ಶಿವಮೊಗ್ಗದಲ್ಲಿ ಘೋರ ಘಟನೆ; ಶಾಲೆಯಲ್ಲಿ ಹೃದಯಾಘಾತದಿಂದ 1ನೇ ತರಗತಿ ಬಾಲಕ ಸಾವು
Shivamogga News: ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನ ಕರೂರು ಹೋಬಳಿ ಹಾಳಸಸಿ ಗ್ರಾಮ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ದುರ್ಘಟನೆ ಸಂಭವಿಸಿದೆ. ಶಾಲೆ ಆವರಣದಲ್ಲಿ ಏಕಾಏಕಿ ಕುಸಿದು ಬಿದ್ದಿದ್ದ ಬಾಲಕನನ್ನು ಆಸ್ಪತ್ರೆಗೆ ಕರೆದೊಯ್ಯಲು ಶಿಕ್ಷಕರು ಮುಂದಾಗಿದ್ದರು. ಆದರೆ ದುರಾದೃಷ್ಟವಶಾತ್ ಬಾಲಕ ಮಾರ್ಗ ಮಧ್ಯೆ ಕೊನೆಯುಸಿರೆಳೆದಿದ್ದಾನೆ.
ಮೃತ ಬಾಲಕ ತ್ರಿಲೋಕ್ ಜೈನ್. -
ಶಿವಮೊಗ್ಗ: ಇತ್ತೀಚೆಗೆ ಸಣ್ಣ ವಯಸ್ಸಿನವರೂ ಹೃದಯಾಘಾತದಿಂದ ಸಾಯುವ ಪ್ರಕರಣಗಳು ಹೆಚ್ಚಾಗುತ್ತಿವೆ. ಈ ನಡುವೆ ಶಿವಮೊಗ್ಗ (Shivamogga) ಜಿಲ್ಲೆ ಸಾಗರ ತಾಲೂಕಿನ ಕರೂರು ಹೋಬಳಿ ಹಾಳಸಸಿ ಗ್ರಾಮ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಒಂದನೇ ತರಗತಿ ವಿದ್ಯಾರ್ಥಿಯೊಬ್ಬ ಹೃದಯಾಘಾತದಿಂದ (heart attack) ಮೃತಪಟ್ಟಿರುವ ಘಟನೆ ನಡೆದಿದೆ.
ಬಾಲಕ ಹೃದಯಾಘಾತದಿಂದ ಶನಿವಾರ ಮೃತಪಟ್ಟಿದ್ದು, ಈ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಕೊಡನವಳ್ಳಿ ಗ್ರಾಮದ ಗೌತಮ್ ಜೈನ್ ಹಾಗೂ ಶಿಲ್ಪಾ ದಂಪತಿ ಪುತ್ರ ತ್ರಿಲೋಕ್ ಜೈನ್ (6) ಮೃತ ಬಾಲಕ. ಶನಿವಾರ ಮಧ್ಯಾಹ್ನ ವಿದ್ಯಾರ್ಥಿ ತ್ರಿಲೋಕ್ ಜೈನ್, ಶಾಲೆ ಮುಗಿಯುವ ಸಮಯದಲ್ಲಿ ಆವರಣದಲ್ಲಿ ಏಕಾಏಕಿ ಕುಸಿದು ಬಿದ್ದಿದ್ದನು. ತಕ್ಷಣವೇ ಶಾಲೆ ಶಿಕ್ಷಕರು ಪುಟ್ಟ ಬಾಲಕನನ್ನು ಆಸ್ಪತ್ರೆಗೆ ಕರೆದೊಯ್ಯಲು ಮುಂದಾಗಿದ್ದರು. ಆದರೆ ದುರಾದೃಷ್ಟವಶಾತ್ ತ್ರಿಲೋಕ್ ಜೈನ್ ಮಾರ್ಗ ಮಧ್ಯೆ ಕೊನೆಯುಸಿರೆಳೆದಿದ್ದಾನೆ.
ಅನೈತಿಕ ಸಂಬಂಧದ ಶಂಕೆ; ಲಿವ್ ಇನ್ ಪಾರ್ಟ್‌ನರ್ ಸಂಗಾತಿಯ ಕತ್ತು ಸೀಳಿದ ವ್ಯಕ್ತಿ
ಪುತ್ರನನ್ನು ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದ್ದು, ಒಂದನೇ ತರಗತಿಯ ಬಾಲಕನ ಸಾವಿಗೆ ಗ್ರಾಮಸ್ಥರು, ಶಾಲಾಭಿವೃದ್ಧಿ ಸಮಿತಿ ಸದಸ್ಯರು, ಮುಖ್ಯ ಶಿಕ್ಷಕರು ಕಂಬನಿ ಮಿಡಿದಿದ್ದಾರೆ. ತ್ರಿಲೋಕ್‌ಗೆ ಮೊದಲಿನಿಂದಲೂ ಯಾವುದೇ ಹೃದಯ ಸಂಬಂಧಿತ ಸಮಸ್ಯೆಗಳಿರಲಿಲ್ಲ. ಆರೋಗ್ಯವಾಗಿ ಬಾಲಕನೇ ಹೃದಯಾಘಾತದಿಂದ ಮೃತಪಟ್ಟಿರುವುದು ಜನರಲ್ಲಿ ಆತಂಕ ಮೂಡಿಸಿದೆ.
ಹೇಮಾವತಿ ಜಲಾಶಯದ ಹಿನ್ನೀರಿನಲ್ಲಿ ಮುಳುಗಿ ಬೆಂಗಳೂರಿನ ಮೂವರು ಯುವಕರ ಸಾವು
ಹಾಸನ: ಹೇಮಾವತಿ ಜಲಾಶಯದ ಹಿನ್ನೀರಿನಲ್ಲಿ (Hemavathi Backwaters Tragedy) ಮುಳುಗಿ ಬೆಂಗಳೂರಿನ ಮೂವರು ಯುವಕರು ಮೃತಪಟ್ಟಿರುವ ಘಟನೆ ಹಾಸನ ತಾಲೂಕಿನ ಶೆಟ್ಟಿಹಳ್ಳಿ ಚರ್ಚ್ ಸಮೀಪ ನಡೆದಿದೆ. ಪ್ರವಾಸಕ್ಕೆಂದು ಬಂದಿದ್ದ ಯುವಕರು, ಈಜಲು ನದಿಗೆ ಇಳಿದಿದ್ದ ವೇಳೆ ದುರ್ಘಟನೆ ಸಂಭವಿಸಿದೆ.
ಬೆಂಗಳೂರು ಮೂಲದ ಚರಣ್ (20), ಮಿಲನ್ (23) ಹಾಗೂ ಮಣಿಕಂಠ (20) ಮೃತ ಯುವಕರು ಎಂದು ಗುರುತಿಸಲಾಗಿದೆ. ಬೆಂಗಳೂರಿನಿಂದ ಹತ್ತು ಯುವಕರ ತಂಡ ಟಿಟಿ ವಾಹನದಲ್ಲಿ ಧರ್ಮಸ್ಥಳಕ್ಕೆ ಪ್ರವಾಸಕ್ಕೆಂದು ತೆರಳಿತ್ತು. ದೇವರ ದರ್ಶನ ಮುಗಿಸಿ ಹಿಂತಿರುಗುವ ಮಾರ್ಗಮಧ್ಯೆ ಹಾಸನ ಜಿಲ್ಲೆಯ ಹೇಮಾವತಿ ಹಿನ್ನೀರಿನಲ್ಲಿರುವ ಶೆಟ್ಟಿಹಳ್ಳಿ ಚರ್ಚ್ ವೀಕ್ಷಿಸಲು ಬಂದಿದ್ದರು. ಈ ವೇಳೆ ಚರ್ಚ್ ಬಳಿಯ ಹೇಮಾವತಿ ನದಿಯ ಹಿನ್ನೀರಿನಲ್ಲಿ ಯುವಕರು ಈಜಲು ನೀರಿಗೆ ಇಳಿದಿದ್ದಾರೆ.
ನೀರಿನ ಆಳದ ಅರಿವಿಲ್ಲದೆ ಇಳಿದ ಪರಿಣಾಮ ಚರಣ್, ಮಿಲನ್ ಮತ್ತು ಮಣಿಕಂಠ ನೀರಿನಲ್ಲಿ ಮುಳುಗಲಾರಂಭಿಸಿದ್ದಾರೆ. ತಮ್ಮ ಮೂವರು ಸ್ನೇಹಿತರು ಕಣ್ಣೆದುರೇ ನೀರಿನಲ್ಲಿ ಮುಳುಗುತ್ತಿರುವುದನ್ನು ಕಂಡು ಆಘಾತಗೊಂಡ ಉಳಿದ ಸ್ನೇಹಿತರು, ಕೂಡಲೇ ದಡಕ್ಕೆ ಬಂದು ರಕ್ಷಣೆಗಾಗಿ ಕಿರುಚಾಡಿದ್ದಾರೆ. ಆದರೆ, ಅಷ್ಟರಲ್ಲಾಲೇ ಆ ಮೂವರೂ ಯುವಕರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ. ಮೃತಪಟ್ಟ ಮೂವರಿಗೆ ಈಜು ಬರುತ್ತಿರಲಿಲ್ಲ ಎನ್ನಲಾಗಿದೆ.
ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಗೊರೂರು ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸದ್ಯ ಮೃತ ಯುವಕರ ಮೃತದೇಹಕ್ಕಾಗಿ ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಜಂಟಿ ಶೋಧಕಾರ್ಯ ನಡೆಸುತ್ತಿದ್ದಾರೆ.