ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Prabhamani Nagaraj Column: ಕದನ ಕುತೂಹಲ !

ಬೆಳಗಿನಿಂದ ರಾತ್ರಿಯವರೆಗೂ ಸುತ್ತಮುತ್ತಾ ಒಂದಲ್ಲಾ ಒಂದು ಜಗಳವಾಗುತ್ತಿದ್ದರೂ ಅದರಿಂದ ಸ್ವಲ್ಪವೂ ವಿಚಲಿತವಾಗದಂತೆ ನಮ್ಮ ಬಾಲ್ಯ ಮುನ್ನಡೆಯುತ್ತಿತ್ತು. ಆದರೂ ನಮ್ಮನಮ್ಮ ನಡುವೆ ಆಗಾಗ ನಡೆಯುತ್ತಿದ್ದ ಕೋಳಿಜಗಳಗಳನ್ನು ಬಿಡಿಸುವುದರಲ್ಲೇ ಮನೆಯವರಿಗೆ ಸಾಕುಸಾಕಾಗಿ ಮಕ್ಕಳೂ ಎಲ್ಲಿ ಜಗಳಗಂಟರಾಗುತ್ತಾರೋ ಎಂದು ಪರಿತಪಿಸುವಂತಾಗುತ್ತಿತ್ತು.

Prabhamani Nagaraj Column: ಕದನ ಕುತೂಹಲ !

-

Profile
Ashok Nayak Apr 19, 2026 1:54 PM

ಪ್ರಭಾಮಣಿ ನಾಗರಾಜ

ಮನೆಯಲ್ಲಿ ಜಗಳಗಳಿಂದಾಗುವ ಕೋಪತಾಪಕ್ಕೆ ಬೆದರಿ, ಅದರ ಸಹವಾಸವೇ ಬೇಡವೆಂದು ಮೌನ ವಾಗಿಯೇ ದಿನಗಳನ್ನು ಕಳೆದ ಲೇಖಕಿ, ಮದುವೆಯಾದ ನಂತರ ಜಗಳಾಡುವುದನ್ನು ಕಲಿತದ್ದಾದರೂ ಹೇಗೆ? ಅದಕ್ಕೆ ಯಾರ ಮಾರ್ಗದರ್ಶನ?

ಹೊತ್ತು ಮೂಡಿ ಕುಕ್ಕುಟಗಳು ‘ಕೊಕ್ಕೋ’ ಎನ್ನುವ ಮೊದಲೇ, ಹಕ್ಕಿಗಳ ಚಿಲಿಪಿಲಿ ಗಾನ ಕಣ್ಮುಚ್ಚಿ ಕನಸು ಕಾಣುತ್ತಿದ್ದ ಮಕ್ಕಳ ಕಿವಿಗಳನ್ನು ಒಂದು ಸದ್ದು ಪ್ರವೇಶಿಸುತ್ತದೆ: ಅದೇ ಅಕ್ಕಪಕ್ಕದವರ ಕರ್ಣಕಠೋರವಾದ ಜಗಳದ ಅಬ್ಬರದ ಸುಪ್ರಭಾತದ ವಾದ್ಯ! ಅಷ್ಟರಲ್ಲಾಗಲೇ ಎದ್ದು ದೇವರ ನಾಮ ಹೇಳಿಕೊಳ್ಳುತ್ತಿದ್ದ ಅಜ್ಜಿ ಜಗಳದಲ್ಲಿನ ಅವಾಚ್ಯಗಳನ್ನು ಸಹಿಸದೆ ಕಿವಿಮುಚ್ಚಿಕೊಂಡು ‘ರಾಮ, ರಾಮ’ ಎನ್ನುವಾಗಲೇ ದಿನನಿತ್ಯದ ಕಾರ್ಯ ಪರಂಪರೆಯಲ್ಲಿ ತೊಡಗಿರುತ್ತಿದ್ದ ಅಮ್ಮ ರೇಡಿಯೋ ಆನ್ ಮಾಡಿ ಗರಿಷ್ಟ ವಾಲ್ಯೂಮ್ ಕೊಟ್ಟು, ಆ ಜಗಳದ ನಡುನಡುವೆ ಮೂಡಿ ಬರುವ ಕೆಲವು ಕೆಟ್ಟ ಪದಗಳು ಎದ್ದಾಕ್ಷಣವೇ ಮಕ್ಕಳ ಕಿವಿಯ ಮೇಲೆ ಬೀಳದಂತೆ ಜಾಗ್ರತೆ ವಹಿಸುತ್ತಿದ್ದರು.

ಒಮ್ಮೊಮ್ಮೆ ಅದೇ ಜಗಳದಲ್ಲಿ ನಮ್ಮತ್ತೆಯದೂ ಪಾಲಿದ್ದರಂತೂ ಕೇಳುವಂತೆಯೇ ಇರಲಿಲ್ಲ. ಅವರು ಪ್ರತಿದಿನವೂ ತಪ್ಪದೇ ಓದುತ್ತಿದ್ದ ಕುಮಾರವ್ಯಾಸಭಾರತದ ಪ್ರಭಾವದಿಂದಲೋ ಏನೋ ಸುಸಂಸ್ಕೃತ ಪದಪುಂಜಗಳೊಂದಿಗೇ, ತಾವು ಪ್ರೀತಿಯಿಂದ ಬೆಳೆಸಿದ ಗಿಡಗಳನ್ನು ಧ್ವಂಸಮಾಡಿದ ದನಗಳ ಮಾಲೀಕರ ಜನ್ಮ ಜಾಲಾಡುತ್ತಿದ್ದರು.

ಬೆಳಗಿನಿಂದ ರಾತ್ರಿಯವರೆಗೂ ಸುತ್ತಮುತ್ತಾ ಒಂದಲ್ಲಾ ಒಂದು ಜಗಳವಾಗುತ್ತಿದ್ದರೂ ಅದರಿಂದ ಸ್ವಲ್ಪವೂ ವಿಚಲಿತವಾಗದಂತೆ ನಮ್ಮ ಬಾಲ್ಯ ಮುನ್ನಡೆಯುತ್ತಿತ್ತು. ಆದರೂ ನಮ್ಮನಮ್ಮ ನಡುವೆ ಆಗಾಗ ನಡೆಯುತ್ತಿದ್ದ ಕೋಳಿಜಗಳಗಳನ್ನು ಬಿಡಿಸುವುದರಲ್ಲೇ ಮನೆಯವರಿಗೆ ಸಾಕು ಸಾಕಾಗಿ ಮಕ್ಕಳೂ ಎಲ್ಲಿ ಜಗಳಗಂಟರಾಗುತ್ತಾರೋ ಎಂದು ಪರಿತಪಿಸುವಂತಾಗುತ್ತಿತ್ತು. ಇದಕ್ಕೆ ಅಪವಾದ ವೆನ್ನುವಂತೆ ನಾನು ಮಾತ್ರ ಯಾವ ಜಗಳದಲ್ಲೂ ಭಾಗಿಯಾಗದೇ ಬಲಾಢ್ಯರಿಗೆ ತಗ್ಗಿಬಗ್ಗಿ ನಡೆ ಯುತ್ತಾ ಸೋಲುವುದರಲ್ಲೇ ಸಂತೃಪ್ತಳಾಗಿ ಹಿರಿಯರ ಮೆಚ್ಚುಗೆಗೆ ಪಾತ್ರಳಾಗಿದ್ದೆ.

ಆದರೆ ಸಹಜ ರಾಜಸ್ವ ಪ್ರವೃತ್ತಿಯ ನಮ್ಮತ್ತೆ ಮಾತ್ರ ‘ಇಷ್ಟೊಂದು ಮೆದುಗಳಾದರೆ ಮುಂದೆ, ಮದುವೆ ಯಾದ ಮೇಲೆ ಹೇಗೆ ನಿಭಾಯಿಸುತ್ತೋ’ ಎಂದು ಅಲವತ್ತುಕೊಳ್ಳುತ್ತಿದ್ದರು.

ಇದನ್ನೂ ಓದಿ: Somalinganna Benni Column: ʼಮುಳ್ಳುಗಳೇ ಹೂʼವಾಗುವ ಗ್ರಾಮೀಣ ಯುಗಾದಿ

ನಮ್ಮ ಹಳ್ಳಿಯಲ್ಲಿ ಮಾತುಮಾತಿಗೂ ಜಗಳ ನಡೆಯುತ್ತಿದ್ದು ವಿಕೋಪಕ್ಕೆ ಹೋಗಿ ಹೊಡೆದಾಡುವ ಹಂತವನ್ನೂ ತಲುಪುತ್ತಿದ್ದುದು ತೀರಾ ಸಾಮ್ಯ. ಕುಟುಂಬದ ಒಳಗಿನ ಕಲಹವಾಗಲೀ, ಕುಟುಂಬಗಳ ನಡುವಿನದಾಗಲೀ ಅಪರಿಹಾರ್ಯವೆನಿಸಿದಾಗ, ಶಾಂತಿಪ್ರಿಯರಾದ ನಮ್ಮ ತಂದೆಯ ಬಳಿಗೆ ಜಗಳಾಡಿದವರು ಬರುತ್ತಿದ್ದರು. ಅವರು ‘ಮಾತು ಬಲ್ಲವನಿಗೆ ಜಗಳವಿಲ್ಲ, ಊಟ ಬಲ್ಲವನಿಗೆ ರೋಗವಿಲ್ಲ’ ಎಂದು ಒಮ್ಮೊಮ್ಮೆ ಸಮಾಧಾನಿಸಿದರೆ ‘ಕಾದ ಮನೆ ಕಲ್ಲಾಯ್ತು, ಹೋರಿದ್ದ ಮನೆ ಹುಲ್ಲಾಯ್ತು’ ಎಂಬ ಗ್ರಾಮ್ಯ ನುಡಿಗಟ್ಟನ್ನು ಹೇಳಿ ಜಗಳದ ಪರಿಣಾಮವನ್ನು ತಿಳಿಸುವ ಪ್ರಯತ್ನ ಮಾಡುತ್ತಿದ್ದರು. ಆ ಕ್ಷಣದಲ್ಲಿ, ಜಗಳ ಉಪಶಮನವಾಗುತ್ತಿತ್ತು; ಆದರೆ, ಅದು ತಾತ್ಕಾಲಿಕ!

ನಾಯಿಬಾಲ ಡೊಂಕು ಎನ್ನುವಂತೆ ಹೊಸಹೊಸ ಕಾರಣಗಳಿಗೆ ಕಾದಾಟ ನಡೆಯುವುದಂತೂ ತಪ್ಪುತ್ತಿರಲಿಲ್ಲ. ಶಾಲೆಗೆ ಹೋಗಲು ಪ್ರಾರಂಭಿಸಿದ ನಂತರ ಜೊತೆಯವರು ಕ್ಷುಲ್ಲಕ ಕಾರಣಗಳಿಗೂ ಕಿತ್ತಾಡುವುದನ್ನು ನೋಡಿ ಯಾರ ಬಳಿಯೂ ಸಲುಗೆಯಿಂದಿರಲು ನನಗೆ ಭಯವಾಗತೊಡಗಿತು; ಆಗ ನಾನು ಅನುಸರಿಸುತ್ತಿದ್ದುದು ತಟಸ್ಥಳಾಗುವ ಸ್ಥಿತಿ.

ಕೆಲವು ಬಾರಿ ಶಾಲೆಯ ಮಕ್ಕಳ ಕಿತಾಪತಿಯಿಂದ ತಲೆ ಚಿಟ್ಟು ಹಿಡಿಸಿಕೊಂಡ ಶಿಕ್ಷಕರೇನೋ ‘ಅವಳನ್ನು ನೋಡಿ ಕಲಿಯಿರಿ’ ಎಂದು ಮೆಚ್ಚುಗೆ ಸೂಸಿದರೂ, ಅದು ಕ್ಷಣಿಕ; ಉಪಾಧ್ಯಾಯರ ಮೆಚ್ಚುಗೆಯನ್ನು ಕಂಡು, ಅಸೂಯೆಗೊಂಡ ನಮ್ಮ ಸಹಪಾಠಿಗಳಿಂದ ‘ಒಂಟರಬಡುಕ ಸುಂಟರ ಗಾಳಿ’ ಎನಿಸಿಕೊಳ್ಳುವಂತಾಯ್ತು.

ಮದುವೆಯ ನಂತರ!

ಅಂತೂ ಇಂತೂ ಶಾಂತಿಧೂತಳಂತೆ ವಿದ್ಯಾಭ್ಯಾಸ ಮುಗಿಸಿ ಕೆಲಸಕ್ಕೂ ಸೇರಿದ್ದೇನೋ ಆಯ್ತು. ಆದರೆ ಹೀಗೇ ಏಕಾಂಗವೀರಳಾಗಿ ವೈವಾಹಿಕ ಜೀವನದಲ್ಲಿ ಮುನ್ನಡೆಯಲಾಗಲಿಲ್ಲ. ಹೇಗೋ ಏನೋ ಎಂಬ ಅಳುಕಿನಲ್ಲಿ ಹೊಸದರಲ್ಲಿ ಸ್ವಲ್ಪಸ್ವಲ್ಪವೇ ಅಧಿಕಾರ ಚಲಾವಣೆ ಮಾಡುತ್ತಾ ಇದ್ದ ನನ್ನವರು, ಸಂಪೂರ್ಣ ಸ್ವಾಮ್ಯಕ್ಕೊಳಪಡಲು ಮಡದಿ ಸಿದ್ಧಳಿಲ್ಲವೆನ್ನುವುದನ್ನು ಮನಗಂಡು ಭಿನ್ನಾಭಿಪ್ರಾಯ ತಲೆದೋರಿದಾಗಲೆಲ್ಲಾ ವಾಗ್ಬಾಣಗಳನ್ನು ಪ್ರಯೋಗಿಸುತ್ತಾ ನೇರ ಹೋರಾಟಕ್ಕೇ ಆಹ್ವಾನ ನೀಡಲಾರಂಭಿಸಿದರು.

ಮೊದಲೇ ಜಗಳವೆಂದರೇ ಮಾರುದೂರ ಹಾರುತ್ತಿದ್ದ ನಾನು ಹೇಗೂ ತಪ್ಪಿಸಿಕೊಳ್ಳಲಾರದೇ ಪ್ರಾರಂಭಿಕ ಮೌನರೋಧನದ ನಂತರ, ತುಸು ಜಾಗೃತಳಾದೆ; ಅವರ ಹೂಡುವ ಅಸಗಳಿಗೆ ಪ್ರತ್ಯಸ್ತ್ರ ಹೂಡುವ ತಂತ್ರಗಳನ್ನು ಕಲಿತುಕೊಂಡು, ನಿಧಾನವಾಗಿ ಅವರದೇ ನಡೆ-ನುಡಿಗಳನ್ನೇ ಗಮ ನಿಸುತ್ತಾ, ಪ್ರತಿ ಅಸ್ತ್ರ ಹೂಡಲು ಒಂದೊಂದಾಗಿ ಅಭ್ಯಾಸ ಮಾಡಿಕೊಳ್ಳಲಾರಂಭಿಸಿದೆ. ಹೀಗಾಗಿ ಕಲಹಮಲ್ಲರಾದ ನನ್ನವರೇ ನನ್ನ ಕಲಹಕಲಿಕಾ ಮಾರ್ಗದರ್ಶಕರೆಂದು ನಿಸ್ಸಂಶಯವಾಗಿ ಒಪ್ಪಿಕೊಳ್ಳುವಂತಾಯ್ತು.

ಕ್ರಮೇಣ ‘ಗುರುವಿನಮಿಂಚಿನ ಶಿಷ್ಯ’ಳಾಗಿ ಅವರಿಗೆ ಸರಿಪಟ್ಟಿಕೊಂಡು ಕಲಹ ಮಾಡುವ ಕಲೆ ಕರತಲಾಮಲಕವಾಗುವಂತಾಗಿ, ‘ಅಲ್ಲಾ, ಈ ಜಗಳಮಾಡುವುದರಲ್ಲಿಯೂ ಎಂಥಾ ಖುಷಿಯಿದೆ’ ಎಂದು ಕಂಡುಕೊಂಡೆ! ಅಚ್ಚರಿ ಪಟ್ಟೆ! ಜಗಳವಿರದ ಮನೆಯಿರಲು ಸಾಧ್ಯವೇ ಎಂಬ ಪರಮ ಸತ್ಯದ ಅರಿವಾದ ನಂತರ ಅದರ ಧನಾತ್ಮಕ ಅಂಶವಾದ ಮನದೊಳಗಿನ ಒಂದೊಂದೇ ಮಾತು ಹೊರಬರುವುದರಿಂದ ಮನಸ್ಸಿನ ಒತ್ತಡ ಕಡಿಮೆಯಾಗುವುದು ಎನ್ನುವುದೂ ಮನದಟ್ಟಾಗಿ, ಶಾಂತಿದೂತಳಂತಿದ್ದ ನನ್ನ ಸಪ್ಪೆ ಜೀವನಕ್ಕೆ ವಿದಾಯ ಹೇಳಿದೆ. ಆಹಾ, ನನ್ನಲ್ಲೇ ಹುದುಗಿದ್ದ ಅಪಾರ ಸಾಮರ್ಥ್ಯವನ್ನು ಹೊರಹೊಮ್ಮಿಸಿದ ಕಲಹಾನಂದವೇ!

ದೇವ ದಾನವರ ಕದನ!

ಈ ಕಲಹವೆನ್ನುವುದು ಇವತ್ತು-ನಿನ್ನೆಯದಲ್ಲ. ನಮ್ಮ ಪುರಾಣಗಳಲ್ಲಿರುವಂತೆ ಸಮುದ್ರ ಮಂಥನದ ಸಂದರ್ಭದಲ್ಲಿ ದೇವತೆಗಳು ಮತ್ತು ದಾನವರ ನಡುವೆ ಮಹಾನ್ ಕದನವೇ ನಡೆದಿದೆ. ಮಹಾ ಭಾರತದಲ್ಲಿ ಅಧಿಕಾರ ಲಾಲಸೆಗಾಗಿ ಕೌರವರು ಮತ್ತು ಪಾಂಡವರ ನಡುವೆ ಘನಘೋರವಾದ ಕುರುಕ್ಷೇತ್ರಯುದ್ಧವೇ ಆಗಿದೆ. ‘ಕಲಹ ಪ್ರಿಯ’ರೆಂದೇ ಪ್ರಸಿದ್ಧರಾಗಿದ್ದ ನಾರದ ಮುನಿಗಳು, ದೇವ-ದಾನವರು, ರಾಜ-ಮಹಾರಾಜರು, ಋಷಿ-ಮುನಿಗಳ ನಡುವೆ ಕಲಹ ಮಾಡುವಂತೆ ಪ್ರೇರೇಪಿಸ ಬಲ್ಲವರಾಗಿದ್ದರು.

‘ನಾರದರೆಲ್ಲೆಲ್ಲಿ ಕದನಕಿಕ್ಕುವರೊ...’ ಎಂದು ಕದನ ಕುತೂಹಲಿಯಾಗಿದ್ದ ನಮ್ಮತ್ತೆ ಆಗಾಗ ಹಾಡು ತ್ತಿದ್ದರು! ಪ್ರಸಿದ್ಧ ರೋಮನ್ ಸಾಮ್ರಾಜ್ಯವು ಪತನಗೊಂಡಿದ್ದು ಆಂತರಿಕ ಕಲಹಗಳಿಂದಲೇ ಎಂದು ಸಾರುತ್ತದೆ. ಪ್ರಸ್ತುತ ಸನ್ನಿವೇಶದಲ್ಲಿಯೂ ಜಗತ್ತಿನಾದ್ಯಂತ ವೈಮನಸ್ಯದಿಂದುಂಟಾದ ಸಂಘರ್ಷಗಳ ವೈಪರೀತ್ಯಗಳನ್ನು ನೋಡುತ್ತಲೇ ಇದ್ದೇವೆ.

ಪ್ರಾಣಿಜಗತ್ತಿನಲ್ಲಿಯೂ ಆಹಾರಕ್ಕೆ, ಆವಾಸಸ್ಥಾನಕ್ಕೆ ಕಾದಾಡುವುದು ಸರ್ವೇಸಾಮಾನ್ಯ. ಮರಿ ಗಳನ್ನು ಕಾಪಾಡುವುದಕ್ಕೆ ತಮ್ಮ ಜೀವವನ್ನೇ ಪಣಕ್ಕಿಟ್ಟು ಹೋರಾಡುತ್ತವೆ. ನಮ್ಮ ಗದ್ದೆಯ ಹತ್ತಿರ ಆಲದ ಮರದ ಪೊಟರೆಯಲ್ಲಿ ಹಕ್ಕಿಯ ಮೊಟ್ಟೆ ಎಗರಿಸಲು ಹಾವು ಬಂದಾಗ ತಾಯಿ ಹಕ್ಕಿಯ ಆಕ್ರಮಣದ ಹೋರಾಟ, ಚೀತ್ಕಾರ ಬಹಳ ಜೋರಾಗಿರುತ್ತಿತ್ತು!

ಇನ್ನು ಒಂದು ಹೆಣ್ಣಿಗಾಗಿ, ಗಂಡುಗಳೆರಡು ನಡೆಸುವ ಕಾಳಗವಂತೂ ಬಲು ಭೀಕರ. ಮನುಷ್ಯ ರಲ್ಲೂ ಇಂಥಾ ಮೃಗೀಯ ವರ್ತನೆಯ ಸುದ್ದಿಗಳು ಆಗಾಗ ಬರುತ್ತಲೇ ಇರುತ್ತವೆ. ನಮ್ಮ ಕಡೆ ವೈಷಮ್ಯದ ದಾಂಪತ್ಯವನ್ನು ‘ಬೆಕ್ಕಿನ ಸಂಸಾರ’ ಎನ್ನುವ ವಾಡಿಕೆಯಿದೆ. ನಮ್ಮ ಗಾರ್ಡನ್ ಮತ್ತು ಟೆರೇಸ್‌ಗಳನ್ನೇ ತಮ್ಮ ಕದನಕ್ಷೇತ್ರವಾಗಿಸಿಕೊಳ್ಳುವ ಬೆಕ್ಕುಗಳ ಹೋರಾಟದ ಪೂರ್ವ ಚೀರಾಟ ದಿಂದ ಎಷ್ಟೋ ಬಾರಿ ಬೆಚ್ಚಿಬಿದ್ದಿದ್ದೇವೆ. ನೀರು ನಾಯಿಗಳು ಕಾದಾಟವನ್ನೇ ಆಡುತ್ತಾ ಕದನಕಲೆ ಯಲ್ಲಿ ಪಳಗುತ್ತವಂತೆ!

ಕದನ ಕುತೂಹಲ ರಾಗವು ಪಟ್ನಂ ಸುಬ್ರಮಣ್ಯ ಅಯ್ಯರ್ ಅವರು ಜನಪ್ರಿಯಗೊಳಿಸಿರುವ, ಕೇಳುಗರಲ್ಲಿ ಉತ್ಸಾಹ ಮತ್ತು ಶೌರ್ಯದ ಭಾವನೆಯನ್ನು ಮೂಡಿಸುವ ರಾಗವಾಗಿದೆ. ಶ್ರೋತೃಗಳು ಸಂಗೀತದಲ್ಲಿ ತನ್ಮಯರಾಗಿ ಇನ್ನೇನು ನಿದ್ರಾದೇವಿಗೆ ಶರಣಾಗುವ ವೇಳೆಗೆ ‘ರಘುವಂಶ ಸುಧಾಂಬುಧಿ ಚಂದ್ರಿಕೆ’ ಎಂದು ಪ್ರಾರಂಭಿಸಿದಾಕ್ಷಣವೇ ಥಟ್ಟನೆ ಎಚ್ಚರಗೊಳ್ಳುತ್ತಾರೆಂದರೆ, ಅದರ ಕೀರ್ತಿ ‘ಕದನ’ಕ್ಕೇ ಸಲ್ಲಬೇಕಲ್ಲವೆ! ಕದನ ಕುತೂಹಲ ರಾಗವೆನ್ನುವುದು ಯುದ್ಧದ ಮುನ್ನ ವೀರನ ಮನಸ್ಸಿನಲ್ಲಿ ಮೂಡುವ ವಿಶಿಷ್ಟ ಭಾವಸ್ಥಿತಿಯನ್ನು ಸೂಚಿಸುವ ಸಾಹಿತ್ಯಾತ್ಮಕ ಪದಗುಚ್ಛವೆಂದೂ ಹೇಳುತ್ತಾರೆ. ಈಗಂತೂ ಜಗತ್ತಿನ ಎಲ್ಲಾ ಕಡೆ ಸ್ಟ್ರಾಟಜಿಕ್ ವಾರ್ಗಳು!

ಸಪ್ತ ಸಾಗರದಾಚೆಯ ಬಹು ದೊಡ್ಡ ದೇಶವೊಂದು, ತೈಲದ ಆಸೆಗೋ, ಇನ್ನಾವುದೋ ಪ್ರಲೋಭ ಕ್ಕೋ ಒಳಗಾಗಿ, ಬೇರೆ ಬೇರೆ ದೇಶಗಳ ಮೇಲೆ ಬಾಂಬ್ ಹಾಕಿ, ಕದನವನ್ನು ಆಗಾಗ ಚಾಲ್ತಿಯಲ್ಲಿಟ್ಟು ಸುದ್ದಿ ಮಾಡುತ್ತಲೇ ಇರುತ್ತದೆ. ಇತ್ತ, ನಮ್ಮ ಸನಿಹಕ್ಕೇ ಬಂದರೆ, ಸಾಹಿತ್ಯಕ್ಷೇತ್ರದಲ್ಲಿಯೂ ಆಗಾಗ ಲೇಖಕರು ಹಾಗೂ ವಿಮರ್ಶಕರ ನಡುವೆ ಮುಸುಕಿನೊಳಗಿನ ಗುದ್ದಾಟದಂಥಾ ಕೋಲ್ಡ್ ವಾರ್‌ಗಳು ನಡೆಯುತ್ತಲೇ ಇರುತ್ತವೆ. ಬಹಳ ಸೀರಿಯಸ್ ಆಯ್ತಲ್ವಾ?

ಉಂಡು ಮಲಗುವ ತನಕವೆ?

‘ಗಂಡ-ಹೆಂಡತಿಯ ಜಗಳ ಉಂಡು ಮಲಗುವ ತನಕ’ ಎಂದರೆ ವಿರಸ ತಾತ್ಕಾಲಿಕವಾಗಿದ್ದು ಸರಸದೊಂದಿಗೆ ಮುಕ್ತಾಯವಾಗುತ್ತದೆ ಎಂಬ ಜನಜನಿತವಾದ ಉಕ್ತಿಯೊಂದಿದೆ. ಆದರೆ ಈಗೀಗ ಆ ಜಗಳವು ಕೋರ್ಟ್ ಮೆಟ್ಟಿಲೇರುವವರೆಗೂ ಮುಂದುವರೆಯುತ್ತಿರುವುದು ವಿಷಾದನೀಯ. ಏನುಮಾಡುವುದು, ಪರಿಸ್ಥಿತಿ, ಮನಃಸ್ಥತಿ ಆದರೂ ಇತ್ತೀಚೆಗೆ ವಿದೇಶೀ ಹೈಕೋರ್ಟ್ ಒಂದರಲ್ಲಿ ನ್ಯಾಯಾಧೀಶರ ನಡುವೆ ಜಗಳದ ಕಾವೇರಿ ಕೈಕೈಮಿಲಾಯಿಸುವ ವಿಡಿಯೋ ನೋಡಿದಾಗ ಬೇಲಿಯೇ ಎದ್ದು ಹೊಲವನ್ನು ಮೇಯ್ದಂತಾಗಿ ನ್ಯಾಯ ಕೇಳಲು ಹೋಗುವುದಾದರೂ ಎಲ್ಲಿಗೆ ಎನಿಸದಿರುವುದಿಲ್ಲ!

ಶಾಂತಿಯ ಪಡೆಯ ಸದಸ್ಯಳಾಗಿಯೇ ಬೆಳೆದಿದ್ದ ನಾನು, ವಿವಾಹದ ನಂತರ, ಜಗಳ ಮಾಡುವುದನ್ನು ಕಲಿತುಬಿಟ್ಟೆನೆಂದು ಬೀಗಬಹುದು, ಮಾತಿಗೆ ಮಾತಿನ ತಿರುಗೇಟು ಕೊಡುತ್ತಾ ಕಲಹಾನಂದವನ್ನೂ ಹೊಂದಬಹುದು, ಆದರೆ ಮನೆಯೇ ಮೊದಲ ಪಾಠಶಾಲೆಯಾದ್ದರಿಂದ ನಮ್ಮಂಥಾ ಕುಟುಂಬ ಗಳಲ್ಲಿ ಮಾತು ಕಲಿಯುವ ಮುನ್ನವೇ ಮಕ್ಕಳೂ ಜಗಳವಾಡುವುದನ್ನೇ ಕಲಿತುಬಿಟ್ಟರೆ! ‘ಕುಟುಂಬದಲ್ಲಿ ಕಲಹ ಉಪ್ಪಿನಷ್ಟು ಇರಬೇಕು,

ಜಾಸ್ತಿಯಾಯ್ತೆಂದರೆ ಊಟವೇ ಹಾಳು!’ ಎಂಬ ಅಜ್ಜಿಯ ಮಾತಿನಂತೆ, ವಾದ ವಿವಾದ, ಜಗಳ ಮತ್ತು ಮನಸ್ತಾಪಗಳು ಹಿತಮಿತವಾಗಿದ್ದರೆ ಮಾತ್ರ ನಮ್ಮ ಬದುಕು ಹಸನಾದೀತು. ಏನಂತೀರಿ?