#ದೆಹಲಿರಿಸಲ್ಟ್​ ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಫ್ಯಾಷನ್‌ ಲೋಕ ಉದ್ಯೋಗ

Ravi Hunj Column: ಮಹಾಕುಂಭಮೇಳ ಮತ್ತು ವೀರಶೈವ ಪರಂಪರೆ

ಇಡೀ ಜಗತ್ತೇ ಬಲ್ಲಂತೆ ಇಲ್ಲಿ ನಾಗಾಸಾಧುಗಳಿಗೆ ಪ್ರಥಮ ಅಮೃತ ಸ್ಥಾನದ ಆದ್ಯತೆ ನೀಡಲಾಗಿದೆ ಎಂದು ಬಲ್ಲಿರಷ್ಟೇ! ಆದರೆ ಈ ನಾಗಾ, ಅಘೋರಿ, ನಾಥ ಮುಂತಾದ ಸಾಮೂಹಿಕ ಪಂಥದವರಲ್ಲಿ ಪ್ರಥಮ ಬಾರಿಗೆ ಯಾರೊಬ್ಬರೂ ಕುಂಭಮೇಳದ ಪವಿತ್ರ ಸ್ನಾನಕ್ಕೆ ಮುಂದಾಗುವುದಿಲ್ಲ ಎಂದರೆ ಆಶ್ಚರ್ಯವಾಗು ವುದೇ? ನಾಗಾಸಾಧುಗಳಲ್ಲದೆ ಅಘೋರಿಗಳು, ನಾಥ ಮತ್ತಿತರೆ ಸಾಧಕರು ತಮ್ಮ ಸ್ನಾನಕ್ಕೂ ಮುನ್ನ ಓರ್ವ ವೀರಶೈವ ಜಂಗಮನನ್ನು ಸಂಗಮಸ್ಥಳದಲ್ಲಿ ಕೂರಿಸಿ ಪೂಜಿಸಿ ಆಶೀರ್ವಾದ ಪಡೆದು ದಕ್ಷಿಣೆ ನೀಡಿ, ಆತನ ಸ್ನಾನವಾದ ನಂತರವೇ ತಮ್ಮ ಅಮೃತ ಸ್ನಾನಕ್ಕೆ ಚಾಲನೆ ನೀಡುತ್ತಾರೆ, ಗೊತ್ತೇ!

Ravi Hunj Column: ಮಹಾಕುಂಭಮೇಳ ಮತ್ತು ವೀರಶೈವ ಪರಂಪರೆ

ಅಂಕಣಕಾರ ರವಿ ಹಂಜ್

Profile Ashok Nayak Jan 31, 2025 9:17 AM

ಮಹಾಕುಂಭಮೇಳದ ಜಗಮಗಿಸುವ ವ್ಯವಸ್ಥೆ, ವಿದೇಶಿ ಪ್ರವಾಸಿಗರು, ಕೌತುಕ ನಾಗಾಸಾಧುಗಳು, ನಿಗೂಢ ಅಘೋರಿಗಳು, ಎಲ್ಲೂ ಕ್ಯಾಮೆರಾಕಣ್ಣಿಗರು, ಮತ್ತು ರೋಚಕ ಸುದ್ದಿಗಳ ಪರಿಧಿಯಾಚೆಗೆ ಕುಂಭಮೇಳವು ಪ್ರಾಥಮಿಕವಾಗಿ ಶೈವ ಸಂಸ್ಕೃತಿ ಎನಿಸಿದರೂ ದೇಶದ ಎಲ್ಲಾ ಹಿಂದೂ ಸಂಸ್ಕೃತಿಯ ಧರ್ಮಗಳನ್ನು ಒಗ್ಗೂಡಿಸುವ ಏಕೈಕ ಸಾಂಕಲ್ಪಿಕ ಸ್ವರೂಪವಾಗಿದೆ.

ಇಡೀ ಜಗತ್ತೇ ಬಲ್ಲಂತೆ ಇಲ್ಲಿ ನಾಗಾಸಾಧುಗಳಿಗೆ ಪ್ರಥಮ ಅಮೃತ ಸ್ಥಾನದ ಆದ್ಯತೆ ನೀಡಲಾಗಿದೆ ಎಂದು ಬಲ್ಲಿರಷ್ಟೇ! ಆದರೆ ಈ ನಾಗಾ, ಅಘೋರಿ, ನಾಥ ಮುಂತಾದ ಸಾಮೂಹಿಕ ಪಂಥದವರಲ್ಲಿ ಪ್ರಥಮ ಬಾರಿಗೆ ಯಾರೊಬ್ಬರೂ ಕುಂಭಮೇಳದ ಪವಿತ್ರ ಸ್ನಾನಕ್ಕೆ ಮುಂದಾಗುವುದಿಲ್ಲ ಎಂದರೆ ಆಶ್ಚರ್ಯವಾಗುವುದೇ? ನಾಗಾಸಾಧುಗಳಲ್ಲದೆ ಅಘೋರಿಗಳು, ನಾಥ ಮತ್ತಿತರೆ ಸಾಧಕರು ತಮ್ಮ ಸ್ನಾನಕ್ಕೂ ಮುನ್ನ ಓರ್ವ ವೀರಶೈವ ಜಂಗಮನನ್ನು ಸಂಗಮಸ್ಥಳದಲ್ಲಿ ಕೂರಿಸಿ ಪೂಜಿಸಿ ಆಶೀ ರ್ವಾದ ಪಡೆದು ದಕ್ಷಿಣೆ ನೀಡಿ, ಆತನ ಸ್ನಾನವಾದ ನಂತರವೇ ತಮ್ಮ ಅಮೃತ ಸ್ನಾನಕ್ಕೆ ಚಾಲನೆ ನೀಡುತ್ತಾರೆ, ಗೊತ್ತೇ!

ಸಂಶೋಧಕರಾದ ವೀರಭದ್ರಯ್ಯ ಚಿಕ್ಯಾಟಿಮಠ ಅವರು ತಮ್ಮ ‘ವೀರಶೈವ ಸಂಶೋಧನಾ ಲೇಖನ ಗಳು: ಭಾಗ -1’ ಕೃತಿಯ ‘ಉತ್ತರ ಭಾರತದ ಜಂಗಮರು’ ಅಧ್ಯಾಯದಲ್ಲಿ, ...ಎಲ್ಲಾ ಕುಂಭಮೇಳದ ಪರಂಪರೆಯ ಪದ್ದತಿಯಂತೆ ಪಲ್ಲಕ್ಕಿಯೋಪಾದಿಯಲ್ಲಿ ನಾಲ್ಕು ಜನ ದಿಗಂಬರ ವಾಮಮಾರ್ಗದ ಸಾಧಕರು ನಾಲ್ಕುದಿಕ್ಕಿನಲ್ಲಿ ನಿಂತು ಮಧ್ಯದಲ್ಲಿ ಜಂಗಮನನ್ನು ನಿಲ್ಲಿಸಿ ಅವನನ್ನು ಭ ಕ್ತಿಶ್ರzಗಳಿಂದ ತ್ರಿವೇಣಿ ಸಂಗಮಕ್ಕೆ ಕರೆದೊಯ್ಯುತ್ತಾರೆ, ಆ ತ್ರಿವೇಣಿ ಸಂಗಮದ ನೀರು ಸಮೀಪಿಸುತ್ತಿದ್ದಂತೆ ಮುಂದಿನ ಇಬ್ಬರು ದಿಗಂಬರರು ಅಕ್ಕಪಕ್ಕಕ್ಕೆ ಸರಿದು ಜಂಗಮನನ್ನು ನದಿಯ ನೀರಿಗೆ ಕುಂಭ ಮೇಳದ ದಿವ್ಯಸ್ನಾನಕ್ಕಾಗಿ ಅನುಕೂಲ ಮಾಡಿಕೊಡುತ್ತಾರೆ.

ಇದನ್ನೂ ಓದಿ: Ravi Hunz Column: ಎಲ್ಲಾ ಅವಘಡಗಳಿಗೆ ಮನುಸ್ಮೃತಿ ಇಂಧನವನ್ನೊದಗಿಸಿತು

ಆ ಜಂಗಮನು ಅತ್ಯಂತ ಗೌರವಾದರಗಳಿಂದ ತ್ರಿವೇಣಿ ಸಂಗಮವನ್ನು ಪ್ರವೇಶಿಸಿ ಆರಂಭದಲ್ಲಿ ಸ್ನಾನಮಾಡಿ ದಡ ಸೇರುತ್ತಿದ್ದಂತೆ ಸಾಧುಗಳು ಅವನನ್ನು ಮೊದಲಿನ ಪಲ್ಲಕ್ಕಿ ಪದ್ದತಿಯಂತೆ ಕರೆತಂದು ನದಿಯ ದಡದ ಮೇಲೆ ಆತನು ಆಸೀನನಾದ ಮೇಲೆ ಆ ನಾಲ್ಕು ಜನ ಸಾಧುಗಳು ವೀರಮಾಹೇಶ್ವರ ಜಂಗಮನಿಗೆ ದಕ್ಷಿಣಾದಿಗಳನ್ನು ನೀಡಿ ಅವನ ಪಾದಕ್ಕೆ ಶಿರಸಾಷ್ಟಾಂಗ ನಮ ಸ್ಕಾರ ಗಳನ್ನು ಭಕ್ತಿಶ್ರದ್ದೆ ಗೌರವಗಳಿಂದ ಸಮರ್ಪಿಸಿ ನಂತರ ಕುಂಭಮೇಳದ ತ್ರಿವೇಣಿ ಸಂಗಮದಲ್ಲಿ ಮಿಂದು ಪುನೀತರಾಗುತ್ತಾರೆ.

ಇದೇ ಪದ್ದತಿಯನ್ನು ಇನ್ನುಳಿದ ಕುಂಭಮೇಳದಲ್ಲಿ ಸೇರಿದ ಎಲ್ಲಾ ಸನ್ಯಾಸಿ, ಸಾಧು, ಸಂತರು, ವಾಮಾಚಾರದ ದಿಗಂಬರ ಅಘೋರಿಗಳು ಮತ್ತು ಮುಂತಾದವರು ಆಚರಿಸುವ ಪದ್ದತಿಯು ಪ್ರಸ್ತುತ ಇಂದಿನ ದಿನಮಾನಗಳಲ್ಲಿ ಉಳಿದಿರುವುದು ಗತಕಾಲದ ವೀರಶೈವ ಲಿಂಗಾಯತ ಪರಂಪರೆಯ ಇತಿಹಾಸದ ಸಾಕ್ಷ್ಯಾಧಾರವಾಗಿದೆ ಎಂದಿದ್ದಾರೆ.

ಈ ಗೌರವಕ್ಕೆ ಪಾತ್ರರಾಗುವ ಉತ್ತರ ಭಾರತದ ಜಂಗಮರು ಹರಿಯಾಣ, ಪಂಜಾಬ, ರಾಜಸ್ಥಾನ ಗಳಲ್ಲಿ ವಾಸಿಸುತ್ತಿದ್ದರೂ ಸದಾ ಸಂಚಾರಿಗಳಾಗಿರುತ್ತಾರೆ. ಈ ಉತ್ತರ ಭಾರತದ ವೀರಶೈವ ಜಂಗಮ ರಿಗೂ ಕರ್ನಾಟಕದ ಜಂಗಮರಿಗೂ ಪ್ರಾದೇಶಿಕ ವ್ಯತ್ಯಾಸಗಳನ್ನು ಬಿಟ್ಟರೆ ತಾತ್ವಿಕವಾಗಿ ಯಾವುದೇ ಭೇದಗಳಿಲ್ಲ.

ಅವರು ತಮ್ಮನ್ನು ವೀರಶೈವ ಲಿಂಗಾಯತ ಜಂಗಮರೆಂದೇ ಗುರುತಿಸಿಕೊಂಡರೂ ಸಾಮಾಜಿಕವಾಗಿ ಜನರು ಇವರನ್ನು ದಶ್ನಮ್ ಸಾಧುಗಳು ಎಂದು ಗುರುತಿಸುತ್ತಾರೆ. ಆದರೆ ಇವರು ದಶ್ನಮ್ ಅಖಾಡಾ ವ್ಯವಸ್ಥೆಯ ಹೊರಗಿದ್ದು ದಶ್ನಮ್ ಅಖಾಡಾಗಳ ಪುರೋಹಿತರಾಗಿರುವರು. ತಮ್ಮದೇ ವಿಶೇಷ ಶೈಲಿಯಲ್ಲಿ ಶಿವಪಾರ್ವತಿ ಸ್ತುತಿ, ಗಿರಿಜಾ ಕಲ್ಯಾಣ ವರ್ಣನೆಯನ್ನು ಹಾಡುವ ಇವರನ್ನು ಜನರು ನಡೆದಾಡುವ ಶಿವ, ಶಿವನ ಶಿಖರ ಎಂದು ಕರೆಯುತ್ತಾರೆ.

ಕರ್ನಾಟಕದಲ್ಲಿ ವಚನಸಾಹಿತ್ಯ ಹೇಗೆ ವಿಭಿನ್ನ ಎನಿಸುತ್ತದೆಯೋ ಹಾಗೆಯೇ ಈ ಉತ್ತರ ಭಾರತದ ಜಂಗಮರ ಗಾಯನವು ವಿಶಿಷ್ಟ ಎನಿಸುತ್ತದೆ. ಎ ಪಂಥಗಳ ಶಿವನ ಭಕ್ತರು ಇವರನ್ನು ಕರ್ನಾಟಕದ ವೀರಶೈವ ಲಿಂಗಾಯತ ಪದ್ಧತಿಯಂತೆಯೇ ತಮ್ಮ ಮನೆಗಳಿಗೆ ಬಿನ್ನಹ ಮಾಡಿ ಆಹ್ವಾನಿಸಿ ದಕ್ಷಿಣಾದಿ ಗೌರವ ಕೊಟ್ಟು ಆಶೀರ್ವಾದ ಪಡೆದುಕೊಳ್ಳುತ್ತಾರೆ.

ಇವರ ವೇಷಭೂಷಣಗಳು ಸಹ ಕರ್ನಾಟಕದ ಜಂಗಮರು ಶ್ರಾವಣ ಮಾಸಗಳಲ್ಲಿ ಸಾಂಪ್ರದಾಯಿಕ ಕೋರುಧಾನ್ಯ ಭಿಕ್ಷಕ್ಕೆ ಹೊರಡುವಾಗ ಧರಿಸುವ ವೇಷಗಳಂತೆಯೇ ಇರುತ್ತದೆ. ಆದರೆ ಇವರು ಕೇವಲ ಶ್ರಾವಣ ಮಾಸದಲ್ಲಲ್ಲದೆ ಎಲ್ಲಾ ಮಾಸಗಳಲ್ಲಿಯೂ ಸಂಚರಿಸುತ್ತಾ ಕರೆದವರ ಮನೆಗಳಿಗೆ ತೆರಳಿ ಶಿವಸ್ತುತಿ ಮಾಡಿ ಗಿರಿಜಾ ಕಲ್ಯಾಣ ಪುರಾಣವನ್ನು ಹೇಳಿ ದಕ್ಷಿಣೆ ಪಡೆದುಕೊಳ್ಳುತ್ತಾರೆ.

ಪ್ರಮುಖವಾಗಿ ಕರ್ಣಕುಂಡಲ (ಪಾರ್ವತಿಯ ಸ್ವರೂಪ), ನಾಗ (ಶಿವನ ಸ್ವರೂಪ), ಮತ್ತು ನಂದಿಯ ಸ್ವರೂಪವಾಗಿ ಚಿಕ್ಕ ಘಂಟೆ ಅಥವಾ ಹಲವಾರು ಚಿಕ್ಕ ಚಿಕ್ಕ ಘಂಟೆಗಳ ಸರಘಂಟೆಯನ್ನು ಧರಿಸಿರು ತ್ತಾರೆ. ಈ ಸರಘಂಟೆಯನ್ನೇ ಮುರುಗಿ ಅಥವಾ ಮುರಿಗೆ (ಗೆಜ್ಜೆ/ಗಂಟೆ ಕಡಗ) ಎಂದು ಕರ್ನಾಟಕ ದಲ್ಲಿ ಕರೆಯುವುದು ಮತ್ತು ಖ್ಯಾತ ಮುರುಘಾಮಠದ ಮುರಿಗಿಸ್ವಾಮಿಗಳ ಈ ಆಭರಣವನ್ನು ಧರಿಸುತ್ತಿದ್ದ ಕಾರಣದಿಂದಲೇ ಅವರ ಹೆಸರು ಮುರಿಗೆ ಸ್ವಾಮಿಗಳು ಎಂದು ಹೆಚ್ಚು ಪ್ರಚಲಿತ ವಾದದ್ದು ಎಂಬುದು ಇಲ್ಲಿ ಉಲ್ಲೇಖಾರ್ಹ.

ಆದರೆ ಇವರು ಕರ್ನಾಟಕದ ಜಂಗಮರಂತೆ ಹೆಚ್ಚು ವಿದ್ಯಾವಂತರಲ್ಲ. ಉತ್ತರ ಮತ್ತು ದಕ್ಷಿಣ ಭಾರತದ ನಡುವಿನ ಸಾಕ್ಷರತೆಯ ವ್ಯತ್ಯಾಸ ಈ ಜನಾಂಗದಲ್ಲಿಯೂ ಢಾಳಾಗಿ ಕಾಣಿಸುತ್ತದೆ. ಇವರು ಸಂಪೂರ್ಣವಾಗಿ ತಮ್ಮನ್ನು ಶಿವಸ್ತುತಿ ಮತ್ತು ಸಂಚಾರದಲ್ಲಿ ತೊಡಗಿಸಿಕೊಂಡಿರುವ ಕಾರಣ ಇವರ ಕುರಿತು ಹೆಚ್ಚು ಮಾಹಿತಿ ಇಲ್ಲಿನ ಜನರಿಗೆ ಲಭ್ಯವಿಲ್ಲ. ಹಾಗಾಗಿ ಇವರ ವೀರ ಪರಂಪರೆಯ ವಿಷಯವು ಇತ್ತೀಚಿನವರೆಗೆ ಯಾವುದೇ ಗುರು ವಿರಕ್ತರಿಗೆ ಗೊತ್ತೇ ಇರಲಿಲ್ಲ!

ಪಂಚಪೀಠಗಳಿಗೆ ಈ ವಿಷಯ ತಿಳಿದಿದ್ದರೂ ಅವರನ್ನು ಒಂದು ಜಾತಿಗೆ ಸೀಮಿತಗೊಳಿಸಿ ನೋಡುವ ನವಲಿಂಗಾಯತರು ಅವರ ಎಲ್ಲಾ ಮಾತನ್ನು ಉಡಾಫೆಯಿಂದಲೇ ನೋಡುವ ಕಾರಣ ಈ ಮಾನವಿಕ ಅಂಶ ಅಷ್ಟೊಂದು ಪ್ರಚಲಿತವಾಗಿರಲಿಲ್ಲ. ಇನ್ನು ವಿರಕ್ತರಂತೂ ಕುಂಭಮೇಳದಲ್ಲಿ ಭಾಗವಹಿಸುವುದೇ ಮೌಢ್ಯವೆಂದು ಹೇಳುತ್ತಾ ತಮ್ಮ ಅಗಾಧ ಪರಂಪರೆಯನ್ನೇ ಕೆಂಪೀಕರಣದ ಖಾಲಿ ಕುಂಭಮೌಢ್ಯದಲ್ಲಿ ಮುಳುಗಿಸಿ ತೇಲಾಡುತ್ತಿದ್ದಾರೆ.

ಹಾಗಾಗಿಯೇ ಈ ಬಾರಿಯ ಮೇಳದಲ್ಲಿ ವೀರಶೈವ ಕಾಶಿ ಜಗದ್ಗುರುಗಳು ಪ್ರಯಾಗರಾಜದಲ್ಲಿ ಉತ್ತರ ಭಾರತದ ಜಂಗಮರನ್ನು ಒಗ್ಗೂಡಿಸಿ ಮಂಡಲ ತಪೋನುಷ್ಠಾನನ್ನು ಹಮ್ಮಿಕೊಂಡಿರುವುದು ಎನಿಸುತ್ತದೆ. ಪ್ರಸ್ತುತ ಲಿಂಗಾಯತ ಧರ್ಮಭಂಜಕರೇ ವಿಜೃಂಭಿಸುತ್ತಿರುವ ಈ ವರ್ತಮಾನದಲ್ಲಿ ಕಾಶಿ ಜಗದ್ಗುರುಗಳ ಈ ಒಗ್ಗೂಡಿಸುವ ಪ್ರಯತ್ನ ಆಶಾದಾಯಕವಾಗಿದೆ ಎನ್ನಬಹುದು.

ಇನ್ನು ಕುಂಭಮೇಳಗಳ ಹಿಂದಿರುವ ಅಗಾಧ ಶಕ್ತಿಯಾಗಿ ಗೋರಖ್ ಪಂಥ ಬೆಳೆದಿದ್ದರೆ ಹಠಯೋಗ ದಿಂದ ವಜ್ರದೇಹಿಯಾಗಿದ್ದ ಗೋರಖನಾಥನ ಬೀಸುಗತ್ತಿಗೆ ಸಿಗದಂತೆ ಶಿವಯೋಗಸಾಧನೆ ತೋರಿ ಆಧ್ಯಾತ್ಮಿಕ ವಾದದಲ್ಲಿ ಅವನನ್ನು ಸೋಲಿಸಿ ಕೇವಲ ಹಠಯೋಗದಿಂದ ಎಲ್ಲವೂ ಸಾಧ್ಯವಿಲ್ಲ, ಗೋರಕ್ಷ!

ಶಿವಯೋಗದ ಹಾದಿ ನಿನ್ನದಾಗಲಿ ಎಂದು ಆಶೀರ್ವದಿಸಿದ್ದ ಆಧ್ಯಾತ್ಮಿಕ ಮಹಾಗುರು ಅಲ್ಲಮನ ಶೂನ್ಯಪೀಠ ಇಂದು ಆಧ್ಯಾತ್ಮಿಕವಾಗಿ ನಿಶ್ಶೂನ್ಯವಾಗಿದೆ. ಗೋರಖ ಸಂತನೊಬ್ಬ ಭಾರತದ ಬಹು ದೊಡ್ಡ ರಾಜ್ಯದ ಮುಖ್ಯಮಂತ್ರಿಯಾಗುವಷ್ಟು ಈ ಪಂಥ ಬೆಳೆದಿದ್ದರೆ, ಧೀಮಂತ ಅಲ್ಲಮನ ಶೂನ್ಯಪೀಠವು ನಾಸ್ತಿಕವಾದದ ಅಧ್ಯಾತ್ಮಹೀನರ ಸಂಗದಲ್ಲಿ ತೇಲಿ ಪೋಕ್ಸೋ ಕಾಯ್ದೆಯಡಿಯಲ್ಲಿ ಜೈಲು ಸೇರಿಯಾಗಿದೆ.

ಹನ್ನೆರಡನೇ ಶತಮಾನದ ರಾಜಪ್ರಭುತ್ವದ ವಿಪ್ಲವದಲ್ಲಿ ಸಾಮಾಜಿಕ ಹೋರಾಟವನ್ನು ಬೆಂಬಲಿ ಸುವುದು ಬಸವಣ್ಣನಿಗೆ ಅನಿವಾರ್ಯವಾಗಿತ್ತು. ಹಾಗಾಗಿ ಆತ ಸಾಮಾಜಿಕ ಹೋರಾಟದಲ್ಲಿ ತೊಡಗಿ ಸಿಕೊಂಡ. ಆದರೆ ಚೆನ್ನಬಸವಣ್ಣ, ಅಲ್ಲಮ, ಸಿದ್ಧರಾಮ, ಮಹಾದೇವಿಯರು ಸಾಮಾಜಿಕ ಹೋರಾಟಕ್ಕೆ ಬೆಂಬಲ ತೋರಿದರೂ ಅಧ್ಯಾತ್ಮವನ್ನು ಬಿಡದ ಕಾರಣವಾಗಿಯೇ ವೀರಶೈವ ಪಂಥವು ಇಂದು ಉಳಿದಿರುವುದು! ಇಸ್ಲಾಂ ದಾಳಿಯ ಪರಿಣಾಮವಾಗಿ ಉಂಟಾದ ಧಾರ್ಮಿಕ ವಿಪ್ಲವವನ್ನು ಎದುರಿಸಲು ಉದ್ಭವವಾದ ಭಕ್ತಿಪಂಥದ ಯಾದಿಯನ್ನೇ ಬಸವಣ್ಣನು ಅನುಸರಿಸಿದ್ದನಷ್ಟೇ.

ಜಾಗತಿಕವಾಗಿ ಸಹ ರಾಜಪ್ರಭುತ್ವ ಆಳ್ವಿಕೆಗಳಲ್ಲಿ ಧರ್ಮಕಾರಣ ಸಹಜವಾಗಿ ಮಹತ್ತರ ಪಾತ್ರ ವಹಿ ಸಿದ್ದಿತು. ಆದರೆ ಇಂದಿನ ಸಾಂವಿಧಾನಿಕ ಪ್ರಜಾಪ್ರಭುತ್ವ ರಾಷ್ಟ್ರಗಳಲ್ಲಿ ಸಾಮಾಜಿಕ ಹೋರಾಟಕ್ಕೆ ಸಾಕಷ್ಟು ಪ್ರಜಾಕಾರಣವಿದೆ. ಹಾಗಾಗಿಯೇ ಪ್ರಜಾಪ್ರಭುತ್ವ ರಾಷ್ಟ್ರವಾದ ಅಮೇರಿಕಾದ ಮಾರ್ಟಿನ್ ಲೂಥರ್ ಕಿಂಗ್ ಜ್ಯೂನಿಯರ್ ಖುದ್ದು ಕ್ರೈಸ್ತ ಪಾದ್ರಿಯಾಗಿದ್ದರೂ ಆತ ಧರ್ಮವನ್ನು ತನ್ನ ಸಾಮಾಜಿಕ ಹೋರಾಟದೊಂದಿಗೆ ಎಂದೂ ಬೆಸೆಯಲಿಲ್ಲ.

ಪ್ರಜಾಪ್ರಭುತ್ವ ಭಾರತದ ಜನಕಾರಣ ಹೋರಾಟದಲ್ಲಿ ಸಾಧು ಸಂತರು ಭಾಗವಹಿಸುವಷ್ಟು ಅನಿ ವಾರ್ಯತೆ ಅಷ್ಟಾಗಿ ಇಲ್ಲವೇ ಇಲ್ಲ. ಆದರೆ ಮತಕ್ಕಾಗಿ (ಓಟಿಗಾಗಿ) ಮತವನ್ನು (ಧರ್ಮವನ್ನು) ಓಲೈಸುವ ರಾಜಕಾರಣವು ಅಂತಹ ಕೃತಕ ಅನಿವಾರ್ಯತೆಯನ್ನು ಸೃಷ್ಟಿಸಿದೆಯಷ್ಟೇ. ಈ ಕೃತಕ ಅನಿವಾರ್ಯತೆಗೆ ತಕ್ಕಂತೆ ಸಂಶೋಧನೆಗಳು, ಸಿದ್ಧಾಂತಗಳು, ಬುದ್ಧಿಜೀವಿಗಳು, ರಾಜಕೀಯ ಪಕ್ಷಗಳು ಸೃಷ್ಟಿಯಾಗಿ ಅಸಲು ಅಧ್ಯಾತ್ಮ ಕಣ್ಮರೆಯಾಗಿದೆ. ಈ ಅನಿವಾರ್ಯತೆಗೆ ಪ್ರಮುಖ ಇಂಧನವಾಗಿ ವಿದ್ಯಾದಾನವು ವಿದ್ಯಾದನವಾಗಿ ಧನಕ್ಕೆ ಬಿಕರಿಯಾಗಿದೆ.

ಹೀಗಿದ್ದೂ ಕರ್ನಾಟಕದ ನಾಸ್ತಿಕ ವೈಚಾರಿಕ(?) ಕಮ್ಯೂನಿಸ್ಟರು, ಬುದ್ಧಿಜೀವಿಗಳು ತಮ್ಮ ನಂಬಿಕೆಗೆ ವ್ಯತಿರಿಕ್ತವಾಗಿ ಅಕ್ಕ, ಅಲ್ಲಮ, ಚೆನ್ನಬಸವಣ್ಣ, ಬಸವಣ್ಣನೆಂಬ ಧಾರ್ಮಿಕ ಪುರುಷರಿಗೆ ಏಕೆ ಜೋತು ಬಿದ್ದಿರುವರು ಎಂಬುದು ಹತ್ತು ಹಲವಾರು ತುಲನಾತ್ಮಕ ಅಧ್ಯಯನಗಳನ್ನು ಬಯಸು ತ್ತದೆ. ವಿಶ್ವವಿದ್ಯಾಲಯಗಳು ಈ ನಿಟ್ಟಿನಲ್ಲಿ ಯೋಚಿಸಿ ಆದಾಯಮೂಲವನ್ನು ಕಂಡುಕೊಳ್ಳ ಬಹುದು ಎಂಬುದು ಒಂದು ಉಚಿತ ಸಲಹೆ!

ಈ ಪರಾವಲಂಬಿ ಪರತಂತ್ರ ವಿಚಾರವಾದಿಗಳು ಲಿಂಗಾಯತಕ್ಕೆ ಅಂಟಿಕೊಂಡ ಕಾರಣವೇ ಲಿಂಗಾಯತ ವಿರಕ್ತ ಸ್ವಾಮಿಗಳು ಇತ್ತ ನಾಸ್ತಿಕರೂ ಆಗದೇ ರಾಜಕಾರಣಿಗಳೂ ಆಗದೇ ತ್ರಿಶಂಕು ಸ್ಥಿತಿಯಲ್ಲಿದ್ದರೂ ಖಾವಿಯೆಂಬ ಕೇಸರಿವಸದ ಆತಂತ್ರರಾಗಿ ಕೆಂಪು ಕೆಂಪಾಗಿರುವರು. ಶಿವನ ಗಣ ಎನಿಸಿದ ಬಸವಣ್ಣನಿಗೆ ಜೋತುಬಿದ್ದಿದ್ದರೂ ಗಣಗಳ ಅಧಿಪತಿ ಗಣಪತಿಯನ್ನು ಪೂಜಿಸಬೇಡಿ ಎಂಬ ಆತಂತ್ರವನ್ನು ಬೋಧಿಸುವರು. ಇಂತಹ ವೀರಶೈವ ವಿರಕ್ತರ ಅಧ್ಯಾತ್ಮಶೂನ್ಯತೆಯ ಕಾರಣವೇ ಒಂದೊಮ್ಮೆ ಅಧ್ಯಾತ್ಮಕ್ಕೆ ಆದ್ಯ ಗೌರವಪ್ರಾಯವಾಗಿದ್ದ ಕರ್ನಾಟಕದ ವೀರಶೈವ ಲಿಂಗಾಯತರು ಇಂದಿನ ಕಾಲಮಾನದಲ್ಲಿ ಬ್ರಹ್ಮಕುಮಾರಿ, ಸತ್ಸಂಗ, ಕಲ್ಕಿ, ಈಶ, ಸಿದ್ಧಿ ಸಮಾಧಿ ಯೋಗ, ಅವಧೂತ ದತ್ತ ಪೀಠ, ನಿತ್ಯಾನಂದ ಧ್ಯಾನಪೀಠ ಮುಂತಾದವುಗಳ ಕಡೆ ಸತ್ಯದ ಅಧ್ಯಾತ್ಮ ವನ್ನು ಅರಸಿ ನಡೆದಿದ್ದಾರೆ.

ಖುದ್ದು ಅಧ್ಯಾತ್ಮವನ್ನು ಅರಿಯದೆ ಕರ್ತವ್ಯವಿಮುಖರಾದ ವೀರಶೈವ ಲಿಂಗಾಯತ ಸ್ವಾಮಿಗಳು ಜನರ ಆಧ್ಯಾತ್ಮಿಕ ಹಸಿವನ್ನು ಹೇಗೆ ತಾನೇ ಇಂಗಿಸಿಯಾರು? ಸೋಹಂ ಎನ್ನದೆ ದಾಸೋಹಂ ಎನ್ನಿ ಸಯ್ಯ ಎಂಬ ಸಾಂದರ್ಭಿಕ ಮಾತನ್ನೇ ತಿದ್ದಿ ಬೌದ್ಧಿಕ ದಾಸೋಹಕ್ಕೆ ತಿಲಾಂಜಲಿಯಿಟ್ಟು ದೈಹಿಕ ದಾಸೋಹಕ್ಕೆ ಶರಣಾಗಿರುವಾಗ ಇನ್ನೆಲ್ಲಿಯ ಆಧ್ಯಾತ್ಮ?! ನೆಟ್ಟಗೆ ಒಂದು ಸರ್ವಾಂಗಾಸನ ಹಾಕಲಾ ಗದವರು ಕರಣಹಸಿಗೆಯನ್ನು ಏನೆಂದು ವಿವರಿಸಿಯಾರು? ಒಂದು ಬದ್ಧ ಪದ್ಮಾಸನ ಹಾಕಲಾಗದ ಇವರು ಭಕ್ತರಿಗೆ ಅಲ್ಲಮನ ಕುಂಡಲಿನಿ ಚಕ್ರವನ್ನು ಜಾಗೃತಿಗೊಳಿಸುವ ಬಗೆಯನ್ನು ಹೇಗೆಂದು ಹೇಳಿಯಾರು? ಓಂ ನಮಃ ಶಿವಾಯ ಎಂಬ ಷಡಕ್ಷರಿ ಮಂತ್ರವನ್ನೇ ಓಂ ಶ್ರೀಗುರು ಬಸವ ಲಿಂಗಾಯ ನಮಃ ಎಂಬ ಹನ್ನೆರಡಕ್ಷರಿ ಮಂತ್ರವನ್ನು ಮಾಡಿರುವ ಇವರು ಮಂತ್ರಗೋಪ್ಯ ವನ್ನು ಏನೆಂದು ಬೋಧಿಸಿಯಾರು? ಅಂದ ಹಾಗೆ ಸೋಹಂ ದಾಸೋಹಂ ಎಂಬ ಸಾಂದರ್ಭಿಕ ಸಾಮಾಜಿಕ ವಚನ ಕ್ಕೂ ಆಧ್ಯಾತ್ಮಿಕ ಸೋಹಂ ಅರ್ಥಕ್ಕೂ ಇರುವ ವ್ಯತ್ಯಾಸವನ್ನೇ ಅರಿಯದ ಇವರಿಗೆ ಅಲ್ಲಮನ ಕೆಳಗಿನ ವಚನವೇನು ಅರ್ಥವಾದೀತು!?

ಗಗನ ಮಂಡಳದ ಸೂಕ್ಷ್ಮನಾಳದಲ್ಲಿ

‘ಸೋಹಂ ಸೋಹಂ’ ಎನುತ್ತಿರ್ದತ್ತದೊಂದು ಬಿಂದು,

ಅಮೃತದ ವಾರಿಧಿಯ ದಣಿಯುಂಡ ತೃಪ್ತಿಯಿಂದ.

ಗುಹೇಶ್ವರಾ ನಿಂದ(ನಿಮ್ಮ?)ಲ್ಲಿಯೆ ಎನಗೆ ನಿವಾಸವಾಯಿತ್ತು. ಹಾಗಾಗಿಯೇ ತಮ್ಮ ವೈಫಲ್ಯವನ್ನು ಮುಚ್ಚಿಕೊಳ್ಳಲು ಸಾಮಾಜಿಕ ಮೇಲ್ಪದರದ ವಚನಗಳಿಗೆ ಆತುಕೊಂಡು ಮೇಲ್ಪದರದ ವಿಜ್ಞಾನಿ(?) ಕಮ್ಯುನಿಸ್ಟರನ್ನು ಅಪ್ಪಿಕೊಂಡು ನಾವು ಹಿಂದೂಗಳಲ್ಲ, ದೇವರನ್ನು ನಂಬುವುದಿಲ್ಲ, ಮೂರ್ತಿ ಪೂಜೆ ಮಾಡುವುದಿಲ್ಲ, ಮಂದಿರಗಳು ನಮ್ಮ ಸಂಸ್ಕೃತಿಯಲ್ಲ, ತೀರ್ಥಯಾತ್ರೆ ಮಾಡುವುದಿಲ್ಲ ಇತ್ಯಾದಿಯಾಗಿ ರಂಜನೀಯ ಭಾಷಣಗಳನ್ನು ಮಾಡುತ್ತಾ ಜನರಿಗೆ ಹಾಸ್ಯರಸ ಹರಿಸುತ್ತ ಮೇಲ್ಪ ದರದ ಪೀಠಾಧಿಪತಿಗಳಾಗಿದ್ದಾರೆ. ಆಧ್ಯಾತ್ಮ ಉಣಬಡಿಸದಿದ್ದರೂ ಹಾಸ್ಯಸಂಜೆ ಏರ್ಪಡಿಸಿ ತಾವೂ ನಗೆಗಡಲಲ್ಲಿ ತೇಲಾಡುತ್ತಾರೆ.

ಅದೇ ರೀತಿ ನಾಡಿನ ಮೇಲ್ಪದರದ ಮಲಾಯಿ ಮಕ್ಮಲ್ ಸಾಕ್ಷಿಪ್ರಜ್ಞೆಗಳು ಹಿಹೀ ಎನ್ನುತ ಈ ಖಾವಿ ವೇಷಧಾರಿ ಜಾತಿ ಡಂಭಕ ಪ್ರeವಂತ ಸ್ವಾಮಿಗಳಿಗೆ ಬಹುಪರಾಕ್ ಬಹುಪರಾಕ್ ಎನ್ನುತ್ತಿ ದ್ದಾರೆ. ಒಂದೆಡೆ ಎಲ್ಲಾ ಐತಿಹಾಸಿಕ ಪುರಾವೆಗಳು ವೀರಶೈವ ಲಿಂಗಾಯತವು ಹಿಂದೂ ಪ್ರಬೇಧದ ಧರ್ಮ ವೆಂದು ಸಾರಿ ಸಾರಿ ಹೇಳುತ್ತಿದ್ದರೆ, ಇನ್ನೊಂದೆಡೆ ಯಾವುದೇ ಹೋಲಿಕೆಯಿರ ದಿದ್ದರೂ ಕೇವಲ ಭಾವಾವೇಶದಿಂದ ಬಸವಣ್ಣನನ್ನು ಹಾಲಡಮೋರ್ ನರಮೇಧಕ್ಕೆ ಕಾರಣರಾದ ರಷ್ಯನ್ ಲೆನಿನ್ ಸ್ಟಾಲಿನ್ನರಿಗೆ ಹೋಲಿಸುತ್ತಾರೆ. ಭಾರತಕ್ಕೆ ಹೊಂದದ ಕಾರ್ಲ್ ಮಾರ್ಕ್ಸ್ ಸಿದ್ಧಾಂತ ಕ್ಕೆ ಶರಣ ಚಳವಳಿಯನ್ನು ಜೋಡಿಸುತ್ತಾರೆ!

ಹೀಗೆಯೇ ಮುಂದುವರಿಯಲು ಬಿಟ್ಟರೆ ಮುಂದೆ:

ಬಡಹಾರುವ ‘ನೇಸು ಭಕ್ತ’ನಾದಡೆಯೂ ನೇಣಿನ ಹಂಗ ಬಿಡ!

ಮಾಲೆಗಾರ‘ನೇಸು ಭಕ್ತ’ನಾದಡೆಯೂ ಬಾವಿಯ ಬೊಮ್ಮನ ಹಂಗ ಬಿಡ!

ಬಣಜಿಗ ‘ನೇಸು ಭಕ್ತ’ನಾದಡೆಯೂ ಒಟ್ಟಿಲ ಬೆನಕನ ಹಂಗ ಬಿಡ!

ಕಂಚುಗಾರ‘ನೇಸು ಭಕ್ತ’ ನಾದಡೆಯೂ ಕಾಳಿಕಾದೇವಿಯ ಹಂಗ ಬಿಡ!

ನಾನಾ ಹಂಗಿನವನಲ್ಲ, ನಿಮ್ಮ ಶರಣರ ಹಂಗಿನ ವನಯ್ಯಾ ಕೂಡಲಸಂಗಮದೇವಾ.

ಎಂಬ ವಚನವನ್ನು ಹಿಡಿದು, ಬಸವಣ್ಣನವರು ಜನರು ‘ಏಸು ಭಕ್ತ’ರಾದರೂ ಮೂಲಾಚರಣೆ ಗಳನ್ನು ಬಿಡರು ಎಂದು ಅಂದೇ ತಮ್ಮ ದಿವ್ಯದೃಷ್ಟಿಯಿಂದ ಕಂಡುಕೊಂಡು ಈ ವಚನದ ಮೂಲಕ ವಾಚ್ಯವಾಗಿ ತಿಳಿ ಹೇಳಿದ್ದಾರೆ. ಈ ವಚನದಲ್ಲಿನ ’ಏಸು’ ಪದವನ್ನು ಎಷ್ಟು ಎಂಬ ತಪ್ಪು ಗ್ರಹಿಕೆಯಿಂದ ನೋಡಲಾಗಿದೆ. ಅಸಲಿಗೆ ಇದನ್ನು ಕನ್ನಡ ವ್ಯಾಕರಣದ ಸಂಧಿ ಸಮಾಸದನ್ವಯ

(ಅವನು+ಏಸು ಭಕ್ತ = ಅವನೇಸು ಭಕ್ತ) ಎಂದು ನೋಡಬೇಕು. ತನ್ನ ವಚನದಲ್ಲಿ ನಾನು ಚೆನ್ನಯ್ಯನ ಮಗ ಎಂದು ಬಸವಣ್ಣನು ಹೇಗೆ ತಾನು ದಲಿತನೆಂದು, ಆನು ಹಾರುವನೆಂದರೆ ನಾನು ಬ್ರಾಹ್ಮಣನೆಂದು ಹೇಗೆ ವಾಚ್ಯವಾಗಿ ಹೇಳಿಕೊಂಡಿದ್ದಾನೋ, ಹಾಗೆಯೇ ಇಲ್ಲಿ ವಾಚ್ಯಾರ್ಥದಲ್ಲಿ ಏಸು ಪದವನ್ನು ಗ್ರಹಿಸಬೇಕು.

ಇಂದಿನ ದಲಿತ ಕ್ರಿಶ್ಚಿಯನ್, ನಾಡಾರ್ ಕ್ರಿಶ್ಚಿಯನ್, ಮುಕ್ಕುವರ್ ಕ್ರಿಶ್ಚಿಯನ್, ಕೊಂಕಣಿ ಕ್ರಿಶ್ಚಿ ಯನ್, ಲಿಂಗಾಯತ ಕ್ರಿಶ್ಚಿಯನ್ ಎಂಬ ಈಗಿರುವ ಚರ್ಚುಗಳೇ ಬಸವಣ್ಣನವರ ದೂರಾಲೋ ಚನೆಗೆ ಪುರಾವೆ! ಈ ದೂರಾಲೋಚನೆಗೆ ತಕ್ಕಂತೆ ಮುಂದೆ ಸಕಲ ಜಾತಿಯಾಧಾರಿತ ಚರ್ಚುಗಳು ಅಸ್ತಿತ್ವಕ್ಕೆ ಬರಲಿವೆ. ಅವು ಅಸ್ತಿತ್ವಕ್ಕೆ ಬಂದರೂ ಜನರು ನೆಲಮೂಲ ಜಾತಿ ಸಂಸ್ಕೃತಿಯನ್ನು ಬಿಡದ ಕಾರಣ ಅವರನ್ನು ಪ್ರತ್ಯೇಕವಾಗಿ ಗುರುತಿಸುತ್ತ ಒಳಗೊಂಡು ಸಮಸಮಾಜ ನಿರ್ಮಿಸಲು ಇಂದಿ ನಿಂದಲೇ ದತ್ತಿನಿಧಿ, ಆಪದ್ಧನ ಸೃಷ್ಟಿಸಿ ಸರ್ಕಾರಿ ಸ್ಥಳವನ್ನು ಮಿಸಲಿರಿಸಬೇಕು.

ವಿಶ್ವವಿದ್ಯಾಲಯಗಳಲ್ಲಿ ವಿಶೇಷ ಪೀಠಗಳನ್ನು ಸೃಷ್ಟಿಸಬೇಕು. ಇದೆಲ್ಲ ಕೈಗೂಡಲು ನಮ್ಮ ಸಮ ಸಮಾಜ ನಾಯಕರ ಕೈ ಬಲಪಡಿಸಬೇಕು. ಇದಕ್ಕೇನಾದರೂ ಕ್ಯಾಥೋ ಲಿಕ್ಕರು ಕೈಂಞ ಕುಂಞ ಎಂದರೆ ಅವರನ್ನು ಲಿಂಗಾಯತದಿಂದ ವೀರಶೈವವನ್ನು ಕಿತ್ತೊಗೆದಂತೆ ಕ್ರಿಸ್ತಾಯತದಿಂದ ಕಿತ್ತೊ ಗೆದು ಕರ್ನಾಟಕ ಕ್ರಿಸ್ತಾಯತ ಸ್ವತಂತ್ರ ಧರ್ಮ ಸ್ಥಾಪನೆ ಮಾಡಬೇಕು ಎಂಬ ಖ್ಯಾತ ಉಗ್ರಗಣ್ಯ ಸಂಶೋಧಕರ, ಅಸಂಸ್ಕೃತಿ ಚಿಂತಕರ ಸಂಶೋಧನೆಗಳಾಗಿ ಪಠ್ಯವಾಗಿ ಮುಂದಿನ ಪೀಳಿಗೆಯ ಸಂಶೋಧನಾ ಮಾದರಿಗಳಾಗುವ ಸಾಧ್ಯತೆ ಅತ್ಯಂತ ಗಾಢವಾಗಿದೆ.

ಎತ್ತಣ ಮಾಮರ ಎತ್ತಣ ಕೋಗಿಲೆ!

ಇಂತಹ ಸಂಕಥಗಳು ಸೃಷ್ಟಿಯಾಗುವ ಮುನ್ನ ಇತಿಹಾಸ ದುದ್ದಕ್ಕೂ ಢಾಳಾಗಿರುವ ವೀರಶೈವದ ಸತ್ಯದ ಹೆಜ್ಜೆಯ ಗುರುತುಗಳನ್ನು ನಿರೂಪಿಸಿ ಇತಿಹಾಸ ವನ್ನು ಮರುಸ್ಥಾಪಿಸುವ ತುರ್ತು ನಮ್ಮ ಮುಂದಿದೆ. ಇಲ್ಲದಿದ್ದರೆ ಮುಂದಿನ ಪೀಳಿಗೆ ನಮ್ಮನ್ನು ಯಾವತ್ತೂ ಕ್ಷಮಿಸದು. ಒಂದು ಮಹಾ ಕುಂಭದ್ರೋಣ ಮಳೆ ಬಂದು ಈ ಎಲ್ಲಾ ಸುಳ್ಳುಗಳನ್ನು ತೊಡೆಯುವ ಕಾಲ ಎಂದು ಬರುವುದೋ ಆ ಶಿವಸ್ವರೂಪಿ ಜಂಗಮರಾದ ಅಲ್ಲಮ, ಚೆನ್ನಬಸವಣ್ಣ, ಬಸವ, ಮಹಾದೇವಿಯರೇ ಬಲ್ಲರು!

(ಲೇಖಕರು ಶಿಕಾಗೊ ವಾಸಿ ಮತ್ತು ಸಾಹಿತಿ)