ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Roopa Gururaj Column: ರಾಮಚರಿತ ಮಾನಸ: ಲಂಕಾ ಸಮರ, ವಿಭೀಷಣನ ಶಂಕೆ

ರಣರಂಗದಲ್ಲಿ ರಾವಣನು ತನ್ನ ಭವ್ಯರಥದ ಮೇಲೆ ಕುಳಿತು, ನಾನಾ ಆಯುಧಗಳನ್ನು ಹಿಡಿದು ವಿಜೃಂಭಿಸುತ್ತಿದ್ದನು. ಅತ್ತ ಶ್ರೀರಾಮನು ಬರಿಗಾಲಿನಲ್ಲಿ, ಯಾವುದೇ ಕವಚವಿಲ್ಲದೆ ಸೌಮ್ಯವಾಗಿ ನಿಂತಿದ್ದನು. ಇದನ್ನು ಕಂಡ ವಿಭೀಷಣನಿಗೆ ಆತಂಕವಾಗಿ, “ಪ್ರಭು, ಶತ್ರುವು ಸರ್ವ ಸನ್ನದ್ಧನಾಗಿ ದ್ದಾನೆ, ನೀವು ಬರಿಗಾಲಿನಲ್ಲಿದ್ದೀರಿ. ಈ ಯುದ್ಧವನ್ನು ಗೆಲ್ಲುವುದು ಹೇಗೆ?" ಎಂದು ಪ್ರೇಮಪೂರ್ವಕವಾಗಿ ಕೇಳಿದನು.

ರಾಮಚರಿತ ಮಾನಸ: ಲಂಕಾ ಸಮರ, ವಿಭೀಷಣನ ಶಂಕೆ

-

ಒಂದೊಳ್ಳೆ ಮಾತು

ಸಂಧಾನದ ಹಾದಿ ಮುಚ್ಚಿದಾಗ, ರಾವಣನ ಅಹಂಕಾರದ ಕೋಟೆ ಕುಸಿಯುವ ಕಾಲ ಹತ್ತಿರ ವಾಯಿತು. ಶ್ರೀರಾಮನ ಆಜ್ಞೆಯಂತೆ ವಾನರ ಸೈನ್ಯವು ಲಂಕೆಯ ನಾಲ್ಕು ದಿಕ್ಕು ಗಳಿಂದಲೂ ಆಕ್ರಮಣ ಮಾಡಿತು. ಆಕಾಶವು ‘ಜೈ ಶ್ರೀರಾಮ’ ಎಂಬ ಘೋಷಣೆಯಿಂದ ಕಂಪಿಸಿತು.

ರಣರಂಗದಲ್ಲಿ ರಾವಣನು ತನ್ನ ಭವ್ಯರಥದ ಮೇಲೆ ಕುಳಿತು, ನಾನಾ ಆಯುಧಗಳನ್ನು ಹಿಡಿದು ವಿಜೃಂಭಿಸುತ್ತಿದ್ದನು. ಅತ್ತ ಶ್ರೀರಾಮನು ಬರಿಗಾಲಿನಲ್ಲಿ, ಯಾವುದೇ ಕವಚವಿಲ್ಲದೆ ಸೌಮ್ಯವಾಗಿ ನಿಂತಿದ್ದನು. ಇದನ್ನು ಕಂಡ ವಿಭೀಷಣನಿಗೆ ಆತಂಕವಾಗಿ, “ಪ್ರಭು, ಶತ್ರುವು ಸರ್ವ ಸನ್ನದ್ಧನಾಗಿದ್ದಾನೆ, ನೀವು ಬರಿಗಾಲಿನಲ್ಲಿದ್ದೀರಿ. ಈ ಯುದ್ಧವನ್ನು ಗೆಲ್ಲುವುದು ಹೇಗೆ?" ಎಂದು ಪ್ರೇಮಪೂರ್ವಕವಾಗಿ ಕೇಳಿದನು.

ತುಳಸೀದಾಸರು ಈ ಸಂದರ್ಭವನ್ನು ಅದ್ಭುತವಾಗಿ ಚಿತ್ರಿಸಿದ್ದಾರೆ:

ನಾಥ ನ ರಥ ನಹೀಂ ತನ ಪದ ತ್ರಾಣಾ |

ಕೆಹಿ ಬಿಽ ಜಿತಬ ಬೀರ ಬಲವಾನಾ ||

ಸನಹ ಸಖಾ ಕಹ ಕೃಪಾನಿಧಾನಾ |

ಜೇಹಿಂ ಜಯ ಹೋಯ ಸೋ ಸ್ಯಂದನ ಆನಾ ||

ಭಾವಾರ್ಥ: “ಸ್ವಾಮಿ, ನಿಮಗೆ ರಥವಿಲ್ಲ, ಕಾಲಿಗೆ ಪಾದರಕ್ಷೆಯೂ ಇಲ್ಲ. ಇಂಥ ಬಲಶಾಲಿ ರಾಕ್ಷಸನನ್ನು ನೀವು ಹೇಗೆ ಜಯಿಸುವಿರಿ?" ಎಂದು ವಿಭೀಷಣ ಕೇಳಿದಾಗ, ಕೃಪಾನಿಽಯಾದ ರಾಮನು ನಸುನಗುತ್ತಾ ಹೇಳಿದನು, “ಸಖನೇ ಕೇಳು, ವಿಜಯವನ್ನು ತಂದುಕೊಡುವ ರಥವೇ ಬೇರೆಯಿದೆ".ರಾಮನು ವಿಭೀಷಣನಿಗೆ ವಿವರಿಸಿದ ಆ ‘ಧರ್ಮರಥ’ ಕೇವಲ ಯುದ್ಧ ಕ್ಕಲ್ಲ, ನಮ್ಮ ಜೀವನದ ಸಂಕಷ್ಟಗಳನ್ನು ಎದುರಿಸಲು ಬೇಕಾದ ದಿವ್ಯದರ್ಶನ.

ಇದನ್ನೂ ಓದಿ: Roopa Gururaj Column: ರಾಮಚರಿತ ಮಾನಸ: ಲಂಕಾ ಪ್ರವೇಶ ಮತ್ತು ಶ್ರೀರಾಮನ ಕರುಣೆ

ಶೌರ್ಯ ಮತ್ತು ಧೈರ್ಯಗಳೇ ಆ ರಥದ ಚಕ್ರಗಳು. ಸತ್ಯ ಮತ್ತು ಶೀಲಗಳೇ ಆ ರಥದ ಅಚಲವಾದ ಧ್ವಜಗಳು. ಬಲ, ವಿವೇಕ, ಇಂದ್ರಿಯ ನಿಗ್ರಹ ಮತ್ತು ಪರೋಪಕಾರಗಳೇ ಈ ರಥದ ನಾಲ್ಕು ಕುದುರೆಗಳು.

ಕ್ಷಮೆ ಮತ್ತು ದಯೆಯೇ ಈ ರಥವನ್ನು ಮುನ್ನಡೆಸುವ ಸಾರಥಿಗಳು. ಯುದ್ಧವು ಕೇವಲ ಬಾಣಗಳಿಂದ ಗೆಲ್ಲುವಂಥದ್ದಲ್ಲ, ಅದು ಚಾರಿತ್ರ್ಯದಿಂದ ಗೆಲ್ಲುವಂಥದ್ದು ಎಂದು ರಾಮನು ತೋರಿಸಿಕೊಟ್ಟನು. ಲಂಕೆಯ ಮಣ್ಣಿನಲ್ಲಿ ಅಧರ್ಮದ ಅಟ್ಟಹಾಸ ಮಿತಿಮೀರಿದ್ದರೂ, ರಾಮನ ಮುಖದಲ್ಲಿ ಮಾತ್ರ ಅದೇ ಸ್ಥಿತಪ್ರಜ್ಞತೆ ಇತ್ತು.

ಯುದ್ಧ ಅನಿವಾರ್ಯವಾದಾಗಲೂ ರಾಮನ ಬಾಣಗಳು ಕೇವಲ ಸಂಹಾರಕ್ಕಾಗಿ ಇರಲಿಲ್ಲ, ಅವು ಅಧರ್ಮದ ಸಂಕೋಲೆಯಿಂದ ಆತ್ಮಗಳನ್ನು ಬಿಡುಗಡೆ ಮಾಡಲು ಇದ್ದವು. ಕುಂಭ ಕರ್ಣನಂಥ ಮಹಾಬಲಶಾಲಿ ಪತನ ಹೊಂದಿದಾಗಲೂ ರಾಮನು ಅವನ ವೀರತ್ವವನ್ನು ಗೌರವಿಸಿದನು.

ಮಂಡೋದರಿಯ ವಿಲಾಪವಾಗಲೀ ಅಥವಾ ಶತ್ರು ಸೈನ್ಯದ ಸಾವು-ನೋವುಗಳನ್ನು ಕಂಡಾಗಲೇ ಆಗಲೀ ರಾಮನ ಕಣ್ಣುಗಳಲ್ಲಿ ದ್ವೇಷವಿರಲಿಲ್ಲ, ಬದಲಾಗಿ ಒಂದು ರೀತಿಯ ವಿಷಾದ ಮತ್ತು ಕರುಣೆಯಿತ್ತು.

ಲಕ್ಷ್ಮಣನು ಶಕ್ತಿ ಬಾಣದಿಂದ ಮೂರ್ಛೆ ಹೋದಾಗ ರಾಮನು ಸಾಮಾನ್ಯ ಮನುಷ್ಯನಂತೆ ಹಲುಬಿದನು. ಇದು ರಾಮನ ನರಲೀಲೆ. ಭಕ್ತಿಯ ಪರಾಕಾಷ್ಠೆಯಾದ ಹನುಮಂತನ ಮೂಲಕ ಸಂಜೀವಿನಿಯನ್ನು ತರಿಸಿ ಲಕ್ಷ್ಮಣನನ್ನು ಉಳಿಸಿಕೊಂಡನು.

ನಮ್ಮೊಳಗಿನ ಅಹಂಕಾರವೇ ‘ರಾವಣ’. ನಮ್ಮಲ್ಲಿರುವ ಸಂಶಯಗಳೇ ‘ಕುಂಭಕರ್ಣ’. ಇವು ಗಳನ್ನು ಗೆಲ್ಲಲು ನಮಗೆ ಹೊರಗಿನ ಆಯುಧಗಳಿಗಿಂತ ಒಳಗಿನ ‘ಧರ್ಮರಥ’ದ ಅಗತ್ಯವಿದೆ . ರಾಮನು ಲಂಕೆಯನ್ನು ಗೆದ್ದದ್ದು ರಾಜ್ಯಭಾರಕ್ಕಲ್ಲ, ಬದಲಾಗಿ ಅಧರ್ಮದ ಲಂಕೆಯನ್ನು ಧರ್ಮದ ಅಯೋಧ್ಯೆಯನ್ನಾಗಿ ಪರಿವರ್ತಿಸಲು. ವಿಭೀಷಣನಿಗೆ ಪಟ್ಟಾಭಿಷೇಕ ಮಾಡುವ ಮೂಲಕ ರಾಮನು ‘ತ್ಯಾಗ’ದ ಉತ್ತುಂಗವನ್ನು ತೋರಿದನು.

ರಾಮನಾಮದ ಸ್ಮರಣೆ ಎಂಬುದು ಒಂದು ತೇಲುಸೇತುವೆ ಇದ್ದಂತೆ; ಇದನ್ನು ನಂಬಿದವನು ಸಂಸಾರ ಸಾಗರವನ್ನು ಸುಲಭವಾಗಿ ದಾಟಬಲ್ಲ.

ರಘುಕುಲ ರೀತಿ ಸದಾ ಚಲಿ ಆಯೀ | ಪ್ರಾಣ ಜಾಯ್ ಪರು ವಚನ ನ ಜಾಯೆ

ಜೀವನದಲ್ಲಿ ಎಷ್ಟೇ ಕಷ್ಟಗಳು ಬಂದರೂ ಸತ್ಯದ ಹಾದಿ ಬಿಡಬಾರದು ಎಂಬುದು ಈ ಲಂಕಾವಿಜಯದ ಸಾರ. ರಾಮ ಕೇವಲ ತ್ರೇತಾಯುಗದ ದೇವರಲ್ಲ, ಪ್ರತಿ ಮನುಷ್ಯನ ಅಂತರಾಳದಲ್ಲಿ ಜಾಗೃತವಾಗ ಬೇಕಾದ ಆದರ್ಶ ಗುಣಗಳ ಸಂಕೇತ. ಇಂಥ ರಾಮಾಯಣ ವನ್ನು ಮನೆ ಮನೆಯಲ್ಲೂ ಪಠಿಸಿ, ಅರ್ಥೈಸಿ, ಪೂಜಿಸಿ ಎಲ್ಲರ ಮನಸ್ಸುಗಳಿಗೆ ಇದರ ಸಾರವನ್ನು ಸರಿಯಾದ ರೀತಿಯಲ್ಲಿ ತುಂಬಿದಾಗ ಅವರಿಗೆ ಬದುಕಿನ ಸವಾಲುಗಳನ್ನು ಎದುರಿಸಲು ತತ್ವಗಳ ಮೆಟ್ಟಿಲುಗಳನ್ನು ಕಟ್ಟಿಕೊಟ್ಟಂತಾಗುತ್ತದೆ.