ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Harish Kera Column: ವ್ಯರ್ಥನಂದನದಲ್ಲಿ ಕ್ರೂರ ಏಪ್ರಿಲ್‌ ಮಾಸ

ಜೋಗದ ಝೋಕು, ಜೋಕ್ ಆಗಿಬಿಡುತ್ತದೆ. ಒಣ ಮರಗಳಲ್ಲಿ ಗಿಳಿಗಳು ಕೂಡ ಕೂತು ಕೂಗುವುದಿಲ್ಲ. ಪಾರಿವಾಳಗಳು ಮೆಟ್ರೋ ಪಿಲ್ಲರುಗಳ ಎಡೆಯಲ್ಲಿ ಕೂತು ಘೂಕರಿಸುತ್ತವೆ. ಹೊಳೆ ತೊರೆಗಳು ಚರಂಡಿ ಗಳಾಗಿ, ಕಸ ಕಟ್ಟಿಕೊಂಡು ಗಬ್ಬು ನಾತ. ನೀರು ಕಂಡಲ್ಲ ರಜೆ ಪಡೆದ ಜನರ ನೂಕಾಟ. ಬೆಟ್ಟಗಳಲ್ಲಿ ಬೆಂಕಿ. ಜನ ನಡೆಯುವ ನೆಲವೂ ಬೆಂಕಿ. ಪ್ರಾಣ ಒಂದು ಗುಟುಕು ನೀರಿಗಾಗಿ, ಒಂದು ಬೀಸು ತಂಗಾಳಿಗಾಗಿ ಹಂಬಲಿಸುತ್ತದೆ.

Harish Kera Column: ವ್ಯರ್ಥನಂದನದಲ್ಲಿ ಕ್ರೂರ ಏಪ್ರಿಲ್‌ ಮಾಸ

-

ಹರೀಶ್‌ ಕೇರ
ಹರೀಶ್‌ ಕೇರ Apr 23, 2026 8:38 AM

ಕಾಡುದಾರಿ

ಮುತ್ತುಗದ ತರುಗಳಲ್ಲಿ ಹುಲಿಯುಗುರಿನಂಥ ಕೆಂಪು ಹೊಳೆಯುವ ಹೂಗಳು. ಗುಲ್‌ಮೊಹರ್ ಮರಗಳಲ್ಲಿ ಬೆಂಕಿಯಂತೆ ಉರಿಯುವ ಕುಸುಮಗಳು. ಮರಗಳ ನೆರಳಿನಲ್ಲಿ ದಣಿವಾರಿಸಿಕೊಳ್ಳುತ್ತ ಕುಳಿತ ಜನ ಜಾನುವಾರು. ನಿಂಬೆ ಹಣ್ಣಿಗೆ ಒಂದಕ್ಕೆ ಹನ್ನೆರಡು ರೂಪಾಯಿ. ಸೌತೆಕಾಯಿ, ಕಲ್ಲಂಗಡಿ ಹೆಚ್ಚಿಕೊಡುವ, ತಣ್ಣನೆಯ ಮಡಿಕೆಯಿಂದ ಮಜ್ಜಿಗೆ ಎತ್ತಿಕೊಡುವ ತಳ್ಳುಗಾಡಿಗಳು.

ನೆರಳು ಸಿಕ್ಕಲ್ಲಿ ಮಲಗಿ ಹಾಗೇ ನಿದ್ದೆ ಹೋದ ದುಡಿದು ದಣಿದ ಮಂದಿ. ಮೇಲೆ ಸೊಕ್ಕಿನಿಂದ ಉರಿ ಉರಿಯುವ ಸೂರ್ಯ. ಏಪ್ರಿಲ್ ನ ಕೊನೆಯ ದಿನಗಳನ್ನು ಕಾಣುತ್ತ, ಮೇ ತಿಂಗಳಿನ ಇನ್ನಷ್ಟು ದುರ್ಭರ ದಿನಗಳನ್ನು ಎದುರು ನೋಡುತ್ತ ಕವಿ ಟಿಎಸ್ ಎಲಿಯಟ್‌ನ ‘ವ್ಯರ್ಥನಂದನ’ ( Waste land) ಕವಿತೆಯ ಮೊದಲ ಸಾಲು ನೆನಪಿನಾಳದಿಂದ ಮೇಲೆದ್ದು ಬರುತ್ತವೆ- ಬಲು ಕ್ರೂರ ಮಾಸ ಈ ಏಪ್ರಿಲ್ (April is the cruellest month).

ಈ ಸಲದ ಏಪ್ರಿಲ್ ಅತಿ ಕ್ರೂರ ಎಂದು, ಪ್ರತಿಸಲವೂ ಅನಿಸುತ್ತದೋ ಏನೋ. ಪ್ರತಿ ವರ್ಷವೂ ಕಳೆದ ಸಲಕ್ಕಿಂತ ಹೆಚ್ಚು ಬೆದರಿಸುತ್ತದೆ, ಬೆವರಿಸುತ್ತದೆ. ಕನ್ನಂಬಾಡಿ ಕಾವೇರಿ ಕೃಷ್ಣೆಗಳು ತಳ ಹಿಡಿಯುತ್ತವೆ. ಅಣೆಕಟ್ಟಿನ ನೀರು ಎತ್ತಿ ಬಿಡಬೇಕೋ ಬೇಡವೋ ಎಂಬ ವಿಚಾರಕ್ಕೆ ಸಾಮ್ರಾಜ್ಯಗಳು ಉರುಳುತ್ತವೆ.

ಜೋಗದ ಝೋಕು, ಜೋಕ್ ಆಗಿಬಿಡುತ್ತದೆ. ಒಣ ಮರಗಳಲ್ಲಿ ಗಿಳಿಗಳು ಕೂಡ ಕೂತು ಕೂಗುವು ದಿಲ್ಲ. ಪಾರಿವಾಳಗಳು ಮೆಟ್ರೋ ಪಿಲ್ಲರುಗಳ ಎಡೆಯಲ್ಲಿ ಕೂತು ಘೂಕರಿಸುತ್ತವೆ. ಹೊಳೆ ತೊರೆಗಳು ಚರಂಡಿಗಳಾಗಿ, ಕಸ ಕಟ್ಟಿಕೊಂಡು ಗಬ್ಬು ನಾತ. ನೀರು ಕಂಡಲ್ಲ ರಜೆ ಪಡೆದ ಜನರ ನೂಕಾಟ. ಬೆಟ್ಟಗಳಲ್ಲಿ ಬೆಂಕಿ. ಜನ ನಡೆಯುವ ನೆಲವೂ ಬೆಂಕಿ. ಪ್ರಾಣ ಒಂದು ಗುಟುಕು ನೀರಿಗಾಗಿ, ಒಂದು ಬೀಸು ತಂಗಾಳಿಗಾಗಿ ಹಂಬಲಿಸುತ್ತದೆ.

ಇದನ್ನೂ ಓದಿ:Harish Kera Column: ಸತ್ತವರಿಗೆ ಜೀವ ಮತ್ತು ಒರಿಸಿಸ್‌ ಎಂಬ ದೇವ

ಹಾಗೆ ನೋಡಿದರೆ ಏಪ್ರಿಲ್, ಮೇ ತಿಂಗಳಿನಷ್ಟು ಒಣ ಮಾಸವೇನಲ್ಲ. ಕಳಚಿಕೊಂಡ ಒಣ ಎಲೆಗಳ ಸ್ಟಾಕು ಯುಗಾದಿಗೇ ಮುಗಿಸಿ, ಹೊಸ ಚಿಗುರುಗಳ ಆಮದು ಮಾಡಿಕೊಂಡ ಮರಗಳು ಏಪ್ರಿಲ್‌ನಲ್ಲಿ ಹಸಿರಿನಿಂದ ಕಳೆಕಳೆಯಾಗಿರುತ್ತವೆ. ರಸ್ತೆ ಬದಿಯ ಟ್ಯುಬೀಬಿಯ, ಮುತ್ತುಗ, ಹೊಂಗೆ, ಸಂಪಿಗೆ ಮರಗಳು ಚೈತ್ರರಥಗಳಂತೆ ಹೂಗಳ ಸೂಡಿ ಧರಿಸಿ, ಸಂಜೆ ಮುಂಜಾನೆಗಳಲ್ಲಿ ಧರೆಗೂ ಚೆಲ್ಲಿ ಬಿಡುತ್ತವೆ.

ಹೂ ತಳೆದ ತರುಗಳ ಕೆಳಗೆ ನಡೆಯುವುದು ಬಲು ನಾಜೂಕು ಭಾಗ್ಯ. ಕತ್ತೆತ್ತಿ ನೋಡಿದರೆ ಪುಷ್ಪ ವೃಷ್ಟಿ. ಹೊಂಗೆ ಮರಗಳಡಿಯಲ್ಲಿ ಆಟೋ ಮಾಮ ರಿಕ್ಷಾ ನಿಲ್ಲಿಸಿ ದಣಿದ ದೇಹವನ್ನದರಲ್ಲಿ ಚೆಲ್ಲಿ ನಿದ್ದೆ ಹೋಗಿದ್ದೆನು. ನೀರಿನದೊಂದೇ ತತ್ವಾರ. ಕೊಂಡ ಒಂದು ಬಾಟಲಿ ನೀರು ಗಂಟಲಿಗೂ ಕತ್ತಿಗೂ ಎದೆಗೂ ಸಮಾನವಾಗಿ ಜೀವವೂಡುವ ಅಮೃತ.

ಆದರೂ ಯಾಕೆ ಹೇಳುತ್ತಾನೆ ಎಲಿಯಟ್ ಏಪ್ರಿಲ್ ಕ್ರೂರ ಮಾಸವೆಂದು? ಅವನು ಆ ಪದ್ಯ ಬರೆಯುತ್ತಿದ್ದ ಹೊತ್ತಿಗೆ ಮೊದಲನೇ ಮಹಾಯುದ್ಧ ಮುಗಿದಿತ್ತು. 1922ರಲ್ಲಿ ಇದನ್ನವನು ಕೂತು ಬರೆದಾಗ, ಆಗಷ್ಟೇ ಅವನ ಮುಂದೆ, ಮಹಾಸಮರದಲ್ಲಿ ಮಡಿದ ಎರಡು ಕೋಟಿ ಜನರ ಕಳೇಬರ ಗಳು ಕಾಣಿಸಿದ್ದಿರಬಹುದು.

ಯುರೋಪು ಬಹುತೇಕ ಸುಟ್ಟು ಕಪ್ಪಾಗಿತ್ತು. ಯುದ್ಧಾತುರ ನಾಯಕರು ಸೃಷ್ಟಿಸಿದ ಆ ಬೂದಿಯ ರಾಶಿಯಿಂದ ಕೋಟ್ಯಂತರ ಜನರ ನಿಟ್ಟುಸಿರು ಹೊಗೆಯಾಡುತ್ತಿತ್ತು. ಅಲ್ಲಿಂದಲೇ ಬಹುಶಃ ಹೊಸ ಹುಟ್ಟಿನ ಧ್ಯಾನವೂ ಶುರುವಾಯಿತಿರಬೇಕು. ಆ ಹೊಸ ಮೊಳಕೆಯ ಹಂಬಲವೇ ಎಲಿಯಟ್‌ನ ಕಾವ್ಯದ ರೂಹು ಕೂಡ ಆಯಿತು.

Screenshot_8

ಅವನು ವ್ಯರ್ಥನಂದನವೆಂದು ಕರೆದುದು ಪ್ರೀತಿ ಹುಟ್ಟದ ಮನುಷ್ಯನೊಳಗಿನ ಜಗತ್ತನ್ನು. ಮತ್ತು ಏಪ್ರಿಲ್ ಅನ್ನು ಕ್ರೂರ ತಿಂಗಳೆಂದುದು ಆ ಮಾಸದ ಬಿರುಬಿಸಿಲಿಗಲ್ಲ. ಕಳಚಿದ ಎಲೆ ನೆಲ ತಾಗುವ ಮುನ್ನ ಹೊಸ ಚಿಗುರನ್ನು ಒಂದು ಕನಸಿನ ಮೊದಲ ಕ್ಷಣದಂತೆ ಅರಳಿಸುವ ಕಷ್ಟ, ಮಗುವನ್ನು ಗರ್ಭದಿಂದ ಹೊರದೂಡುವ ತಾಯಿಯ ಪ್ರಸವದ ನೋವು ಇದೆಯಲ್ಲ- ಅದರ ಹಿನ್ನೆಲೆಯಲ್ಲಿ. ಮತ್ತೀಗ ಈ ಏಪ್ರಿಲ್ ಮಾಸವನ್ನೇ ನೋಡಿ. ಇದರ ಬರ್ಬರತೆ ಇಲ್ಲಿಗೇ ನಿಲ್ಲುವ ಯಾವ ಲಕ್ಷಣವೂ ಕಾಣುತ್ತಿಲ್ಲ.

ಸುಡುವ ಧಗೆ ಹಾಗಿರಲಿ. ಜಗತ್ತಿನ ಅತ್ಯಂತ ಶಕ್ತ ದೇಶದ ನಾಯಕರು ಅತಿ ಕ್ರೂರಿಯೂ ಆಗಿರುವ, ಪ್ರಪಂಚಕ್ಕೆ ಅಗತ್ಯವಿಲ್ಲದ ಯುದ್ಧವನ್ನು ತಂದಿಕ್ಕಿರುವ ಬಗೆಯನ್ನು ನೋಡಿ. ಇಂಥ ನಾಯಕರ ಎದೆಗಳು ಸದಾ ಏಪ್ರಿಲ್ ಮಾಸದ ಬಣಗುಡುವ ಗದ್ದೆಬಯಲುಗಳು. ಇಲ್ಲಿ ಹಸಿರಿನ ಹೆಸರೂ ಜನಿಸದು.

ಬಡಿದಾಡುವುದಕ್ಕಾಗಿಯೇ ಹುಟ್ಟಿಕೊಂಡಂತಿರುವ ಈ ದೊರೆಗಳಿಂದಾಗಿ ಈ ಏಪ್ರಿಲ್‌ನ ಕ್ರೌರ್ಯ ಮೇ ಜೂನ್ ಗೂ ವಿಸ್ತರಿಸುವ, ಮತ್ತಾಚೆಗೂ ಬೆಳೆಯುವ ಎಲ್ಲ ಸಾಧ್ಯತೆಯೂ ಇದೆ. ತುಟ್ಟಿಯಾದ ಪೆಟ್ರೋಲ್ ಡೀಸೆಲ್‌ನ ಘಾಟು ಗಾಳಿ ತುಂಬಾ ಹರಡಿ ಉಸಿರುಗಟ್ಟಿಸುತ್ತಿದೆ.

ಕೈಚಾಚಲಿರುವ ಶ್ರೀಸಾಮಾನ್ಯನ ಸಾಲವನ್ನು ವಿಸ್ತರಿಸಲು ಧನಿಕರ ಕಣ್ಣುಗಳು ಹೊಂಚುತ್ತಿವೆ. ‘ಅತಿ ಕ್ರೂರ ಮಾಸ ಏಪ್ರಿಲ್. ಅದು ಬರಡು ಮಣ್ಣಿನಿಂದ ಲೈಲಾಕ್ ಹೂಗಳನ್ನು ಬೆಳೆಸುತ್ತದೆ. ನೆನಪು ಮತ್ತು ಆಸೆಗಳನ್ನು ಬೆರೆಸುತ್ತದೆ. ಮರಗಟ್ಟಿದ ಬೇರುಗಳನ್ನು ವಸಂತ ಮಳೆಯಲ್ಲಿ ಕದಡುತ್ತದೆ.

ಚಳಿಗಾಲವೇ ಪರವಾಗಿಲ್ಲ, ಅದು ನಮ್ಮನ್ನು ಬೆಚ್ಚಗಿಟ್ಟಿತ್ತು. ಬಚ್ಚಿಡುವ ಹಿಮದಿಂದ ಭೂಮಿ ಯನ್ನು ಮುಚ್ಚಿ, ಒಣಗಿದ ಗಡ್ಡೆಗಳಿಂದ ನಮ್ಮ ಜೀವಗಳನ್ನು ಉಳಿಸಿತ್ತು’ ಎಂದು ಎಲಿಯಟ್ ಬರೆಯುತ್ತಾನೆ. ಕಳೆದು‌ ಹೋದ ಚಳಿಗಾಲದ ಬಗ್ಗೆ ಅವನಿಗೆ ವ್ಯಾಮೋಹವೂ ಇಲ್ಲ, ಬಂದಿರುವ ಏಪ್ರಿಲ್ ಬಗ್ಗೆ ಬೇಸರವೂ ಇಲ್ಲ. ಆದರೆ ಮನುಷ್ಯನ ಒಳಜಗತ್ತನ್ನು ಯಾತನಾಮಯಗೊಳಿಸಿರುವ ಈ ದುರ್ಭರ ದಿನಗಳಿಂದಲೇ ಹೊಸ ಹುಟ್ಟು ಮೂಡಿಬರುವ ಸಾಧ್ಯತೆ ಅವನ ಕಾವ್ಯವನ್ನು ಆವರಿಸಿದೆ.

ಎಲಿಯಟ್‌ನ ಮಾತುಗಳಿಗೆ ಕನ್ನಡದಲ್ಲಿ ಸ್ವಲ್ಪ ಸಾಮ್ಯದ ಮಾತುಗಳನ್ನು ಬರೆದವರು ಕೆ.ಎಸ್ ನರಸಿಂಹಸ್ವಾಮಿಯವರೇ ಇರಬೇಕು. ‘ಬತ್ತಿದ ಹೊಳೆ; ಅದರಾಚೆಗೆ ತಿರುಗುತ್ತಿದೆ ಗಾಣ/ ಮೇಲೆತ್ತಿದ ಚಾಟಿಯಲಿದೆ ಮುದಿಯೆತ್ತಿನ ಪ್ರಾಣ/ ನಡುಬೇಸಿಗೆ ಹಗಲಾಗಿದೆ ಬಿಸಿಲಿನ ಅಸಿಧಾರೆ/ ಇರುಳುದ್ದಕು ನೇಯುತ್ತಿದೆ ಬರಿಗನಸಿನ ಸೀರೆ’ ಎಂದವರು ಅವರು.

‘ಗಿಳಿ ಕೋಗಿಲೆ ಹಾಡಿದರೂ ತಲೆದೂಗದ ಬಾಳು, ಬಂಡೆಯ ಹಣೆಗೇರುತ್ತಿದೆ ಬಂಡಿಯ ಕೆಂಧೂಳುಭಿ ಎಂದವರೂ ಅವರೇ. ಹಾಗಂತ ಭಿಜನಜೀವನ ಸಾಗುತ್ತಿದೆ ಉರಿಬಿಸಿಲನು ತಾಳಿ’ ಎಂಬ ಸಮಾಧಾನ ವೂ ಅವರಲ್ಲುಂಟು. ‘ಕಾಲಚಕ್ರ ಉರುಳುತಿದೆ’ ಎಂಬ ಸಾಂಪ್ರದಾಯಿಕ ವಿವೇಕ ಅವರನ್ನು ಕಾಪಾಡುತ್ತದೆ. ಎಲಿಯಟ್ ಮೇಲೆ ವೇದ ಉಪನಿಷತ್ತುಗಳ ಪ್ರಭಾವ ಉಂಟು. ಹೀಗಾಗಿ ಅವನು ಕವಿತೆಯನ್ನು ಕೊನೆಗೊಳಿಸಲು ಭಾರತಕ್ಕೇ ಬರುತ್ತಾನೆ. ‘ಗಂಗೆಯ ಒಡಲು ಒಣಗಿದೆ, ಒಣಗಿದ ಎಲೆಗಳು ಮಳೆಗೆ ಕಾಯುತ್ತಿವೆ. ದೂರದ ಹಿಮಾಲಯ ಪರ್ವತಗಳ ಮೇಲೆ ಕಪ್ಪು ಮೋಡಗಳು ಸೇರುತ್ತಿವೆ. ಕಾಡು ಮೌನವಾಗಿ ನಿಶ್ಚಲವಾಗಿ ನಿಂತಿದೆ. ಏನನೋ ಕಾಯುತ್ತಿರುವಂತೆ ಅದಾದ ಮೇಲೆ, ಗುಡುಗೊಂದು ಕೇಳಿಸುತ್ತದೆ’.

ಗುಡುಗು ಏನು ನುಡಿಯುತ್ತದೆ? ಅದು ಬೃಹದಾರಣ್ಯಕ ಉಪನಿಷತ್ತಿನಿಂದ ಎತ್ತಿಕೊಂಡ ಒಂದು ಕತೆ. ಅದು ಹೀಗಿದೆ: ಪ್ರಜಾಪತಿ ಬ್ರಹ್ಮನ ಮಕ್ಕಳಲ್ಲಿ ಮೂರು ವರ್ಗ- ಸುರರು, ಅಸುರರು ಹಾಗೂ ನರರು. ಪ್ರಜಾಪತಿಯಲ್ಲಿ ವಿದ್ಯಾರ್ಜನೆ, ಬ್ರಹ್ಮಚರ್ಯ, ವಾಸ. ಕಲಿಕೆಯ ಒಂದು ಮುಖ್ಯ ಹಂತದಲ್ಲಿ ಉಪದೇಶಕ್ಕಾಗಿ ಕೇಳಿಕೊಂಡ ಮಕ್ಕಳಿಗೆ ಪ್ರಜಾಪತಿ ಆಗಸದಲ್ಲಿ ಮೊರೆ ಮೊರೆದ ಒಂದು ಗುಡುಗನ್ನು ಕೇಳಿಸಿದ.

ಅದು ‘ದ, ದ, ದ’ ಎಂಬ ಹಾಗೆ ಸದ್ದು ಮಾಡಿತು. ಅದರಿಂದಲೇ ಒಂದಕ್ಷರವನ್ನು ತೆಗೆದು ಮಕ್ಕಳಿಗೆ ಉಪದೇಶಿಸಿದ. ಅದು ‘ದ’, ನಂತರ ಅರ್ಥವಾಯಿತಾ ಎಂದು ಮಕ್ಕಳನ್ನು ಕೇಳಿದ.ಮೂವರೂ ತಮಗೆ ಅರ್ಥವಾಯಿತೆಂದರು. ಹಾಗಾದರೆ ಏನು ಅದರರ್ಥ ಎಂದು ಪ್ರಜಾಪತಿ ಮಕ್ಕಳನ್ನು ಕೇಳಿದ. ನರರು ಹೇಳಿದರು- ‘ದ ಎಂದರೆ ದತ್ತ’. ಸುರರು ಹೇಳಿದರು- ‘ದ ಎಂದರೆ ದಮ್ಯತಾ’.

ಅಸುರರು ನುಡಿದರು- ‘ದ ಎಂದರೆ ದಯಾಧ್ವಂ’. ಮೂವರೂ ಪಡೆದುದು ಒಂದೇ ಅಕ್ಷರ. ಅರ್ಥ ವಾದುದು ಮಾತ್ರ ಬೇರೆ ಬೇರೆ. ಪ್ರಜಾಪತಿಯು ಮೂವರ ತಿಳಿವಳಿಕೆಯೂ ಸರಿ ಎಂದ. ಅದು ಹೇಗೆ? ಮನುಷ್ಯರು ದ ಎಂದರೆ ದತ್ತ ಎಂದುಕೊಂಡರು. ಹಾಗೆಂದರೆ ‘ದಾನ ಮಾಡಿ’ ಎಂದು. ಸಂಪಾದಿಸು ವುದು, ಅದರ ಮೇಲೆ ಮೋಹ ಹಾಗೂ ಲೋಭ ಮನುಷ್ಯರ ಪಾಡು. ದಾನ ಮಾಡುವ ಮೂಲಕ ಲೋಭ ಮೋಹಗಳ ಜಟಿಲವನ್ನು ಮೀರಬಹುದು. ದೇವತೆಗಳು ದ ಎಂದರೆ ದಮ್ಯತ ಎಂದು ಕೊಂಡರು.

ದೇವತೆಗಳು ಭೋಗಬುದ್ಧಿಯಿಂದ ಆವೃತರಾದವರು. ಅತಿಭೋಗವೇ ವಿನಾಶದ ದಾರಿ. ಈ ಭೋಗ ಬುದ್ಧಿಯನ್ನು ದಮನ ಮಾಡುವ ವ್ರತವೇ ಅರಿವಿನ ಹೆzರಿ. ಇನ್ನು ಅಸುರರಿಗೆ ದ ಎಂದರೆ ದಯಾಧ್ವಂ. ಹಾಗೆಂದರೆ ದಯೆ ತೋರಿಸಿ ಎಂದರ್ಥ. ರಾಕ್ಷಸರು ಬಲಿಷ್ಠರು. ಬಲದಿಂದಲೇ ಎಲ್ಲವನ್ನೂ ಪಡೆಯಬಹುದು ಎಂದುಕೊಂಡವರು. ಆದರೆ ಈ ಬಲ ಇನ್ನೊಬ್ಬರ ಸೊತ್ತನ್ನು ಸೆಳೆಯುವುದಕ್ಕಲ್ಲ, ದಯೆ ತೋರಿಸುವುದಕ್ಕೆ ಎಂದು ತಿಳಿದುಕೊಂಡರು.

ಹೀಗೆ ಪ್ರಜಾಪತಿ ಅವರವರಿಗೆ ಬೇಕಾದುದನ್ನು ಅವರವರ ರೀತಿಯ ಮನದಟ್ಟು ಮಾಡಿಸಿದ. ಮನುಷ್ಯರಲ್ಲೂ ಈ ಮೂವರೂ ಇದ್ದಾರೆ. ಲೋಭಿಗಳು, ಬಲದಿಂದ ಸೊಕ್ಕಿದವರು, ಅತಿಭೋಗಿ ಗಳು. ನೀಡುವ, ದಯೆ ತೋರುವ, ಸಂಯಮ ಸಾಧಿಸುವುದರಿಂದ ಇವರೆಲ್ಲರೂ ತಮ್ಮ ತಮ್ಮ ಮಿತಿಗಳನ್ನು ಮೀರಬಹುದು. ಈ ಮೂರೂ ಇಲ್ಲದವರಿಂದಲೇ ಯುದ್ಧಗಳು ಉಂಟಾಗುವುದು, ಈ ಮೂರನ್ನೂ ಸಾಧಿಸುವುದರಿಂದಲೇ ವಿಶ್ವ ಶಾಂತಿ ಎಂದು ಎಲಿಯಟ್ ಮೊದಲ ಮಹಾಯುದ್ಧದ ನಂತರ ಉಧ್ವಸ್ತಗೊಂಡ ನೆಲದಲ್ಲಿ ಕುಳಿತು ಹೇಳುತ್ತಿದ್ದಾನೆ. ಈಗ ಎರಡನೇ ವಿಶ್ವಸಮರವೂ ಮುಗಿದು, ಮೂರನೆಯದು ಕಾಲಿಟ್ಟಿದೆ.

ಕೇಳುವವರ್ಯಾರು? ಎಲಿಯಟ್ ಕವಿತೆಯನ್ನು ‘ಶಾಂತಿ: ಶಾಂತಿ: ಶಾಂತಿ:’ ಎಂದು ಮುಗಿಸುತ್ತಾನೆ. ಎಲ್ಲರ ಮನಸ್ಸೂ ಕಲಕಿಹೋಗಿರುವ, ಕ್ರೂರ ಏಪ್ರಿಲ್ ಮಾಸದ ಧಗೆಯಿಂದ ಚಡಪಡಿಸುತ್ತಿರುವ ದಿನಗಳಲ್ಲಿ ಎಲ್ಲರಿಗೂ ಬೇಕಾದುದು ಅದೇ. ಆದಷ್ಟು ಬೇಗನೆ ಯುದ್ಧಾತುರ ಇಳಿದು, ಸಂಯಮ ದಿಂದ ಬಾಳುವ ಗುಣ

ಧರೆಯಾಳ್ವರಿಗೆ ಬರಲಿ. ಎಲಿಯಟ್ ಇದನ್ನು ಬರೆದು ನೂರನಾಲ್ಕು ವರ್ಷಗಳಾಗಿವೆ. ಆದರೆ ಅದರ ಸಂದೇಶ ಜೀವಂತವಾಗಿದೆ. ‘ಮನುಷ್ಯ ನಿಧಾನವಾಗಿ ವಿಕಾಸ ಹೊಂದಿದ್ದಾನೆ’ ಎಂಬ ಮಾತನ್ನೇ ಕತ್ತರಿಸಿ ಜಿಡ್ಡು ಕೃಷ್ಣಮೂರ್ತಿಯವರು ‘ನಿಜಕ್ಕೂ ವಿಕಾಸ ಹೊಂದಿದ್ದಾನೇನು? ಸಹಸ್ರಮಾನಗಳ ಹಿಂದಿನ ಆದಿಮಾನವನ ಪ್ರವೃತ್ತಿಗಳು ಇಂದಿಗೂ ಅವನಲ್ಲಿ ಇಲ್ಲವೆ?’ ಎಂದು ಪ್ರಶ್ನಿಸುತ್ತಾರೆ. ನರಮಾನವ ವಿಕಾಸ ಹೊಂದಿಲ್ಲ ಎಂದು ಇಂಥ ಯುದ್ಧಗಳೂ, ಹೊಂದಿದ್ದಾನೆ ಎಂದು ಇಂಥ ಕವಿತೆಗಳೂ ರುಜುವಾತು ಮಾಡುತ್ತವೆ.