Dr Vijay Darda Column: ದೀರ್ಘಾಯಸ್ಸಿಗಿಂತ ಗುಣಮಟ್ಟದ ಬದುಕು ಮುಖ್ಯ
ಮನುಷ್ಯ ಹೆಚ್ಚೆಚ್ಚು ವರ್ಷಗಳ ಕಾಲ ಬದುಕಿದ್ದಷ್ಟೂ ಅವನು ಜಗತ್ತಿಗೆ ನೀಡುವ ಕೊಡುಗೆಗಳ ಬಗ್ಗೆ ಹೆಚ್ಚೆಚ್ಚು ಬದ್ಧತೆಯನ್ನು ಬೆಳೆಸಿಕೊಳ್ಳುತ್ತಾ ಹೋಗಬೇಕು. ಹೊಸತನ್ನು ಸೃಷ್ಟಿಸಲು ಸದಾ ಉತ್ಸುಕ ನಾಗಿರಬೇಕು. ಇಲ್ಲದಿದ್ದರೆ ಬದುಕಿನ ಉದ್ದೇಶವೇ ಅಪೂರ್ಣವಾಗುತ್ತದೆ. ಹಾಗಂತ ನಾನು ಮನಸಾ ನಂಬಿದ್ದೇನೆ.


ಸಂಗತ
ಡಾ.ವಿಜಯ್ ದರಡಾ
ನಾನೀಗ 75ಕ್ಕೆ ಕಾಲಿಟ್ಟಿದ್ದೇನೆ. ಗಣಿತದ ದೃಷ್ಟಿಯಲ್ಲಿ ನೋಡಿದರೆ ಇದೊಂದು ವಯಸ್ಸಿನ ಲೆಕ್ಕಾ ಚಾರ. ನನ್ನ ಕುಟುಂಬದವರು, ಹಿತೈಷಿಗಳು ಮತ್ತು ನನ್ನನ್ನು ಪ್ರೀತಿಸುವವರು ಬಹಳ ಸಂತೋಷ ದಿಂದ ಇದಕ್ಕೆ ಅಮೃತ ಮಹೋತ್ಸವ ಎಂದು ಕರೆಯುತ್ತಿದ್ದಾರೆ! 75ನೇ ಹುಟ್ಟುಹಬ್ಬಕ್ಕೆ ಅಸಂಖ್ಯ ಶುಭ ಸಂದೇಶಗಳು ಬಂದಿವೆ. ಸುಂದರ ಹಾರೈಕೆಗಳನ್ನು ನೋಡಿ ನನ್ನ ಹೃದಯ ತುಂಬಿದೆ. ಅವರೆಲ್ಲರಿಗೂ ಧನ್ಯವಾದ ಹೇಳಲು ಶಬ್ದಗಳು ಸಾಲವು. ನಿಮ್ಮೆಲ್ಲರ ಪ್ರೀತಿಗೆ ಇದೋ ತಲೆಬಾಗಿ ವಂದಿಸುತ್ತೇನೆ ಎಂದಷ್ಟೇ ಹೇಳಬಲ್ಲೆ! ನನ್ನ ಬದುಕಿನ ಕಾಲಕೋಶದ ಕ್ಯಾನ್ವಾಸ್ ಮೇಲೆ ನಿಂತು ಹಿಂತಿರುಗಿ ನೋಡಿದರೆ ಯೌವನದಲ್ಲಿ ನಾನು ಹೊಲಿಯಲು ಆರಂಭಿಸಿದ ಸಂಬಂಧಗಳ ಪ್ರೀತಿಯ ತಂತುಗಳು ದೊಡ್ಡ ಪ್ರಮಾಣದಲ್ಲಿ ಇಂದು ಫಲ ನೀಡುತ್ತಿರುವುದು ಕಾಣಿಸುತ್ತದೆ. ಇಷ್ಟೂ ಕಾಲ ನಾನು ಇಡಿಯಾಗಿ ಬದುಕಿದ್ದೇನೆ. ನನ್ನ ನೆಲದ ಮಣ್ಣಿನ ಘಮವನ್ನು ಪ್ರೀತಿಸಿದ್ದೇನೆ. ಈ ಬದುಕಿ ಗೊಂದು ಪರಿಮಳವಿದೆ ಅಂತಾದರೆ ಅದು ನನ್ನ ಬಾಬೂಜಿ, ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಶ್ರೀ ಜವಾಹರಲಾಲ್ ದರಡಾ ಹಾಗೂ ನನ್ನ ತಾಯಿ ಶ್ರೀಮತಿ ವೀಣಾ ದೇವಿ ದರಡಾ ನೀಡಿದ ಕೊಡುಗೆ.
ಈವರೆಗೆ ಬದುಕಿನ ಅಸಂಖ್ಯ ಮಜಲುಗಳನ್ನು ನೋಡಿದ್ದೇನೆ. ನೂರಾರು ದಾರಿಯಲ್ಲಿ ಸಾಗಿದ್ದೇನೆ. ಭಾವನೆಗಳ ಜಗತ್ತಿನ ಅಗಾಧ ಆಳದಲ್ಲಿ ಒಂದಷ್ಟು ವ್ಯಾಪ್ತಿಯನ್ನಾದರೂ ಶೋಧಿಸುವ ಅದೃಷ್ಟ ನನ್ನದಾಗಿತ್ತು. ಕ್ರೀಡೆಯಲ್ಲಿ ನನ್ನ ಪರಿಶ್ರಮವನ್ನು ಒರೆಗೆ ಹಚ್ಚಿದ್ದೇನೆ. ಪತ್ರಿಕೋದ್ಯಮದ ಬೃಹತ್ ಸಾಗರದಲ್ಲಿ ಈಜಾಡಿದ್ದೇನೆ. ಸಾಮಾನ್ಯ ಜನರಿಗಾಗಿ ರಾಜಕೀಯಕ್ಕೂ ಕಾಲಿಟ್ಟು ನನ್ನ ಕೈಲಾದ ಸೇವೆ ಮಾಡಿದ್ದೇನೆ.
ಸುದೀರ್ಘ 18 ವರ್ಷಗಳ ಕಾಲ ನಾನು ಸಂಸತ್ ಸದಸ್ಯನಾಗಿದ್ದೆ. ಅಲ್ಲಿ ನಿಂತು ನಮ್ಮ ದೇಶವನ್ನು ಬಹಳ ಹತ್ತಿರದಿಂದ ಅರಿತುಕೊಳ್ಳುವ ಅವಕಾಶ ನನ್ನದಾಗಿತ್ತು. ಕಾಲಕಾಲಕ್ಕೆ ನನ್ನಿಂದ ಒಂದಷ್ಟು ಕವಿತಾ ಕುಸುಮಗಳು ಅರಳಿವೆ. ನನ್ನ ಕೈಯ ಕುಂಚವು ಭಾವನೆಗಳ ಕ್ಯಾನ್ವಾಸ್ ಮೇಲೆ ಆಗಾಗ ಒಂದಷ್ಟು ಬಣ್ಣಗಳನ್ನು ಚೆಲ್ಲಿದೆ! ಜೀವನ ಸಂಗಾತಿ ಜ್ಯೋತ್ಸ್ನಾ ನನ್ನನ್ನು ಸಂಗೀತದ ಅಧ್ಯಾತ್ಮ ಜಗತ್ತಿಗೆ ಪರಿಚಯಿಸಿದ್ದಾರೆ.
ಇದನ್ನೂ ಓದಿ: Dr Vijay Darda Column: ಜನರಲ್ ಮುನೀರ್, ನಮ್ಮ ಕೈಗೆ ಹಫೀಜ್, ಅಜರ್ ಕೊಟ್ಟುಬಿಡಿ !
ನಾನೇಕೆ ಈ ಖಾಸಗಿ ಸಂಗತಿಗಳನ್ನೆಲ್ಲಾ ಹೇಳಿಕೊಳ್ಳುತ್ತಿದ್ದೇನೆ ಎಂದು ನಿಮಗೆ ಆಶ್ಚರ್ಯ ವಾಗುತ್ತಿರ ಬಹುದು. ಏಕೆ ಇದನ್ನು ಹೇಳುತ್ತಿದ್ದೇನೆ ಅಂದರೆ, ಜಗತ್ತಿನಲ್ಲಿ ಬಹಳ ಕಡಿಮೆ ಜನರಿಗೆ ಬದುಕಿನ ಹಲವಾರು ವಿಭಿನ್ನ ಮುಖಗಳನ್ನು ನೋಡುವ ಅವಕಾಶ ಸಿಗುತ್ತದೆ. ಬಹುತೇಕ ಜನರಿಗೆ ಕುಟುಂಬದ ಹೊಟ್ಟೆ ಹೊರೆಯಲು ಕಷ್ಟಪಡುವುದೇ ಜೀವನದ ಬಹುಪಾಲು ಸಮಯವನ್ನು ತಿಂದು ಹಾಕುತ್ತದೆ. ಈ ವಿಷಯದಲ್ಲಿ ನಾನು ಅದೃಷ್ಟವಂತ.
ಹೀಗಾಗಿ ನನ್ನ ವೈವಿಧ್ಯಮಯ ಅನುಭವಗಳಲ್ಲಿ ಕೆಲವಾದರೂ ನಿಮಗೆ ಅನುಕೂಲವಾಗಬಹುದು ಎಂಬ ದೃಷ್ಟಿಯಿಂದ ಇದನ್ನು ಹಂಚಿಕೊಳ್ಳುತ್ತಿದ್ದೇನೆ. ಏಕೆಂದರೆ ಮನುಷ್ಯರು ಪರಸ್ಪರರ ಒಡನಾಟದಲ್ಲಿ ಜೀವನಾನುಭವಗಳನ್ನು ಸಂಪಾದಿಸುತ್ತಾರೆ. ನನ್ನ ಈವರೆಗಿನ 75 ವರ್ಷಗಳಲ್ಲಿ ಕನಿಷ್ಠ 55 ವರ್ಷಗಳನ್ನಾದರೂ ಸಾಕಷ್ಟು ಕ್ರಿಯಾಶೀಲವಾಗಿ ಕಳೆದಿದ್ದೇನೆ. ನನ್ನ ಪ್ರಕಾರ ನಾವು ಎಷ್ಟು ಸುದೀರ್ಘ ಕಾಲ ಬದುಕುತ್ತೇವೆ ಎಂಬುದು ಮುಖ್ಯವಲ್ಲ, ಅದರ ಬದಲು ಎಷ್ಟು ಗುಣ ಮಟ್ಟದ ಬದುಕನ್ನು ಜೀವಿಸಿದ್ದೇವೆ ಎಂಬುದು ಮುಖ್ಯ.
ಹಾಗಂತ ನಾನು ಮನಸಾ ನಂಬಿದ್ದೇನೆ. ಇದನ್ನು ಬರೆಯುವಾಗ ಬಾಲ್ಯದಲ್ಲಿ ಓದಿದ ಕಬೀರ ದಾಸರ ಪದ್ಯವೊಂದು ನೆನಪಾಗುತ್ತಿದೆ: “ದೊಡ್ಡವನಾದರೆ ಏನಾಯಿತು, ಖರ್ಜೂರದ ಮರವೂ ಬೆಳೆಯು ತ್ತದೆ, ದಣಿದ ಪ್ರಯಾಣಿಕನಿಗೆ ನೆರಳಿಲ್ಲ, ಹಣ್ಣೂ ಬಹಳ ಎತ್ತರದಲ್ಲಿದೆ"- ಖರ್ಜೂರದ ಮರದಂತೆ ಎತ್ತರಕ್ಕೆ ಬೆಳೆದರೆ ಏನು ಪ್ರಯೋಜನ? ಅದು ನಮಗೆ ನೆರಳು ಕೊಡುವುದಿಲ್ಲ. ಹಣ್ಣು ಕೊಯ್ದು ತಿನ್ನೋಣವೆಂದರೆ ತುಂಬಾ ಎತ್ತರದಲ್ಲಿರುತ್ತದೆ.
ಹಾಗೆಯೇ ನಾವು ಕೂಡ ತುಂಬಾ ದೊಡ್ಡ ಮನುಷ್ಯರಾಗಿ ಬೆಳೆದರೆ ಏನು ಪ್ರಯೋಜನ? ನಮ್ಮಿಂದ ನಾಲ್ಕು ಜನರಿಗೆ ಉಪಕಾರವಾಗಲಿಲ್ಲ ಅಂತಾದರೆ ಅದು ವ್ಯರ್ಥವಲ್ಲವೇ? ಬದುಕಿನ ಯಾವ ಹಂತ ದಲ್ಲಿ ಕಬೀರರ ಈ ಸಾಲುಗಳು ನನ್ನ ಜೀವನದ ಮಂತ್ರವಾಯಿತು ಎಂಬುದು ನೆನಪಿಲ್ಲ. ಬಹುಶಃ ಬಾಬೂಜಿಯವರ ಬದುಕನ್ನು ನೋಡಿ ನಾನೂ ಇದಕ್ಕೆ ಶರಣಾಗಿರಬೇಕು.
ತಂದೆಯವರು ತಮ್ಮ ಸಂಪೂರ್ಣ ಬದುಕನ್ನು ಸಮಾಜದ ಸೇವೆಗೆ ಒಪ್ಪಿಸಿಕೊಂಡಿದ್ದರು. ನಾನು ಕೂಡ ಅದೇ ದಾರಿಯನ್ನು ಅನುಸರಿಸುತ್ತಿದ್ದೇನೆ.ಯಾವತ್ತೂ ನಾನು ವೈಯಕ್ತಿಕ ಯಶಸ್ಸನ್ನು ಸಮಾಜ ಸೇವೆಯ ಆಧ್ಯಾತ್ಮಿಕ ಮಾರ್ಗವೆಂಬಂತೆ ನೋಡಿದ್ದೇನೆ. ಹೀಗಾಗಿ ನಾನು ಇವತ್ತಿನ ಯುವಕ ರಿಗೆ ಹೇಳುವುದಿಷ್ಟೆ; ನನ್ನ ಬದುಕಿನ ಟೈಮ್‌ಲೈನ್ ಅನ್ನು ನಿರ್ಧರಿಸಿರುವುದು ಕಾಲ.
ಅದು ಯಾರ ಕೈಯಲ್ಲೂ ಇಲ್ಲ. ಆದರೆ ಈ ಸುದೀರ್ಘ ಪ್ರಯಾಣದಲ್ಲಿ ನನ್ನೊಳಗೆ ಒಂದು ಮುಗ್ಧತೆ ಯನ್ನೂ, ಬಾಲ್ಯದ ಉತ್ಸಾಹವನ್ನೂ ಉಳಿಸಿಕೊಂಡು ಕ್ರಿಯಾಶೀಲವಾಗಿ ಬದುಕುತ್ತಾ ಬಂದಿದ್ದೇನೆ. ಇದರಲ್ಲಿ ನನ್ನ ಪ್ರಯತ್ನವೇ ಸಾಕಷ್ಟಿದೆ. ಎಷ್ಟು ವಯಸ್ಸಾದರೂ ಸರಿ, ನಿಮ್ಮೊಳಗೊಬ್ಬ ಬಾಲಕ ಎಲ್ಲಿಯವರೆಗೆ ಜೀವಂತವಾಗಿರುತ್ತಾನೋ ಅಲ್ಲಿಯ ವರೆಗೆ ನೀವು ಪರಿಶುದ್ಧವಾಗಿಯೂ, ಕ್ರಿಯಾಶೀಲ ವಾಗಿಯೂ ಬದುಕುತ್ತೀರಿ.
ಒಂದು ಮಗು ಯಾವತ್ತಾದರೂ ಸುಮ್ಮನೆ ಕುಳಿತುಕೊಳ್ಳುವುದನ್ನು ನೋಡಿದ್ದೀರಾ? ಇಲ್ಲ. ಅದು ಸದಾಕಾಲ ಚಟುವಟಿಕೆಯಲ್ಲಿ ಮುಳುಗಿರುತ್ತದೆ. ಹೊಸಹೊಸತನ್ನು ಕಲಿಯಲು ಹವಣಿಸು ತ್ತಿರುತ್ತದೆ. ನೀವು ಯುವಕರು ಈಗ ಅತ್ಯಂತ ಸುಧಾರಿತ ತಂತ್ರಜ್ಞಾನದ ಯುಗದಲ್ಲಿ ಬದುಕುತ್ತಿದ್ದೀರಿ. ಈ ಕಾಲದಲ್ಲಿಯೂ ಹೊಸತನ್ನು ಕಲಿಯುವ ಅವಕಾಶಗಳನ್ನು ಸದ್ಬಳಕೆ ಮಾಡಿಕೊಳ್ಳುವುದಿಲ್ಲ ಅಂತಾದರೆ ಬದುಕಿನ ಬಾಗಿಲನ್ನು ಮುಚ್ಚುತ್ತಿದ್ದೀರಿ ಎಂದರ್ಥ.
ಯಶಸ್ಸನ್ನು ನೋಡಬೇಕೆಂದರೆ ಕಲಿಯುವ ಬಯಕೆ ಸದಾಕಾಲ ಜೀವಂತವಾಗಿರಬೇಕು. ನನಗೆ ಯಾವಾಗಲೂ ಸ್ಪೂರ್ತಿ ಸಿಗುವುದು ಭಗವದ್ಗೀತೆಯಿಂದ. ಬದುಕಿನ ಉದ್ದೇಶ ಕೇವಲ ಯಶಸ್ಸು ಅಥವಾ ವೈಫಲ್ಯದಲ್ಲಿ ಇಲ್ಲ, ಬದಲಿಗೆ ಅದು ನಮ್ಮ ಕರ್ತವ್ಯವನ್ನು ಪ್ರಜ್ಞಾಪೂರ್ವಕವಾಗಿ ಮತ್ತು ನಿಸ್ವಾರ್ಥ ಮನೋಭಾವದಿಂದ ನೆರವೇರಿಸುವುದರಲ್ಲಿದೆ ಎಂದು ಕೃಷ್ಣ ಹೇಳುತ್ತಾನೆ.
ಅರ್ಜುನನಿಗೆ ಯುದ್ಧಕ್ಕೂ ಮುನ್ನ ವೈಯಕ್ತಿಕ ಲಾಭ ಅಥವಾ ನಷ್ಟದ ಮೋಹದಿಂದ ಮುಂದು ವರಿಯಬೇಡ ಎಂದೂ ಹೇಳುತ್ತಾನೆ. ಬದುಕಿನುದ್ದಕ್ಕೂ ನಾನು ಇದೇ ತತ್ವವನ್ನು ಪಾಲಿಸುತ್ತಾ ಬಂದಿದ್ದೇನೆ. ನಾನು ಬಹಳ ದೊಡ್ಡ ಗುರಿ ನಿಗದಿಪಡಿಸುತ್ತೇನೆ ಎಂದು ಸಹೋದ್ಯೋಗಿಗಳು ಹೇಳುವು ದುಂಟು. ದೊಡ್ಡ ಗುರಿ ನಿಗದಿಪಡಿಸುವುದಕ್ಕೆ ಕಾರಣ ಇಷ್ಟೆ; ಬದುಕಿನಲ್ಲಿ ಯಾವುದೂ ಅಸಾಧ್ಯ ವಲ್ಲ.
ಒಂದು ಕೆಲಸವನ್ನು ನೀವು ಮಾಡದೆ ಇದ್ದರೆ ಇನ್ನಾರೋ ಮಾಡುತ್ತಾರೆ. ಹಾಗಿದ್ದರೆ ನೀವೇ ಏಕೆ ಅದನ್ನು ಮಾಡಬಾರದು? ಈ ಬದ್ಧತೆ ಹಾಗೂ ಕುತೂಹಲದ ಮೂಲ ಇರುವುದು ವಿಜ್ಞಾನದಲ್ಲಿ! ಆದರೆ ಇದಕ್ಕೆ ಬೇಕಾದ ಸೂರ್ತಿ ಹಾಗೂ ಕೌಶಲಗಳನ್ನು ಮಾತ್ರ ನೀವೇ ಬೆಳೆಸಿಕೊಳ್ಳಬೇಕು.
ಇಲ್ಲದಿದ್ದರೆ ನಿಮ್ಮ ಕನಸು ನನಸಾಗುವುದು ಹೇಗೆ? ಬಾಬೂಜಿಯವರು ಲೋಕಮತ್ ಪತ್ರಿಕೆಯನ್ನು ವಿಸ್ತರಿಸುವ ಕನಸು ಕಂಡಿದ್ದರು. ಸಹೋದರ ರಾಜೇಂದ್ರ ಮತ್ತು ನಾನು ಸೇರಿಕೊಂಡು ಆ ಕನಸು ನನಸು ಮಾಡುವ ಶಪಥ ಮಾಡಿದ್ದೆವು. -ಲಿತಾಂಶ ಇಂದು ನಿಮ್ಮ ಕಣ್ಮುಂದೆಯೇ ಇದೆ. ಈಗ ದೇವೇಂದ್ರ, ರಿಷಿ ಮತ್ತು ಕರಣ್ ಲೋಕಮತ್ ಕುಟುಂಬವನ್ನು ಇನ್ನಷ್ಟು ಎತ್ತರಕ್ಕೆ ಕೊಂಡೊ ಯ್ಯಲು ಕೆಲಸ ಮಾಡುತ್ತಿದ್ದಾರೆ. ಪೂರ್ವಾ ಯಾವಾಗಲೂ ತನ್ನ ಸಹೋದರರ ಹಿಂದಿನ ಶಕ್ತಿಯಾಗಿ ಕೆಲಸ ಮಾಡುತ್ತಾಳೆ.
ನೆನಪಿಡಿ, ನಿಮ್ಮ ತಂದೆ ತಾಯಂದಿರ ಆಶೀರ್ವಾದ, ಒಡಹುಟ್ಟಿದವರ ಅಸೀಮ ಪ್ರೀತಿ, ಸಂಗಾತಿಯ ಸಹಕಾರ ಮತ್ತು ಮಕ್ಕಳ ಅಕ್ಕರೆಯಿಲ್ಲದೆ ಇದ್ದರೆ ಖಂಡಿತ ಯಾರೂ ಯಶಸ್ಸಿನ ಸಮೀಪಕ್ಕೂ ಹೋಗಲು ಸಾಧ್ಯವಿಲ್ಲ. ಕುಟುಂಬಕ್ಕಿಂತ ಯಾವುದೂ ದೊಡ್ಡದಲ್ಲ. ಬಹುಶಃ ನನ್ನ ಮಾತು ನಿಮಗೆ ವಿಚಿತ್ರವಾಗಿ ಕೇಳಿಸಬಹುದು. ಆದರೂ ಹೇಳುತ್ತೇನೆ, ಯಾವತ್ತೂ ನಿಮ್ಮ ಸಂಗಾತಿಯನ್ನು ಕಡೆಗಣಿಸ ಬೇಡಿ. ಅವಳು ಇಲ್ಲದೆ ಇದ್ದರೆ ನಿಮ್ಮ ಬದುಕು ಯಾವುದೇ ರೀತಿಯಲ್ಲೂ ಪೂರ್ಣವಾಗಲು ಸಾಧ್ಯ ವಿಲ್ಲ. ಅವಳು ನಿಮಗಾಗಿ ಮಾಡಿದ ತ್ಯಾಗ, ನಿಮ್ಮ ಒಳಿತಿನಲ್ಲಿ ಹೊಂದಿರುವ ಬದ್ಧತೆ ಮತ್ತು ನಿಮಗೆ ನೀಡುವ ನಿರ್ವ್ಯಾಜ ಪ್ರೀತಿಯನ್ನು ಸದಾ ಗೌರವಿಸಿ.
ನಿಮ್ಮ ಕುಟುಂಬವನ್ನು ಕಟ್ಟಿ, ಬೆಳೆಸಿ, ಬದುಕಿಗೊಂದು ಸಂತೋಷ ನೀಡಿದವಳೇ ಅವಳು. ಕುಟುಂಬದಲ್ಲಿ ಪ್ರೀತಿಯ ಪ್ರವಾಹ ಹರಿಯುತ್ತಿದ್ದರೆ ಮಾತ್ರ ಆ ಮನೆಯಲ್ಲಿ ಜನರು ಸೆಂಚುರಿ ಬಾರಿಸಬಲ್ಲರು! ಯುವಕರಿಗೆ ಇನ್ನೂ ಒಂದು ಕಿವಿಮಾತು ಹೇಳುತ್ತೇನೆ. ಭವಿಷ್ಯದ ಬಗ್ಗೆ ಹೆದರಬೇಡಿ. ಆತ್ಮವಿಶ್ವಾಸದಿಂದ ಮುಂದೆ ಹೋಗಿ. ಆದರೆ ನೀವು ಮಾಡುವ ಕೆಲಸದಿಂದ ಜಗತ್ತಿಗೆ ಒಳ್ಳೆಯ ದಾಗುತ್ತದೆ ಎಂಬುದನ್ನು ಮಾತ್ರ ಖಾತ್ರಿಪಡಿಸಿಕೊಳ್ಳಿ. ಹೆದರುತ್ತಾ ಕುಳಿತರೆ ನಿಮ್ಮದೇ ಕೌಶಲಗಳು ತುಕ್ಕು ಹಿಡಿಯುತ್ತಾ ಹೋಗುತ್ತವೆ.
ನಿಮ್ಮಲ್ಲಿರುವ ಸಾಮರ್ಥ್ಯಕ್ಕೆ ಮಂಕು ಬಡಿಯುತ್ತದೆ. ಕೌಶಲ ಮತ್ತು ಸಾಮರ್ಥ್ಯವನ್ನು ಆಗಾಗ ಬಳಸುತ್ತಿದ್ದರೆ ಮಾತ್ರ ಅವು ಇನ್ನಷ್ಟು ಹರಿತವಾಗುತ್ತವೆ. ಸುಲಭಕ್ಕೆ ಯಾವುದರ ಬಗ್ಗೆಯೂ ಸಿಟ್ಟಾ ಗಬೇಡಿ. ಸಿಟ್ಟು ನಿಮ್ಮಲ್ಲಿ ಗೊಂದಲ ಹುಟ್ಟಿಸುತ್ತದೆ. ಗೊಂದಲಕ್ಕೆ ಬಿದ್ದ ಮನುಷ್ಯ ದಾರಿ ತಪ್ಪುತ್ತಾನೆ. ಹೀಗಾಗಿ ಸಿಟ್ಟನ್ನು ಹಿಡಿತದಲ್ಲಿಟ್ಟುಕೊಳ್ಳಿ.
ಅಹಂಕಾರದಿಂದ ಅಥವಾ ಸ್ವಯಂಪ್ರತಿಷ್ಠೆಯಿಂದ ದೂರವಿರಿ. ನಿಮ್ಮನ್ನು ನೀವು ಅರ್ಥ ಮಾಡಿ ಕೊಳ್ಳಿ. ನಿಮ್ಮ ಮಿತಿಯೇನು, ದೌರ್ಬಲ್ಯವೇನು, ಸಾಮರ್ಥ್ಯವೇನು ಮತ್ತು ಶಕ್ತಿಯೇನು ಎಂಬುದನ್ನು ತಿಳಿಯಿರಿ. ಪ್ರಕೃತಿ ನಿಮ್ಮೊಂದಿಗೆ ಇರಲು ಇಡೀ ಜಗತ್ತನ್ನು ಸೃಷ್ಟಿಸಿದೆ. ನೀವು ಎಲ್ಲಿಗೆ ಬೇಕಾದರೂ ಹೋಗಬಹುದು. ನಿಮ್ಮ ಜ್ಞಾನ ಹಾಗೂ ಸಮರ್ಪಣಾ ಮನೋಭಾವಗಳು ನಿಮ್ಮನ್ನು ಎಲ್ಲಿಗೆ ಬೇಕಾದರೂ ಕರೆದೊಯ್ಯಬಲ್ಲವು. ನಿಮ್ಮದೇ ಸಂಕಲ್ಪಗಳಿಗೆ ನಿಮ್ಮನ್ನು ಸಂಪೂರ್ಣ ರೂಪಾಂತರ ಗೊಳಿಸುವ ಶಕ್ತಿಯಿದೆ. ಜೀವನದ ಅರ್ಥ ದೀರ್ಘಾಯುಷ್ಯದಲ್ಲಿಲ್ಲ, ಅದು ಇರುವುದು ಗುಣಮಟ್ಟದ ಕಾರ್ಯಗಳಲ್ಲಿ.
ಕೊನೆಯದಾಗಿ ಹೇಳುವುದಾದರೆ, ಹುಟ್ಟುಹಬ್ಬಕ್ಕೆ ಬಂದ ನಿಮ್ಮ ಶುಭಾಶಯಗಳು ನನಗೆ ಇನ್ನಷ್ಟು ಒಳ್ಳೆಯ ಕೆಲಸಗಳನ್ನು ಮಾಡಲು ಮತ್ತು ಅರ್ಥಪೂರ್ಣವಾಗಿ ಬದುಕಲು ಪ್ರೇರಣೆ ನೀಡಿವೆ. ನನ್ನ ಪ್ರಯತ್ನಗಳಿಗೆ ಈಗ ಇನ್ನಷ್ಟು ಬಲ ಬಂದಿದೆ. ಎಲ್ಲರಿಗೂ ಮತ್ತೊಮ್ಮೆ ಥ್ಯಾಂಕ್ಸ್. ಇನ್ನೊಂದು ಸಂಗತಿಯನ್ನು ಹೇಳಬೇಕು: ದೇಶವನ್ನು ಕಟ್ಟುವ ಕಾರ್ಯದಲ್ಲಿ ಎಲ್ಲರೂ ನಮ್ಮನ್ನು ತೊಡಗಿಸಿ ಕೊಳ್ಳೋಣ.
ಪ್ರತಿಯೊಬ್ಬ ಯುವಕರೂ ತಮ್ಮ ಎದೆಯ ಮೇಲೆ ತ್ರಿವರ್ಣ ಧ್ವಜದ ಪುಟ್ಟ ಬ್ಯಾಡ್ಜ್ ಅಥವಾ ಕೈಗೆ ತಿರಂಗಾದ ಬ್ಯಾಂಡ್ ಧರಿಸಿ. ಎಲ್ಲಿ ಸಿಗುತ್ತದೆ ಎಂಬುದು ಗೊತ್ತಿಲ್ಲದಿದ್ದರೆ ನನಗೆ ಬರೆಯಿರಿ. ಜೈ ಹಿಂದ್...
(ಲೇಖಕರು ಹಿರಿಯ ಪತ್ರಿಕೋದ್ಯಮಿ)