Roopa Gururaj Column: ದೇವಶಯನಿ ಏಕಾದಶಿ ಮತ್ತು ಚಾತುರ್ಮಾಸ್ಯದ ಕಥೆಗಳು
ವಾಮನನು ಎರಡು ಹೆಜ್ಜೆಗಳಿಂದ ಇಡೀ ಭೂಮಿ ಮತ್ತು ಆಕಾಶವನ್ನು ಅಳೆದನು. ಮೂರನೇ ಹೆಜ್ಜೆಗೆ ಜಾಗವಿಲ್ಲದಿದ್ದಾಗ, ಬಲಿ ಚಕ್ರವರ್ತಿಯು ತನ್ನ ಶಿರಸ್ಸನ್ನೇ ನೀಡಿದನು. ಬಲಿಯ ಈ ನಿಷ್ಠೆ ಮತ್ತು ಭಕ್ತಿಗೆ ಪ್ರಸನ್ನನಾದ ವಿಷ್ಣುವು, ಆತನಿಗೆ ಪಾತಾಳ ಲೋಕದ ಒಡೆಯನನ್ನಾಗಿ ಮಾಡಿ, ತಾನೂ ಸಹ ಆತನ ಭಕ್ತಿಗೆ ಮೆಚ್ಚಿ ನಿನಗೇನು ವರ ಬೇಕು? ಎಂದು ಕೇಳಿದನು.
-
ಒಂದೊಳ್ಳೆ ಮಾತು
ಶ್ರೀಮಹಾವಿಷ್ಣುವು ವರ್ಷದಲ್ಲಿ ನಾಲ್ಕು ತಿಂಗಳು ಏಕೆ ನಿದ್ರಿಸುತ್ತಾನೆ ಎಂಬುದರ ಕುರಿತು ಒಂದು ಸುಂದರವಾದ ಪೌರಾಣಿಕ ಕಥೆಯಿದೆ. ಬಹಳ ವರ್ಷಗಳ ಹಿಂದೆ ಬಲಿ ಚಕ್ರವರ್ತಿ ಎಂಬ ದಾನಶೂರ ಅಸುರರಾಜನು ಮೂರೂ ಲೋಕಗಳನ್ನು ತನ್ನ ಹತೋಟಿಗೆ ತೆಗೆದುಕೊಂಡಿದ್ದನು. ಅವನ ಧರ್ಮ ಮತ್ತು ದಾನಗುಣವನ್ನು ಮೆಚ್ಚಿದ ಶ್ರೀ ಮಹಾವಿಷ್ಣುವು ‘ವಾಮನ’ ಅವತಾರವೆತ್ತಿ, ಆತನ ಬಳಿ ಮೂರು ಹೆಜ್ಜೆ ಭೂಮಿಯನ್ನು ದಾನವಾಗಿ ಕೇಳಿದನು.
ವಾಮನನು ಎರಡು ಹೆಜ್ಜೆಗಳಿಂದ ಇಡೀ ಭೂಮಿ ಮತ್ತು ಆಕಾಶವನ್ನು ಅಳೆದನು. ಮೂರನೇ ಹೆಜ್ಜೆಗೆ ಜಾಗವಿಲ್ಲದಿದ್ದಾಗ, ಬಲಿ ಚಕ್ರವರ್ತಿಯು ತನ್ನ ಶಿರಸ್ಸನ್ನೇ ನೀಡಿದನು. ಬಲಿಯ ಈ ನಿಷ್ಠೆ ಮತ್ತು ಭಕ್ತಿಗೆ ಪ್ರಸನ್ನನಾದ ವಿಷ್ಣುವು, ಆತನಿಗೆ ಪಾತಾಳ ಲೋಕದ ಒಡೆಯನನ್ನಾಗಿ ಮಾಡಿ, ತಾನೂ ಸಹ ಆತನ ಭಕ್ತಿಗೆ ಮೆಚ್ಚಿ ನಿನಗೇನು ವರ ಬೇಕು? ಎಂದು ಕೇಳಿದನು. ಅಗ ಬಲಿ ಚಕ್ರವರ್ತಿ ಯು, ಹೇ ಪ್ರಭು, ನೀವು ಯಾವಾಗಲೂ ನನ್ನ ಪಾತಾಳ ಲೋಕದ ಅರಮನೆಯ ಬಾಗಿಲಿನಲ್ಲಿಯೇ ನೆಲೆಸಿ, ನನ್ನನ್ನು ಕಾಯುತ್ತಿರ ಬೇಕು ಎಂದು ಪ್ರಾರ್ಥಿಸಿದನು.
ಭಕ್ತನ ಮಾತಿಗೆ ಬದ್ಧನಾದ ವಿಷ್ಣುವು ಪಾತಾಳದ ಉಳಿದುಕೊಂಡನು. ಇತ್ತ ವೈಕುಂಠದಲ್ಲಿ ಲಕ್ಷ್ಮಿ ದೇವಿಗೆ ತನ್ನ ಪತಿಯನ್ನು ಅಗಲಿರಲು ಸಾಧ್ಯವಾಗಲಿಲ್ಲ. ಆಕೆ ಉಪಾಯ ಮಾಡಿ, ಒಬ್ಬ ಬಡ ಮಹಿಳೆಯ ವೇಷದಲ್ಲಿ ಪಾತಾಳ ಲೋಕಕ್ಕೆ ತೆರಳಿ ಬಲಿ ಚಕ್ರವರ್ತಿಗೆ ರಕ್ಷಾಸೂತ್ರವನ್ನು ಕಟ್ಟಿ ಆತನನ್ನು ಸಹೋದರನೆಂದು ಸ್ವೀಕರಿಸಿದಳು.
ಇದನ್ನೂ ಓದಿ: Roopa Gururaj Column: ಕುಮಾರವ್ಯಾಸ ಭಾರತ: ಛಲ ಮತ್ತು ಭಕ್ತಿಯ ಅಮರ ಕಥೆ
ಪ್ರತಿಯಾಗಿ ಬಲಿ ಚಕ್ರವರ್ತಿಯು, ಸಹೋದರಿ, ನಿನಗೆ ಏನು ವರ ಬೇಕು? ಎಂದು ಕೇಳಿದಾಗ, ಲಕ್ಷ್ಮಿ ದೇವಿಯು ತನ್ನ ಪತಿಯಾದ ವಿಷ್ಣುವನ್ನು ವೈಕುಂಠಕ್ಕೆ ಮರಳಿ ಸುವಂತೆ ಕೇಳಿಕೊಂಡಳು. ಬಲಿ ಚಕ್ರವರ್ತಿಯು ತನ್ನ ಮಾತಿನಂತೆ ವಿಷ್ಣುವನ್ನು ಕಳುಹಿಸಲು ಒಪ್ಪಿದನು. ಆದರೆ, ಭಕ್ತನ ಪ್ರೀತಿ ಯನ್ನು ಗೌರವಿಸಲು ಮಹಾವಿಷ್ಣುವು ಒಂದು ನಿಶ್ಚಯಕ್ಕೆ ಬಂದನು: ಪ್ರತಿ ವರ್ಷ ಆಷಾಢ ಮಾಸದ ‘ದೇವಶಯನಿ ಏಕಾದಶಿ’ ಯಿಂದ ಕಾರ್ತಿಕ ಮಾಸದ ‘ಪ್ರಬೋಧಿನಿ ಏಕಾದಶಿ’ಯವರೆಗೆ (ನಾಲ್ಕು ತಿಂಗಳುಗಳು) ನಾನು ಪಾತಾಳ ಲೋಕದಲ್ಲಿ ಯೋಗನಿದ್ರೆ ಯಲ್ಲಿದ್ದು, ಬಲಿ ಚಕ್ರವರ್ತಿಯ ಅರಮನೆ ಯನ್ನು ಕಾಯುತ್ತೇನೆ. ಈ ನಾಲ್ಕು ತಿಂಗಳ ಅವಧಿಯನ್ನೇ ಚಾತುರ್ಮಾಸ್ಯ ಎಂದು ಕರೆಯಲಾಗು ತ್ತದೆ.
ವಿಷ್ಣುವಿನ ಈ ಯೋಗ ನಿದ್ರೆಯು ಸಾಮಾನ್ಯ ನಿದ್ರೆಯಲ್ಲ, ಬದಲಿಗೆ ಆಳವಾದ ಧ್ಯಾನ ಸ್ಥಿತಿ. ಈ ಸಮಯ ದಲ್ಲಿ ಪ್ರಕೃತಿಯಲ್ಲಿ ಮಳೆಗಾಲವಿರುವುದರಿಂದ ಹೊರ ಗಿನ ಪ್ರಯಾಣ ಮತ್ತು ಆಡಂಬರದ ಶುಭ ಸಮಾ ರಂಭಗಳನ್ನು ಕಡಿಮೆ ಮಾಡಿ, ಪ್ರತಿಯೊಬ್ಬರೂ ತಮ್ಮ ಒಳಗಿನ ಆತ್ಮಾವಲೋಕನ, ಜಪ, ತಪ, ಉಪವಾಸ ಮತ್ತು ದಾನಧರ್ಮಗಳಲ್ಲಿ ತೊಡಗಿಸಿ ಕೊಳ್ಳಬೇಕು ಎಂಬುದೇ ಇದರ ನಿಜವಾದ ಸಂದೇಶ. ಈ ಸಮಯದಲ್ಲಿ ಶ್ರೀ ಮಹಾವಿಷ್ಣುವು ಯೋಗನಿದ್ರೆ ಯಲ್ಲಿರುವುದರಿಂದ ಜಗತ್ತಿನ ರಕ್ಷಣೆಯ ಜವಾಬ್ದಾರಿಯನ್ನು ಪರಮಶಿವನು ವಹಿಸಿಕೊಳ್ಳುತ್ತಾನೆ ಎಂಬ ನಂಬಿಕೆಯಿದೆ.
ಮಳೆ ಲದ ಸಮಯವಾದ ಈ ಅವಧಿಯಲ್ಲಿ ಜೀವ ಹಿಂಸೆಯನ್ನು ತಡೆಯಲು ಸನ್ಯಾಸಿಗಳು ಒಂದೇ ಸ್ಥಳದಲ್ಲಿ ನೆಲೆಸಿ ಜಪ-ತಪಗಳಲ್ಲಿ ತೊಡಗಿದರೆ, ಸಾಮಾನ್ಯ ಜನರು ಮದುವೆ-ಗೃಹಪ್ರವೇಶ ದಂತಹ ಬಾಹ್ಯ ಶುಭ ಸಮಾರಂಭಗಳನ್ನು ಬದಿಗೊತ್ತಿ ಶಾಕ, ದಧಿ, ಕ್ಷೀರ ಹಾಗೂ ದ್ವಿದಳ ಎಂಬ ನಾಲ್ಕು ವ್ರತಗಳ ಮೂಲಕ ಸಾತ್ವಿಕ ಆಹಾರ ಪಾಲನೆ ಮಾಡುತ್ತಾರೆ.
ಒಟ್ಟಾರೆಯಾಗಿ, ಚಾತು ರ್ಮಾಸ್ಯವು ಕೇವಲ ಧಾರ್ಮಿಕ ಆಚರಣೆಯಷ್ಟೇ ಅಲ್ಲದೆ, ದೇಹದ ಆರೋಗ್ಯ ವನ್ನು ಕಾಯ್ದುಕೊಳ್ಳಲು ಹಾಗೂ ಅಂತರಂಗದ ಆತ್ಮಾವಲೋಕನ ಮತ್ತು ಆಧ್ಯಾತ್ಮಿಕ ಸಾಧನೆಗೆ ಮೀಸಲಾದ ಅತ್ಯಂತ ಮಹತ್ವದ ಕಾಲವಾಗಿದೆ.
ನಮ್ಮ ಸನಾತನ ಧರ್ಮ ನಮಗೆ ಕೊಟ್ಟಿರುವ ಅನೇಕ ಆಚರಣೆಗಳು ಮಾನಸಿಕವಾಗಿ, ದೈಹಿಕವಾಗಿ, ಬೌದ್ಧಿಕವಾಗಿ ನಮ್ಮನ್ನು ಮನುಷ್ಯರಾಗಿ ಮತ್ತಷ್ಟು ಪರಿಪಕ್ವ ಗೊಳಿಸುತ್ತದೆ. ಇವುಗಳ ಮಹತ್ವ ಅರಿತು ಆಚರಿಸಿದಾಗ ಅದರ ಸಂಪೂರ್ಣ ಪ್ರಯೋಜನವನ್ನು ನಾವು ಪಡೆಯಲು ಸಾಧ್ಯ. ಎಲ್ಲವನ್ನೂ ಕಂದಾಚಾರ, ಮೌಡ್ಯ ಆಚರಣೆ ಎಂದು ಹೀಗಳೆಯುವ ಮುನ್ನ ಅವುಗಳ ಹಿನ್ನೆಲೆ ಯನ್ನು ತಿಳಿಯೋಣ.