ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Roopa Gururaj Column: ರಾಮಚರಿತ ಮಾನಸ: ಲಂಕಾದಹನ-ಅಧರ್ಮದ ಸೌಧಕ್ಕೆ ಬಿದ್ದ ಕಿಚ್ಚು

ಹನುಮಂತನಿಗೆ ಈ ಲಂಕಾದಹನವು ಕೇವಲ ಸೇಡಿನ ಕ್ರಮವಾಗಿರಲಿಲ್ಲ, ಅದು ಸೀತೆಯ ಕಣ್ಣೀರಿಗೆ ನೀಡಿದ ಉತ್ತರವಾಗಿತ್ತು. ಕೊನೆಗೆ ಹನುಮಂತನು ಸಮುದ್ರಕ್ಕೆ ಹಾರಿ ತನ್ನ ಬಾಲವನ್ನು ಆರಿಸಿ ಕೊಂಡನು. ಸುಟ್ಟು ಕರಕಲಾದ ಲಂಕೆಯನ್ನು ನೋಡಿದಾಗ ಅವನಿಗೆ ಮರುಕ ಉಂಟಾಗಲಿಲ್ಲ, ಬದಲಾಗಿ ಅಹಂಕಾರದ ಅಂತ್ಯ ಹೀಗೆಯೇ ಇರುತ್ತದೆ ಎಂಬ ಸತ್ಯದ ದರ್ಶನವಾಯಿತು.

ರಾಮಚರಿತ ಮಾನಸ: ಲಂಕಾದಹನ-ಅಧರ್ಮದ ಸೌಧಕ್ಕೆ ಬಿದ್ದ ಕಿಚ್ಚು

-

ಒಂದೊಳ್ಳೆ ಮಾತು

ರಾವಣನ ಸಭೆಯಲ್ಲಿ ಹನುಮಂತನು ನೀಡಿದ ಹಿತವಚನಗಳು ಶಾಂತಿಯ ಮಂತ್ರಗಳಾಗಿದ್ದವು. “ರಾವಣನೇ, ವೈರವನ್ನು ಬಿಡು, ಶರಣಾಗತಿಯಲ್ಲಿ ಸುಖವಿದೆ" ಎಂದು ಹನುಮಂತನು ಕಳಕಳಿ ಯಿಂದ ಹೇಳಿದಾಗ, ಅಹಂಕಾರದ ಶಿಖರದಲ್ಲಿದ್ದ ರಾವಣನಿಗೆ ಅದು ಅವಮಾನವಾಗಿ ಕಂಡಿತು. ಹಿತವನ್ನು ಹೇಳುವವನು ಶತ್ರುವಿನಂತೆ ಭಾಸವಾಗುವುದು ವಿನಾಶದ ಲಕ್ಷಣ.

ಕ್ರೋಧದಿಂದ ಗುಡುಗಿದ ರಾವಣನು, “ಈ ವಾನರನಿಗೆ ಮೃತ್ಯುವಿನ ಭಯವಿಲ್ಲ, ಇವನ ಬಾಲಕ್ಕೆ ಬೆಂಕಿ ಹಚ್ಚಿ ಮೆರವಣಿಗೆ ಮಾಡಿ. ತನ್ನ ಸುಟ್ಟ ಬಾಲದೊಂದಿಗೆ ಈತ ಮರಳಿ ಹೋಗಿ ತನ್ನ ಒಡೆಯನಿಗೆ ನನ್ನ ಪ್ರತಾಪವನ್ನು ತಿಳಿಸಲಿ" ಎಂದು ಆಜ್ಞಾಪಿಸಿದನು.

ರಾಕ್ಷಸರು ಹರ್ಷೋದ್ಗಾರ ಮಾಡುತ್ತಾ ಹನುಮಂತನ ಬಾಲಕ್ಕೆ ಬಟ್ಟೆಗಳನ್ನು ಸುತ್ತಲು ಆರಂಭಿಸಿ ದರು. ಆದರೆ ಹನುಮಂತನು ತನ್ನ ದೈವೀ ಶಕ್ತಿಯಿಂದ ಬಾಲವನ್ನು ಬೆಳೆಸುತ್ತಲೇ ಹೋದನು. ಲಂಕೆಯಲ್ಲಿದ್ದ ಸಮಸ್ತ ವಸ್ತ್ರಗಳು ಮುಗಿದವು, ಮಡಕೆಗಟ್ಟಲೆ ಎಣ್ಣೆ ಖಾಲಿಯಾಯಿತು, ಆದರೂ ಬಾಲದ ತುದಿಯೇ ಸಿಗದಂತಾಯಿತು! ಕೊನೆಗೆ ಬಾಲಕ್ಕೆ ಬೆಂಕಿ ಹಚ್ಚಿದಾಗ, ಹನುಮಂತನು ತನ್ನನ್ನು ಕಟ್ಟಲ್ಪಟ್ಟಿದ್ದ ಪಾಶಗಳನ್ನು ಕಿತ್ತೆಸೆದು ಆಕಾಶಕ್ಕೆ ಜಿಗಿದನು.

ಇದನ್ನೂ ಓದಿ: Roopa Gururaj Column: ರಾಮಚರಿತ ಮಾನಸ: ರಾವಣನ ಸಭೆಯಲ್ಲಿ ರಾಮ ಭಕ್ತ ಹನುಮಂತ

ಆ ಕ್ಷಣದ ಭೀಕರತೆಯನ್ನು ತುಳಸೀ ದಾಸರು ಹೀಗೆ ವರ್ಣಿಸುತ್ತಾರೆ:

ಹರಿ ಪ್ರೇರಿತ ತೇಹಿ ಅವಸರ ಚಲೇ ಮರುತ ಚಲಿಸಾತ |

ಅಟ್ಟಹಾಸ ಕರಿ ಗರ್ಜಾ ಕಪಿ ಬಢಿ ಲಾಗ ಆಕಾಶ ||

ಭಗವಂತನ ಇಚ್ಛೆಯಂತೆ, ಹನುಮಂತನ ತಂದೆಯಾದ ವಾಯುದೇವನು ಪ್ರಚಂಡವಾಗಿ ಬೀಸಲು ಶುರು ಮಾಡಿದನು. ಹನುಮಂತನು ಅಟ್ಟಹಾಸ ಮಾಡುತ್ತಾ ಲಂಕೆಯ ಒಂದೊಂದು ಮಹಲಿನ ಮೇಲೆ ಹಾರುತ್ತಾ ಬೆಂಕಿಯನ್ನಿಟ್ಟನು.

ಚಿನ್ನದ ಲಂಕೆ ಕ್ಷಣಾರ್ಧದಲ್ಲಿ ಬೆಂಕಿಯ ಜ್ವಾಲೆಗೆ ಸಿಲುಕಿತು. ರಾಕ್ಷಸರ ಆಕ್ರಂದನ ಮುಗಿಲು ಮುಟ್ಟಿತು. ಅಧರ್ಮದಿಂದ ಕಟ್ಟಿದ ಸಾಮ್ರಾಜ್ಯವು ಭಕ್ತಿಯ ಕಿಚ್ಚಿಗೆ ಆಹುತಿಯಾಗುತ್ತಿತ್ತು. ರಾವಣನು ದೇವತೆಗಳನ್ನು ಗೆದ್ದು ತಂದಿದ್ದ ಅಹಂಕಾರದ ಸೌಧಗಳು ಸುಟ್ಟು ಬೂದಿಯಾಗುತ್ತಿದ್ದವು.

ಆದರೆ ಈ ಮಹಾವಿನಾಶದ ನಡುವೆಯೂ ಹನುಮಂತನ ಹೃದಯದಲ್ಲಿ ಕರುಣೆಯಿತ್ತು. ಅವನು ಸಜ್ಜನ ವಿಭೀಷಣನ ಮನೆಗೆ ಬೆಂಕಿ ತಗುಲದಂತೆ ನೋಡಿಕೊಂಡನು. ಅತ್ತ ಅಶೋಕವನದಲ್ಲಿ ತಾಯಿ ಸೀತೆಯಿದ್ದ ಜಾಗಕ್ಕೂ ಕಿಂಚಿತ್ತೂ ಹಾನಿಯಾಗಲಿಲ್ಲ. ಇದು ಸತ್ಸಂಗ ಮತ್ತು ಭಕ್ತಿಯ ಮಹಿಮೆ; ಇಡೀ ನಗರವೇ ಸುಡುತ್ತಿದ್ದರೂ ಭಕ್ತನ ಮನೆಯ ಮೇಲೆ ದೇವರ ಕೃಪೆಯೆಂಬ ತಂಪು ಮಳೆಯಿತ್ತು.

ಹನುಮಂತನಿಗೆ ಈ ಲಂಕಾದಹನವು ಕೇವಲ ಸೇಡಿನ ಕ್ರಮವಾಗಿರಲಿಲ್ಲ, ಅದು ಸೀತೆಯ ಕಣ್ಣೀರಿಗೆ ನೀಡಿದ ಉತ್ತರವಾಗಿತ್ತು. ಕೊನೆಗೆ ಹನುಮಂತನು ಸಮುದ್ರಕ್ಕೆ ಹಾರಿ ತನ್ನ ಬಾಲವನ್ನು ಆರಿಸಿ ಕೊಂಡನು. ಸುಟ್ಟು ಕರಕಲಾದ ಲಂಕೆಯನ್ನು ನೋಡಿದಾಗ ಅವನಿಗೆ ಮರುಕ ಉಂಟಾಗಲಿಲ್ಲ, ಬದಲಾಗಿ ಅಹಂಕಾರದ ಅಂತ್ಯ ಹೀಗೆಯೇ ಇರುತ್ತದೆ ಎಂಬ ಸತ್ಯದ ದರ್ಶನವಾಯಿತು.

ತನ್ನ ಕಾರ್ಯ ಮುಗಿಸಿ, ಪುನಃ ಸೀತೆಯ ಬಳಿಗೆ ಹೋಗಿ ನಮಸ್ಕರಿಸಿದಾಗ ಅವನ ಮುಖದಲ್ಲಿ ರಾಮಕಾರ್ಯ ಮಾಡಿದ ತೃಪ್ತಿಯಿತ್ತು. ಅಧರ್ಮದ ನೆಲೆಗೆ ಭಕ್ತಿಯ ಕಿಚ್ಚು ತಗುಲಿದಾಗ ಅದು ಹೇಗೆ ಭಸ್ಮವಾಗುತ್ತದೆ ಎಂಬುದಕ್ಕೆ ಲಂಕಾದಹನವೇ ಶಾಶ್ವತ ಸಾಕ್ಷಿ.

ಕೆಲವೊಮ್ಮೆ ನಮ್ಮ ಸಾತ್ವಿಕತೆ, ಒಳ್ಳೆಯತನ, ಮೌನವನ್ನು ನಮ್ಮ ದೌರ್ಬಲ್ಯ ಎಂದು ಜನರು ತಿಳಿದುಕೊಳ್ಳುತ್ತಾರೆ. ಆದರೆ ಮೌನದ ಹಿಂದಿರುವ ತೀವ್ರತೆ, ಸಾತ್ವಿಕತೆಯ ಹಿಂದಿರುವ ಶಕ್ತಿಯನ್ನು ಅವರು ನೋಡದೆ ಹೋಗುತ್ತಾರೆ. ಸಾತ್ವಿಕ ವ್ಯಕ್ತಿಯ ಸಿಟ್ಟು ಎದುರುಗಿರುವವರನ್ನು ಸುಟ್ಟು ಹಾಕು ವಷ್ಟು ಶಕ್ತಿಯುತ ವಾಗಿರುತ್ತದೆ. ಅವರಿಗೆ ಅವರ ಶಕ್ತಿಯ ಪರಿಚಯವೂ ಇರುತ್ತದೆ. ಆದರೆ ಧರ್ಮ ಕರ್ಮಗಳನ್ನು ನಂಬಿ ಅವರು ಯಾರಿಗೂ ಕೆಡುಕು ಮಾಡದೆ ಒಳ್ಳೆಯತನದಿಂದ ಬದುಕು ತ್ತಿರುತ್ತಾರೆ.

ಅದರ ಅರ್ಥ ಅವರು ಕೈಲಾಗದವರು ಎಂದಲ್ಲ. ಎಂದಾದರೂ ಅವರಿಗೆ ಅನ್ಯಾಯವಾದಾಗ, ಸಿಟ್ಟು ಬಂದಾಗ ಅವರನ್ನು ನೋಯಿಸಿದವರನ್ನು ಹುಟ್ಟಡಗಿಸಿ ಬಿಡುವ ಸಾಮರ್ಥ್ಯವೂ ಅವರಿಗೆ ಇರುತ್ತದೆ. ಆದ್ದರಿಂದಲೇ ಋಷಿ- ಮುನಿಗಳ, ಸಾತ್ವಿಕರ ಸಿಟ್ಟಿಗೆ ಎಂದಿಗೂ ಗುರಿಯಾಗಬಾರದು. ನಮ್ಮಲ್ಲಿ ಆ ಒಳ್ಳೆಯತನವಿದ್ದಾಗ ನಮ್ಮ ಶಕ್ತಿಯ ಬಗ್ಗೆಯೂ ನಮಗೆ ನಂಬಿಕೆ ಇರಬೇಕು. ಸಮಯ ಬಂದಾಗ ಅದನ್ನು ಪ್ರಯೋಗಿಸಲು ಹಿಂಜರಿಯಬಾರದು. ಒಳ್ಳೆಯವರಿಗೆ ಇರುವ ಸಾತ್ವಿಕ ಗತ್ತು ಅವರ ಗುರುತು, ಅದನ್ನು ಕೆಣಕಲು ಹೋಗಬಾರದು...