ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Surendra Pai Column: ಪಶ್ಚಿಮಘಟ್ಟದ ಆಕ್ರಂದನ: ಮತ್ತೆ ನೆನಪಾಗುವ ಪ್ರೊ. ಗಾಡ್ಗೀಳ್

ಪ್ರತಿ ಮಳೆಗಾಲದಲ್ಲೂ ಮಲೆನಾಡಿನ ಹಸಿರು ಪಶ್ಚಿಮ ಬೆಟ್ಟಗಳು ಧರೆಗುರುಳಿ, ಕಣ್ಣೆದುರೇ ಮನುಷ್ಯರು ಮಣ್ಣಿನಡಿ ಜೀವಂತ ಸಮಾಧಿಯಾಗುವ ಭೀಕರ ದೃಶ್ಯಗಳನ್ನು ಕಾಣುವಾಗ, ಕಣ್ಣೀರ ನಡುವೆಯೂ ಮತ್ತೆ ಮತ್ತೆ ನೆನಪಾಗುವುದು ಪಶ್ಚಿಮ ಘಟ್ಟಗಳ ರಕ್ಷಕ, ಪರಿಸರ ವಿಜ್ಣಾನಿ ಪ್ರೊ. ಮಾಧವ್ ಗಾಡ್ಗೀಳ್ ಅವರ ಮುನ್ಸೂಚನೆಯ ಮಾತುಗಳು ಹಾಗೂ ಅವರ ವರದಿ.

ಪಶ್ಚಿಮಘಟ್ಟದ ಆಕ್ರಂದನ: ಮತ್ತೆ ನೆನಪಾಗುವ ಪ್ರೊ. ಗಾಡ್ಗೀಳ್

-

Profile
Ashok Nayak Jul 21, 2026 6:00 AM

ಹಸಿರು ಸಿರಿ

- ಸುರೇಂದ್ರ ಪೈ

ಪ್ರತಿ ಮಳೆಗಾಲದಲ್ಲೂ ಮಲೆನಾಡಿನ ಹಸಿರು ಪಶ್ಚಿಮ ಬೆಟ್ಟಗಳು ಧರೆಗುರುಳಿ, ಕಣ್ಣೆದುರೇ ಮನುಷ್ಯರು ಮಣ್ಣಿನಡಿ ಜೀವಂತ ಸಮಾಧಿಯಾಗುವ ಭೀಕರ ದೃಶ್ಯಗಳನ್ನು ಕಾಣುವಾಗ, ಕಣ್ಣೀರ ನಡುವೆಯೂ ಮತ್ತೆ ಮತ್ತೆ ನೆನಪಾಗುವುದು ಪಶ್ಚಿಮ ಘಟ್ಟಗಳ ರಕ್ಷಕ, ಪರಿಸರ ವಿಜ್ಣಾನಿ ಪ್ರೊ. ಮಾಧವ್ ಗಾಡ್ಗೀಳ್ ಅವರ ಮುನ್ಸೂಚನೆಯ ಮಾತುಗಳು ಹಾಗೂ ಅವರ ವರದಿ.

ಒಂದೂವರೆ ದಶಕದ ಹಿಂದೆಯೇ ಅವರು ‘ಪಶ್ಚಿಮಘಟ್ಟದ ಒಡಲನ್ನು ಇಷ್ಟೊಂದು ಕ್ರೂರವಾಗಿ ಸೀಳಬೇಡಿ, ಪ್ರಕೃತಿ ಸಹಿಸದು’ ಎಂದು ಎಚ್ಚರಿಸಿದ್ದರು. ಅಂದು ನಾವು ಆಡಳಿತದ ಅಹಂಕಾರದಲ್ಲಿ ಆ ವರದಿಯನ್ನು ಕಸದ ಬುಟ್ಟಿಗೆ ಹಾಕಿದೆವು. ಆದರೆ ಇಂದು ಪ್ರಕೃತಿ ಅದೇ ವರದಿಯ ಪ್ರತಿಯೊಂದು ಎಚ್ಚರಿಕೆಯನ್ನು ನತದೃಷ್ಟ ಅಮಾಯಕರ ಹೆಣಗಳ ಮೇಲೆ ರಕ್ತದ ಅಕ್ಷರಗಳಲ್ಲಿ ಬರೆದು ತೋರಿಸುತ್ತಿದೆ.

ಇಂತಹ ದುರಂತ ಸಂಭವಿಸಿದಾಗ ಇವೆಲ್ಲವೂ ಕೇವಲ ‘ಪ್ರಕೃತಿ ವಿಕೋಪ’ ಅಥವಾ ‘ದೇವರ ಇಚ್ಛೆ’ ಎಂದು ಕೈತೊಳೆದುಕೊಳ್ಳುವುದು ನಮ್ಮ ಸರಕಾರದ ಸಾಮೂಹಿಕ ಆಡಳಿತಾತ್ಮಕ ವೈಫಲ್ಯ ಮತ್ತು ಜಾಣ ಕುರುಡನ್ನು ಪ್ರದರ್ಶಿಸುತ್ತದೆ. ಸತ್ಯ ಏನೆಂದರೆ, ಇವೆಲ್ಲವೂ ಪ್ರಕೃತಿಯ ಮುನಿಸಲ್ಲ; ಬದಲಿಗೆ ನಾವು ಮಾಡಿದ ಅವೈಜ್ಞಾನಿಕ ಹಸ್ತಕ್ಷೇಪಕ್ಕೆ ಪ್ರಕೃತಿ ನೀಡುತ್ತಿರುವ ಭೀಕರ ಪ್ರತ್ಯುತ್ತರ.

ಪ್ರೊ. ಮಾಧವ್ ಗಾಡ್ಗೀಳ್ ನೇತೃತ್ವದ ಪಶ್ಚಿಮಘಟ್ಟಗಳ ಪರಿಸರ ತಜ್ಞರ ಸಮಿತಿ (WGEEP) 2011ರಲ್ಲಿ ಕೇಂದ್ರ ಸರಕಾರಕ್ಕೆ ಸಲ್ಲಿಸಿದ ವರದಿಯು ಪಶ್ಚಿಮಘಟ್ಟಗಳ ಇತಿಹಾಸದ ಅತ್ಯಂತ ವೈeನಿಕ ಮತ್ತು ಕ್ರಾಂತಿಕಾರಿ ದಾಖಲೆಯಾಗಿದೆ. ಒಂದು ವರ್ಷದ ನಿರಂತರ ಅಧ್ಯಯನದಲ್ಲಿ ಪಶ್ಚಿಮ ಘಟ್ಟ ವ್ಯಾಪ್ತಿಯ 6 ರಾಜ್ಯಗಳ (ಕರ್ನಾಟಕ, ಕೇರಳ, ಮಹಾರಾಷ್ಟ್ರ, ಗೋವಾ, ತಮಿಳುನಾಡು, ಗುಜರಾತ್) 44 ಜಿಲ್ಲೆಗಳ, 142 ತಾಲ್ಲೂಕುಗಳ 1,29,037 ಚದರ ಕಿಲೋಮೀಟರ್ ಪ್ರದೇಶವನ್ನು ಈ ಸಮಿತಿಯು ಸಂಪೂರ್ಣವಾಗಿ ಅಧ್ಯಯನ ಮಾಡಿತು.

ಇದನ್ನೂ ಓದಿ: Surendra Pai Column: ಐಸಿಯುನಲ್ಲಿ ಸಿಬಿಎಸ್‌ಇ ಆಡಳಿತ ವ್ಯವಸ್ಥೆ !

ಗಾಡ್ಗೀಳ್ ವರದಿಯ ತಿರುಳು ಸರಳ ಮತ್ತು ವೈಜ್ಞಾನಿಕವಾಗಿತ್ತು. ಪಶ್ಚಿಮಘಟ್ಟವನ್ನು ಅದರ ಸೂಕ್ಷ ತೆಗೆ ತಕ್ಕಂತೆ ಮೂರು ವಲಯಗಳಾಗಿ ವಿಂಗಡಿಸಿ, ಅತ್ಯಂತ ದಟ್ಟ ಮತ್ತು ಪರಿಸರ ಸೂಕ್ಷ ವಿರುವ ‘ವಲಯ-1’ ರಲ್ಲಿ ಬೃಹತ್ ಮೂಲಸೌಕರ್ಯ ಯೋಜನೆಗಳು, ಕಲ್ಲು ಕ್ವಾರಿಗಳು, ಗಣಿಗಾರಿಕೆ, ಬೃಹತ್ ಅಣೆಕಟ್ಟುಗಳು, ಉಷ್ಣ ವಿದ್ಯುತ್ ಸ್ಥಾವರಗಳು ಹಾಗೂ ವಾಣಿಜ್ಯ ರೆಸಾರ್ಟ್‌ಗಳನ್ನು ಕಟ್ಟುನಿಟ್ಟಾಗಿ ನಿಷೇಧಿಸಬೇಕು ಎಂದು ಅದು ಶಿಫಾರಸು ಮಾಡಿತ್ತು.

ಜೊತೆಗೆ ಈ ವರದಿಯ ಅತ್ಯಂತ ಕ್ರಾಂತಿಕಾರಿ ಅಂಶವೆಂದರೆ ಅಧಿಕಾರ ವಿಕೇಂದ್ರೀಕರಣ. ಪಶ್ಚಿಮ ಘಟ್ಟದ ಯಾವುದೇ ಒಂದು ಪ್ರದೇಶದಲ್ಲಿ ಅಭಿವೃದ್ಧಿ ಯೋಜನೆ (ರಸ್ತೆ, ಕಾರ್ಖಾನೆ, ಪ್ರವಾಸೋದ್ಯಮ) ಜಾರಿಗೆ ತರಬೇಕಾದವರೂ ಬೆಂಗಳೂರು ಅಥವಾ ದೆಹಲಿಯ ಅಧಿಕಾರಿಗಳಲ್ಲ, ಬದಲಿಗೆ ಅಲ್ಲಿನ ಸ್ಥಳೀಯ ಗ್ರಾಮ ಸಭೆಗಳು ಒಪ್ಪಿಗೆ ನೀಡಬೇಕು. ಸ್ಥಳೀಯ ಜನರೇ ತಮ್ಮ ಕಾಡಿನ ನಿಜವಾದ ರಕ್ಷಕರು ಎಂಬುದು ಗಾಡ್ಗೀಳ್ ಅವರ ವಾದವಾಗಿತ್ತು.

ಆದರೆ ಅಭಿವೃದ್ಧಿಯ ಹೆಸರಿನಲ್ಲಿ ನಾವು ಮಾಡಿದ್ದೇನು? ಹೆದ್ದಾರಿ ಅಗಲೀಕರಣಕ್ಕಾಗಿ ಬೆಟ್ಟಗಳನ್ನು ನೈಸರ್ಗಿಕ ಇಳಿಜಾರಿಗೆ ವಿರುದ್ಧವಾಗಿ, ಲಂಬವಾಗಿ (90 ಡಿಗ್ರಿ ಕೋನದಲ್ಲಿ) ಕತ್ತರಿಸಿದೆವು. ಸ್ಫೋಕ ಗಳನ್ನು ಬಳಸಿ ಕಲ್ಲು ಗಣಿಗಾರಿಕೆ ನಡೆಸಿ ಇಡೀ ಭೂಮಿಯ ತಳಪಾಯದ ಬಿರುಕು ಮೂಡಿಸಿದೆವು. ದಟ್ಟವಾದ ಕಾಡುಗಳನ್ನು ಸವರಿ ಕಾಂಕ್ರೀಟ್ ಕಾಡನ್ನು ನಿರ್ಮಿಸಿದೆವು. ನೈಸರ್ಗಿಕ ಕಾಡುಗಳನ್ನು ಕಡಿದು ಅಲ್ಲಿ ದೊಡ್ಡ ರೆಸಾರ್ಟ್‌ಗಳು, ಹೋಂಸ್ಟೇಗಳು, ಮತ್ತು ಏಕಬೆಳೆ ತೋಟಗಳನ್ನು (ಉದಾ ಹರಣೆಗೆ ರಬ್ಬರ್, ಅಕೇಶಿಯಾ) ನಿರ್ಮಿಸಿದೆವು. ತಮ್ಮ ದೊಡ್ಡ ಬಜೆಟ್‌ನ ಮೂಲಸೌಕರ್ಯ ಯೋಜನೆಗಳು ಸ್ಥಗಿತಗೊಂಡು ಅಭಿವೃದ್ಧಿ ಕುಂಠಿತಗೊಳ್ಳುತ್ತದೆ ಎಂದು ಪ್ರಭಾವಿ ಉದ್ಯಮಿಗಳು ರಾಜಕೀಯ ನಾಯಕರ ಮೇಲೆ ಒತ್ತಡ ತಂದರು. ಆಗ ರಾಜಕಾರಣಿಗಳು ಗಾಡ್ಗೀಳ್ ವರದಿ ಜಾರಿ ಯಾದರೆ ರೈತರನ್ನು ಒಕ್ಕಲೆಬ್ಬಿಸಲಾಗುತ್ತದೆ ಎಂಬ ಸುಳ್ಳನ್ನು ಹರಡಿ ಸ್ಥಳೀಯ ಜನಸಾಮಾನ್ಯರ ವರದಿಯ ವಿರುದ್ಧ ಆಕ್ರೋಶ ಮೂಡುವಂತೆ ಮಾಡಿದರು.

Prof G

ಇತ್ತ ಗಾಡ್ಗೀಳ್ ವರದಿಗೆ ಭಾರಿ ವಿರೋಧ ವ್ಯಕ್ತವಾಗುವಂತೆ ಸಂಚು ಮಾಡಿದ ಸರಕಾರಗಳು ಅದನ್ನು ಸಾರ್ವಜನಿಕವಾಗಿ ಕೈಬಿಡಲು ಡಾ. ಕಸ್ತೂರಿರಂಗನ್ ನೇತೃತ್ವದಲ್ಲಿ ಮತ್ತೊಂದು ಸಮಿತಿ ರಚಿಸಿ ತೇಪೆ ಹಚ್ಚಲು ಮುಂದಾದವು. ಕಸ್ತೂರಿರಂಗನ್ ಸಮಿತಿಯು ಗಾಡ್ಗೀಳ್ ವರದಿಯ ತೀವ್ರತೆಯನ್ನು ಕಡಿಮೆ ಮಾಡಿ, ಕೇವಲ ಶೇ.37ರಷ್ಟು ಪಶ್ಚಿಮಘಟ್ಟ ಪ್ರದೇಶವನ್ನು ಮಾತ್ರ ಸೂಕ್ಷ ವಲಯ ಎಂದು ಗುರುತಿಸಿತು. ಗಣಿಗಾರಿಕೆಗೆ ಹಸಿರು ನಿಶಾನೆ ತೋರಿಸಿತು. ದುರದೃಷ್ಟವಶಾತ್, ಸರಕಾರಗಳು ಇಂದಿಗೂ ಆ ತೇಪೆ ಕೆಲಸದ ಕಸ್ತೂರಿರಂಗನ್ ವರದಿಯನ್ನೂ ಸಹ ಪೂರ್ಣ ಪ್ರಮಾಣದಲ್ಲಿ ಜಾರಿಗೊಳಿಸದೆ ಕಾಲಹರಣ ಮಾಡುತ್ತಿವೆ.

ಒಂದು ವೇಳೆ ಸರಕಾರ ಗಾಡ್ಗೀಳ್ ವರದಿಯನ್ನು ಸಂಪೂರ್ಣವಾಗಿ ಅಥವಾ ಅದರ ಮೂಲ ಆಶಯಗಳೊಂದಿಗೆ ಅನುಷ್ಠಾನಕ್ಕೆ ತಂದಿದ್ದರೆ ಅಥವಾ ಮುಂದೆ ಅನುಷ್ಠಾನಕ್ಕೆ ತಂದರೆ, ಪಶ್ಚಿಮ ಘಟ್ಟದ ಪುನರುಜ್ಜೀವನ ಮತ್ತು ಉಳಿವು ಸಾಧ್ಯವಾಗುತ್ತದೆ. ಮುಖ್ಯವಾಗಿ ಮಾನವ ನಿರ್ಮಿತ ದುರಂತಕ್ಕೆ ಬ್ರೇಕ್ ಬೀಳಲಿದ್ದು, ಜೀವವೈವಿಧ್ಯ ನೆಮ್ಮದಿಯ ನಿಟ್ಟುಸಿರು ಬಿಡುತ್ತವೆ. ಪಶ್ಚಿಮಘಟ್ಟವು ಕೃಷ್ಣಾ, ಕಾವೇರಿ, ತುಂಗಭದ್ರಾ, ನೇತ್ರಾವತಿಯಂತಹ ದಕ್ಷಿಣ ಭಾರತದ ಪ್ರಮುಖ ನದಿಗಳ ಉಗಮ ಸ್ಥಾನವಾಗಿದೆ. ಇವೆಲ್ಲವೂ ಮರುಜೀವ ಪಡೆದುಕೊಳ್ಳುತ್ತವೆ.

ಗಾಡ್ಗೀಳ್ ವರದಿಯನ್ನು ಜಾರಿಗೊಳಿಸುವುದು ಎಂದರೆ ಅಭಿವೃದ್ಧಿಯನ್ನು ಸಂಪೂರ್ಣ ನಿಲ್ಲಿಸುವುದಲ್ಲ. ಬದಲಿಗೆ ಪ್ರಕೃತಿಯನ್ನು ಉಳಿಸಿಕೊಂಡು ಬದುಕುವ ಸುಸ್ಥಿರ ಅಭಿವೃದ್ಧಿಯನ್ನು ಅಳವಡಿಸಿಕೊಳ್ಳುವುದು. ಪ್ರೊ. ಗಾಡ್ಗೀಳ್ ‘ಅಭಿವೃದ್ಧಿ’ ಎಂಬ ಭ್ರಮೆಯ ಕುರಿತು, ಇಂದು ಅಭಿವೃದ್ಧಿ ಎನ್ನುವುದು ಕೇವಲ ಕೆಲವು ಉದ್ಯಮಿಗಳು, ಗಣಿ ಮಾಫಿಯಾಗಳು ಮತ್ತು ಗುತ್ತಿಗೆದಾರರ ಜೇಬು ತುಂಬಿಸುವ ಸಾಧನವಾಗಿದೆ. ಬೆಟ್ಟಗಳನ್ನು ಲಂಬವಾಗಿ ಕತ್ತರಿಸಿ ಹೆದ್ದಾರಿ ಮಾಡುವುದು ಪ್ರಗತಿಯಲ್ಲ, ಅದು ವಿನಾಶದ ಹೆದ್ದಾರಿ. ಪರಿಸರವನ್ನು ಸಂಪೂರ್ಣವಾಗಿ ಬಲಿ ಕೊಟ್ಟು ಗಳಿಸುವ ಜಿಡಿಪಿ ಪ್ರಗತಿ ನಿಜವಾದ ಆರ್ಥಿಕತೆಯಲ್ಲ. ಇದು ನಮ್ಮ ಮುಂದಿನ ಪೀಳಿಗೆಯ ಬ್ಯಾಂಕ್ ಖಾತೆಯನ್ನು ಇಂದೇ ಲೂಟಿ ಮಾಡಿ ನಾವು ಶ್ರೀಮಂತರಾಗಲು ಹೊರಟ ಹಾಗೆ, ಜನಸಾಮಾನ್ಯರಿಗೆ ಸತ್ಯ ಗೊತ್ತಾದ ದಿನ ಅವರು ನನ್ನ ವರದಿಯನ್ನು ತಾವಾಗಿಯೇ ಜಾರಿಗೆ ತರುತ್ತಾರೆ ಎಂದು ಹೇಳಿದ್ದು ಪದೇ ಪದೆ ನೆನಪಾಗುತ್ತದೆ.

ಪ್ರೊ.ಮಾಧವ್ ಗಾಡ್ಗೀಳ್ ವರದಿ ಇಂದಿಗೂ ಏಕೆ ಪ್ರಸ್ತುತ ಎಂದು ನೋಡುವುದಾದರೆ ಕಳೆದ ಒಂದೂವರೆ ದಶಕದಿಂದ ಸಂಭವಿಸಿದ ಹಲವು ದುರಂತಗಳು ಕಣ್ಣಮುಂದೆ ಬಂದು ನಿಲ್ಲುತ್ತವೆ. ರಾಜಕೀಯ ಇಚ್ಛಾಶಕ್ತಿ ಯ ಕೊರತೆ, ಗಣಿ ಮತ್ತು ರೆಸಾರ್ಟ್ ಮಾಫಿಯಾಗಳ ಒತ್ತಡ ಹಾಗೂ ಅಭಿವೃದ್ಧಿ ಕುಂಠಿತಗೊಳ್ಳುತ್ತದೆ ಎಂಬ ನೆಪದ ಹಿನ್ನೆಲೆಯಲ್ಲಿ ಗಾಡ್ಗೀಳ್ ವರದಿಯನ್ನು ತಿರಸ್ಕರಿಸಿ ದೆವು. ಅದರ ನೇರ ಪರಿಣಾಮವಾಗಿ 2014ರಲ್ಲಿ ಮಾಲಿನ್ ಗ್ರಾಮ (ಮಹಾರಾಷ್ಟ್ರ) ದುರಂತದಲ್ಲಿ 151 ಸಾವು, ಇಡೀ ಗ್ರಾಮ ನಾಶ.

2018ರಲ್ಲಿ ಕೊಡಗು (ಕರ್ನಾಟಕ) 30ಕ್ಕೂ ಅಧಿಕ ಸಾವು, 7000ಕ್ಕೂ ಹೆಚ್ಚು ಜನ ನಿರಾಶ್ರಿತರು, ಕಾಫಿ ತೋಟಗಳು ನಾಶ. ಇಲ್ಲಿಯ ಸೇತುವೆಗಳ ಮರುನಿರ್ಮಾಣಕ್ಕೆ ಸರಕಾರ ವರ್ಷಂಪ್ರತಿ ರೂ.2000ರಿಂದ ರೂ.3500 ಕೋಟಿ ಹಣವನ್ನು ಕೇವಲ ವಿಪತ್ತು ಪರಿಹಾರ ನಿಧಿಯಿಂದ (NDRF/ SDRF) ಖರ್ಚು ಮಾಡುತ್ತಿದೆ. 2018ರ ಒಂದೇ ವರ್ಷದಲ್ಲಿ ನಡೆದ ಸರಣಿ ವಿಕೋಪಕ್ಕೆ ಇಡೀ ಕೇರಳದಲ್ಲಿ (ಇಡುಕ್ಕಿ ಮತ್ತು ವಯನಾಡು) 483ಕ್ಕೂ ಹೆಚ್ಚು ಜನ ಜೀವ ಕಳೆದುಕೊಂಡರು. ವಯನಾಡು ಮುಂಡಕ್ಕೆ ದುರಂತವೊಂದರ 400ಕ್ಕೂ ಹೆಚ್ಚು ಜನ ಮಣ್ಣಿನಡಿ ಸಿಲುಕಿ ಸಾವನ್ನಪ್ಪಿದರು ಮತ್ತು 3 ಗ್ರಾಮಗಳು ಭೂಪಟದಿಂದಲೇ ನಾಶವಾದವು.

ಒಟ್ಟಾರೆ ರೂ 31000 ಕೋಟಿ ಸಾರ್ವಜನಿಕ ಆಸ್ತಿ ನಷ್ಟವಾಯಿತು. 2024ರಲ್ಲಿ ಶಿರೂರು, ಉತ್ತರ ಕನ್ನಡ (ಕರ್ನಾಟಕ) ಗುಡ್ಡ ಕುಸಿತ 11 ಸಾವು. ಪ್ರಸುತ್ತ ಮುಂಬೈ-ಪುಣೆ ಸುರಂಗ ದುರಂತ, ಕೇರಳದ ವಯನಾಡ್ ಜಿಯ ಕಡಿ ಗುಡ್ಡ ಕುಸಿತದಿಂದ 300ಕ್ಕೂ ಹೆಚ್ಚು ಸಾವು, ಆಸ್ತಿ ಹಾನಿ ಸಂಭವಿಸಿದೆ. ಹೀಗೆ 2012ರಿಂದ ೨೦೨೬ರ ತನಕ ಪಶ್ಚಿಮಘಟ್ಟದ ಸಾಲಿನಲ್ಲಿ ಸಂಭವಿಸಿದ ದೊಡ್ಡ ಮಟ್ಟದ ಭೂ ಕುಸಿತಗಳ ಜಾಗವನ್ನು ನಕ್ಷೆಯ ರೂಪದಲ್ಲಿ ನೋಡಿದರೆ, ಶೇಕಡಾ 90ರಷ್ಟು ಜಾಗಗಳು ಗಾಡ್ಗೀಳ್ ಅಂದು ಇಲ್ಲಿ ಕೈ ಇಡಬೇಡಿ ಎಂದು ಹೇಳಿದ್ದ ‘ಪರಿಸರ ಸೂಕ್ಷ ವಲಯ-1’ರ ಜಾಗಗಳೇ ಆಗಿವೆ.

ಭೂಕುಸಿತ ಮತ್ತು ಪ್ರವಾಹಗಳು ಸಂಭವಿಸಿದಾಗ ನಾವು ಕೇವಲ ಮನುಷ್ಯರ ಸಾವು, ಆಸ್ತಿ ಪಾಸ್ತಿಗಳ ಆರ್ಥಿಕ ನಷ್ಟವನ್ನು ಮಾತ್ರ ಲೆಕ್ಕ ಹಾಕುತ್ತೇವೆ. ಆದರೆ, ಜಗತ್ತಿನ ಎಂಟು ಅತ್ಯಂತ ಅಪರೂಪದ ಜೀವವೈವಿಧ್ಯ ತಾಣಗಳಲ್ಲಿ ಒಂದಾದ ಪಶ್ಚಿಮಘಟ್ಟದ ಒಡಲು ಸೀಳಿದಾಗ ಸಂಭವಿಸುವ ‘ಜೈವಿಕ ನಷ್ಟ’ ಅದಕ್ಕಿಂತ ನೂರು ಪಟ್ಟು ಭೀಕರವಾದದ್ದು.

ಪಶ್ಚಿಮಘಟ್ಟದ ಮಣ್ಣು ಕುಸಿದಾಗ ಕೇವಲ ಮರಗಳು ಉರುಳಿಲ್ಲ. ಬದಲಿಗೆ ಜಗತ್ತಿನ ಅಪರೂಪದ ನಿತ್ಯಹರಿದ್ವರ್ಣದ ಆರ್ಕಿಡ್‌ಗಳು ಮತ್ತು ಔಷಧಿಯ ಸಸ್ಯಗಳು ಸೇರಿದಂತೆ ಅಪರೂಪದ ಸಸ್ಯ ಪ್ರಭೇದಗಳು ನಾಶವಾಗಿವೆ. ಸಸ್ಯ ಸಂಪತ್ತಿನ ಜೊತೆಗೆ ಪಶ್ಚಿಮಘಟ್ಟದಲ್ಲಿರುವ ಶೇ. 80ಕ್ಕೂ ಹೆಚ್ಚು ಕಪ್ಪೆಗಳು ಮತ್ತು ಹಲ್ಲಿಗಳು ಜಗತ್ತಿನ ಬೇರೆಲ್ಲೂ ಕಾಣಸಿಗದ ಸ್ಥಳೀಯ ಪ್ರಭೇದಗಳು ಶಾಶ್ವತವಾಗಿ ಕಣ್ಮರೆಯಾಗಿವೆ.

ಗಾಡ್ಗೀಳ್ ವರದಿಯ ಪ್ರಕಾರ ಭೂಮಿಯ ಆಳದಲ್ಲಿ ವಾಸಿಸುವ, ವರ್ಷಕ್ಕೊಮ್ಮೆ ಮಾತ್ರ ಹೊರಬರುವ ಡೈನೋಸಾರ್ ಕಾಲದ ಅಪರೂಪದ ನೇರಳೆ ಕಪ್ಪೆಗಳು, ಗಿಡಕಪ್ಪೆಗಳು, ಬಿಲವಾಸಿ ಹಾವಿನ ಪ್ರಭೇದಗಳು, ಕೀಟಗಳು, ಅಪರೂಪದ ‘ಮಲಬಾರ್ ಬ್ಯಾಂಡೆಡ್ ಪೀಕಾಕ್’ನಂತಹ ಚಿಟ್ಟೆಗಳ ಲಾರ್ವಾಗಳು ಮತ್ತು ಅವು ಆಹಾರಕ್ಕಾಗಿ ಅವಲಂಬಿತವಾಗಿದ್ದ ಸಸ್ಯ ಪ್ರಭೇದಗಳು, ಅಲ್ಲಿಯ ನದಿಗಳ ಬಂಡೆಗಳ ಸಂದಿಗಳಲ್ಲಿ ಮೊಟ್ಟೆಯಿಡುತ್ತಿದ್ದ ಮಲಬಾರ್ ಮಹಶೀರ್ ಮೀನುಗಳು ಮತ್ತು ಸಿಹಿನೀರಿನ ಏಡಿಗಳು ವಯನಾಡು ಮತ್ತು ಇಡುಕ್ಕಿ ಭೂಕುಸಿತದ ಮಣ್ಣಿನ ಒತ್ತಡಕ್ಕೆ ಸಿಲುಕಿ ಸಂಪೂರ್ಣ ನಾಶವಾಗಿದೆ.

ದಟ್ಟ ಕಾಡಿನಲ್ಲಿದ್ದ ಸಿಂಹಬಾಲದ ಕೋತಿಗಳು ಮತ್ತು ಮಲಬಾರ್ ಸಿವೆಟ್ (ಅಳಿವಿನಂಚಿನಲ್ಲಿರುವ ಪ್ರಾಣಿ) ನಂತಹ ಜೀವಿಗಳು ಒಂದು ಕಾಡಿನಿಂದ ಮತ್ತೊಂದು ಕಾಡಿಗೆ ಹೋಗಲು ಮರಗಳೇ ಇಲ್ಲದಂತಾಗಿದೆ. ಆನೆ ಮತ್ತು ಚಿರತೆಗಳ ಸಾಂಪ್ರದಾಯಿಕ ನೈಸರ್ಗಿಕ ಕಾರಿಡಾರ್‌ಗಳು ಭೂಕುಸಿತ ಮತ್ತು ರಸ್ತೆಗಳಿಂದ ಬಂದ್ ಆದಾಗ, ಅವು ದಿಕ್ಕುತೋಚದೆ ಹಳ್ಳಿ ಮತ್ತು ನಗರಗಳಿಗೆ ನುಗ್ಗುತ್ತಿವೆ. ಇಂದು ಕರಾವಳಿ- ಮಲೆನಾಡಿನಲ್ಲಿ ಹೆಚ್ಚಾಗುತ್ತಿರುವ ಆನೆ ದಾಳಿಗಳಿಗೆ ಈ ಜೈವಿಕ ನಾಶವೇ ಮುಖ್ಯ ಕಾರಣ.

ಮಳೆಗಾಗಿ ನಾವು ಕಪ್ಪೆಗಳು ಮತ್ತು ಕತ್ತೆಗಳಿಗೆ ವಿವಾಹ ಮಾಡಿಸುತ್ತೇವೆ. ಆದರೆ ಇಂತಹ ದುರಂತದಿಂದ ಮುದೊಂದು ದಿನ ಅವುಗಳ ಜೀವ ಸಂತತಿಯೇ ಅಳಿದು ಹೋದರೆ ಯಾರನ್ನು ಮದುವೆ ಮಾಡಿಸುತ್ತೀರಿ? ಹಣವನ್ನು ಖರ್ಚು ಮಾಡಿ ರಸ್ತೆ, ಸೇತುವೆಗಳನ್ನು 5-10 ವರ್ಷಗಳಲ್ಲಿ ಮತ್ತೆ ಕಟ್ಟಬಹುದು. ಆದರೆ, ಅವೈeನಿಕ ಕಾಮಗಾರಿಗಳಿಂದಾಗಿ ಪಶ್ಚಿಮಘಟ್ಟದಲ್ಲಿ ನಾಶವಾಗು ತ್ತಿರುವ ಈ ಜೀವವೈವಿಧ್ಯವನ್ನು ಮತ್ತೆ ಸೃಷ್ಟಿಸಲು ಪ್ರಕೃತಿಗೆ ಲಕ್ಷಾಂತರ ವರ್ಷಗಳೇ ಬೇಕಾಗುತ್ತವೆ. ನಾವು ಕಳೆದುಕೊಳ್ಳುತ್ತಿರುವುದು ಕೇವಲ ಮಣ್ಣನ್ನಲ್ಲ, ಭೂಮಿಯ ಜೀವದ ಜೀವಾಳವನ್ನು!

ಪರಿಸರ ನಾಶದಿಂದ ಜೀವವೈವಿಧ್ಯ ನಾಶದೊಂದಿಗೆ ದೇಶದ ಆರ್ಥಿಕತೆಯ ಮೇಲೂ ಇದು ಭಾರಿ ನಷ್ಟದ ಬರೆ ಎಳೆಯುತ್ತಿದೆ. ಕೇಂದ್ರ ಸರಕಾರದ ಯೋಜನೆಗಳ ಬಜೆಟ್ ಒಂದು ಕಡೆಯಾದರೆ, ಅದರಿಂದಾಗುವ ಪರಿಸರ ವಿಕೋಪವನ್ನು ಸರಿಪಡಿಸಲು ತಗಲುವ ವೆಚ್ಚ ಹತ್ತರಷ್ಟಿರುತ್ತದೆ. ಕೇಂದ್ರ ಸರಕಾರ ಉದ್ಯಮ ಸುಭಗತೆ ಮತ್ತು ವೇಗದ ಸಾರಿಗೆಗಾಗಿ ಖರ್ಚು ಮಾಡುತ್ತಿರುವ ಹಣಕ್ಕಿಂತ, ಆ ಅವೈeನಿಕ ಕಾಮಗಾರಿಗಳು ಸೃಷ್ಟಿಸುತ್ತಿರುವ ಮಾನವ ನಿರ್ಮಿತ ವಿಕೋಪಗಳನ್ನು ನಿಯಂತ್ರಿಸಲು ಮತ್ತು ಹಾನಿಗೊಳಗಾದ ಮೂಲಸೌಕರ್ಯಗಳನ್ನು ಮತ್ತೆ ಕಟ್ಟಲು ದೇಶದ ತೆರಿಗೆದಾರರ ಶೇ. 15ರಿಂದ ಶೇ. 20ರಷ್ಟು ಹೆಚ್ಚಿನ ಹಣ ವ್ಯರ್ಥವಾಗುತ್ತಿದೆ.

ಪ್ರತಿ ವರ್ಷ ಮಳೆಗಾಲದಲ್ಲಿ ಅಮಾಯಕ ಜನರು ಬೆಟ್ಟದ ಕುಸಿತಕ್ಕೆ ಸಿಲುಕಿ ಜೀವ ಕಳೆದುಕೊಳ್ಳು ತ್ತಿರುವಾಗ ಪ್ರೊ. ಮಾಧವ್ ಗಾಡ್ಗೀಳ್ ಅವರ ಮಾತುಗಳು ಸತ್ಯವಾಗುತ್ತಿವೆ. ಪ್ರಕೃತಿಯನ್ನು ಸಂಪೂರ್ಣವಾಗಿ ಕಡೆಗಣಿಸಿ ಮಾಡುವ ಯಾವುದೇ ಅವೈeನಿಕ ಕಾಮಗಾರಿ ಮತ್ತು ಅಭಿವೃದ್ಧಿ ದೀರ್ಘಕಾಲ ಬಾಳಲಾರದು. ಪರಿಸರವನ್ನು ಉಳಿಸಿಕೊಂಡು ಸುಸ್ಥಿರ ಅಭಿವೃದ್ಧಿ (Sustainable Development) ಮಾಡದಿದ್ದರೆ, ಪಶ್ಚಿಮಘಟ್ಟದ ದುರಂತಗಳು ಪ್ರತಿ ಮಳೆಗಾಲದ ಶಾಶ್ವತ ಕತೆಯಾಗಲಿವೆ ಎಂಬುದೇ ಇಂದಿನ ಕಹಿ ಸತ್ಯ.

‘ಗಾಡ್ಗೀಳ್ ವರದಿ ಮೂಲೆಗೆ, ವಿಪತ್ತು ಮನೆಬಾಗಿಲಿಗೆ’ ಎಂಬಂತಾಗಿರುವ ಸನ್ನಿವೇಶದಲ್ಲಿ ಪಶ್ಚಿಮ ಘಟ್ಟದ ಉಳಿವಿಗೆ ಗಾಡ್ಗೀಳ್ ಸೂತ್ರವೇ ಏಕೈಕ ದಾರಿ ಎಂಬುದನ್ನು ಒಪ್ಪಿಕೊಳ್ಳಲು ಇನ್ನು ಎಷ್ಟು ದುರಂತಗಳು ನಡೆಯಬೇಕೋ!