#ದೆಹಲಿರಿಸಲ್ಟ್​ ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಫ್ಯಾಷನ್‌ ಲೋಕ ಉದ್ಯೋಗ

Sandeep Balakrishna Column: ಜನಾಭಿಪ್ರಾಯ ತಿರುಚುವ ಪರಿಪಾಠಕ್ಕೆ ನಾಂದಿ ಹಾಡಿದ ಚುನಾವಣೆ

ಮತದಾರರಿಗೆ ತಾವು ಯಾವಾಗಲೂ ಲಭ್ಯವಿರುವಂತೆ ನೋಡಿಕೊಂಡಿದ್ದರು. ನಾರ್ತ್ ಬಾಂಬೆ ಕ್ಷೇತ್ರ ದಲ್ಲಿ ಮತದಾನ ನಡೆಯುವ ದಿನದವರೆಗೂ ಅವರು ವಿಶ್ರಾಂತಿ ತೆಗೆದುಕೊಳ್ಳಲಿಲ್ಲ. ಆದರೆ ಕೃಷ್ಣ ಮೆನನ್ ಮತ್ತು ನೆಹರುಗೆ ಅತಿದೊಡ್ಡ ತಲೆನೋವು ಕೃಪಲಾನಿ ಅಥವಾ ಅವರ ಜನಪ್ರಿಯತೆ ಯಾಗಿರ ಲಿಲ್ಲ. ಬದಲಿಗೆ ಅವರಿಬ್ಬರಿಗೂ ಪಕ್ಷದ ಒಳಗಿ ನಿಂದಲೇ ಸಮಸ್ಯೆ ಶುರುವಾಗಿತ್ತು

Sandeep Balakrishna Column: ಜನಾಭಿಪ್ರಾಯ ತಿರುಚುವ ಪರಿಪಾಠಕ್ಕೆ ನಾಂದಿ ಹಾಡಿದ ಚುನಾವಣೆ

ಅಂಕಣಕಾರ ಸಂದೀಪ್‌ ಬಾಲಕೃಷ್ಣ

Profile Ashok Nayak Jan 25, 2025 10:22 AM

ವಿಶ್ಲೇಷಣೆ

ಸಂದೀಪ್‌ ಬಾಲಕೃಷ್ಣ

ಕೃಪಲಾನಿಗೆ 75 ವರ್ಷವಾಗಿತ್ತು. ಆ ವಯಸ್ಸಿನಲ್ಲೂ ಉತ್ಸಾಹದಿಂದ ಪ್ರಚಾರ ನಡೆಸಿದರು. ತಮ್ಮ ಪ್ರಚಾರದ ರಣತಂತ್ರವನ್ನು ತಾವೇ ಹೆಣೆದಿದ್ದರು. ಮೈಮೇಲೆ ದೇವರು ಬಂದವರಂತೆ ಒಂದು ದಿನಕ್ಕೆ 10 ಪ್ರಚಾರ ರ‍್ಯಾಲಿಗಳಲ್ಲಿ ಭಾಷಣ ಮಾಡುತ್ತಿದ್ದರು.

ಮನೆಮನೆಗೆ ಹೋಗಿ ಮತ ಯಾಚಿಸಿದರು. ಮತದಾರರಿಗೆ ತಾವು ಯಾವಾಗಲೂ ಲಭ್ಯವಿರುವಂತೆ ನೋಡಿಕೊಂಡಿದ್ದರು. ನಾರ್ತ್ ಬಾಂಬೆ ಕ್ಷೇತ್ರದಲ್ಲಿ ಮತದಾನ ನಡೆಯುವ ದಿನದವರೆಗೂ ಅವರು ವಿಶ್ರಾಂತಿ ತೆಗೆದುಕೊಳ್ಳಲಿಲ್ಲ. ಆದರೆ ಕೃಷ್ಣ ಮೆನನ್ ಮತ್ತು ನೆಹರುಗೆ ಅತಿದೊಡ್ಡ ತಲೆನೋವು ಕೃಪಲಾನಿ ಅಥವಾ ಅವರ ಜನಪ್ರಿಯತೆಯಾಗಿರಲಿಲ್ಲ. ಬದಲಿಗೆ ಅವರಿಬ್ಬರಿಗೂ ಪಕ್ಷದ ಒಳಗಿ ನಿಂದಲೇ ಸಮಸ್ಯೆ ಶುರುವಾಗಿತ್ತು.

ಇದನ್ನೂ ಓದಿ: Roopa Gururaj Column: ತಾಯಿಗಾಗಿ ಮಿಡಿದ ಮಗನ ಹೃದಯ

1957ರ ಚುನಾವಣೆಯಲ್ಲಿ ಕೃಷ್ಣ ಮೆನನ್‌ರ ಗೆಲುವಿಗಾಗಿ ಕಾಂಗ್ರೆಸ್‌ನ ಎಲ್ಲಾ ನಾಯಕರೂ ಬೆವರು ಹರಿಸಿ ದುಡಿದಿದ್ದರು. ಅವರ ಅತಿಯಾದ ಎಡಪಂಥೀಯ ಧೋರಣೆಯ ಬಗ್ಗೆ ತಿಳಿದಿದ್ದರೂ ಅವರ ಪರ ಕೆಲಸ ಮಾಡಿದ್ದರು. ಆದರೆ, ಮುಂದಿನ ಚುನಾವಣೆಯಲ್ಲಿ ಯಾವಾಗ ನೆಹರು ಅವರು ಮತ್ತೆ ಮೆನನ್‌ರನ್ನೇ ಕಣಕ್ಕಿಳಿಸಿದರೋ ಆಗ ಪಕ್ಷದಲ್ಲಿ ಪ್ರತಿಭಟನೆಗಳು ಆರಂಭವಾದವು.

ಮಹಾರಾಷ್ಟ್ರದ ಕಾಂಗ್ರೆಸ್ ನಾಯಕರಾದ ಎಸ್.ಕೆ.ಪಾಟೀಲ್ ಮತ್ತು ಮೊರಾರ್ಜಿ ದೇಸಾಯಿಯಂಥ ವರು ಮೆನನ್ ವಿರುದ್ಧ ಬಹಿರಂಗವಾಗಿ ಮಾತನಾಡತೊಡಗಿದರು. ಅವರ ಕಮ್ಯುನಿಸ್ಟ್ ಪರ ಚಿಂತನೆ ಗಳು ದೇಶದ ಭವಿಷ್ಯಕ್ಕೆ ಒಳ್ಳೆಯದಲ್ಲ ಎಂದು ಹೇಳತೊಡಗಿದರು. ಎಂದಿನಂತೆ ನೆಹರು ಇದಕ್ಕೆಲ್ಲ ಹೆಚ್ಚು ತಲೆಕೆಡಿಸಿಕೊಳ್ಳಲಿಲ್ಲ.

ಆದರೆ, ಬಾಂಬೆ ಪ್ರದೇಶ ಯೂತ್ ಕಾಂಗ್ರೆಸ್‌ನ 25 ಸದಸ್ಯರು ಪಕ್ಷ ತೊರೆದಾಗ ಅವರಿಗೆ ಎಚ್ಚರ ವಾಯಿತು. ಅವರೆಲ್ಲರೂ ಕೃಪಲಾನಿಯವರ ಪಾಳಯಕ್ಕೆ ಸೇರಿಕೊಂಡಿದ್ದರು. ಸಿಟ್ಟಿಗೆದ್ದ ನೆಹರು ಬಾಂಬೆಗೆ ಧಾವಿಸಿದರು. ಶಿವಾಜಿ ಪಾಕ್ ನಲ್ಲಿ ನಡೆದ ಸಮಾವೇಶದಲ್ಲಿ ಆ 25 ಸದಸ್ಯರ ಹೆಸರು ಹೇಳಿ ‘ನೀವೆಲ್ಲ ನರಕಕ್ಕೆ ಹೋಗಿ’ ಎಂದು ವಾಚಾಮಗೋಚರವಾಗಿ ಬೈದರು. ನಂತರ ಆ ಸುದ್ದಿ ಪತ್ರಿಕೆ ಗಳಲ್ಲಿ ಪ್ರಕಟವಾಗಿ, ಖಾರವಾದ ಸಂಪಾದಕೀಯಗಳು ಕಾಣಿಸಿಕೊಂಡಾಗ ಕ್ಷಮೆ ಯಾಚಿಸಿ ದರು.

ತಮ್ಮ ಬೆಂಬಲಿಗ ರನ್ನು ಮತ್ತು ವೈಯಕ್ತಿಕ ಇಮೇಜನ್ನು ರಕ್ಷಿಸಿಕೊಳ್ಳಲು ನೆಹರು ಯಾವ ಮಟ್ಟಕ್ಕೆ ಬೇಕಾದರೂ ಇಳಿಯಬಲ್ಲರು ಎಂಬುದು ಆಗ ಮೊದಲ ಬಾರಿ ಬೆಳಕಿಗೆ ಬಂದಿತ್ತು. ಚುನಾವಣಾ ಪ್ರಚಾರವನ್ನು ದಾರಿ ತಪ್ಪಿಸಿ, ಸಾರ್ವಜನಿಕ ಅಭಿಪ್ರಾಯವನ್ನು ತಿರುಚುವ ಪರಿಪಾಠಕ್ಕೆ ಭಾರತದಲ್ಲಿ ನಾಂದಿ ಹಾಡಿದ ಮೊದಲ ಚುನಾವಣೆ ಅದಾಗಿತ್ತು.

ಕೃಪಲಾನಿಯವರ ಚುನಾವಣೆ ಪ್ರಚಾರ ಸಂಪೂರ್ಣವಾಗಿ ಕೃಷ್ಣ ಮೆನನ್‌ಗೆ ಕಮ್ಯುನಿಸ್ಟರ ಜತೆ ಇದ್ದ ಗೆಳೆತನವನ್ನು ಖಂಡಿಸುವುದಕ್ಕೆ ಮೀಸಲಾಗಿತ್ತು. ಕೃಷ್ಣ ಮೆನನ್ ಮಾವೋವಾದಿ ಚೀನಾದ ಏಜೆಂಟ್. ಹೀಗಾಗಿ ಭಾರತದ ಭದ್ರತೆಗೆ ಅವರು ಅಪಾಯಕಾರಿ ಎಂದು ಕೃಪಲಾನಿ ಭಾಷಣ ಮಾಡು ತ್ತಿದ್ದರು. ಅವರ ಘೋಷಣೆಗಳು ದೊಡ್ಡ ದೊಡ್ಡ ಪೋಸ್ಟರ್‌ಗಳಲ್ಲಿ ‘ಮೆನನ್ ಚೀನಾದ ಪ್ರತಿನಿಧಿ, ಭಾರತದ ಪ್ರತಿನಿಧಿ ಅಲ್ಲ’ ಎಂದು ದಪ್ಪ ಅಕ್ಷರಗಳಲ್ಲಿ ಮುದ್ರಿತವಾಗಿರುತ್ತಿದ್ದವು.

ಅವರ ಬೆನ್ನಿಗೆ ಇನ್ನಿಬ್ಬರು ಮಾಜಿ ಕಾಂಗ್ರೆಸಿಗರಾದ ಸಿ.ರಾಜಗೋಪಾಲಾಚಾರಿ ಹಾಗೂ ಜಯಪ್ರಕಾಶ್ ನಾರಾಯಣ್ ಇದ್ದರು. ಮತದಾನದ ಮುನ್ನಾದಿನ ರಾಜಾಜಿ ಸಾರ್ವಜನಿಕ ಕರೆಯೊಂದನ್ನು ನೀಡಿ, ‘ಸಾಕಷ್ಟು ಮಾತನಾಡಿದ್ದೇನೆ. ವಿ.ಕೆ.ಕೃಷ್ಣ ಮೆನನ್ ನಾರ್ತ್ ಬಾಂಬೆಯಲ್ಲಿ ಏಕೆ ಗೆಲ್ಲಬಾರದು ಎಂಬುದರ ಬಗ್ಗೆ ಬೇಕಾದಷ್ಟು ವಾದಗಳನ್ನು ಮಂಡಿಸಿದ್ದೇನೆ. ಈಗ ಮತ್ತೊಮ್ಮೆ ಎಲ್ಲಾ ದೇಶಭಕ್ತ ಮತದಾರರಲ್ಲಿ ಮನವಿ ಮಾಡಿಕೊಳ್ಳುತ್ತಿದ್ದೇನೆ.

ಅನಗತ್ಯ ವಿಚಾರಗಳಿಗೆ ಮಾರುಹೋಗಬೇಡಿ. ಕೃಷ್ಣ ಮೆನನ್‌ರನ್ನು ಗೆಲ್ಲಿಸದಿರಲು ಮತ್ತು ತನ್ಮೂಲಕ ದೇಶದ ಭದ್ರತೆಯನ್ನು ರಕ್ಷಿಸಿಕೊಳ್ಳಲು ಸಾಕಷ್ಟು ಕಾರಣಗಳಿವೆ’ ಎಂದು ಹೇಳಿದರು. ಆದರೆ ಅದಕ್ಕೂ ಮುನ್ನ ನಡೆದ ಪ್ರಚಾರ ರ‍್ಯಾಲಿಗಳಲ್ಲಿ ಜಯಪ್ರಕಾಶ್ ನಾರಾಯಣ್ ಬಹಳ ರೋಷಾವೇಶ ದಿಂದ ಮಾತನಾಡಿದ್ದರು. 1962ರ ಫೆಬ್ರವರಿ 12ರಂದು ಅವರು ಮಾಡಿದ ಭಾಷಣದಲ್ಲಿ, ‘ಮೆನನ್ ಕಮ್ಯುನಿಸ್ಟ್ ಪಾರ್ಟಿಯ ಕೈಗೊಂಬೆಯಾಗಿದ್ದಾರೆ.

ಕೇಂದ್ರ ಸರಕಾರ ಮತ್ತು ಕಾಂಗ್ರೆಸ್ ಪಕ್ಷದಲ್ಲಿ ತನ್ನ ಬೇಳೆ ಬೇಯಿಸಿಕೊಳ್ಳಲು ಕಮ್ಯುನಿಸ್ಟ್ ಪಕ್ಷವು ಮೆನನ್‌ರನ್ನು ಬಳಸಿಕೊಳ್ಳುತ್ತಿದೆ. ಇದು ಮೆನನ್‌ಗೂ ತಿಳಿದಿದೆ. ಅವರು ಗೆದ್ದರೆ ಕಮ್ಯುನಿಸ್ಟ್ ಪಕ್ಷವೇ ಗೆದ್ದಂತೆ. ಹೀಗಾಗಿ ಇದು ಕೇವಲ ಒಬ್ಬ ವ್ಯಕ್ತಿಯ ಸೋಲು ಗೆಲುವಿನ ಪ್ರಶ್ನೆಯಲ್ಲ. ಅಥವಾ ಇದು ಕೇವಲ ಪ್ರಧಾನ ಮಂತ್ರಿಗೆ ಸಂಬಂಧಿಸಿದ ವಿಷಯವೂ ಅಲ್ಲ. ಇದು ಇಡೀ ದೇಶದ ಭವಿಷ್ಯದ ಪ್ರಶ್ನೆ. ದೇಶದ ಪ್ರಜಾಪ್ರಭುತ್ವ ಮತ್ತು ನಮ್ಮ ಆಧ್ಯಾತ್ಮಿಕ ಮೌಲ್ಯಗಳು ಇಲ್ಲಿ ಪಣಕ್ಕಿವೆ’ ಎಂದು ಹೇಳಿದ್ದರು.

ಇಂಥ ವಾಗ್ದಾಳಿಗಳು ನೆಹರು ಅವರನ್ನು ಕಂಗಾಲು ಮಾಡಿದವು. ಅವರು ನಾರ್ತ್ ಬಾಂಬೆಯಲ್ಲಿ ಹೆಚ್ಚೆಚ್ಚು ಪ್ರಚಾರ ಮಾಡತೊಡಗಿದರು. ಎಲ್ಲಿಂದ ಸಣ್ಣದೊಂದು ಬೆಂಬಲ ಸಿಕ್ಕರೂ ಬಾಚಿ ಸ್ವೀಕರಿಸಿದರು. ಅವರಿಗಿದ್ದ ಮೂರು ಬೆಂಬಲದ ಮೂಲವೆಂದರೆ ಕಮ್ಯುನಿಸ್ಟ್ ಪಕ್ಷ, ಬಾಲಿವುಡ್ ಮತ್ತು ಬ್ಲಿಟ್ಜ್ ಎಂಬ ಟಾಬ್ಲಾಯ್ಡ್ ಸಿನಿಮಾ ಪತ್ರಿಕೆ. ಅದು ಕಾಂಗ್ರೆಸ್‌ನ ಐದನೇ ಆಧಾರ ಸ್ತಂಭದಂತೆ ಕೆಲಸ ಮಾಡುತ್ತಿತ್ತು.

ನಾರ್ತ್ ಬಾಂಬೆಯಲ್ಲಿ ಕಾಂಗ್ರೆಸ್ ಪಕ್ಷದ ಚುನಾವಣಾ ಪ್ರಚಾರವನ್ನು ಸಿಪಿಐ ಹೇಗೆ ಕಬಳಿಸಿ ಕೊಂಡಿತ್ತು ಎಂಬ ಬಗ್ಗೆ ಕೆಲ ಕಾಂಗ್ರೆಸಿಗರು ಎಸ್.ಕೆ.ಪಾಟೀಲ್, ಬಿ.ಎಂ.ಯಾಗ್ನಿಕ್ (ಬಾಂಬೆ ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ) ಹಾಗೂ ಮುಖ್ಯಮಂತ್ರಿ ವೈ.ಬಿ.ಚೌಹಾಣ್‌ರಿಗೆ ಬರೆದ ಬಹಿರಂಗ ಪತ್ರವೇ ಸಾಕ್ಷಿ. ‘ಇತ್ತೀಚೆಗೆ ಕಮ್ಯುನಿಸ್ಟರು ನಾರ್ತ್ ಬಾಂಬೆ ಕ್ಷೇತ್ರದಲ್ಲಿ ಕೇವಲ ಕಾಂಗ್ರೆಸ್ ಪಕ್ಷದ ಚುನಾವಣಾ ಪ್ರಚಾರವನ್ನು ಮಾತ್ರ ಹೈಜಾಕ್ ಮಾಡಿಕೊಂಡಿಲ್ಲ, ಅದರ ಜತೆಗೆ ಕಾಂಗ್ರೆಸ್ ಪಕ್ಷದ ಕಚೇರಿಗಳನ್ನೂ ಆಕ್ರಮಿಸಿಕೊಂಡಿದ್ದಾರೆ.

ಇದನ್ನೆಲ್ಲ ನೋಡಿ ನಾವು ಅಸಮಾಧಾನಗೊಂಡಿದ್ದೇವೆ’ ಎಂದು ಅದರಲ್ಲಿ ಬರೆಯಲಾಗಿತ್ತು. ಕೊನೆಗೆ ಆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಸಾಕಷ್ಟು ಕಾರ್ಯಕರ್ತರು ಕೃಷ್ಣ ಮೆನನ್‌ರನ್ನು ಸೋಲಿಸಲು ಬಹಿರಂಗವಾಗಿಯೇ ಕೆಲಸ ಮಾಡಿದ್ದರು. ಇದಕ್ಕೆ ಪ್ರತಿಯಾಗಿ ಬಾಲಿವುಡ್‌ನ ಕೆಲವು ಖ್ಯಾತನಾಮರು ಬ್ಲಿಟ್ಜ್ ಪತ್ರಿಕೆಗೆ 1962ರ ಫೆಬ್ರವರಿ 24ರಂದು ಬಹಿರಂಗ ಪತ್ರ ಬರೆದು, ‘ಕೃಷ್ಣ ಮೆನನ್ ವಿರುದ್ಧ ನಡೆಯುತ್ತಿರುವ ಸಂಚು ನಮ್ಮ ಪ್ರೀತಿಯ ಪ್ರಧಾನಿಯ ವಿರುದ್ಧ ನಡೆಯುತ್ತಿರುವ ಸಂಚಾಗಿದೆ.

ಅವರು ಈ ದೇಶಕ್ಕೆ ನೀಡುತ್ತಿರುವ ಕೊಡುಗೆಗಳನ್ನು ಮರೆಮಾಚಲು ಮತ್ತು ಅವರ ಅದ್ಭುತ ನಾಯ ಕತ್ವದಿಂದ ಈ ದೇಶವನ್ನು ವಂಚಿತಗೊಳಿಸಲು ಪ್ರಯತ್ನಗಳು ನಡೆಯುತ್ತಿವೆ’ ಎಂದು ದೂರಿದ್ದರು. ಅದಕ್ಕೆ ರಾಜ್ ಕಪೂರ್, ದಿಲೀಪ್ ಕುಮಾರ್, ಮೆಹಬೂಬ್ ಖಾನ್, ಬಿಮಲ್ ರಾಯ್, ದೇವಾನಂದ್, ರಾಜೇಂದ್ರ ಕುಮಾರ್, ಖ್ವಾಜಾ ಅಹಮದ್ ಅಬ್ಬಾಸ್, ಬಿ.ಆರ್.ಚೋಪ್ರಾ ಮತ್ತು ಬಾಲರಾಜ್ ಸಾಹ್ನಿ ಸಹಿ ಮಾಡಿದ್ದರು. ಆ ಪತ್ರಕ್ಕೆ ಜಯಪ್ರಕಾಶ್ ನಾರಾಯಣ್ ಅಷ್ಟೇ ತೀಕ್ಷ್ಣವಾಗಿ ಪ್ರತಿಕ್ರಿಯಿಸಿ, ನೇರ ವಾಗಿ ನೆಹರುಗೇ ಬಾಣ ಬಿಟ್ಟರು.

‘ಕೊನೆಗೆ ಪ್ರಧಾನ ಮಂತ್ರಿ ಕೂಡ ವಿಷಯಾತ್ಮಕ ವಾದ ಮಂಡನೆಯನ್ನು ಕೈಬಿಟ್ಟು, ಕೆಸರೆರಚಾಟಕ್ಕೆ ಇಳಿದಿದ್ದಾರೆ. ಅವರ ಪಾಳಯ ಎಷ್ಟು ದುರ್ಬಲಗೊಂಡಿದೆ ಎಂಬುದಕ್ಕೆ ಇದು ಸಾಕ್ಷಿ. ಮೆನನ್ ಗೆದ್ದರೆ ಅದು ಕಮ್ಯುನಿಸ್ಟ್ ಪಕ್ಷದ ಗೆಲುವು ಎಂಬುದನ್ನು ಇದು ಎತ್ತಿ ತೋರಿಸುತ್ತದೆ. ಮೆನನ್ ಗೆದ್ದರೆ ಕಾಂಗ್ರೆಸ್ ಪಕ್ಷವೆಂಬ ಆನೆಗೆ ಕಮ್ಯುನಿಸ್ಟ್ ಪಕ್ಷವೇ ಮಾವುತನಾಗುತ್ತದೆ ಎಂಬುದಕ್ಕೆ ಕಾಂಗ್ರೆಸಿಗರ ನಡೆಯೇ ನಿದರ್ಶನ’ ಎಂದು ತಿರುಗೇಟು ನೀಡಿದ್ದರು. ಜಯಪ್ರಕಾಶ್ ನಾರಾಯಣ್ ನಿಜವಾದ ಭವಿಷ್ಯವನ್ನೇ ನುಡಿದಿದ್ದರು.

ಕೃಪಲಾನಿ ಮತ್ತು ಜೆಪಿಯ ಆರೋಪಗಳಿಗೆ ಉತ್ತರ ನೀಡಲು ಸಾಧ್ಯವಾಗದೆ ನೆಹರು ಬಹಿರಂಗವಾಗಿ ದ್ವೇಷ ಸಾಧಿಸಲು ತೊಡಗಿದರು. ‘ಅವರು ಎಲ್ಲಿ ನಿಂತಿದ್ದಾರೋ ನನಗೆ ಗೊತ್ತಿಲ್ಲ. ಮೊದಲು ಅವರು ನನ್ನ ಕಡೆ ಇದ್ದಾರೋ ಅಥವಾ ಇನ್ನೊಂದು ಕಡೆ ಇದ್ದಾರೋ ಅಥವಾ ರಾಜಕೀಯದಲ್ಲಿದ್ದಾರೋ ಅಥವಾ ಹೊರಗಿದ್ದಾರೋ ಎಂಬುದನ್ನು ಸ್ಪಷ್ಟಪಡಿಸಲಿ’ ಎಂದು ಜೆಪಿ ವಿರುದ್ಧ ನೇರವಾಗಿ ವಾಗ್ದಾಳಿ ನಡೆಸಿದರು.

ತಮ್ಮ ವಿರೋಧಿ ಪಾಳಯದಲ್ಲಿ ಸಿಐಎ ಕೈಯಾಡಿಸುತ್ತಿದೆ ಎಂದು ನೆಹರು ಆರೋಪಿಸಿದರು. ಅದರ ಜತೆಗೇ, ಕೃಪಲಾನಿಯನ್ನು ಬೆಂಬಲಿಸುತ್ತಿದ್ದ ಬಾಂಬೆಯ ಶ್ರೀಮಂತರಿಗೆ ಹಾಗೂ ದೊಡ್ಡ ದೊಡ್ಡ ದಿನಪತ್ರಿಕೆಗಳ ಮಾಲೀಕರಿಗೆ ಎಚ್ಚರಿಕೆಗಳನ್ನು ನೀಡಿದರು. ಅವರ ಎಚ್ಚರಿಕೆಗಳು ಇಂಡಿಯನ್ ಎಕ್ಸ್‌ಪ್ರೆಸ್ ಮತ್ತು ಟೈಮ್ಸ್ ಆಫ್ ಇಂಡಿಯಾದ ಮಾಲೀಕರನ್ನು ಗುರಿಯಾಗಿಸಿಕೊಂಡಿದ್ದವು. ಉಪ ಗೃಹ ಸಚಿವೆಯಾಗಿದ್ದ ವೈಲೆಟ್ ಆಳ್ವಾ (ಮಾರ್ಗರೆಟ್ ಆಳ್ವಾರ ಅ್ತೆ) ಅವರು ಬಾಂಬೆಯಲ್ಲಿರುವ ಇಂಡಿಯನ್ ಎಕ್ಸ್‌ಪ್ರೆಸ್ ಕಚೇರಿಗೆ ಬೆಂಕಿ ಹಚ್ಚುವಂತೆ ಕರೆ ನೀಡಿದ್ದರು ಎಂದು ವರದಿಯಾಗಿತ್ತು.‌

ಮತದಾನದ ದಿನ ನಾರ್ತ್ ಬಾಂಬೆಯಲ್ಲಿದ್ದ ಒಟ್ಟು 7.5 ಲಕ್ಷ ಮತದಾರರಲ್ಲಿ ಶೇಕಡಾ ಅರವತ್ತ ರಷ್ಟು ಜನರು ಮತ ಚಲಾಯಿಸಿದರು. ವಿ.ಕೆ.ಕೃಷ್ಣ ಮೆನನ್ ಭಾರಿ ಬಹುಮತದೊಂದಿಗೆ ಜಯ ಸಾಧಿಸಿದರು. ಕೃಪಲಾನಿಗೆ ಬಂದ ಮತಗಳ ದುಪ್ಪಟ್ಟು ಮತ ಮೆನನ್‌ಗೆ ಬಂದಿತ್ತು. ಆ ಚುನಾವಣೆಯ ಅದ್ಭುತ ವಿಶ್ಲೇಷಣೆಯನ್ನು ನಾರ್ಮನ್ ಡಿ. ಪಾಲ್ಮರ್ (ಪೆಸಿಫಿಕ್ ಅಫರ್ಸ್, ಸಂಪುಟ 36, ನಂ.2, ಸಮ್ಮರ್ 1963) ಮಾಡಿದ್ದರು. ಮೆನನ್ ಏಕೆ ಗೆದ್ದರು ಎಂಬುದನ್ನು ಬರೆಯುತ್ತಾ ಅವರು ಕೊನೆಗೆ ಈ ಗೆಲುವು ನಿಜವಾಗಿಯೂ ನೆಹರು ಅವರ ಗೆಲುವು ಎಂದು ಹೇಳಿದ್ದರು.

ಆದರೆ ಆ ಚುನಾವಣೆಯಲ್ಲಿ ಅತಿಹೆಚ್ಚು ಗಮನ ಸೆಳೆದಿದ್ದು ಕೃಪಲಾನಿಯವರ ಪ್ರಚಾರದ ವೈಖರಿ. ಅದು ನೆಹರು ಮತ್ತು ಅವರ ಪಾಳಯವನ್ನು ಯಾವ ಪರಿ ನಡುಗಿಸಿತ್ತು ಅಂದರೆ, ಕೊನೆಗೆ ಖುದ್ದು ನೆಹರು ಅವರೇ ಕೀಳು ರಾಜಕಾರಣದಲ್ಲಿ ತೊಡಗಿದ್ದರು. ಇದನ್ನು ರಾಜಾಜಿಯವರು ಮೊದಲೇ ಊಹಿಸಿದ್ದರು. ‘ನಾವು ಗೆಲ್ಲಲಿ ಅಥವಾ ಸೋಲಲಿ, ಇಂಥ ರಾಜಕಾರಣವನ್ನು ವಿರೋಧಿಸುವುದು ಕೂಡ ಮೌಲಿಕವಾದ ನಡೆಯೇ ಆಗುತ್ತದೆ’ ಎಂದು ಪ್ರಚಾರ ಭಾಷಣದಲ್ಲಿ ಹೇಳಿದ್ದರು.

1962ರ ಮಾರ್ಚ್ 9ರ ಟೈಮ್ ನಿಯತಕಾಲಿಕೆಯಲ್ಲಿ ಇದರ ಬಗ್ಗೆ ಪ್ರಕಟವಾದ ವರದಿ ಹೀಗೆ ಹೇಳು ತ್ತದೆ: ‘ಮೆನನ್ ರ ಗೆಲುವು ಕಾಂಗ್ರೆಸ್ ಪಕ್ಷದೊಳಗಿರುವ ಹಾಗೂ ಸರಕಾರದಲ್ಲಿರುವ ಎಡಪಂಥೀಯ ಶಕ್ತಿಗಳಿಗೆ ಇನ್ನಷ್ಟು ಬಲ ತುಂಬಿದೆ. ಅವು ಮೊದಲಿಗಿಂತ ಹೆಚ್ಚು ಪ್ರಬಲವಾಗಿವೆ. ನೆಹರು ಅವರ ರಾಜಕಾರಣದ ಕೊನೆಯ ವರ್ಷಗಳಲ್ಲಿ ಅವರ ನಿರ್ಧಾರಗಳು ಮತ್ತು ನೀತಿಗಳನ್ನು ಎಡಪಂಥೀಯ ಶಕ್ತಿಗಳು ಪ್ರಭಾವಿಸತೊಡಗಿವೆ. ನೆಹರು ತಮ್ಮ ಉತ್ತರಾಧಿಕಾರವನ್ನು ಬಿಟ್ಟುಕೊಟ್ಟು ತೆರೆಯ ಮರೆಗೆ ಸರಿದಾಗ ಕಾಂಗ್ರೆಸ್ ಮತ್ತು ಸರಕಾರದ ನಾಯಕತ್ವವನ್ನು ಎಡಪಂಥೀಯರು ವಹಿಸಿಕೊಳ್ಳುವುದಕ್ಕೆ ದಾರಿ ಮಾಡಿಕೊಟ್ಟಂತಾಗಿದೆ’.

ಕೃಪಲಾನಿ ಭವಿಷ್ಯ ನುಡಿದಿದ್ದಂತೆ ಮೆನನ್‌ರ ಗೆಲುವಿನ ಅಂತಿಮ ಪರಿಣಾಮ ಭಾರತದ ಸೇನೆಯ ಸೋಲಿನಲ್ಲಿ ಪರ್ಯವಸಾನಗೊಂಡಿತು. ಆ ವರ್ಷ ನಡೆದ ಯುದ್ಧದಲ್ಲಿ ಚೀನಾದ ಎದುರು ಭಾರತ ಸೋತಿತು.

(ಲೇಖಕರು ಹಿರಿಯ ಪತ್ರಕರ್ತರು)