Surendra Pai Column: ಉಸಿರಾಟ ನಿಲ್ಲಿಸಿದ ಮಧ್ಯ ಭಾರತದ ಹಸಿರು ಶ್ವಾಸಕೋಶ
ಯಾವ ಕಾಡು ನಮಗೆ ಉಚಿತವಾಗಿ ಶುದ್ಧ ಗಾಳಿ, ನೀರು ಮತ್ತು ಮುಂಗಾರಿನ ಮಳೆಯನ್ನು ಉಡುಗೊರೆಯಾಗಿ ನೀಡುತ್ತಿತ್ತೋ, ಇಂದು ಅದೇ ಕಾಡನ್ನು ಕಲ್ಲಿದ್ದಲಿನ ಕಪ್ಪು ಕಂದಕವನ್ನಾಗಿ ಮಾಡಲು ಕೊಡಲಿ ಕಾಯುತ್ತಿದೆ. ಅಭಿವೃದ್ಧಿ ಎಂಬ ಜೆಸಿಬಿ ಯಂತ್ರಗಳ ಅಬ್ಬರಕ್ಕೆ ‘ಮಧ್ಯ ಭಾರತದ ಹಸಿರು ಶ್ವಾಸಕೋಶ’ದ ಉಸಿರುಗಟ್ಟುತ್ತಿದೆ.
-
ಒಡಲಾಳ
ಸುರೇಂದ್ರ ಪೈ, ಭಟ್ಕಳ
ಯಾವ ಕಾಡು ನಮಗೆ ಉಚಿತವಾಗಿ ಶುದ್ಧ ಗಾಳಿ, ನೀರು ಮತ್ತು ಮುಂಗಾರಿನ ಮಳೆಯನ್ನು ಉಡುಗೊರೆಯಾಗಿ ನೀಡುತ್ತಿತ್ತೋ, ಇಂದು ಅದೇ ಕಾಡನ್ನು ಕಲ್ಲಿದ್ದಲಿನ ಕಪ್ಪು ಕಂದಕ ವನ್ನಾಗಿ ಮಾಡಲು ಕೊಡಲಿ ಕಾಯುತ್ತಿದೆ. ಅಭಿವೃದ್ಧಿ ಎಂಬ ಜೆಸಿಬಿ ಯಂತ್ರಗಳ ಅಬ್ಬರಕ್ಕೆ ‘ಮಧ್ಯ ಭಾರತದ ಹಸಿರು ಶ್ವಾಸಕೋಶ’ದ ಉಸಿರುಗಟ್ಟುತ್ತಿದೆ.
ಕೋಟ್ಯಂತರ ವರ್ಷಗಳ ಇತಿಹಾಸ, ಲಕ್ಷಾಂತರ ವನ್ಯಜೀವಿಗಳ ಆವಾಸಸ್ಥಾನ ಮತ್ತು ತಲೆ ಮಾರುಗಳ ಆದಿವಾಸಿಗಳ ಸಾಂಸ್ಕೃತಿಕ ಬೇರಾಗಿರುವ ‘ಹಸ್ದೇವ್ ಅರಣ್ಯ’ ಇಂದು ಕಲ್ಲಿದ್ದಲಿನ ಕಪ್ಪು ದಂಧೆಗೆ ಬಲಿಯಾಗುತ್ತಿದೆ. ದೇಶದ ಇಂಧನ ಭದ್ರತೆಯ ನೆಪದಲ್ಲಿ ಕಾರ್ಪೊರೇಟ್ ಹಸಿವು ನೀಗಿಸಲು ಕೇಂದ್ರ ಸರಕಾರದ ವಿನಾಶಕಾರಿ ನೀತಿಗಳು ಪ್ರಕೃತಿಯ ಜೀವವ್ಯವಸ್ಥೆಯ ಮಾರಣಹೋಮಕ್ಕೆ ಮುನ್ನುಡಿ ಬರೆಯುತ್ತಿವೆ. ಈ ಸರತಿಯಲ್ಲಿ ಇದೀಗ ಹಸ್ದೇವ್‌ನ ಅರಣ್ಯದ ಶ್ವಾಸಕೋಶ ಉಸಿರಾಟ ನಿಲ್ಲಿಸುವ ಸನಿಹದಲ್ಲಿದೆ.
ಹಸ್ದೇವ್ ಅರಣ್ಯವನ್ನು ಕೇವಲ ಮರಗಳಿರುವ ಒಂದು ಸಾಧಾರಣ ಕಾಡು ಎಂದು ನೋಡ ಲಾಗುವುದಿಲ್ಲ. ಇದನ್ನು ಮಧ್ಯ ಭಾರತದ ಶ್ವಾಸಕೋಶ ಎಂದು ಕರೆಯಲಾಗುತ್ತದೆ. ಛತ್ತೀಸ್ ಗಡದ ಸುಮಾರು 1878 ಚದರ ಕಿಲೋಮೀಟರ್‌ಗಳಷ್ಟು ವಿಸ್ತಾರವಾಗಿ ಹರಡಿರುವ ಈ ಅರಣ್ಯದ ಜೀವವೈವಿಧ್ಯತೆ ನೆಲೆಬೀಡಾಗಿದೆ. ಇದು ಕೇವಲ ಕಾಡಲ್ಲ, ಭಾರತದ ಆನೆಗಳ ಅತಿ ದೊಡ್ಡ ನೈಸರ್ಗಿಕ ಆವಾಸಸ್ಥಾನ.
ಇಲ್ಲಿನ ‘ಲೆಮ್ರು ಆನೆ ಸಂರಕ್ಷಿತ ಪ್ರದೇಶ’ ಆನೆಗಳ ರಕ್ಷಣೆಗೆಂದೇ ಮೀಸಲಾಗಿದೆ. ಜಾರ್ಖಂಡ್, ಒಡಿಶಾ ಮತ್ತು ಛತ್ತೀಸ್‌ಗಡ ರಾಜ್ಯಗಳ ನಡುವೆ ವಲಸೆ ಹೋಗುವ ನೂರಾರು ಆನೆಗಳಿಗೆ ಇದು ‘ಎಲಿಫೆಂಟ್ ಕಾರಿಡಾರ್’ ಆಗಿದೆ. ಈ ಅರಣ್ಯವು ಮಧ್ಯ ಭಾರತದ ಪ್ರಮುಖ ನದಿ ಯಾದ ‘ಹಸ್ದೇವ್ ನದಿಯ’ ಜಲಾನಯನ ಪ್ರದೇಶವಾಗಿದೆ.
ಮಹಾನದಿಯ ಪ್ರಮುಖ ಉಪನದಿಯಾಗಿರುವ ಹಸ್ದೇವ್ ನದಿಗೆ ಈ ಕಾಡೇ ಜೀವಾಳ. ಈ ಕಾಡಿನ ಮಧ್ಯೆ ಹರಿಯುವ ಹತ್ತಾರು ಸಣ್ಣ ತೊರೆಗಳು ಇಡೀ ಪ್ರದೇಶದ ಅಂತರ್‌ಜಲ ಮಟ್ಟವನ್ನು ಕಾಯ್ದುಕೊಂಡಿವೆ. ಪ್ರಸಿದ್ಧ ಮಿನಿಮಾಟಾ (ಬಂಗೋ) ಅಣೆಕಟ್ಟಿಗೆ ನೀರು ಒದಗಿಸುತ್ತವೆ. ಇದು ಲಕ್ಷಾಂತರ ಎಕರೆ ಕೃಷಿ ಭೂಮಿಗೆ ನೀರಾವರಿ ಆಸರೆಯಾಗಿದೆ.
ಇದನ್ನೂ ಓದಿ: Surendra Pai Column: ಶಿಕ್ಷಣ ಕ್ಷೇತ್ರ ಪ್ರಧಾನ್ ಕೈಯಲ್ಲಿ ಸುರಕ್ಷಿತವೇ ?
ಕೇಂದ್ರ ಸರಕಾರದ ವೈಜ್ಞಾನಿಕ ಸಂಸ್ಥೆಯಾದ WII (Wildlife Institute of India) ಇಲ್ಲಿ ನಡೆಸಿರುವ ಸಮೀಕ್ಷೆಯ ಪ್ರಕಾರ, ಈ ಕಾಡು ಅದ್ಭುತ ಜೀವವೈವಿಧ್ಯತೆಯ ಗೂಡಾಗಿದೆ. ಇಲ್ಲಿ ಬಂಗಾಳ ಹುಲಿ, ಚಿರತೆ, ಕರಡಿ, ಕಾಡುಕೋಣ, ನಾಲ್ಕು ಕೊಂಬಿನ ಜಿಂಕೆ ಮತ್ತು ತೋಳಗಳಂತಹ ಸಂರಕ್ಷಿತ ವನ್ಯಜೀವಿಗಳಿವೆ.
92 ಕ್ಕೂ ಹೆಚ್ಚು ಪ್ರಭೇದದ ಅಪರೂಪದ ಪಕ್ಷಿಗಳಿಗೆ ಇದು ಆಶ್ರಯ ತಾಣವಾಗಿದೆ. ಸುಮಾರು 86ಕ್ಕೂ ಹೆಚ್ಚು ಅಪರೂಪದ ಚಿಟ್ಟೆಗಳ ತಳಿಗಳು ಇಲ್ಲಿ ಕಂಡುಬರುತ್ತವೆ. ಇಲ್ಲಿ ನೂರಾರು ವರ್ಷ ಹಳೆಯದಾದ ಸಾಲ್, ತೇಗ, ಮಹುವಾ ಮತ್ತು ಬಿಜಾಸಾಲ್ ಮರಗಳು ದಟ್ಟವಾಗಿ ಬೆಳೆದಿವೆ.
ಇದರೊಂದಿಗೆ ಆಧುನಿಕ ವಿಜ್ಞಾನಕ್ಕೂ ನಿಲುಕದ, ಆದಿವಾಸಿಗಳು ತಲೆಮಾರುಗಳಿಂದ ಬಳಸಿಕೊಂಡು ಬರುತ್ತಿರುವ ನೂರಾರು ಅಪರೂಪದ ಔಷಧಿಯ ಸಸ್ಯಗಳು ಮತ್ತು ಗಿಡಮೂಲಿಕೆಗಳು ಈ ಕಾಡಿನಲ್ಲಿವೆ. ಈ ಅರಣ್ಯವು ಕೇವಲ ಪ್ರಕೃತಿಯಲ್ಲ, ಬದಲಿಗೆ ‘ಕೊಂಡ್’, ‘ಗೊಂಡ್’ ಮತ್ತು ‘ಓರಾನ್’ನಂತಹ ಪ್ರಾಚೀನ ಆದಿವಾಸಿ ಸಮುದಾಯಗಳ ಜೀವ ನಾಡಿಯಾಗಿದೆ.
ಕಾಡನ್ನೇ ದೇವರಾಗಿ ಪೂಜಿಸುವ ಇವರ ಇಡೀ ಸಂಸ್ಕೃತಿ, ಆಹಾರ ಮತ್ತು ಅಸ್ತಿತ್ವ ಈ ಹಸ್ದೇವ್ ಅರಣ್ಯದೊಂದಿಗೆ ಬೆಸೆದುಕೊಂಡಿದೆ. ಹಸ್ದೇವ್ ಅರಣ್ಯವು ಕೇವಲ ಮರಗಳ ಗುಂಪಲ್ಲ, ಅದು ಇಡೀ ಮಧ್ಯ ಭಾರತದ ಹವಾಮಾನವನ್ನು ನಿಯಂತ್ರಿಸುವ, ಕೋಟ್ಯಂತರ ಜೀವಿಗಳಿಗೆ ಉಸಿರು ನೀಡುವ ಮತ್ತು ಪ್ರಕೃತಿಯ ಸಮತೋಲನವನ್ನು ಕಾಯ್ದುಕೊಳ್ಳುವ ಒಂದು ಜೀವಂತ ಶಕ್ತಿಯೂ ಹೌದು.
ಇಂತಹ ಅಪರೂಪ ಜೀವವೈವಿಧ್ಯದ ತೊಟ್ಟಿಲಾಗಿರುವ ಹಸ್ದೇವ್ ಅರಣ್ಯವು ಕಲ್ಲಿದ್ದಲು ಗಣಿಗಾರಿಕೆಯಿಂದ ವಿನಾಶದ ಅಂಚಿನಲ್ಲಿದೆ. ಇನ್ನು ಸ್ವಲ್ಪ ದಿನ ಕಳೆದರೆ ಅಂದು ಅಪರೂಪದ ದಟ್ಟ ಅರಣ್ಯವಿತ್ತು ಎಂಬುದೇ ಜನರಿಗೆ ಮರೆತು ಹೋಗುವ ಪರಿಸ್ಥಿತಿ ನಿರ್ಮಾಣವಾಗುವ ಹಂತದಲ್ಲಿದೆ. ಈ ಅರಣ್ಯ ಪ್ರದೇಶವನ್ನು ಒಟ್ಟು 30 ಕಲ್ಲಿದ್ದಲು ಬ್ಲಾಕ್ಗಳಾಗಿ ವಿಂಗಡಿಸಲಾಗಿದೆ.
ಇಲ್ಲಿ ಸುಮಾರು 5.17 ಶತಕೋಟಿ ಟನ್ ಕಲ್ಲಿದ್ದಲು ನಿಕ್ಷೇಪ ಇರುವುದಾಗಿ ಅಂದಾಜಿಸ ಲಾಗಿದೆ. ಅವುಗಳಲ್ಲಿ ‘ಪಾರ್ಸಾ ಈಸ್ಟ್ ಮತ್ತು ಕೇಂಟೆ ಬಾಸನ್ ( PEKB) ಪ್ರಾಜೆಕ್ಟ್’ ಹಸ್ದೇವ್ ನಲ್ಲಿ ಆರಂಭವಾದ ಮೊದಲ ದೊಡ್ಡ ಗಣಿ ಯೋಜನೆ. ರಾಜಸ್ಥಾನ ಸರಕಾರದ ವಿದ್ಯುತ್ ನಿಗಮಕ್ಕೆ (RRVUNL) ಸೇರಿರುವ ಈ ಬ್ಲಾಕ್‌ನ ಕಾರ್ಯಾಚರಣೆಯನ್ನು ಅದಾನಿ ಗ್ರೂಪ್ ನಡೆಸುತ್ತಿದೆ. ಇದರ ಮೊದಲ ಹಂತ ಮುಗಿದಿದ್ದು, ಈಗ ಎರಡನೇ ಹಂತದ ವಿಸ್ತರಣೆಗಾಗಿ ವ್ಯಾಪಕವಾಗಿ ಮರಗಳನ್ನು ಕಡಿಯಲಾಗುತ್ತಿದೆ. ಈ ಯೋಜನೆಗೆ ಒಟ್ಟು 1250 ಹೆಕ್ಟೇರ್ ಭೂಮಿಯ ಅಗತ್ಯವಿದ್ದು, ಅದರಲ್ಲಿ 841 ಹೆಕ್ಟೇರ್ ದಟ್ಟ ಅರಣ್ಯ ಭೂಮಿ ಯಾಗಿದೆ. ಇದರ ಆರಂಭಿಕ ಹಂತದ ಸಾವಿರಾರು ಮರಗಳನ್ನು ಕತ್ತರಿಸಿ ಜಾಗ ಖಾಲಿ ಮಾಡಲಾಗಿದೆ.
ಕೇಂಟೆ ಎಕ್ಸ್ಟೆನ್ಷನ್ ಪ್ರಾಜೆಕ್ಟ್ ಇದರ ಪ್ರಸ್ತುತ ಹಂತ. ಇತ್ತೀಚೆಗೆ (೨೦೨೬ರ ಮೇ ತಿಂಗಳ ವರದಿಗಳ ಪ್ರಕಾರ) ಅತ್ಯಂತ ದಟ್ಟ ಅರಣ್ಯ ವಲಯದಲ್ಲಿರುವ ಈ ಬ್ಲಾಕ್‌ಗೆ ಕೇಂದ್ರ ಸರಕಾರ ಅಂತಿಮ ಮಂಜೂರಾತಿ ನೀಡಿದೆ. ಸುಮಾರು 1742 ಹೆಕ್ಟೇರ್ ಅರಣ್ಯವನ್ನು ಈ ಒಂದೇ ಪ್ರಾಜೆಕ್ಟ್‌ಗಾಗಿ ಬಳಸಿಕೊಳ್ಳಲಾಗುತ್ತಿದೆ. ಈ ಗಣಿಗಾರಿಕೆಯು ಕೇವಲ ಕಲ್ಲಿದ್ದಲನ್ನು ಮಾತ್ರ ಹೊರತೆಗೆಯುತ್ತಿಲ್ಲ, ಬದಲಿಗೆ ಮೇಲ್ಮಟ್ಟದಲ್ಲಿರುವ ಪ್ರಕೃತಿಯ ಅತಿ ದೊಡ್ಡ ಸಂಪತ್ತನ್ನು ಶಾಶ್ವತವಾಗಿ ಧ್ವಂಸಗೊಳಿಸುತ್ತಿದೆ.
ಪ್ರಸ್ತುತ ಮಂಜೂರಾಗಿರುವ ಹೊಸ ಪ್ರಾಜೆಕ್ಟ್‌ಗಳಿಂದಾಗಿ ಸುಮಾರು 4.48 ಲಕ್ಷ ಮರಗಳನ್ನು ಕಡಿಯಲಾಗುತ್ತಿದೆ. ಅರ್ಥಾತ್ ಅಲ್ಲಿಯ ಶತಮಾನಗಳ ಹಳೆಯ ಸಸ್ಯರಾಶಿ ಅಂತ್ಯ. ಅದೇ ಜಾಗವು ‘ಲೆಮ್ರು ಆನೆ ಸಂರಕ್ಷಿತ ಪ್ರದೇಶ’ದ ಪಕ್ಕದ ಇರುವುದರಿಂದ, ಆನೆಗಳ ನೈಸರ್ಗಿಕ ಆಹಾರ ಮತ್ತು ಆನೆ ಕಾರಿಡಾರ್ ಹಾಗೂ ಆಶ್ರಯ ಸಂಪೂರ್ಣ ಇಲ್ಲದಂತಾಗಿದೆ. ಇದರಿಂದ ಆನೆಗಳು ದಾರಿ ತಪ್ಪಿ ಹಳ್ಳಿಗೆ ಕಾಲಿಡುತ್ತಿವೆ. ಇದರ ಪರಿಣಾಮ ಮಾನವ-ಆನೆ ಸಂಘರ್ಷ ತುತ್ತತುದಿಗೆ ತಲುಪಿದೆ.
ಜತೆಗೆ ದಟ್ಟ ಅರಣ್ಯದ ಜೀವವೈವಿಧ್ಯತೆಯ ಕಣ್ಮರೆಯಾಗುತ್ತಿವೆ. ಗಣಿಗಾರಿಕೆಗಾಗಿ ಬೃಹತ್ ಕಂದಕಗಳನ್ನು ತೋಡುವುದರಿಂದ, ಕಾಡಿನ ಒಳಗಿದ್ದ ನೂರಾರು ನೈಸರ್ಗಿಕ ನೀರಿನ ತೊರೆಗಳು ಮತ್ತು ಬುಗ್ಗೆಗಳು ಸಂಪೂರ್ಣವಾಗಿ ಒಣಗಿಹೋಗಿವೆ. ಅದರಲ್ಲೂ ಹಸ್ದೇವ್ ಅರಣ್ಯದ ಮೂಲಕ ಹರಿಯುವ ‘ಚಾರ್ನೋಯ್ ನದಿ’ ಪ್ರಸಿದ್ಧ ಬಂಗೋ ಅಣೆಕಟ್ಟಿಗೆ ನೀರು ಒದಗಿಸುವ ಮುಖ್ಯ ಮೂಲವಾಗಿತ್ತು.
ಇದೀಗ ಇಡೀ ಜಲಾನಯನ ಪ್ರದೇಶದ ನೀರಿನ ಮರುಪೂರಣ ವ್ಯವಸ್ಥೆ ಹದಗೆಟ್ಟಿದ್ದು, ಭವಿಷ್ಯದಲ್ಲಿ ಕೋಟ್ಯಂತರ ಜನರ ಕುಡಿಯುವ ನೀರು ಮತ್ತು ಕೃಷಿಗೆ ಆಪತ್ತು ಎದುರಾಗಿದೆ. ಈ ಕಾಡಿನಲ್ಲಿ ಆದಿವಾಸಿಗಳ ಆರ್ಥಿಕತೆಗೆ ಆಸರೆಯಾಗಿದ್ದ ‘ಟೆಂಡು ಎಲೆ’ ಜೇನುತುಪ್ಪ, ಗಿಡಮೂಲಿಕೆಗಳು ಮತ್ತು ಧೂಪದ ಮರಗಳಂತಹ ಅಪರೂಪದ ಕಿರು ಅರಣ್ಯ ಸಂಪನ್ಮೂಲಗಳು ಮಣ್ಣು ಪಾಲಾಗುತ್ತಿವೆ.
ಹಸ್ದೇವ್ ಅರಣ್ಯವು ಮಧ್ಯ ಭಾರತದ ಪರಿಸರ ವ್ಯವಸ್ಥೆಗೆ( Ecosystem) ನೀಡುತ್ತಿರುವ ಕೊಡುಗೆ ಅಸಾಧಾರಣವಾದದ್ದು. ಪ್ರಕೃತಿಯ ಸಮತೋಲನವನ್ನು ಕಾಯ್ದುಕೊಳ್ಳುವಲ್ಲಿ ಮತ್ತು ಮಾನವ ಸಂಕುಲದ ಉಳಿವಿನಲ್ಲಿ ಈ ಅರಣ್ಯವು ಎಷ್ಟು ಮಹತ್ವ ಎಂದು ಎಲ್ಲರಿಗೂ ಗೋತ್ತಿದೆ. ಆದರೂ ಈ ಇಡೀ ಪ್ರಕ್ರಿಯೆಯಲ್ಲಿ ಕೇಂದ್ರ ಸರಕಾರ ಮತ್ತು ಪರಿಸರ ಇಲಾಖೆಯು ಪರೋಕ್ಷವಾಗಿ ಪರಿಸರ ವಿರೋಧಿ ಕ್ರಮಗಳಿಗೆ ಉತ್ತೇಜನ ನೀಡುತ್ತಿದೆ.
ಹಸ್ದೇವ್ ಅರಣ್ಯದ ನಾಶವನ್ನು ತಡೆಯುವಲ್ಲಿ ಕೇಂದ್ರ ಸರಕಾರ ಮತ್ತು ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ವೈಪರೀತ್ಯ ಸಚಿವಾಲಯವು (MoEFCC) ವಿಫಲವಾಗಿರುವುದು ಮಾತ್ರವಲ್ಲದೆ, ಗಣಿಗಾರಿಕೆಗೆ ದಾರಿ ಮಾಡಿಕೊಡುವಲ್ಲಿ ಸಕ್ರಿಯ ಪಾತ್ರ ವಹಿಸಿವೆ ಎಂಬುದು ಪರಿಸರವಾದಿಗಳು ಮತ್ತು ಕಾನೂನು ತಜ್ಞರ ಗಂಭೀರ ಆರೋಪ ವಾಗಿದೆ. ಇದು ವಾಸ್ತವವೂ ಹೌದು.
2010ರಲ್ಲಿ, ಕೇಂದ್ರ ಪರಿಸರ ಮತ್ತು ಅರಣ್ಯ ಸಚಿವಾಲಯ ಹಾಗೂ ಕಲ್ಲಿದ್ದಲು ಸಚಿವಾ ಲಯ ಜಂಟಿ ಸಮೀಕ್ಷೆ ನಡೆಸಿ, ಹಸ್ದೇವ್ ಅರಣ್ಯವನ್ನು ‘ನೋ-ಗೋ ಜೋನ್’ (ಗಣಿಗಾರಿಕೆ ಮಾಡಬಾರದ ಪ್ರದೇಶ) ಎಂದು ಘೋಷಿಸಿತ್ತು. ಆದರೆ, ಪ್ರಸುತ್ತ ಕೇಂದ್ರ ಸರಕಾರ ವಿದ್ಯುತ್ ಅಭಾವ ಮತ್ತು ಕಲ್ಲಿದ್ದಲು ಬೇಡಿಕೆಯಿಂದಾಗಿ ಈ ನೀತಿಯನ್ನು ಗಾಳಿಗೆ ತೂರಿ ನಿಯಮ ಸಡಿಲಗೊಳಿಸಿತು.
2014ರ ಬಳಿಕ ಕೇಂದ್ರ ಸರಕಾರವು ‘ಅರಣ್ಯ ಸಂರಕ್ಷಣಾ ಕಾಯ್ದೆ’ ಮತ್ತು ‘ಪರಿಸರ ಪ್ರಭಾವದ ಮೌಲ್ಯಮಾಪನ’ (EIA) ನಿಯಮಗಳಿಗೆ ಹಲವಾರು ತಿದ್ದುಪಡಿಗಳನ್ನು ತಂದಿದೆ. ಈ ತಿದ್ದುಪಡಿಗಳ ಮುಖ್ಯ ಉದ್ದೇಶ ಉದ್ಯಮಗಳಿಗೆ ಸುಲಭವಾಗಿ ಪರವಾನಗಿ ನೀಡುವುದೇ ಆಗಿದೆ. ಈ ಸಡಿಲಿಕೆಗಳೇ ಹಸ್ದೇವ್‌ನಂತಹ ದಟ್ಟ ಕಾಡುಗಳನ್ನು ಮೈನಿಂಗ್ ಕಂಪನಿಗಳು ಸುಲಭವಾಗಿ ವಶಪಡಿಸಿಕೊಳ್ಳಲು ಕಾನೂನಾತ್ಮಕ ದಾರಿಯನ್ನು ಮಾಡಿ ಕೊಟ್ಟವು.
ಭಾರತದ ಸಂವಿಧಾನದ 5ನೇ ಅನುಸೂಚಿ ಮತ್ತು ಪೆಸಾ (PESA) ಕಾಯ್ದೆಯ ಪ್ರಕಾರ, ಆದಿವಾಸಿ ಪ್ರದೇಶಗಳಲ್ಲಿ ಗಣಿಗಾರಿಕೆ ನಡೆಸಲು ಸ್ಥಳೀಯ ಗ್ರಾಮಸಭೆಗಳ ಒಪ್ಪಿಗೆ ಕಡ್ಡಾಯ. ಪಾರ್ಸಾ ಮತ್ತು ಇತರ ಬ್ಲಾಕ್‌ಗಳ ಮಂಜೂರಾತಿಗಾಗಿ ‘ನಕಲಿ ಗ್ರಾಮಸಭೆ’ ದಾಖಲೆಗಳನ್ನು ಸೃಷ್ಟಿಸಲಾಗಿದೆ ಎಂದು ಆದಿವಾಸಿಗಳು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರೂ ಮತ್ತು ನಿರಂತರ ಪ್ರತಿಭಟನೆ ನಡೆಸುತ್ತಿದ್ದರೂ, ಕೇಂದ್ರ ಸರಕಾರವಾಗಲಿ ಅಥವಾ ಪರಿಸರ ಇಲಾಖೆಯಾಗಲಿ ಈ ಬಗ್ಗೆ ಯಾವುದೇ ತನಿಖೆ ನಡೆಸದೆ ಮರಗಳನ್ನು ಕಡಿಯಲು ಮೌನ ಸಮ್ಮತಿ ನೀಡಿವೆ.
ಪರಿಸರ ಸಂರಕ್ಷಣೆಗೆ ಮುಂದಾಗಬೇಕಾದ ಪರಿಸರ ಇಲಾಖೆ ಕೇವಲ ‘ಕ್ಲಿಯರೆನ್ಸ್’ ನೀಡುವ ಸಂಸ್ಥೆಯಾಗಿ ಬದಲಾಗಿರುವುದೇ ಇದಕ್ಕೆ ಸಾಕ್ಷಿ. ಅರಣ್ಯ ಸಂರಕ್ಷಣೆಗೆ ಸಾಂವಿಧಾನಿಕವಾಗಿ ಸಂವಿಧಾನದ 5ನೇ ಅನುಸೂಚಿ, ಪೆಸಾ ಕಾಯ್ದೆ, 1996, ಅರಣ್ಯ ಹಕ್ಕುಗಳ ಕಾಯ್ದೆ ೨೦೦೬, ಅರಣ್ಯ ಸಂರಕ್ಷಣಾ ಕಾಯ್ದೆ 1980, ಪರಿಸರ ಸಂರಕ್ಷಣಾ ಕಾಯ್ದೆ 1986 ಹೀಗೆ ಹತ್ತಾರು ಕಾನೂನುಗಳಿದ್ದರೂ ಅರಣ್ಯ ನಾಶವಾಗುತ್ತಿರುವುದೇಕೆ? ಇದಕ್ಕೆ ಉತ್ತರ ಅದೇ ‘ಕಾನೂನಿನ ಲೂಪ್ ಹೋಲುಗಳು.’
ಕಳೆದ 12 ವರ್ಷಗಳಿಂದ ‘ರಾಷ್ಟ್ರೀಯ ಹಿತಾಸಕ್ತಿ ಹಾಗೂ ಸೇನಾ ಭದ್ರತೆ’ ಮತ್ತು ‘ದೇಶದ ಇಂಧನ ಭದ್ರತೆ’ ಎಂಬ ವಿನಾಯಿತಿ ನಿಯಮಗಳನ್ನು ಬಳಸಿ ಕೇಂದ್ರ ಸರಕಾರವು ಈ ಕಾನೂನುಗಳ ಪ್ರಭಾವವನ್ನು ಕುಗ್ಗಿಸುತ್ತಿದೆ. ಉದ್ಯಮಗಳ ಅನುಕೂಲಕ್ಕಾಗಿ ನಿಯಮ ಗಳನ್ನು ತಿದ್ದುತ್ತಿರುವುದರಿಂದಲೇ ಇಂದು ಹಸ್ದೇವ್ ಕಾನೂನುಬದ್ಧವಾಗಿಯೇ ನಾಶ ವಾಗುವ ಸ್ಥಿತಿ ತಲುಪಿದೆ.
ಕಲ್ಲಿದ್ದಲು ಗಣಿಗಾರಿಕೆಯಿಂದ ಸರಕಾರ ಮತ್ತು ಕಾರ್ಪೊರೇಟ್ ಕಂಪನಿಗಳು ಹಣ ಗಳಿಸುತ್ತಿರಬಹುದು. ಆದರೆ, ಅದಕ್ಕಾಗಿ ನಾಶ ಮಾಡುತ್ತಿರುವ ಹಸ್ದೇವ್ ಅರಣ್ಯದ ಮೇಲ್ಮಣ್ಣು, ಆಮ್ಲಜನಕ, ಶುದ್ಧ ನೀರು ಮತ್ತು ಜೀವವೈವಿಧ್ಯದ ಒಟ್ಟು ನೈಸರ್ಗಿಕ ಮೌಲ್ಯವು ಕಲ್ಲಿದ್ದಲಿನಿಂದ ಬರುವ ಲಾಭಕ್ಕಿಂತ ಹತ್ತಾರು ಪಟ್ಟು ಹೆಚ್ಚು ಎಂದು ಪರಿಸರ ಅರ್ಥಶಾಸ್ತ್ರಜ್ಞರು ಎಚ್ಚರಿಸಿದ್ದಾರೆ.
ಕೇಂದ್ರ ಪರಿಸರ ಸಚಿವಾಲಯದ ಅಧಿಕೃತ ಅಂಕಿ-ಅಂಶಗಳ ಪ್ರಕಾರ, 2014ರಿಂದ 2026ರ ಅವಧಿಯಲ್ಲಿ ದೇಶಾದ್ಯಂತ ಸುಮಾರು 3 ಲಕ್ಷಕ್ಕೂ ಹೆಚ್ಚು ಹೆಕ್ಟೇರ್(ಸುಮಾರು 7.4 ಲಕ್ಷ ಎಕರೆ) ದಟ್ಟ ಅರಣ್ಯ ಭೂಮಿಯನ್ನು ಅರಣ್ಯೇತರ ಉದ್ದೇಶಗಳಿಗಾಗಿ (ಗಣಿಗಾರಿಕೆ, ರಸ್ತೆ, ರಕ್ಷಣೆ ಮತ್ತು ವಿದ್ಯುತ್ ಯೋಜನೆಗಳು) ಅಧಿಕೃತವಾಗಿ ಬಳಸಿಕೊಳ್ಳಲಾಗಿದೆ. ಜಾಗತಿಕ ಸಂಸ್ಥೆಯಾದ ‘ಗ್ಲೋಬಲ್ ಫಾರೆಸ್ಟ್ ವಾಚ್’ ವರದಿಗಳ ಪ್ರಕಾರ, ಭಾರತವು ಕಳೆದ ಒಂದು ದಶಕದಲ್ಲಿ ತನ್ನ ಒಟ್ಟಾರೆ ಹಸಿರು ಹೊದಿಕೆಯಲ್ಲಿ ಸುಮಾರು ಶೇ.1.5ರಿಂದ 2ರಷ್ಟು ಭಾಗವನ್ನು ಕಳೆದುಕೊಂಡಿದೆ.
ಭಾರತದ ಒಟ್ಟು ಭೂಭಾಗದಲ್ಲಿ ಶೇ.21.7ರಷ್ಟು ಅರಣ್ಯವಿದೆ ಎಂದು ಸರಕಾರ ಹೇಳಿದರೂ, ಅದರಲ್ಲಿ ಹಸ್ದೇವ್‌ನಂತಹ ‘ಅತಿ ದಟ್ಟ ಕಾಡುಗಳ’ ಪ್ರಮಾಣ ಕೇವಲ ಶೇ.3ರಷ್ಟು ಮಾತ್ರ ಇತ್ತು. ಕಳೆದ 12 ವರ್ಷಗಳಲ್ಲಿ ಗಣಿಗಾರಿಕೆ ಮತ್ತು ರಸ್ತೆ ವಿಸ್ತರಣೆಗಾಗಿ ಬಲಿಯಾಗಿರುವುದು ಇಂತಹ ದಟ್ಟ ಕಾಡುಗಳೇ. ಈ ವಿಭಾಗದಲ್ಲಿ ಭಾರತವು ತನ್ನ ಅತ್ಯಮೂಲ್ಯ ದಟ್ಟ ಅರಣ್ಯ ಸಂಪತ್ತಿನ ಸುಮಾರು ಶೇ.3 ರಿಂದ 4ರಷ್ಟು ಭಾಗವನ್ನು ಈಗಾಗಲೇ ಕಳೆದುಕೊಂಡಿದೆ.
ಅವುಗಳಲ್ಲಿ ಪ್ರಮುಖವಾಗಿ ಛತ್ತೀಸ್‌ಗಡ, ಒಡಿಶಾ, ಜಾರ್ಖಂಡ್, ಗೋವಾ ರಾಜ್ಯದಲ್ಲಿ ಗಣಿಗಾರಿಕೆಗಾಗಿ ಸುಮಾರು ಶೇ.30ರಿಂದ 35ರಷ್ಟು, ಪಶ್ಚಿಮ ಘಟ್ಟಗಳು (ಕರ್ನಾಟಕ-ಕೇರಳ), ಹಿಮಾಲಯದ ಚಾರ್‌ಧಾಮ್ ಯೋಜನೆಗಾಗಿ ರಸ್ತೆ ಮತ್ತು ರೈಲ್ವೆ ಮಾರ್ಗ ನಿರ್ಮಿಸಲು ಶೇ.25ರಷ್ಟು, ಈಶಾನ್ಯ ಭಾರತ (ಅರುಣಾಚಲ ಪ್ರದೇಶ), ಮಧ್ಯಪ್ರದೇಶ (ಕೇನ್-ಬೆತ್ವಾ ನದಿ ಜೋಡಣೆ) ರಾಜ್ಯದ ಜಲವಿದ್ಯುತ್ ಮತ್ತು ಅಣೆಕಟ್ಟು ಯೋಜನೆಗಾಗಿ ಶೇ.20ರಷ್ಟು ಆಯಾಯ ರಾಜ್ಯದ ಅರಣ್ಯವು ಕಳೆದ 12 ವರ್ಷದ ಅವಧಿಯಲ್ಲಿ ನಾಶ ಮಾಡಲಾಗಿದೆ.
ಇಷ್ಟೆಲ್ಲ ಆದರೂ ಸಹ ಕೇಂದ್ರ ಸರಕಾರವು ತನ್ನ ‘ಇಂಡಿಯಾ ಸ್ಟೇಟ್ ಆಫ್ ಫಾರೆಸ್ಟ್ ರಿಪೋರ್ಟ್’ (ISFR) ನಲ್ಲಿ ದೇಶದ ಒಟ್ಟು ಅರಣ್ಯ ಪ್ರದೇಶ ಹೆಚ್ಚಾಗುತ್ತಿದೆ ಎಂದು ಹೇಳಿ ಕೊಳ್ಳುತ್ತದೆ. ಆದರೆ, ಪರಿಸರ ತಜ್ಞರು ಇದನ್ನು ಒಪ್ಪುವುದಿಲ್ಲ. ಏಕೆಂದರೆ ಕೇಂದ್ರ ಸರಕಾರವು ಉಪಗ್ರಹ ಚಿತ್ರಗಳ ಮೂಲಕ ಕಾಫಿ ತೋಟಗಳು, ಮಾವಿನ ತೋಟಗಳು ಮತ್ತು ರಸ್ತೆ ಬದಿಯ ಸಾಮಾಜಿಕ ಅರಣ್ಯಗಳನ್ನೂ ‘ಅರಣ್ಯ’ ಎಂದೇ ಪರಿಗಣಿಸಿ ಲೆಕ್ಕ ತೋರಿಸು ತ್ತಿದೆ. ಹಾಗೂ ಹಸ್ದೇವ್ ಅರಣ್ಯದಂತಹ ಕೋಟ್ಯಂತರ ವರ್ಷಗಳ ಇತಿಹಾಸ ವಿರುವ, ಸಮೃದ್ಧ ಜೀವವೈವಿಧ್ಯವಿರುವ ದಟ್ಟ ಕಾಡನ್ನು ಕಡಿದು, ಬೇರೆಡೆ ಕೇವಲ ನೀಲಗಿರಿ ಅಥವಾ ಅಕೇಶಿಯಾ ಗಿಡಗಳನ್ನು ನೆಡುವುದರಿಂದ ಆ ನೈಸರ್ಗಿಕ ಪರಿಸರ ವ್ಯವಸ್ಥೆಯನ್ನು ಮರುಸೃಷ್ಟಿಸಲು ಸಾಧ್ಯವೇ ಇಲ್ಲ ಎಂಬ ಕಟು ವಾಸ್ತವ ಇದೀಗ ಜನರಿಗೆ ತಿಳಿಯದ ವಿಷಯವಲ್ಲ. ಛತ್ತೀಸ್‌ಗಡದ ಹಸ್ದೇವ್ ಅರಣ್ಯ ನಾಶವಾಗುತ್ತಿರುವುದನ್ನು ನೋಡಿಯೂ ನಾವು ಎಚ್ಚೆತ್ತುಕೊಳ್ಳದಿದ್ದರೆ, ಮುಂದಿನ ಸರತಿ ನಮ್ಮ ಮಲೆನಾಡು ಮತ್ತು ಕರಾವಳಿ ಯದ್ದೇ ಆಗಿರುತ್ತದೆ.
ಇಂದು ನಮ್ಮ ತಲೆಯ ಮೇಲೆ ಹಾರಾಡುತ್ತಿರುವ ವಿಮಾನಗಳು ಕೇಂದ್ರ ಸರಕಾರದ ರಾಷ್ಟ್ರೀಯ ಭೂ ಭೌತಿಕ ಸಂಶೋಧನಾ ಸಂಸ್ಥೆ (NGRI) ಮತ್ತು ಗಣಿ ಸಚಿವಾಲಯ ನಡೆಸು ತ್ತಿರುವ ಹೆಲಿಬೋರ್ನ್ ಜಿಯೋಫಿಸಿಕಲ್ ಸರ್ವೇ ಆಗಿದೆ. ಹಸ್ದೇವ್ ಅರಣ್ಯವು ಇಂದು ಏಕಾಏಕಿ ನಾಶವಾಗುತ್ತಿಲ್ಲ. ಅಲ್ಲಿಯೂ ವರ್ಷಗಳ ಹಿಂದೆ ಇದೇ ರೀತಿ ಉಪಗ್ರಹ ಮತ್ತು ವೈಮಾನಿಕ ಸರ್ವೇಗಳನ್ನು ನಡೆಸಿ, ಭೂಮಿಯ ಅಡಿಯಲ್ಲಿ ಕಲ್ಲಿದ್ದಲು ನಿಕ್ಷೇಪ ಇರುವುದನ್ನು ಪತ್ತೆ ಮಾಡಲಾಗಿತ್ತು.
ಮಣ್ಣಿನ ಒಡಲ ಸೀಳಿ ಕಲ್ಲಿದ್ದಲು ತರಬಹುದು. ಆದರೆ, ಕಳೆದು ಹೋದ ಉಸಿರನ್ನು ಎಲ್ಲಿಂದ ತರುವಿರಿ? ಇಂದಿನ ಹಸ್ದೇವ್ ಅರಣ್ಯದ ಕಣ್ಣೀರು ನಮಗೆ ಪಶ್ಚಿಮ ಘಟ್ಟಗಳನ್ನು ಉಳಿಸಿಕೊಳ್ಳಲು ಪ್ರಕೃತಿ ನೀಡುತ್ತಿರುವ ಕೊನೆಯ ಎಚ್ಚರಿಕೆಯಾಗಿದೆ ಎಂದು ಮರೆಯಬಾರದು.