Dr Sadhanashree Column: ಆರೋಗ್ಯದಲ್ಲಿ ವೈಜ್ಞಾನಿಕತೆ ಎಂದರೆ- ವೈಯಕ್ತಿಕತೆ !
ಇಂದಿನ ಹೆಲ್ತ್ ಇನ್ ಫ್ಲ್ಯೂಯೆನ್ಸರ್‌ಗಳಿಂದ ಕೇಳಲಿಕ್ಕೆ ಸಿಗುವ ಸಾಮಾನ್ಯ ಸಲಹೆಗಳು: ದಿನಕ್ಕೆ ೪-೫ ಲೀಟರ್ ನೀರು ಕುಡಿಯಿರಿ, ಪ್ರತಿದಿನ 10000 ಹೆಜ್ಜೆಗಳು ನಡೆಯಿರಿ, ದಿನವೂ ಆಪಲ್ ಸೈಡರ್ ವಿನೆಗರ್ ಸೇವಿಸಿ, ಹಸಿ ಮೊಳಕೆಯ ನಿತ್ಯಸೇವನೆ ಇರಲಿ, ಆಹಾರದಲ್ಲಿ ಹೆಚ್ಚಾಗಿ ಪ್ರೋಟೀನ್ ಇರಲಿ ಇತ್ಯಾದಿ- ಇವೆಲ್ಲವೂ ವೈಜ್ಞಾನಿಕ ಎನಿಸಿದರೂ, ಪ್ರತಿಯೊಬ್ಬ ರಿಗೂ ಸೂಕ್ತ ಎನ್ನಲಾಗುವುದಿಲ್ಲ.
-
ಸ್ವಾಸ್ಥ್ಯವೆಂಬ ಸ್ವಾತಂತ್ರ್ಯ
ಮೈಸೂರು ಮೂಲದ 56 ವರ್ಷದ ರಂಗಮ್ಮ (ಹೆಸರು ಬದಲಿಸಲಾಗಿದೆ) ಚೆನ್ನಾಗಿ ಚೇತರಿಸಿಕೊಂಡಿದ್ದ ಮಧುಮೇಹ ರೋಗಿ. ಒಂದು ದಿನ ಫೇಸ್‌ಬುಕ್‌ನಲ್ಲಿ ವೈರಲ್ ಆಗಿದ್ದ ವಿಡಿಯೋದಲ್ಲಿ- “ಪ್ರತಿದಿನ ಖಾಲಿ ಹೊಟ್ಟೆಯಲ್ಲಿ ಈ ಒಂದು ಆಯುರ್ವೇದದ ಮನೆ ಮದ್ದು ತೆಗೆದುಕೊಂಡರೆ ಮಧುಮೇಹ ಶಾಶ್ವತವಾಗಿ ಗುಣವಾಗುತ್ತದೆ!" ಎಂಬ ಘೋಷಣೆ ಕಂಡಿತು.
ವಿಡಿಯೋದಲ್ಲಿದ್ದವರು ಒಬ್ಬ ಬಿಳಿ ಕೋಟ್ ಧರಿಸಿದ ವ್ಯಕ್ತಿ. ಅವರ ಮಾತಿನಲ್ಲಿ ‘ಅಧ್ಯ ಯನ’, ‘ಸಂಶೋಧನೆ’ ಎಂಬ ಪದಗಳು ಬಹಳ ವಿಶ್ವಾಸಾರ್ಹವಾಗಿ ಕಾಣಿಸಿದ್ದು, ರಂಗಮ್ಮ ಅದನ್ನು ನಂಬಿ ಎರಡು ತಿಂಗಳು ಬಿಡದೆ ಪ್ರತಿದಿನವೂ ಆ ಮಿಶ್ರಣವನ್ನು (ಬೇವು-ಕರೇಲ-ಕರಿಬೇವು-ಮೇಥಿ ಇತ್ಯಾದಿ ಪುಡಿ) ಸೇವಿಸಲು ಆರಂಭಿಸಿದರು.
ಆದರೆ ಕೆಲವೇ ವಾರಗಳಲ್ಲಿ ಪರಿಸ್ಥಿತಿ ಬದಲಾಗತೊಡಗಿತು. ಪರೀಕ್ಷಿಸಿದಾಗ ಬ್ಲಡ್ ಶುಗರ್ ಸ್ವಲ್ಪ ಇಳಿದಿದ್ದರೂ, ಕೀಲುಗಳಲ್ಲಿ ತೀವ್ರ ನೋವು, ಸ್ನಾಯುಗಳಲ್ಲಿ ಅತಿಯಾದ ಬಿಗಿತ, ನಿದ್ದೆಯ ವ್ಯತ್ಯಾಸ, ಹೊಟ್ಟೆ ಉಬ್ಬರ, ಮಲಬದ್ಧತೆ, ದಿನವಿಡೀ ಶಕ್ತಿಯಿಲ್ಲದ ಸ್ಥಿತಿ- ಇವೆಲ್ಲವೂ ಒಂದರ ಹಿಂದೆ ಒಂದರಂತೆ ಎದುರಾದವು. ಅಂತಿಮವಾಗಿ ಆಕೆ ವೈದ್ಯರನ್ನು ಭೇಟಿ ಮಾಡಬೇಕಾಯಿತು.
ಇದನ್ನೂ ಓದಿ: Dr Sadhanashree Column: ಆರೋಗ್ಯವನ್ನು ಗರಿಷ್ಠಗೊಳಿಸುವ ಕಾಲವಿದು
ಕಾರಣ? ಅವಳ ದೇಹಪ್ರಕೃತಿ ಮತ್ತು ಜೀರ್ಣಕ್ರಿಯೆಗೆ ಸರಿ ಹೊಂದದ ಪದಾರ್ಥಗಳನ್ನು ನಿರಂತರವಾಗಿ ಕ್ರಮವಿಲ್ಲದೆ ಸೇವಿಸಿದ ಕಾರಣ ದೇಹದಲ್ಲಿ ಅತಿಯಾದ ದೋಷಗಳ ಅಸಮ ತೋಲನೆ. ಇಡೀ ವೃತ್ತಾಂತವನ್ನು ಆಲಿಸಿದ ವೈದ್ಯರು ಹೇಳಿದ್ದು ಒಂದೇ ಮಾತು- “ನಮ್ಮ ದೇಹದ ಅಗತ್ಯಗಳನ್ನು ತಿಳಿಯದೇ, ಸಾಮಾಜಿಕ ಮಾಧ್ಯಮದಲ್ಲಿ ಕಂಡ ಸಲಹೆಗಳನ್ನು ವಿವೇಚನೆಯಿಲ್ಲದೆ ಅನುಸರಿಸಿದ ಪರಿಣಾಮ ಇದು".
ಇದು ರಂಗಮ್ಮನ ಕತೆ ಮಾತ್ರವಲ್ಲ; ಇಂದಿನ ಅನೇಕರು ಎದುರಿಸುತ್ತಿರುವ ವಾಸ್ತವ. ರಂಗಮ್ಮನ ಅನುಭವವು ನಮಗೆ ಕಲಿಸುವ ಮಹತ್ವದ ಪಾಠವೇನೆಂದರೆ- ಯುಟ್ಯೂಬ, ಫೇಸ್‌ಬುಕ್ ಅಥವಾ ವಾಟ್ಸಾಪ್‌ನಲ್ಲಿ ಹರಿಯುವ ಸಾಮಾನ್ಯ ಆರೋಗ್ಯ ಸಲಹೆಗಳು ಎಲ್ಲರಿಗೂ ಸಾಮಾನ್ಯವಲ್ಲ.
ಇಂದಿನ ಹೆಲ್ತ್ ಇನ್ ಫ್ಲ್ಯೂಯೆನ್ಸರ್‌ಗಳಿಂದ ಕೇಳಲಿಕ್ಕೆ ಸಿಗುವ ಸಾಮಾನ್ಯ ಸಲಹೆಗಳು: ದಿನಕ್ಕೆ ೪-೫ ಲೀಟರ್ ನೀರು ಕುಡಿಯಿರಿ, ಪ್ರತಿದಿನ 10000 ಹೆಜ್ಜೆಗಳು ನಡೆಯಿರಿ, ದಿನವೂ ಆಪಲ್ ಸೈಡರ್ ವಿನೆಗರ್ ಸೇವಿಸಿ, ಹಸಿ ಮೊಳಕೆಯ ನಿತ್ಯಸೇವನೆ ಇರಲಿ, ಆಹಾರದಲ್ಲಿ ಹೆಚ್ಚಾಗಿ ಪ್ರೋಟೀನ್ ಇರಲಿ ಇತ್ಯಾದಿ- ಇವೆಲ್ಲವೂ ವೈಜ್ಞಾನಿಕ ಎನಿಸಿದರೂ, ಪ್ರತಿಯೊಬ್ಬ ರಿಗೂ ಸೂಕ್ತ ಎನ್ನಲಾಗುವುದಿಲ್ಲ.
ಪ್ರತಿಯೊಬ್ಬ ವ್ಯಕ್ತಿಯ ದೇಹಸ್ಥಿತಿಯೂ - ಅವನ ಜೀವನಶೈಲಿ, ಆಹಾರ ಅಭ್ಯಾಸ, ಕೆಲಸದ ಒತ್ತಡ, ವಾತಾವರಣ, ಜೀರ್ಣಕ್ರಿಯೆ, ವಯಸ್ಸು, ಚಟುವಟಿಕೆಗಳ ಆಧಾರದ ಮೇಲೆ ಸಂಪೂರ್ಣ ವಿಭಿನ್ನ. ಇಂದಿನ ಸಂಶೋಧನೆಗಳಲ್ಲಿ ಕಾಣೆಯಾಗಿರುವ ಪ್ರಮುಖ ಅಂಶ- ‘ವೈಯಕ್ತಿಕತೆ’.
ಲಕ್ಷಾಂತರ ರುಪಾಯಿ ವ್ಯಯಿಸಿ ಮಾಡಿದ ಅಧ್ಯಯನದಲ್ಲಿ ಭಾಗವಹಿಸಿದ ವ್ಯಕ್ತಿಯಂತೆ ನೀವು ಇರಲು ಸಾಧ್ಯವೇ? ಅವನ ಒತ್ತಡ, ಅವನ ನಿದ್ರೆ, ಅವನ ಜೀರ್ಣಕ್ರಿಯೆ, ಅವನ ಚಟುವಟಿಕೆ- ನಿಮ್ಮದೇನಾ? ಸರ್ವಥಾ ಇಲ್ಲ! ಒತ್ತಡ, ನಿದ್ರೆ, ಜೀರ್ಣಕ್ರಿಯೆ, ಚಟುವಟಿಕೆ, ವಯಸ್ಸು, ವಾತಾವರಣ- ಇವು ಯಾವ ವ್ಯಕ್ತಿಗೂ ಒಂದೇ ರೀತಿ ಇರುವುದಿಲ್ಲ. ಇವುಗಳನ್ನು ಪರಿಗಣಿಸದೆ ಪಾಲಿಸುವ ಆರೋಗ್ಯ ಸಲಹೆಗಳು ಕೆಲವರಿಗೆ ಪ್ರಯೋಜನಕಾರಿಯಾದರೂ ಹಲವರಿಗೆ ಅಪಾಯಕಾರಿ ಆಗಬಹುದು.
ಆಯುರ್ವೇದದ ದೃಷ್ಟಿಕೋನ: ಪ್ರತಿಯೊಬ್ಬ ವ್ಯಕ್ತಿಯೂ ವಿಶೇಷ
ಆಯುರ್ವೇದವು ‘ಸದಾ ಪುರುಷಂ ಪುರುಷಂ ವೀಕ್ಷ್ಯ’ ಎಂಬ ತತ್ವವನ್ನು ಅನುಸರಿಸುತ್ತದೆ- ಅಂದರೆ ಪ್ರತಿಯೊಬ್ಬ ವ್ಯಕ್ತಿಯ ದೇಹಪ್ರಕೃತಿ, ಶಕ್ತಿ, ವಯಸ್ಸು, ದೋಷಸ್ಥಿತಿ, ವಾಸಿಸುವ ಪ್ರದೇಶ, ಋತು ಮುಂತಾದ ಅಂಶಗಳನ್ನು ವಿಶ್ಲೇಷಿಸಿದ ನಂತರವೇ ಸಲಹೆಗಳನ್ನು ನೀಡು ತ್ತದೆ.
ಇಬ್ಬರಿಗೆ ಒಂದೇ ರೋಗ ಇದ್ದರೂ, ಆಯುರ್ವೇದದ ಪ್ರಿಸ್ಕ್ರಿಪ್ಷನ್ ಎಂದಿಗೂ ಒಂದೇ ಆಗುವು ದಿಲ್ಲ. ಆದ್ದರಿಂದಲೇ ಆಯುರ್ವೇದವು ಹೀಗೆ ಆರೋಗ್ಯ ಸಲಹೆಯನ್ನು ನೀಡುತ್ತದೆ: ನಿಮಗೆ ದಾಹವಾದಾಗ ಮಾತ್ರ ನೀರು ಕುಡಿಯಿರಿ- ಬಾಯಾರಿಕೆಯಿಲ್ಲದೆ ಸೇವಿಸುವ 4-5 ಲೀಟರ್ ನೀರು ಅಪಾಯಕಾರಿ.
ನಿಮ್ಮ ಶಕ್ತಿಯ ಅರ್ಧದಷ್ಟೇ ವ್ಯಾಯಾಮ ಮಾಡಿ- ನಮ್ಮ ದೈಹಿಕ ಶಕ್ತಿಯ ಮಾಪನೆ ಮಾಡಿ ನಾವು ಮಾಡುವ ವ್ಯಾಯಾಮದ ಪ್ರಮಾಣವನ್ನು ನಾವು ನಿರ್ಧರಿಸಬೇಕೇ ಹೊರತು ಮತ್ತಾ ವುದೋ ‘ಆಪ್’ ಅಲ್ಲ. ಆಯುರ್ವೇದದ ಪ್ರಕಾರ ಮೊಳಕೆ ಕಾಳುಗಳು ನಿತ್ಯ ಸೇವನೆಗೆ ಯೋಗ್ಯವಲ್ಲ, ಜೀರ್ಣಕ್ರಿಯೆ ದುರ್ಬಲವಾಗಿದ್ದರೆ ಮೊಳಕೆಯ ಸೇವನೆ ನಿಷಿದ್ಧ.
ಆಪಲ್ ಸಿಡಾರ್ ವಿನೆಗರ್‌ನಂಥ ಪ್ರಾಕೃತಿಕ ಪದಾರ್ಥಗಳೂ ತಪ್ಪಾಗಿ ಸೇವಿಸಿದರೆ ದೇಹಕ್ಕೆ ತೀವ್ರ ಹಾನಿ ಉಂಟು ಮಾಡಬಹುದು. ಯಾವುದೇ ಆರೋಗ್ಯ ಸಲಹೆಯನ್ನು ಪಾಲಿಸುವ ಮುನ್ನ ನಾವು ೫ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಬೇಕು- ಏನು, ಯಾರಿಗೆ, ಯಾವಾಗ, ಹೇಗೆ, ಎಷ್ಟು- ಈ ಐದು ಪ್ರಶ್ನೆಗಳಿಗೂ ಉತ್ತರ ಕಂಡ ನಂತರವೇ ಆಯುರ್ವೇದ ವೈದ್ಯರು ಸಹ ಚಿಕಿತ್ಸೆ ಮತ್ತು ಆಹಾರ ಶಿಫಾರಸುಗಳನ್ನು ನಿಗದಿಪಡಿಸುತ್ತಾರೆ.
ಈ ಅಂಶಗಳನ್ನು ಪರಿಗಣಿಸದೇ ‘ಜನಪ್ರಿಯ’ ಅಥವಾ ‘ಸಂಶೋಧನೆ’ ಸಾಬೀತುಪಡಿಸಿದೆ ಎಂಬ ಕಾರಣಕ್ಕೆ ಯಾವುದನ್ನಾದರೂ ಕುರುಡಾಗಿ ಅನುಸರಿಸುವುದು ಅಪಾಯಕಾರಿ. ಸೋಷಿಯಲ್ ಮೀಡಿಯಾ ‘ತ್ವರಿತ ಪರಿಹಾರ’ಗಳ ಆಗರ. ‘೫ ದಿನಗಳಲ್ಲಿ ಕೊಬ್ಬು ಕರಗಿಸಿ’, ‘೨ ಚಮಚ ಸೇವಿಸಿ ಮಧುಮೇಹ ನಿಲ್ಲಿಸಿ’, ‘ವೈದ್ಯರು ನಿಮಗೆ ಹೇಳದ ರಹಸ್ಯ’- ಇಂಥ ಶೀರ್ಷಿಕೆಗಳು ಕ್ಲಿಕ್ ಮಾಡಲು ನಮ್ಮನ್ನು ಪ್ರೇರೇಪಿಸುತ್ತವೆ.
ಇದು ಒಂದು ಮನೋವೈeನಿಕ ಉಪಾಯ. ಭಯ, ಕುತೂಹಲ ಮತ್ತು ತ್ವರಿತ ಪರಿಹಾರದ ಬಯಕೆ- ಈ ಮೂರು ಭಾವನೆಗಳು ಮಾನವನ ತಾರ್ಕಿಕ ಚಿಂತನವನ್ನು ಮಸುಕು ಮಾಡು ತ್ತವೆ. ಅದರ ಪರಿಣಾಮ, ವೈeನಿಕ ವೈದ್ಯಕೀಯ ಸಲಹೆಯನ್ನು ಬಿಟ್ಟು ಸಾಮಾಜಿಕ ಜಾಲ ತಾಣದ ಸಲಹೆಗಳಿಗೆ ಜನರು ಮರುಳಾಗುತ್ತಾರೆ.
ವೈಜ್ಞಾನಿಕವಾಗಿ, ತ್ವರಿತ ಫಲಿತಾಂಶ ನೀಡುವ ಸಲಹೆಗಳಲ್ಲಿ ದೇಹಕ್ಕೆ ಹಾನಿಯ ಸಾಧ್ಯತೆ ಹೆಚ್ಚು- ಕಾರಣ, ದೇಹವು ತನ್ನ ಸ್ವಾಭಾವಿಕ ಗತಿಯ ಬದಲಾವಣೆಯನ್ನು ಅಳವಡಿಸಿ ಕೊಳ್ಳಬೇಕಷ್ಟೇ ಹೊರತು, ಶೀಘ್ರ ಪರಿಣಾಮ ಎಂದು ಏಕಾಏಕಿ ಪಾಲಿಸಿದರೆ ಅದು ದೇಹದ ಸ್ವಾಭಾವಿಕ ಗತಿಯನ್ನು ಬಲವಂತವಾಗಿ ಬದಲಿಸಿ ವಿವಿಧ ಅಸಮತೋಲನಗಳಿಗೆ ಎಡೆ ಮಾಡಿಕೊಡುತ್ತದೆ. ಈ ಮನೋವಿಜ್ಞಾನವನ್ನು ಅರ್ಥಮಾಡಿಕೊಂಡು ಯಾವುದೇ ಹೊಸ ಆರೋಗ್ಯ ಸಲಹೆಯನ್ನು ಪಾಲಿಸುವ ಮುನ್ನ ‘ಇದು ನನಗೆ ಅಗತ್ಯ ಇದೆಯೇ ಅಥವಾ ಇದು ಕೇವಲ ನನ್ನ ಭಯವೇ?’ ಎಂದು ಪರಿಶೀಲಿಸಿಕೊಳ್ಳಬೇಕು.
ಸ್ವಯಂ-ಚಿಕಿತ್ಸೆ ಹೊಸದಲ್ಲ, ಆದರೆ ಈಗ ಅದರ ವೇಗ ಅತಿರೇಕವಾಗಿದೆ. ವೈದ್ಯಕೀಯ ದೃಷ್ಟಿಯಿಂದ ಇದರಿಂದಾಗುವ ಮೂರು ದೊಡ್ಡ ಅಪಾಯಗಳು- ೧)ತಪ್ಪಾದ ಪ್ರಮಾಣ: ಗಿಡಮೂಲಿಕೆಯಾದರೂ ಹೆಚ್ಚು ಪ್ರಮಾಣದಲ್ಲಿ ಅಕ್ರಮವಾಗಿ ಸೇವಿಸಿದರೆ ತೀವ್ರ ಹಾನಿ ಸಂಭವಿಸಬಹುದು. ವಿಶೇಷವಾಗಿ ಕಹಿ-ತೀಕ್ಷ್ಣ ದ್ರವ್ಯಗಳು ಖಾಲಿ ಹೊಟ್ಟೆಯಲ್ಲಿ ಹೆಚ್ಚು ಅಪಾಯಕರ.
೨)ತಪ್ಪಾದ ದ್ರವ್ಯ ಬಳಕೆ: ಒಬ್ಬನಿಗೆ ಬಾಲ್ಯದಿಂದಲೂ ಬಲವಾದ ಜೀರ್ಣಶಕ್ತಿಯಿದ್ದು, ಹೆಚ್ಚು ವ್ಯಾಯಾಮ ಮಾಡುವವನಾಗಿದ್ದರೆ, ಮೊಳಕೆಕಾಳುಗಳು ಅವನಿಗೆ ಹೊಂದ ಬಹುದು. ಅದೇ ಪದಾರ್ಥವು ಜೀರ್ಣಶಕ್ತಿ ಕಡಿಮೆ ಇರುವವರಿಗೆ, ಕೂತ ಕೆಲಸ ಮಾಡು ವವರಿಗೆ ಒದ್ದಾಟಕ್ಕೆ ಕಾರಣ.
೩)ತಾತ್ಕಾಲಿಕ ಉಪಶಮನ: ಲಕ್ಷಣ ಕಡಿಮೆಯಾದರೆ ರೋಗ ಗುಣವಾಯಿತು ಎಂದು ಭಾವಿಸಿ ಸುಮ್ಮನಾಗುವುದು ಹೆಚ್ಚಿನ ಅಪಾಯಕ್ಕೆ ಕಾರಣವಾಗಬಹುದು. ಹಾಗಾಗಿ ರೋಗದ ಸಂಪೂರ್ಣ ಸ್ವಭಾವವನ್ನು ಅರಿತು ಚಿಕಿತ್ಸೆ ಮಾಡಿಕೊಳ್ಳುವುದು ಕ್ಷೇಮ.
ವಿಶ್ವ ಆರೋಗ್ಯ ಸಂಸ್ಥೆಯೂ ಹೀಗೆ ಎಚ್ಚರಿಸಿದೆ: "Social media-driven self treatment is a rising global risk''.
ಆಯುರ್ವೇದ ಯಾಕೆ ಇನ್ನೂ ಪ್ರಾಸಂಗಿಕ?
"Personalised Medicine', 'Genetic Diet', 'Gut-based Lifestyle' - ಇವುಗಳನ್ನು ಇಂದಿನ ಆಧುನಿಕ ವೈದ್ಯಕೀಯ ಹೊಸದಾಗಿ ಪರಿಚಯಿಸುತ್ತಿದೆ. ಆದರೆ ಆಯುರ್ವೇದವು ಇದನ್ನು ಸಾವಿರಾರು ವರ್ಷಗಳ ಹಿಂದೆ ಹೇಳಿದೆ.
ಆಯುರ್ವೇದವು ಪ್ರತಿ ವ್ಯಕ್ತಿಯ ವೈಶಿಷ್ಟ್ಯವನ್ನು ಗಮನಿಸಿದ ನಂತರವೇ ಸಲಹೆಯನ್ನು ನೀಡುತ್ತದೆ. ೧.ಪ್ರಕೃತಿ, ೨.ವಿಕೃತಿ, ೩. ಸಾರ, ೪. ಸಂಹನನ, ೫. ಪ್ರಮಾಣ, ೬. ಸಾತ್ಮ್ಯ, ೭.ಸತ್ವ, ೮. ಆಹಾರಶಕ್ತಿ, ೯.ವ್ಯಾಯಾಮಶಕ್ತಿ, ೧೦.ವಯ.
ಆಯುರ್ವೇದದಲ್ಲಿ ಈ ಹತ್ತೂ ವಿಷಯಗಳನ್ನು ಪ್ರತಿ ವ್ಯಕ್ತಿಯಲ್ಲೂ ಗಮನಿಸಿದ ನಂತರವೇ ಸಲಹೆ/ಚಿಕಿತ್ಸೆ. ಈ ಕಾರಣಕ್ಕಾಗಿ ಆಯುರ್ವೇದ ಎಂದಿಗೂ ಸಾಮಾನ್ಯ ಸಲಹೆ ನೀಡುವು ದಿಲ್ಲ. ಎರಡು ಜನರಿಗೆ ಒಂದೇ ರೀತಿ ಜ್ವರ ಬಂದರೂ, ಆಯುರ್ವೇದದ ಚಿಕಿತ್ಸಾ ವಿಧಾನ ಒಂದೇ ಆಗುವುದಿಲ್ಲ.
ಸಾಮಾಜಿಕ ಜಾಲತಾಣ, ಗೂಗಲ್ ಅಥವಾ ವಾಟ್ಸಾಪ್‌ನಲ್ಲಿ ಕಾಣುವ ಸಾಮಾನ್ಯ ಆರೋಗ್ಯ ಸಲಹೆಗಳನ್ನು ವೈದ್ಯರ ಮಾರ್ಗದರ್ಶನವಿಲ್ಲದೆ ಅನುಸರಿಸುವುದು ಆರೋಗ್ಯಕ್ಕೆ ಹಾನಿ ಕಾರಕ.
ನಿಮ್ಮ ಸ್ನೇಹಿತರಿಗೆ ಉಪಕಾರಿಯಾದದ್ದೇ ನಿಮಗೆ ತೊಂದರೆ ತರಬಹುದು. ನೈಸರ್ಗಿಕ ಗಿಡಮೂಲಿಕೆಗಳೂ ತಪ್ಪಾಗಿ ಉಪಯೋಗಿಸಿದರೆ ಗಂಭೀರ ಅಡ್ಡಪರಿಣಾಮ ನೀಡಬಹುದು. ಆದ್ದರಿಂದ ಯಾವ ವಿಧಾನವನ್ನೇ ಅನುಸರಿಸುವ ಮುನ್ನ- ಅದು ‘ನಿಮ್ಮ’ ದೇಹ, ‘ನಿಮ್ಮ’ ಆರೋಗ್ಯಸ್ಥಿತಿ ಮತ್ತು ‘ನಿಮ್ಮ’ ಜೀವನಶೈಲಿಗೆ ಹೊಂದಿಕೆಯಾಗುತ್ತದೆಯೇ ಎಂಬುದನ್ನು ಖಚಿತಪಡಿ ಸಿಕೊಳ್ಳಿ. ಮುಂದೆ ಯಾರಾದರೂ “ಈ ಸಲಹೆ ಸಂಶೋಧನೆಯಲ್ಲಿ ಸಾಬೀತಾ ಗಿದೆ" ಎಂದು ಹೇಳಿದರೆ, ಒಂದು ಸರಳ ಪ್ರಶ್ನೆ ಕೇಳಿ- “ಇದು ನನಗೆ ಸರಿ ಹೊಂದುತ್ತದೆಯೇ?".
ಆರೋಗ್ಯದ ಅತ್ಯಂತ ಸುರಕ್ಷಿತ ಮಾರ್ಗವೆಂದರೆ- ವೈಯಕ್ತಿಕಗೊಳಿಸಿದ, ಸಮಗ್ರ ಮತ್ತು ಸಮಯಪರೀಕ್ಷಿತ ಜ್ಞಾನ. ಆ ಕಾರಣಕ್ಕೆ ಆಯುರ್ವೇದವು ಇಂದು ಮತ್ತಷ್ಟು ಪ್ರಾಸಂಗಿಕ ವಾಗಿದೆ. ಇಂದಿನ ಡಿಜಿಟಲ್ ಯುಗದಲ್ಲಿ ಆರೋಗ್ಯ ಸಲಹೆಗಳು ಎಡೆ ಲಭ್ಯ.
ಒಂದು ಕ್ಲಿಕ್‌ಗೆ ‘ಸಂಶೋಧನೆ ಸಾಬೀತುಪಡಿಸಿದೆ’, ‘100% ನೈಸರ್ಗಿಕ’, ‘ಶಾಶ್ವತ ಪರಿಹಾರ’ ಎಂಬ ಬರಹಗಳು ನಮ್ಮನ್ನು ಸೆಳೆಯುತ್ತವೆ. ಆದರೆ, ಸ್ವಾಸ್ಥ್ಯ ಎನ್ನುವುದು ಒಂದೇ ಮಾಪ ದಂಡಕ್ಕೆ ಹೊಂದುವ ಗಣಿತವಲ್ಲ. ಇದು ಪ್ರತಿಯೊಬ್ಬರ ದೇಹ, ಮನಸ್ಸು, ವಯಸ್ಸು, ಜೀರ್ಣಕ್ರಿಯೆ, ವಾತಾವರಣ ಮತ್ತು ಜೀವನಶೈಲಿಯ ಸೂಕ್ಷ್ಮ ಸಂಯೋಜನೆ.
ಒಂದೇ ಸಲಹೆ ಎಲ್ಲರಿಗೂ ಸರಿ ಎನ್ನುವುದು ತಪ್ಪು ಕಲ್ಪನೆ ಮತ್ತು ಕೆಲವೊಮ್ಮೆ, ಈ ತಪ್ಪು ಕಲ್ಪನೆ ಜೀವಿತಕ್ಕೆ ಹಾನಿ ಮಾಡಬಹುದು. ಆಯುರ್ವೇದದ ಮಹತ್ವವು ಇಲ್ಲಿ ಬೆಳಗುತ್ತದೆ. ನಡೆಯುವ ದಾರಿ ಎಲ್ಲರಿಗೂ ಒಂದೇ ಎಂದು ಹೇಳುವುದಿಲ್ಲ. ಬದಲಾಗಿ, ‘ನೀವು ಯಾರು?’ ಎಂಬ ಮೂಲ ಪ್ರಶ್ನೆಯಿಂದಲೇ ಚಿಕಿತ್ಸೆ ಆರಂಭವಾಗುತ್ತದೆ.
ವ್ಯಕ್ತಿಗುಣಾಧಾರಿತ ಸಲಹೆಗಳು ಮತ್ತು ಸಮಗ್ರ ದೃಷ್ಟಿಕೋನ ಹೊಂದಿರುವ ಆಯುರ್ವೇ ದವು ಇಂದಿಗೂ ಅತ್ಯಂತ ಪ್ರಾಸಂಗಿಕವಾಗಿದೆ. ನೆನಪಿಡಿ- ಆರೋಗ್ಯದಲ್ಲಿ ವೈಜ್ಞಾನಿಕತೆ ಎಂದರೆ- ‘ವೈಯಕ್ತಿಕತೆ’! ಈ ತತ್ತ್ವದ ಹೊರತಾಗಿ ನೀಡಿದ ಸಲಹೆಯು ಎಂದಿಗೂ ಸ್ವಾಸ್ಥ್ಯದ ಪಥವಾಗಲು ಸಾಧ್ಯವಿಲ್ಲ!