ಜುಲೈ 29ರಿಂದ ಗೋಕರ್ಣದ ಅಶೋಕೆಯಲ್ಲಿ ಚಾತುರ್ಮಾಸ್ಯ; ಪಾರಂಪರಿಕ ಆಚರಣೆಗಳ ವೈಜ್ಞಾನಿಕತೆಯನ್ನು ಸಮಾಜಕ್ಕೆ ತಿಳಿಸಲು ರಾಘವೇಶ್ವರ ಶ್ರೀ ಕರೆ
Sri Raghaveshwara Bharathi Swamiji: ಉತ್ತರ ಕನ್ನಡ ಜಿಲ್ಲೆಯ ಗೋಕರ್ಣದ ಅಶೋಕೆಯ ಪರಿಸರದಲ್ಲಿ ಜುಲೈ 29ರಿಂದ ಸೆಪ್ಟೆಂಬರ್ 26ರವರೆಗೆ ಅನ್ನಬ್ರಹ್ಮ ಚಾತುರ್ಮಾಸ್ಯ ನಡೆಯಲಿದೆ. ಇದರ ಅಂಗವಾಗಿ ಜುಲೈ 27ರಂದು ನಡೆದ ಪೂರ್ವಸಿದ್ಧತಾ ಸಭೆಯಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ ಶ್ರೀರಾಮಚಂದ್ರಾಪುರ ಮಠದ ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀರಾಘವೇಶ್ವರ ಭಾರತೀ ಮಹಾಸ್ವಾಮಿ ಮಾತನಾಡಿದರು.
ಶ್ರೀರಾಮಚಂದ್ರಾಪುರ ಮಠದ ಜಗದ್ಗುರು ಶಂಕರಾಚಾರ್ಯ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿ ಮಾತನಾಡಿದರು. -
ಗೋಕರ್ಣ, ಜು. 27: ''ನಮ್ಮ ಪ್ರಾಚೀನ ಆಚರಣೆಗಳ ಹಿನ್ನೆಲೆ ತಿಳಿಯದೇ ಇರುವುದರಿಂದ ನಮ್ಮ ಆಚಾರಗಳು ಕಂದಾಚಾರ ಇರಬಹುದು ಎಂದು ಭಾವಿಸಿ ಅನೇಕರು ಅವುಗಳನ್ನು ಕೈಬಿಟ್ಟಿದ್ದಾರೆ. ನಮ್ಮ ಪಾರಂಪರಿಕ ಆಚರಣೆಗಳ ವೈಜ್ಞಾನಿಕತೆ ಹಾಗೂ ಹಿನ್ನೆಲೆಯನ್ನು ಸಮಾಜಕ್ಕೆ ತಿಳಿಸಬೇಕಾದ ಅಗತ್ಯತೆ ಇದೆ'' ಎಂದು ಶ್ರೀರಾಮಚಂದ್ರಾಪುರ ಮಠದ ಜಗದ್ಗುರು ಶಂಕರಾಚಾರ್ಯ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿ (Sri Raghaveshwara Bharathi Swamiji) ಹೇಳಿದರು. ಉತ್ತರ ಕನ್ನಡ ಜಿಲ್ಲೆಯ ಗೋಕರ್ಣದ ಅಶೋಕೆಯ ಪರಿಸರದಲ್ಲಿ ಅನ್ನಬ್ರಹ್ಮ ಚಾತುರ್ಮಾಸ್ಯದ ಅಂಗವಾಗಿ ಜುಲೈ 27ರಂದು ನಡೆದ ಪೂರ್ವಸಿದ್ಧತಾ ಸಭೆಯಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು.
ʼʼಬಂದವನನ್ನು ಭಗವಂತ ಎಂದು ಕಾಣಬೇಕು. ಮಠಕ್ಕೆ ಬಂದವನು ಶ್ರೀಮಂತನೋ ಅಥವಾ ಬಡವನೋ ಎಂದು ಬೇಧ ಭಾವ ಮಾಡಬಾರದು. ಮಠಕ್ಕೆ ಬಂದವರೆಲ್ಲರೂ ಸಂತೃಪ್ತರಾಗಿ ಹಿಂತಿರುಗುವಂತೆ ಮಾಡಬೇಕಾದ ಕರ್ತವ್ಯ ಕಾರ್ಯಕರ್ತರದ್ದುʼʼ ಎಂದರು.

ರಾಮಚಂದ್ರಾಪುರ ಮಠಕ್ಕೆ ಶಿಷ್ಯರೇ ಸಂಪತ್ತು; ಪ್ರಧಾನ ಮಠದ ಪುನರ್ನಿರ್ಮಾಣ ಸಹಸ್ರಮಾನದ ಕಾರ್ಯ: ರಾಘವೇಶ್ವರ ಶ್ರೀ
ʼʼಇಂದು ಆಹಾರ ಹಾಗೂ ಊಟದ ವ್ಯವಸ್ಥೆಯಲ್ಲಿ ಅನೇಕ ಲೋಪಗಳಿವೆ. ನಾವು ಏನನ್ನು ತಿನ್ನುತ್ತೇವೆ ಹಾಗೂ ಹೇಗೆ ತಿನ್ನುತ್ತೇವೆ ಎಂಬುದು ನಮ್ಮ ಮೇಲೆ ಮಹತ್ತರವಾದ ಪರಿಣಾಮವನ್ನು ಉಂಟುಮಾಡುತ್ತದೆ. ಈ ಹಿನ್ನೆಲೆಯಲ್ಲಿ ನಮ್ಮ ಪ್ರಾಚೀನ ಆಚರಣೆಗಳನ್ನು ಪುನಃ ಆರಂಭಿಸಲೇ ಬೇಕಾದ ಅಗತ್ಯವಿದೆ. ಹಾಗಾಗಿ ಈ ಚಾತುರ್ಮಾಸ್ಯವನ್ನು ವಿಚಾರ ಪ್ರಧಾನ ಚಾತುರ್ಮಾಸ್ಯವಾಗಿ ಆಚರಿಸಲಾಗುತ್ತಿದ್ದು; ಚಾತುರ್ಮಾಸ್ಯದಲ್ಲಿ ತತ್ತ್ವ ಸಂವಾದಗಳು ಇರಲಿವೆʼʼ ಎಂದರು. ʼʼಉತ್ತರ ಕನ್ನಡ-ಶಿವಮೊಗ್ಗ-ಮಂಗಳೂರು-ಬೆಂಗಳೂರು ಸೇರಿ ಎಲ್ಲ ಭಾಗಗಳಿಂದಲೂ ಚಾತುರ್ಮಾಸ್ಯಕ್ಕೆ ಈಗಾಗಲೇ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆʼʼ ಎಂದು ಹರ್ಷ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಶ್ರೀಮಠದ ಪ್ರಶಾಸನಾಧಿಕಾರಿ ಸಂತೋಷ್ ಹೆಗಡೆ, ವಿತ್ತಾಧ್ಯಕ್ಷ ಗಣೇಶ್ ಜೆ.ಎಲ್, ಶಾಸನತಂತ್ರದ ಕಾರ್ಯದರ್ಶಿ ಕೆ.ಪಿ. ಎಡಪ್ಪಾಡಿ, ಹವ್ಯಕ ಮಹಾಮಂಡಲದ ಅಧ್ಯಕ್ಷ ಹರಿಪ್ರಸಾದ್ ಪೆರಿಯಾಪು, ಕಾರ್ಯದರ್ಶಿ ಮಹೇಶ್ ಚಟ್ನಳ್ಳಿ, ಮಂಜುನಾಥ ಸುವರ್ಣಗದ್ದೆ, ಚಾತುರ್ಮಾಸ್ಯದ ಪ್ರಧಾನ ಸಂಯೋಜಕ ಚಂದನ್ ಶಾಸ್ತ್ರಿ ಮತ್ತಿತರರು ಉಪಸ್ಥಿತರಿದ್ದರು.

ಅನ್ನಬ್ರಹ್ಮ ಚಾತುರ್ಮಾಸ್ಯ
ಗೋಕರ್ಣದ ಅಶೋಕೆಯ ಮೂಲಮಠದ ಪರಿಸರದಲ್ಲಿ ಈ ವರ್ಷದ ಚಾತುರ್ಮಾಸ್ಯ ನಡೆಯಲಿದ್ದು, ಜುಲೈ 29ರಿಂದ ಸೆಪ್ಟೆಂಬರ್ 26ರವರೆಗೆ ಆಹಾರದ ಕುರಿತಾದ ಜಾಗೃತಿಯ 'ಅನ್ನಬ್ರಹ್ಮ ಚಾತುರ್ಮಾಸ್ಯ' ನಡೆಯಲಿದೆ. ಜುಲೈ 29ರಂದು ವ್ಯಾಸಪೂಜೆಯನ್ನು ಮಾಡುವ ಮೂಲಕ ಶ್ರೀಗಳು ತಮ್ಮ 33ನೇ ವರ್ಷದ ಚಾತುರ್ಮಾಸ್ಯದ ಸಂಕಲ್ಪವನ್ನು ಸ್ವೀಕರಿಸಲಿದ್ದಾರೆ.
ಚಾತುರ್ಮಾಸ್ಯ ವ್ರತ ಗುರುಗಳಿಗಾದರೆ, ಶಿಷ್ಯಭಕ್ತರಿಗೆ ಇದು ಹಬ್ಬ ಎಂಬ ಪರಿಕಲ್ಪನೆಯಲ್ಲಿ ಪ್ರತಿವರ್ಷದ ಚಾತುರ್ಮಾಸ್ಯವನ್ನು ಸಮೂಹದ ಒಳಿತಿಗೆ ಪೂರಕವಾಗಿ ಯೋಜಿಸುತ್ತಾ ಬಂದಿದ್ದು, ಪ್ರತಿವರ್ಷ ಒಂದೊಂದು ವಿಷಯಾಧಾರಿತವಾಗಿ ಚಾತುರ್ಮಾಸ್ಯದಲ್ಲಿ ಸಮಾಜ ಜಾಗೃತಿಯನ್ನು ಮೂಡಿಸುತ್ತಿರುವುದು ಶ್ರೀರಾಮಚಂದ್ರಾಪುರ ಮಠದ ವಿಶೇಷತೆ.
ಈ ಚಾತುರ್ಮಾಸ್ಯದ ಸಮಯದಲ್ಲಿ ಆಹಾರದ ಕುರಿತಾಗಿ ಜಾಗೃತಿ ಮೂಡಿಸುವ ಅನೇಕ ಕಾರ್ಯಕ್ರಮಗಳು ಇರಲಿದ್ದು, ಪ್ರತಿದಿನ ಸ್ವತಃ ಶ್ರೀಗಳಿಂದ ಭೋಜನವೆಂಬ ತಪಸ್ಸು, ಆಹಾರ ಯಾವಾಗ ಸ್ವೀಕರಿಸಿದರೆ ಹಿತ? ಜಲಪಾನದ ನಿಯಮಗಳು, ಆಹಾರದ ಉದ್ದೇಶ, ಉಪವಾಸ, ಭೋಜನದ ಬಳಿಕ ಪಾಲಿಸಬೇಕಾದ ನಿಯಮಗಳು, ಭೋಜನ ಪಾತ್ರೆಗಳು ಸೇರಿದಂತೆ ಅನೇಕ ವಿಶಿಷ್ಟ ಪ್ರವಚನಗಳು ನಡೆಯಲಿವೆ. ಜ್ಞಾನೋದ್ದೀಪನದ ಜತೆಗೆ ಪ್ರಾಚೀನ ವಿಧಾನದ ಆಹಾರವೂ ಈ ಚಾತುರ್ಮಾಸ್ಯದಲ್ಲಿ ವಿಶೇಷತೆ.
ನೆಮ್ಮದಿಗಾಗಿ ಬದುಕಿ, ಹಣಕ್ಕಾಗಿ ಅಲ್ಲ: ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿ

ಧಾನ್ಯ ಲಕ್ಷ್ಮೀ ಪೂಜೆ
ಅನ್ನಬ್ರಹ್ಮ ಚಾತುರ್ಮಾಸ್ಯಕ್ಕಾಗಿ ನಾಡಿನಾದ್ಯಂತ ಶಿಷ್ಯ ಭಕ್ತರಿಂದ ವಿವಿಧ ಸುವಸ್ತುಗಳು ಸಮರ್ಪಿತವಾಗಿದ್ದು, ಶ್ರೀಮಠದ 11 ಮಂಡಲಗಳು, ಅಂಗಸಂಸ್ಥೆಗಳು ಹಾಗೂ ರಾಜ್ಯಾದ್ಯಂತದ ಶಿಷ್ಯಭಕ್ತರಿಂದ ಸಮರ್ಪಿತವಾದ ಧಾನ್ಯಲಕ್ಷ್ಮೀಗೆ ಜುಲೈ 26ರಂದು ಜಗದ್ಗುರು ಶಂಕರಾಚಾರ್ಯ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿ ಪೂಜೆ ಸಲ್ಲಿಸಿದರು. ಕುಮಟಾದ ಶಾಸಕ ದಿನಕರ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.
ರಾಜ್ಯದ ಇನ್ನಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
ʼಪ್ರವಾಸಿ ಪ್ರಪಂಚʼ ವೆಬ್‌ಸೈಟ್‌ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್ ಮಾಡಿ.