Vishweshwar Bhat Column: ಅಮೆರಿಕ ಅಧ್ಯಕ್ಷರ ಖಯಾಲಿ
ಜಾನ್ಸನ್ ಅವರು ಅಧಿಕಾರಕ್ಕೆ ಬಂದ ತಕ್ಷಣ ವೈಟ್ ಹೌಸ್‌ನ ಎರಡನೇ ಮಹಡಿಯಲ್ಲಿದ್ದ ತಮ್ಮ ಸ್ನಾನದ ಕೋಣೆಯಲ್ಲಿ ಕೆಲವು ಆಮೂಲಾಗ್ರ ಬದಲಾವಣೆಗಳನ್ನು ಮಾಡಲು ಆದೇಶಿಸಿದರು. ಅವರಿಗೆ ಸಾಮಾನ್ಯ ಶವರ್‌ಗಳು ಇಷ್ಟವಾಗುತ್ತಿರಲಿಲ್ಲ. ಅವರಿಗೆ ಬೇಕಾಗಿದ್ದು ‘ಅತಿ ಹೆಚ್ಚು ಒತ್ತಡ ವಿರುವ ನೀರು ಚಿಮ್ಮುವ ಶವರ್’.
-
ಸಂಪಾದಕರ ಸದ್ಯಶೋಧನೆ
ಅಮೆರಿಕದ ಮೂವತ್ತರನೇ ಅಧ್ಯಕ್ಷರಾಗಿದ್ದ ಲಿಂಡನ್ ಬಿ. ಜಾನ್ಸನ್ ಭಲೇ ವಿಶಿಷ್ಟ ಮತ್ತು ಒರಟು ತನದ ವ್ಯಕ್ತಿತ್ವದವರು. ಅವರು ತಮ್ಮ ಅಧಿಕಾರವನ್ನು ಚಲಾಯಿಸುವ ರೀತಿಯಷ್ಟೇ ಅವರ ವೈಯಕ್ತಿಕ ಹವ್ಯಾಸಗಳು ಮತ್ತು ಬೇಡಿಕೆಗಳು ಕೂಡ ವಿಚಿತ್ರವಾಗಿದ್ದವು. ವೈಟ್ ಹೌಸಿನಲ್ಲಿರುವ ತಮ್ಮ ಶೌಚಾಲಯದಲ್ಲಿರುವಾಗ ಅಽಕಾರಿಗಳನ್ನು ಕರೆದು ಅಲ್ಲಿಯೇ ಆದೇಶ ನೀಡುತ್ತಿದ್ದ ಜಾನ್ಸನ್ ಅವರ ‘ವೈಟ್ ಹೌಸ್ ಶವರ್’ ಪ್ರಸಂಗಗಳು ಬಹು ಚರ್ಚಿತ ಮತ್ತು ಆಶ್ಚರ್ಯಕರ ಸಂಗತಿಯಾಗಿದೆ.
ಜಾನ್ಸನ್ ಅವರು ಅಧಿಕಾರಕ್ಕೆ ಬಂದ ತಕ್ಷಣ ವೈಟ್ ಹೌಸ್‌ನ ಎರಡನೇ ಮಹಡಿಯಲ್ಲಿದ್ದ ತಮ್ಮ ಸ್ನಾನದ ಕೋಣೆಯಲ್ಲಿ ಕೆಲವು ಆಮೂಲಾಗ್ರ ಬದಲಾವಣೆಗಳನ್ನು ಮಾಡಲು ಆದೇಶಿಸಿದರು. ಅವರಿಗೆ ಸಾಮಾನ್ಯ ಶವರ್‌ಗಳು ಇಷ್ಟವಾಗುತ್ತಿರಲಿಲ್ಲ. ಅವರಿಗೆ ಬೇಕಾಗಿದ್ದು ‘ಅತಿ ಹೆಚ್ಚು ಒತ್ತಡ ವಿರುವ ನೀರು ಚಿಮ್ಮುವ ಶವರ್’.
ಜಾನ್ಸನ್ ಅವರು ತಮ್ಮ ಹಿಂದಿನ ನಿವಾಸದಲ್ಲಿ ಬಳಸುತ್ತಿದ್ದ ಶವರ್‌ನಂತೆಯೇ ವೈಟ್ ಹೌಸ್ ನಲ್ಲಿಯೂ ಇರಬೇಕು ಎಂದು ಪಟ್ಟು ಹಿಡಿದರು. ಆ ಶವರ್ ಹೇಗಿರಬೇಕೆಂದರೆ, ಅದರಿಂದ ನೀರು ಬರುವ ವೇಗವು ಅಕ್ಷರಶಃ ಒಬ್ಬ ವ್ಯಕ್ತಿಯನ್ನು ಹಿಂದಕ್ಕೆ ತಳ್ಳುವಂತಿರಬೇಕು!
ಇದನ್ನೂ ಓದಿ: Vishweshwar Bhat Column: 108 ಮತ್ತು 1008
ಜಾನ್ಸನ್ ಅವರ ಬೇಡಿಕೆಯ ಮೇರೆಗೆ ಇಂಜಿನಿಯರ್‌ಗಳು ವಿಶೇಷ ಶವರ್ ಒಂದನ್ನು ಸಿದ್ಧಪಡಿಸಿ ದರು. ಅದರಲ್ಲಿ ಅಳವಡಿಸಲಾಗಿದ್ದ ಕೆಲವು ವಿಚಿತ್ರ ಅಂಶಗಳೆಂದರೆ ಮಲ್ಟಿ-ನೋಝಲ್ ವ್ಯವಸ್ಥೆ. ಇದು ತಲೆಯ ಮೇಲೆ ನೀರು ಬೀಳುವ ಶವರ್ ಆಗಿರಲಿಲ್ಲ. ಬದಲಾಗಿ, ದೇಹದ ವಿವಿಧ ಭಾಗಗಳಿಗೆ ಗುರಿಯಿಟ್ಟು ನೀರು ಚಿಮ್ಮುವಂತೆ ಪಾರ್ಶ್ವಗಳಲ್ಲಿಯೂ ಹಲವು ನೋಝಲ್‌ಗಳಿರುವ ಶರ್ವ ಆಗಿತ್ತು.
ಒಬ್ಬ ಸಾಮಾನ್ಯ ಮನುಷ್ಯ ತಡೆದುಕೊಳ್ಳಬಲ್ಲ ಒತ್ತಡಕ್ಕಿಂತ ಮೂರು-ನಾಲ್ಕು ಪಟ್ಟು ಹೆಚ್ಚು ಒತ್ತಡದಲ್ಲಿ ನೀರು ಬರುವಂತೆ ಇದನ್ನು ವಿನ್ಯಾಸಗೊಳಿಸಲಾಗಿತ್ತು. ಜಾನ್ಸನ್ ಅವರು ಎಷ್ಟು ನಿಖರ ವಾಗಿದ್ದರೆಂದರೆ, ಒಂದು ನೋಝಲ್ ನೇರವಾಗಿ ತಮ್ಮ ಪೃಷ್ಠದ ಭಾಗಕ್ಕೆ ಮತ್ತು ಇನ್ನೊಂದು ನೋಝಲ್ ತಮ್ಮಗುಪ್ತಾಂಗಕ್ಕೆ ಹೆಚ್ಚಿನ ಒತ್ತಡದ ನೀರನ್ನು ಚಿಮ್ಮಿಸಬೇಕು ಎಂದು ಇಂಜಿನಿಯರ್ ಗಳಿಗೆ ಖಡಕ್ ಸೂಚನೆ ನೀಡಿದ್ದರು. ಇದನ್ನು ಅವರು ‘The Needle Shower’ ಎಂದು ಕರೆಯು ತ್ತಿದ್ದರು.
ವೈಟ್ ಹೌಸ್‌ನ ಪ್ಲಂಬರ್‌ಗಳು ಮತ್ತು ಇಂಜಿನಿಯರ್‌ಗಳು ಈ ಶವರ್ ಸಿದ್ಧಪಡಿಸಲು ಎರಡು-ಮೂರು ವರ್ಷಗಳ ಕಾಲ ಸತತವಾಗಿ ಶ್ರಮಿಸಿದರು. ಜಾನ್ಸನ್ ಅವರಿಗೆ ನೀರಿನ ಒತ್ತಡ ಸ್ವಲ್ಪ ಕಡಿಮೆಯಾದರೂ ಕೋಪ ಬರುತ್ತಿತ್ತು. ಒಮ್ಮೆ ಅವರು ನೀರಿನ ಒತ್ತಡ ಕಡಿಮೆಯಿದೆ ಎಂದು ಅಸಮಾಧಾನಗೊಂಡು, ವೈಟ್ ಹೌಸ್‌ನ ನೀರಿನ ಟ್ಯಾಂಕ್‌ಗೆ ವಿಶೇಷ ಪಂಪ್‌ಗಳನ್ನು ಅಳವಡಿಸಲು ಆದೇಶಿಸಿದರು.
ಅಂದಿನ ಕಾಲದಲ್ಲಿ ಈ ಒಂದು ಶವರ್ ವ್ಯವಸ್ಥೆಗಾಗಿ ಸುಮಾರು ಒಂದು ಲಕ್ಷ ಡಾಲರ್ ಹಣ ಖರ್ಚಾಗಿತ್ತು ಎನ್ನಲಾಗುತ್ತದೆ. ಒಬ್ಬ ಅಧ್ಯಕ್ಷರ ವೈಯಕ್ತಿಕ ಸ್ನಾನದ ಹವ್ಯಾಸಕ್ಕಾಗಿ ಇಷ್ಟೊಂದು ಹಣ ಮತ್ತು ಶ್ರಮ ವ್ಯರ್ಥವಾಗುತ್ತಿರುವುದು ಸಾರ್ವಜನಿಕ ಟೀಕೆಗೆ ಗುರಿಯಾಗಿತ್ತು.
ಜಾನ್ಸನ್ ಅವರು ಅಽಕಾರವನ್ನು ನಿಯಂತ್ರಿಸುವುದರಲ್ಲಿ ನಿಸ್ಸೀಮರಾಗಿದ್ದರು. ಅವರು ಯಾರಿಗಾ ದರೂ ಆದೇಶ ನೀಡುವಾಗ ಅವರ ಹತ್ತಿರ ಹೋಗಿ, ಅವರ ಕಣ್ಣಲ್ಲಿ ಕಣ್ಣಿಟ್ಟು, ದೈಹಿಕವಾಗಿ ಅವರ ಮೇಲೆ ಪ್ರಭಾವ ಬೀರುವಂತೆ ಮಾತನಾಡುತ್ತಿದ್ದರು. ‘ತಮ್ಮ ಶವರ್ ಕೂಡ ಅಷ್ಟೇ ಬಲಶಾಲಿಯಾಗಿರ ಬೇಕು, ಅದು ತನ್ನ ದೇಹವನ್ನು ಅಪ್ಪಳಿಸಬೇಕು’ ಎಂಬುದು ಅವರ ಹಠವಾಗಿತ್ತು.
ಅವರಿಗೆ ಸ್ನಾನ ಮಾಡುವುದು ಕೇವಲ ಸ್ವಚ್ಛತೆಗಾಗಿ ಅಲ್ಲ, ಅದು ಒಂದು ರೀತಿಯ ‘ಶಕ್ತಿ ಪ್ರದರ್ಶನ’ ದ ಅನುಭವ ನೀಡುತ್ತಿತ್ತು. ಜಾನ್ಸನ್ ಅವರ ನಂತರ ಅಧಿಕಾರಕ್ಕೆ ಬಂದ ರಿಚರ್ಡ್ ನಿಕ್ಸನ್, ಈ ಶವರ್ ವ್ಯವಸ್ಥೆಯನ್ನು ನೋಡಿ ದಂಗಾಗಿದ್ದರು. ಅವರು ಆ ಸ್ನಾನದ ಕೋಣೆಗೆ ಹೋದಾಗ ಅಲ್ಲಿನ ಸಂಕೀರ್ಣವಾದ ನೋಝಲ್‌ಗಳು ಮತ್ತು ಪೈಪ್‌ಗಳನ್ನು ಕಂಡು,‘ಇದೇನು ಶವರಾ ಅಥವಾ ಬಾಂಬ್ ತಯಾರಿಸುವ ಯಂತ್ರವಾ?’ ಎಂದು ಉದ್ಗರಿಸಿದ್ದರಂತೆ.
ನಂತರ ನಿಕ್ಸನ್ ಆ ವ್ಯವಸ್ಥೆಯನ್ನು ತೆಗೆದು ಹಾಕಲು ಆದೇಶಿಸಿದರು. ಜಾನ್ಸನ್ ಅವರ ಶವರ್ ಕೇವಲ ಒಂದು ಐಷಾರಾಮಿ ವ್ಯವಸ್ಥೆಯಾಗಿರಲಿಲ್ಲ; ಅದು ಅವರ ಅತಿರೇಕದ ವ್ಯಕ್ತಿತ್ವದ ಪ್ರತಿಬಿಂಬ ವಾಗಿತ್ತು. ಅಧಿಕಾರ ಎನ್ನುವುದು ಮನುಷ್ಯನನ್ನು ಯಾವ ಮಟ್ಟದ ವಿಚಿತ್ರ ಹಠಗಳಿಗೆ ತಳ್ಳಬಹುದು ಎಂಬುದಕ್ಕೆ ಜಾನ್ಸನ್ ಅವರ ‘ಶವರ್ ನೋಝಲ’ಗಳು ಇಂದಿಗೂ ಒಂದು ಅತ್ಯುತ್ತಮ ಉದಾಹರಣೆ.