Ravi Hunj Column: ರೇಣುಕ-ಬಸವಣ್ಣ, ಐತಿಹಾಸಿಕ- ಪೌರಾಣಿಕ, ಸತ್ಯ-ಮಿಥ್ಯ !
ಮೊದಲನೆಯ ಆಯಾಮದಲ್ಲಿ ಬಸವಣ್ಣನ ಪೋಷಕರು, ಹುಟ್ಟು, ಬಾಲ್ಯ, ಯೌವನ, ಉದ್ಯೋಗ, ಹೋರಾಟ, ಛಲ ಮತ್ತು ಅಂತ್ಯದ ಸಮಗ್ರ ಜೀವನ ಚಿತ್ರಣ ಸಿಕ್ಕರೆ ಎರಡನೇ ಆಯಾಮದಲ್ಲಿ ಹೆಚ್ಚಾಗಿ ಬಸವಣ್ಣನ ಆಧ್ಯಾತ್ಮಿಕ ಭಕ್ತಿ, ಸಂಘಟನಾ ಯುಕ್ತಿ, ಸಿಡಿದೇಳುವ ಪ್ರವೃತ್ತಿ ಮತ್ತು ಸಾಮಾಜಿಕ ಕಳಕಳಿಯ ಚಿತ್ರಣ ಸಿಗುತ್ತದೆ


ಬಸವ ಮಂಟಪ
ರವಿ ಹಂಜ್
ಬಸವಣ್ಣನೆಂದರೆ ಇಂದಿಗೂ ಯಾರೂ ಸರಿಯಾಗಿ ಅರ್ಥಮಾಡಿಕೊಳ್ಳದ ಒಂದು ಒಗಟು, ಕೌತುಕ, ನಿಗೂಢ ಆದರೂ ನಿತ್ಯ ಸಂಭವಿಸುತ್ತಿರುವ ಸಾಮಾಜಿಕ ಶಕ್ತಿ! ಬಸವಣ್ಣನನ್ನು ಈವರೆಗೆ ಎರಡು ಆಯಾಮಗಳಿಂದ ಅರ್ಥ ಮಾಡಿಕೊಳ್ಳಲಾಗಿದೆ. ಒಂದು ಪುರಾಣಗಳ ಮೂಲಕ. ಅಂದರೆ ಪಾಲ್ಕುರಿಕೆ ಸೋಮನಾಥನ ‘ಬಸವ ಪುರಾಣಮು’ (ಕನ್ನಡದಲ್ಲಿ ಬಸವ ಪುರಾಣ, ಭೀಮಕವಿ) ಮತ್ತು ಹರಿಹರನ ‘ಬಸವರಾಜ ದೇವರ ರಗಳೆ’ ಎಂಬ ಮೂಲ ಆಕರಗಳನ್ನಾಧರಿಸಿದ ಬಸವಣ್ಣ. ಇನ್ನೊಂದು ಬಸವಣ್ಣನು ರಚಿಸಿದ ವಚನಗಳು ಮತ್ತು ಬಸವಣ್ಣನನ್ನು ಕುರಿತು ಇತರೆ ವಚನ ಕಾರರು ರಚಿಸಿದ ವಚನಗಳನ್ನಾಧರಿಸಿದ ಸೃಜನಶೀಲ ಕಾಲ್ಪನಿಕ ಸಂಕಥನದ ’ಶೂನ್ಯ ಸಂಪಾದನೆ’ ಮತ್ತು ಅಂಥ ಸೃಜನಶೀಲ ಕೃತಿಗಳ ಮೂಲಕ ಕಟ್ಟಿಕೊಟ್ಟಿರುವ ಬಸವಣ್ಣ.
ಮೊದಲನೆಯ ಆಯಾಮದಲ್ಲಿ ಬಸವಣ್ಣನ ಪೋಷಕರು, ಹುಟ್ಟು, ಬಾಲ್ಯ, ಯೌವನ, ಉದ್ಯೋಗ, ಹೋರಾಟ, ಛಲ ಮತ್ತು ಅಂತ್ಯದ ಸಮಗ್ರ ಜೀವನ ಚಿತ್ರಣ ಸಿಕ್ಕರೆ ಎರಡನೇ ಆಯಾಮದಲ್ಲಿ ಹೆಚ್ಚಾಗಿ ಬಸವಣ್ಣನ ಆಧ್ಯಾತ್ಮಿಕ ಭಕ್ತಿ, ಸಂಘಟನಾ ಯುಕ್ತಿ, ಸಿಡಿದೇಳುವ ಪ್ರವೃತ್ತಿ ಮತ್ತು ಸಾಮಾಜಿಕ ಕಳಕಳಿಯ ಚಿತ್ರಣ ಸಿಗುತ್ತದೆ. ಈ ಎರಡೂ ಆಯಾಮಗಳನ್ನು ಚಿಕಿತ್ಸಕ ದೃಷ್ಟಿಯಿಂದ ಗಮನಿಸಿದಾಗ ಮೊದಲನೇ ಚಿತ್ರಣದಲ್ಲಿನ ಪೌರಾಣಿಕ ಸಂಕಥನವನ್ನು ಎರಡನೇ ಚಿತ್ರಣದಲ್ಲಿ ಐತಿಹಾಸಿಕಗೊಳಿಸುವ ಸಾಹಿತ್ಯಿಕ ಮಾರ್ಪಿನ ರೂಪಾಂತರ ಸುಸ್ಪಷ್ಟವಾಗಿ ಕಾಣಿಸುತ್ತದೆ.
ಪೌರಾಣಿಕವೋ ಐತಿಹಾಸಿಕವೋ ಇವೆರಡೂ ಚಿತ್ರಣಗಳ ಮೂಲಕ ಬಸವಣ್ಣ ಕರ್ನಾಟಕವನ್ನು ಆವರಿಸಿಕೊಂಡಿದ್ದಾನೆ. ದುರದೃಷ್ಟವಶಾತ್ ಇವೆರಡೂ ಬಸವಣ್ಣನ ನೈಜ ವಾಸ್ತವಿಕ ಚಿತ್ರಣವನ್ನು ಇತಿಹಾಸದ ಹಿನ್ನೆಲೆಯಲ್ಲಿ ಕಟ್ಟಿಕೊಡಲು ಸೋತಿವೆ. ಏಕೆಂದರೆ ಅವುಗಳ ಮೂಲ ಸ್ವರೂಪವೇ ಪೌರಾಣಿಕ ಮತ್ತು ಸೃಜನಶೀಲ!
ಇದನ್ನೂ ಓದಿ: Ravi Hunj Column: ತ್ರಿಪುರಾಂತಕ ದೇವರ ಮೂಲ ಅನುಭವ ಮಂಟಪದ ಸುತ್ತ...
ಮೊದಲಿಗೆ ಬಸವಣ್ಣನ ಜೀವನ ಚಿತ್ರಣ ಭಾರತದ ಅಸಂಖ್ಯಾತ ಪೌರಾಣಿಕ ಪುರುಷರಂತೆಯೇ ಪೌರಾಣಿಕವಾಗಿ ಯಷ್ಟೇ ಇದ್ದು ಕಾಲಾಂತರದಲ್ಲಿ ಕಾಲ್ಪನಿಕವಾಗಿ ವಿಸ್ತಾರಗೊಂಡಿದೆಯೇ ಹೊರತು ಯಾವುದೇ ಐತಿಹಾಸಿಕ ಶಾಸನ ಪುರಾವೆಗಳಿಂದಲ್ಲ. ಈ ಹಿನ್ನೆಲೆಯಲ್ಲಿ ಭಾರತೀಯ ಪರಂಪರೆಯ ಶಿವ, ವೀರಭದ್ರ, ರೇಣುಕ, ದುರ್ಗೆಯರಷ್ಟೇ ಬಸವಣ್ಣನೂ ದೇವಮಾನವನಾಗಿದ್ದಾನೆ.
ಶಿವ, ವೀರಭದ್ರ, ರೇಣುಕ, ದುರ್ಗೆಯರು ಹೇಗೆ ಜನರ ನಂಬುಗೆಗನುಗುಣವಾಗಿ ಕಾಲ್ಪನಿಕವೆಂದರೆ ಕಾಲ್ಪನಿಕ, ಪೌರಾಣಿಕವೆಂದರೆ ಪೌರಾಣಿಕ, ವಾಸ್ತವಿಕವೆಂದರೆ ವಾಸ್ತವಿಕವೆನಿಸುತ್ತಾರೋ ಅದೇ ಯಾದಿಯಲ್ಲಿ ಬಸವಣ್ಣನೂ ಸಾಗುತ್ತಿದ್ದಾನೆ. ಭಾರತೀಯ ಇತಿಹಾಸದ ಪರಂಪರೆಯೇ ಮೌಖಿಕ, ಪೌರಾಣಿಕ, ಮತ್ತು ಸೃಜನಶೀಲ ಸ್ಥಿತಿಯಲ್ಲಿ ದಾಖಲಾಗಿದೆ.
ಇದಕ್ಕೆ ಪ್ರಮುಖ ಕಾರಣ ತಮ್ಮ ಪೂರ್ವಜರನ್ನು ಭಕ್ತಿಪೂರ್ವಕವಾಗಿ ದೈವತ್ವಕ್ಕೇರಿಸುವ ಮಾನವನ ಮೂಲ ಸಂಸ್ಕೃತಿ. ಈ ಸಂಸ್ಕೃತಿ ಭಾರತದಲ್ಲಷ್ಟೇ ಅಲ್ಲದೆ ಜಾಗತಿಕವಾಗಿ ಆಚರಣೆಯಲ್ಲಿತ್ತು. ಏಷ್ಯಾ, ಆಫ್ರಿಕಾ, ಆಸ್ಟ್ರೇಲಿಯ, ಪೆಸಿಫಿಕ್ ದ್ವೀಪಗಳು, ಅಮೆರಿಕ ಮತ್ತು ಯುರೋಪಿನ ಬುಡಕಟ್ಟುಗಳಲ್ಲಿ ಸಹ ಇದು ಆಚರಣೆಯಲ್ಲಿತ್ತು.
ಜಗತ್ತಿನ ಎಲ್ಲ ಬುಡಕಟ್ಟುಗಳ ನಡುವೆ ಯಾವುದೇ ಸಂಪರ್ಕವಿರದಿದ್ದ ಕಾಲದಿಂದಲೂ ಪೂರ್ವ ಜರನ್ನು ದೈವತ್ವಕ್ಕೇರಿಸಿ ಸ್ಮಾರಕಗಳನ್ನು ಕಟ್ಟಿ ಅವರಿಗೆ ಅತಿಮಾನವ ಶಕ್ತಿಗಳಿದ್ದವೆಂದು ಸೃಜಿಸಿ ಪೂಜಿಸುವ ಸಂಸ್ಕೃತಿ ಖಂಡಾಂತರವಾಗಿ ಸಾಗರೋತ್ತರವಾಗಿ ಜಾರಿಯಲ್ಲಿತ್ತು. ಈಗಲೂ ಇದೆ!
ಭಾರತದಲ್ಲಿನ ಅವೈದಿಕರ ಹಿರಿಯರ ಹಬ್ಬ, ವೈದಿಕರ ಪಿತೃಪಕ್ಷಗಳಂತೆಯೇ ಚೈನಾದ ಕಿಂಗ್ಮಿಂಗ್, ಜಪಾನಿನ ಬಾನ್, ಕೊರಿಯಾದ ಜೇಸಾ, ಥಾಯ್ಲೆಂಡಿನ ಫೌನ್ ಫೀ, ಯುರೋಪಿನ ಆಲ್ ಸೇಂಟ್ಸ್ ಡೇ/ಸೇಂಹೈನ್/ಹ್ಯಾಲೋವೀನ್, ಮೆಕ್ಸಿಕೋದ ದಿಯಾ ದೆ ಮುಯೆರ್ತೋ (ಮರಣಿಸಿದವರ ದಿನ) ಹೀಗೆ ಹಿರಿಯರನ್ನು ದೈವತ್ವಕ್ಕೇರಿಸಿ ಪೂಜಿಸುವ ಸಂಸ್ಕೃತಿ ಮಾನವನ ಉಗಮದಿಂದಲೂ ಸಂಪರ್ಕ ರಹಿತವಾಗಿ ಅತೀಂದ್ರಿಯ ಶಕ್ತಿಯಂತೆ ಜಾಗತಿಕವಾಗಿದೆ.
ಇದೇ ರೀತಿ ದೆವ್ವತ್ವಕ್ಕೇರಿಸುವುದು ಸಹ. ದೈವತ್ವವೋ ದೆವ್ವತ್ವವೋ ಎರಡರಲ್ಲೂ ಪೂರ್ವಜರಿಗೆ ಅತೀಂದ್ರಿಯ ಶಕ್ತಿಗಳನ್ನು, ವರ ಅಥವಾ ಶಾಪ ಕೊಡುವ ಶಕ್ತಿಗಳನ್ನು ಸಂಕಥಿಸಿ ಪವಾಡ ಪುರುಷ/ಸ್ತ್ರೀ ಅಲ್ಲದೆ ಅವತಾರ ಪುರುಷರನ್ನಾಗಿ ಮಾಡಿ ಪೂಜಿಸುವ ಪರಿ ಸಹ ಎಂದಿನಿಂದಲೂ ಇದೆ. ಭಾರತೀಯರ ಆದಿದೈವ ಶಿವನಲ್ಲದೆ ಇಂದು ಭಾರತೀಯರು ದೇವರೆಂದು ಪೂಜಿಸುವ ಪ್ರತಿ ಯೊಂದು ದೇವಾನುದೇವತೆಗಳು ಹಿಂದೊಮ್ಮೆ ಆಗಿಹೋದ ಮಾನವರೇ ಆಗಿದ್ದಾರೆ ಅಥವಾ ಅಂಥ ಮಾನವರ ಸೂರ್ತಿಯ ಕಾಲ್ಪನಿಕ ಪಾತ್ರಗಳೇ ಆಗಿವೆ. ಮಧುರೈ ಮೀನಾಕ್ಷಿ, ಕನ್ನಿಕಾ ಪರಮೇಶ್ವರಿ, ಕಂಚಿ ಕಾಮಾಕ್ಷಿ, ಮೈಸೂರಿನ ಚಾಮುಂಡಿ, ಚಿತ್ರದುರ್ಗದ ಬರಗೇರಮ್ಮ, ಉಚ್ಚಂಗಿದುರ್ಗದ ಉಚ್ಚಂಗಿಯಲ್ಲದೆ ಜೀವಂತವಿರುವ ಖುಷ್ಬೂವಿನ ಖುಷ್ಬಾಂಬಿಕ ದೇವಸ್ಥಾನ ದವರೆಗೆ ಇದನ್ನು ಕಾಣಬಹುದು.
ಸಮಾಜವನ್ನು ಕಾಡುತ್ತಿದ್ದ ಸಾಂಕ್ರಾಮಿಕ ಮಹಾಮಾರಿಗೂ ಮೂರ್ತರೂಪ ಕೊಟ್ಟ ಮಾರಮ್ಮ, ಪ್ಲೇಗಿನ ಪ್ಲೇಗಮ್ಮರನ್ನು ಪೂಜಿಸುವ ಪರಿಪಾಠ ಈಗಲೂ ಇದೆ. ಇದೇ ರೀತಿ ಕರೋನಾ ಮಾರಿಗೆ ಕರೋನಮ್ಮ ಎಂದು ಎದರೂ ಪೂಜಿಸಿರುವ ನಿದರ್ಶನವಿದ್ದರೂ ಇರಬಹುದು.
ಹೀಗೆ ಅಮೂರ್ತ ಶಕ್ತಿಗಳಿಗೆ ಮೂರ್ತರೂಪ ಕೊಟ್ಟು ಪೂಜಿಸುವ ಪರಿಪಾಠ ಸಹ ಮಾನವನ ಮೂಲ ಸ್ವಭಾವ. ಹಾಗಾಗಿಯೇ ಪೂಜ್ಯ ಶ್ರೀ ಜಚನಿಯವರು ತಮ್ಮ ‘ವಿಶ್ವಜ್ಯೋತಿ ವೀರಭದ್ರ’ ಎಂಬ ಕೃತಿಯಲ್ಲಿ ವೀರಭದ್ರನ ಕಾಲವನ್ನು ಕ್ರಿಸ್ತಪೂರ್ವ 6ನೇ ಶತಮಾನ ಎಂದಿದ್ದಾರೆ. ಸಮಾಜದಲ್ಲಿ ಅಸಾಮಾನ್ಯವಾದುದನ್ನು ಸಾಧಿಸಿ ದೈವತ್ವವನ್ನು ಏರಿದವರ ಹುಟ್ಟೂ ಅಸಾಮಾನ್ಯವಾಗಿಯೇ ಇರಬೇಕು ಎಂಬ ಚಿಂತನೆ ಈ ಎ ಹುಟ್ಟು ವೈಭವೀಕರಣಕ್ಕೆ ಕಾರಣವಾಗಿದೆ.
ಇದಕ್ಕೆ ಇಂದಿನ ವೈಚಾರಿಕ ಬುದ್ಧಿಜೀವಿಗಳ ಆತ್ಮಚರಿತ್ರೆಗಳೂ ಹೊರತಲ್ಲ! ಹಲವಾರು ಬುದ್ಧಿಜೀವಿ ಗಳು ಅವರ ಹುಟ್ಟಿನ ಸಮಯದಲ್ಲಿ ಅವರ ಕುಟುಂಬ ತೀವ್ರ ಸಂಕಷ್ಟದಲ್ಲಿತ್ತೆಂದೋ, ಅಥವಾ ವೈಭೋಗದಲ್ಲಿ ತೇಲುತ್ತಿತ್ತೆಂದೋ ವರ್ಣಿಸಿರುವ ಹಲವಾರು ಆತ್ಮಚರಿತ್ರೆಗಳು ಕನ್ನಡ ಸಾಹಿತ್ಯ ದಲ್ಲಿಯೇ ಸಾಕಷ್ಟಿವೆ! ಈಗಂತೂ ಅದ್ಭುತ ಜಾತಕ ಫಲವಿರುವ ಮಹೂರ್ತವನ್ನು ನಿಗದಿಪಡಿಸಿ ಕೊಂಡೇ ಸಿಸೇರಿಯನ್ ಕತ್ತರಿ ಹಾಕಿಸಿ ಹೆರಿಸುತ್ತಿದ್ದಾರೆ!
ಒಟ್ಟಿನಲ್ಲಿ ಈ ಎಲ್ಲ ದೇವಾನುದೇವತೆಗಳ ಹುಟ್ಟನ್ನು ಸಾಮಾನ್ಯವಾಗಿಸದೆ ಅವರವರ ಸಾಧನೆಯ ಮೇರೆಗೆ ವಿಶೇಷವಾಗಿಸಲಾಗಿದೆ ಎಂಬುದು ಗಮನಾರ್ಹ. ಪುರಾಣಗಳಲ್ಲಿ ‘ಆಕಾಶದಿಂದ ಇಳಿದು ಬಂದರು’ ಎಂಬ ಶೈಲಿಯಿಂದ ಕಾಲಕ್ಕೆ ತಕ್ಕಂತೆ ಗಾಳಿ, ನೀರು, ಮರದಿಂದ ಎನ್ನುತ್ತಾ ನಂತರ ತಲೆಯಿಂದ, ಪುರುಷ (ಲಿಂಗ) ವೀರ್ಯದಿಂದ ಪೂರ್ಣ ಪ್ರಮಾಣದಲ್ಲಿ ಸೃಷ್ಟಿಯಾದರು ಎಂದು ಮುಂದೆ ಪುಣ್ಯ ಗರ್ಭದಿಂದ ಶಿಶುವಾಗಿ ಜನಿಸಿದರು ಎನ್ನಲಾಗಿದೆ.
ಉದಾಹರಣೆಗೆ ವೀರಭದ್ರನು ಶಿವನ ಸ್ಖಲಿತ ವೀರ್ಯದಿಂದ ಪೂರ್ಣ ಪ್ರಮಾಣದಲ್ಲಿ ಸೃಷ್ಟಿ ಯಾದನು ಎನ್ನಲಾಗುತ್ತದೆ. ನಂತರದಲ್ಲಿ ಪಾರ್ವತಿಯ ಋತುಸ್ರಾವದ ತ್ಯಾಜ್ಯದಿಂದಲೇ ಬಾಲಕ ಗಣೇಶನು ಹುಟ್ಟಿದನು ಎಂದು, ಮುಂದೆ ಭಾಗವತದ ಪ್ರಭಾವವನ್ನು ಒಪ್ಪಿ ಪುಣ್ಯ ಗರ್ಭದಿಂದ ಷಣ್ಮುಖನು ಜನಿಸಿದನು ಎಂದಿರುವುದೆ ಸಾಮಾಜಿಕ ಮಾನವಿಕ ವಿಕಾಸದ ಪೌರಾಣಿಕಗೊಳಿಸಿದ ಐತಿಹಾಸಿಕ ಸಂಕಥನ. ಇದಕ್ಕೆ ಕೇವಲ ಭಾರತೀಯರಷ್ಟೇ ಅಲ್ಲದೇ ಅವರ ನಿಕಟವರ್ತಿ ಗ್ರೀಕರು ಆರಾಧಿಸುವ ಜಿಯಾಸನ ತಲೆಯಿಂದ ಅಥೀನ, ಸಮುದ್ರದ ನೊರೆಯಿಂದ ಅಫ್ರೋಡೈಟ್, ಮೊಟ್ಟೆ ಯಿಂದ ಹೆಲೆನ್ ಅಲ್ಲದೆ ಅಕ್ಷತ ಯೋನಿಯಲ್ಲಿ ಜನಿಸಿದ ಜೀಸಸ್ ಕ್ರೈ ಆರಾಧಿಸುವ ಕ್ರಿಶ್ಚಿಯನ್ನರು ಸಹ ಇಂಥದೇ ನಂಬಿಕೆಯವರು!
ಹೀಗೆ ಮಹಾಮಹಿಮರ ಹುಟ್ಟಿನ ಅಸ್ವಾಭಾವಿಕ ರೋಚಕ ಕತೆಗಳು ವಿಶ್ವವ್ಯಾಪಿಯಾಗಿವೆ. ಇದೆಲ್ಲದರ ಉದ್ದೇಶವೂ ಸಾಧನೆಗೈದ ಮಹಾಮಹಿಮರನ್ನು ದೈವತ್ವಕ್ಕೇರಿಸಿ ಆ ಮೂಲಕ ಅವರನ್ನು ಚರಿತ್ರೆಯಲ್ಲಿ ಮತ್ತು ಜನಮಾನಸದಲ್ಲಿ ಭಕ್ತಿಪೂರ್ವಕವಾಗಿ ಚಿರಸ್ಥಾಯಿಯಾಗಿ ಉಳಿಸುವುದು. ಇದೇ ಯಾದಿಯಲ್ಲಿ ವೀರಭದ್ರನ ನಂತರದ ಕಾಲಘಟ್ಟದ ರೇಣುಕರು ಅಯೋನಿಜರೆನಿಸಿದ ಪುರಾಣ ಮತ್ತು 12ನೇ ಶತಮಾನದ ಶಿವನ ಶಾಪಗ್ರಸ್ತ ನಂದಿಯಾದ ಬಸವಣ್ಣನು ಜಂಗಮಸೇವೆಗಾಗಿ ಮಾದಲಾಂಬಿಕೆಯ ಪುಣ್ಯಗರ್ಭದಲ್ಲಿ ಪ್ರಸವಿಸಿದ ರಗಳೆ ಕೂಡ!
ಇದೆಲ್ಲದರ ಪ್ರಮುಖ ಉದ್ದೇಶ, ಈ ಮಹಾಮಹಿಮರು ನಮ್ಮ-ನಿಮ್ಮಂಥ ಯಃಕಶ್ಚಿತ್ ಹುಲುಮಾನವರಲ್ಲ, ಪೂಜನೀಯರು, ಮಹಾಮಹಿಮರು, ಅವತಾರ ಪುರುಷರು ಎಂದು ನಿರೂಪಿಸಿ ಅವರ ಎಲ್ಲಾ ಪೂರ್ವಾಶ್ರಮವನ್ನು ಅಳಿಸುವ ಸಕಾರಣವಾಗಿದೆ. ಹಾಗಾಗಿಯೇ ‘ನದಿಮೂಲ, ಋಷಿಮೂಲ ಹುಡುಕಬೇಡ’ ಎಂಬ ನಾಣ್ಣುಡಿ ಇರುವುದು!
ಈ ಮಹಾಮಹಿಮರಲ್ಲಿ ಯಾರೊಬ್ಬರದೂ ಜನನ ಪ್ರಮಾಣ ಪತ್ರವಿಲ್ಲ! ಇಂದೇನಾದರೂ ಅವರ ಜಯಂತಿಗಳನ್ನು ಆಚರಿಸುತ್ತಿದ್ದರೆ ಅದು ಕೇವಲ ಪುರಾಣಗಳ ಆಧಾರದ ಮೇಲೆ ಎಂಬುದು ಶಾಶ್ವತ ಸತ್ಯ.
***
ಇನ್ನು, ವಚನಗಳನ್ನು ಇಂಥವರೇ ರಚಿಸಿದ್ದಾರೆ ಎಂಬುದಕ್ಕೆ ಸಹ ಇತಿಹಾಸಮಾನ್ಯ ಖಾತರಿ ಇಲ್ಲ. ಅವುಗಳ ಮೂಲ ಆಕರದ ಓಲೆಗರಿ ಕಟ್ಟುಗಳು ಸಹ 15ನೇ ಶತಮಾನದ ಕೊನೆಯಲ್ಲಿ ಸಂಪಾದನೆ ಗೊಂಡು ಸಂಕಲಿತಗೊಂಡಿವೆ ಎಂದು ಈವರೆಗಿನ ಎ ಸಂಶೋಧನೆಗಳೂ ತಿಳಿಸುತ್ತವೆ. ಹಾಗಾಗಿ ಸಾಹಿತ್ಯಿಕ ಹಿನ್ನೆಲೆಯಲ್ಲಿ ಸಹ ಬಸವಣ್ಣನು ಓರ್ವ ಸೃಜನಶೀಲ ಕಾಲ್ಪನಿಕ ವ್ಯಕ್ತಿ ಎನಿಸುತ್ತಾನೆಯೇ ಹೊರತು ಐತಿಹಾಸಿಕವಾಗಿ ಅಲ್ಲ. ಆತನ ಕುರಿತಾದವು ಎನ್ನಲಾದ ಶಾಸನಗಳು ಅವನನ್ನು ‘ವೀರಮಾಹೇಶ್ವರ ಜಂಗಮ ಪುರುಷ’ ಎನ್ನುತ್ತವೆ.
ಹಾಗಾಗಿ ಜಂಗಮ-ವಿರೋಧಿ ನವ್ಯ ಲಿಂಗಾಯತರು ಪೌರಾಣಿಕ ಬಸವನನ್ನೇ ಒಪ್ಪಿ ಶಾಸನಗಳ ಬಸವಣ್ಣನನ್ನು ತಿರಸ್ಕರಿಸುತ್ತಾರೆ. ಅದು ತಾರ್ಕಿಕ ಕೂಡ. ಏಕೆಂದರೆ ಈ ಶಾಸನಗಳು ಬಸವಣ್ಣನ ಯಾವುದೇ ಸಾಧನೆಯ ಕುರಿತು ಒಂದೇ ಒಂದು ಶಬ್ದವನ್ನೂ ಹೊಂದಿಲ್ಲ. ಅದರಲ್ಲೂ ಪ್ರತ್ಯೇಕ-ಪರ ಸಂಶೋಧಕ ಎಚ್. ದೇವೀರಪ್ಪನವರು “ಸಂಗನ ಬಸವನ ಅಣ್ಣ ದೇವರಾಜ. ಈಗ ಲಿಂಗೈಕ್ಯ ನಾಗಿರುವ ಆ ದೇವರಾಜ ಮುನಿಪನ ಔರಸಪುತ್ರನೂ ಜಂಗಮ ಪರುಷಪ್ರಾಯನಾದ ಬಸವರಸ (ಬಸವಣ್ಣ)ನ ಕರಕಮಲ ಸಂಜಾತನೂ ಆಗಿರುವ ಕಲಿದೇವರಸನು, ‘ಉಳ್ಳವರು ಶಿವಾಲಯವ...’ ಎಂದು ಮೆದುವಾದ ಮಾತಿನಲ್ಲಿ ಬಹು ಸಮರ್ಥ ರೀತಿಯಲ್ಲಿ ಲಿಂಗವಂತ ಧರ್ಮದ ತಿರುಳನ್ನೇ ಪುದುಗೊಳಿಸಿ ಧ್ವನಿ ತುಂಬಿ ಸ್ಥಾವರ ಲಿಂಗಪೂಜೆಯನ್ನು ಖಂಡಿಸಿರುವ ಬಸವಣ್ಣನವರ ಅಣ್ಣನ(?) ಮಗನೋ ಮೊಮ್ಮಗನೋ ಮರಿಮಗನೋ ಒಂದು ಸಾಮಾನ್ಯವಾದ ಶಿವಮಂದಿರದ ‘ಪೂಜಾರಿ’ ಯಾಗಿದ್ದನೆನ್ನುವುದು, ಹಾಗೆ ನಂಬುವುದು, ಅದನ್ನು ಪ್ರಚಾರ ಮಾಡುವುದು ಬಸವಣ್ಣನವರನ್ನೂ ಅವರ ವಿಶ್ವಮಾನ್ಯ ತತ್ವಗಳನ್ನೂ ಕೊಲೆ ಮಾಡಿದಂತೆ" ಎಂದು ತಮ್ಮ ‘ಅರ್ಜುನವಾಡದ ಶಿಲಾಲೇಖ’ ಎಂಬ ಲೇಖನದಲ್ಲಿ ಈ ಶಾಸನವೊಂದು ‘ಕೂಟಶಾಸನ’ ಎಂದು ಖಂಡಿಸಿ ಈ ಶಾಸನದ ಔಚಿತ್ಯವನ್ನೇ ಪ್ರಶ್ನಿಸಿದ್ದಾರೆ. (ಪುಟ 484, ಕೃತಿ ‘ಸಂಶೋಧನ ಸಂಪುಟ’ ಲೇ: ಎಚ್.ದೇವೀರಪ್ಪ, ಪ್ರಕಾಶಕರು ಎನ್.ಆರ್. ವಿಶುಕುಮಾರ್, ನಿರ್ದೇಶಕರು, ಕನ್ನಡ ಸಂಸ್ಕೃತಿ ಇಲಾಖೆ). ಇಲ್ಲಿ ಇವರು ‘ಪೂಜಾರಿ’ ಎಂದಿರುವುದು ಶಾಸನವು ಬಸವಣ್ಣನನ್ನು ಜಂಗಮ ಎಂದಿರುವ ಕಾರಣಕ್ಕೆ ಎಂದು ಬಿಡಿಸಿ ಹೇಳಬೇಕಿಲ್ಲ!
ಅಂದರೆ ಬಸವಣ್ಣನು ಯಃಕಶ್ಚಿತ್ ಹುಲುಮಾನವ ಹಿನ್ನೆಲೆಯನ್ನು ಹೊಂದಿರಲು ಸಾಧ್ಯವೇ ಇಲ್ಲ ಎಂಬ ಮಾನವಮೂಲ ಅನಾದಿಪ್ರಜ್ಞೆಯ ಪೌರಾಣಿಕ ಕಥೆಯನ್ನೇ ಮಾನಸಿಕವಾಗಿ ಪರೋಕ್ಷವಾಗಿ ಇವರು ಪ್ರತಿಪಾದಿಸುತ್ತಾರೆ. ಇನ್ನು ಲಿಂಗಿಬ್ರಾಹ್ಮಣರು ‘ವೀರಶೈವ’ ಪದವನ್ನು ತುರುಕಿದ್ದರು, ಅವು ಪ್ರಕ್ಷೇಪ ಎನ್ನುತ್ತಲೇ ಹೇಗೆ ಪ್ರೊ.ಕಲ್ಬುರ್ಗಿಯವರು ಎಲ್ಲಾ ವಚನಗಳನ್ನು ಮಾನ್ಯ ಮಾಡಿ ಪ್ರಕಟಿಸಿ ಸಂಪುಟವನ್ನು ಹೊರತಂದರೋ ಅದೇ ರೀತಿ ಕೂಟಶಾಸನ ಎಂದ ಅರ್ಜುನವಾಡ ಶಿಲಾಶಾಸನ ವನ್ನೂ ಮಾನ್ಯ ಮಾಡಿದ್ದಾರೆ ಎಂಬುದು ಪ್ರೊ. ಕಲ್ಬುರ್ಗಿಯವರ ನಡೆ-ನುಡಿಯ ನಡುವಿನ ವ್ಯಾವಹಾರಿಕ ಅಂಶ ಎಂಬುದು ಗಮನಾರ್ಹ.
(ಮುಂದುವರಿಯುವುದು)
(ಲೇಖಕರು ಶಿಕಾಗೊ ನಿವಾಸಿ ಮತ್ತು ಸಾಹಿತಿ)