ಬಿಗ್​ಬಾಸ್ ಬಿಹಾರ ರಿಸಲ್ಟ್​ ಫೋಟೋ ಗ್ಯಾಲರಿ ಫ್ಯಾಷನ್​ ವಿಶ್ವವಾಣಿ ಪ್ರಾಪರ್ಟಿ ವಿದೇಶ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

‌Ravi Hunj Column: ಸಮಾಜ ಭಂಜಕತನದ ಮಾನಸಿಕ ವಿಶ್ಲೇಷಣೆ ಮತ್ತು ಸಾಕ್ಷ್ಯದ ನಿರೂಪಣೆ !

ಸಮಗ್ರವಾಗಿ ಪರಿತ್ಯಕ್ತ ಮತ್ತು ಅಸ್ವೀಕೃತ ಆಘಾತವು ಈಡಿಪಸ್‌ನಲ್ಲಿ ಅಹಂಕಾರ, ಶೀಘ್ರ ಮುಂಗೋಪ, ಹಿಂಸಾತ್ಮಕ ವ್ಯಕ್ತಿತ್ವಕ್ಕೆ ಕಾರಣವಾಗಿ ಅವನನ್ನು ಓರ್ವ ಶಾಶ್ವತ ಮಾನಸಿಕ ಅಸ್ವಸ್ಥನನ್ನಾಗಿ ಮಾಡಿತ್ತು. ಇಂದಿಗೂ ಎಲ್ಲೂ ಅನುರಣಿಸುವ ಇಂಥ ಒಂದು ಮಾನಸಿಕ ಅಸ್ವಸ್ಥತೆಯ ಸಂಕೀರ್ಣತೆಯನ್ನು ‘ಈಡಿಪಸ್ ಸಂಕೀರ್ಣತೆ’ ಎಂದೇ ಕರೆಯಲಾಗುತ್ತದೆ.

ಸಮಾಜ ಭಂಜಕತನದ ಮಾನಸಿಕ ವಿಶ್ಲೇಷಣೆ ಮತ್ತು ಸಾಕ್ಷ್ಯದ ನಿರೂಪಣೆ !

-

Ashok Nayak
Ashok Nayak Nov 15, 2025 9:01 AM

ಬಸವ ಮಂಟಪ

ರವಿ ಹಂಜ್

ಓರ್ವ ವ್ಯಕ್ತಿಯು ಮೋಹಪರವಶನಾಗಿಯೋ, ರಾಗೋನ್ಮತ್ತತೆಯಲ್ಲಿ ಮುಳುಗಿಯೋ, ಕಡು ವ್ಯಾಮೋಹಿಯಾಗಿ ಇನ್ನೋರ್ವ ವ್ಯಕ್ತಿಯ ಮೇಲೆ ಪ್ರೀತಿ, ಪ್ರೇಮವೆಂದು ಪರಿಭಾವಿಸಿ ಪರಿತ್ಯಕ್ತನಾದ ತಕ್ಷಣದಲ್ಲಿ ಆತನಲ್ಲಿ ಕೋಪೋದ್ರೇಕ ಮೂಡುವುದು ಸಹಜ. ಆದರೆ ಅವನ ಈ ಸಹಜ ಕೋಪೋದ್ರೇಕವು ಅಸಹಜ ಕೃತ್ಯಗಳನ್ನು ಮಾಡುವಂತೆ ತೊಡಗಿಸುವ ಮಟ್ಟಕ್ಕೆ ಹೋದಾಗ ಅದನ್ನು ಮನಶಾಸ್ತ್ರವು, Rejection sensitivity dysphoria ಅಂದರೆ ‘ಪರಿತ್ಯಕ್ತ ಚುರುಕರಿವಿನ ಮುಜುಗರ ಸಂಕೀರ್ಣತೆ’ ಎಂದು ಕರೆಯುತ್ತದೆ.

ಪರಿತ್ಯಕ್ತ ಭಾವನೆಯು ನಕಾರಾತ್ಮಕ ತ್ವರಿತತೆಯ (negative urgency) ಮಟ್ಟವನ್ನು ತಲುಪಿದ ವ್ಯಕ್ತಿಗಳಲ್ಲಿ ಆವೇಗದ ನಡವಳಿಕೆಯನ್ನು ಪ್ರಚೋದಿಸುತ್ತದೆ. ಅವನ ಪ್ರತಿಕ್ರಿಯೆ ಗಳು ತೀವ್ರ ಆವೇಗದ ಕ್ರಿಯೆಗಳಾಗುತ್ತವೆ, ಹೀಗೆ ಸಾಮಾಜಿಕ ನಿರಾಕರಣೆಯು ತಕ್ಷಣಕ್ಕೆ ಮತ್ತು ನಿಧಾನವಾಗಿ ವ್ಯಕ್ತಿಯೊಬ್ಬನನ್ನು ಸಮಾಜಘಾತುಕ ಮಾನಸಿಕ ಅಸ್ವಸ್ಥನಾಗಿಸ ಬಲ್ಲದು.

ಮನಶಾಸ್ತ್ರದಲ್ಲಿ ‘ಈಡಿಪಸ್ ಸಂಕೀರ್ಣತೆ’ ಎಂದೇ ಗುರುತಿಸಿರುವ ಖ್ಯಾತ ಗ್ರೀಕ್ ಕತೆ ಸಹ ತ್ಯಜಿಸಲ್ಪಟ್ಟಿರುವಿಕೆ ಮತ್ತು ರೋಷದ ವಿಷಯಗಳೊಂದಿಗೆ ಆಳವಾಗಿ ಹೆಣೆದುಕೊಂಡಿದೆ. ಈ ಕತೆಯ ಪ್ರಕಾರ ಈಡಿಪಸನಿಗೆ ಜನ್ಮ ನೀಡಿದ ಪೋಷಕರಾದ ರಾಜ ಲಾಯಸ್ ಮತ್ತು ರಾಣಿ ಜೋಕಾಸ್ಟಾ, “ಈ ಶಿಶುವು ತನ್ನ ತಂದೆಯನ್ನು ಕೊಲ್ಲುತ್ತಾನೆ ಮತ್ತು ತನ್ನ ತಾಯಿ ಯನ್ನು ವಿವಾಹವಾಗುತ್ತಾನೆ" ಎಂಬ ದೈವವಾಣಿಯನ್ನು ತಪ್ಪಿಸಲು ಶಿಶುವಾಗಿದ್ದ ಈಡಿಪಸನನ್ನು ತ್ಯಜಿಸುತ್ತಾರೆ.

ಹೀಗೆ ಪರಿತ್ಯಕ್ತ ಶಿಶುವಿನ ಈ ಮೂಲಭೂತ ಆಘಾತ ಮತ್ತು ’ಪರಿತ್ಯಕ್ತನಾದ ರೋಷ’ವು ಸುಪ್ತವಾಗಿ ಅವನಲ್ಲಿ ಒಂದು ಮಾನಸಿಕ ಅಸ್ವಸ್ಥತೆಯ ಸಂಕೀರ್ಣತೆಯನ್ನು ಸೃಷ್ಟಿಸುತ್ತದೆ. ಈ ಸಂಕೀರ್ಣತೆಯೇ ಅವನ ವ್ಯಕ್ತಿತ್ವ ಮತ್ತು ಕ್ರಿಯೆಗಳ ಹಿಂದಿನ ಪ್ರಮುಖ ಮನೋ ವೈಜ್ಞಾನಿಕ ಚಾಲಕ ಶಕ್ತಿಯಾಗಿ ಮುಂದೆ ಅವನು ಅರಿವಿಲ್ಲದೆ ಅವನ ಹುಟ್ಟು ತಂದೆ ಯನ್ನು ಕೊಂದು ತನ್ನ ತಾಯಿಯನ್ನು ಮದುವೆಯಾಗುತ್ತಾನೆ.

ಇದನ್ನೂ ಓದಿ: Ravi Hunj Column: ಕಿಂದರಿ ಊದಿಗೆ ಮರುಳಾದವರ ಕಲ್ಯಾಣ ಏನಾಗಲಿದೆ ಎಂದು ಆಲೋಚಿಸಬೇಕಲ್ಲವೇ ?

ಕಡೆಗೆ ಸತ್ಯವನ್ನು ಅರಿತ ಅವನ ತಾಯಿ ಆತ್ಮಹತ್ಯೆ ಮಾಡಿಕೊಳ್ಳುತ್ತಾಳೆ. ಆಕೆಯ ಮೃತ ದೇಹವನ್ನು ನೋಡಿದ ಈಡಿಪಸ್ ತನ್ನ ಕಣ್ಣುಗಳನ್ನು ತಾನೇ ಕಿತ್ತುಕೊಳ್ಳುತ್ತಾನೆ. ಕಣ್ಣು ಕಿತ್ತುಕೊಂಡು ತನ್ನನ್ನು ತಾನು ಶಿಕ್ಷಿಸಿಕೊಳ್ಳುವ ಕ್ರಿಯೆಯು ಅವನ ಈವರೆಗಿನ ಹಿಂಸಾತ್ಮಕ ಕ್ರಿಯೆ ಮತ್ತು ಅದರಿಂದ ಜಗತ್ತಿಗೆ ಉಂಟುಮಾಡಿದ ನೋವಿನಿಂದ ತನ್ನನ್ನು ತಾನು ಕುರುಡಾಗಿಸಿಕೊಳ್ಳುವ ಪ್ರಯತ್ನವಾಗಿರುತ್ತದೆ.

ಸಮಗ್ರವಾಗಿ ಪರಿತ್ಯಕ್ತ ಮತ್ತು ಅಸ್ವೀಕೃತ ಆಘಾತವು ಈಡಿಪಸ್‌ನಲ್ಲಿ ಅಹಂಕಾರ, ಶೀಘ್ರ ಮುಂಗೋಪ, ಹಿಂಸಾತ್ಮಕ ವ್ಯಕ್ತಿತ್ವಕ್ಕೆ ಕಾರಣವಾಗಿ ಅವನನ್ನು ಓರ್ವ ಶಾಶ್ವತ ಮಾನಸಿಕ ಅಸ್ವಸ್ಥನನ್ನಾಗಿ ಮಾಡಿತ್ತು. ಇಂದಿಗೂ ಎಲ್ಲೂ ಅನುರಣಿಸುವ ಇಂಥ ಒಂದು ಮಾನಸಿಕ ಅಸ್ವಸ್ಥತೆಯ ಸಂಕೀರ್ಣತೆಯನ್ನು ‘ಈಡಿಪಸ್ ಸಂಕೀರ್ಣತೆ’ ಎಂದೇ ಕರೆಯಲಾಗುತ್ತದೆ.

ಈಡಿಪಸ್‌ನ ಕತೆಯು ಒಂದು ಖ್ಯಾತ ನಾಟಕವಾಗಿ ಸಾಹಿತ್ಯ ಕ್ಷೇತ್ರದಲ್ಲಿಯೂ ಸಾಕಷ್ಟು ಗುರುತಿಸಿಕೊಂಡಿದೆ. ಇಂಥ ‘ಪರಿತ್ಯಕ್ತ ಚುರುಕರಿವಿನ ಮುಜುಗರ ಸಂಕೀರ್ಣತೆ’ಯು ಕೇವಲ ಪ್ರೀತಿ ಪ್ರೇಮವಲ್ಲದೆ, ಉದ್ಯೋಗ, ಪದವಿ, ಸ್ನೇಹ, ಕೌಟುಂಬಿಕ, ಸಾಮಾಜಿಕ ಸಂಘಟನೆಗಳ ಸದಸ್ಯತ್ವ ಮುಂತಾದ ಸಾಮಾಜಿಕ ಕ್ಷೇತ್ರಗಳಲ್ಲಿನ ನಿರಾಕರಣೆಗೂ ಅನ್ವಯಿಸುತ್ತದೆ.

ಹಾಗಾಗಿಯೇ ಪ್ರೀತಿಯನ್ನು ಒಪ್ಪದ ಹುಡುಗಿಯ ಮೇಲೆ ಹುಡುಗರು ಆಸಿಡ್ ಎರಚಿದ ಪ್ರಕರಣಗಳು, ಮದುವೆಗೊಪ್ಪದ ಹುಡುಗನು ಲೈಂಗಿಕವಾಗಿ ಬಳಸಿಕೊಂಡನೆಂದು ಹುಡುಗಿ ಯರು ಆರೋಪಿಸುವುದಲ್ಲದೆ ಸಹೋದ್ಯೋಗಿಗಳ ಮೇಲೆ ಹ, ಕೆಲಸದಿಂದ ವಜಾ ಮಾಡಿದ ಮಾಲೀಕನ ಹತ್ಯೆ, ತಂದೆಯಿಂದಲೇ ಮಗನ ಕೊಲೆ, ಮಗನಿಂದಲೇ ತಂದೆಯ ಹತ್ಯೆ, ಮದುವೆಗೊಪ್ಪದ ತಾಯಿಯನ್ನು ಪ್ರಿಯಕರನೊಂದಿಗೆ ಸೇರಿ ಕೊಂದ ಯುವತಿ ಎಂಬಂಥ ಸಾಕಷ್ಟು ಸುದ್ದಿಗಳು ಆಗಾಗ್ಗೆ ಕೇಳಿ ಬರುವುದು. ಈ ಮಾನಸಿಕ ಅಸ್ವಸ್ಥ ಮುಜುಗರ ಸಂಕೀರ್ಣತೆಗೆ ಗುರಿಯಾದವರ ತೀವ್ರತೆಯ ಮಾಪಕದ ಮೇಲೆ ಕ್ಷುಲ್ಲಕ ಘಟನೆಗಳಿಂದ ಅತ್ಯಂತ ಬರ್ಬರ ಹತ್ಯೆಗಳಂಥ ದುಷ್ಕೃತ್ಯಗಳು ನಡೆದಿವೆ.

ಇದೆಲ್ಲವೂ ಒಂದು ವರ್ಗದ ಸಂಕೀರ್ಣತೆ. ಆದರೆ ಇದೇ ಸಂಕೀರ್ಣತೆಗೆ ಒಳಗಾದ ಮಿದು ತೀವ್ರತೆಯ ಆದರೆ ಸಂಪೂರ್ಣವಾಗಿ ಶಾಶ್ವತ ಮಾನಸಿಕ ಕಾಯಿಲೆಗೆ ತುತ್ತಾಗಿರುವ ಇನ್ನೊಂದು ವರ್ಗವಿದೆ. ಈ ವರ್ಗದವರು ಸಾಮಾನ್ಯವಾಗಿ ಸಮಾಜದಲ್ಲಿ ಸ್ವಲ್ಪ ಜವಾಬ್ದಾರಿಯುತ ಸ್ಥಾನದಲ್ಲಿರುವಂಥ ವ್ಯಕ್ತಿಗಳಾಗಿರುತ್ತಾರೆ.

ಉದಾಹರಣೆಗೆ ರಾಜಕಾರಣಿಗಳು, ಸಾಹಿತಿಗಳು, ಸಂಶೋಧಕರು, ಪ್ರಾಧ್ಯಾಪಕರು, ಸ್ವಾಮಿ ಗಳು ಮತ್ತು ಸಮಾಜದ ಸಾಕ್ಷಿಪ್ರತಿಮೆಗಳು. ಈ ವರ್ಗದವರು ತಮ್ಮ ಸಾಮಾಜಿಕ ವೃತ್ತಿಪರ ಸ್ಥಾನಮಾನಗಳನ್ನು ಬಳಸಿಕೊಂಡು ತಮ್ಮನ್ನು ಪರಿತ್ಯಜಿಸಿದವರ ಮೇಲೆ ಕಾನೂನಾತ್ಮಕ ವಾಗಿ ಅಪರಾಧವಲ್ಲದ ಆದರೆ ತೀವ್ರ ಹಾನಿಯನ್ನುಂಟು ಮಾಡಬಲ್ಲ ಅಪಪ್ರಚಾರ, ಸುಳ್ಳನ್ನೇ ಸತ್ಯದಂತೆ ಮಂಡಿಸುವ, ಕೂಪಮಂಡೂಕ ಗೋಬೆಲ್ಸ್ ತಂತ್ರದಂಥ ಆರೋಪ ಗಳಲ್ಲಿ ತೊಡಗಿ ದ್ವೇಷಕಾರುತ್ತಿರುತ್ತಾರೆ. ಈ ಸುದ್ದಿಗಳು ಸಹ ಸಮಾಜದಲ್ಲಿ ಅವಿರತವಾಗಿ ರಿಂಗಣಿಸುತ್ತಿವೆ.‌

ಈ ಎರಡೂ ವರ್ಗಗಳ ಅಸ್ವಸ್ಥರು, ತಮ್ಮಂಥ ಸಹಮನಸ್ಕರ ಅಥವಾ ಅಂಥ ಸಹಮನಸ್ಕ ಗುಂಪುಗಳ ಸಂಗವನ್ನು ಬಯಸಿ ಗುಂಪು ಕಟ್ಟಿಕೊಳ್ಳುತ್ತಾರೆ. ಇಂಥ ಗುಂಪುಗಳಲ್ಲಿ ಮೊದಲ ವರ್ಗವನ್ನು ಅಪರಾಧ ಪ್ರವೃತ್ತಿಯ ಸಮಾಜಭಂಜಕ ಉಗ್ರಗಾಮಿ, ದರೋಡೆಕೋರ, ಕೊಲೆ ಗಾರರ ಅಪರಾಧಿ ಗುಂಪುಗಳೆನ್ನಬಹುದು. ಎರಡನೇ ವರ್ಗವು ಸಮಾಜಭಂಜಕ ಕೃತ್ಯ ದಲ್ಲಿ ತೊಡಗಿದ್ದರೂ ಅದು ಕಾನೂನಾತ್ಮಕವಾಗಿ ಅಪರಾಧವೆನಿಸದ ಗುಂಪು. ಈ ಎರಡೂ ಗುಂಪುಗಳಲ್ಲಿ ಸಮಾಜಭಂಜಕ ನಡವಳಿಕೆಯನ್ನು ಸಮಾನ ಮಾದರಿಯಾಗಿ ರೂಪಿಸಿ ಪ್ರೋತ್ಸಾಹಿಸಲಾಗುತ್ತದೆ ಮತ್ತು ಸಾಮಾನ್ಯೀಕರಿಸಲಾಗುತ್ತದೆ.

ಇದು ಮುಂದೆ ಅಂಥ ನಡವಳಿಕೆಗಳ ಹೆಚ್ಚಳಕ್ಕೆ ದಾರಿ ಮಾಡಿಕೊಡುತ್ತ Cascading Effect ಅಥವಾ ‘ಸಂಚಯಿ ಪರಿಣಾಮ’ಕ್ಕೆ ನಾಂದಿ ಹಾಡುತ್ತದೆ. ಈ ಸಂಚಯಿ ಪರಿಣಾಮದ ಕಾರಣವೇ ತೀವ್ರಗಾಮಿ ಭಯೋತ್ಪಾದನೆ ಮತ್ತು ಮಂದಗಾಮಿ ಸಮಾಜ ವಿಭಜನೆಯು ವಾಸ್ತವಿಕವಾಗಿ ವಿಜೃಂಭಿಸುತ್ತಿರುವುದು. ಇದಕ್ಕೆ ಕರುನಾಡಿನ ಇಂದಿನ ಧರ್ಮಭಂಜಕ ಲಿಂಗಾಹತ ಪ್ರಾಧ್ಯಾಪಕ, ಸಾಹಿತಿ, ಬುದ್ಧಿಜೀವಿ, ಮಠಾಧೀಶರ ವಲಯ ಸಹ ಹೊರತಲ್ಲ!

ವಿಪರ್ಯಾಸವೆಂದರೆ, ಪೌರಾಣಿಕ ಸಂಕಥನವಾದ ಈಡಿಪಸ್ ಕತೆ ಮತ್ತು ಪುರಾಣಗಳನ್ನು ವಿರೋಽಸುತ್ತೇವೆ ಎನ್ನುತ್ತಲೇ ಪೌರಾಣಿಕ ಸಂಕಥನವನ್ನು ಅಪ್ಪಿಕೊಂಡ ಈ ಗುಂಪಿನ ವ್ಯಥೆಯ ನಡುವಿನ ಸೇತುಬಂಧವು ರಂಗಭೂಮಿಯ ನಾಟಕವೇ ಆಗಿದೆ! ಎಷ್ಟೇ ಆಗಲಿ ಜಗವೇ ನಾಟಕರಂಗವಲ್ಲವೇ!? ಕಾಲಾಂತರದಲ್ಲಿ ಭಾರತೀಯ ವಿಶ್ವವಿದ್ಯಾಲಯಗಳಲ್ಲಿ ತಪ್ಪು ತಿಳಿವಳಿಕೆಯ ಸಿದ್ಧಾಂತಗಳು ಹೆಪ್ಪುಗಟ್ಟಿದಂತೆ ಅರೆತಿಳಿವಳಿಕೆಯ ಮಾರ್ಕ್ಸ್‌ವಾದ, ಕಮ್ಯುನಿಸ್ಟ್ ಸಿದ್ಧಾಂತಗಳು ಪ್ರಬಲವಾದವು. ‌

ಆಗ ಅಲ್ಲಿ ಕಲಿಯಲು ಹೋಗಿದ್ದ ಮಠಗಳ ಮರಿಗಳು ತಮ್ಮ ಪ್ರೊಫೆಸರರುಗಳ ಪ್ರಭಾವಳಿ ಗೊಳಗಾಗಿ ಮತಿಭ್ರಮಣಗೊಂಡರು. ಇದಕ್ಕೆ ಪದವಿ ಪಡೆಯಲೇಬೇಕಾದ ಒತ್ತಾಯವೋ, ಪ್ರೊಫೆಸರರ ಹಿಡಿತದೊತ್ತಾಯವೋ ಒಟ್ಟಾರೆ ಅವರು ಕಮ್ಯುನಿ ರಂಗದ ಗಾಢ ಪ್ರಭಾವ ಕ್ಕೊಳಗಾದರು.

ಇಂಥ ರಂಗ ಪ್ರಭಾವಳಿಯು ಕೆಲವು ವಿರಕ್ತರಲ್ಲಿ ಅನುರಕ್ತಿಯ ದುರಭಿಮಾನವನ್ನು ಬೆಳೆಸಿತು. ಇದರ ಪರಿಣಾಮವಾಗಿ, “ಪಂಚಪೀಠಗಳಿಗೇಕೆ ಎತ್ತರದ ಕುರ್ಚಿಗಳು, ಅಡ್ಡಪಲ್ಲಕ್ಕಿ ಮಹೋತ್ಸವ, ಕಿರೀಟ, ಪುರಪ್ರವೇಶ ಗೌರವ" ಎಂದು ಪ್ರಶ್ನಿಸಲಾರಂಭಿಸಿತು.

ವಿಪರ್ಯಾಸವೆಂದರೆ, ಈ ವಿರಕ್ತರು ತಾವು ಪಡೆದ ಡಾಕ್ಟರೇಟ್ ಪದವಿ, ವಿಶ್ವವಿದ್ಯಾಲಯ ಗಳಲ್ಲಿನ ಕುಲಪತಿ, ಉಪಕುಲಪತಿ, ಕುಲಸಚಿವ, ರಿಜಿಸ್ಟ್ರಾರ್, ಮುಖ್ಯಸ್ಥ, ಪ್ರಾಧ್ಯಾಪಕ, ಅಧ್ಯಾಪಕ, ಅಧಿಕಾರಿ, ಗುಮಾಸ್ತ, ಜವಾನರ ನಡುವಿನ ಅಧಿಕಾರಶಾಹಿಯನ್ನು ಕಂಡು ಒಪ್ಪಿ ಅಪ್ಪಿದ್ದರೂ, ಖುದ್ದು ತಮ್ಮ ಮಠದಲ್ಲಿ ಎತ್ತರದ ಕುರ್ಚಿಯ ಮೇಲೆ ಕುಳಿತೇ ಅಧಿಕಾರ ಚಲಾಯಿಸುತ್ತಿದ್ದರೂ ವೀರಶೈವ ಮಠೀಯ ವ್ಯವಸ್ಥೆಯಲ್ಲಿ ಮಾತ್ರ ಈ ಜಗದ್ಗುರು, ಪೀಠಾಧಿ ಪತಿ, ಮಠಾಧೀಶ, ಚರಂತಿ ಎಂಬುದು ಅಸಮಾನತೆಯ ಪರಮಾವಧಿ ಎನಿಸಿ ಅನುರಕ್ತ ಅಸೂಯೆಯು ಭುಸುಗುಡತೊಡಗಿತು. ‘ಕೈಗೆಟುಕದ ದ್ರಾಕ್ಷಿ ಸದಾ ಹುಳಿ’ಯೇ ಅಲ್ಲವೇ!

ಪ್ರಜಾಪ್ರಭುತ್ವದ ಸಂಸತ್ತು, ಪರಿಷತ್ತು, ವಿಧಾನಸಭೆಗಳಲ್ಲಿ ಸಭಾಧ್ಯಕ್ಷರಿಗೆ ಎತ್ತರದ ಕುರ್ಚಿ, ಸರಕಾರಿ ಸಂಹಿತೆ (protocol), ಸರಕಾರಿ ಮರ್ಯಾದೆ ಇದ್ದಂತೆಯೇ ವೀರಶೈವ ಧಾರ್ಮಿಕ ವ್ಯವಸ್ಥೆಯು ಪಂಚಪೀಠಗಳಿಗೆ ಎತ್ತರದ ಕುರ್ಚಿ ಕೊಟ್ಟಿದೆ.

ಇದೇ ರೀತಿಯ ಎತ್ತರದ ಸ್ಥಾನ ಮತ್ತು ಆಸನಗಳು ವಿಶ್ವದ ಅನೇಕ ಧರ್ಮಗಳಲ್ಲಿದೆ. ಆದರೆ ವಾಸ್ತವಿಕವಾಗಿ ಅನುರಕ್ತರಾಗಿ ಪರಿವರ್ತಿತಗೊಂಡಿದ್ದ ವಿದ್ಯಾವಂತ (?) ವಿರಕ್ತರ ರಾಗಾ ದ್ವೇಷವು ಇಂಥ ವಾಸ್ತವಾಂಶಗಳನ್ನು ಕಡೆಗಣಿಸಿ ಹೆಡೆಯೆತ್ತಿ ವಿಷ ಕಕ್ಕಲಾರಂಭಿಸಿತು. ಇದರ ಆರಂಭವನ್ನು ಸ್ಪಷ್ಟವಾಗಿ ಗುರುತಿಸಿ ಮೇಲಿನ ಎಲ್ಲಾ ನಿದರ್ಶನಗಳನ್ನು ಗಮನ ದಲ್ಲಿಟ್ಟುಕೊಂಡು ವಿಶ್ಲೇಷಿಸುತ್ತಾ ನೋಡೋಣ.

ಹಿಂದಿನ ಅಂಕಣಗಳಲ್ಲಿ ಪ್ರಕಾಂಡ ಪಂಡಿತರು, ಸಂಶೋಧನಾ ಪ್ರವೀಣರು ಆದ ಕುಂದೂರು ಮಠದ ಇಮ್ಮಡಿ ಶಿವಬಸವ ಸ್ವಾಮಿಗಳು, ‘ಸಾಯಣ ಮಾಧವ ಪ್ರಣೀತರು ಸಂಸ್ಕೃತದಲ್ಲಿ ರಚಿಸಿರುವ ಸರ್ವದರ್ಶನ ಸಂಗ್ರಹ’ವನ್ನು 1976ರಲ್ಲಿ ಕನ್ನಡಕ್ಕೆ ಅನುವಾದಿಸಿ, ವಿಶ್ಲೇಷಿಸಿ, “ಮಾಹೇಶ್ವರರು ಶೈವಾಗಮಸಿದ್ಧಾಂತದ ತತ್ವವನ್ನು ಸರಿಯಾಗಿ ಮನನ ಮಾಡಿ, (ಜೀವಿಗಳ) ಕರ್ಮಸಾಪೇಕ್ಷನಾದ ಪರಮೇಶ್ವರನೇ (ಜಗತ್ತಿಗೆ) ಕಾರಣ ಎಂದಂಗೀಕರಿಸುತ್ತಾ- ಪತಿ, ಪಶು ಮತ್ತು ಪಾಶ ಎಂಬುದಾಗಿ ತತ್ವಗಳು ಮೂರು- ಎಂಬ ಪಾಶುಪತಕ್ಕಿಂತ ಭಿನ್ನವಾದ ಸಿದ್ಧಾಂತವನ್ನು ಮಂಡಿಸುತ್ತಾರೆ.

ಆದ್ದರಿಂದಲೇ ಆಗಮತತ್ವವಿದರು: ಜಗದ್ಗುರುವಾದ (ಶಿವನು) ಮೂರು ಪದಾರ್ಥಗಳನ್ನು ಮತ್ತು ನಾಲ್ಕು ಪಾದಗಳಿಂದ (ವಿದ್ಯಾ, ಕ್ರಿಯಾ, ಯೋಗ ಮತ್ತು ಚರ್ಯಾ) ಕೂಡಿರುವ ಮಹಾತಂತ್ರವನ್ನೂ ಒಂದೇ ಸೂತ್ರದಲ್ಲಿ ಸಂಕ್ಷೇಪವಾಗಿ ಹೇಳಿ, ಮತ್ತೆ ಅದನ್ನು ವಿಸ್ತಾರ ವಾಗಿ ನಿರೂಪಿಸಿದ್ದಾರೆ" ಎಂದು ಎಲ್ಲ ದರ್ಶನಗಳ ಸಾರವನ್ನು ಸಮೀಕರಿಸಿ ಹಿಂದೂ ವೀರಶೈವ ಲಿಂಗವಂತ ಸಮನ್ವಯವನ್ನು ಮೆರೆದ ಬಗ್ಗೆ ಓದಿದ್ದಿರಷ್ಟೇ.

ಕಾಲಾಂತರದಲ್ಲಿ ಲೋಕಾನುಭವದಿಂದ ಪಕ್ವಗೊಂಡು ಮಾಗಿದ ಶ್ರೀ ಇಮ್ಮಡಿ ಶಿವಬಸವ ಸ್ವಾಮಿಗಳು ಕಾರ್ಲ್ ಮಾರ್ಕ್ಸನ To leave error unrefuted is to encourage intelle ctual immorality ಅಂದರೆ, “ತಪ್ಪನ್ನು ಖಂಡಿಸದೆ ಬಿಡುವುದು ಬೌದ್ಧಿಕ ಅನೀತಿಯನ್ನು ಪ್ರೋತ್ಸಾಹಿಸುವುದಾಗಿದೆ" ಎಂಬ ಧ್ಯೇಯೋದ್ದೇಶವನ್ನು ಆವಾಹಿಸಿಕೊಂಡು ಮಾರ್ಕ್ಸ್ ಉದ್ಘೋಷವನ್ನು ಉದ್ಘೋಷಿಸಿಕೊಂಡು ‘ಸಿದ್ಧಾಂತ ಶಿಖಾಮಣಿ ಹಾಗೂ ಶ್ರೀಕರಭಾಷ್ಯ: ನಿಜದ ನಿಲುವು’ ಎಂಬ ಕೃತಿಯನ್ನು ರಚಿಸಿದರು.

ಈ ಕೃತಿಯಲ್ಲಿ ಸಿದ್ಧಾಂತ ಶಿಖಾಮಣಿಯು ಒಂದು ವಿವಾದಿತ ಗ್ರಂಥವೆಂದು ಮತ್ತು ಶ್ರೀಕರ ಭಾಷ್ಯವೊಂದು ಖೊಟ್ಟಿ ಗ್ರಂಥವೆಂದು ಸಂಶೋಧನೆ ಮಂಡಿಸಿದ್ದಾರೆ.

ಸರ್ವದರ್ಶನ ಸಂಗ್ರಹದ ನಿರೂಪಣೆ ಮತ್ತು ವ್ಯಾಖ್ಯಾನದಲ್ಲಿ ಉದಾರ ಧಾರ್ಮಿಕ ನಿಲುವು ಹೊಂದಿದ್ದ ಶ್ರೀಗಳು, “ನಿಜದ ನಿಲುವು, ಕಾರ್ಲ್ ಮಾರ್ಕ್ಸ್, ತಪ್ಪನ್ನು ಖಂಡಿಸದೆ ಬಿಡುವುದು ಅನೀತಿ" ಎಂಬ ಹುಲ್ಲುಕಡ್ಡಿಗಳನ್ನು ತಬ್ಬಿ ಆತುಕೊಂಡಿರುವುದೇ ಉರುಳುತ್ತಿರುವ ಮತ್ತವರ ಮಾಗಿದ ಮಾನಸಿಕ ತುಮುಲದ ಕರೆಗಂಟೆಯಾಗಿ ಈ ಕೃತಿಯ ಒಳಹರಿವಾಗಿದೆ.

ಪಂಡಿತೋತ್ತಮರು ಹೀಗೆ ಇತಿಹಾಸಕ್ಕೆ ಅಪಸವ್ಯಗಳ ಲೇಪನಗೈದರೆ ಉಳಿದ ಪಂಡಿತೋ ತ್ತಮರು ಕಟುವಾಗಿ ಸಾಕ್ಷಿ ಸಮೇತ ಪ್ರತ್ಯುತ್ತರ ಕೊಡದೇ ಇರುವರೇ!

ಇಮ್ಮಡಿ ಶಿವಬಸವ ಶ್ರೀಗಳಷ್ಟೇ ಪ್ರಕಾಂಡ ಪಂಡಿತರಾದ ಖ್ಯಾತ ಸಂಶೋಧಕರಾದ ಎಂ. ಶಿವಕುಮಾರ ಸ್ವಾಮಿಗಳು ತಮ್ಮ ‘ವೀರಶೈವ ಭವ್ಯ ಪರಂಪರೆ’ ಕೃತಿಯಲ್ಲಿ ಇಮ್ಮಡಿ ಶಿವಬಸವ ಸ್ವಾಮಿಗಳ ನಿಜದ ನಿಲುವಿಗೆ ಉತ್ತರವಾಗಿ ಒಂದು ಅಧ್ಯಾಯವನ್ನೇ ಬರೆದಿ‌ ದ್ದಾರೆ.

ಈ ಅಧ್ಯಾಯದ ಹೆಸರೇ, “ಡಾ. ಶ್ರೀ ಇಮ್ಮಡಿ ಶಿವಬಸವ ಸ್ವಾಮಿಗಳ ‘ಸಿದ್ಧಾಂತ ಶಿಖಾಮಣಿ ಹಾಗೂ ಶ್ರೀಕರಭಾಷ್ಯ: ನಿಜದ ನಿಲವು’ ಅದಕ್ಕೆ ಉತ್ತರ" ಎಂದಿದೆ. ಈ ಭಾಗದಲ್ಲಿ ಶಿವ ಕುಮಾರಸ್ವಾಮಿಗಳು ಕುಂದೂರು ಶ್ರೀಗಳ ನಿಜದ ನಿಲುವೆಂಬ ಸಂಶೋಧನಾ ಪ್ರಮೇಯ ವನ್ನು ತಕ್ಕ ಭಾಷಾಸೂತ್ರಗಳೊಂದಿಗೆ ಸುಳ್ಳಿನ ಒಲವೆಂದು ಸಾಬೀತು ಮಾಡಿದ್ದಾರೆ.

ಇದೇ ರೀತಿ ಇತರೆ ಪಂಡಿತರೂ ಪ್ರತಿ ಲೇಖನಗಳನ್ನು ಸಾಕ್ಷ್ಯ ಸಮೇತ ಬರೆದು ಇಮ್ಮಡಿ ಶ್ರೀಗಳ ಈರ್ಷ್ಯೆಯ ಒಲವನ್ನು ಅಂದು ಖಂಡಿಸಿದ ಕಾರಣ ಇಮ್ಮಡಿ ಶ್ರೀಗಳ ನಿಲುವು ಮುಗ್ಗರಿಸಿ ಬಿದ್ದಿತ್ತು. ಅಂದು ತಣ್ಣಗಾಗಿದ್ದ ಇಮ್ಮಡಿ ಸುಳ್ಳಿನ ಒಲವನ್ನು ಇಂದಿನ ಪ್ರತ್ಯೇಕಿಗಳು ಮತ್ತೆ ನಿಜದ ನಿಲುವೆಂದು ತಮ್ಮ ಅತ್ಯಾಪ್ತ ಜರ್ಮನ್ ಗೋಬೆಲ್ಸ್ ತಂತ್ರಕ್ಕೆ ಶರಣೆಂದು ಸಂಯೋಜಿಸಿ ಮತ್ತೆ ಮುನ್ನೆಲೆಗೆ ತರುತ್ತಿದ್ದಾರೆ.

ಹಾಗಾಗಿ ಎಂ. ಶಿವಕುಮಾರಸ್ವಾಮಿಗಳ ಉತ್ತರವನ್ನು ಮತ್ತೊಮ್ಮೆ ಪರಿಶೀಲಿಸೋಣ. ಅದು ಹೀಗಿದೆ: “ಡಾ. ಶ್ರೀ ಇಮ್ಮಡಿ ಶಿವಬಸವ ಸ್ವಾಮಿಗಳು ಬರೆದ ‘ಸಿದ್ಧಾಂತ ಶಿಖಾಮಣಿ ಹಾಗೂ ಶ್ರೀಕರಭಾಷ್ಯ: ನಿಜದ ನಿಲುವು’ ಎಂಬ ಗ್ರಂಥವು ಬಿಡುಗಡೆಯಾದ ದಿನವೇ ಅದನ್ನು ತರಿಸಿಕೊಂಡು ಇಟ್ಟುಕೊಂಡಿದ್ದೆ. ಬೇರೆ ಕೆಲಸಗಳ ಒತ್ತಡದಲ್ಲಿ ಅದನ್ನು ಓದುವುದಕ್ಕೆ ಆಗಿರಲಿಲ್ಲ.

‘ಸ್ವಪ್ನಲೋಕ’ ಅಕ್ಟೋಬರ್ ೨೦೦೩ರ ಸಂಚಿಕೆಯಲ್ಲಿ ಪ್ರೊ.ಜಿ.ಎಸ್.ಸಿದ್ದಲಿಂಗಯ್ಯನವರು ಆ ಪುಸ್ತಕದ ಬಗ್ಗೆ ಮಾಡಿದ ವಿಮರ್ಶೆಯನ್ನು ಓದಿದ ಮೇಲೆ ಆ ಪುಸ್ತಕವನ್ನು ಓದಲು ತೊಡಗಿದೆ. ಓದಿ ಮುಗಿಸುವ ಹೊತ್ತಿಗೆ ಅವರ ‘ನಿಜದ ನಿಲುವು’ ಯಾವುದು ಎಂಬುದು ಸಂಪೂರ್ಣವಾಗಿ ಅರ್ಥವಾಯಿತು. ಅದನ್ನೇ ಪ್ರಸ್ತುತ ಲೇಖನದಲ್ಲಿ ತೆರೆದಿಡುವ ಪ್ರಯತ್ನ ವನ್ನು ಮಾಡಿದ್ದೇನೆ. ಏಕೆಂದರೆ ಶ್ರೀಗಳು ಹೇಳಿದಂತೆ ’intellectual immorality ’ ಆಗಬಾರ ದಲ್ಲ!

“ಸಿದ್ಧಾಂತ ಶಿಖಾಮಣಿ ಎಷ್ಟು ಪ್ರಸಿದ್ಧಿ ಪಡೆದಿರುವ ಗ್ರಂಥವೋ ಅಷ್ಟೇ ವಿವಾದಕ್ಕೆ ಸಿಲುಕಿ ರುವ ಕೃತಿಯೂ ಆಗಿದೆ" ಎಂದು ಶ್ರೀ ಸ್ವಾಮಿಗಳು ತಮ್ಮ ‘ಮೊದಲ ಮಾತು’ವಿನಲ್ಲಿ ಹೇಳಿದ್ದಾರೆ.

ವಿವಾದವನ್ನು ಸೃಷ್ಟಿಸುವವರು ಇರುವವರೆಗೆ ವಿವಾದವು ಇದ್ದೇ ಇರುತ್ತದೆ. ಶ್ರೀ ಸ್ವಾಮಿ ಗಳು ಅದನ್ನು ಅತ್ಯಂತ ವ್ಯವಸ್ಥಿತವಾಗಿ ಮುಂದುವರಿಸಿದ್ದಾರೆ. “ಸಿದ್ಧಾಂತ ಶಿಖಾಮಣಿಯ ಕಾಲದ ಬಗ್ಗೆ ನನ್ನ ಅಭಿಪ್ರಾಯ ಸ್ಪಷ್ಟವಾಗಿದೆ. ಅದು ಕ್ರಿ.ಶ. ೮ನೆಯ ಶತಮಾನಕ್ಕಿಂತ ಹಿಂದಿನದಲ್ಲ ಮತ್ತು ಎರಡು ಸಾವಿರ ವರ್ಷಗಳಷ್ಟು ಪ್ರಾಚೀನವೂ ಅಲ್ಲ.

ಆದರೆ ಅದು ಬಸವಾದಿ ಶರಣರ ಕಾಲಕ್ಕಿಂತ ಹಿಂದಿನದು. ಇದರ ಬಗ್ಗೆ ಸಂದರ್ಭೋಚಿತ ವಾಗಿ ಚರ್ಚೆ ಮಾಡುತ್ತೇನೆ" ಎಂದು ಪೀಠಿಕೆ ಹಾಕುತ್ತಾ ತಮ್ಮ ಉತ್ತರವನ್ನು ಸಂಶೋಧನಾ ನೆಲೆಯಲ್ಲಿ ತಾರ್ಕಿಕವಾಗಿ ಮಂಡಿಸುತ್ತಾರೆ. ಏಕೆಂದರೆ ತರ್ಕವೇ ಸಕಲ ಅಧ್ಯಾತ್ಮಗಳ ಜೀವಾಳವಾಗಿದೆ!

(ಮುಂದುವರಿಯುವುದು)

(ಲೇಖಕರು ಶಿಕಾಗೊ ನಿವಾಸಿ ಹಾಗೂ ಸಾಹಿತಿ)