ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Srivathsa Joshi Column: ಥ್ಯಾಂಕ್ಸ್‌ʼಗಿವಿಂಗ್‌ ಹೊಸ್ತಿಲಲ್ಲಿ ಕೃತಜ್ಞತೆಯ ಕಥಾನಕಗಳು

ಶಾಲಾ ಮಕ್ಕಳಿಗೂ ಕೃತಜ್ಞತೆಯ ಮಹತ್ತ್ವವನ್ನು- ಸ್ಕೂಲ್‌ಬಸ್ ಡ್ರೈವರ್ ಅಪ್ರೀಸಿಯೇಷನ್, ಲೈಬ್ರೇರಿಯನ್ ಅಪ್ರೀಸಿಯೇಷನ್ ಅಂತೆಲ್ಲ ಚಟುವಟಿಕೆಗಳ ಮೂಲಕ ಕಲಿಸುತ್ತಾರೆ. ಥ್ಯಾಂಕ್ಸ್‌ ಗಿವಿಂಗ್‌ಗೆ ಆರಂಭವಾಗುವ ಉಡುಗೊರೆ ವಿನಿಮಯ ಕ್ರಿಸ್ಮಸ್ ಮತ್ತು ಜನವರಿ ೧ರ ಹೊಸ ವರ್ಷಾಚರಣೆವರೆಗೂ ಮುಂದುವರಿಯುತ್ತದೆ.

ಥ್ಯಾಂಕ್ಸ್‌ʼಗಿವಿಂಗ್‌ ಹೊಸ್ತಿಲಲ್ಲಿ ಕೃತಜ್ಞತೆಯ ಕಥಾನಕಗಳು

-

ತಿಳಿರು ತೋರಣ

ಅಮೆರಿಕದಲ್ಲಿ ಈ ವಾರ ‘ಥ್ಯಾಂಕ್ಸ್‌ಗಿವಿಂಗ್’ ಹಬ್ಬ. ಪ್ರತಿವರ್ಷ ನವೆಂಬರ್ ತಿಂಗಳ ನಾಲ್ಕನೆ ಯ ಗುರುವಾರ ಇದರ ಆಚರಣೆ. 17ನೆಯ ಶತಮಾನದಲ್ಲಿ ಯುರೋಪ್‌ನಿಂದ ಬಂದ ವಲಸೆಗಾರರು ಇಲ್ಲಿನ ಮೂಲ ನಿವಾಸಿಗಳಿಗೆ ಧನ್ಯವಾದ ಸಲ್ಲಿಸುತ್ತ ಅವರನ್ನೂ ಸೇರಿಸಿ ಕೊಂಡು ಮೊದಲು ಈ ಹಬ್ಬವನ್ನು ಆಚರಿಸಿದರಂತೆ. ಆಮೇಲೆ ವಲಸೆಗಾರರು ಹೆಚ್ಚಿದಂತೆಲ್ಲ, ವಸಾಹತುಗಳು ಸ್ಥಾಪನೆಯಾದಂತೆಲ್ಲ ಹಬ್ಬದಾಚರಣೆಯಲ್ಲಿ ಮೂಲ ನಿವಾಸಿಗಳನ್ನು ಕೈಬಿಟ್ಟದ್ದೂ ಇದೆಯಂತೆ.

1863ರಲ್ಲಿ ಅಬ್ರಹಾಂ ಲಿಂಕನ್ ಅಧ್ಯಕ್ಷನಾಗಿದ್ದಾಗ ಇದು ರಾಷ್ಟ್ರವ್ಯಾಪಿಯಾಗಿ ಆಚರಣೆಯ ಸ್ವರೂಪ ಪಡೆಯಿತು ಎನ್ನುತ್ತದೆ ಹಬ್ಬದ ಇತಿಹಾಸ. ವಲಸೆನಾಡಿನಲ್ಲಿ ಹೊಟ್ಟೆಪಾಡಿಗೆ ಆಹಾರ ದೊರಕಿಸಿಕೊಟ್ಟಿದ್ದಕ್ಕೆ ದೇವರಿಗೆ ಕೃತಜ್ಞತಾಪೂರ್ವಕ ವಂದನೆ ಸಲ್ಲಿಸುವುದು ಈ ಹಬ್ಬದ ಒಟ್ಟಾರೆ ಆಶಯ.

ಉತ್ತಮ ಫಸಲು ನೀಡಿದ ಭೂಮಿತಾಯಿಯನ್ನು, ಪ್ರಾಣ ರಕ್ಷಿಸಿದ ಪ್ರಕೃತಿ ಮಾತೆಯನ್ನು ವಂದಿಸುವ ಆಚರಣೆಗಳು ಎಲ್ಲ ಸಂಸ್ಕೃತಿಗಳಲ್ಲೂ ಇವೆಯೆನ್ನುವುದಕ್ಕೆ ಇದೊಂದು ಉತ್ತಮ ನಿದರ್ಶನ. ಅಮೆರಿಕನ್ನರಲ್ಲೂ ಕೌಟುಂಬಿಕ ಮೌಲ್ಯಗಳು ಜೀವಂತವಾಗಿವೆ ಯೆಂದು ಗೊತ್ತಾಗುವುದು ಥ್ಯಾಂಕ್ಸ್‌ಗಿವಿಂಗ್ ಹಬ್ಬದಲ್ಲೇ.

ಬಂಧುಬಾಂಧವರೆಲ್ಲ ಸೇರಿ ಹಬ್ಬ ಆಚರಿಸುತ್ತಾರೆ. ಔತಣಕೂಟ ಏರ್ಪಡಿಸುತ್ತಾರೆ. ಟರ್ಕಿ ಹಕ್ಕಿಯ ಮಾಂಸದ ಅಡುಗೆಯನ್ನು ಚಪ್ಪರಿಸುತ್ತಾರೆ. ಸಿಹಿಗುಂಬಳದ ‘ಪಂಪ್‌ಕಿನ್ ಪೈ’ ಸವಿಯುತ್ತಾರೆ. ಫುಟ್‌ಬಾಲ್ ಮ್ಯಾಚ್‌ಗಳಲ್ಲಿ, ಬಣ್ಣಬಣ್ಣದ ಪರೇಡ್‌ಗಳಲ್ಲಿ ಭಾಗವಹಿಸಿ/ಅವುಗಳನ್ನು ವೀಕ್ಷಿಸಿ ಆನಂದಿಸುತ್ತಾರೆ.

ಇದನ್ನೂ ಓದಿ: Srivathsa Joshi Column: ರಾ.ಹ.ದೇಶಪಾಂಡೆಯವರ ಕ್ಷಮೆ ಕೋರಿ ಸಿರಿಗನ್ನಡಂ ಬೇಗಲ್ʼಗೆ !

ಕುಟುಂಬಕ್ಕಷ್ಟೇ ಸೀಮಿತವಾಗದೆ ಮಿತ್ರವಲಯದಲ್ಲಿ, ವ್ಯಾಪಾರಿಗಳು ಗ್ರಾಹಕರೊಂದಿಗೆ, ಮಾಲೀಕರು ನೌಕರರೊಂದಿಗೆ- ಪರಸ್ಪರ ಧನ್ಯವಾದಗಳನ್ನು ಅರ್ಪಿಸಿ ಶುಭಾಶಯ ವಿನಿಮ ಯ ಮಾಡಿಕೊಳ್ಳುತ್ತಾರೆ. ಉಳ್ಳವರು ಇಲ್ಲದವರಿಗೆ ನೆರವಾಗುವ ಚಟುವಟಿಕೆಗಳನ್ನು ಹಮ್ಮಿ ಕೊಳ್ಳುತ್ತಾರೆ.

ಶಾಲಾ ಮಕ್ಕಳಿಗೂ ಕೃತಜ್ಞತೆಯ ಮಹತ್ತ್ವವನ್ನು- ಸ್ಕೂಲ್‌ಬಸ್ ಡ್ರೈವರ್ ಅಪ್ರೀಸಿಯೇಷನ್, ಲೈಬ್ರೇರಿಯನ್ ಅಪ್ರೀಸಿಯೇಷನ್ ಅಂತೆಲ್ಲ ಚಟುವಟಿಕೆಗಳ ಮೂಲಕ ಕಲಿಸುತ್ತಾರೆ. ಥ್ಯಾಂಕ್ಸ್‌ಗಿವಿಂಗ್‌ಗೆ ಆರಂಭವಾಗುವ ಉಡುಗೊರೆ ವಿನಿಮಯ ಕ್ರಿಸ್ಮಸ್ ಮತ್ತು ಜನವರಿ ೧ರ ಹೊಸ ವರ್ಷಾಚರಣೆವರೆಗೂ ಮುಂದುವರಿಯುತ್ತದೆ.

ಒಟ್ಟಿನಲ್ಲಿ ಹೃದಯವಂತಿಕೆಯು ಹಸನಾಗಿ ವ್ಯಕ್ತವಾಗುವ ‘ಥ್ಯಾಂಕ್ಸ್‌ಗಿ ವಿಂಗ್’ ಎಂಬ ಪದಪುಂಜವೇ ಒಂದು ರೀತಿಯ ವಿಶಿಷ್ಟ ಹಿತಾನುಭವ ಒದಗಿಸುತ್ತದೆ. ಧನ್ಯತಾಭಾವ ಸುರಿಸುತ್ತದೆ. ಆದ್ದರಿಂದಲೇ ಈ ಹಬ್ಬ ನಮ್ಮಂಥ ಈಗಿನ ವಲಸೆಗಾರರಿಗೂ ಅರ್ಥಪೂರ್ಣ ವೆನಿಸುತ್ತದೆ.

ಕೃತಜ್ಞತೆಯೆಂಬ ಗುಣವೇ ಹಾಗೆ. ಪ್ರಪಂಚವೆಲ್ಲ ಕೃತಘ್ನರೇ ತುಂಬಿದ್ದಾರೇನೋ ಅಂತನಿ ಸುವ ಈ ಕಾಲಘಟ್ಟದಲ್ಲಿ ಯಾರೇ ಆದರೂ ಕೃತಜ್ಞತೆಯ ಚಿಕ್ಕದೊಂದು ನಡೆಯನ್ನು ತೋರಿದರೂ ಅವರ ಬಗ್ಗೆ ಹೆಮ್ಮೆಯೆನಿಸುತ್ತದೆ. ಹೃದಯ ಬೆಚ್ಚಗಾದ ಅನುಭವವಾಗುತ್ತದೆ. ಅಂಥದೊಂದು ಕಥಾನಕವನ್ನು, ನನಗೆ ತುಂಬ ಇಷ್ಟದ್ದೆಂದು ಇಲ್ಲಿ ಮತ್ತೊಮ್ಮೆ ನೆನಪಿಸಿ ಕೊಳ್ಳುತ್ತಿದ್ದೇನೆ.

Screenshot_9 ಋ

ಇದನ್ನು ಫೇಸ್‌ಬುಕ್/ವಾಟ್ಸ್ಯಾಪ್/ಇಮೇಲ್ ಫಾರ್ವರ್ಡ್ ಗಳಲ್ಲಿ ನೀವು ಈಗಾಗಲೇ ಓದಿರುವ ಸಾಧ್ಯತೆಯಿದೆ. ಆದರೂ ಆಗೊಮ್ಮೆ ಈಗೊಮ್ಮೆ ಇಂಥವನ್ನು ಓದುತ್ತಿರಬೇಕು ಎಂದು ನನ್ನ ಅಭಿಪ್ರಾಯ. ಮೊದಲಿಗೆ ಕಥಾನಕ, ಆಮೇಲೆ ಅದರ ಅಸಲಿಯತ್ತಿನ ಕೆಲವು ವಿವರಗಳು: ಬಡಹುಡುಗನೊಬ್ಬ ಮನೆಮನೆಗೆ ಹೋಗಿ ಸಣ್ಣಪುಟ್ಟ ಸರಕುಗಳನ್ನು ಮಾರಿ ಕೊಂಡು ಅದರಿಂದ ಬಂದ ದುಡ್ಡನ್ನು ತನ್ನ ಶಾಲೆಯ ಫೀಸ್‌ಗೆ ಹೊಂದಿಸಿ ಜೀವನ ನಡೆಸುತ್ತಿದ್ದನು.

ಒಂದು ದಿನ ಮಟಮಟ ಮಧ್ಯಾಹ್ನದ ವೇಳೆ. ಬಿಸಿಲೇರಿದ್ದರೂ ಇನ್ನೂ ಹೆಚ್ಚಿನ ವ್ಯಾಪಾರ ಆಗಿರಲಿಲ್ಲ. ಹುಡುಗನ ಹೊಟ್ಟೆ ಹಸಿದಿತ್ತು. ಜೇಬಿನಲ್ಲಿದ್ದುದು ಬರೀ ಹತ್ತು ಸೆಂಟ್ಸ್ ಮಾತ್ರ. ಮುಂದೆ ಸಿಗುವ ಮನೆಯವರ ಬಳಿ ‘ಊಟ ಬಡಿಸುತ್ತೀರಾ?’ ಎಂದು ಕೇಳಬೇಕೆಂದುಕೊಂಡ. ಆದರೆ ಅಲ್ಲಿ ಪುಟ್ಟ ಹುಡುಗಿಯೊಬ್ಬಳು ಬಾಗಿಲು ತೆರೆದಾಗ ಊಟ ಬೇಡುವ ಮನಸ್ಸಾಗ ಲಿಲ್ಲ.

‘ಕುಡಿಯಲು ಸ್ವಲ್ಪ ನೀರು ಕೊಡುತ್ತೀರಾ?’ ಎಂದಷ್ಟೇ ಕೇಳಿದ, ಅದೂ ನಡುಗುವ ಧ್ವನಿ ಯಲ್ಲಿ. ಆತ ನಿಜವಾಗಿಯೂ ಹಸಿವೆಯಿಂದ ಬಳಲಿದ್ದಾನೆ ಎಂದರಿತ ಆ ಹುಡುಗಿ ನೀರಿನ ಬದಲಿಗೆ ಒಂದು ಲೋಟ ಬಿಸಿಬಿಸಿ ಹಾಲನ್ನು ತಂದು ಅವನಿಗೆ ಕುಡಿಯಲು ಕೊಟ್ಟಳು. ನಿಧಾನವಾಗಿ ಹಾಲನ್ನು ಗುಟುಕರಿಸಿ ದಣಿವಾರಿಸಿಕೊಂಡ ಹುಡುಗ ‘ಎಷ್ಟು ದುಡ್ಡು ಕೊಡಬೇಕು?’ ಎಂದು ವಿನಯದಿಂದ ಕೇಳಿದ.

‘ಇಲ್ಲ, ನಮ್ಮಮ್ಮ ಹೇಳಿಕೊಟ್ಟಿದ್ದಾರೆ, ಕರುಣೆಯಿಂದ ಮಾಡಿದ ಕೆಲಸಕ್ಕೆ ಕಾಸು ತೆಗೆದು ಕೊಳ್ಳಬಾರದು. ನೀನೇನೂ ಕೊಡುವುದು ಬೇಡ!’ ಎಂದಳು ಹುಡುಗಿ. ‘ಹಾಗಾದರೆ ನಾನು ನನ್ನ ಎದೆಯಾಳದಿಂದ ನಿಮಗೆ ಕೃತಜ್ಞತೆ ಸಲ್ಲಿಸುತ್ತೇನೆ’ ಎನ್ನುತ್ತ ಹುಡುಗ ಅಲ್ಲಿಂದ ತೆರಳಿದನು.

ಬಿಸಿಹಾಲು ಕುಡಿದು ಅವನಿಗೆ ದೈಹಿಕವಾಗಿ ಹಿತವೆನಿಸಿತ್ತು; ಅದಕ್ಕಿಂತ ಹೆಚ್ಚಾಗಿ ಆ ಮನೆ ಯವರ ಸ್ನೇಹಪರ ಔದಾರ್ಯವನ್ನು ಕಂಡು ಮನದಲ್ಲಿ ಹೊಸದೊಂದು ಹುರುಪು ಮೂಡಿತ್ತು. ದೇವರಲ್ಲಿ ನಂಬಿಕೆಯೂ ಚಿಗುರಿತ್ತು! ಅಲ್ಲಿಯವರೆಗೆ ಬಹುಕಷ್ಟದ ಬದುಕಿ ನಿಂದ ಸಾಕಷ್ಟು ಹೈರಾಣಾಗಿದ್ದ ಆ ಹುಡುಗ ಆಮೇಲೆ ಮತ್ತೂ ಕೆಲ ವರ್ಷಗಳ ಕಾಲ ದುಡಿದು ಸಂಪಾದಿಸಿ ವಿದ್ಯೆ ಗಳಿಸಿದನು.

ಡಾ.ಹೊವರ್ಡ್ ಕೆಲ್ಲಿ ಎಂಬ ಹೆಸರಿನ ಪ್ರಖ್ಯಾತ ವೈದ್ಯನಾಗಿ ಅಮೆರಿಕದ ಪೆನ್ಸಿಲ್ವೇನಿಯಾ ಸಂಸ್ಥಾನದ ಒಂದು ಪಟ್ಟಣದಲ್ಲಿ ಸುಸಜ್ಜಿತ ಚಿಕಿತ್ಸಾಲಯವನ್ನೂ ತೆರೆದನು. ಇದಾಗಿ ಕೆಲವಾರು ವರ್ಷಗಳ ನಂತರ ಒಮ್ಮೆ ಡಾ.ಕೆಲ್ಲಿಯ ಚಿಕಿತ್ಸಾಲಯಕ್ಕೆ ಒಬ್ಬ ಹೆಂಗಸು ರೋಗಿ ಯಾಗಿ ಬಂದಳು.

ಅವಳಿದ್ದ ಹಳ್ಳಿಯ ವೈದ್ಯರು ಆಕೆಯ ರೋಗವನ್ನು ಗುಣಪಡಿಸಲಾಗದೆ ಡಾ.ಕೆಲ್ಲಿಯ ಆಸ್ಪತ್ರೆಗೆ ಅವಳನ್ನು ಕಳಿಸಿದ್ದರು. ರೋಗಿಯ ಹೆಸರು ಮತ್ತು ಊರಿನ ವಿವರಗಳನ್ನು ಓದಿದಾಕ್ಷಣ ಡಾ. ಕೆಲ್ಲಿಗೆ ಒಮ್ಮೆ ವಿದ್ಯುತ್ ಸಂಚಾರವಾದಂತಾಯಿತು. ಒಡನೆಯೇ ತನ್ನ ಕುರ್ಚಿಯಿಂದೆದ್ದು ಆಸ್ಪತ್ರೆಯ ಕೆಳಅಂತಸ್ತಿನ ಕೋಣೆಯಲ್ಲಿದ್ದ ಆ ಹೆಂಗಸಿನ ಹತ್ತಿರಕ್ಕೆ ಹೋದರು. ಮಂಚದ ಮೇಲೆ ಕಳಾಹೀನವಾಗಿ ಮಲಗಿದ್ದ ಆಕೆಯ ಗುರುತು ಅವರಿಗೆ ತತ್‌ಕ್ಷಣವೇ ಸಿಕ್ಕಿತು. ಅವಳನ್ನು ಹೇಗಾದರೂ ಮಾಡಿ ಬದುಕಿಸಬೇಕೆಂಬ ಛಲ ಅವರ ಅಂತರಾಳದಲ್ಲಿ ಮೂಡಿತು.

ಮೂರ್ನಾಲ್ಕು ವಾರಗಳ ಕಾಲ ಸತತ ಚಿಕಿತ್ಸೆಯ ಬಳಿಕ ಆ ಹೆಂಗಸು ಆಸ್ಪತ್ರೆಯಿಂದ ಹೊರಡುವ ದಿನ ಬಂತು. ಅವಳ ಚಿಕಿತ್ಸೆ ಮತ್ತು ಔಷಧಗಳ ಖರ್ಚುವೆಚ್ಚದ ಪಟ್ಟಿಯನ್ನು ಆಸ್ಪತ್ರೆಯ ಸಿಬ್ಬಂದಿ ತಯಾರಿಸಿದರು. ಡಾ. ಕೆಲ್ಲಿ ಅದಕ್ಕೆ ಸಹಿ ಹಾಕಿದರು, ಜತೆಯಲ್ಲೇ ಒಂದು ಷರಾ ಬರೆದರು. ಬಿಲ್‌ನ ಒಂದು ಪ್ರತಿಯನ್ನು ರೋಗಿ ಇದ್ದ ಕೋಣೆಗೆ ಕಳಿಸಲಾ ಯಿತು.

ಅಷ್ಟು ದೀರ್ಘಾವಧಿಯ ಚಿಕಿತ್ಸೆ, ಜೀವರಕ್ಷಕ ಔಷಧಗಳು, ಕನಿಷ್ಠ ಹತ್ತಿಪ್ಪತ್ತು ಸಾವಿರ ಡಾಲರ್ ಗಳಷ್ಟಾದರೂ ಆಗಿರಬಹುದು, ತನ್ನ ಬದುಕಿನ ಸರ್ವವೂ ಆ ಮೆಡಿಕಲ್ ಬಿಲ್‌ಗೆ ಸಂದಾಯ ಆಗಬೇಕಾದೀತು ಎಂದು ಅಳುಕಿನಿಂದಲೇ ಲಕೋಟೆಯನ್ನು ತೆರೆದ ಹೆಂಗಸಿಗೆ ಒಂದು ಆಶ್ಚರ್ಯ ಕಾದಿತ್ತು. ಬಿಲ್‌ನ ಕೆಳಮೂಲೆಯಲ್ಲಿ, ಒಟ್ಟು ಮೊಬಲಗಿನ ಬಲಭಾಗ ದಲ್ಲಿ, ಡಾ. ಕೆಲ್ಲಿ ಬರೆದಿದ್ದ ಷರಾ ಏನೆಂದರೆ, ‘ಒಂದು ಲೋಟ ಬಿಸಿಬಿಸಿ ಹಾಲಿನ ರೂಪ ದಲ್ಲಿ ಪಾವತಿಯಾಗಿದೆ.

ಬಾಕಿ ಶುಲ್ಕ: ಸೊನ್ನೆ’. ಅದರ ಕೆಳಗೆ ವೈದ್ಯಲಿಪಿಯಲ್ಲಿ ಡಾ. ಕೆಲ್ಲಿ ಎಂದು ಹಸ್ತಾಕ್ಷರ. ಮೆಡಿಕಲ್ ಬಿಲ್‌ನ ಆ ಹಾಳೆಗೇ ಮುತ್ತಿಕ್ಕಿ ಗಳಗಳನೆ ಅತ್ತ ಹೆಂಗಸು ಮನದಲ್ಲೇ ದೇವರನ್ನು ನೆನೆದಳು- ‘ಕರುಣಾಳುವೇ, ನಿನ್ನ ಪ್ರೀತಿ-ಪ್ರೇಮಗಳ ಮಾಯೆ ಮನುಕುಲದಲ್ಲಿನ್ನೂ ಜೀವಂತವಾಗಿದೆ, ಹೃದಯದಿಂದ ಹೃದಯಕ್ಕೆ ಪಸರಿಸುತ್ತಿದೆ.

ನಿನಗೆ ಶರಣುಶರಣು’. ಮನಸ್ಸು-ಹೃದಯಗಳಿಗೆ ಹಾಯೆನಿಸುವ, ತಂಗಾಳಿಯ ತಂಪನೆರೆ ಯುವ ಈ ಕಥೆಯಂಥವು ಫಾರ್ವರ್ಡೆಡ್ ಮೆಸೇಜುಗಳಲ್ಲಿ ಬೇಕಾದಷ್ಟು ಬರುತ್ತಿರುತ್ತವೆ. ಬಹುತೇಕವಾಗಿ ಕಪೋಲಕಲ್ಪಿತವಾಗಿರುವವೇ ಹೆಚ್ಚು.

ಇನ್ನು ಕೆಲವು ಮಾನವೀಯತೆಯ ಹೆಸರಲ್ಲಿ ಬ್ಲಾಕ್‌ಮೈಲ್ ಮಾಡಿ ‘ಇದನ್ನು ಇಂತಿಷ್ಟು ಮಂದಿಗೆ ಶೇರ್ ಮಾಡಿ, ಇಲ್ಲಾಂದರೆ ಕಷ್ಟನಷ್ಟ ಅನುಭವಿಸಬೇಕಾಗುತ್ತದೆ!’ ಎಂದು ದಬ್ಬಾಳಿಕೆಯ ಆದೇಶವನ್ನೂ ಹೊತ್ತುಕೊಂಡು ಬರುವುದಿದೆ. ಅಂಥ ಮೆಸೇಜುಗಳಿಂದ ದಬ್ಬಾಳಿಕೆಯ ಭಾಗವನ್ನಷ್ಟೇ ನಿರ್ಲಕ್ಷಿಸಿ ಉಳಿದ ತಿರುಳನ್ನು ನಾನು ಸಂಗ್ರಹಿಸಿಡುತ್ತೇನೆ. ಈ ಕಥೆಯನ್ನು ಓದುವಾಗೆಲ್ಲ ನನಗೆ ‘ಸಂಕಷ್ಟದಲ್ಲಿರುವವನನ್ನು ಅವನ ಪೂರ್ವಸುಕೃತ ಪುಣ್ಯವೇ ರಕ್ಷಿಸುತ್ತದೆ’ ಎಂಬ ತಾತ್ಪರ್ಯದ ಸುಭಾಷಿತವೊಂದು ನೆನಪಾಗುತ್ತದೆ.

ಬಿಸಿಲಲ್ಲಿ ಅಲೆದು ಹಸಿದಿದ್ದ ಹುಡುಗನಿಗೆ ನೀರಿನ ಬದಲಿಗೆ ಒಂದು ಲೋಟ ಬೆಚ್ಚಗಿನ ಹಾಲು ಸಿಕ್ಕಿದ್ದೇ ಅವನ ಪೂರ್ವಸುಕೃತದ ಫಲವಾದರೆ, ಕುಡಿಯಲು ಹಾಲು ಕೊಟ್ಟ ಹುಡುಗಿ ದೊಡ್ಡವಳಾದ ಮೇಲೆ ಜೀವನ್ಮರಣ ಹೋರಾಟದಲ್ಲಿ ಆ ಹುಡುಗನಿಂದಲೇ ಚಿಕಿತ್ಸೆ ಪಡೆದು ಬದುಕಿಕೊಂಡದ್ದು, ಚಿಕಿತ್ಸೆಯ ಶುಲ್ಕ ಒಂದುಲೋಟ ಹಾಲಿನ ರೂಪದಲ್ಲಿ ಈಗಾಗಲೇ ಪಾವತಿಯಾಗಿದೆಯೆಂದು ವೈದ್ಯರು ಶಿಫಾರಸು ಮಾಡಿದ್ದು ನಮ್ಮ ಕಣ್ಮುಂದೆ ಯೇ ನಡೆಯಿತೇನೊ ಎನ್ನುವಂಥ ಸುಕೃತದ ಫಲ!

ಆಶ್ಚರ್ಯವೆಂದರೆ ಇದು ಕಟ್ಟುಕತೆಯಲ್ಲ. ಹೃದಯಸ್ಪರ್ಶಿ ಎನಿಸಿಕೊಳ್ಳಲು ಅಲ್ಲೊಂದಿ ಷ್ಟು ಇಲ್ಲೊಂದಿಷ್ಟು ಅತಿರಂಜನೆ-ಉತ್ಪ್ರೇಕ್ಷೆ ಇದೆಯೆಂಬುದನ್ನು ಬಿಟ್ಟರೆ ಸತ್ಯಕಥೆ. ಡಾ. ಹೊವರ್ಡ್ ಕೆಲ್ಲಿಯ ಜೀವನಚರಿತ್ರೆಯಲ್ಲಿ ಬರುವ ಈ ಕಥೆ ವ್ಯಕ್ತಿತ್ವ ವಿಕಸನದ ಪುಸ್ತಕ ಗಳಲ್ಲೂ ಪ್ರಕಟವಾಗಿದೆ. ಉಪನ್ಯಾಸಗಳಲ್ಲಿ, ಕಾರ್ಯಾಗಾರಗಳಲ್ಲಿ ಪ್ರತಿಧ್ವನಿಸಿದೆ.

ಡಾ.ಹೊವರ್ಡ್ ಕೆಲ್ಲಿ (1858-1943) ಆ ಕಾಲದ ಶ್ರೇಷ್ಠ ವೈದ್ಯರು. ಬಾಲ್ಟಿಮೊರ್ ನಲ್ಲಿರುವ ವಿಶ್ವವಿಖ್ಯಾತವಾದ ಮತ್ತು ಅಮೆರಿಕದ ಮೊತ್ತಮೊದಲ ವೈದ್ಯಕೀಯ ಸಂಶೋಧನಾ ವಿಶ್ವವಿದ್ಯಾಲಯವಾದ ‘ಜಾನ್ಸ್ ಹಾಪ್‌ಕಿನ್ಸ್’ನ ನಾಲ್ಕು ಮಂದಿ ಸಂಸ್ಥಾಪಕ ವೈದ್ಯರಲ್ಲಿ ಡಾ. ಕೆಲ್ಲಿ ಒಬ್ಬರು.

1895ರಲ್ಲಿ ಅವರು ‘ಸೀರೋಗ ಮತ್ತು ಪ್ರಸೂತಿಶಾಸ’ವನ್ನು ವಿಶ್ವವಿದ್ಯಾಲಯದಲ್ಲಿ ಆರಂಭಿಸಿ ಜೀವನದುದ್ದಕ್ಕೂ ಅದೇ ವಿಭಾಗದಲ್ಲಿ ಬೋಧಕ ಮತ್ತು ಚಿಕಿತ್ಸಕರಾಗಿದ್ದರು. ಪ್ರಸ್ತುತ ಕಥೆಯಲ್ಲಿ ಡಾ. ಕೆಲ್ಲಿಯ ವೈದ್ಯಕೀಯ ಪರಿಣತಿ ಅಥವಾ ‘ಕೈಗುಣ’ಕ್ಕಿಂತಲೂ ಹೆಚ್ಚಾಗಿ ಮೆರೆಯುವುದು ಋಣಸಂದಾಯದ ಗುಣಶ್ರೇಷ್ಠತೆ. ಡಾ. ಕೆಲ್ಲಿಯೊಂದಿಗೆ ಒಡನಾಟ ವಿದ್ದ ಔಡ್ರೆ ಡೇವಿಸ್ ಎಂಬ ಲೇಖಕ ಕೆಲ್ಲಿಯ ಜೀವನಚರಿತ್ರೆ ಬರೆದಿದ್ದಾನೆ. ಅದರಲ್ಲಿ ಕೆಲ್ಲಿಯ ಡೈರಿಯಿಂದ ಉದ್ಧೃತವಾದ ಅಂಶಗಳೂ ಇವೆ. ಅವುಗಳಲ್ಲೊಂದು, ‘ಹಾಲಿನ ಲೋಟದಿಂದ ಹಾಸ್ಪಿಟಲ್ ಬಿಲ್ ಚುಕ್ತಾ’ ಆದ ಈ ಕಥೆ.

ಆದರೆ ಕಥೆಯ ಸತ್ಯರೂಪವಾಗಿ ನಾವು ಕೆಲ ಅಂಶಗಳನ್ನು ಗಮನಿಸಬೇಕು. ಡೇವಿಸ್ ಬರೆದ ಜೀವನಚರಿತ್ರೆಯ ಪ್ರಕಾರ, ಹೊವರ್ಡ್ ಕೆಲ್ಲಿ ಹುಡುಗನಾಗಿದ್ದಾಗ ಬಡತನದಲ್ಲೇನೂ ಇರಲಿಲ್ಲ. ಶ್ರೀಮಂತ ಮನೆತನದಿಂದ ಬಂದ ಅವನಿಗೆ ಮನೆಮನೆಗೆ ಹೋಗಿ ವಸ್ತುಗಳ ಮಾರಾಟಮಾಡಿ ದುಡ್ಡುಸಂಪಾದಿಸುವ ಅಗತ್ಯವಿರಲಿಲ್ಲ.

ವಿದ್ಯಾಭ್ಯಾಸ, ಊಟ, ವಸತಿಯ ವೆಚ್ಚವಷ್ಟೇ ಅಲ್ಲದೆ ತಿಂಗಳಿಗೆ ಐದು ಡಾಲರ್ ‘ಪಾಕೆಟ್ ಮನಿ’ ಸಹ ಕೆಲ್ಲಿಯ ಕಿಸೆಗೆ ಸೇರುತ್ತಿತ್ತಂತೆ. ಇಪ್ಪತ್ತೊಂದನೇ ವರ್ಷದ ಹುಟ್ಟುಹಬ್ಬಕ್ಕೆ ಅವನ ತಂದೆ ಮತ್ತು ಅತ್ತೆಯಂದಿರಿಂದ ತಲಾ 100 ಡಾಲರ್‌ಗಳ ಚೆಕ್‌ಗಳನ್ನು ಉಡುಗೊರೆಯಾಗಿ ಪಡೆದ ಪುಣ್ಯವಂತ ಹೊವರ್ಡ್ ಕೆಲ್ಲಿ!

ಆಗಿನ ಕಾಲದಲ್ಲಿ ಅದು ದೊಡ್ಡ ಮೊತ್ತವೇ. ನಿರುದ್ಯೋಗಿಯಾಗಿದ್ದ ಕೆಲ್ಲಿಯನ್ನು ಅವನ ಹೆತ್ತವರು ಕೊಲರಾಡೊ ಸ್ಪ್ರಿಂಗ್ ಪಟ್ಟಣಕ್ಕೆ ಕಳಿಸಿದ್ದರು. ಅಲ್ಲಿ ನಲ್ವತ್ತು ಡಾಲರ್‌ಗಳಿಗೆ ಕುದುರೆಯೊಂದನ್ನು ಖರೀದಿಸಿ, ಅಂಚೆ ಬಟವಾಡೆಯ ಕೆಲಸವನ್ನೂ ಆತ ಮಾಡಿದ್ದನು. ಮರುವರ್ಷ ಪೆನ್ಸಿಲ್ವೇನಿಯಾಕ್ಕೆ ವಾಪಸಾದ ಕೆಲ್ಲಿ ಒಂದು ಫಾರ್ಮ್‌ಹೌಸ್‌ನಲ್ಲಿ ವಾಸಿಸ ತೊಡಗಿದನು.

ಪ್ರಕೃತಿಯ ಮಡಿಲಲ್ಲಿ ವಾಸ, ಪ್ರಾಣಿ-ಪಕ್ಷಿಗಳ ಒಡನಾಟ, ಮೈಲುಗಟ್ಟಲೆ ಚಾರಣ ಅವನಿಗೆ ಖುಷಿಕೊಡುವ ವಿಚಾರಗಳಾಗಿದ್ದವು. ಕೆಲ್ಲಿ ವಿದ್ಯಾಭ್ಯಾಸ ಗಳಿಸಿ ಪ್ರಸಿದ್ಧ ವೈದ್ಯನಾಗಿ ಮನುಕುಲದ ಸೇವೆ ಮಾಡಬೇಕೆಂಬುದು ಅವನ ತಂದೆಯ ಇಚ್ಛೆಯಾಗಿತ್ತು. ಅದನ್ನು ಈಡೇರಿಸಲಿಕ್ಕೆಂದೇ ಆತ ವೈದ್ಯನಾದದ್ದು.

ವೈದ್ಯನಾದರೂ ತನ್ನ ನೆಚ್ಚಿನ ಹವ್ಯಾಸವಾದ ಚಾರಣವನ್ನು ಮುಂದುವರಿಸಿದ್ದ ಕೆಲ್ಲಿ ಅದೊಂದು ದಿನ ಪೆನ್ಸಿಲ್ವೇನಿಯಾದ ಹಳ್ಳಿಯೊಂದರ ಮನೆಬಾಗಿಲು ತಟ್ಟಿ ನೀರು ಕೇಳಿದ್ದು, ಪುಟ್ಟ ಹುಡುಗಿಯೊಬ್ಬಳು ನೀರಿನ ಬದಲಿಗೆ ಹಾಲು ತಂದುಕೊಟ್ಟದ್ದು ಹೌದು. ಕೆಲ್ಲಿಗೆ ದೇವರಲ್ಲಿ ಆವತ್ತೇ ನಂಬಿಕೆ ಹುಟ್ಟಿತು ಎನ್ನುವುದು ಉತ್ಪ್ರೇಕ್ಷೆ, ಏಕೆಂದರೆ ಮೊದಲಿಂದಲೂ ಆತ ಪಕ್ಕಾ ಆಸ್ತಿಕನೂ ಧರ್ಮಭೀರುವೂ ಆಗಿದ್ದನಂತೆ. ಅಂತೆಯೇ ಮುಂದೆ ಅವನ ಆಸ್ಪತ್ರೆಗೆ ಆ ರೋಗಿ ಹೆಂಗಸು ಬಂದದ್ದು ಹೌದಾದರೂ ಆಕೆ ಜೀವನ್ಮರಣ ಹೋರಾಟದಲ್ಲಿ ದ್ದಳು ಎನ್ನುವುದೆಲ್ಲ ಬುರುಡೆ.

ಬಿಲ್ ಮೇಲೆ ‘ಈಗಾಗಲೇ ಪಾವತಿಯಾಗಿದೆ’ ಎಂದು ಡಾ.ಕೆಲ್ಲಿ ಷರಾ ಬರೆದದ್ದೇನೊ ಹೌದು. ಆದರೆ ಅವರು ಆಕೆಗಷ್ಟೇ ಶುಲ್ಕವಿನಾಯಿತಿ ಮಾಡಿದ್ದಲ್ಲ. ಬಡ ರೋಗಿಗಳಿಂದ ಅವರು ಸೇವಾಶುಲ್ಕ ಪಡೆಯುತ್ತಿರಲಿಲ್ಲ. ತಾನೇ ಸಂಬಳ ಕೊಟ್ಟು ದಾದಿಯೊಬ್ಬಳನ್ನು ನೇಮಿಸಿ ಅವರ ಆರೈಕೆಯ ವ್ಯವಸ್ಥೆ ಮಾಡುತ್ತಿದ್ದರು.

ದಣಿವಾಗಿದ್ದಾಗ ಬಿಸಿಹಾಲು ಕೊಟ್ಟು ಸತ್ಕರಿಸಿದ್ದ ಹುಡುಗಿಗೆ ವರ್ಷಗಳ ನಂತರ ಚಿಕಿತ್ಸೆ ಮಾಡಬೇಕಾಗಿ ಬಂದಾಗ ಮಾತ್ರ ಡಾ. ಕೆಲ್ಲಿ ಚಿಕಿತ್ಸಾಶುಲ್ಕ ಮನ್ನಾ ಮಾಡಿದ್ದಷ್ಟೇ ಅಲ್ಲ ‘ಒಂದು ಲೋಟ ಹಾಲಿನ ರೂಪದಲ್ಲಿ ಈಗಾಗಲೆ ಪಾವತಿಯಾಗಿದೆ’ ಎಂಬ ಷರಾ ಬರೆದರು, ಮಾನವೀಯತೆಯನ್ನು ಮೆರೆದರು; ಕೃತಜ್ಞತೆಯ ಮೂರ್ತರೂಪ ಆದರು.

ಕೃತಜ್ಞತೆ ಸಲ್ಲಿಕೆಯ, ಅದರಲ್ಲೂ ನಾನೇ ಕೃತಜ್ಞತೆಗೆ ಪಾತ್ರನಾದ, ಇತ್ತೀಚಿನ ಕೆಲವು ಚಿಕ್ಕಚಿಕ್ಕ ನಿದರ್ಶನಗಳನ್ನೂ ಇಲ್ಲಿ ಸಂದರ್ಭೋಚಿತವಾಗಿ, ಸಂಕ್ಷಿಪ್ತವಾಗಿ ಉಲ್ಲೇಖಿಸುತ್ತೇನೆ. ಇವೆಲ್ಲವೂ ಅಂಕಣ ಬರವಣಿಗೆಯಿಂದಾಗಿ ಆದಂಥವು. “ಬೈಂದೂರಿನ ಸುರಭಿ ಕಲಾಸಂಸ್ಥೆ ನಡೆಸುವ ರಾಜ್ಯಮಟ್ಟದ ಕಥಾಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಪಡೆದೆ. ನಾನು ಬರೆದ ಕಥೆಯಲ್ಲಿ ಯುರೋಪ್‌ನ ಡೆನ್ಯುಬ್ ನದಿಯ ವಿಚಾರ ಬರುತ್ತದೆ.

ಹಿಂದೊಮ್ಮೆ ನದಿಗಳ ಬಗೆಗೆ ನೀವು ಬರೆದಿದ್ದ ಅಂಕಣವೊಂದರಿಂದ ಆ ಎಳೆಯನ್ನು ಕಥೆಯಲ್ಲಿ ತರುವುದು ನನಗೆ ಸಾಧ್ಯವಾಯಿತು. ಹಾಗಾಗಿ ನಿಮಗೊಂದು ಥ್ಯಾಂಕ್ಸ್!" ಎಂದು ಮೊನ್ನೆ ಬೆಂಗಳೂರಿನಿಂದ ಶ್ರೀರಂಜನಿ ಅಡಿಗ ಬರೆದಿದ್ದಾರೆ. ಹಾಗೆಯೇ, “ನಮ್ಮ ಕಂಪನಿ ಯಲ್ಲಿ ನಡೆದ ಎಐ ಪ್ರಾಜೆಕ್ಟ್ ಸ್ಪರ್ಧೆಯಲ್ಲಿ ನಾನು ನಿರ್ಮಿಸಿದ ‘ರೈತರ ಸಾಲ ಮಂಜೂ ರಾತಿಗೆ ಎಐ ನೆರವು’ ಪ್ರಾಜೆಕ್ಟ್ ಜಯಗಳಿಸಿದೆ.

ನಿಮ್ಮ ಅಂಕಣಬರಹಗಳಲ್ಲಿನ ಪಾಸಿಟಿವಿಟಿ ನನಗೆ ಯಾವಾಗಲೂ ಒಂದು ಟಾನಿಕ್ ಮತ್ತು ಒಳ್ಳೆಯ ಕೆಲಸಕ್ಕೆ ಸ್ಪೂರ್ತಿ. ಆದ್ದರಿಂದ ಈ ಖುಷಿಯನ್ನು ನಿಮ್ಮೊಡನೆ ಹಂಚಿಕೊಳ್ಳ ಬೇಕೆನಿಸಿತು" ಎಂದು ಬೆಂಗಳೂರಿನಲ್ಲಿ ಐಟಿ ಉದ್ಯೋಗಿಯಾಗಿರುವ ಕುಮಾರ್ ಜಕ್ಕಲಿ ಬರೆದಿದ್ದಾರೆ.

“ಕನ್ನಡ ಪದಗಳನ್ನು ಕಟ್ಟುವ ನಿಮ್ಮ ಅಂಕಣವನ್ನು ಮೊನ್ನೆ ಇಲ್ಲಿ ನೃಪತುಂಗ ಕನ್ನಡ ಸಂಘದ ರಾಜ್ಯೋತ್ಸವ ಸಮಾರಂಭದ ನಿರೂಪಣೆ ಮಾಡುವಾಗ ಪ್ರೇಕ್ಷಕರೊಡನೆ ಸಂವಾದ ಕ್ಕಾಗಿ ಬಳಸಿಕೊಂಡೆ. ತುಂಬ ಇಷ್ಟಪಟ್ಟರು. ನಿಮಗೆ ವಿಶೇಷ ಧನ್ಯವಾದಗಳು" ಎಂದು ಅಟ್ಲಾಂಟಾದಿಂದ ಶ್ರುತಿ ಪ್ರದೀಪ್ ಒಂದು ಧ್ವನಿಸಂದೇಶ ಕಳಿಸಿದ್ದಾರೆ.

“ಉಡುಪಿಗೆ ಹೋಗಿದ್ದೆ. ಕೋಟಿಗೀತಾಲೇಖನಯಜ್ಞದಲ್ಲಿ ಕಳೆದೊಂದು ವರ್ಷದಲ್ಲಿ ದಿನಕ್ಕೆರಡು ಶ್ಲೋಕಗಳಂತೆ ಇಡೀ ಭಗವದ್ಗೀತೆಯನ್ನು ಕನ್ನಡ ಅಕ್ಷರಗಳಲ್ಲಿ ನಾನು ಬರೆದ ಪುಸ್ತಕವನ್ನು ಸಮರ್ಪಿಸಿದೆ. ಪುತ್ತಿಗೆ ಶ್ರೀ ಸುಗುಣೇಂದ್ರತೀರ್ಥ ಸ್ವಾಮೀಜಿಯವರಿಂದ ಪ್ರಮಾಣಪತ್ರ ಪಡೆದು ಧನ್ಯನಾದೆ.

ಕೋಟಿಗೀತಾಲೇಖನಯಜ್ಞದ ಬಗ್ಗೆ ನನಗೆ ಗೊತ್ತಾದದ್ದು ಕಳೆದ ವರ್ಷ ನೀವು ಬರೆದಿದ್ದ ಅಂಕಣಬರಹದಿಂದ, ಆದ್ದರಿಂದ ಪುಣ್ಯದಲ್ಲಿ ನಿಮ್ಮ ಪಾಲೂ ಇದೆ!" ಎಂದು ಭಾವಚಿತ್ರ ಸಹಿತ ಸಂದೇಶ ಕಳಿಸಿದ್ದಾರೆ ಇಲ್ಲೇ ಅಮೆರಿಕದಲ್ಲಿ ನಿವೃತ್ತ ವೈದ್ಯರಾದ, ಮೂಲತಃ ಮೈಸೂರಿನ ಡಾ.ಪದ್ಮನಾಭ ರಾವ್. ಅವರಿಗೀಗ ೯೦ರ ವಯಸ್ಸು. ಸುಮಾರು ೬೦ ವರ್ಷಗಳ ಹಿಂದೆಯೇ (ಅಂದರೆ ನಾನಿನ್ನೂ ಆಗ ಹುಟ್ಟಿರಲೂ ಇಲ್ಲ!) ಅಮೆರಿಕಕ್ಕೆ ಬಂದ ಅವರಿಗೆ ಕನ್ನಡ ಓದು-ಬರಹ ಎಲ್ಲ ಮರೆತೇ ಹೋಗಿತ್ತಂತೆ.

ಕನ್ನಡ ಕೈಬರಹ ಮತ್ತೊಮ್ಮೆ ಅಭ್ಯಾಸವಾದಂತೆಯೂ ಆಯ್ತು, ಇಡೀ ಭಗವದ್ಗೀತೆ ಬರೆದಂತೆಯೂ ಆಯ್ತು ಎನ್ನುವುದಕ್ಕಾಗಿಯೇ ಅವರಿದನ್ನು ಕೈಗೊಂಡಿದ್ದಂತೆ. ದಶಕಗಳ ಬಳಿಕ ಕನ್ನಡ ಅಕ್ಷರಗಳನ್ನು ಬರೆದ ಧನ್ಯತೆಯ ಪುಳಕ ಅವರ ಸಂದೇಶದಲ್ಲಿ ಸ್ಪಷ್ಟವಾಗಿ ವ್ಯಕ್ತವಾಗುತ್ತಿತ್ತು. ಈ ನಾಲ್ಕೂ ನಿದರ್ಶನಗಳು ಕಳೆದೊಂದು ವಾರದ ಅವಧಿಯಲ್ಲಿ ಘಟಿಸಿದಂಥವು.

ಉಳಿದಂತೆ ಬೇರೆ ಕೆಲವು ಓದುಗರು, ವಿಶೇಷವಾಗಿ ಶಿಕ್ಷಕ ವೃತ್ತಿಯಲ್ಲಿರುವವರು, “ನಿಮ್ಮ ಅಂಕಣಬರಹಗಳನ್ನು ನಮ್ಮ ತರಗತಿಯಲ್ಲಿ ಉಪಯೋಗಿಸುತ್ತೇವೆ. ಮಕ್ಕಳಿಗೂ ಇಷ್ಟ ವಾಗುತ್ತದೆ" ಎಂದು ಆಗಾಗ ತಿಳಿಸುತ್ತಿರುತ್ತಾರೆ. ಇದನ್ನು ನಾನಿಲ್ಲಿ ಕಾಲರ್ ಎತ್ತಿಕೊಳ್ಳಲಿಕ್ಕೆ ಬರೆದಿದ್ದಲ್ಲ. ಬದಲಿಗೆ ಇವರೆಲ್ಲರಿಂದ ನಾನು ಕಲಿತದ್ದು ‘೧. ಕೃತಜ್ಞನಾಗಿರು; ೨. ಯಾರಿಗೆ ತಿಳಿಸಬೇಕೋ ಅವರಿಗೆ ನಿನ್ನ ಕೃತಜ್ಞತೆಯನ್ನು ಕ್ಲಪ್ತವಾಗಿ ಎದೆತುಂಬಿ ತಿಳಿಸು’ ಎಂಬು ದನ್ನು. ಏಕೆಂದರೆ ಈ ಎರಡನೆಯ ಭಾಗವನ್ನು ನಾವೆಲ್ಲ ಹೆಚ್ಚಾಗಿ ಮರೆಯುತ್ತೇವೆ; ಇನ್ನು ಮುಂದೆ ಮರೆಯಬಾರದು.