚಿಸಿದರು. ನನ್ನ ಜೊತೆ ಬಂದವರು ಯಾರೋ ಒಳಗೆ ಹೇಳಿರಬೇಕು ಅದಕ್ಕಾಗಿ ನನಗೆ ಪ್ರಸಾದ ಕಳಿಸಿದ್ದಾರೆ ಎಂದುಕೊಂಡು, ‘ಮಗು ನಾನೇ ತುಳಸಿ ದಾಸ ಎಂದರು. ಮುದ್ದಾದ ಬಾಲಕ ನಾನು ನಿಮ್ಮನ್ನು ಆಗಿನಿಂದಲೂ ಹುಡುಕುತ್ತಲೇ ಇದ್ದೆ.

ಜಗನ್ನಾಥ ದೇವರು ನಿಮಗಾಗಿ ಈ ಕುಡಿಕೆ ತುಂಬಾ ಪ್ರಸಾದ ಕಳಿಸಿದ್ದಾರೆ’ ಎಂದನು. ಆದರೆ ದಾಸರು ನಾನು ಈ ಪ್ರಸಾದವನ್ನು ನಾನು ಸೇವಿಸಲಾರೆ ಎಂದರು. ಆಶ್ಚರ್ಯದಿಂದ ಬಾಲಕ, ಇಡೀ ಜಗತ್ತೇ ಜಗನ್ನಾಥನ ಪ್ರಸಾದಕ್ಕಾಗಿ ಕೈ ಚಾಚುತ್ತದೆ. ಆದರೆ ನೀವೇಕೆ ಪ್ರಸಾದ ವಾಪಸ್ಸು ತೆಗೆದುಕೊಂಡು ಹೋಗಲು ಹೇಳುವಿರಿ? ಎಂದು ಕೇಳಿದಾಗ, ನನ್ನ ಇಷ್ಟದೈವ ರಾಮನ ಪೂಜೆ ಮಾಡಿ ಅವನಿಗೆ ಅರ್ಪಿಸದೆ ಏನನ್ನೂ ಸೇವಿಸುವಹಾಗಿಲ್ಲ. ಅಲ್ಲದೆ ನಿನ್ನ ಜಗನ್ನಾಥನ ಪ್ರಸಾದವನ್ನು ನನ್ನ ರಾಮನಿಗೆ ಹೇಗೆ ನೈವೇದ್ಯ ಮಾಡಲಿ? ಆದುದರಿಂದ ಈ ಪ್ರಸಾದವನ್ನು ಸ್ವೀಕರಿಸಲಾರೆ ಎಂದರು.

ಅದಕ್ಕೆ ಬಾಲಕ, ‘ನಿಮ್ಮ ಇಷ್ಟ ದೇವರೇ ಈ ಪ್ರಸಾದವನ್ನು ಕಳಿಸಿರುವುದು’ ಎಂದನು. ‘ಅದು ಹೇಗೆ ಸಾಧ್ಯ ಹಸ್ತ-ಪಾದ ಗಳಿಲ್ಲದ ನಿನ್ನ ಜಗನ್ನಾಥ ನನ್ನ ರಾಮನಾಗಲು ಹೇಗೆ ಸಾಧ್ಯ?’ ಎಂದು ತುಳಸಿದಾಸರು ಕೇಳಿದಾಗ ಬಾಲಕ ನಗುತ್ತಾ ನುಡಿದ ನೀವೇ ನಿಮ್ಮ ‘ರಾಮ ಚರಿತ ಮಾನಸ’ದಲ್ಲಿ ವರ್ಣಿಸಿದ್ದೀರಲ್ಲ, ಬ್ರಹ್ಮನು ಪಾದಗಳಿಲ್ಲದೆ ನಡೆಯುತ್ತಾನೆ, ಕಿವಿ ಇಲ್ಲದೆ ಕೇಳುತ್ತಾನೆ, ಕೈಗಳಿಲ್ಲದೆ ಕೆಲಸಗಳನ್ನು ಮಾಡುತ್ತಾನೆ, ನಾಲಿಗೆ ಇಲ್ಲದೆ ಎಲ್ಲಾ ಆಹಾರಗಳ ರುಚಿ ಆಸ್ವಾದಿಸುತ್ತಾನೆ, ಮತ್ತು ಮಾತಿಲ್ಲದೆ ಅನೇಕ ವಿಷಯಗಳನ್ನು ಮಾತಾಡುವ ವಾಗ್ಮೀ ಅಲ್ಲವೇ? ಎಂದು ತುಳಸಿದಾಸರನ್ನು ಕೇಳಿದಾಗ,ಅವರಿಗೆ ಅರ್ಥವಾಯಿತು.

ತಮ್ಮ ಅಜ್ಞಾನಕ್ಕೆ ಕಣ್ಣಂಚಿನಲ್ಲಿ ನೀರೂ ಬಂದಿತು. ಬಾಲಕನು ನಗುತ್ತಾ ತುಳಸಿದಾಸರೇ ‘ನಾನೇ ನಿಮ್ಮ ರಾಮ, ನನ್ನ ನಾಲ್ಕೂ ದಿಕ್ಕುಗಳಿಗೂ ಹನುಮಂತ ಪಹರೆ ಕಾಯುತ್ತಿದ್ದಾನೆ. ದಿನ ನಿತ್ಯ ಬೆಳಿಗ್ಗೆ ವಿಭೀಷಣ ನನ್ನ ದರ್ಶನಕ್ಕೆ ಬರುತ್ತಾನೆ. ನೀವು ಸಹ ನಾಳೆ ಬಂದು ನನ್ನ ದರ್ಶನ ಮಾಡಿ’ ಎಂದು ಹೇಳಿ ಓಡಿ ಕಣ್ಮರೆಯಾದನು.

ತುಳಸಿದಾಸರಿಗೆ ಜಗತ್ತಿನ ಪರಿವೇ ಇರಲಿಲ್ಲ. ಕಣ್ಣಿಂದ ಧಾರಾಕಾರವಾಗಿ ನೀರು ಸುರಿಯುತ್ತಿತ್ತು. ಬಾಲಕ ತಂದಿಟ್ಟ ಪ್ರಸಾದವನ್ನು ಭಕ್ತಿಯಿಂದ ಸಂಭ್ರಮದಿಂದ ಸೇವಿಸಿದರು. ಮರುದಿನ ಬೆಳಿಗ್ಗೆ ಎದ್ದವರೇ ಜಗನ್ನಾಥನ ದರ್ಶನ ಮಾಡಲು ಹೋದರು. ಜಗನ್ನಾಥ- ಬಲರಾಮ-ಸುಭದ್ರೆ ನಿಂತಿರುವ ಜಾಗದಲ್ಲಿ ರಾಮ, ಸೀತೆ, ಲಕ್ಷ್ಮಣ ಹನುಮಂತ ಇರುವುದನ್ನು ಕಂಡರು. ಯಾವ ಜಾಗದಲ್ಲಿ ತುಳಸಿದಾಸರು ರಾತ್ರಿಯನ್ನು ಕಳೆದಿದ್ದರೋ ಅದನ್ನು ‘ತುಳಸಿಯ ಚೌರ’ ಎಂದು ಕರೆಯುತ್ತಾರೆ. ಅವರು ಕುಳಿತಿದ್ದ ಪೀಠ ‘ಬಡಸ್ತಾಮಠ’ ಎಂದು ಪ್ರಸಿದ್ಧವಾಗಿದೆ.

ದೇವನೊಬ್ಬ ನಾಮ ಹಲವು ಎನ್ನುವಂತೆ ನಾವು ಯಾವ ತೀರ್ಥಕ್ಷೇತ್ರಕ್ಕೆ ಹೋದರು ಅಲ್ಲಿ ನಮ್ಮ ಇಷ್ಟ ದೇವರು ಅಲ್ಲಿನ ದೈವದ ರೂಪದಲ್ಲಿ ನಮ್ಮನ್ನು ಆಶೀರ್ವದಿಸುತ್ತಾನೆ. ಅವನ ಕೃಪಾಕಟಾಕ್ಷಕ್ಕೆ ಪಾತ್ರರಾಗಲು ನಮ್ಮ ನಿಷ್ಕಲ್ಮಶ ಭಕ್ತಿಯೊಂದೇ ಸಾಧ್ಯ.