ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Vishweshwar Bhat Column: ರಾಜು ಭರತನ್‌ ಸ್ಮರಣೆ

ಭಾರತದಲ್ಲಿ ಕ್ರಿಕೆಟ್ ಮತ್ತು ಹಿಂದಿ ಚಿತ್ರರಂಗದ ಸಂಗೀತವೆಂಬ ಎರಡು ಪ್ರಮುಖ ಆಕರ್ಷಣೆಗಳನ್ನು ಅತ್ಯಂತ ಆಳವಾಗಿ, ವಿಶ್ಲೇಷಣಾತ್ಮಕವಾಗಿ ಹಾಗೂ ಅಧಿಕೃತವಾಗಿ ದಾಖಲಿಸಿದ ಶ್ರೇಯ ಅವರಿಗೆ ಸಲ್ಲುತ್ತದೆ. ಸುಮಾರು ಆರು ದಶಕಗಳಿಗೂ ಹೆಚ್ಚು ಕಾಲ ಇವೆರಡೂ ಕ್ಷೇತ್ರಗಳ ಒಳಹೊರಗುಗಳನ್ನು ಹತ್ತಿರದಿಂದ ಕಂಡ ಅವರು, ಕೇವಲ ವರದಿಗಾರರಾಗಿ ಉಳಿಯದೇ, ಆ ಕ್ಷೇತ್ರಗಳ ಇತಿಹಾಸಕಾರರಾಗಿ ರೂಪುಗೊಂಡರು.

Vishweshwar Bhat Column: ರಾಜು ಭರತನ್‌ ಸ್ಮರಣೆ

-

ಸಂಪಾದಕರ ಸದ್ಯಶೋಧನೆ

ಕಾಲೇಜಿನಲ್ಲಿ ಓದುವಾಗ, ‘ದಿ ಇಲ್ಲಸ್ಟ್ರೇಟೆಡ್ ವೀಕ್ಲಿ ಆಫ್ ಇಂಡಿಯಾ’ ಪತ್ರಿಕೆಯನ್ನು ತಪ್ಪದೇ ಓದುತ್ತಿದ್ದೆ. ಆ ದಿನಗಳಲ್ಲಿ ಇಷ್ಟವಾದ ಪತ್ರಕರ್ತರಲ್ಲಿ ರಾಜು ಭರತನ್ (1934- 2020) ಕೂಡ ಒಬ್ಬರು. ಭಾರತೀಯ ಪತ್ರಿಕೋದ್ಯಮ ಕಂಡ ಅತ್ಯಂತ ವಿಶಿಷ್ಟ, ನಿಷ್ಠುರ ಮತ್ತು ಬಹುಮುಖಿ ಪತ್ರಕರ್ತರಬ್ಬರು.

ಭಾರತದಲ್ಲಿ ಕ್ರಿಕೆಟ್ ಮತ್ತು ಹಿಂದಿ ಚಿತ್ರರಂಗದ ಸಂಗೀತವೆಂಬ ಎರಡು ಪ್ರಮುಖ ಆಕರ್ಷಣೆ ಗಳನ್ನು ಅತ್ಯಂತ ಆಳವಾಗಿ, ವಿಶ್ಲೇಷಣಾತ್ಮಕವಾಗಿ ಹಾಗೂ ಅಧಿಕೃತವಾಗಿ ದಾಖಲಿಸಿದ ಶ್ರೇಯ ಅವರಿಗೆ ಸಲ್ಲುತ್ತದೆ. ಸುಮಾರು ಆರು ದಶಕಗಳಿಗೂ ಹೆಚ್ಚು ಕಾಲ ಇವೆರಡೂ ಕ್ಷೇತ್ರಗಳ ಒಳಹೊರಗುಗಳನ್ನು ಹತ್ತಿರದಿಂದ ಕಂಡ ಅವರು, ಕೇವಲ ವರದಿಗಾರರಾಗಿ ಉಳಿಯದೇ, ಆ ಕ್ಷೇತ್ರಗಳ ಇತಿಹಾಸಕಾರರಾಗಿ ರೂಪುಗೊಂಡರು.

ಅವರ ಚುರುಕಾದ ಬರವಣಿಗೆಯ ಶೈಲಿ ಮತ್ತು ಸತ್ಯವನ್ನು ನೇರವಾಗಿ ಹೇಳುವ ಧೈರ್ಯ ಅವರನ್ನು ಪತ್ರಿಕೋದ್ಯಮದಲ್ಲಿ ಪ್ರತ್ಯೇಕವಾಗಿ ನಿಲ್ಲಿಸಿತು. ಅವರ ವೃತ್ತಿಜೀವನದ ಬಹುಪಾಲು ದಿನಗಳು ‘ದಿ ಇಲ್ಲಸ್ಟ್ರೇಟೆಡ್ ವೀಕ್ಲಿ ಆಫ್ ಇಂಡಿಯಾ’ದಲ್ಲಿ ಕಳೆದವು. ಆ ಕಾಲಘಟ್ಟದಲ್ಲಿ ಖುಷ್ವಂತ್ ಸಿಂಗ್ ಅವರಂಥ ದಿಗ್ಗಜ ಸಂಪಾದಕರ ಜತೆಗೂಡಿ ಭರತನ್ ಕಾರ್ಯನಿರ್ವಹಿಸಿದರು. ‌

ಇದನ್ನೂ ಓದಿ: Vishweshwar Bhat Column: ಶಟಲ್ ಡಿಪ್ಲೊಮಸಿ ಅಂದರೇನು ?

ದೇಶಾದ್ಯಂತ ಅಪಾರ ಓದುಗ ಅಭಿಮಾನಿಗಳನ್ನು ಹೊಂದಿದ್ದ ಅವರು, ನಂತರ ಹಿಂದಿ ಚಲನ ಚಿತ್ರಗಳಿಗೆ ಮೀಸಲಾದ ‘ಫಿಲ್ಮ್ʼಫೇರ್’ ಪತ್ರಿಕೆಯಲ್ಲೂ ಪ್ರಮುಖ ಜವಾಬ್ದಾರಿ ನಿರ್ವಹಿಸಿದರು. ಭಾರತೀಯ ಕ್ರಿಕೆಟ್ ಪತ್ರಿಕೋದ್ಯಮಕ್ಕೆ ರಾಜು ಭರತನ್ ನೀಡಿದ ಕೊಡುಗೆ ಗಮನಾರ್ಹ. ದೂರ ದರ್ಶನಗಳು ಮತ್ತು ಇಂಟರ್ನೆಟ್ ಇಲ್ಲದಿದ್ದ ಕಾಲದಲ್ಲಿ, ಕ್ರಿಕೆಟ್ ಪಂದ್ಯದ ಪ್ರತಿಯೊಂದು ಎಸೆತ, ಆಟಗಾರರ ಮನಸ್ಥಿತಿ ಮತ್ತು ತಂತ್ರಗಾರಿಕೆಯನ್ನು ಓದುಗರ ಕಣ್ಣೆದುರು ಕಟ್ಟಿಕೊಡುವ ಅಪರೂಪದ ಶಕ್ತಿ ಅವರ ಲೇಖನಿಗಿತ್ತು.

ಭಾರತ ತಂಡದ ಪ್ರತಿಯೊಂದು ಮಹತ್ವದ ಪಂದ್ಯ, ಜಯ ಹಾಗೂ ಸೋಲು ಗಳನ್ನು ಅವರು ಕಟುವಾಗಿ ವಿಮರ್ಶಿಸುತ್ತಿದ್ದರು. ಕೇವಲ ಅಂಕಿ-ಅಂಶಗಳನ್ನು ಪಟ್ಟಿ ಮಾಡದೇ, ಆಟಗಾರರ ನಡುವಿನ ಸಂಬಂಧಗಳು, ಡ್ರೆಸ್ಸಿಂಗ್ ರೂಮ್ ವಾತಾವರಣ ಮತ್ತು ಕ್ರಿಕೆಟ್ ಬೋರ್ಡ್‌ನ ರಾಜಕೀಯ ವನ್ನು ನಿರ್ಭೀತಿಯಿಂದ ಬರೆಯುತ್ತಿದ್ದರು.

ಕ್ರಿಕೆಟ್ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಅವರು ಬರೆದ ಕೃತಿಗಳು ಇಂದಿಗೂ ಇತಿಹಾಸದ ಅಮೂಲ್ಯ ಆಕರಗಳಾಗಿವೆ. ಅವರ ‘ರೈವಲ್ಸ್ ಇನ್ ದಿ ಸನ್’ ಪುಸ್ತಕವು ಭಾರತ ಮತ್ತು ಪಾಕಿಸ್ತಾನ ಕ್ರಿಕೆಟ್ ಪೈಪೋಟಿ‌ ಯನ್ನು ಅತ್ಯಂತ ರೋಚಕವಾಗಿ ವಿವರಿಸುತ್ತದೆ. ಇದರೊಂದಿಗೆ ಭಾರತೀಯ ಬ್ಯಾಟಿಂಗ್ ಮಾಂತ್ರಿಕ ಸುನಿಲ್ ಗವಾಸ್ಕರ್ ಬದುಕನ್ನು ಆಧರಿಸಿ ಬರೆದ ‘ಇಂಡಿಯನ್ ಕ್ರಿಕೆಟ್- ದಿ ಸುನಿಲ್ ಗವಾಸ್ಕರ್ ಇರಾ’ ಪುಸ್ತಕವು ಆ ಕಾಲದ ಕ್ರಿಕೆಟ್ ರಾಜಕೀಯ ಮತ್ತು ಗವಾಸ್ಕರ್ ಅವರ ಅಪ್ರತಿಮ ಕೊಡುಗೆಯನ್ನು ಆಳವಾಗಿ ವಿಶ್ಲೇಷಿಸುತ್ತದೆ.

ಭರತನ್ ಅವರ ಮತ್ತೊಂದು ಪ್ರಮುಖ ಮುಖವೆಂದರೆ ಹಿಂದಿ ಚಿತ್ರಗೀತೆಗಳ ಬಗೆಗಿನ ಅವರ ಅಗಾಧ ಜ್ಞಾನ. ‘ಹಿಂದಿ ಚಿತ್ರರಂಗದ ಸುವರ್ಣ ಯುಗ’ ಎಂದು ಕರೆಯಲಾಗುವ 1950, 60 ಮತ್ತು 70ರ ದಶಕದ ಸಂಗೀತ ಸಂಯೋಜಕರು, ಗಾಯಕರು ಮತ್ತು ಗೀತರಚನೆಕಾರರ ಕುರಿತು ಅವರಷ್ಟು ಆಳವಾಗಿ ಬರೆದವರು ವಿರಳ. ನೌಶಾದ್, ಒ.ಪಿ. ನಯ್ಯರ್, ಎಸ್.ಡಿ. ಬರ್ಮನ್, ಆರ್.ಡಿ. ಬರ್ಮನ್, ಶಂಕರ್- ಜೈಕಿಶನ್ ಹಾಗೂ ಮದನ್ ಮೋಹನ್ ಅವರಂಥ ದಿಗ್ಗಜರ ಶೈಲಿ, ಅವರ ನಡುವಿನ ಮುಸುಕಿನ ಗುದ್ದಾಟ ಮತ್ತು ಸಂಯೋಜನೆಯ ರಹಸ್ಯ ಗಳನ್ನು ಭರತನ್ ತಮ್ಮ ಲೇಖನಗಳ ಮೂಲಕ ದಾಖಲಿಸಿದರು.

ಸಂಗೀತ ಲೋಕದಲ್ಲಿ ಅವರು ಬರೆದ ಜೀವನಚರಿತ್ರೆಗಳು ಚಲನಚಿತ್ರ ಸಾಹಿತ್ಯಕ್ಕೆ ದೊಡ್ಡ ಕೊಡುಗೆ. ಭಾರತದ ಗಾನಕೋಗಿಲೆ ಲತಾ ಮಂಗೇಶ್ಕರ್ ಅವರ ಜೀವನ ಕುರಿತು 1995ರಲ್ಲಿ ಅವರು ಬರೆದ ‘ಲತಾ ಮಂಗೇಶ್ಕರ್: ಎ ಬಯೋಗ್ರಫಿ’ ಪುಸ್ತಕವು ತೀವ್ರ ಚರ್ಚೆಗೆ ಗ್ರಾಸವಾಯಿತು. ಲತಾ ಅವರ ಅಪೂರ್ವ ಪ್ರತಿಭೆಯನ್ನು ಕೊಂಡಾಡುತ್ತಲೇ, ಅವರು ಚಿತ್ರರಂಗದ ಮೇಲೆ ಬೀರಿದ ಏಕಸ್ವಾಮ್ಯದ ಪ್ರಭಾವ, ಇತರ ಗಾಯಕಿಯರಿಗೆ ಎದುರಾದ ಸವಾಲುಗಳು ಮತ್ತು ಸಂಗೀತ ನಿರ್ದೇಶಕರೊಂದಿಗಿನ ಅವರ ವಿವಾದಗಳನ್ನು ಮುಚ್ಚುಮರೆಯಿಲ್ಲದೇ ಭರತನ್ ಇದರಲ್ಲಿ ದಾಖಲಿಸಿದ್ದರು.

ಲತಾ ಮಂಗೇಶ್ಕರ್ ಅವರಲ್ಲದೇ, ಭರತನ್ ಬರೆದ ಇತರ ಪುಸ್ತಕಗಳೂ ಅಪಾರ ಜನಪ್ರಿಯತೆ ಗಳಿಸಿದವು. ಭಾರತದ ಶ್ರೇಷ್ಠ ಸಂಗೀತ ನಿರ್ದೇಶಕರಲ್ಲಿ ಒಬ್ಬರಾದ ನೌಶಾದ್ ಜೀವನ ಕುರಿತ ‘ನೌಶಾದ್‌ನಾಮ: ದಿ ಲೈಫ್ ಆಂಡ್ ಮ್ಯೂಸಿಕ್ ಆಫ್ ನೌಶಾದ್’ ಮತ್ತು ಆಶಾ ಭೋಸ್ಲೆ ಜೀವನ ವನ್ನು ತೆರೆದಿಟ್ಟ ‘ಆಶಾ ಭೋಸ್ಲೆ: ಎ ಮ್ಯೂಸಿಕಲ್ ಬಯಾಗ್ರಫಿ’ ಪುಸ್ತಕಗಳು ಇಂದಿಗೂ ಸಂಗೀತಾ ಸಕ್ತರ ನೆಚ್ಚಿನ ಕೃತಿಗಳಾಗಿವೆ. ‌ನಾದಸ್ವರಗಳು, ವಾದ್ಯಗಳ ಬಳಕೆ ಮತ್ತು ಹಿನ್ನೆಲೆ ಗಾಯನದ ಸೂಕ್ಷ್ಮ ವ್ಯತ್ಯಾಸಗಳನ್ನು ಅವರು ವಿಶ್ಲೇಷಿಸುತ್ತಿದ್ದ ರೀತಿಯೂ ಗಮನಾರ್ಹ.