ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Virat Padmanabha Column: ಇರುವ ಭಾಗ್ಯ, ಇಲ್ಲದ ಹರುಷ: ಇದೇ ಹೊಸ ಸಾಲು!

ಡಿವಿಜಿಯವರ ಕಾವ್ಯಾತ್ಮಕ ಸಾಲುಗಳನ್ನು ಚೈತನ್ಯ ತಂದುಕೊಳ್ಳುವ ಸಾಲುಗಳನ್ನಾಗಿ ಅರ್ಥೈಸಿ ಕೊಳ್ಳುವುದಕ್ಕೆ ಬಸ್ಸಿನಲ್ಲಿ ನಿರಾಳತೆ ಇರಬೇಕು. ಮುಖ್ಯವಾಗಿ ಸೀಟು ಸಿಗಬೇಕು. ಸೀಟು ಸಿಕ್ಕರೂ ನಾವು ಕುಳಿತಲ್ಲಿಂದ ಈ ಸಾಲುಗಳೆಡೆಗೆ ಕಣ್ಣುಹಾಯಿಸುವುದಕ್ಕೆ ಅವಕಾಶವಿರಬೇಕು. ಎಡಗಡೆಯ ಎರಡು ಸೀಟುಗಳು ಮತ್ತು ಬಲಬದಿಯ ಮೂರು ಸೀಟುಗಳ ಮಧ್ಯೆ ಅಗತ್ಯಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ಪ್ರಯಾಣಿಕರು ನಿಂತುಕೊಂಡು ತೇಲಾಡುತ್ತಿರಬಾರದು.

ಇರುವ ಭಾಗ್ಯ, ಇಲ್ಲದ ಹರುಷ: ಇದೇ ಹೊಸ ಸಾಲು!

-

Profile
Ashok Nayak Jul 13, 2026 6:00 AM

ಭಾಗ್ಯವಿಧಾನ

ವಿರಾಟ್ ಪದ್ಮನಾಭ

‘ಇರುವ ಭಾಗ್ಯವ ನೆನೆದು ಬಾರೆನೆಂಬುದನು ಬಿಡು ಹರುಷಕ್ಕಿದೆ ದಾರಿ...’ ಡಿವಿಜಿಯವರ ಈ ಸಾಲು ಗಳು ಕೆಎಸ್‌ಆರ್‌ಟಿಸಿ ಬಸ್ಸುಗಳಲ್ಲಿ ಪ್ರಯಾಣಿಸುವವರಿಗೆ ಪರಿಚಿತ. ಈಗೀಗ ಈ ಸಾಲುಗಳು ಕೆಲವು ಬಸ್ಸುಗಳಲ್ಲಿ ಕಾಣಿಸುತ್ತಿಲ್ಲ. ಡ್ರೈವರ್ ಆಸನದ ಹಿಂಬದಿಯ ಮೇಲೆ ಕಾಣಿಸಿಕೊಂಡು, ಪ್ರಯಾಣಿಸು ವ ಅವಧಿಯಷ್ಟೇ ಅಲ್ಲದೇ ಬದುಕಿನ ಯಾನದ ಸೌಂದರ್ಯ ಹೆಚ್ಚಿಸಬಹುದಾದ ತತ್ವದ ಪ್ರತೀಕ ವಾಗಿ ಕಂಗೊಳಿಸುವ ಈ ಸಾಲುಗಳು ಕೆಲವು ಬಸ್ಸುಗಳಲ್ಲಿ ಕಣ್ಮರೆಯಾಗಿವೆ. ಆದರೆ, ಅವುಗಳ ಕಾಣೆ ಯಾಗಿರುವಿಕೆ ಬಸ್ಸಿನಲ್ಲಿ ಹಿಂದೆ ಇದ್ದಿರಬಹುದಾದ ಹರುಷದ ಗೈರುಹಾಜರಿಯ ಸಂಕೇತವೂ ಹೌದು ಎನ್ನುವುದನ್ನು 2023ರ ನಂತರದ ಸರಕಾರಿ ಬಸ್ ಪ್ರಯಾಣ ದಿನನಿತ್ಯ ಸಾಬೀತುಪಡಿಸುತ್ತಲೇ ಇದೆ.

ಡಿವಿಜಿಯವರ ಕಾವ್ಯಾತ್ಮಕ ಸಾಲುಗಳನ್ನು ಚೈತನ್ಯ ತಂದುಕೊಳ್ಳುವ ಸಾಲುಗಳನ್ನಾಗಿ ಅರ್ಥೈಸಿ ಕೊಳ್ಳುವುದಕ್ಕೆ ಬಸ್ಸಿನಲ್ಲಿ ನಿರಾಳತೆ ಇರಬೇಕು. ಮುಖ್ಯವಾಗಿ ಸೀಟು ಸಿಗಬೇಕು. ಸೀಟು ಸಿಕ್ಕರೂ ನಾವು ಕುಳಿತಲ್ಲಿಂದ ಈ ಸಾಲುಗಳೆಡೆಗೆ ಕಣ್ಣುಹಾಯಿಸುವುದಕ್ಕೆ ಅವಕಾಶವಿರಬೇಕು. ಎಡಗಡೆಯ ಎರಡು ಸೀಟುಗಳು ಮತ್ತು ಬಲಬದಿಯ ಮೂರು ಸೀಟುಗಳ ಮಧ್ಯೆ ಅಗತ್ಯಕ್ಕಿಂತ ಹೆಚ್ಚಿನ ಸಂಖ್ಯೆ ಯಲ್ಲಿ ಪ್ರಯಾಣಿಕರು ನಿಂತುಕೊಂಡು ತೇಲಾಡುತ್ತಿರಬಾರದು.

ಅಷ್ಟೇ ಅಲ್ಲ, ಈಗಾಗಲೇ ಬಸ್ಸಿನಲ್ಲಿ ಕಾಲಿಡಲೂ ಜಾಗವಿಲ್ಲದಿದ್ದರೂ ಒಂದೊಂದು ಸ್ಟಾಪ್‌ನಿಂದ ಪ್ರಯಾಣಿಕರು ಭರ್ತಿಯಾಗುತ್ತಲೇ ಇರಬಾರದು. ಡ್ರೈವರ್ ಪಕ್ಕದ ಗೇರ್‌ಬಾಕ್ಸ್‌ನ ಮೇಲೆ ಆಟದ ಎಕ್ಸ್ಟ್ರಾ ಪ್ಲೇಯರ್‌ಗಳಂತೆ ಯಾರೂ ಕುಳಿತಿರಬಾರದು. ನಿಬಿಡತೆ ಹೆಚ್ಚಾಗುತ್ತಾ ಡಿವಿಜಿ ಸಾಲುಗಳ ಫಲಕವೇ ಮರೆಮಾಚುವ ಹಾಗೆ ಜನರು ಅಲ್ಲಿ ನಿಂತಿರಬಾರದು.

ಇದನ್ನೂ ಓದಿ: Hari Paraak Column: ಮೂರ್‌ ಮದ್ವೆ ಆಗೋಕೆ ಅಮೀರ್‌ ಆಗಿರಬೇಕು

ಕರ್ನಾಟಕದ ಆಡಳಿತಾರೂಢ ಸರಕಾರ ಹೊಸ ನಾಯಕತ್ವ ಕಂಡುಕೊಂಡ ಸಂದರ್ಭವು ‘ಬದಲಾ ವಣೆ’ ಕುರಿತ ರಚನಾತ್ಮಕ ಚಿಂತನೆಯನ್ನು ಗಟ್ಟಿಗೊಳಿಸಬೇಕಿದೆ. ಜನರಿಗೆ ಇಷ್ಟವಾಗಿ ಪ್ರಯೋಜನ ಕಾರಿಯಾಗಬಲ್ಲ ಯೋಜನೆಗಳನ್ನು ಸಾರ್ವಜನಿಕರೆಲ್ಲ ಹೃತ್ಪೂರ್ವಕವಾಗಿ ಸ್ವೀಕರಿಸುವ ಹಾಗೆ ಅನುಷ್ಠಾನ ಗೊಳಿಸುವಂಥ ರಚನಾತ್ಮಕತೆ ಜೀವ ತಳೆಯಬೇಕಿದೆ. ಇಲ್ಲದಿದ್ದರೆ ದುರ್ಬಲರ ಪರವಾಗಿ ರೂಪಿಸಲಾಗುವ ಎಲ್ಲಾ ಯೋಜನೆಗಳೂ ‘ಖಜಾನೆಗೆ ಹೊರೆ’ ಎಂಬ ನೆಪ ಪ್ರಾಬಲ್ಯ ಪಡೆಯುತ್ತಾ ಹೋಗುತ್ತದೆ. ಜನಪರ ಯೋಜನೆಗಳ ರೂಪಿಸುವಿಕೆಯ ಪ್ರಕ್ರಿಯೆಯೇ ಜಟಿಲವಾಗುವ ಅಪಾಯ ವನ್ನು ಎದುರುಗೊಳ್ಳಬೇಕಾಗುತ್ತದೆ.

ಗ್ಯಾರಂಟಿ ಯೋಜನೆಗಳು ಅನರ್ಹರಿಗೆ ದಕ್ಕುತ್ತಿರುವುದರಿಂದ ‘ಉಳಿದವರಿಗೆ’ ತೊಂದರೆಯಾಗುತ್ತಿದೆ ಎಂಬ ದುಮ್ಮಾನದಿಂದ, ‘ಗ್ಯಾರಂಟಿ’ ಫಲಾನುಭವಿಗಳನ್ನು ಅಸ್ಪೃಶ್ಯರನ್ನಾಗಿ ನೋಡುವ ದೃಷ್ಟಿ ಕೋನ ವ್ಯಾಪಕವಾಗಿದೆ. ಕಡಿಮೆ ವಾಹನಗಳು, ಹೆಚ್ಚಿನ ಬೇಡಿಕೆಯಿಂದ ಎದುರಾಗಲಿರುವ ಪರಿಣಾಮ ಲೆಕ್ಕಿಸದೇ ಮಹಿಳೆಯರಿಗಾಗಿ ಉಚಿತ ಪ್ರಯಾಣದ ಭಾಗ್ಯವನ್ನು ಅವಸರವಸರವಾಗಿ ಕರುಣಿಸಿದ ಕಾರಣಕ್ಕಾಗಿಯೇ ಕೆಎಸ್‌ಆರ್‌ಟಿಸಿ ಬಸ್‌ಸ್ಟ್ಯಾಂಡ್ ಮತ್ತು ಬಸ್ಸುಗಳು ಮನುಷ್ಯ ಯುದ್ಧದ ಮಹಾನ್ ಸ್ಯಾಂಪಲ್ಲುಗಳ ಹಾಗೆ ಗೋಚರಿಸುತ್ತಿರುವುದನ್ನು ಗಮನಿಸಬೇಕು.

ಬಸ್ಸುಗಳ ಸಂಖ್ಯೆಯನ್ನು ಹೆಚ್ಚಿಸದೇ, ಇರುವಷ್ಟೇ ಬಸ್ಸುಗಳಲ್ಲೇ ಜನರನ್ನು ಪ್ರಾಣಿಗಳ ಹಾಗೆ ತುಂಬಿ ದರೆ ಅವರ‍್ಯಾರೂ ಬೇಜಾರು ಮಾಡಿಕೊಳ್ಳೋಲ್ಲ, ಬೇಜಾರು ಮಾಡಿಕೊಂಡವರು ತಮ್ಮ ಬೇಜಾರನ್ನು ಬಹಿರಂಗವಾಗಿ ಹೇಳಿಕೊಂಡರೆ ಅವರನ್ನು ಸ್ತ್ರೀ ವಿರೋಧಿ ಎಂಬ ಹಣೆಪಟ್ಟಿ ಕಟ್ಟಿ ಸುಮ್ಮನಿರಿಸ ಬಹುದು ಅಂತ ಪ್ರಭುತ್ವ ಮಾತ್ರವಲ್ಲ, ಫಲಾನುಭವಿ ಸ್ತ್ರೀಯರು ಮತ್ತು ಹೆಂಗರುಳಿನ ಹುಲು ಮಾನವರೆಲ್ಲರೂ ಅಂದುಕೊಳ್ಳಬಹುದು. ಡಿವಿಜಿಯವರು ಇದ್ದುದರಲ್ಲಿಯೇ ಖುಷಿಪಟ್ಟು ಹರುಷದ ದಾರಿಯನ್ನು ಹುಡುಕೊಳ್ಳುವಂತಹ ಚಿಂತನೆಯನ್ನು ಆಧರಿಸಿಕೊಂಡಿದ್ದಿರಬಹುದು.

VP 12

ಆದರೆ, ಕೆಎಸ್‌ಆರ್‌ಟಿಸಿ ಬಸ್ಸುಗಳು, ಡ್ರೈವರ್‌ಗಳು ಮತ್ತು ಕಂಡಕ್ಟರ್‌ಗಳ ಕರ್ತವ್ಯ ನಿರ್ವಹಣೆಯ ಇಬ್ಬಂದಿತನವನ್ನು ನೋಡಿದರೆ ‘ಹರುಷ’ ಅವರ ಪಾಲಿಗಷ್ಟೇ ಅಲ್ಲ, ಸಮಸ್ತ ಪ್ರಯಾಣಿಕರ ಬದುಕಿನ ವ್ಯಾಪ್ತಿ ಪ್ರದೇಶದಿಂದ ಹೊರಗಿರುವ ಸತ್ಯ ಕಣ್ಣಿಗೆ ರಾಚುತ್ತದೆ. ಪ್ರಯಾಣಿಕರಾಗಿ ನಿಮ್ಮೊಳಗೆ ಅಗಾಧ ಸಹನೆ, ಮೌನವನ್ನು ರೂಪಿಸಿಕೊಂಡು ಕುಳಿತು ಹರುಷದ ದಾರಿಯ ಕುರಿತಾದ ಆಶಾವಾದ ತಂದುಕೊಳ್ಳುವಾಗ ಸೀಟಿಗಾಗಿ ನಡೆಯುವ ಘೋರ ವಾಗ್ಯುದ್ಧಗಳ ಏರುಧ್ವನಿಗಳನ್ನು ಕೇಳಿಸಿಕೊಳ್ಳಬೇಕಾಗುತ್ತದೆ. ಅವುಗಳನ್ನು ಆಲಿಸುತ್ತಾ ‘ಇದೇ ಭಾಗ್ಯ’ ಎಂದುಕೊಂಡು ಮತ್ತೊಂದಿ ಷ್ಟು ಸಹನೆಯ ತುಂಡುಗಳನ್ನು ಎದೆಗಿಳಿಸಿಕೊಳ್ಳಬೇಕು.

ಡ್ರೈವರ್ ಮತ್ತು ಕಂಡಕ್ಟರ್ ಎಂಬ ಎರಡು ಜೀವಗಳು ಹೆಣಗಾಡುತ್ತಿರುವ ಸ್ಥಿತಿಯನ್ನು ಕಣ್ತುಂಬಿ ಕೊಳ್ಳುತ್ತಾ ‘ಮೇರಾ ಕರ್ನಾಟಕ್ ಮಹಾನ್’ ಎಂಬ ಹೆಮ್ಮೆಯ ಭಾವ ತಂದುಕೊಳ್ಳಬೇಕು. ಮಗು ಎತ್ತಿಕೊಂಡು ನಿಂತ ತಾಯಿಯೊಬ್ಬಳು ಸೀಟಲ್ಲಿ ಕುಳಿತ ಮೂವರು ಹೆಣ್ಣುಮಕ್ಕಳೆಡೆಗೆ ಕಣ್ಣು ಹಾಯಿಸಿ ‘ನಿಮಗೆ ಮನುಷ್ಯತ್ವ ಇದೆಯಾ? ಮಗುವನ್ನು ಎತ್ತಿಕೊಂಡು ನಿಂತಿದ್ದೇನೆ. ಸೀಟು ಬಿಟ್ಟು ಕೊಡುವ ಮನಸ್ಸೇ ಮಾಡುತ್ತಿಲ್ಲವಲ್ಲ ನೀವು’ ಎಂಬ ಮಾತು ಕಿವಿಗಪ್ಪಳಿಸಿದಾಗ ‘ಶಕ್ತಿ’ ಯೋಜನೆಯ ಮೂಲ ಆಶಯವೇ ತಲೆಕೆಳಗಾಗಿ ಬಸ್ಸಿನ ಚಕ್ರಗಳಡಿ ನಲುಗಿದಂತಾಗುತ್ತದೆ.

ಯೋಜನಾಬದ್ಧತೆಯ ಕೊರತೆಯ ಕಾರಣಕ್ಕಾಗಿಯೇ ಸೃಷ್ಟಿಯಾಗಿರುವ ಈ ಬಗೆಯ ಸಂಕಟ ದಿನದಿಂದ ದಿನಕ್ಕೆ ತರಹೇವಾರಿ ರೂಪ ಪಡೆಯುತ್ತಿರುವುದನ್ನು ನಮ್ಮ ಲೀಡರುಗಳು ಕಣ್ಣುಗಳಿಗೆ ಟುಕಿಸಿಕೊಳ್ಳಬೇಕು. ಪೂರ್ವಸಿದ್ಧತೆಯ ಸ್ಪರ್ಶವಿಲ್ಲದ ಯಾವುದೇ ಜನಪರ ಯೋಜನೆ ಸಾರ್ವಜನಿಕ ರೊಳಗಿನ ಹತಾಶೆಯನ್ನು ಹೆಚ್ಚಿಸುತ್ತಲೇ ಹೋಗುತ್ತದೆ ಎಂಬುದನ್ನು ಬಸ್ಸಿನೊಳಗಿನ ‘ಶಕ್ತಿ’ಯ ಸೈಡ್ ಎ-ಕ್ಟ್‌ಗಳ ಮೂಲಕ ಮನವರಿಕೆ ಮಾಡಿಕೊಳ್ಳಬೇಕು. ಕಾಲಿಡಲೂ ಜಾಗವಿಲ್ಲದ ಬಸ್ಸಿನಲ್ಲಿ ಹಿಂದಿನಿಂದ ಮುಂದಕ್ಕೆ ಮುಂದಿನಿಂದ ಹಿಂದಕ್ಕೆ ತೇಲಾಡಿ ಓಲಾಡಿ ಟಿಕೆಟ್ ಟಿಕೆಟ್ ಎಂದು ಓಡಾಡುವ ಕಂಡಕ್ಟರ್ ಕಸರತ್ತು ನೋಡುತ್ತಾ ಎದುರುಗೊಳ್ಳಬೇಕು.

ಡ್ರೈವರ್ ಸಡನ್ನಾಗಿ ಬ್ರೇಕ್ ಹಾಕಿದರೆ ಒಬ್ಬರ ಮೇಲೊಬ್ಬರು ಬಿದ್ದು ಕೆಲವರ ಮೌನದ ಸಿಟ್ಟು ಸೆಡವು, ಇನ್ನೂ ಕೆಲವರ ಗದರುವ ಆರ್ಭಟದ ಧ್ವನಿಗಳನ್ನು ಕೇಳಿಸಿಕೊಳ್ಳಬೇಕು. ‘ಸರಿಯಾಗಿ ನಿಲ್ಲೋಕೆ ಆಗೊಲ್ವಾ’ ಎಂದು ಕುಳಿತವರು ಹೇಳಿದರೆ, ‘ಇಲ್ಲೊಮ್ಮೆ ನಿಂತು ನೋಡಿ, ಆವಾಗ ಗೊತ್ತಾಗುತ್ತದೆ ಸರಿಯಾಗಿ ನಿಲ್ಲೋಕೆ ಆಗುತ್ತಾ ಇಲ್ಲವಾ ಅನ್ನೋದು’ ಎಂಬ ಸಂಭಾಷಣೆ ತಾರಕಕ್ಕೇರಿ ಜಾಗತಿಕ ಯುದ್ಧವನ್ನೂ ನಾಚಿಸುವ ಹೂಂಕಾರಗಳು ವ್ಯಕ್ತವಾಗುವ ಸಂದರ್ಭಗಳನ್ನು ನೋಡ ಬೇಕು. ಅಷ್ಟೇ ಅಲ್ಲ, ಜಗತ್ತಿನ ಎಲ್ಲಾ ಯುದ್ಧಗಳನ್ನೂ ಮೀರಿಸುವಂತಹ ಕೇಳರಿಯದಂತಹ ಅವಾಚ್ಯ ಶಬ್ದಾಸಗಳನ್ನು ಕಿವಿಗಪ್ಪಳಿಸಿಕೊಳ್ಳಬೇಕು.

ಅಂಥ ಗೊಡವೆಯೇ ನಮ್ಮ ಲೀಡರುಗಳಿಗೆ ಬೇಕಿಲ್ಲ. ಯಾಕೆಂದರೆ, ಅವರು ಮಾಧ್ಯಮಗಳ ಮುಂದೆ ಅಂಕಿ ಅಂಶಗಳನ್ನು ಪ್ರಸ್ತುತಪಡಿಸಿ ‘ಹಿಂದಿನವರು ಸಾಧಿಸಿದ್ದಾದರೂ ಏನು? ಹಾಗೆ ನೋಡಿದರೆ ನಾವೇ ಅವರಿಗಿಂತ ಒಂದು ಹೆಜ್ಜೆ ಮುಂದೆ ಇದ್ದೇವೆ’ ಎಂಬ ಬೀಗುವಿಕೆ ಬಿಟ್ಟರೆ ಬೇರೇನನ್ನೂ ಲೀಡರುಗಳಿಂದ ನಿರೀಕ್ಷಿಸಲಾಗದು. ಅವರು ಯಾವಾಗಲೂ ಇಂಥದ್ದೊಂದು ಸಮಸ್ಯೆ ಇದೆಯಲ್ಲಾ ಎಂದರೆ ಸಮಜಾಯಿಷಿ ನೀಡುವ ಹುಮ್ಮಸ್ಸಿನೊಂದಿಗೇ ಪ್ರತ್ಯಕ್ಷರಾಗುತ್ತಾರೆ.

ಇತ್ತೀಚೆಗಷ್ಟೇ ಮಾಧ್ಯಮಗಳ ಮೂಲಕ ಕಣ್ಣಿಗೆಟುಕಿದ, ಕಿವಿಗಪ್ಪಳಿಸಿದ ಈ ಸರಕಾರಿ ಅಂಕಿಅಂಶ ಗಳು ಬಸ್ಸಿನೊಳಗಿನ ಪ್ರಯಾಣಿಕರ ಇಕ್ಕಟ್ಟು, ಬಿಕ್ಕಟ್ಟು, ಜಗಳಗಳೊಂದಿಗೆ ಜುಗಲ್ಬಂದಿ ನಡೆಸುತ್ತಿರು ವಂತೆ ಭಾಸವಾಗುತ್ತದೆ. ಹಿಂದಿನವರು 4 ಸಾವಿರ ಕೋಟಿ ಸಾಲ ಬಿಟ್ಟು ಹೋಗಿದ್ದರು. ನಮ್ಮ ಸರಕಾರ ಬಂದ ನಂತರ 7800 ಬಸ್ ಖರೀದಿ ಮಾಡಿದೆವು.

ಹೊಸ ಬಸ್‌ಗಳನ್ನು ಖರೀದಿಸಿರಲಿಲ್ಲ ಹಿಂದಿನವರು. ಹಿಂದಿನವರು ನೌಕರರ ನೇಮಕಾತಿ ಪೂರ್ಣ ಗೊಳಿಸಿರಲಿಲ್ಲ. ನಾವು 9 ಸಾವಿರ ನೌಕರರನ್ನು ನೇಮಿಸಿಕೊಂಡೆವು. 1450 ಜನರನ್ನು ಅನುಕಂಪದ ಆಧಾರದಲ್ಲಿ ನೇಮಿಸಿದೆವು. ಈ ಬಗೆಯ ಸಮಜಾಯಿಷಿ ಮಾತುಗಳು ಕೇಳುವಾಗ ಒತ್ತಾಯ ಪೂರ್ವಕವಾಗಿ ಹರುಷವನ್ನು ತಂದುಕೊಟ್ಟಂತಾಗುತ್ತದೆ. ತಕ್ಷಣವೇ ಬಸ್ಸಿನೊಳಗಿನ ಪ್ರವರಗಳನ್ನು ನೆನಪಿಸಿಕೊಂಡಾಗ ಬೇರೆಯದ್ದೇ ಆದ ದಾರುಣ ಅನುಭವದ ಕಥೆಗಳು ತೆರೆದುಕೊಳ್ಳುತ್ತವೆ.

ಇನ್ನು ವಿರೋಧ ಪಕ್ಷಗಳ ಧ್ವನಿಗಳನ್ನು ಕೇಳಿದರಂತೂ ರಾಜಕೀಯದ ಸಂಕುಚಿತ ಪ್ರಯಾಣ ಎಷ್ಟು ಕಠೋರ ಎಂದೆನ್ನಿಸಿಬಿಡುತ್ತದೆ. ‘ದುರ್ಬಲರಲ್ಲಿ ಅವಲಂಬನೆಯ ಗೀಳು ಹಚ್ಚಿಬಿಟ್ಟಿರಿ’ ಅನ್ನುತ್ತಲೇ ತಾರ್ಕಿಕ ಹುಡುಕಾಟದ ಪ್ರಯತ್ನಗಳನ್ನೇ ಹತ್ತಿಕ್ಕಿಕೊಳ್ಳುವ ವಿರೋಧ ಪಕ್ಷಗಳ ಅಭಿಪ್ರಾಯಗಳು ಇಡೀ ಸಮಾಜವನ್ನು ಅಸಮಾನತೆಯ ಕೂಪದೊಳಗೇ ಬಂಧಿಸಿಡುವ ವಿತಂಡವಾದಗಳಂತೆನ್ನಿಸು ತ್ತವೆ.

ಬಸ್ಸುಗಳ ಸಂಖ್ಯೆ ಹೆಚ್ಚಿಸಿದರೂ ಬಸ್‌ಗಳು ಮತ್ತು ಬಸ್‌ಸ್ಟ್ಯಾಂಡ್‌ನೊಳಗಿನ ವಾಗ್ಯುದ್ಧಗಳು ನಿಲ್ಲುತ್ತಿಲ್ಲವಲ್ಲ? ಕೆಎಸ್‌ಆರ್‌ಟಿಸಿ ಬಸ್ಸುಗಳಲ್ಲಿ ಮೊದಲಿದ್ದ ಹರುಷ ಕಾಣಿಸುತ್ತಿಲ್ಲವಲ್ಲ? ಉಚಿತ ಫಲಾನುಭವಿಗಳಿಗೆ ಶಕ್ತಿಯ ಭಾಗ್ಯ ಒದಗಿಸಿಕೊಟ್ಟೂ ಬಸ್ ಪ್ರಯಾಣವನ್ನು ಹರುಷದಾಯಕ ವಾಗಿಸುವ ದಾರಿಗಳನ್ನು ಹುಡುಕಬಹುದಿತ್ತಲ್ಲಾ? ಅಂಥ ಹುಡುಕಾಟ ಇಲ್ಲಿಯವರೆಗೆ ನಡೆಯಲೇ ಇಲ್ಲ. ಅದಕ್ಕೆ ಬದಲಾಗಿ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್‌ನ ಅನೌನ್ಸ್ʼಮೆಂಟೂ ಆಗಿಬಿಟ್ಟಿದೆ.

ಬೆಳಿಗ್ಗೆ ಮತ್ತು ಸಂಜೆಯ ಪ್ರಯಾಣಿಕ ದಟ್ಟಣೆಯ ಜೊತೆಗೆ ಈ ಹೊಸ ಫಲಾನುಭವಿಗಳ ಸೇರ್ಪಡೆ ಸಂದರ್ಭಗಳನ್ನು ಮೊದಲೇ ಊಹಿಸಿಕೊಂಡು ಡ್ರೈವರ್ ಮತ್ತು ಕಂಡಕ್ಟರ್‌ಗಳು ತಮ್ಮ ದಿನನಿತ್ಯದ ಕರ್ತವ್ಯ ನಿರ್ವಹಣೆಯ ಲಯವನ್ನು ಮರುರೂಪಿಸಿಕೊಳ್ಳಬೇಕು. ಬೆಳಿಗ್ಗೆ ಮತ್ತು ಸಂಜೆಯ ಅವಧಿ ಯಲ್ಲಿ ಪ್ರಯಾಣಿಸುವವರೂ ಇನ್ನೊಂದು ಬಗೆಯ ದಟ್ಟಣೆಯ ದೃಶ್ಯಾವಳಿಗಳನ್ನು ಕಲ್ಪಿಸಿಕೊಂಡು ಮಾನಸಿಕವಾಗಿ ಸನ್ನದ್ಧಗೊಳ್ಳಬೇಕು.

ಆಡಳಿತ ನಡೆಸುವ ಕಾರ್ಯಾಂಗದ ಪ್ರತಿಭಾನ್ವಿತ ಅಧಿಕಾರಿಗಳು, ಅನುಭವಿ ಮಂತ್ರಿಗಳು, ಸಲಹೆ ನೀಡುವ ತಜ್ಞರು ಇದ್ದೂ ಇಂಥದ್ದೊಂದು ಸಂದಿಗ್ಧತೆ ಏಕೆ ಎಂಬ ಪ್ರಶ್ನೆಗೆ ಸದ್ಯಕ್ಕಂತೂ ಉತ್ತರ ದೊರಕುವ ಲಕ್ಷಣಗಳಿಲ್ಲ. ಇಂತಹ ಜನಪ್ರಿಯ ಯೋಜನೆಗಳು ಫಲಾನುಭವಿಗಳಿಗೆ ಪ್ರಯೋಜನ ಒದಗಿಸಿಕೊಡುವುದರ ಜೊತೆಗೆ ಬಿಕ್ಕಟ್ಟುಗಳನ್ನೂ ಸೃಷ್ಟಿಸುವುದಕ್ಕೆ ಸಕಾರಣಗಳಿರುವುದನ್ನು ಸೂಕ್ಷ್ಮವಾಗಿ ಗಮನಿಸಬೇಕು.

ಹಾಗಾದರೆ ಶಾಶ್ವತ ಪರಿಹಾರದ ದಾರಿ ಯಾವುದು? ರಾಜ್ಯದಾದ್ಯಂತ ಬಸ್ ಸಂಖ್ಯೆ ಒಟ್ಟುಗೂಡಿಸಿ ಶಕ್ತಿ ಯೋಜನೆಯ ಫಲಾನುಭವಿಗಳ ಸಂಖ್ಯೆ ಪರಿಗಣಿಸಿ ಪರಿಹಾರ ಸೂತ್ರ ಕಂಡುಕೊಳ್ಳಬೇಕು. ಶಕ್ತಿ ಯೋಜನೆಯ ಫಲಾನುಭವಿಗಳ ಸಂಖ್ಯೆ ಪರಿಗಣಿಸಿ ಜಿಲ್ಲಾವಾರು ಮೀಸಲು ಬಸ್‌ಗಳನ್ನು ನಿಗದಿ ಪಡಿಸಬೇಕು.

ಉದಾಹರಣೆಗೆ ಜಿಲ್ಲೆಯೊಂದರಲ್ಲಿ ಪ್ರಯಾಣಿಸುವ ಒಟ್ಟು ಬಸ್ಸುಗಳ ಸಂಖ್ಯೆ 600 ಇದ್ದರೆ ಅವುಗಳಲ್ಲಿ ನೂರು ಬಸ್ಸುಗಳನ್ನು ಅಥವಾ ಅಗತ್ಯಕ್ಕನುಗುಣವಾದ ಲೆಕ್ಕಾಚಾರ ಅನ್ವಯಿಸಿ ಮಹಿಳಾ ಪ್ರಯಾಣಿಕರಿಗಾಗಿಯೇ ಬಸ್ಸುಗಳನ್ನು ಮೀಸಲಿರಿಸಬೇಕು.

ರಾಜಧಾನಿ ಅಥವಾ ಜಿಲ್ಲಾ ಕೇಂದ್ರಗಳಿಗೆ ಪ್ರಯಾಣಿಸುವ ಒಟ್ಟು ಸಂಖ್ಯೆಯಲ್ಲಿ ಇಂತಿಷ್ಟು ಬಸ್ಸು ಗಳನ್ನು ಶಕ್ತಿ ಫಲಾನುಭವಿಗಳಿಗೆ ಮೀಸಲಿರಿಸಬೇಕು. ಆ ಫಲಾನುಭವಿಗಳು ಆ ಬಸ್ಸುಗಳಲ್ಲಿ ಮಾತ್ರ ಪ್ರಯಾಣಿಸಬೇಕು. ಆ ಮೂಲಕ ಸುಸ್ಥಿರ ಆದಾಯದ ಸಾಧ್ಯತೆಯನ್ನೂ ಕೆಎಸ್‌ಆರ್‌ಟಿಸಿ ಹೆಚ್ಚಿಸಿಕೊಂಡು ‘ಇರುವ ಭಾಗ್ಯಗಳ’ ನಡುವೆಯೂ ಉಳಿದ ಪ್ರಯಾಣಿಕರಿಗೆ ‘ಹರುಷ’ವನ್ನೂ ದಯಪಾಲಿಸಬಹುದು.

ಉಚಿತ ಎಂಬ ಕಾರಣಕ್ಕಾಗಿ ಮತ್ತೆ ಮತ್ತೆ ಪ್ರಯಾಣಕ್ಕೆ ಹೊರಟುಬಿಡುವ ಮನಸ್ಥಿತಿಗೂ ಕಡಿವಾಣ ಹಾಕಬಹುದು. ದುರ್ಬಲರ ಪರವಾದ ಕಾಳಜಿಯನ್ನು ಯೋಜನಾಬದ್ಧತೆಯ ಮೂಲಕ ನಿರೂಪಿ ಸಲೂಬಹುದು. ಸರಕಾರ ನಿರೀಕ್ಷಿಸಿರುವಂತೆ ‘ಕೊಳ್ಳುವ ಸಾಮರ್ಥ್ಯದ ವಿಸ್ತಾರ’ವೂ ಆಗಬಹುದೇನೋ.