ಚೌತಿ ಹಬ್ಬ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Kiran Upadhyay Column: ಇಷ್ಟು ಮಾಡಿ ಅಮೆರಿಕ ಸಾಧಿಸಿದ್ದಾದರೂ ಏನು ?

ದೇಶದ ಆಂತರಿಕ ಗಲಭೆಗಳನ್ನು ಯಾವ ದೇಶವಾದರೂ ಸಹಿಸಿಕೊಳ್ಳುತ್ತದೆ, ಸುಧಾರಿಸಿಕೊಳ್ಳುತ್ತದೆ. ಯಡವಟ್ಟಾಗುವುದು ಬೇರೆ ದೇಶಗಳು ಮೂಗು ತೂರಿಸಿದಾಗ. ವಿಯೆಟ್ನಾಂ ತನ್ನ ಸ್ವಾರ್ಥಕ್ಕಾಗಿ ಲಾವೋಸ್‌ನಲ್ಲಿ ರಸ್ತೆ ನಿರ್ಮಿಸದಿದ್ದಿದ್ದರೆ, ರಷ್ಯಾ, ಚೀನಾ ಅದರ ಬೆಂಬಲಕ್ಕೆ ನಿಲ್ಲದಿದ್ದಿದ್ದರೆ, ಅಮೆರಿಕ ಮಧ್ಯ ಪ್ರವೇಶಿಸದಿದ್ದಿದ್ದರೆ, ಎಲ್ಲಕ್ಕಿಂತ ಹೆಚ್ಚಾಗಿ, ಲಕ್ಷಗಟ್ಟಲೆ ಬಾಂಬ್ ಹಾಕದಿದ್ದಿದ್ದರೆ, ಲಾವೋಸ್‌ನ ಅಮಾಯಕರು ಸಾಯುತ್ತಿರಲಿಲ್ಲ.

ಇಷ್ಟು ಮಾಡಿ ಅಮೆರಿಕ ಸಾಧಿಸಿದ್ದಾದರೂ ಏನು ?

-

ವಿದೇಶವಾಸಿ

dhyapaa@gmail.com

ಆಗ್ನೇಯ ಏಷ್ಯಾದಲ್ಲಿ ಸಮುದ್ರ ಸೌಭಾಗ್ಯವನ್ನು ಹೊಂದದ ಏಕೈಕ ರಾಷ್ಟ್ರ ಲಾವೋಸ್. ಅಣಬೆಯ ಆಕಾರದಲ್ಲಿರುವ ಈ ದೇಶ ಅತಿ ಹೆಚ್ಚು ಗಡಿಯನ್ನು ಹಂಚಿಕೊಂಡದ್ದು ಬಲಕ್ಕಿರುವ ವಿಯೆಟ್ನಾಂ ಮತ್ತು ಎಡಕ್ಕಿರುವ ಥೈಲ್ಯಾಂಡ್ ದೇಶದೊಂದಿಗೆ. ಉಳಿದಂತೆ, ದಕ್ಷಿಣದಲ್ಲಿ ಕಾಂಬೋಡಿಯಾ, ಉತ್ತರದಲ್ಲಿ ಚೀನಾ ಹಾಗೂ ವಾಯವ್ಯದಲ್ಲಿ ಮ್ಯಾನ್ಮಾರ್ ದೇಶಗಳು ಲಾವೋಸ್‌ಗೆ ಹೊಂದಿ ಕೊಂಡಿವೆ.

ದೇಶದಲ್ಲಿ ಹರಿಯುವ ಮೆಕಾಂಗ್ ನದಿ ದೇಶಕ್ಕೆ ನೀರು ಪೂರೈಕೆಯ ದೊಡ್ಡ ಸಾಧನ. ಲಾವೋಸ್ ಮತ್ತು ಥೈಲ್ಯಾಂಡ್ ನಡುವಿನ ಸುಮಾರು ಮುಕ್ಕಾಲು ಭಾಗಕ್ಕೆ ಈ ನದಿಯೇ ಗಡಿ.

ಈ ದೇಶದಲ್ಲಿ ನಾನು ಕಂಡ ವಿಶೇಷತೆ ಎಂದರೆ, ಹೊಲದಲ್ಲಂತೂ ಕೃಷಿ ಇದ್ದೇ ಇದೆ, ಇಲ್ಲಿಯ ಜನರು ಗುಡ್ಡದ ಮೇಲೂ ಸಾಕಷ್ಟು ಕೃಷಿ ಮಾಡುತ್ತಾರೆ. ಗುಡ್ಡದ ಮೇಲೆ ಜೋಳ, ಪೇರಲೆ, ಚಕ್ಕೋತ, ಬಾಳೆ ಗಿಡಗಳು ಕಾಣುವುದು ಇಲ್ಲಿ ಸರ್ವೇಸಾಮಾನ್ಯ. ಇಲ್ಲಿಯ ಹೆಚ್ಚಿನ ಜನರು ಕೃಷಿಕರು. ಅವರಲ್ಲಿ ಬಹುತೇಕರು ಗುಡ್ಡದ ಮೇಲೆಯೇ ಮನೆ ಕಟ್ಟಿಕೊಂಡು ಅಲ್ಲಿಯೇ ವಾಸಿಸುತ್ತಾರೆ.

ಲಾವೋಸ್‌ನಲ್ಲಿ ನೀವು ಕಣ್ಣು ಹಾಯಿಸಿದಷ್ಟು ದೂರಕ್ಕೂ ಹಸಿರೇ ಹಸಿರು. ಈ ದೇಶದ ಮೇಲೆ ಬಹುರಾಷ್ಟ್ರೀಯ ಸಂಸ್ಥೆಗಳು ಲಗ್ಗೆ ಇಟ್ಟಿಲ್ಲ. ಪಿಜ್ಜಾ ಹಟ್, ಪಿಜ್ಜಾ ಇನ್, ಮ್ಯಾಕ್ ಡೊನಾಲ್ಡ್ಸ್ನಂಥ ಆಹಾರ ಪೂರೈಕೆಯ ಸಂಸ್ಥೆಗಳು ಕೂಡ ಇನ್ನೂ ದಾಳಿ ಮಾಡಿಲ್ಲ. ಅಷ್ಟರಮಟ್ಟಿಗೆ ಆ ದೇಶ ಇನ್ನೂ ತನ್ನತನವನ್ನು ಉಳಿಸಿಕೊಂಡಿದೆ.

ಇದನ್ನೂ ಓದಿ: Kiran Upadhyay Column: ಕಲ್ಲು ಎಸೆದರೆ ಮನೆ ಕಟ್ಟಬಹುದು, ಬಾಂಬ್‌ ಎಸೆದರೆ... ?

ಇಂಥ ಬಡದೇಶದ ಮೇಲೆ ಅಮೆರಿಕ ಸತತ ಒಂಬತ್ತು ವರ್ಷ, ಪ್ರತಿನಿತ್ಯ, ಸರಾಸರಿ ಪ್ರತಿ 8 ನಿಮಿಷ ಕ್ಕೊಮ್ಮೆ ಬಾಂಬ್ ಸುರಿಸಿದೆ. ಅದರಲ್ಲಿ ಬಹುತೇಕ ಬಾಂಬ್‌ಗಳು ಇನ್ನೂ ಸಿಡಿಯದೇ ಉಳಿದಿವೆ. ದೇಶದ ಅರ್ಧಕ್ಕಿಂತಲೂ ಹೆಚ್ಚು ಭೂಪ್ರದೇಶದಲ್ಲಿ ಸಿಡಿಯದೇ ಇರುವ ಬಾಂಬ್‌ಗಳ ಹುಡುಕಾಟ ಇಂದಿಗೂ ಜಾರಿಯಲ್ಲಿದೆ.

ನಿಮಗೆ ತಿಳಿದಿರಲಿ, ವಿಶ್ವ ಮಹಾಯುದ್ಧದ ಸಂದರ್ಭದಲ್ಲಿ ಜಪಾನ್ ಮೇಲೆ ಕೂಡ ಇಷ್ಟೊಂದು ಬಾಂಬ್ ದಾಳಿ ನಡೆಯಲಿಲ್ಲ. ಹಾಗಾದರೆ, ಅಮೆರಿಕ ಈ ದೇಶದ ಮೇಲೆ ಅಷ್ಟೊಂದು ಬಾಂಬ್ ಹಾಕಲು ಕಾರಣವಾದರೂ ಏನು? ಇದು ತಿಳಿಯಬೇಕಾದರೆ ನಾವು ಸ್ವಲ್ಪ ಹಿಂದಕ್ಕೆ ಹೋಗಿ ವಿಯೆಟ್ನಾಂ ಯುದ್ಧದ ಇತಿಹಾಸವನ್ನು ಅರಿತುಕೊಳ್ಳಬೇಕು.

ಲಾವೋಸ್, 1893ರಿಂದ 1953ರವರೆಗೆ 60 ವರ್ಷಗಳ ಕಾಲ ಫ್ರೆಂಚ್ ರಕ್ಷಿತ ಪ್ರದೇಶವಾಗಿತ್ತು. ಅದುವರೆಗೂ ಬೇರೆ ಬೇರೆ ರಾಜರ ಆಡಳಿತದಲ್ಲಿದ್ದ ಲಾವೋಸ್ ದೇಶವನ್ನು 1947ರ ಮೇ ತಿಂಗಳಿ ನಲ್ಲಿ ಏಕೀಕೃತ ರಾಷ್ಟ್ರವೆಂದು ಘೋಷಿಸಲಾಯಿತು. 1953ರ ಅಕ್ಟೋಬರ್ ತಿಂಗಳಿನಲ್ಲಿ ಲಾವೋಸ್ ದೇಶ ಫ್ರೆಂಚ್ ಆಡಳಿತದಿಂದ ಸ್ವತಂತ್ರವಾಯಿತು.

Kiran U 0109

ಕೆಲವು ತಿಂಗಳುಗಳು ಕಳೆದಿದ್ದವಷ್ಟೇ, ಆ ದೇಶದ ದುರ್ದೈವದ, ಅತಿ ಕಷ್ಟದ ದಿನಗಳು ಆಗಲೇ ಆರಂಭವಾದವು. ಅದು ಸತತ ಇಪ್ಪತ್ತೆರಡು ವರ್ಷಗಳವರೆಗೆ ಮುಂದುವರಿಯಿತು. ನಮ್ಮ ಕರ್ನಾಟಕ ರಾಜ್ಯಕ್ಕಿಂತ ಸ್ವಲ್ಪ ಹೆಚ್ಚೇ ಭೂಪ್ರದೇಶ ಹೊಂದಿದ ಈ ದೇಶದಲ್ಲಿ, ಅಂದು ಕೇವಲ ನಲವತ್ತು ಲಕ್ಷ ಜನಸಂಖ್ಯೆ ಹೊಂದಿದ ಪ್ರದೇಶದಲ್ಲಿ (ಈಗ ಲಾವೋಸ್‌ನ ಜನಸಂಖ್ಯೆ ಸುಮಾರು ಎಂಬತ್ತು ಲಕ್ಷ) ಸಾಕಷ್ಟು ಪಂಗಡಗಳಾಗಿದ್ದವು.

ಆಂತರಿಕ ಭಿನ್ನಾಭಿಪ್ರಾಯ ಸ್ಫೋಟಗೊಂಡು, ಗಲಭೆಗಳೂ ನಡೆದವು. ಸಾವಿರಾರು ಜನ ಹೆಣವಾಗಿ ಧರೆಗುರುಳಿದರು. ವಿಯೆಟ್ನಾಂ ಯುದ್ಧದ ಬಗ್ಗೆ ಸಂಕ್ಷಿಪ್ತವಾಗಿ ಹೇಳುವುದಾದರೆ, ಇದು 1955ರಿಂದ 1975ರವರೆಗೆ ಸುಮಾರು 20 ವರ್ಷಗಳ ಕಾಲ ನಡೆಯಿತು. 1945ರಲ್ಲಿ ಹೊ ಚಿ ಮಿನ್ ‘ಡೆಮಾಕ್ರಟಿಕ್ ರಿಪಬ್ಲಿಕ್ ಆಫ್ ವಿಯಟ್ನಾಂ’ ಪಕ್ಷದ ವತಿಯಿಂದ ಪ್ರಧಾನಮಂತ್ರಿಯಾಗಿ ಆಯ್ಕೆಯಾದರು. ‌

ಮಾರ್ಕ್ಸಿ ಲೆನಿನಿಸ್ಟ್ ತತ್ವ ಸಿದ್ಧಾಂತಗಳನ್ನು ಒಪ್ಪಿಕೊಂಡಿದ್ದ ಹೊ ಚಿ ಮಿನ್, 1930ರಲ್ಲಿಯೇ ‘ಇಂಡೋ ಚೈನೀಸ್ ಕಮ್ಯುನಿಸ್ಟ್ ಪಾರ್ಟಿ’ಯನ್ನು ಆರಂಭಿಸಿದ್ದರು. ಕ್ರಮೇಣ ಅದು ‘ಕಮ್ಯುನಿಸ್ಟ್ ಪಾರ್ಟಿ ಆಫ್ ವಿಯೆಟ್ನಾಂ’ ಎಂದು ಬದಲಾಯಿತು. 1969ರಲ್ಲಿ ಅವರು ಸಾಯುವವರೆಗೂ ಆ ಪಕ್ಷದ ಅಧ್ಯಕ್ಷ ರಾಗಿದ್ದರು. ಅಂದು ದಕ್ಷಿಣ ವಿಯೆಟ್ನಾಂನಲ್ಲಿ ಹೆಚ್ಚಿನ ಜನರಿಗೆ ಕಮ್ಯುನಿಸ್ಟ್ ಪರ ಒಲವು ಇರಲಿಲ್ಲ. ಹೊ ಚಿ ಮಿನ್ ದಕ್ಷಿಣದಲ್ಲಿಯೂ ಕಮ್ಯುನಿ ಸಿದ್ಧಾಂತವನ್ನು ಹರಡಲು, ದಕ್ಷಿಣ ವಿಯೆಟ್ನಾಮನ್ನು ತಮ್ಮ ತೆಕ್ಕೆಗೆ ತೆಗೆದುಕೊಳ್ಳಲು ಪ್ರಯತ್ನಿಸುತ್ತಿದ್ದರು. ಆ ಕಾಲದಲ್ಲಿ ವಿಯೆಟ್ನಾಂ ಉತ್ತರ ಮತ್ತು ದಕ್ಷಿಣವಾಗಿ ಇಬ್ಭಾಗವಾಗಿತ್ತು. ಅದನ್ನು ಒಗ್ಗೂಡಿಸಿ ಒಂದೇ ದೇಶವನ್ನಾಗಿ ಮಾಡುವು ದಕ್ಕೆ ಹೊ ಚಿ ಮಿನ್ ಪ್ರಯತ್ನಿಸುತ್ತಿದ್ದರು. ಇದು ಆಂತರಿಕ ದಂಗೆಗೆ ಕಾರಣವಾಯಿತು. ಪರಿಣಾಮ ವಾಗಿ, ಉತ್ತರ ವಿಯೆಟ್ನಾಂ, ಲಾವೋಸ್, ಕಾಂಬೋಡಿಯಾ ಮತ್ತು ದಕ್ಷಿಣ ವಿಯೆಟ್ನಾಂ, ಅದರ ಮಿತ್ರ ರಾಷ್ಟ್ರಗಳ ನಡುವೆ ದೊಡ್ಡ ಮಟ್ಟದ ಸಂಘರ್ಷಕ್ಕೆ ಕಾರಣವಾಯಿತು.

ಉ‌ತ್ತರ ವಿಯೆಟ್ನಾಂಗೆ ರಷ್ಯಾ (ಅಂದಿನ ಸೋವಿಯತ್ ಒಕ್ಕೂಟ) ಮತ್ತು ಚೀನಾ ಬೆಂಬಲವಿತ್ತು. ದಕ್ಷಿಣ ವಿಯೆಟ್ನಾಂಗೆ ಅಮೆರಿಕ ಮತ್ತು ಇತರ ಕಮ್ಯುನಿ ವಿರೋಧಿ ರಾಷ್ಟ್ರಗಳ ಬೆಂಬಲವಿತ್ತು. ಇದು ‘ಎರಡನೆಯ ಇಂಡೋ ಚೈನಾ ಯುದ್ಧ’ ಎಂದು ಹೆಸರಾಯಿತು. ಆ ಕಾಲದಲ್ಲಿ ಅಮೆರಿಕ ಮತ್ತು ರಷ್ಯಾ ತಮ್ಮ ಪ್ರತಿಷ್ಠೆಗಾಗಿ ಇಪ್ಪತ್ತು ವರ್ಷಗಳ ಕಾಲ ವಿಯೆಟ್ನಾಂ, ಲಾವೋಸ್ ನಂಥ ದೇಶಗಳನ್ನು ಬಳಸಿಕೊಂಡವು.

1965ರ ನಂತರವಂತೂ ಅಮೆರಿಕ ನೇರವಾಗಿಯೇ ಈ ಯುದ್ಧದಲ್ಲಿ ಭಾಗವಹಿಸಿತ್ತು. ವಿಯೆಟ್ನಾಂ ನಲ್ಲಿ ಆರಂಭವಾದ ಈ ಹೋರಾಟ ಲಾವೋಸ್ ಮತ್ತು ಕಾಂಬೋಡಿಯಾ ದೇಶದ ಅಂತರ್ಯುದ್ಧ ಗಳಿಗೂ ವ್ಯಾಪಿಸಿತು.

ಆ ಕಾಲದಲ್ಲಿ ಲಾವೋಸ್‌ಗೆ ಅದರದ್ದೇ ಆದ ಸಮಸ್ಯೆಗಳಿದ್ದವು. ಆದರೆ ಉತ್ತರ ವಿಯೆಟ್ನಾಂ, ದಕ್ಷಿಣ ವಿಯೆಟ್ನಾಂಗೆ ಯುದ್ಧ ಸಾಮಗ್ರಿಗಳನ್ನು ಸಾಗಿಸಲು ಪಕ್ಕದ ದೇಶವಾದ ಲಾವೋಸ್ ಅನ್ನು ಬಳಸಿ ಕೊಂಡಿತು. ದೇಶದ ಗಡಿಯ ಒಳಗೆ ರಸ್ತೆಗಳು ನಿರ್ಮಾಣಗೊಂಡವು. ‘ಪೀಪಲ್ಸ ಆರ್ಮಿ ಆಫ್‌ ವಿಯೆಟ್ನಾಂ’ ಉತ್ತರ ಮತ್ತು ಅಗ್ನೇಯ ಲಾವೋಸ್ ನಲ್ಲಿ ಕಾರ್ಯನಿರ್ವಹಿಸುತ್ತಿತ್ತು.

1954ರಿಂದ ಉತ್ತರ ವಿಯೆಟ್ನಾಂ ಸೈನ್ಯವನ್ನು ಲಾವೋಸ್‌ನಿಂದ ಹೊರದಬ್ಬಲು ಸಾಕಷ್ಟು ಪ್ರಯತ್ನ ಗಳು ನಡೆದವು. ಆದರೆ ಯಾವುದೇ ಒಪ್ಪಂದವನ್ನಾಗಲಿ, ಸಂಧಾನವನ್ನಾಗಲಿ, ಮಾತುಕತೆ ಯನ್ನಾಗಲಿ ಪರಿಗಣಿಸದೆ ಉತ್ತರ ವಿಯೆಟ್ನಾಂ ತನ್ನ ಕೆಲಸವನ್ನು ಮುಂದುವರಿಸಿತ್ತು. ವಿಯೆಟ್ನಾಂ ಗಡಿಗೆ ಸಮಾನಾಂತರವಾಗಿ ಆಗ್ನೇಯ ಲಾವೋಸ್‌ನಿಂದ ದಕ್ಷಿಣದಲ್ಲಿರುವ ಹೊ ಚಿ ಮಿನ್‌ಗೆ (ಅಂದರೆ, ಅಂದಿನ ಸೈಗಾಂವ್‌ಗೆ) ಹೆದ್ದಾರಿಯನ್ನು ನಿರ್ಮಿಸಿತು.

ಈ ದಾರಿಯನ್ನು ಉತ್ತರ ವಿಯೆಟ್ನಾಂ ಪಡೆಗಳು ದಕ್ಷಿಣ ವಿಯೆಟ್ನಾಂಗೆ ಸಾಮಾನು ಸರಬರಾಜು ಮತ್ತು ಯುದ್ಧ ಸಾಮಗ್ರಿಗಳನ್ನು ಸಾಗಿಸಲು ಬಳಸಿಕೊಳ್ಳುತ್ತಿದ್ದವು. ಉತ್ತರ ವಿಯೆಟ್ನಾಂ ಲಾವೋಸ್‌ ನ ಉತ್ತರ ಭಾಗದಲ್ಲಿ ಗಣನೀಯ ಪ್ರಮಾಣದಲ್ಲಿ ಮಿಲಿಟರಿ ಪಡೆಯನ್ನು ಹೊಂದಿತ್ತು. ರಾಯಲ್ ಲಾವೋ ಸರಕಾರದ ಮೇಲೆ ಒತ್ತಡ ಹೇರಲು ಸ್ಥಳೀಯ ಕಮ್ಯುನಿ ದಂಗೆಯನ್ನು ಪ್ರಯೋಗಿಸುವ, ಪ್ರಾಯೋಜಿಸುವ ಮತ್ತು ಪ್ರೋತ್ಸಾಹಿಸುವ ಕೆಲಸವನ್ನು ಮಾಡುತ್ತಿತ್ತು.

ಉತ್ತರ ವಿಯೆಟ್ನಾಂನ ಈ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸುವ ಅಥವಾ ನಿಲ್ಲಿಸುವ ಪ್ರಯತ್ನವಾಗಿ ಅಮೆರಿಕದ ಗುಪ್ತಚರ ಸಂಸ್ಥೆ (ಸಿಐಎ) ಉತ್ತರ ಲಾವೋಸ್‌ನ ಜನರಿಗೆ ತರಬೇತಿ ನೀಡುತ್ತಿತ್ತು. ರಾಯಲ್ ಲಾವೋ ಸೇನಾಪಡೆಯ ನೇತೃತ್ವದಲ್ಲಿ ಸ್ಥಳೀಯ ಬುಡಕಟ್ಟು ಜನಾಂಗದ ಸುಮಾರು ಮೂವತ್ತು ಸಾವಿರ ಸೈನಿಕರ ಪಡೆ, ಏರ್ ಅಮೆರಿಕ, ರಾಯಲ್ ಲಾವೋ ಏರ್ ಫೋರ್ಸ್ ಸಹಾಯದೊಂದಿಗೆ, ಅಮೆರಿಕದ ರಾಯಭಾರಿ ಸೂಚಿಸಿದ ರಹಸ್ಯ ವಾಯು ಕಾರ್ಯಾಚರಣೆಯಿಂದ ವಿಯೆಟ್ನಾಂನ ಪೀಪಲ್ಸ ಆರ್ಮಿ ನ್ಯಾಷನಲ್ ಲಿಬರೇಶನ್ ಫ್ರಂಟ್ ಮತ್ತು ಮಿತರಾಷ್ಟ್ರಗಳ ವಿರುದ್ಧ ಹೋರಾಟ ನಡೆಸಿತ್ತು.

ಈ ನಡುವೆ ಉತ್ತರ ಲಾವೋಸ್‌ನ ರಾಜಮನೆತನದ ರಾಜಕುಮಾರನೊಬ್ಬ ವಿಯೆಟ್ನಾಂಗೆ ಹೋಗಿ ಹೊ ಚಿ ಮಿನ್‌ರ ಕಮ್ಯುನಿ ಪಕ್ಷವನ್ನು ಸೇರಿಕೊಂಡಿದ್ದ. ಕೆಲವು ಸೈನಿಕರನ್ನು ಕೂಡಿಕೊಂಡು ಆತ ಉತ್ತರ ಲಾವೋಸ್‌ನ ಒಂದು ಪ್ರದೇಶವನ್ನು ವಶಪಡಿಸಿಕೊಂಡಿದ್ದ. ಲಾವೋನ ಉಳಿದ ಭೂಮಿಯ ಒಡೆತನಕ್ಕೆ ಆತ ವಿಯೆಟ್ನಾಂ ಸೇನೆಯೊಂದಿಗೆ ಆಗಾಗ ರಾಯಲ್ ಲಾವೋ ಆರ್ಮಿಯ ಮೇಲೆ ಯುದ್ಧಕ್ಕೆ ಬರುತ್ತಿದ್ದ.

ಆತನ ಪ್ರಯತ್ನವೆಲ್ಲ ವಿಫಲವಾಯಿತು. ಒಮ್ಮೆಯಂತೂ ಉತ್ತರ ವಿಯೆಟ್ನಾಂ ಸರಕಾರ ಮೂವತ್ತ ರಿಂದ ನಲವತ್ತು ಸಾವಿರ ಸೈನಿಕರನ್ನು ಲಾವೋಸ್ ಒಳಗೆ ನುಸುಳಲು ನಿಯೋಜಿಸಿತ್ತು. ಲಾವೋ ಸೈನ್ಯ ಅವರಲ್ಲಿ ಬಹುತೇಕರನ್ನು ಬಂಧಿಸಿ ಇಟ್ಟಿತ್ತು. ಆದರೆ ಅವರೆಲ್ಲ ಒಂದೇ ಒಂದು ಗುಂಡನ್ನೂ ಹಾರಿಸದೆ ರಾತ್ರೋರಾತ್ರಿ ತಪ್ಪಿಸಿಕೊಂಡು ಹೋದರು.

ಲಾವೋ ಸೈನ್ಯ ರಾಜಕುಮಾರನನ್ನೂ ಬಂಧಿಸಿತ್ತು. ಅವನೂ ಸದ್ದಿಲ್ಲದೇ ಪರಾರಿಯಾಗಿದ್ದ. ಲಾವೋಸ್‌ ನ ಆಂತರಿಕ ಯುದ್ಧ ದಕ್ಷಿಣಕ್ಕೂ ಹರಡಿಕೊಂಡಿತ್ತು. ಸುಮಾರು ಆರು-ಏಳು ವರ್ಷಗಳ ಸೆಣಸಾಟದಿಂದ ಎರಡೂ ಕಡೆಯವರು ಹೈರಾಣಾಗಿದ್ದರು. ಎರಡೂ ಕಡೆಯವರು ರಾಜಿಯಾಗಿ ತಟಸ್ಥ ಸರಕಾರಕ್ಕೆ ಒಪ್ಪಿಗೆ ಸೂಚಿಸಿದರು. ಆದರೆ ಅದೂ ಕೆಲವು ತಿಂಗಳುಗಳ ಕಾಲವಷ್ಟೇ ನಡೆಯಿತು.

ತಟಸ್ಥರಲ್ಲಿಯೇ ಬಲ ತಟಸ್ಥ ಮತ್ತು ಎಡ ತಟಸ್ಥ ಎಂದು ಎರಡು ಪಂಗಡಗಳಾದವು. ಆ ಕಾಲದಲ್ಲಿ ಲಾವೋಸ್ ಸರಕಾರ ಮತ್ತು ಸೈನ್ಯ ಬಲಹೀನವಾಗಿತ್ತು. ಈ ಅವಕಾಶವನ್ನು ಉಪಯೋಗಿಸಿಕೊಂಡ ಕಮ್ಯುನಿಸ್ಟರು ಮತ್ತೆ ದಂಗೆ ಎದ್ದು ಲಾವೋಸ್ ಅನ್ನು ತಮ್ಮ ತೆಕ್ಕೆಗೆ ತೆಗೆದುಕೊಳ್ಳಲು ಪ್ರಯತ್ನಿಸಿ ದರು. ಲಾವೋಸ್‌ನ ಕೆಲವು ಪ್ರದೇಶಗಳಲ್ಲಿ ರಾಜ ಮನೆತನದ ಮತ್ತು ತಟಸ್ಥ ಪ್ರದೇಶಗಳ ಮೇಲೆ ದಾಳಿ ಮಾಡಿ ವಶಪಡಿಸಿಕೊಂಡರು.

ಅಲ್ಲಿಗೆ ಅಮೆರಿಕ ಕಮ್ಯುನಿ ಶಿಬಿರಗಳ ಮೇಲೆ ಬಾಂಬ್ ದಾಳಿ ಮಾಡಲು ನಿರ್ಧರಿಸಿತ್ತು. ಜತೆಗೆ ಅಗತ್ಯವಿದ್ದ ಶಸ್ತ್ರಾಸ್ತ್ರಗಳನ್ನೂ ಪೂರೈಸಿತು. 1960ರ ದಶಕದ ಮಧ್ಯದಲ್ಲಿ ವಿಯೆಟ್ನಾಂ ಕಮ್ಯು ನಿಸ್ಟರು ತಾವು ಲಾವೋಸ್‌ನಲ್ಲಿ ನಿರ್ಮಿಸಿದ ದಾರಿಯಿಂದ ಒಳಗೆ ನುಸುಳುವುದನ್ನು ಹೆಚ್ಚಿಸಿದರು. ಆಗ ಅಮೆರಿಕ ದಾರಿಯ ಒಂದು ಭಾಗದ ಮೇಲೆ ಬಾಂಬ್ ದಾಳಿ ಮಾಡಲು ನಿರ್ಧರಿಸಿ, ‘ಆಪರೇಷನ್ ಟೈಗರ್ ಹೌಂಡ್’ ಆರಂಭಿಸಿತು.

1967ರ ವೇಳೆಗೆ ವಿಯೆಟ್ನಾಂ ಸೇನೆ ಲಾವೋ ಸೈನ್ಯದ ಮೇಲೆ ಬಹು ವಿಭಾಗದಲ್ಲಿ ದಾಳಿಯನ್ನು ಆರಂಭಿಸಿತು. ಲಾವೋಸ್‌ನ ಸರಕಾರಿ ಪಡೆಗಳು ಕಣಿವೆಯಿಂದ ಹಿಂದೆ ಸರಿಯಲು ಆರಂಭಿಸಿದವು. ಲಾವೋಸ್ ಸರಕಾರಿ ಸೈನಿಕರಲ್ಲಿ ಹೆಚ್ಚಿನವರು ಬೆಟ್ಟ-ಗುಡ್ಡಗಳಲ್ಲಿ ಚದುರಿಹೋದರು. ಕೆಲವರು ಕೊಲ್ಲಲ್ಪಟ್ಟರು. ರಾಜ ಮನೆತನದವರೂ ಸೋಲು ಅನುಭವಿಸುತ್ತಿದ್ದರು. ಅವರ ಸೈನ್ಯವಂತೂ ಮುಂದೆ ಎಂದಿಗೂ ಚೇತರಿಸಿಕೊಳ್ಳಲೇ ಇಲ್ಲ.

ಸುಮಾರು ಒಂದು ವರ್ಷದವರೆಗೆ ಕಮ್ಯುನಿಸ್ಟರು ನಿಧಾನವಾಗಿ ಲಾವೋಸ್‌ನ ಉತ್ತರ ಭಾಗದಲ್ಲಿ ಮುನ್ನಡೆದು, ಲಾವೋಸ್ ಪಡೆಗಳನ್ನು ಸೋಲಿಸುತ್ತಿದ್ದರು. ಉತ್ತರ ವಿಯೆಟ್ನಾಂನಿಂದ ದಕ್ಷಿಣ ವಿಯೆಟ್ನಾಂಗೆ ನಿರ್ಮಿಸಿದ ದಾರಿಯಲ್ಲಿ ಎಂದಿಗಿಂತಲೂ ಹೆಚ್ಚು ಸೇನಾ ಪಡೆಗಳ ಚಲನ ಮತ್ತು ಶಸ್ತ್ರಾಸ್ತ್ರಗಳ ಸರಬರಾಜು ನಡೆಯುತ್ತಿತ್ತು. ಇದನ್ನು ತಡೆಯಲು ಅಮೆರಿಕ ‘ಆಪರೇಷನ್ ಕಮಾಂಡೋ ಹಂಟ್’ ಹೆಸರಿನಲ್ಲಿ ಹೊಸ ಕಾರ್ಯಾಚರಣೆಯನ್ನು ಆರಂಭಿಸಿ ಇನ್ನಷ್ಟು ಬಾಂಬ್ ಸುರಿಸಿತು.

ಈ ಕಾರ್ಯಾಚರಣೆ ಸುಮಾರು ನಾಲ್ಕು ವರ್ಷಗಳ ಕಾಲ ನಡೆಯಿತು. ಆದರೆ ಅಮೆರಿಕಕ್ಕೆ ಸ್ವಲ್ಪವೂ ಯಶಸ್ಸು ಸಿಗಲಿಲ್ಲ. 1973ರಲ್ಲಿ ‘ಪ್ಯಾರಿಸ್ ಶಾಂತಿ ಒಪ್ಪಂದ’ಕ್ಕೆ ಸಹಿ ಹಾಕಿ ಅಮೆರಿಕ ಲಾವೋಸ್ ನಿಂದ ಹೊರಬಂತು. ಒಪ್ಪಂದದ ಪ್ರಕಾರ ಉತ್ತರ ವಿಯೆಟ್ನಾಂ ತನ್ನ ಪಡೆಯನ್ನು ಹಿಂದಕ್ಕೆ ಸರಿಸುವ ಅಗತ್ಯವಿರಲಿಲ್ಲ. ಅಮೆರಿಕ ಹಿಂದೆ ಸರಿದ ಬೆನ್ನಲಾವೋಸ್‌ನಲ್ಲಿ ಅಧಿಕೃತವಾಗಿ ಕಮ್ಯು ನಿಸ್ಟ್‌ ಸರಕಾರ ಅಧಿಕಾರಕ್ಕೆ ಬಂತು. ಈ ಸಂದರ್ಭದಲ್ಲಿ ಸಾವಿರಾರು ಜನ ಪ್ರಾಣ ಕಳೆದುಕೊಂಡರು.

ಸಾವಿರಾರು ಜನ ಅಂಗಾಂಗ ಕಳೆದುಕೊಂಡರು. ಯುದ್ಧ ಅಂದಮೇಲೆ ಸಾವು-ನೋವು, ಯಾತನೆ-ವೇದನೆ ಎಲ್ಲ ಇದ್ದದ್ದೇ. ಶಸ್ತ್ರಾಸ್ತ್ರ ಹಿಡಿದು ಮಾಡಿದ ಯಾವ ಯುದ್ಧವೂ ಸಂತೋಷ ಕೊಡು ವಂಥದ್ದಲ್ಲ. ಯುದ್ಧದ ನೋವಿನ ನಡುವೆ ಯಾವ ಕಾರಣಕ್ಕಾಗಿ ಯುದ್ಧ ನಡೆಯಿತೋ ಅದು ಸಫಲ ವಾದರೆ ಅಷ್ಟರ ಮಟ್ಟಿಗೆ ಸಮಾಧಾನಪಟ್ಟುಕೊಳ್ಳಬಹುದು.

ಇಲ್ಲಿ ಲಾವೋಸ್‌ನ ಜನ ಪ್ರಾಣ ಕಳೆದುಕೊಂಡಿದ್ದು ಯಾವುದಕ್ಕಾಗಿ? ವಿಯೆಟ್ನಾಂನ ರಾಜನೀತಿ ಯಿಂದಾಗಿ, ಅಲ್ಲಿಯ ಜನರ ಮಹತ್ವಾಕಾಂಕ್ಷೆಯನ್ನು ತೃಪ್ತಿಪಡಿಸುವುದಕ್ಕಾಗಿ. ಉತ್ತರ ಮತ್ತು ದಕ್ಷಿಣ ವಿಯೆಟ್ನಾಂನಲ್ಲಿ ಯಾರೇ ಗೆದ್ದರೂ, ಯಾರೇ ಸೋತರೂ ಲಾವೋಸ್ ದೇಶದ ಮೇಲೆ ಹೇಳಿಕೊಳ್ಳು ವಂಥ ಯಾವ ಪರಿಣಾಮವೂ ಆಗುತ್ತಿರಲಿಲ್ಲ.

ದೇಶದ ಆಂತರಿಕ ಗಲಭೆಗಳನ್ನು ಯಾವ ದೇಶವಾದರೂ ಸಹಿಸಿಕೊಳ್ಳುತ್ತದೆ, ಸುಧಾರಿಸಿಕೊಳ್ಳುತ್ತದೆ. ಯಡವಟ್ಟಾಗುವುದು ಬೇರೆ ದೇಶಗಳು ಮೂಗು ತೂರಿಸಿದಾಗ. ವಿಯೆಟ್ನಾಂ ತನ್ನ ಸ್ವಾರ್ಥಕ್ಕಾಗಿ ಲಾವೋಸ್‌ನಲ್ಲಿ ರಸ್ತೆ ನಿರ್ಮಿಸದಿದ್ದಿದ್ದರೆ, ರಷ್ಯಾ, ಚೀನಾ ಅದರ ಬೆಂಬಲಕ್ಕೆ ನಿಲ್ಲದಿದ್ದಿದ್ದರೆ, ಅಮೆರಿಕ ಮಧ್ಯ ಪ್ರವೇಶಿಸದಿದ್ದಿದ್ದರೆ, ಎಲ್ಲಕ್ಕಿಂತ ಹೆಚ್ಚಾಗಿ, ಲಕ್ಷಗಟ್ಟಲೆ ಬಾಂಬ್ ಹಾಕದಿದ್ದಿದ್ದರೆ, ಲಾವೋಸ್‌ನ ಅಮಾಯಕರು ಸಾಯುತ್ತಿರಲಿಲ್ಲ.

ಇಂದಿನ ಪೀಳಿಗೆಯಷ್ಟೇ ಅಲ್ಲ, ಮುಂದಿನ ನಾಲ್ಕು ತಲೆಮಾರಿನವರೂ ಭಯದ ವಾತಾವರಣದಲ್ಲಿ, ಅನಿಶ್ಚಿತತೆಯಲ್ಲಿ ಬದುಕಬೇಕಾಗುತ್ತಿರಲಿಲ್ಲ. ಈ ಯುದ್ಧದ ಕೊನೆಗೆ ಉಳಿಯುವ ಪ್ರಶ್ನೆ ಒಂದೇ. ಅಷ್ಟೊಂದು ಬಾಂಬ್ ಸುರಿಸಿ ಇಲ್ಲಿ ಅಮೆರಿಕ ಸಾಧಿಸಿದ್ದಾದರೂ ಏನು? ಯಾವ ದೇಶದ ಸಹಾಯಕ್ಕೆ ಎಂದು ಹೇಳಿಕೊಂಡು ಬಂದು ನಿಂತಿತೋ ಆ ದೇಶವನ್ನು ಹಳ್ಳಕ್ಕೆ ತಳ್ಳಿದ್ದು ಬಿಟ್ಟರೆ ಮತ್ತೇನೂ ಇಲ್ಲ.

ಕೊನೆ ಪಕ್ಷ ತಾನು ಹಾಕಿದ, ಇನ್ನೂ ಸಿಡಿಯದ ಬಾಂಬ್‌ಗಳನ್ನು ಹುಡುಕಿ ನಿಷ್ಕ್ರಿಯಗೊಳಿಸುವು ದಕ್ಕಾದರೂ ಸಹಾಯ ಮಾಡಬಹುದಿತ್ತು. ಅದನ್ನೂ ಮಾಡುತ್ತಿಲ್ಲ. ಅಂತೂ ಯಾರದ್ದೋ ಮಹತ್ವಾಕಾಂಕ್ಷೆಗೆ, ಯಾರದ್ದೋ ಪ್ರತಿಷ್ಠೆಗೆ ಬಡಪಾಯಿ ಲಾವೋಸ್ ಬಲಿಪಶುವಾಗಿದ್ದಷ್ಟೇ ಬಂತು!