ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Roopa Gururaj Column: ದೇವರನ್ನು ಕಾಣಲು ಅಂತರಂಗ ಶುದ್ಧವಾಗಿರಬೇಕು

13ನೇ ಶತಮಾನದ ಸೂಫಿ ಸಂತ ಮತ್ತು ಮಹಾನ್ ಕವಿ ಜಲಾಲ್-ಉದ್-ದಿನ್ ರೂಮಿಯವರು ಕಥೆಗಳನ್ನು ಕೇವಲ ಮನರಂಜನೆಗಾಗಿ ಹೇಳಲಿಲ್ಲ, ಬದಲಿಗೆ ಅವುಗಳನ್ನು ಆತ್ಮದ ಪ್ರತಿಬಿಂಬಗಳು ಎಂದು ಪರಿಗಣಿಸಿದರು. ಅವರ ಪ್ರಸಿದ್ಧ ಕಥೆಗಳು ಹೆಚ್ಚಾಗಿ ಅವರ ಬೃಹತ್ ಕೃತಿಯಾದ ‘ಮಸ್ನವಿ’ ಯಿಂದ ಬಂದವು. ಇದು ಆರು ಸಂಪುಟಗಳನ್ನು ಒಳಗೊಂಡಿರುವ ಆಧ್ಯಾತ್ಮಿಕ ದ್ವಿಪದಿಗಳ ಸಂಗ್ರಹ.

Roopa Gururaj Column: ದೇವರನ್ನು ಕಾಣಲು ಅಂತರಂಗ ಶುದ್ಧವಾಗಿರಬೇಕು

-

ಒಂದೊಳ್ಳೆ ಮಾತು

13ನೇ ಶತಮಾನದ ಸೂಫಿ ಸಂತ ಮತ್ತು ಮಹಾನ್ ಕವಿ ಜಲಾಲ್-ಉದ್-ದಿನ್ ರೂಮಿಯವರು ಕಥೆಗಳನ್ನು ಕೇವಲ ಮನರಂಜನೆಗಾಗಿ ಹೇಳಲಿಲ್ಲ, ಬದಲಿಗೆ ಅವುಗಳನ್ನು ಆತ್ಮದ ಪ್ರತಿಬಿಂಬಗಳು ಎಂದು ಪರಿಗಣಿಸಿದರು. ಅವರ ಪ್ರಸಿದ್ಧ ಕಥೆಗಳು ಹೆಚ್ಚಾಗಿ ಅವರ ಬೃಹತ್ ಕೃತಿಯಾದ ‘ಮಸ್ನವಿ’ ಯಿಂದ ಬಂದವು. ಇದು ಆರು ಸಂಪುಟಗಳನ್ನು ಒಳಗೊಂಡಿರುವ ಆಧ್ಯಾತ್ಮಿಕ ದ್ವಿಪದಿಗಳ ಸಂಗ್ರಹ.

ಅದರದ್ದೇ ಒಂದು ಕಥೆ ಹೀಗಿದೆ: ಹಿಂದೊಂದು ಕಾಲದಲ್ಲಿ ಒಬ್ಬ ರಾಜನಿದ್ದನು. ಅವನ ಆಸ್ಥಾನಕ್ಕೆ ಚೀನಾ ಮತ್ತು ಗ್ರೀಸ್ ದೇಶಗಳಿಂದ ಕೆಲವು ಪ್ರಸಿದ್ಧ ಚಿತ್ರಕಾರರು ಬಂದರು. ತಾವೇ ಜಗತ್ತಿನ ಶ್ರೇಷ್ಠ ಚಿತ್ರಕಾರರು ಎಂದು ಇಬ್ಬರೂ ವಾದಿಸಲು ಶುರುಮಾಡಿದರು. ಸರಿ, ಯಾರು ನಿಜವಾದ ಶ್ರೇಷ್ಠರು ಎಂದು ತಿಳಿಯಲು ರಾಜನು ಒಂದು ಸ್ಪರ್ಧೆಯನ್ನು ಏರ್ಪಡಿಸಿದನು.

ರಾಜನು ಅವರಿಗೆ ಮುಖಾಮುಖಿಯಾಗಿರುವ ಎರಡು ಗೋಡೆಗಳನ್ನು ನೀಡಿ, ಅವುಗಳ ನಡುವೆ ಒಂದು ದೊಡ್ಡ ಪರದೆಯನ್ನು ಹಾಕಿಸಿದನು. ಪರಸ್ಪರರು ಏನು ಮಾಡುತ್ತಿದ್ದಾರೆ ಎಂಬುದು ತಿಳಿಯಬಾರದು ಎಂಬುದು ರಾಜನ ಉದ್ದೇಶವಾಗಿತ್ತು.

ಇದನ್ನೂ ಓದಿ: Roopa Gururaj Column: ತಮ್ಮದೇ ಅಹಂಕಾರದಿಂದ ಅಂತ್ಯ ಕಂಡ ಮಧು-ಕೈಟಭಾಸುರರು

ಚೀನಾದ ಚಿತ್ರಕಾರರು ರಾಜನ ಬಳಿ ಹೋಗಿ, “ನಮಗೆ ನೂರಾರು ಬಣ್ಣಗಳು, ಬೆಲೆ ಬಾಳುವ ಕುಂಚ ಗಳು ಮತ್ತು ಚಿತ್ರ ಬಿಡಿಸಲು ಬೇಕಾದ ಕಲಾಸಾಮಗ್ರಿಗಳು ಬೇಕು" ಎಂದು ಕೇಳಿ ಪಡೆದರು. ಅವರು ದಿನವಿಡೀ ಆ ಬಣ್ಣಗಳನ್ನು ಬೆರೆಸುತ್ತಾ, ಅತ್ಯಂತ ಸಂಕೀರ್ಣವಾದ ಮತ್ತು ಸುಂದರವಾದ ಚಿತ್ರಗಳನ್ನು ಬಿಡಿಸಲು ಶ್ರಮಿಸಿದರು.

ಆದರೆ ಗ್ರೀಕ್ ಚಿತ್ರಕಾರರು ರಾಜನ ಬಳಿ ಬಣ್ಣವನ್ನಾಗಲಿ ಅಥವಾ ಕುಂಚವನ್ನಾಗಲಿ ಕೇಳಲೇ ಇಲ್ಲ. ಅವರು ಕೇಳಿದ್ದು ಕಬ್ಬಿಣದ ತುಂಡುಗಳು ಮತ್ತು ಸ್ವಲ್ಪ ಬೂದಿಯನ್ನು ಮಾತ್ರ. ಅವರು ಆ ಪರದೆ ಯ ಹಿಂದೆ ಕುಳಿತು ಯಾವುದೇ ಚಿತ್ರ ಬಿಡಿಸಲಿಲ್ಲ.

ಬದಲಾಗಿ, ತಮಗೆ ನೀಡಿದ್ದ ಗೋಡೆಯನ್ನು ಗಂಟೆಗಟ್ಟಲೆ ಉಜ್ಜುತ್ತಾ, ಅದರ ಮೇಲಿದ್ದ ಧೂಳು, ಕಲೆ ಮತ್ತು ಒರಟುತನ ವನ್ನು ತೆಗೆದುಹಾಕುತ್ತಾ ಹೋದರು. ದಿನಗಳು ಕಳೆದಂತೆ, ಆ ಗೋಡೆ ಎಷ್ಟು ನುಣುಪಾಯಿತೆಂದರೆ, ಅದು ಕನ್ನಡಿಯಂತೆ ಹೊಳೆಯಲಾರಂಭಿಸಿತು.

ಕೆಲವು ದಿನಗಳ ನಂತರ ಸ್ಪರ್ಧೆಯ ಫಲಿತಾಂಶದ ಸಮಯ ಬಂದಿತು. ಮೊದಲು ಚೀನಿ ಚಿತ್ರಕಾರರು ತಾವು ಸಿದ್ಧಪಡಿಸಿದ ಗೋಡೆಯನ್ನು ರಾಜನಿಗೆ ತೋರಿಸಿದರು. ಆ ಗೋಡೆಯ ಮೇಲೆ ಅದ್ಭುತವಾದ ಕಾಡುಗಳು, ಸುಂದರ ಹೂವುಗಳು ಮತ್ತು ದೇವತೆಗಳ ಚಿತ್ರಗಳನ್ನು ಕಂಡು ರಾಜನು ಬೆರಗಾದನು. ಆ ಬಣ್ಣಗಳ ಮೆರುಗು ಮನಮೋಹಕವಾಗಿತ್ತು. ನಂತರ ರಾಜನು ಗ್ರೀಕ್ ಚಿತ್ರಕಾರರ ಕಡೆಗೆ ತಿರುಗಿದನು. ಅವರು ಗೋಡೆಗಳ ನಡುವೆ ಇದ್ದ ಪರದೆಯನ್ನು ಸರಿಸಿದರು. ಆಗ ಒಂದು ಪವಾಡವೇ ನಡೆಯಿತು!

ಚೀನಿ ಚಿತ್ರಕಾರರು ಬಿಡಿಸಿದ ಅದ್ಭುತ ಚಿತ್ರಗಳ ಪ್ರತಿಬಿಂಬವು ಗ್ರೀಕರ ಕನ್ನಡಿಯಂತಿದ್ದ ಗೋಡೆಯ ಮೇಲೆ ಪ್ರತಿಫಲಿಸಿತು. ಆದರೆ, ಆ ಪ್ರತಿಬಿಂಬವು ಮೂಲ ಚಿತ್ರಕ್ಕಿಂತಲೂ ಹೆಚ್ಚು ಪ್ರಕಾಶಮಾನವಾಗಿ, ಜೀವಂತವಾಗಿ ಮತ್ತು ಅಲೌಕಿಕವಾಗಿ ಗೋಚರಿಸಿತು. ಗ್ರೀಕರು ಯಾವುದೇ ಬಣ್ಣ ಬಳಸದಿದ್ದರೂ, ಶ್ರಮಪಟ್ಟು ಸ್ವಚ್ಛಗೊಳಿಸಿದ ಆ ಗೋಡೆಯು ಇಡೀ ಜಗತ್ತಿನ ಸೌಂದರ್ಯವನ್ನು ತನ್ನಲ್ಲಿ ಅಡಗಿಸಿ ಕೊಂಡಿತ್ತು.

ರೂಮಿ ಈ ಕಥೆಯ ಮೂಲಕ ದೊಡ್ಡ ಸಂದೇಶವನ್ನು ನೀಡುತ್ತಾರೆ. ಅದು ಪುಸ್ತಕದ ಜ್ಞಾನ ಮತ್ತು ಲೌಕಿಕ ಜ್ಞಾನವನ್ನು ಸಂಗ್ರಹಿಸುವ ಜನರಿಗೆ ಸಂಕೇತ. ನೂರಾರು ಬಣ್ಣಗಳನ್ನು ಬಳಸಿ ಚಿತ್ರ ಬಿಡಿಸು ವುದು ಎಂದರೆ ಹೊರಗಿನಿಂದ ಜ್ಞಾನವನ್ನು ಒಟ್ಟುಗೂಡಿಸುವುದು. ಇದು ನೋಡಲು ಸುಂದರವಾಗಿ ದ್ದರೂ, ಅಹಂಕಾರದ ಭಾಗವಾಗಿರುತ್ತದೆ.

ಗ್ರೀಕರ ಗೋಡೆಯು ತಮ್ಮ ಹೃದಯವನ್ನು ಶುದ್ಧಗೊಳಿಸುವ ಸಾಧಕರ ಸಂಕೇತ. ಅವರು ಹೊಸ ದಾಗಿ ಏನನ್ನೂ ಸೇರಿಸುವುದಿಲ್ಲ, ಬದಲಾಗಿ ತಮ್ಮ ಮನಸ್ಸಿನೊಳಗಿರುವ ಕಾಮ, ಕ್ರೋಧ, ಅಹಂಕಾರ ಎಂಬ ಧೂಳನ್ನು ತೆಗೆದುಹಾಕುತ್ತಾರೆ. ನಮ್ಮ ಹೃದಯ ಧೂಳಿನಿಂದ ಮುಕ್ತವಾದಾಗ, ಅದು ದೇವರ ಸೌಂದರ್ಯವನ್ನು ಪ್ರತಿಬಿಂಬಿಸುವ ಕನ್ನಡಿಯಂತಾಗುತ್ತದೆ.

ಹೊರಗಿನ ಪುಸ್ತಕಗಳಿಂದ ಜ್ಞಾನವನ್ನು ತುಂಬಿಕೊಳ್ಳುವುದರ ಜತೆಗೆ ಒಳಗಿನ ಹೃದಯವನ್ನು ಶುದ್ಧಗೊಳಿಸುವುದು ಶ್ರೇಷ್ಠ ಎಂದು ರೂಮಿ ಹೇಳುತ್ತಾರೆ. ಒಮ್ಮೆ ಯೋಚಿಸಿ ನೋಡಿ, ನಮ್ಮ ಅಂತರಂಗ ಎಷ್ಟು ಶುದ್ಧವಾಗುತ್ತದೆಯೋ, ಅಷ್ಟು ಸ್ಪಷ್ಟವಾಗಿ ನಮಗೆ ಸತ್ಯದ ದರ್ಶನವಾಗುತ್ತದೆ. ದೇವರಿಗಾಗಿ ಬೇರೆಲ್ಲಿಯೂ ಹುಡುಕಬೇಕಿಲ್ಲ, ಕನ್ನಡಿಯಂಥ ಹೃದಯವಿದ್ದರೆ ಸಾಕು.