ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Veerakaputra Srinivas Column: ನನಗೂ ಕರ್ನಾಟಕ ರತ್ನ ಪ್ರಶಸ್ತಿ ಬೇಕು...!

ಒಂದು ಬಾರಿ ಮೈಸೂರು ಅಥವಾ ಬೆಂಗಳೂರು ನಗರದೊಳಗೆ ಪ್ರವೇಶಿಸಿದರೆ ಈ ಹೋಟೆಲ್‌ ಗಳಿಗಿಂತ ಅರ್ಧ ಬೆಲೆಯಲ್ಲಿ ಹಸಿವು ತಣಿಸಿಕೊಳ್ಳಬಹುದೆನ್ನುವುದು ಅವರ ಲೆಕ್ಕಾಚಾರ. ಹೆದ್ದಾರಿಯ ಬಹುತೇಕ ಹೋಟೆಲ್‌ಗಳಲ್ಲಿ ಒಂದು ಕಪ್ ಕಾಫಿ ಇಲ್ಲವೇ ಟೀ ಕುಡಿಯಬೇಕಾದರೂ ಕನಿಷ್ಠ 50 ರು. ಪಾವತಿಸಬೇಕಾಗಿದೆ.

ನನಗೂ ಕರ್ನಾಟಕ ರತ್ನ ಪ್ರಶಸ್ತಿ ಬೇಕು...!

-

Profile
Ashok Nayak Apr 29, 2026 12:59 PM

ಪ್ರಚಲಿತ

ವೀಕರಪುತ್ರ ಶ್ರೀನಿವಾಸ

ಇತ್ತೀಚೆಗೆ ಕನ್ನಡಿಗ ರಾಘವೇಂದ್ರ ರಾವ್ ಅವರ ರಾಮೇಶ್ವರಂ ಕೆಫೆಗೆ ಹೋದವರು ಅಲ್ಲಿಯ ತಿಂಡಿ, ತಿನಿಸಿನ ವರ್ಣನೆ ಬಿಟ್ಟು ಪಾವತಿಸಿದ ಬಿಲ್‌ಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಮುಂಬಯಿನ ಹೊಸ ಶಾಖೆಯಲ್ಲಿ ಇತ್ತೀಚೆಗೆ ಆತಿಥ್ಯ ಸ್ವೀಕರಿಸಿದ ಗ್ರಾಹಕರೊಬ್ಬರು ಮಸಾಲಾ ದೋಸೆಗೆ 376 ರು. ವಡಾ ಸಾಂಬಾರ್‌ಗೆ 240 ರು. ಟೀಗೆ 196 ರು. ಪಾವತಿಸಿದ್ದಾಗಿ ಬಿಲ್ ಹಂಚಿಕೊಂಡಿದ್ದರು.

ಬೆಂಗಳೂರಿನ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿರುವ ಕೆಫೆಯಲ್ಲಿ ಪೋಡಿ ಇಡ್ಲಿಗೆ ಜಿಎಸ್‌ಟಿ ಸೇರಿ 315 ರು. ಪಾವತಿಸಿದ್ದಾಗಿ ಗ್ರಾಹಕರೊಬ್ಬರು ಹೇಳಿಕೊಂಡಿ ದ್ದಾರೆ. ಇನ್ನು ರಾಜಧಾನಿಯ ಬೊಮ್ಮಸಂದ್ರದಲ್ಲಿ 90 ಸಾವಿರ ಚದರ ಅಡಿಯಲ್ಲಿ ತಲೆ ಎತ್ತಿರುವ ಭವ್ಯ ಮಂದಿರ ಕಮ್ ಹೋಟೆಲ್‌ನಲ್ಲಿ ಈ ಬಿಲ್ಲು ಇನ್ನಷ್ಟೂ ಭಾರವಾಗಿರುವ ವರದಿಗಳಿವೆ. ಇಲ್ಲಿನ ಆತಿಥ್ಯದ ಬಗ್ಗೆಯೂ ನೂರೆಂಟು ಕಮೆಂಟುಗಳು ಜಾಲತಾಣದಲ್ಲಿ ಸಿಗುತ್ತವೆ.

ನಿಮ್ಮ ಕಿಸೆ ಭಾರವಿದ್ದರೆ, ಮನಸ್ಸು ಹಗುರ ಮಾಡಿಕೊಳ್ಳಲು ಇಲ್ಲಿಗೆ ಹೋಗಬಹುದು ಅಥವಾ ದೂರದಿಂದ ನೋಡಿ ಖುಷಿ ಪಡಬಹುದು. ಆದರೆ ಬೆಂಗಳೂರಿನಿಂದ ಧರ್ಮಸ್ಥಳ, ಕುಕ್ಕೆ ಸುಬ್ರಮಣ್ಯ, ಚಾಮುಂಡಿ ಬೆಟ್ಟ ಅಥವಾ ಉತ್ತರ ಕರ್ನಾಟಕದ ಯಾವುದೋ ಊರಿಗೆ ಕುಟುಂಬ ಸಮೇತ ಹೊರಟಿರುತ್ತೀರಿ ಎಂದುಕೊಳ್ಳಿ.

ಹೊಟ್ಟೆ ತಾಕಲಾಟ ನಡೆಸುತ್ತಿದ್ದರೂ ಇಲ್ಲಿನ ಹೆದ್ದಾರಿ ಸಮೀಪ ಹೊಸದಾಗಿ ತಲೆ ಎತ್ತಿರುವ ತಲೆ ಎತ್ತಿರುವ ಭವ್ಯ ಹೋಟೆಲ್‌ಗಳ ಒಳಗೆ ಹೋಗಲು ಧೈರ್ಯ ಸಾಕಾಗುವುದಿಲ್ಲ. ಇಬ್ಬರು ಮಕ್ಕಳ ಸಹಿತ ನಾಲ್ವರ ಕುಟುಂಬ ಸಾವಿರ ರು. ಕೈಯಲ್ಲಿ ಹಿಡಿದು ಒಳಗೆ ಹೋದರೆ ಹೊಟ್ಟೆ ತುಂಬಾ ಉಂಡು, ಸಂತೃಪ್ತಿಯಿಂದ ಹೊರ ಬರಲು ಸಾಧ್ಯವಿಲ್ಲ.

ಇದನ್ನೂ ಓದಿ: Raghava Sharma Nidle Column: ಭಯಮುಕ್ತ ಚುನಾವಣೆಗೆ ದೀದಿ ಥ್ಯಾಂಕ್ಸ್‌ ಹೇಳಬೇಡವೇ ?

ಇದೇನೂ ತರಹೇವಾರಿ ಶುಲ್ಕ ಇರುವ ನಾನ್ ವೆಜ್ ಹೊಟೇಲ್ʼಗಳ ಕಥೆಯಲ್ಲ. ಅಪ್ಪಟ ಶಾಖಾಹಾರಿ ಹೋಟೆಲ್ʼಗಳಲ್ಲೂ ಊಟ, ತಿಂಡಿಗಳ ಬೆಲೆ ಗಗನದೆತ್ತರದಲ್ಲಿವೆ. ಬೆಂಗಳೂರಿ ನಿಂದ ಮೈಸೂರು ನಡುವಿನ ಎಕ್ಸ್ ಪ್ರೆಸ್ ರಸ್ತೆ ಇರಲಿ, ಬೆಂಗಳೂರು-ಮಂಗಳೂರು ನಡುವೆ ಅಗಲೀಕರಣ ಕಂಡ ಹೆದ್ದಾರಿಯಾಗಲಿ ರಾಜ್ಯದ ಎಲ್ಲ ಹೆದ್ದಾರಿಗಳಲ್ಲಿ ಇತ್ತೀಚೆಗೆ ಹೊಸ ಹೊಸ ಹೊಟೇಲ್‌ಗಳು ತಲೆ ಎತ್ತಿವೆ. ಈ ಯಾವ ಹೊಟೇಲ್‌ಗಳೂ ಸಣ್ಣ ಪ್ರಮಾಣದಲ್ಲ.

ಬಹುತೇಕ ಎಲ್ಲವನ್ನೂ ಸಾವಿರಾರು ಚದರ ಅಡಿಗಳಲ್ಲಿ ಕಟ್ಟಲಾಗಿದೆ. ಪ್ರತಿಯೊಂದರಲ್ಲೂ ಸಮವಸ್ತ್ರಧಾರಿ ನೌಕರರು, ಸೆಕ್ಯೂರಿಟಿಗಳು, ಕ್ಲೀನಿಂಗ್ ಸಿಬ್ಬಂದಿ ಇರುತ್ತಾರೆ. ತಕ್ಕಮಟ್ಟಿಗೆ ಸ್ವಚ್ಛವಿರುವ ಶೌಚಾಲಯಗಳಿರುತ್ತವೆ. ಆದರೆ ಹೊರಗಿನಿಂದ ಅದ್ದೂರಿಯಾಗಿ ಕಂಡಷ್ಟೂ ಈ ಹೋಟೆಲ್‌ಗಳ ಒಳ ಹೊಕ್ಕು ನೋಡಲು ಮಧ್ಯಮ ವರ್ಗದ ಮಂದಿ ಹಿಂದೇಟು ಹಾಕುತ್ತಾರೆ.

ಒಂದು ಬಾರಿ ಮೈಸೂರು ಅಥವಾ ಬೆಂಗಳೂರು ನಗರದೊಳಗೆ ಪ್ರವೇಶಿಸಿದರೆ ಈ ಹೋಟೆಲ್‌ ಗಳಿಗಿಂತ ಅರ್ಧ ಬೆಲೆಯಲ್ಲಿ ಹಸಿವು ತಣಿಸಿಕೊಳ್ಳಬಹುದೆನ್ನುವುದು ಅವರ ಲೆಕ್ಕಾಚಾರ. ಹೆದ್ದಾರಿಯ ಬಹುತೇಕ ಹೋಟೆಲ್‌ಗಳಲ್ಲಿ ಒಂದು ಕಪ್ ಕಾಫಿ ಇಲ್ಲವೇ ಟೀ ಕುಡಿಯಬೇಕಾದರೂ ಕನಿಷ್ಠ 50 ರು. ಪಾವತಿಸಬೇಕಾಗಿದೆ.

ರಾಜ್ಯದಲ್ಲಿ ಹೆದ್ದಾರಿ ಪಯಣ ಈಗ ಹಿಂದಿಗಿಂತ ಹೆಚ್ಚು ಸುಖಕರವಾಗಿವೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಕಣ್ಣು ಹಾಯಿಸಿದಷ್ಟು ಉದ್ದಕ್ಕೆ ಚಾಚಿಕೊಂಡಿರುವ ನಯವಾದ ರಸ್ತೆಗಳು, ಫ್ಲೈಓವರ್ʼಗಳು ನಮಗೆ ‘ವಿಕಸಿತ ಭಾರತ’ದ ದರ್ಶನ ಮಾಡಿಸುತ್ತವೆ.

ಆದರೆ 20-30 ಕಿ.ಮೀ ಅಂತರದಲ್ಲಿ ಅಡ್ಡಗಟ್ಟುವ ಟೋಲ್ ಮತ್ತು ಹೋಟೆಲ್‌ಗಳ ಬಿಲ್ ಮಾತ್ರ ಸಾಮಾನ್ಯ ಜನರನ್ನು ಕಂಗೆಡಿಸುತ್ತಿವೆ. ಇಂದು ಹೆzರಿಗಳಲ್ಲಿ ಸಾಗುವುದೆಂದರೆ ಅದು ಬರೀ ಪ್ರಯಾಣವಲ್ಲ, ಬದಲಾಗಿ ‘ಅಽಕೃತ ದರೋಡೆ’ಗೆ ನಮ್ಮನ್ನು ನಾವೇ ಒಡ್ಡಿ ಕೊಳ್ಳುತ್ತಿರುವ ಯಾನ.

ಬೆಂಗಳೂರಿನಿಂದ ಮಂಗಳೂರಿಗೆ ಹೋಗಬೇಕಾದರೆ 10ಕ್ಕೂ ಹೆಚ್ಚು ಟೋಲ್‌ಗಳನ್ನು ದಾಟಿ ಸಾಗಬೇಕು. ನಿಮ್ಮ ವಾಹನಕ್ಕೆ ರಾಷ್ಟ್ರೀಯ ಹೆದ್ದಾರಿ ವಾರ್ಷಿಕ ಪಾಸ್ ಇಲ್ಲ ಎಂದಾದರೆ ಟೋಲ್ ಮೊತ್ತವೇ ಸಾವಿರ ರು. ದಾಟುತ್ತದೆ. ವಿಪರ್ಯಾಸವೆಂದರೆ, ಭಾರಿ ಹಣ ಪಾವತಿಸಿ ದರೂ ಹೆದ್ದಾರಿಗಳಲ್ಲಿ ಕನಿಷ್ಠ ಸೌಲಭ್ಯಗಳಾದ ಗುಣಮಟ್ಟದ ಶೌಚಾಲಯಗಳು ಅಥವಾ ವಿಶ್ರಾಂತಿ ತಾಣಗಳು ಸಿಗುವುದು ದುರ್ಲಭ.

ಟೋಲ್ ವಸೂಲಿ ಮಾಡುವ ಕಂಪನಿಗಳಿಗೆ ರಸ್ತೆ ನಿರ್ವಹಣೆಯ ಬಗ್ಗೆ ಇರುವ ಕಾಳಜಿ ಶೌಚಾಲಯಗಳ ಸ್ವಚ್ಛತೆಯ ಬಗ್ಗೆ ಇಲ್ಲ. ಹೆದ್ದಾರಿಯ ಉದ್ದಕ್ಕೂ ಮಹಿಳೆಯರು ಮತ್ತು ಮಕ್ಕಳು ಶೌಚಾಲಯಕ್ಕಾಗಿ ಪರದಾಡುವ ಸ್ಥಿತಿ ಇದೆ. ಇನ್ನು ಇದೇ ಹೆದ್ದಾರಿಯ ಬದಿಯಲ್ಲಿ ವಾಹನಗಳನ್ನು ನಿಲ್ಲಿಸಿ ಸ್ವಲ್ಪ ಹೊತ್ತು ವಿಶ್ರಮಿಸೋಣ ಎಂದರೆ ಸರ್ವಿಸ್ ರಸ್ತೆಯಲ್ಲೂ ಜಾಗ ಬಿಟ್ಟಿಲ್ಲ. ಕೆಲವು ಕಡೆ ಸರ್ವಿಸ್ ರಸ್ತೆಯೂ ಇಲ್ಲ. ಹೋಟೆಲ್‌ಗಳು ಶೌಚಾಲಯ ಬಳಕೆಗೆ ಅವಕಾಶ ನೀಡಬೇಕೆಂಬ ನಿಯಮವಿದ್ದರೂ, ಅವುಗಳನ್ನು ಬಳಸಲು ಅಲ್ಲಿನ ದುಬಾರಿ ದರ ಭರಿಸುವ ಶಕ್ತಿ ಇರದವರು ಸಂಕೋಚದಿಂದ ದೂರ ಉಳಿಯುವಂತಾಗಿದೆ.

ಹೆದ್ದಾರಿ ಸಮೀಪ ಇತ್ತೀಚೆಗೆ ತಲೆ ಎತ್ತಿರುವ, ಎತ್ತಲು ಸಿದ್ಧವಾಗಿರುವ ಹೋಟೆಲ್‌ಗಳನ್ನು ಕಂಡರೆ ಖುಷಿಗಿಂತ ಹೆಚ್ಚು ದಿಗಿಲಾಗುತ್ತದೆ. ಕುಟುಂಬವೊಂದು ಪಂಚತಾರಾ ಹೋಟೆಲ್‌ ಗಳಂತೆ ಕಾಣುವ ಈ ಕಟ್ಟಡಗಳ ಒಳ ಹೊಕ್ಕು ಬಂದರೆ ಸಾಕು, ಜೇಬಿಗೆ ಸಾವಿರ ರು.ಗಳಿಗಿಂತ ಮೇಲಿನ ಕತ್ತರಿ ಬೀಳುವುದು ಖಚಿತ.

ಆತಿಥ್ಯ ಸೇವೆಯಲ್ಲ, ಉದ್ಯಮ: ಹೋಟೆಲ್ ಉದ್ಯಮ ಇಂದು ಸೇವೆಯಾಗಿ ಉಳಿದಿಲ್ಲ, ಬದಲಾಗಿ ಅದು ಬರಬರುತ್ತಾ ‘ಉಳ್ಳವರ’ ಸೊತ್ತಾಗುತ್ತಿದೆ. ಬಡವರು ಬಿಡಿ, ಮಧ್ಯಮ ವರ್ಗದ ವ್ಯಕ್ತಿಯೂ ತನ್ನ ಕುಟುಂಬದೊಂದಿಗೆ ಇಂತಹ ಹೋಟೆಲ್‌ಗಳಿಗೆ ಪ್ರವೇಶಿಸಲು ಹತ್ತು ಬಾರಿ ಯೋಚಿಸಬೇಕಾಗಿದೆ. ಇಲ್ಲಿನ ಹವಾನಿಯಂತ್ರಿತ ಕೊಠಡಿಗಳು, ಭವ್ಯ ಕಟ್ಟಡ ಗಳು ಕೇವಲ ವ್ಯಾಪಾರೀ ತಂತ್ರಗಳಾಗಿವೆ.

ಹೆದ್ದಾರಿ ಪಕ್ಕದಲ್ಲಿ ತಲೆ ಎತ್ತುತ್ತಿರುವ ಈ ಅರಮನೆ ಮಾದರಿಯ ಹೋಟೆಲ್‌ಗಳಲ್ಲಿ ಜನ ಸಾಮಾನ್ಯರಿಗೆ ಸಿಗುವುದು ನಗುಮೊಗದ ಸೇವೆಗಿಂತಲೂ ಹೆಚ್ಚಾಗಿ ‘ಬೆಲೆ’ಯ ಶಾಕ್ ಮಾತ್ರ. ಸಾಮಾನ್ಯ ವ್ಯಕ್ತಿಯೊಬ್ಬ ಹೊಟ್ಟೆ ತುಂಬಾ ಊಟ ಮಾಡುವುದು ಕನಸಿನ ಮಾತು. ಇಲ್ಲಿನ ದರಪಟ್ಟಿ ನೋಡಿದರೆ ಬಡವನ ಹಸಿವು ಅರ್ಧ ಸತ್ತು ಹೋಗುತ್ತದೆ.

ಇದೇ ರಸ್ತೆಯಲ್ಲಿ ಹಿಂದೆ ನಮ್ಮ ಹಿರಿಯರು ನೆಟ್ಟ ಮರ ಗಿಡಗಳಿದ್ದವು. ನೂರಾರು ವರ್ಷಗಳ ಹಿಂದೆ ನೆಟ್ಟ ಆಲದ ಮರಗಳು ರಾಜ, ಮಹಾರಾಜರ ಕಥೆ ಹೇಳುತ್ತಿದ್ದವು. ಈ ಮರಗಳ ನೆರಳಿನಲ್ಲಿ ಅಲ್ಲಿನ ಹಳ್ಳಿಗರು ತಾವು ಬೆಳೆದ ಬೆಳೆಗಳನ್ನು, ಹಣ್ಣು ಹಂಪಲುಗಳನ್ನು ಮಾರು ತ್ತಿದ್ದರು. ಹೊಲ ಗದ್ದೆಗಳು ಕಣ್ಣಿಗೆ ತಂಪೆರೆಯುತ್ತಿದ್ದವು.

ಅಲ್ಲಿನ ಸಂಸ್ಕೃತಿ, ಪರಂಪರೆಯ ದರ್ಶನ ಮಾಡಿಸುತ್ತಿದ್ದವು. ಎಲ್ಲಿ ಬೇಕಾದರೂ ವಾಹನ ನಿಲ್ಲಿಸಿ ವಿಶ್ರಮಿಸಿಕೊಳ್ಳಬಹುದಿತ್ತು. ಸಣ್ಣ ಪುಟ್ಟ ಹೋಟೆಲ್‌ಗಳು, ಪೆಟ್ಟಿಗೆ ಅಂಗಡಿಗಳಲ್ಲಿ ತಮಗೆ ಇಷ್ಟವಾದುದನ್ನು ಖರೀದಿಸಿ ಮುಂದೆ ಸಾಗುವುದು ನಮ್ಮ ನೆನಪಿನ ಬುತ್ತಿಯ ಭಾಗವಾಗುತ್ತಿತ್ತು.

ಇವೆಲ್ಲವೂ ಇಂದು ಮಾಯವಾಗಿವೆ. ಅಗಲೀಕರಣಗೊಂಡ ಹೆದ್ದಾರಿಗಳು ಹಳ್ಳಿಗಳ ಸ್ವರೂಪ ವನ್ನೇ ಕಿತ್ತು ಹಾಕಿವೆ. ಈಗ ಎಲ್ಲಿಯೂ ಹಳ್ಳಿಯ ದರ್ಶನವಾಗುತ್ತಿಲ್ಲ. ಹೆದ್ದಾರಿಯುದ್ದಕ್ಕೂ ಹಳ್ಳಿಗರ ಕೈಯಲ್ಲಿದ್ದ ಭೂಮಿಯನ್ನು ಇನ್ನಾವುದೋ ರಾಜ್ಯದ ಶ್ರೀಮಂತ ಕುಳಗಳು ಖರೀದಿಸಿದ್ದಾರೆ.

ಇಲ್ಲೆಲ್ಲ ಅರಮನೆಯಂತಹ ಕಟ್ಟಡಗಳು ತಲೆ ಎತ್ತಿವೆ. ಇವು ಸ್ಥಳೀಯರಲ್ಲೂ, ದಾರಿ ಹೋಕರಲ್ಲೂ ಒಂದು ರೀತಿಯ ಆತಂಕವನ್ನು ಮೂಡಿಸುತ್ತಿವೆ. ಆ ಭವ್ಯತೆ, ಅಲ್ಲಿನ ಪ್ರವೇಶ ದ್ವಾರದ ಇರುವ ಗರಿಗರಿಯಾದ ಸಮವಸ್ತ್ರದ ಭದ್ರತಾ ಸಿಬ್ಬಂದಿ ಎಲ್ಲವೂ ಸಾಮಾನ್ಯ ಮನುಷ್ಯನನ್ನು ನಾನು ಇಲ್ಲಿಗೆ ಅರ್ಹನಲ್ಲ ಎಂದು ಭಾವಿಸುವಂತೆ ಮಾಡುತ್ತಿವೆ. ಈ ಮಾನಸಿಕ ಅಂತರವು ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾರಕ.

ಮೂಲಭೂತ ಅವಶ್ಯಕತೆಯಾದ ಹಸಿವು ಮತ್ತು ಪ್ರಯಾಣಗಳು ಕೇವಲ ಒಂದು ವರ್ಗಕ್ಕೆ ಸೀಮಿತವಾಗುವುದು ಅಪಾಯಕಾರಿ ಬೆಳವಣಿಗೆ. ಕರ್ನಾಟಕ ಎಂದರೆ ಕೇವಲ ತಂತ್ರಜ್ಞಾನ ದ ಹಬ್ ಅಲ್ಲ. ಇಲ್ಲಿನ ನೆಲಕ್ಕೆ ವಿಶೇಷ ಗುಣವಿದೆ. ಇದು ‘ಅನ್ನ, ಅಕ್ಷರ, ಆಧ್ಯಾತ್ಮ’ ಎಂಬ ತ್ರಿವಿಧ ದಾಸೋಹಗಳನ್ನು ಪರಿಚಯಿಸಿದ ಪುಣ್ಯಭೂಮಿ.

ಇಲ್ಲಿ ಹಸಿದು ಬಂದವರಿಗೆ ಉಚಿತವಾಗಿ ಅನ್ನ ನೀಡುವ ಪರಂಪರೆ ಇದೆ. ಇಲ್ಲಿ ಶಿವಶರಣರು, ಮಠ ಮಾನ್ಯಗಳು, ದೇಗುಲಗಳು ಶತಮಾನಗಳಿಂದ ಈ ಸಂಸ್ಕೃತಿಯನ್ನು ಪೋಷಿಸಿಕೊಂಡು ಬಂದಿವೆ. ಆದರೆ ಇದೇ ನಾಡಿನ ಹೆದ್ದಾರಿಗಳಲ್ಲಿ ಸಾಗುವಾಗ ಒಬ್ಬ ಬಡವ ಅಥವಾ ಮಧ್ಯಮ ವರ್ಗದ ಪ್ರಯಾಣಿಕ ಒಂದು ತುತ್ತು ಅನ್ನಕ್ಕಾಗಿ ನೂರು ಬಾರಿ ಜೇಬನ್ನು ಸವರಿ ನೋಡಬೇಕಾದ ಸ್ಥಿತಿ ಬಂದಿರುವುದು ಅತ್ಯಂತ ದುರದೃಷ್ಟಕರ.

ದೂರದೃಷ್ಟಿಯಿಲ್ಲದ ಯೋಜನೆ: ಸರಕಾರ ಮತ್ತು ಅಧಿಕಾರಿಗಳು ಹೆದ್ದಾರಿಗಳನ್ನು ಅಭಿವೃದ್ಧಿ ಪಡಿಸುವಾಗ ‘ಕಾರ್ಪೊರೇಟ್’ ದೃಷ್ಟಿಕೋನವನ್ನೇ ಅಳವಡಿಸಿಕೊಳ್ಳುತ್ತಿದ್ದಾರೆ. ಬಡವ ಮತ್ತು ಸಾಮಾನ್ಯ ಮನುಷ್ಯ ಕೂಡ ಈ ರಸ್ತೆಯ ಪಾಲುದಾರ ಎಂಬ ಸತ್ಯವನ್ನು ಮರೆಯುತ್ತಿದ್ದಾರೆ. ಕೇವಲ ಶ್ರೀಮಂತರು ಅಥವಾ ದೊಡ್ಡ ಕಂಪನಿಗಳ ವಾಹನಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ಈ ನೀತಿಗಳನ್ನು ರೂಪಿಸಲಾಗುತ್ತಿದೆ.

ರಸ್ತೆ ನಿರ್ಮಾಣಕ್ಕೆ ಖಾಸಗಿ ಹೂಡಿಕೆದಾರರನ್ನು ಆಹ್ವಾನಿಸುವುದು ಕೆಟ್ಟದ್ದಲ್ಲ, ಆದರೆ ಅವರು ಹೂಡಿದ ಹಣವನ್ನು ಜನರಿಂದ ಹತ್ತಾರು ಪಟ್ಟು ವಸೂಲಿ ಮಾಡುವಾಗ ಸರಕಾರ ಮೂಕಪ್ರೇಕ್ಷಕನಾಗಬಾರದು. ಸರಕಾರಿ ಪ್ರಾಯೋಜಿತ ಯಾವುದೇ ಯೋಜನೆಗಳಲ್ಲಿ ಶುದ್ಧ ಕುಡಿಯುವ ನೀರು ಮತ್ತು ಉಚಿತ ಶೌಚಾಲಯದ ವ್ಯವಸ್ಥೆಯನ್ನು ಕಡ್ಡಾಯಗೊಳಿಸಬೇಕು.

ಅಭಿವೃದ್ಧಿ ಎಂದರೆ ಕೇವಲ ಅಗಲವಾದ ರಸ್ತೆಗಳಲ್ಲ, ಆ ರಸ್ತೆಗಳಲ್ಲಿ ಸಂಚರಿಸುವ ಅತ್ಯಂತ ಕಟ್ಟಕಡೆಯ ಮನುಷ್ಯನ ಹಸಿವು ಮತ್ತು ಹಕ್ಕುಗಳಿಗೆ ಗೌರವ ಸಿಗುವುದೇ ನಿಜವಾದ ಅಭಿವೃದ್ಧಿ. ಲಾಭ ಬಡುಕತನದ ಹೋಟೆಲ್ ಮಾಲೀಕರು ಮತ್ತು ಕೇವಲ ಆದಾಯದ ಕಡೆಗೆ ಗಮನ ಹರಿಸುವ ಸರಕಾರಗಳು ಎಚ್ಚೆತ್ತುಕೊಳ್ಳದಿದ್ದರೆ, ನಮ್ಮ ಹೆದ್ದಾರಿಗಳು ಕೇವಲ ‘ದರೋಡೆಯ ಮಾರ್ಗ’ಗಳಾಗಿ ಉಳಿಯಲಿವೆ.

ಜನತಾ ಹೋಟೆಲ್‌ಗಳು ಅವಶ್ಯ: ಹೆದ್ದಾರಿಗಳಲ್ಲಿ ಅದರಲ್ಲೂ ಟೋಲ್ ಕೇಂದ್ರಗಳ ಬಳಿ ಸಾಮಾನ್ಯ ಜನರಿಗೆ ಕೈಗೆಟುಕುವ ದರದಲ್ಲಿ ಆಹಾರ ಸಿಗುವಂತೆ ‘ಜನತಾ ಹೋಟೆಲ್’ ಅಥವಾ ‘ಇಂದಿರಾ ಕ್ಯಾಂಟೀನ್’ ಮಾದರಿಯ ವ್ಯವಸ್ಥೆ ಅಗತ್ಯವಿದೆ. ಹೆದ್ದಾರಿಗಳಲ್ಲಿ ಕೇವಲ ಖಾಸಗಿ ಹೋಟೆಲ್‌ಗಳಿಗೆ ಕೆಂಪು ಹಾಸಿನ ಸ್ವಾಗತ ಕೋರುವ ಬದಲು, ಸರಕಾರವು ಪ್ರತಿ 60 ಕಿಲೋಮೀಟರ್‌ಗೊಮ್ಮೆ ‘ಜನತಾ ಫುಡ್ ಕೋರ್ಟ್’ಗಳನ್ನು ಸ್ಥಾಪಿಸಲು ಮುಂದಾಗಬೇಕು. ಇದು ಕೇವಲ ಐಷಾರಾಮಿ ಕಾರುಗಳಲ್ಲಿ ಓಡಾಡುವವರಿಗೆ ಸೀಮಿತವಾಗದೆ, ಕೆಎಸ್‌ಆರ್‌ ಟಿಸಿ ಕೆಂಪು ಬಸ್ಸುಗಳಲ್ಲಿ ಪ್ರಯಾಣಿಸುವ ಸಾಮಾನ್ಯ ಜನರು ಮತ್ತು ಲಾರಿ ಚಾಲಕರಿಗೂ ಆಶ್ರಯ ತಾಣವಾಗಬೇಕು.

ಅಗ್ಗದ ದರದ ಫುಡ್ ಕೋರ್ಟ್‌ಗಳ ನಿರ್ವಹಣೆಯನ್ನು ಸ್ಥಳೀಯ ಸ್ತ್ರೀಶಕ್ತಿ ಸಂಘಗಳಿಗೆ ಅಥವಾ ನಿರುದ್ಯೋಗಿ ಯುವಕರಿಗೆ ವಹಿಸಿಕೊಡಬಹುದು. ಇದರಿಂದ ಕಡಿಮೆ ದರದಲ್ಲಿ ಗುಣಮಟ್ಟದ, ದೇಶಿ ಆಹಾರ ಸಿಗುವುದಲ್ಲದೆ ಸ್ಥಳೀಯವಾಗಿ ಉದ್ಯೋಗ ಸೃಷ್ಟಿಯೂ ಸಾಧ್ಯ ವಿದೆ.

ಎಲ್ಲಕ್ಕಿಂತ ಮುಖ್ಯವಾಗಿ ಎಲ್ಲ ಹೋಟೆಲ್‌ಗಳಲ್ಲಿ ಕನಿಷ್ಠ ಆಹಾರ ಪದಾರ್ಥಗಳಾದ ಟೀ, ಕಾಫಿ ಮತ್ತು ಇಡ್ಲಿ, ಉಪ್ಪಿಟ್ಟಿನಂತಹ ನಿತ್ಯ ಬಳಕೆಯ ತಿಂಡಿ ತಿನಿಸುಗಳಿಗೆ ಸರಕಾರವೇ ಒಂದು ಗರಿಷ್ಠ ದರವನ್ನು ನಿಗದಿಪಡಿಸಬೇಕು. ಹೆದ್ದಾರಿಗಳಲ್ಲಿ ಪ್ರತಿ 20-30 ಕಿಲೋ ಮೀಟರ್‌ಗೆ ಒಂದರಂತೆ ಸುಸಜ್ಜಿತ, ಸ್ವಚ್ಛ ಶೌಚಾಲಯಗಳನ್ನು ಸರಕಾರವೇ ನಿರ್ವಹಿಸ ಬೇಕು.

ಇದಕ್ಕಾಗಿ ಟೋಲ್ ಶುಲ್ಕದ ಒಂದು ಭಾಗವನ್ನು ಬಳಸಬೇಕು. ಅಭಿವೃದ್ಧಿ ಎಂಬುದು ಕೇವಲ ಟೋಲ್ ಹಣದ ಸಂಗ್ರಹದಲ್ಲಿಲ್ಲ, ಬದಲಾಗಿ ಆ ರಸ್ತೆಯಲ್ಲಿ ಸಾಗುವ ಮನುಷ್ಯನ ಕನಿಷ್ಠ ಅವಶ್ಯಕತೆಗಳು ಗೌರವಯುತವಾಗಿ ಪೂರೈಕೆಯಾಗುವುದರಲ್ಲಿದೆ. ಸರಕಾರವು ಹೆದ್ದಾರಿಗಳನ್ನು ಕೇವಲ ‘ಆದಾಯದ ಮೂಲ’ವಾಗಿ ನೋಡದೆ ‘ಸಾರ್ವಜನಿಕ ಸೇವಾ ಮಾರ್ಗ’ವಾಗಿ ನೋಡಿದಾಗ ಮಾತ್ರ ಈ ಬದಲಾವಣೆ ಸಾಧ್ಯ.