Shashidhara Halady Column: ಬ್ರಿಟಿಷರ ವಿರುದ್ದ ಹೋರಾಡಿದ ವೈದ್ಯೆ

ಬ್ರಿಟಿಷರನ್ನು ಭಾರತದಿಂದ ಓಡಿಸುವ ಉದ್ದೇಶ ದಿಂದ ಜಪಾನ್ ಸೇನೆಯ ಸಹಕಾರ ಪಡೆದು, 1944ರ ಸಮಯದಲ್ಲಿ ದಾಳಿ ಮಾಡಿ, ಅಸ್ಸಾಂನ ಕೆಲವು ಭೂಭಾಗಗಳನ್ನು ವಶಪಡಿಸಿಕೊಂಡ

ಶಶಿಧರ ಹಾಲಾಡಿ ಶಶಿಧರ ಹಾಲಾಡಿ Dec 27, 2024 8:37 AM

ಶಶಾಂಕಣ

ಶಶಿಧರ ಹಾಲಾಡಿ

ಬ್ರಿಟಿಷರ ವಿರುದ್ಧ ನಡೆಸಿದ ಕ್ರಾಂತಿಕಾರಿ ಹೋರಾಟದಲ್ಲಿ ಭಾಗವಹಿಸಿದವರಲ್ಲಿ ಮಹಿಳೆಯರು ತುಸು ಕಡಿಮೆ ಎನ್ನ ಬಹುದು. ಅದೇ ರೀತಿ, 20ನೆಯ ಶತಮಾನದ ಮೊದಲ ಭಾಗದಲ್ಲಿ ವೈದ್ಯಕೀಯ ಪದವೀಧರರೂ ಕಡಿಮೆ. ಅಂಥ ಸಂದರ್ಭದಲ್ಲಿ ಕ್ರಾಂತಿಕಾರಿಯಾಗಿ, ವೈದ್ಯರಾಗಿ ಹೆಸರು ಮಾಡಿದ ಅಪರೂಪದ ಮಹಿಳೆ ಎಂದರೆ ಕ್ಯಾಪ್ಟನ್ ಡಾಕ್ಟರ್ ಲಕ್ಷ್ಮಿ ಸೆಹಗಲ್. ಭಾರತಕ್ಕೆ ಬೇಗನೆ ಸ್ವಾತಂತ್ರ್ಯ ದೊರಕಿಸಿಕೊಡಬೇಕೆಂಬ ಉದ್ದೇಶದಿಂದ ಸುಮಾರು 43000 ಸೈನಿಕರೊಂದಿಗೆ ದಾಳಿ ಮಾಡಿದ ಅಜಾದ್ ಹಿಂದ್ ಫೌಜ್‌ನ ಮಹಿಳಾ ರೆಜಿಮೆಂಟ್‌ನ ಕ್ಯಾಪ್ಟನ್ ಆಗಿದ್ದ ಈಕೆ, ಸುಭಾಷ್‌ಚಂದ್ರ ಬೋಸ್ ಅವರ ಒಡನಾಡಿ.

ಬ್ರಿಟಿಷರನ್ನು ಭಾರತದಿಂದ ಓಡಿಸುವ ಉದ್ದೇಶ ದಿಂದ ಜಪಾನ್ ಸೇನೆಯ ಸಹಕಾರ ಪಡೆದು, 1944ರ ಸಮಯದಲ್ಲಿ ದಾಳಿ ಮಾಡಿ, ಅಸ್ಸಾಂನ ಕೆಲವು ಭೂಭಾಗಗಳನ್ನು ವಶಪಡಿಸಿಕೊಂಡ ಸುಭಾಷ್‌ಚಂದ್ರ ಬೋಸ್ ಮತ್ತು ಲಕ್ಷ್ಮಿ ಸೆಹಗಲ್ ಅವರ ಹೋರಾಟವು ಕಾರಣಾಂತರದಿಂದ ವಿಫಲಗೊಂಡಿತು, ಬ್ರಿಟಿಷರ ಕೈ ಮೇಲಾಯಿತು.

ಸುಭಾಷರ ಒಡನಾಡಿಯಾಗಿದ್ದು, ಅವರಿಂದ ‘ರಾಣಿ ಆಫ್ ಝಾನ್ಸಿ ರೆಜಿಮೆಂಟ್’ನ ಕ್ಯಾಪ್ಟನ್ ಆಗಿ ನೇಮಿಸಲ್ಪಟ್ಟ ಡಾ.ಲಕ್ಷ್ಮಿ ಸೆಹಗಲ್, ನಮ್ಮ‌ ದೇಶದಲ್ಲಿ ಸಾಕಷ್ಟು ಪರಿಚಿತರೇ. 1998ರಲ್ಲಿ ಪದ್ಮವಿಭೂಷಣ ಪ್ರಶಸ್ತಿಗೆ ಭಾಜನರಾದ ಲಕ್ಷ್ಮಿ ಸೆಹಗಲ್, ಸ್ವಾತಂತ್ರ್ಯೋತ್ತರ ಭಾರತದಲ್ಲಿ ಬಡಜನರ, ನಿರಾಶ್ರಿತರ ಸೇವೆ ಮಾಡುತ್ತಾ ವೈದ್ಯ ವೃತ್ತಿಯನ್ನೂ, ಹೋರಾಟದ ಬದುಕನ್ನೂ ಮುಂದುವರಿಸಿ, ತಮ್ಮದೇ ನೆಲೆಯಲ್ಲಿ ರಾಜಕೀಯ ವಲಯದಲ್ಲೂ ಒಂದು ಶಕ್ತಿಯಾಗಿ ಗುರುತಿಸಿಕೊಂಡರು.

ಇವರು 1940ರ ದಶಕದಲ್ಲಿ ಬಂದೂಕು ಚಲಾಯಿಸುವುದನ್ನು ಕಲಿತದ್ದಲ್ಲದೇ, ಸಾವಿರಾರು ಸಶಸ್ತ್ರ ಮಹಿಳಾ ಯೋಧರ ನಾಯಕಿಯಾಗಿದ್ದರು ಎಂಬ ವಿಷಯವೇ ವಿಸ್ಮಯ ಹುಟ್ಟಿಸುತ್ತದೆ. ದೂರದ ಸಿಂಗಪುರದಲ್ಲಿ ವೈದ್ಯೆಯಾಗಿ, ಸೀರೋಗ ತeಯಾಗಿ ಹೆಸರು ಮಾಡಿ, ಯಶಸ್ವಿ ವೈದ್ಯಕೀಯ ಬದುಕನ್ನು ರೂಪಿಸಿಕೊಳ್ಳುವ ಉತ್ತಮ ಅವಕಾಶವಿದ್ದ ಈ ಮಹಿಳೆ, ದೇಶಕ್ಕೆ ಸ್ವಾತಂತ್ರ್ಯ ದೊರಕಿಸಿಕೊಡಲು ಹೋರಾಡುತ್ತಿದ್ದ ಸೈನ್ಯದ ಭಾಗವಾಗಿ ಯುದ್ಧಭೂಮಿ ಗಿಳಿದದ್ದು ಸಹ ವಿಸ್ಮಯ ಕಾರಿಯೇ.

ಜೀವನದುದ್ದಕ್ಕೂ ಹೋರಾಟದ ಮನೋಭಾವದಿಂದಲೇ ಬದುಕಿದ ಅಪರೂಪದ ವ್ಯಕ್ತಿಗಳಲ್ಲಿ ಒಬ್ಬರಾದ ಲಕ್ಷ್ಮಿ ಸೆಹಗಲ್ ಜನಿಸಿದ್ದು ಕೇರಳದ ಅಮಕ್ಕರ ಎಂಬ ಹಳ್ಳಿಯಲ್ಲಿ. ಅವರ ತಂದೆ ಅಂದಿನ ಪ್ರಸಿದ್ಧ ನ್ಯಾಯವಾದಿ ಸ್ವಾಮಿನಾಥನ್, ಇಂಗ್ಲೆಂಡಿನಲ್ಲಿ ಕಾನೂನು ಶಾಸ್ತ್ರ ಅಧ್ಯಯನ ಮಾಡಿದ್ದವರು. ತಾಯಿ ಅಮ್ಮು ಸ್ವಾಮಿನಾಥನ್, ಆಗಿನ ಕಾಲದಲ್ಲಿ ಪತಿಯ ಸಹಕಾರದಿಂದ ಇಂಗ್ಲಿಷ್ ಕಲಿತ ಅಪರೂ ಪದ ಮಹಿಳೆ. ಸ್ವಾಮಿನಾಥನ್ ಮತ್ತು ಅಮ್ಮುಇಂಗ್ಲೆಂಡಿನಲ್ಲಿದ್ದಾಗ ರಿಜಿಸ್ಟರ್ ಮದುವೆಯಾಗಿ, ಕಾನೂನಿನ ಪ್ರಕಾರ ತಮ್ಮ ದಾಂಪತ್ಯವನ್ನು ದಾಖಲಿಸಬೇಕಾ ಯಿತು.

ಏಕೆಂದರೆ, ಕೇರಳದಲ್ಲಿ ತಮ್ಮ ಕುಟುಂಬದಲ್ಲಿದ್ದ ಮಾತೃಪ್ರಧಾನ ವ್ಯವಸ್ಥೆಯಿಂದ ಅವರು ಹೊರಬರಬೇಕಾಗಿತ್ತು. ಸ್ವಾಮಿ ನಾಥನ್ ಭಾರತಕ್ಕೆ ವಾಪಸಾಗಿ ಮದರಾಸ್ ನ್ಯಾಯಾಲಯದಲ್ಲಿ ವಕೀಲಿ ವೃತ್ತಿಯನ್ನು ಆರಂಭಿಸಿದರೂ,ಅವರದ್ದು ಬ್ರಿಟಿಷರ ವಿರುದ್ಧ ಹೋರಾಟ ನಡೆಸುವ ಮನೋಭಾವ. ಆಂಗ್ಲರ ನಡುವೆ ಇದ್ದುಕೊಂಡೇ ಅವರ ಒಡನಾಟ ಪಡೆದು, ಅವರನ್ನು ಈ ದೇಶದಿಂದ ಓಡಿಸಲು ಯತ್ನಿಸಬೇಕೆಂಬ ಮನೋಭಾವದಿಂದ, ತಮ್ಮ ಮಕ್ಕಳನ್ನು ಇಂಗ್ಲಿಷ್ ಶಾಲೆಗೆ ಸೇರಿಸಿದ್ದರು.

ಸ್ವಾಮಿನಾಥನ್‌ರ ಬಂಡಾಯ ಮನೋಭಾವ ಕೇವಲ ಆಶಯದ ಮಟ್ಟದಲ್ಲಿ ಉಳಿಯಲಿಲ್ಲ, ಕೃತಿರೂಪದಲ್ಲಿತ್ತು. ಮಗಳು ಲಕ್ಷ್ಮಿ ಓದುತ್ತಿದ್ದ ಇಂಗ್ಲಿಷ್ ಶಾಲೆಯ ಮುಖ್ಯೋಪಾಧ್ಯಾಯ ಹುದ್ದೆಯಲ್ಲಿದ್ದುದು ಓರ್ವ ಯುರೋಪಿಯನ್ಮಹಿಳೆ. ಅವಳ ಅಣ್ಣನಾದ ಹೇ ಎಂಬ ಬ್ರಿಟಿಷ್ ಅಧಿಕಾರಿಯನ್ನು ಮದರಾಸಿನ ಸ್ಥಳೀಯ ವ್ಯಕ್ತಿ ಕದಂಬೂರ್ ಎಂಬಾತ ಕೊಲೆ ಮಾಡಿದ! ಆಗ, ಆ ಆರೋಪಿಯ ಪರವಾಗಿ ವಕಾಲತ್ತು ವಹಿಸಿ, ಆತನನ್ನು ಶಿಕ್ಷೆಯಿಂದ ಪಾರು ಮಾಡಿದರು ಈ ಸ್ವಾಮಿನಾಥನ್! ಈ ಘಟನೆಯು ಮಕ್ಕಳ ವಿದ್ಯಾಭ್ಯಾಸದ ಮೇಲೆ ನೇರ ಪರಿಣಾಮ ಬೀರಿತು.

ಇದರಿಂದಾಗಿ, ಲಕ್ಷ್ಮಿ ಮತ್ತು ಅವಳ ಸಹೋದರಿ ಮೃಣಾಲಿನಿ (ನಂತರ ಮೃಣಾಲಿನಿ ಸಾರಾಭಾಯಿ) ತಾವು ಓದುತ್ತಿದ್ದ ಇಂಗ್ಲಿಷ್ ಶಾಲೆ ಬಿಟ್ಟು, ಸರಕಾರಿ ಶಾಲೆ ಸೇರಬೇಕಾಯಿತು. ಆಗಲೇ ಬ್ರಿಟಿಷರ ವಿರುದ್ಧದ ಹೋರಾಟದ ಮನೋ ಭಾವನೆಯ ಬೀಜ ಲಕ್ಷ್ಮಿಯವರ ಮನದಲ್ಲಿ ಬಿತ್ತಿರಬೇಕು. 1920ರ ದಶಕದ ಆ ಕಾಲದಲ್ಲೇ, ಲಕ್ಷ್ಮಿಯವರಮನೆಯಲ್ಲಿ ಸಮಾನತೆಯ ಗಾಳಿ; ಎಲ್ಲಾ ಜಾತಿಯವರಿಗೂ ಅವರ ಮನೆಯಲ್ಲಿ ಸಮಾನ ಸ್ಥಾನ. ಈ ಕುಟುಂಬದ ಕ್ರಾಂತಿಕಾರಿ ನಡತೆಗಳನ್ನು ಕಂಡ ಸ್ಥಳೀಯರು ಅಚ್ಚರಿಪಟ್ಟದ್ದೂ ಉಂಟು.

ಬೇಸರ ಮರೆಸಲು ಸಿಂಗಪುರಕ್ಕೆ ಮದರಾಸಿನಲ್ಲಿ ಅಧ್ಯಯನ ಮಾಡಿ 1938ರಲ್ಲಿ ವೈದ್ಯಕೀಯ ಪದವಿ ಪಡೆದ ಲಕ್ಷ್ಮಿ ಸ್ವಾಮಿನಾಥನ್, ಪಿ.ಕೆ.ಎನ್.ರಾವ್ ಎಂಬ ಪೈಲಟ್ ಅನ್ನು ವಿವಾಹವಾದರು. ಆದರೆ ಅದೊಂದು ಅಸಮ ದಾಂಪತ್ಯಎನಿಸಿ ಬೇಗನೆ ಮುರಿದು ಬಿತ್ತು. ವೈಯಕ್ತಿಕ ಬದುಕಿನ ಈ ದುರ್ಭರ ಸನ್ನಿವೇಶದಿಂದ ದೂರಾಗಲೆಂದೇ 1940ರಲ್ಲಿ ಡಾ. ಲಕ್ಷ್ಮಿಯವರು ಸಿಂಗಪುರಕ್ಕೆ ಹೋಗಿ, ಅಲ್ಲಿ ವೈದ್ಯ ವೃತ್ತಿಯನ್ನು ಮುಂದುವರಿಸಿದರು.

ಆ ದಿನಗಳಲ್ಲಿ ಸಿಂಗಪುರವು ಬ್ರಿಟಿಷರ ಆಳ್ವಿಕೆಯಲ್ಲಿದ್ದು, ಸಾಕಷ್ಟು ಭಾರತೀಯರು ಅಲ್ಲಿ ನೆಲೆಸಿದ್ದರು. ೨೬ನೆಯ ವಯಸ್ಸಿನಲ್ಲಿ ಸಿಂಗಪುರ ತಲುಪಿದ ಲಕ್ಷ್ಮಿಯವರನ್ನು ತನ್ನ ಪ್ರಭಾವಲಯಕ್ಕೆ ಸೆಳೆದುಕೊಂಡದ್ದು, ಸುಭಾಷ್‌ಚಂದ್ರ ಬೋಸರ ನೇತೃತ್ವದ ‘ಆಜಾದ್ ಹಿಂದ್ ಫೌಜ್’ ಅಥವಾ ‘ಇಂಡಿಯನ್ ನ್ಯಾಷನಲ್ ಆರ್ಮಿ’ (ಐಎನ್‌ಎ). ಲಕ್ಷ್ಮಿ ಯವರು ಸಿಂಗಪುರ ತಲುಪಿದ ೨ ವರ್ಷಗಳಲ್ಲಿ ಜಪಾನ್ ಸೇನೆಯು ಸಿಂಗಪುರವನ್ನು ಆಕ್ರಮಿಸಿತು; ಬ್ರಿಟಿಷ್ಸೇನೆಯು ಸೋಲನ್ನನುಭವಿಸಿ, ಸಿಂಗಪುರವನ್ನು ಜಪಾನಿಯರಿಗೆ ಒಪ್ಪಿಸಿತು.

ಆ ಸಂಘರ್ಷದಲ್ಲಿ ಗಾಯಗೊಂಡ ಸೇನಾ ಸಿಬ್ಬಂದಿಯನ್ನು ಉಪಚರಿಸುವ ಕೆಲಸದಲ್ಲಿ ಲಕ್ಷ್ಮಿ ತೊಡಗಿಕೊಂಡರು. ಆಗ ಅಲ್ಲಿದ್ದ ಹೋರಾಟಗಾರರಾದ ಕೇಶವ ಮೆನನ್, ಎಸ್.ಸಿ.ಗುಹಾ, ಎನ್. ರಾಘವನ್ ಮೊದಲಾದವರ ಸಂಪರ್ಕ ವಾಯಿತು. ಈ ನಡುವೆ, ಆಜಾದ್ ಹಿಂದ್ ಫೌಜ್‌ನ ಮುಖ್ಯಸ್ಥರಾಗಿ ಸುಭಾಷ್‌ಚಂದ್ರ ಬೋಸ್ ನೇಮಕಗೊಂಡರು.

2.7.1943ರಂದು ಸಿಂಗಪುರ ಭೇಟಿಗೆ ಬಂದ ಬೋಸ್ ಅವರು ಲಕ್ಷ್ಮಿಯವರ ಜೀವನದ ಮೇಲೆ ಬಹಳಷ್ಟುಪರಿಣಾಮ ಬೀರಿದ ನಾಯಕ, ಕ್ರಾಂತಿಕಾರಿ. ತಮ್ಮ ಸೇನೆಯಲ್ಲಿ ಮಹಿಳಾ ಘಟಕವನ್ನು ಆರಂಭಿಸಬೇಕೆಂದು ಸುಭಾಷ್ ಯೋಚಿಸುತ್ತಿದ್ದ ವಿಷಯ ಲಕ್ಷ್ಮಿಯವರಿಗೆ ತಿಳಿದು ಅವರನ್ನು ಭೇಟಿಯಾಗಬೇಕೆಂಬ ಮನವಿ ಸಲ್ಲಿಸಿದರು. ವೈದ್ಯೆಯಾಗಿದ್ದ ಲಕ್ಷ್ಮಿಯವರನ್ನು ಮಾತುಕತೆಗೆ ಕರೆಸಿದ ಬೋಸ್, ಅವರೊಂದಿಗೆ 5 ಗಂಟೆಗಳ ಸುದೀರ್ಘಸಮಾಲೋಚನೆ ನಡೆಸಿದರು. ಬಳಿಕ ಸುಭಾಷರು, ಲಕ್ಷ್ಮಿಯವರನ್ನು ತಮ್ಮ ಸೇನೆಯ ಮಹಿಳಾ ಘಟಕದ ಕ್ಯಾಪ್ಟನ್ ಆಗಿ ನೇಮಿಸಿದರು. ಅಂದಿನಿಂದ ಇವರು ‘ಕ್ಯಾಪ್ಟನ್ ಲಕ್ಷ್ಮಿ’ ಎಂದೇ ಪ್ರಖ್ಯಾತರು.

ಕ್ಯಾಪ್ಟನ್ ಲಕ್ಷ್ಮಿಯವರ ಮಹಿಳಾ ಸೇನೆಯು ಶಸ್ತ್ರಾಸ್ತ್ರ ಬಳಕೆಯಲ್ಲಿ ತರಬೇತಿ ಪಡೆಯುತ್ತಾ, ಆಜಾದ್ ಹಿಂದ್ ಫೌಜ್‌ನ ಅಭಿಯಾನದಲ್ಲಿ ತನ್ನದೇ ಪಾತ್ರ ವಹಿಸಿತು.

ಸುಭಾಷರ ಸೇನೆಯಲ್ಲಿ ಸುಮಾರು 43000 ಸೈನಿಕರಿದ್ದರು. ಸ್ವಾತಂತ್ರ್ಯದ ಕರೆಗೆ ಓಗೊಟ್ಟು, ಬ್ರಿಟಿಷ್ ಸೇನೆ ತೊರೆದ ಭಾರತೀಯ ಯೋಧರು ಇದರ ಪ್ರಮುಖ ಅಂಗ. 1944ರ ಸಮಯದಲ್ಲಿ ಈ ಸೇನೆಯು ಭಾರತವನ್ನು ಬ್ರಿಟಿಷರಿಂದ ವಿಮುಕ್ತಿಗೊಳಿಸುವ ಅಭಿಯಾನದಲ್ಲಿ ಬರ್ಮಾದ ಮೂಲಕ ಭಾರತದತ್ತ ಧಾವಿಸಿ, ಅಸ್ಸಾಂನ ಇಂಫಾಲ್ ನಗರದತ್ತ ಮುಂದುವರಿಯಿತು. ಆದರೆ ಎರಡನೆಯ ಮಹಾಯುದ್ಧದ ವಿದ್ಯಮಾನ ಬೇರೆ ದಿಕ್ಕಿನಲ್ಲಿ ಚಲಿಸಿತು. ಜರ್ಮನಿ ಸೋತಿತು, ಅಮೆರಿಕ ಮತ್ತು ಮಿತ್ರಪಕ್ಷಗಳು ಜಯಗಳಿಸಿದವು. ಜಪಾನ್ ಮೇಲೆ ಅಣುಬಾಂಬ್ ಪ್ರಯೋಗವಾಯಿತು. ಇದರಿಂದಾಗಿ, ಆಜಾದ್ ಹಿಂದ್ ಫೌಜ್‌ಗೆ ದೊರಕುತ್ತಿದ್ದ ಬೆಂಬಲ ತಪ್ಪಿಹೋಯಿತು.

ಬ್ರಿಟಿಷರು ಆಜಾದ್ ಹಿಂದ್ ಫೌಜ್‌ನ ಸಾವಿರಾರು ಸೈನಿಕರನ್ನು ಬಂಽಸಿದರು ಮತ್ತು ಅವರ ವಿರುದ್ಧ ದೆಹಲಿಯಲ್ಲಿ ವಿಚಾರಣಾ ಪ್ರಕ್ರಿಯೆಯನ್ನು ಆರಂಭಿಸಿದರು. ಕ್ಯಾಪ್ಟನ್ ಲಕ್ಷ್ಮಿ ಸಹ ಬಂಧನಕ್ಕೊಳಗಾಗಿ ಭಾರತಕ್ಕೆ ಕರೆತರಲ್ಪಟ್ಟರು,ಅವರೂ ವಿಚಾರಣೆಗೆ ಒಳಗಾಗಬೇಕಾಯಿತು. ಅಲ್ಲಿಗೆ ಅವರ ಸೇನಾಜೀವನಕ್ಕೆ ತೆರೆ ಬಿತ್ತು. ಸುಭಾಷರ ಸೇನೆಯಲ್ಲಿದ್ದ ಕರ್ನಲ್ ಪ್ರೇಮ್ ಕುಮಾರ್ ಸೆಹಗಲ್‌ರೊಡನೆ ೧೯೪೭ರಲ್ಲಿ ವಿವಾಹವಾದ ಲಕ್ಷ್ಮಿ, ಲಾಹೋರ್‌ನಲ್ಲಿ ತಮ್ಮ ವೈದ್ಯವೃತ್ತಿ ಆರಂಭಿಸಿದರು. ಇವರ ಪತಿ ಸೆಹಗಲ್‌ರದ್ದು ಇನ್ನೊಂದು ಸಾಹಸಗಾಥೆ. ಬ್ರಿಟಿಷರ ಸೇನೆಯಲ್ಲಿ ಸೇವೆ ಸಲ್ಲಿಸು ತ್ತಿದ್ದ ಇವರು, ಸಿಂಗಪುರದಲ್ಲಿ ಜಪಾನಿಯರ ಸೆರೆಯಾದಾಗ, ಬ್ರಿಟಿಷರ ವಿರುದ್ಧ ಹೋರಾಡಲು ನಿರ್ಧರಿಸಿದರು. ಜಪಾನಿಯರು ಸಿಂಗಪುರ ತೊರೆದಾಗ, ಸೆಹಗಲ್ ಸಹ ಬ್ರಿಟಿಷರ ಬಂಧಿಯಾದರು.

1947ರಲ್ಲಿ ದೇಶ ವಿಭಜನೆಗೊಂಡಾಗ, ಸೆಹಗಲ್ ದಂಪತಿ ಕಾನ್‌ಪುರಕ್ಕೆ ಬಂದು ನೆಲೆಸಿದರು. ನಿರಾಶ್ರಿತ ಜನರಿಗೆ ವೈದ್ಯಕೀಯ ಸೇವೆ ನೀಡುತ್ತಾ, ಜನಸಾಮಾನ್ಯರ ನಡುವೆ ವಿಶ್ವಾಸ ಬೆಳೆಸಿಕೊಂಡರು ಲಕ್ಷ್ಮಿ ಸೆಹಗಲ್. 1971ರಲ್ಲಿಬಾಂಗ್ಲಾ ದೇಶದ ಉದಯವಾದಾಗ, ಕಲ್ಕತ್ತಾಕ್ಕೆ ಹರಿದುಬಂದ ಸಾವಿರಾರು ನಿರಾಶ್ರಿತರಿಗೆ ವೈದ್ಯಕೀಯ ಸೇವೆ ನೀಡಲು ಅಲ್ಲಿಗೆ ಹೋಗಿ, ಗಡಿ ಪ್ರದೇಶದಲ್ಲಿ 5 ವಾರ ಸೇವೆ ಸಲ್ಲಿಸಿದರು. ಈ ನಡುವೆ, ಲಕ್ಷ್ಮಿಯವರ ಮಗಳು ಸುಭಾಷಿಣಿ ಆಲಿಯವರು ಸಿಪಿಐ (ಎಂ) ಸೇರಿದರು; ಅವರು ಪಶ್ಚಿಮ ಬಂಗಾಳದ ಮುಖ್ಯಮಂತ್ರಿಯವರ ಪರಿಚಿತ ರಾಗಿದ್ದರು. ಆ ಮೂಲಕ, 57 ವರ್ಷದ ಲಕ್ಷ್ಮಿ ಅವರನ್ನೂ ಪಕ್ಷಕ್ಕೆ ಸೇರಿಸಿದರು. 1971ರಲ್ಲಿ ಸಿಪಿಐ(ಎಂ) ಪಕ್ಷ ಸೇರಿದಾಗ ಲಕ್ಷ್ಮಿ ಅವರಾಡಿದ ಮಾತುಗಳು ಹೀಗಿವೆ: “ನಾನು ಮೊದಲಿನಿಂದಲೂ ಕಮ್ಯುನಿಸ್ಟರ ರೀತಿ ಚಿಂತಿಸುತ್ತಿದ್ದೆ. ನನಗೆ ಅಪಾರ ಹಣ, ಆಸ್ತಿ, ಸಂಪತ್ತು ಗಳಿಸುವ ಆಸೆ ಎಂದಿಗೂ ಇರಲಿಲ್ಲ". ಲಕ್ಷ್ಮಿಯವರು ಅದೇ ವರ್ಷ ರಾಜ್ಯಸಭೆಯ ಸದಸ್ಯರಾಗಿ ತಮ್ಮ ಪಕ್ಷವನ್ನು ಪ್ರತಿನಿಧಿಸಿದರು.

1981ರಲ್ಲಿ ಆಲ್ ಇಂಡಿಯಾ ಡೆಮೊಕ್ರಾಟಿಕ್ ವಿಮೆನ್ಸ್ ಅಸೋಸಿಯೇಷನ್ ಆರಂಭಿಸಿದ ಲಕ್ಷ್ಮಿ, ರಾಜಕೀಯ ಚಟುವಟಿಕೆಗಳ ನಡುವೆಯೂ ವೈದ್ಯ ವೃತ್ತಿಯನ್ನು ಕಡೆಗಣಿಸಲಿಲ್ಲ. 1984ರಲ್ಲಿ ಭೋಪಾಲ್‌ನಲ್ಲಿ ಅನಿಲ ದುರಂತ ಸಂಭವಿಸಿದಾಗ, ಅಲ್ಲಿನ ಜನಸಾಮಾನ್ಯರಿಗೆ ವೈದ್ಯಕೀಯ ನೆರವು ನೀಡಲು ಧಾವಿಸಿದರು. ಅದೇ ವರ್ಷ ಇಂದಿರಾ ಗಾಂಧಿಯವರ ಕೊಲೆಯಾಗಿ ದೇಶದೆಲ್ಲೆಡೆ ಸಿಖ್ಖರ ಮೇಲೆ ಆಕ್ರಮಣವಾದಾಗ, ಕಾನ್‌ಪುರದಲ್ಲಿ ಅಂಥ ಹಿಂಸಾಚಾರ ನಡೆಸುತ್ತಿದ್ದ ಜನರನ್ನು ಎದುರಿಸಿದ್ದೇ ಅಲ್ಲದೆ, ಗಾಯಗೊಂಡ ಎಲ್ಲರಿಗೂ ತಮ್ಮ ಕ್ಲಿನಿಕ್ ನಲ್ಲಿ ಚಿಕಿತ್ಸೆ ನೀಡಿದರು.

1996ರಲ್ಲಿ ಬೆಂಗಳೂರಿನಲ್ಲಿ ವಿಶ್ವಸುಂದರಿ ಸ್ಪರ್ಧೆಯ ವಿರುದ್ಧ ನಡೆದ ಪ್ರತಿಭಟನೆಯಲ್ಲೂ ಪಾಲ್ಗೊಂಡಿದ್ದರು.2002ರಲ್ಲಿ ಭಾರತದ ರಾಷ್ಟ್ರಪತಿ ಸ್ಥಾನಕ್ಕೆ ಸ್ಪರ್ಧಿಸಿದ್ದು ಲಕ್ಷ್ಮಿ ಸೆಹಗಲ್ ಅವರ ಇಳಿವಯಸ್ಸಿನ ಅಭಿಯಾನಗಳಲ್ಲಿ ಪ್ರಮುಖ ಎನಿಸಿದೆ. ಸಿಪಿಐ (ಎಂ) ಮತ್ತು ಇತರ ಕಮ್ಯುನಿಸ್ಟ್ ವಿಚಾರಧಾರೆಯ ಪಕ್ಷಗಳ ಒಮ್ಮತದ ಅಭ್ಯರ್ಥಿಯಾಗಿ ಲಕ್ಷ್ಮಿಸೆಹಗಲ್ ಸ್ಪರ್ಧೆಗೆ ಇಳಿದು, ಸಾಕಷ್ಟು ಓಡಾಡಿ ಪ್ರಚಾರಾಭಿಯಾನ ಕೈಗೊಂಡರು.

ಆದರೇನು ಮಾಡುವುದು! ಅವರ ಎದುರಾಳಿಯಾಗಿ ಆಡಳಿತ ಪಕ್ಷದ ಬೆಂಬಲದೊಂದಿಗೆ ಡಾ. ಎಪಿಜೆ ಅಬ್ದುಲ್ ಕಲಾಂ ಸ್ಪರ್ಧಿಸಿ ದ್ದರು! ತಾವು ಗೆಲ್ಲುವುದು ಅಸಂಭವ ಎಂದು ತಿಳಿದಿದ್ದರೂ, ೮೮ರ ಇಳಿವಯಸ್ಸಿನಲ್ಲೂ ಹೋರಾಟದ ಮನೋಭಾವದಿಂದಲೇ ಲಕ್ಷ್ಮಿ ದಿಟ್ಟತನದ ಪ್ರಚಾರಾಭಿಯಾನ ನಡೆಸಿದರು.

ಹಲವು ದಶಕಗಳಿಂದ ಕಮ್ಯುನಿಸ್ಟ್ ಪಕ್ಷದೊಂದಿಗೆ ಗುರುತಿಸಿಕೊಂಡಿದ್ದ ಅವರು, ಕೊನೆಯ ತನಕವೂ ತಾವು ನಂಬಿದ್ದನ್ನೇ ಪಾಲಿಸಿಕೊಂಡು ಬಂದದ್ದು ವಿಶೇಷ. ರಾಷ್ಟ್ರಪತಿ ಚುನಾವಣೆ ನಡೆದು ಅಬ್ದುಲ್ ಕಲಾಂರು ಆಯ್ಕೆಗೊಂಡ ನಂತರ, ಲಕ್ಷ್ಮಿಯವರು ಕಾನ್‌ಪುರಕ್ಕೆ ವಾಪಸಾಗಿ ಎಂದಿನಂತೆ ಜನಸೇವೆಯನ್ನು ಮುಂದು ವರಿಸಿದರು. ನಂಬಿದ ಸಿದ್ಧಾಂತಕ್ಕೆ ಬದ್ಧರಾಗಿ, ಜನಸಾಮಾನ್ಯರಿಗೆ ವೈದ್ಯಕೀಯ ಸೇವೆ ನೀಡುವುದನ್ನು ಕೊನೆತನಕವೂ ಮುಂದುವರಿಸಿದ ಧೀಮಂತ ಮಹಿಳೆಯಾಗಿ ಅವರನ್ನು ನಾವಿಂದು ಗುರುತಿಸಬಹುದು.

ಲಕ್ಷ್ಮಿ ಸೆಹಗಲ್ ಅವರು ಮೃತರಾಗುವ ಹಿಂದಿನ ವಾರದ ತನಕವೂ ತಮ್ಮ ಕ್ಲಿನಿಕ್‌ನಲ್ಲಿ ಜನರ ತಪಾಸಣೆ ಮಾಡುತ್ತಿದ್ದರು. 2012ರಲ್ಲಿ ಇಹಲೋಕ ತ್ಯಜಿಸಿದಾಗ ಅವರಿಗೆ ೯೮ ವರ್ಷ ವಯಸ್ಸು.

ಇದನ್ನೂ ಓದಿ: Shashidhara Halady Column: ಹಕ್ಕಿ ಫೋಟೋ ತೆಗೆಯದೇ ವಾಪಸಾದೆ !

Kichcha Sudeep and Rajath Kishan
7:31 AM January 29, 2025

Rajath BBK 11: ಫಿನಾಲೆಯಲ್ಲಿ ಯುವನ್​ಗೆ ಸುದೀಪ್ ಗಿಫ್ಟ್ ಕೊಟ್ಟ ಚೈನ್ ಬೆಲೆ ಎಷ್ಟು?, ರಜತ್ ಏನಂದ್ರು?

Bus accident
6:06 PM January 25, 2025

Bus Accident: ಬಸ್‌ನಿಂದ ತಲೆ ಹೊರ ಹಾಕಿದ ಮಹಿಳೆ; ಲಾರಿ ಡಿಕ್ಕಿಯಾಗಿ ತುಂಡಾಗಿ ಬಿದ್ದ ರುಂಡ!

Robbery
3:26 PM January 28, 2025

Robbery: ತಿಪಟೂರು ಎಪಿಎಂಸಿ ಮಾರುಕಟ್ಟೆಯಿಂದ 3,635 ಕೆಜಿ ಕೊಬ್ಬರಿ ಹೊತ್ತೊಯ್ದ ಕಳ್ಳರು

Lokayukta Raid in T.Begur
10:22 PM January 24, 2025

Lokayukta Raid: 5 ಬಾರಿ ಸಸ್ಪೆಂಡ್‌ ಆದ್ರೂ ತೀರದ ಲಂಚದ ದಾಹ; 20 ಸಾವಿರ ಲಂಚ ಪಡೆಯುವಾಗ ಸಿಕ್ಕಿಬಿದ್ದ ಟಿ.ಬೇಗೂರು ಪಿಡಿಒ

Student dies 1
8:51 PM January 18, 2025

Heart Attack: ಕಾಲೇಜು ಮುಗಿಸಿ ಹೋಗುವಾಗ ಹೃದಯಾಘಾತವಾಗಿ ವಿದ್ಯಾರ್ಥಿನಿ ಸಾವು

Three labourers brutally assaulted by brick kiln owner
1:53 PM January 20, 2025

Assault case: ಮೂವರು ಕಾರ್ಮಿಕರ ಮೇಲೆ ಇಟ್ಟಿಗೆ ಭಟ್ಟಿ ಮಾಲೀಕ ಮಾರಣಾಂತಿಕ ಹಲ್ಲೆ; ಕೆಲಸಕ್ಕೆ ಬರುವುದು ವಿಳಂಬವಾಗಿದ್ದಕ್ಕೆ ರಾಕ್ಷಸಿ ಕೃತ್ಯ!

Saif Ali Khan, Ibrahim
2:50 PM January 16, 2025

Saif Ali Khan: 1,200 ಕೋಟಿ ರೂ. ಆಸ್ತಿಗಳ ಒಡೆಯ ಸೈಫ್‌ ಆಲಿ ಖಾನ್‌ನನ್ನು‌ ಆಟೋದಲ್ಲಿ ಆಸ್ಪತ್ರೆಗೆ ಕರೆದೊಯ್ದ ಪುತ್ರ ಇಬ್ರಾಹಿಂ; ಕಾರಣವೇನು?

BBK 11 Final Elimination (1)
7:49 PM January 25, 2025

BBK 11 Final: ಬಿಗ್ ಬಾಸ್ ಫಿನಾಲೆಯಲ್ಲಿ ನಡೆಯಿತು ಎರಡು ಶಾಕಿಂಗ್ ಎಲಿಮಿನೇಷನ್: ಔಟ್ ಆಗಿದ್ದು ಇವರೇ

Hanumantha BBK 11 Winner
8:44 PM January 26, 2025

BBK 11 Winner: ಅಧಿಕೃತ ಘೋಷಣೆಗು ಮುನ್ನವೇ ರಿವೀಲ್ ಆಯ್ತು ಬಿಗ್ ಬಾಸ್ ಸೀಸನ್ 11ರ ವಿನ್ನರ್ ಯಾರೆಂದು: ಇವರೇ ನೋಡಿ

Saif ali Khan (1)
9:38 AM January 18, 2025

Saif Ali Khan: ರಕ್ತಸಿಕ್ತವಾದ ಬಟ್ಟೆ, ಸಂಪೂರ್ಣ ಅಸ್ವಸ್ಥರಾಗಿದ್ದ ಸೈಫ್‌! ಆ ರಾತ್ರಿ ನಡೆದಿದ್ದಾದರೂ ಏನು? ಆಟೋ ಡ್ರೈವರ್‌ ಹೇಳಿದ್ದೇನು?