ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Roopa Gururaj Column: ಗೋಕರ್ಣ ಕ್ಷೇತ್ರದ ಮಹಿಮೆ

ವಸಿಷ್ಠರು ಬ್ರಹ್ಮರ್ಷಿಗಳಾದ್ದರಿಂದ ಭೋಜನಕ್ಕೆ ಕುಳಿತ ಕೂಡಲೇ ಆ ವಿಷಯ ಅರಿವಿಗೆ ಬಂದು, ಕೋಪ ಗೊಂಡು ರಾಜನಿಗೆ, ‘ನೀನು ಬ್ರಹ್ಮ ರಾಕ್ಷಸನಾಗು’ ಎಂದು ಶಾಪ ಕೊಟ್ಟರು. ತನಗೆ ಗೊತ್ತಿಲ್ಲದ ತಪ್ಪಿಗೆ ವಸಿಷ್ಠರು ಶಾಪ ಕೊಟ್ಟಿದ್ದರಿಂದ, ರಾಜನು ಸಹ ಅವರಿಗೆ ಶಾಪ ಕೊಡಲು ಕೈಯಲ್ಲಿ ನೀರು ತೆಗೆದು ಕೊಂಡನು. ಆ ಸಮಯಕ್ಕೆ ರಾಜನ ಪತ್ನಿ ಅವನನ್ನು ಸಮಾಧಾನ ಮಾಡಿ ಮನಸ್ಸನ್ನು ಬದಲಿಸಿದಳು.

ಗೋಕರ್ಣ ಕ್ಷೇತ್ರದ ಮಹಿಮೆ

ಒಂದೊಳ್ಳೆ ಮಾತು

rgururaj628@gmail.com

ಇಕ್ಷ್ವಾಕು ವಂಶದಲ್ಲಿ ಮಿತ್ರಸಹ ಎಂಬ ಪರಾಕ್ರಮಿ ಧರ್ಮನಿಷ್ಠ ರಾಜನಿದ್ದ. ಒಮ್ಮೆ ಬೇಟೆಗೆ ಹೋದಾಗ ಮಾಯವಿ ರಾಕ್ಷಸನೊಡನೆ ಕಾದಾಡಿ ಅವನನ್ನು ಸೋಲಿಸಿ, ಸಂಹರಿಸುತ್ತಾನೆ. ಆ ರಾಕ್ಷಸ ಸಾಯುವ ಕೊನೆ ಗಳಿಗೆಯಲ್ಲಿ ತನ್ನ ತಮ್ಮನನ್ನು ಕರೆದು, ‘ನನ್ನನ್ನು ಕೊಂದ ಈ ರಾಜನ ಮೇಲೆ ನೀನು ಸೇಡು ತೀರಿಸಬೇಕು’ ಎಂದು ವಚನ ತೆಗೆದುಕೊಂಡು ಸಾಯುತ್ತಾನೆ. ಮಾಯವಿ ರಾಕ್ಷಸನ ತಮ್ಮನು ಮನುಷ್ಯ ರೂಪದಲ್ಲಿ, ರಾಜನ ಅರಮನೆಗೆ ಬಂದು ರಾಜನಿಂದ ಅನುಮತಿ ಪಡೆದು ಅರಮನೆಯ ಭೋಜನ ಶಾಲೆಯ ಅಡಿಗೆಯವರ ಸಹಾಯಕನಾಗಿ ಸೇರಿಕೊಂಡನು. ಒಮ್ಮೆ ವಸಿಷ್ಠರು ರಾಜನಲ್ಲಿಗೆ ಭೋಜನಕ್ಕೆ ಬಂದರು. ಈ ಸಮಯಕ್ಕಾಗಿ ಕಾದಿದ್ದ ಆ ಮಾಯಗಾರ ರಾಕ್ಷಸನು, ನರಮಾಂಸವನ್ನು ಅಡುಗೆಯಲ್ಲಿ ಬೆರೆಸಿದನು.

ವಸಿಷ್ಠರು ಬ್ರಹ್ಮರ್ಷಿಗಳಾದ್ದರಿಂದ ಭೋಜನಕ್ಕೆ ಕುಳಿತ ಕೂಡಲೇ ಆ ವಿಷಯ ಅರಿವಿಗೆ ಬಂದು, ಕೋಪಗೊಂಡು ರಾಜನಿಗೆ, ‘ನೀನು ಬ್ರಹ್ಮ ರಾಕ್ಷಸನಾಗು’ ಎಂದು ಶಾಪ ಕೊಟ್ಟರು. ತನಗೆ ಗೊತ್ತಿಲ್ಲದ ತಪ್ಪಿಗೆ ವಸಿಷ್ಠರು ಶಾಪ ಕೊಟ್ಟಿದ್ದರಿಂದ, ರಾಜನು ಸಹ ಅವರಿಗೆ ಶಾಪ ಕೊಡಲು ಕೈಯಲ್ಲಿ ನೀರು ತೆಗೆದು ಕೊಂಡನು. ಆ ಸಮಯಕ್ಕೆ ರಾಜನ ಪತ್ನಿ ಅವನನ್ನು ಸಮಾಧಾನ ಮಾಡಿ ಮನಸ್ಸನ್ನು ಬದಲಿಸಿದಳು.

ಇದನ್ನೂ ಓದಿ: Roopa Gururaj Column: ಭಕ್ತಿ ಒಂದೇ ಅಲ್ಲ ದೇವರಲ್ಲಿ ನಂಬಿಕೆಯೂ ಬೇಕು

ರಾಜನ ಪತ್ನಿಯ ಪ್ರಾರ್ಥನೆಯ ಮೇರೆಗೆ, ವಸಿಷ್ಠರು ಶಾಪವನ್ನು 12 ವರ್ಷಕ್ಕೆ ಇಳಿಸಿದರು. ರಾಜನು ವಸಿಷ್ಠರಿಗೆ ಶಾಪ ಕೊಡಲು ತೆಗೆದುಕೊಂಡ ನೀರನ್ನು ಕೆಳಗೆ ಹಾಕಿದಾಗ ಅವನ ಕಾಲ ಮೇಲೆ ಬಿತ್ತು. ಋಷಿಗಳ ಶಾಪ ಮತ್ತು ತಾನೇ ಮಹರ್ಷಿಗಳಿಗೆ ಕೊಡಲು ಹೊರಟ ಶಾಪ ಸೇರಿ ಮಿತ್ರವಸು ಕಲ್ಮಾಶ ಪಾದ ಎಂಬ ಹೆಸರಿನ ಬ್ರಹ್ಮರಾಕ್ಷಸನಾದನು. ಘೋರ ರೂಪದಿಂದ ದಟ್ಟಾರಣ್ಯದಲ್ಲಿ ಸಂಚರಿಸುತ್ತ ಮಾಂಸ ಭಕ್ಷಣೆ ಮಾಡುತ್ತಾ ಕಂಡ ಕಂಡಲ್ಲಿ ಅಲೆದಾಡುತ್ತಿದ್ದನು. ಅಕಸ್ಮಾತಾಗಿ ಎದುರಿಗೆ ಬಂದ ಬ್ರಾಹ್ಮಣ ದಂಪತಿಯ ಪೈಕಿ ಪತಿಯನ್ನು ಭಕ್ಷಿಸಿ ಬಿಟ್ಟನು.

ಆತನ ಪತ್ನಿ ಎಷ್ಟು ಬೇಡಿ ಕೊಂಡರೂ ಬಿಡಲಿಲ್ಲ. ಆಕೆ ತನ್ನ ದಿವ್ಯದೃಷ್ಟಿಯಿಂದ ಇವನು ರಾಜ ನಾಗಿದ್ದು, ಶಾಪ ಹೊಂದಿದ ವಿಚಾರವನ್ನೆಲ್ಲಾ ತಿಳಿದು, ‘ನೀನು 12 ವರ್ಷದ ನಂತರ ಶಾಪಮುಕ್ತ ನಾಗಿ ಮತ್ತೆ ರಾಜನಾದಾಗ ನಿನ್ನ ಪತ್ನಿಯ ಜೊತೆ ಸೇರಿದ ದಿನ ನಿನಗೆ ಸಾವು ಬರಲಿ’ ಎಂದು ಶಾಪ ಕೊಟ್ಟು ಅಗ್ನಿಪ್ರವೇಶ ಮಾಡಿದಳು. 12 ವರ್ಷ ಕಳೆದ ಮೇಲೆ ವಿಷಯ ತಿಳಿದ ಅವನ ಪತ್ನಿ, ‘ನಾವಿ ಬ್ಬರೂ ಸಂತೋಷವಾಗಿ ಒಟ್ಟಿಗೆ ಬಾಳಲು ಇಷ್ಟಾದರೂ ಅವಕಾಶ ಇದೆಯಲ್ಲ, ನಮಗೆ ಮಕ್ಕಳಾಗ ದಿದ್ದರೂ ಚಿಂತೆಯಿಲ್ಲ , ನಾವು ಒಟ್ಟಿಗೆ ಜೀವನವನ್ನು ಕಳೆಯೋಣ’ ಎಂದಳು.

ಬ್ರಾಹ್ಮಣನ ಹತ್ಯೆ ಮಾಡಿದ ಬ್ರಹ್ಮಹತ್ಯೆ ಶಾಪ ಬಲವಾಗಿ ಕೂತಿತ್ತು. ಪರಿಹರಿಸಲು ತೀರ್ಥಯಾತ್ರೆ ಮಾಡುತ್ತಾ ಅವರು, ಮಿಥಿಲಾ ನಗರಕ್ಕೆ ಬಂದರು. ಅಲ್ಲಿ ಗೌತಮ ಮಹರ್ಷಿಯ ದರ್ಶನವಾಗಿ ಅವರಿಗೆ ತನ್ನ ಕಷ್ಟವನ್ನೆಲ್ಲ ರಾಜನು ಹೇಳಿಕೊಂಡನು. ಗೌತಮ ಮಹರ್ಷಿಗಳು, ‘ಭಯಪಡಬೇಡ, ಎಂತದ್ದೇ ಕಠಿಣ ಶಾಪ-ತಾಪಗಳಿಗೆ ಮುಕ್ತಿ ಕೊಡುವ ಪುಣ್ಯಕ್ಷೇತ್ರವಿದೆ.

ಅದು ಮಹಾದೇವನ ಗೋಕರ್ಣ ಕ್ಷೇತ್ರ. ಅಲ್ಲಿ ಶಿವನು ಮೃತ್ಯುಂಜಯನಾಗಿ ನೆಲೆಸಿದ್ದಾನೆ. ಆ ಕ್ಷೇತ್ರ ದಲ್ಲಿ ಮಹಾದೇವನ ಜೊತೆಯಲ್ಲಿ ಬ್ರಹ್ಮ, ವಿಷ್ಣು ಹಾಗೂ ದೇವಾನು ದೇವತೆಗಳು, ದೇವತಾ ಸ್ತ್ರೀ ಯರು, ಋಷಿಮುನಿಗಳು, ಗಂಧರ್ವರು, ನಾಗರು, ನಾಗಕನ್ಯೆಯರು, ಕಿಂಪುರುಷರು, ಅಷ್ಟ ವಸುಗಳು ಹೀಗೆ ಈ ಕ್ಷೇತ್ರದ ದಿಕ್ಕುಗಳು, ಎಲ್ಲಾ ಮೂಲೆ ಮೂಲೆಗಳಲ್ಲೂ ಸಮಸ್ತ ದೇವ ಗಣಗಳು ನೆಲೆಸಿವೆ. ಅಂತಹ ಅದ್ಭುತ ಕ್ಷೇತ್ರಕ್ಕೆ ಹೋಗಿ ಸಮುದ್ರ ಸ್ನಾನ ಮಾಡಿ, ನೇಮನಿಷ್ಠೆಯಿಂದ ಮಹಾ ದೇವನನ್ನು ಭಕ್ತಿಯಿಂದ ಪೂಜಿಸಿ, ದಾನ-ಧರ್ಮಗಳನ್ನು ಮಾಡು, ನಿನ್ನ ಸಕಲ ಪಾಪಗಳೂ ಕಳೆದು ಶಿವ ಸಾಯುಜ್ಯ ಪದವಿ ಪಡೆಯುವೆ’ ಎಂದು ಹರಸಿದರು.

ಅಂತೆಯೇ ರಾಜ ಎಲ್ಲಾ ಪಾಪ ಚಿಂತೆಗಳಿಂದ, ಮುಕ್ತನಾಗಿ ಹಲವಾರು ವರ್ಷಗಳ ಕಾಲ ಸುಖ-ಸಂತೋಷ-ಸಮೃದ್ಧಿಯಿಂದ ರಾಜ್ಯವಾಳಿ ಇಕ್ಷ್ವಾಕು ವಂಶದ ಕೀರ್ತಿಯನ್ನು ಬೆಳಗಿದನು. ಇಂತಹ ಪುಣ್ಯ ಕ್ಷೇತ್ರ ದರ್ಶನದಿಂದ ನಮ್ಮ-ನಿಮ್ಮೆಲ್ಲರ ಜೀವನದ ಸಕಲ ಪಾಪಗಳು ಪರಿಹಾರವಾಗಿ, ಸುಖ-ಸಂತೋಷ-ಸಂತೃಪ್ತಿ ನೆಲೆಸಲಿ.