ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Vishweshwar Bhat Column: ಸಾರ್ವಜನಿಕ ಪ್ರಾಮಾಣಿಕತೆ

ಹೆದ್ದಾರಿಗಳ ಮೇಲೆ ಸಂಚಾರ ಸುಗಮವಾಗಿಡಲು, ವಾಹನ ಚಾಲಕರನ್ನು ತಡೆಯದೇ ಸರಾಗವಾಗಿ ಹೋಗಲು ಅವಕಾಶ ನೀಡಲಾಯಿತು. ವಾಹನ ಚಾಲಕರಿಗೆ ‘ಮೊದಲು ನೀವು ಸಂಚರಿಸಿ, ನಂತರ ಟೋಲ್ ಹಣವನ್ನು ಆನ್‌ಲೈನ್‌ನಲ್ಲಿ ಪಾವತಿಸಬಹುದು’ ಎಂದು ತಿಳಿಸಲಾಯಿತು. ಹೀಗೆ ನಿರ್ಬಂಧ ವಿಲ್ಲದೇ ಹೆದ್ದಾರಿಯಲ್ಲಿ ಸಂಚರಿಸಿದವರು ಟೋಲ್ ಪಾವತಿಸಲೇಬೇಕು ಎಂಬ ಒತ್ತಾಯವಿರಲಿಲ್ಲ

ಸಾರ್ವಜನಿಕ ಪ್ರಾಮಾಣಿಕತೆ

ಸಂಪಾದಕರ ಸದ್ಯಶೋಧನೆ

ನಾನು ಜಪಾನಿನಲ್ಲಿದ್ದಾಗ ನಮ್ಮ ಗೈಡ್ ಹೇಳಿದ ಒಂದು ಪ್ರಸಂಗ ಕೇಳಿ ಆಶ್ಚರ್ಯವಾಯಿತು. 2024 ರ ಅಕ್ಟೋಬರ್‌ನಲ್ಲಿ ಜಪಾನಿನಲ್ಲಿ ಇಟಿಎಸ್ ( ETC- Electronic Toll Collection) ವ್ಯವಸ್ಥೆಯಲ್ಲಿ ಹಠಾತ್ ತಾಂತ್ರಿಕ ದೋಷ ಉಂಟಾಗಿ ಕೆಲವು ಹೆದ್ದಾರಿ ಟೋಲ್ ಗೇಟ್‌ಗಳು ಸುಮಾರು 38 ಗಂಟೆಗಳ ಕಾಲ ಸಂಪೂರ್ಣವಾಗಿ ಸ್ಥಗಿತವಾದವು. ಈ ಅನಿರೀಕ್ಷಿತ ತಾಂತ್ರಿಕ ವೈಫಲ್ಯದ ಕಾರಣದಿಂದಾಗಿ ಎಲ್ಲ ಟೋಲ್ ಗೇಟ್ ಗಳ ದ್ವಾರಗಳನ್ನು ತೆರೆಯಬೇಕಾಯಿತು. ಅಷ್ಟೇ ಅಲ್ಲ, ವಾಹನ ಚಾಲಕರಿಗೆ ಉಚಿತ ವಾಗಿ ಸಂಚಾರ ಮಾಡಲು ಅವಕಾಶ ನೀಡಲಾಯಿತು. ಯಾವ ಕಾರಣ ಕ್ಕೂ ಸಂಚಾರ ವ್ಯತ್ಯಯ ವಾಗಬಾರದು ಎಂಬ ಅಂಶಕ್ಕೆ ಪ್ರಾಮುಖ್ಯ ನೀಡಲಾಯಿತು. ಅದೃಷ್ಟವ ಶಾತ್, ಈ ತುರ್ತು ಪರಿಸ್ಥಿತಿ ಯನ್ನು ಯಾವುದೇ ಗೊಂದಲವಿಲ್ಲದೇ ಅತ್ಯಂತ ಸಮರ್ಥವಾಗಿ ನಿಭಾಯಿಸಲಾಯಿತು.

ಇದರಿಂದ ವಾಹನ ಚಾಲಕರಿಗೆ ಯಾವ ಸಮಸ್ಯೆ ಆಗಲಿಲ್ಲ. ಜಪಾನಿನ ಹೆದ್ದಾರಿ ವ್ಯವಸ್ಥೆ ಬಹು ಮುಖ್ಯವಾಗಿ ಇಲೆಕ್ಟ್ರಾನಿಕ್ ಟೋಲ್ ಕಲೆಕ್ಷನ್ ( ETC ) ಮೇಲೆ ಅವಲಂಬಿತವಾಗಿದೆ. ಕಾರುಗಳಲ್ಲಿ ಇರುವ ಸಾಧನ ( Device) ಟೋಲ್ ಗೇಟ್‌ಗಳ ಬಳಿ ಬರುವ ವೇಳೆ ಸ್ವಯಂ ಚಾಲಿತವಾಗಿ ಹಣ ಪಾವತಿ ಮಾಡುವ ವ್ಯವಸ್ಥೆ ಇದಾಗಿದೆ.

ಇದನ್ನೂ ಓದಿ: Vishweshwar Bhat Column: ನಮ್ಮಂತೆ ಅವರೂ ದ್ವೀಪ ನಿರ್ಮಿಸುತ್ತಿದ್ದಾರೆ, ಆದರೆ ಎಷ್ಟು ವ್ಯತ್ಯಾಸ ?

ಆದರೆ ಅಕ್ಟೋಬರ್‌ನಲ್ಲಿ ಈ ವ್ಯವಸ್ಥೆಯ ಉಸ್ತುವಾರಿ ನೋಡಿಕೊಳ್ಳುತ್ತಿರುವ ‘ನೆಕ್ಸ್ ಕೋ’ ಕಂಪನಿಯ ಸರ್ವರ್‌ಗಳಲ್ಲಿ ತಾಂತ್ರಿಕ ದೋಷ ಉಂಟಾದ ಕಾರಣ, ಈ ವ್ಯವಸ್ಥೆ ಸಂಪೂರ್ಣವಾಗಿ ವಿಫಲ ವಾಯಿತು. ಪರಿಣಾಮವಾಗಿ, ದೇಶಾದ್ಯಂತ ಎಲ್ಲ ಹೆದ್ದಾರಿ ಟೋಲ್ ಗೇಟ್‌ಗಳು ಕೈಚಾಲಿತ‌ ವಾಗಿ (ಮ್ಯಾನ್ಯುಯಲ) ಕಾರ್ಯನಿರ್ವಹಿಸಬೇಕಾದ ಅವಶ್ಯಕತೆ ಎದುರಾಯಿತು. ಈ ತಾಂತ್ರಿಕ ದೋಷದಿಂದ ಅನೇಕ ಹೆದ್ದಾರಿಗಳಲ್ಲಿ ವಾಹನ ಸಂಚಾರ ಸ್ತಬ್ಧವಾಗುವ ಸಾಧ್ಯತೆ ಇದ್ದರೂ, ಅಧಿಕಾರಿಗಳು ತಕ್ಷಣ ಟೋಲ್ ಗೇಟ್‌ಗಳ ದ್ವಾರಗಳನ್ನು ತೆರೆದು, ವಾಹನಗಳ ಸಂಚಾರಕ್ಕೆ ಅನುವು ಮಾಡಿಕೊಡಲು ಆದೇಶಿಸಿದರು.

ಹೆದ್ದಾರಿಗಳ ಮೇಲೆ ಸಂಚಾರ ಸುಗಮವಾಗಿಡಲು, ವಾಹನ ಚಾಲಕರನ್ನು ತಡೆಯದೇ ಸರಾಗವಾಗಿ ಹೋಗಲು ಅವಕಾಶ ನೀಡಲಾಯಿತು. ವಾಹನ ಚಾಲಕರಿಗೆ ‘ಮೊದಲು ನೀವು ಸಂಚರಿಸಿ, ನಂತರ ಟೋಲ್ ಹಣವನ್ನು ಆನ್‌ಲೈನ್‌ನಲ್ಲಿ ಪಾವತಿಸಬಹುದು’ ಎಂದು ತಿಳಿಸಲಾಯಿತು. ಹೀಗೆ ನಿರ್ಬಂಧ ವಿಲ್ಲದೇ ಹೆದ್ದಾರಿಯಲ್ಲಿ ಸಂಚರಿಸಿದವರು ಟೋಲ್ ಪಾವತಿಸಲೇಬೇಕು ಎಂಬ ಒತ್ತಾಯವಿರಲಿಲ್ಲ.

ಅದು ಕಡ್ಡಾಯವೂ ಆಗಿರಲಿಲ್ಲ. ಯಾರಾದರೂ ಹಣ ಪಾವತಿಸುವುದಿದ್ದರೆ, ಪಾವತಿಸಬಹುದು ಎಂದು ಸೂಚಿಸಲಾಗಿತ್ತು. ಅಚ್ಚರಿಯ ವಿಷಯವೆಂದರೆ, 24 ಸಾವಿರಕ್ಕಿಂತ ಹೆಚ್ಚು ಮಂದಿ ಸ್ವಇಚ್ಛೆ ಯಿಂದ ಆನ್‌ಲೈನ್ ಮೂಲಕ ಪಾವತಿಸಿದ್ದರು. ಇದರಿಂದಾಗಿ ಜಪಾನಿನ ನಾಗರಿಕ ಸಂಸ್ಕೃತಿಯಲ್ಲಿ ಅಡಕವಾಗಿರುವ ನಿಷ್ಠೆ, ಪ್ರಾಮಾಣಿಕತೆ ಮತ್ತು ಸಾಮೂಹಿಕ ಬದ್ಧತೆ ಮತ್ತೊಮ್ಮೆ ಸಾಬೀತಾಯಿತು. ಅವರು ಹಣ ನೀಡದಿದ್ದರೆ ಏನೂ ಆಗುತ್ತಿರಲಿಲ್ಲ.

ಅವರ ಮೇಲೆ ಯಾವ ಕ್ರಮವನ್ನೂ ಕೈಗೊಳ್ಳುತ್ತಿರಲಿಲ್ಲ. ಆದರೂ ಅವರು ಸ್ವಯಂಪ್ರೇರಿತರಾಗಿ ಹಣ ಪಾವತಿಸುವ ಮೂಲಕ ತಮ್ಮ ಪ್ರಾಮಾಣಿಕತೆ ಮತ್ತು ನಾಗರಿಕ ಕರ್ತವ್ಯವನ್ನು ಮೆರೆದರು. ಜಪಾನಿನ ಮುಖ್ಯ ಶಕ್ತಿ ಮತ್ತು ಅಂತಃಸತ್ವವಿರುವುದು ನಾಗರಿಕರ ಶಿಸ್ತು, ಪ್ರಾಮಾಣಿಕತೆ ಮತ್ತು ವಿಶ್ವಾಸದಲ್ಲಿ. ಅಲ್ಲಿ ‘ಗುಂಪಿನಲ್ಲಿ ಗೋವಿಂದ’ ಸಂಸ್ಕೃತಿಗೆ ಆಸ್ಪದವೇ ಇಲ್ಲ.

ಶಿಕ್ಷಣ, ಸಂಸ್ಕೃತಿ ಮತ್ತು ಸಾಮಾಜಿಕ ನೀತಿಗಳ ಮೂಲಕ ಅವರು ಮಕ್ಕಳಿಗೆ ಎಳವೆಯ ಪ್ರಾಮಾ ಣಿಕತೆ ಮತ್ತು ಜವಾಬ್ದಾರಿಯನ್ನು ಕಲಿಸುವುದು ಈ ನಿದರ್ಶನದಲ್ಲೂ ಮತ್ತೊಮ್ಮೆ ಕಾರ್ಯರೂ ಪಕ್ಕೆ ಬಂದಿತು. ಪ್ರಾಮಾಣಿಕತೆಗೆ ಯಾವುದೇ ನಿಯಮ ಅಥವಾ ಬಲವಂತವಿಲ್ಲ. ಅದು ಯಾರದ್ದೇ ಒತ್ತಡಕ್ಕೆ ಮಣಿಯುವುದಲ್ಲ. ಅದು ಪ್ರತಿಯೊಬ್ಬ ಪ್ರಜೆಯ ಆದ್ಯ ಕರ್ತವ್ಯ. ಅದು ವ್ಯಕ್ತಿಯ ಅಂತ ರಂಗದಲ್ಲಿ ಅಡಕವಾಗಿರಲೇಬೇಕಾದ ಆದರ್ಶ ಗುಣ. ಜನರು ತಮ್ಮಿಚ್ಛೆಯಿಂದ ಹಣ ಪಾವತಿಸಿದ ಈ ಪ್ರಸಂಗ ಇಡೀ ವಿಶ್ವದ ಗಮನ ಸೆಳೆಯಿತು. ಈ ಘಟನೆಯ ನಂತರ, ಜಪಾನಿನ ಸಾಮಾಜಿಕ ಮಾಧ್ಯಮ ಗಳಲ್ಲಿ ಈ ಪ್ರಾಮಾಣಿಕ ನಡೆಯ ಬಗ್ಗೆ ವ್ಯಾಪಕ ಶ್ಲಾಘನೆ ವ್ಯಕ್ತವಾಯಿತು.

‘ಇದು ನಮ್ಮ ದೇಶದ ನೈತಿಕ ಶಕ್ತಿಯ ಸಾರ್ವಜನಿಕ ಪ್ರಕಟಣೆಯ ಸಂಕೇತ’ ಎಂದು ಅನೇಕರು ಅಭಿ ಪ್ರಾಯಪಟ್ಟರು. ಈ ಘಟನೆ ಕೇವಲ ತಾಂತ್ರಿಕ ವೈಫಲ್ಯವಷ್ಟೇ ಅಲ್ಲ, ಜನಸಾಮಾನ್ಯರ ನಡವಳಿಕೆ ಯ ವಿಶಿಷ್ಟ ಅಭಿವ್ಯಕ್ತಿಯೂ ಹೌದು. ಇದು ಕೇವಲ ಒಂದು ತಾಂತ್ರಿಕ ಸಮಸ್ಯೆಯ ಪರಿಹಾರವಲ್ಲ, ಬದಲಿಗೆ ಸಮಾಜದ ಪ್ರಾಮಾಣಿಕತೆಯ ಪರೀಕ್ಷೆ ಕೂಡ ಆಗಿತ್ತು.