Hari Paraak Column: ಆರ್ಟ್ ಆಫ್ ಸೈನಿಂಗ್- ಸೈನ್ಸ್
ಕಳೆದ ಕೆಲವೊಂದು ತಿಂಗಳುಗಳಿಂದ ಆಟೋಗಳ ಮೇಲೆ ಪ್ರೇಮದ ಊರಲಿ ಚಿತ್ರದ ಶೀರ್ಷಿಕೆ ನೋಡಿದ್ದ ಜನರಿಗೆ ಈ ಚಿತ್ರದ ಬಗ್ಗೆ ಅಷ್ಟಾಗಿ ಆಸಕ್ತಿ ಇದ್ದಿರಲಿಕ್ಕಿಲ್ಲ. ಯಾಕಂದ್ರೆ ಶೀರ್ಷಿಕೆ ಕೇಳಿದರೆ ಯಾವುದೋ ಓಬೀರಾಯನ ಕಾಲದ್ದು ಅನ್ನಿಸಿದ್ದರೆ ತಪ್ಪೇನಿಲ್ಲ. ಹಾಗಾಗಿ ಸಿನಿಮಾ ಇನ್ನೆಷ್ಟರ ಮಟ್ಟಿಗೆ ಇರುತ್ತೆ ಬಿಡು ಅಂತ ಉದಾಸೀನ ಮಾಡಿದವರೇ ಹೆಚ್ಚು. ಆದರೆ ಈಗ ಎಲ್ಲರ ನಿರೀಕ್ಷೆ ಮೀರಿ ಈ ಚಿತ್ರ ಜನಪ್ರಿಯತೆ ಪಡೆದುಕೊಳ್ಳುತ್ತಿದೆ.
-
ತುಂಟರಗಾಳಿ
ಸಿನಿಗನ್ನಡ
ಕಳೆದ ವಾರ ಪ್ರೇಮದ ಊರಲಿ ಅನ್ನೋ ಸಿನಿಮಾ ರಿಲೀಸ್ ಆಗಿದೆ. ಮನೋಜ್ ಕುಮಾರ್ ಎನ್ನು ವವರು ಈ ಚಿತ್ರದ ನಿರ್ದೇಶಕರು. ಇತ್ತೀಚೆಗೆ ಬಿಡುಗಡೆ ಆಗುವ ಸಿನಿಮಾಗಳಿಗೆ ವೈಯಕ್ತಿಕ ನೆಲೆಯಲ್ಲಿ ಪ್ರಚಾರ ಆಗೋದು ಹೊಸದೇನಲ್ಲ ಬಿಡಿ. ಆದರೆ ಇದು ನಿಜವಾಗಿಯೂ ಬರೀ ಪ್ರಚಾರನೋ ಅಥವಾ ನಿಜಕ್ಕೂ ಸಿನಿಮಾ ಚೆನ್ನಾಗಿದೆಯೋ ಅಂತ ಅನುಮಾನ ಹುಟ್ಟಿಸುವಷ್ಟರ ಮಟ್ಟಿಗೆ ಈ ಪ್ರೇಮದ ಊರಲಿ ಸಿನಿಮಾ ಎಲ್ಲಾ ಊರಲ್ಲೂ ತುಂಬಾ ಸದ್ದು ಮಾಡುತ್ತಿದೆ. ಬೆಂಗಳೂರಿನಲ್ಲಂತೂ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದೆ.
ಕಳೆದ ಕೆಲವೊಂದು ತಿಂಗಳುಗಳಿಂದ ಆಟೋಗಳ ಮೇಲೆ ಪ್ರೇಮದ ಊರಲಿ ಚಿತ್ರದ ಶೀರ್ಷಿಕೆ ನೋಡಿದ್ದ ಜನರಿಗೆ ಈ ಚಿತ್ರದ ಬಗ್ಗೆ ಅಷ್ಟಾಗಿ ಆಸಕ್ತಿ ಇದ್ದಿರಲಿಕ್ಕಿಲ್ಲ. ಯಾಕಂದ್ರೆ ಶೀರ್ಷಿಕೆ ಕೇಳಿದರೆ ಯಾವುದೋ ಓಬೀರಾಯನ ಕಾಲದ್ದು ಅನ್ನಿಸಿದ್ದರೆ ತಪ್ಪೇನಿಲ್ಲ. ಹಾಗಾಗಿ ಸಿನಿಮಾ ಇನ್ನೆಷ್ಟರ ಮಟ್ಟಿಗೆ ಇರುತ್ತೆ ಬಿಡು ಅಂತ ಉದಾಸೀನ ಮಾಡಿದವರೇ ಹೆಚ್ಚು. ಆದರೆ ಈಗ ಎಲ್ಲರ ನಿರೀಕ್ಷೆ ಮೀರಿ ಈ ಚಿತ್ರ ಜನಪ್ರಿಯತೆ ಪಡೆದುಕೊಳ್ಳುತ್ತಿದೆ. ಆದರೆ ನಿಜಕ್ಕೂ ಸಿನಿಮಾ ಚೆನ್ನಾಗಿದ್ದರೆ, ಅಷ್ಟು ಚೆನ್ನಾಗಿರೋ ಸಿನಿಮಾ ಮಾಡಿದವರಿಗೆ ಒಂದು ಚಂದದ ಕ್ಯಾಚಿ ಟೈಟಲ್ ಇಡೋದು ಕಷ್ಟ ಏನೂ ಆಗ್ತಾ ಇರಲಿಲ್ಲ ಅನ್ನೋದು ಹಲವರ ಅನಿಸಿಕೆ. ಏನೇ ಆಗಲಿ ಹೊಸಬರ ಕನ್ನಡ ಚಿತ್ರವೊಂದು ಅದರಲ್ಲೂ ಪ್ಯಾನ್ ಇಂಡಿಯಾ ಅಲ್ಲದ ಮಾಮೂಲಿ ಸಿನಿಮಾವೊಂದು ಸದ್ದು ಮಾಡ್ತಾ ಇರೋದು ಚಿತ್ರರಂಗದ ಪಾಲಿಗೆ ಶುಭಸೂಚನೆ.
ಲೂಸ್ ಟಾಕ್ – ಜ್ಞಾನೇಶ್ ಕುಮಾರ್
ಏನ್ ಸಾರ್ ಗೊತ್ತಿದ್ದೋ ಗೊತ್ತಿಲ್ಲದೇನೇ ಸಿಕ್ಕಿ ಹಾಕ್ಕೊಂಡ್ರಲ್ಲ?
- ಹಂಗೇನಿಲ್ಲ, ಜ್ಞಾನೇಶನಿಗೆ ಜ್ಞಾನೋದಯ ಆಯ್ತು ಅಂದ್ಕೊಳಿ. ಆದ್ರೂ SIR ವಿಷಯದಲ್ಲಿ ಇಂಥ ಕೆಲಸ ಮಾಡಬಹುದಾ?
- ಅಯ್ಯೋ ನಂದೇನಿದ್ರೂ ನನ್ನ ಮೇಲಿನ SIR ಗಳು ಹೆಂಗೆ ಹೇಳ್ತಾರೋ ಹಂಗೆ ಕೇಳೋದಷ್ಟೇ ಕೆಲಸ.
ಈ SIR ಹಿಂದೆ ಯಾರ್ಯಾರು ಇದ್ದಾರೆ ಅಂತ ಹೇಳಬಹುದಾ?
- ನೋಡಿ ನೀವು ಖಐ ರಹದ್ದು ಮೀರಿ ಪ್ರಶ್ನೆ ಕೇಳ್ತಾ ಇದ್ದೀರ. ಹೋಗ್ಲಿ, ಎಲೆಕ್ಷನ್ ವಿಷಯದಲ್ಲಿ ಅಧಿಕಾರ ದುರುಪಯೋಗ ತಪ್ಪಲ್ವಾ? - ಅದ್ಯಾಕ್ರೀ, ಅಧಿಕಾರ ಇದ್ದಾಗ ಬಳಕೆ ಮಾಡಲಿಲ್ಲ ಅಂದ್ರೆ ನೀನಾರಿಗಾದೆಯೋ ಎಲೆಕ್ಷನ್ ಮಾನವ ಅಂತ ಜನ ಕೇಳ್ತಾರೆ. ಅದಕ್ಕೇ ಮಾಡಿಕೊಂಡೆ.
ಆದ್ರೂ ಈ ಕಳಂಕ ಬೇಕಿತ್ತಾ ನಿಮಗೆ?
- ಅಯ್ಯೋ, ಬಿಜೆಪಿಯಲ್ಲಿ ಗುರುತಿಸಿಕೊಂಡ ಮೇಲೆ ಎಲ್ಲ ಕಳಂಕ ತೊಳೆದುಹೋಗುತ್ತೆ ಬಿಡ್ರೀ...
(ಕಾಲ್ಪನಿಕ ಸಂದರ್ಶನ)
ಇದನ್ನೂ ಓದಿ: Hari Paraak Column: ಸ್ಯಾಡ್ ಸಾಂಗ್ - ಶೋಕ ಗೀತೆ, ಐಟಂ ಸಾಂಗ್-ಶಾಖ ಗೀತೆ
ನೆಟ್ ಪಿಕ್ಸ್
ಖೇಮು ಸಣ್ಣ ಹುಡುಗ ಆಗಿದ್ದಾಗ ಅವರ ಅಪ್ಪ ಅಮ್ಮ ಹಳ್ಳಿಯಲ್ಲಿ ಇದ್ದರು. ಮನೆಯ ಸುತ್ತ ಕಾಡುಮೇಡಿನಂಥ ಪ್ರದೇಶ. ಖೇಮು ಆಗಾಗ ಕಾಡಿನೊಳಗೆ ಹೋಗಿ ಓಡಾಡಿಕೊಂಡು ಬರುತ್ತಿದ್ದ. ಹೀಗೇ ಒಂದು ದಿನ ಕಾಡಿನೊಳಗೆ ಬಹುದೂರ ಹೋದಾಗ ಅಲ್ಲಿ ಅವನ ಕಣ್ಣಿಗೆ ಆಗ ತಾನೇ ಹುಟ್ಟಿದಂತಿದ್ದ ಸಣ್ಣ ಬೆಕ್ಕಿನ ಮರಿ ಕಾಣಿಸಿತು. ಸುತ್ತಮುತ್ತ ಯಾರೂ ಇರಲಿಲ್ಲ. ಬಹುಷಃ ತಾಯಿಬೆಕ್ಕು ಅದನ್ನು ಅಲ್ಲಿಯೇ ಬಿಟ್ಟು ಹೋಗಿತ್ತು. ಅದನ್ನು ನೋಡಿದ ಖೇಮು ಕೂಡಲೇ ಅದನ್ನು ಎತ್ತಿಕೊಂಡು ಅದನ್ನು ಎತ್ತಿಕೊಂಡು ಸುತ್ತಮುತ್ತ ಅಲೆದಾಡಿದ. ತಾಯಿಬೆಕ್ಕು ಕಾಣಿಸಲೇ ಇಲ್ಲ.
ಕೊನೆಗೆ ಖೇಮು ಆ ಮರಿಯನ್ನು ಮನೆಗೆ ಕರೆದುಕೊಂಡು ಬಂದ. ಅಂದಿನಿಂದ ಆ ಬೆಕ್ಕಿನ ಮರಿ ಅವನ ಜೊತೆ ಅನ್ಯೋನ್ಯವಾಗಿ ಹೊಂದಿಕೊಂಡಿತು. ಖೇಮು ಮತ್ತು ಅದು ಒಬ್ಬರನ್ನೊಬ್ಬರು ಬಿಟ್ಟಿರಲಾರದಂಥ ಮಟ್ಟಿಗೆ ಅವರ ಮಧ್ಯೆ ಬಾಂಧವ್ಯ ಇತ್ತು. ಒಂದು ದಿನ ಅರಣ್ಯಾಧಿಕಾರಿಗಳು ಖೇಮು ಮನೆಗೆ ಬಂದರು.
ಅವರಬ್ಬ ಆಫೀಸರ್ ಈ ಬೆಕ್ಕಿನ ಮರಿಯನ್ನು ಹತ್ತಿರದಿಂದ ನೋಡಿ, ಇದು ಬೆಕ್ಕಲ್ಲ, ಇದು ಹುಲಿ ಮರಿ, ಇದನ್ನು ಮನೆಯಲ್ಲಿ ಸಾಕಬಾರದು, ಮರಿಯನ್ನು ಸರ್ಕಾರದ ವಶಕ್ಕೆ ಕೊಡಬೇಕು ಎಂದು ಹೇಳಿ, ಅದನ್ನು ಹತ್ತಿರದ ಇದ್ದ ಝೂಗೆ ತೆಗೆದುಕೊಂಡು ಹೋದರು. ಕೆಲವು ದಿನಗಳವರೆಗೆ ಖೇಮು ಅಲ್ಲಿಗೆ ಹೋಗಿ ಆಗಾಗ ಮರಿಯನ್ನು ನೋಡಿಕೊಂಡು ಬರುತ್ತಿದ್ದ. ಆನಂತರ ಕೆಲವು ವರ್ಷಗಳ ನಂತರ ಆ ಮರಿಯನ್ನು ದೇಶದ ಇನ್ಯಾವುದೋ ಝೂಗೆ ಕರೆದುಕೊಂಡು ಹೋಗಲಾಯಿತು. ನಂತರ ಖೇಮು ಬೆಳೆದು ದೊಡ್ಡವನಾದ.
ಒಮ್ಮೆ ಕಾಲೇಜು ಟ್ರಿಪ್‌ನಲ್ಲಿ ಅವನನ್ನು ಆಲ್ ಇಂಡಿಯಾ ಟೂರ್‌ಗೆ ಕರೆದುಕೊಂಡು ಹೋದರು. ಅಲ್ಲಿ ಉತ್ತರಭಾರತದ ಒಂದು ಝೂಗೆ ಹೋದಾಗ ಅಲ್ಲಿನ ಪಂಜರದೊಳಗಿದ್ದ ಹುಲಿಯೊಂದು ಖೇಮುವನ್ನೇ ದಿಟ್ಟಿಸಿ ನೋಡುತ್ತಿತ್ತು. ಖೇಮು ಕೂಡ ಅದರ ಕಣ್ಣುಗಳನ್ನೇ ನೋಡುತ್ತಿದ್ದ. ಆ ಕಣ್ಣುಗಳು ಏನೋ ಹೇಳುತ್ತಿವೆ ಎಂದು ಖೇಮುಗೆ ಅನಿಸಿತು. ಹಾಗಾಗಿ ಪಂಜರದ ಹತ್ತಿರ ಹೋಗಿ ನಿಂತ. ಆ ಹುಲಿ ಅವನನ್ನೇ ಬಿಟ್ಟ ಕಣ್ಣು ಬಿಟ್ಟ ಹಾಗೆ ನೋಡುತ್ತಿತ್ತು. ಆಗ ಖೇಮು ಅಲ್ಲಿನ ಮೇಲಧಿಕಾರಿಗಳನ್ನು ಕರೆದು ಈ ಹುಲಿಯನ್ನು ನಾನು ಒಳಗೆ ಹೋಗಿ ನೋಡಬೇಕು ಅಂತ. ಮೊದಮೊದಲು ಅವರು ಒಪ್ಪಲಿಲ್ಲ.
ನಂತರ ಖೇಮು ಎಮೋಷನಲ್ ಆಗಿ ಹೇಳಿದ ಮಾತುಗಳನ್ನೆ ಕೇಳಿ, ಖೇಮುವನ್ನು ಪಂಜರದ ಒಳಗೆ ಹೋಗಲು ಬಿಟ್ಟರು. ಪಂಜರದ ಬಾಗಿಲು ತೆರೆದು ಖೇಮು ಒಳಗೆ ಹೋದ. ಎರಡೇ ನಿಮಿಷ, ಆ ಹುಲಿ ಛಂಗನೆ ಖೇಮು ಮೇಲೆ ಹಾರಿ ಅವನನ್ನು ಕೊಂದು ತಿಂದು ಹಾಕಿತು. ಮೋಲೀ, ಅದು ಆ ಹುಲಿ ಅಲ್ಲ ಅನ್ಸುತ್ತೆ, ಹೋಗ್ಲಿ ಬಿಡಿ.
ಲೈನ್ ಮ್ಯಾನ್
ಆಟೋಗ್ರಾಫ್ ಹಾಕಿಸಿಕೊಳ್ಳುವ ಹುಚ್ಚು ಅತಿರೇಕಕ್ಕೆ ಹೋದರೆ ಬರುವ ಖಾಯಿಲೆ
- ಸೈನ್ ಫ್ಲೂ
ಒಂದು ಒಳ್ಳೆಯ ಉದ್ದೇಶಕ್ಕೆ ಸಹಿ ಸಂಗ್ರಹಿಸುವ ಅಭಿಯಾನ ಯಶಸ್ವಿಯಾದರೆ
- ಇಂಡಿಯಾ ಈಸ್ ಸೈನಿಂಗ್
ಅದಕ್ಕೆ ಬ್ರ್ಯಾಂಡ್ ಅಂಬಾಸಿಡರ್
- ಸೈನಾ ನೆಹ್ವಾಲ್
ಆರ್ಟಿಸ್ಟ್ ಬಿಡಿಸುವವನು ಆರ್ಟಿಸ್ಟ್, ಕೊನೆಗೆ ಅದರ ಕೆಳಗೆ ಸಹಿ ಮಾಡುವಾಗ
-ಸೈನ್-ಟಿಸ್ಟ್
ಆರ್ಟಿಸ್ಟ್ ಕೊಡುವ ಆಟೋಗ್ರಾಫ್
-ಡಿ-ಸೈನ್
ನಾನು ಕೆಲಸ ಬಿಡ್ತಾ ಇದ್ದೀನಿ ಎಂದು ಬರೆದುಕೊಡುವಾಗ ಮಾಡುವ ಸಹಿ
- ರಿ-ಸೈನ್
ರಜಾ ಕೇಳಿ ಬರೆದ ಪತ್ರಕ್ಕೆ ಹಾಕುವ ಸಹಿ
- ರುಜು
ಆರ್ಟ್ ಆಫ್ ಸೈನಿಂಗ್ ಅನ್ನು ಏನಂತಾರೆ?
- ಸೈನ್ಸ್
ಗಜಿಬಿಜಿ ಮಾಡದೆ ಎಲ್ಲರಿಗೂ ಅರ್ಥ ಆಗುವಂತೆ ಶಿಸ್ತಾಗಿ ಸೈನ್ ಮಾಡುವವನು
- ಸೈನಿಕ