Gururaj Gantihole Column: ಅಗ್ನಿವೀರರಿಗೆ ಸಿಕ್ಕ ಕಾಯಕಲ್ಪ ಎನ್ʼಸಿಸಿಗೂ ವಿಸ್ತರಿಸಬೇಕಿದೆ !
ಹೊಸ ಉನ್ನತಮಟ್ಟದ ಪಾಲಿಸಿಯನ್ನು ಪರಿಚಯಿಸುವ ಮೂಲಕ ಮಹತ್ತರ ಸುಧಾರಣೆ ತರುವ ಅಗತ್ಯ ಈ ವಿಭಾಗಕ್ಕಿದೆ. ನ್ಯಾಷನಲ್ ಯೂಥ್ ಸರ್ವೀಸ್ ಫ್ರೇಮ್‌ವರ್ಕ್ ಅಡಿಯಲ್ಲಿ ಎನ್‌ಸಿಸಿ ಯನ್ನು ಸೆಮಿ-ಕಂಪಲ್ಸರಿ ಮಾಡುವುದು, ಎಜುಕೇಷನ್ ಇಂಟಿಗ್ರೇಷನ್ ಮೂಲಕ ಎನ್ʼಸಿಸಿ ಯನ್ನು ಅಕಾಡೆಮಿಕ್ ಕ್ರೆಡಿಟ್ಸ್ (ಎನ್‌ಇಪಿಗೆ ಹೊಂದಿಕೊಂಡಂತೆ)ಗೆ ಜೊತೆಗೂಡಿಸಿ ಬೆಳೆಸಬಹುದಾಗಿದೆ.
-
ಗಂಟಾಘೋಷ
ಭಾರತದ ಯುವಜನತೆ ದೇಶದ ಬಲವಾದ ಶಕ್ತಿ. ಈ ಯುವಕರನ್ನು ಶಿಸ್ತಿನ, ನಾಯಕತ್ವದ ಮತ್ತು ದೇಶಭಕ್ತಿಯ ಮಾರ್ಗದಲ್ಲಿ ನಡೆಸುವ ಅತ್ಯಂತ ಪ್ರಮುಖ ಸಂಸ್ಥೆ ಎಂದರೆ NCC (National Cadet Corps) ರಾಷ್ಟ್ರೀಯ ವಿದ್ಯಾರ್ಥಿ ಸೇನೆ. ಇದು ಕೇವಲ ಒಂದು ತರಬೇತಿ ಕಾರ್ಯಕ್ರಮವಲ್ಲ, ಜೀವನ ರೂಪಿಸುವ ಶಾಲೆ. ಎನ್‌ಸಿಸಿ ಇತಿಹಾಸ ಗಮನಿಸಿ ದಾಗ, ಇದರ ಸ್ಥಾಪನೆ 1948ರಲ್ಲಿ ನಡೆಯಿತು.
ಸ್ವಾತಂತ್ರ್ಯಾನಂತರ ದೇಶಕ್ಕೆ ಶಿಸ್ತಿನ ಯುವಕರ ಅಗತ್ಯವಿತ್ತು. ಅದಕ್ಕಾಗಿ ನ್ಯಾಷನಲ್ ಕೆಡೆಟ್ ಕೋರ್ ಆಕ್ಟ್- 1948 ಮೂಲಕ ಎನ್‌ಸಿಸಿ ಆರಂಭಿಸಲಾಯಿತು. ಯುವಕರಲ್ಲಿ ದೇಶಭಕ್ತಿ ಬೆಳೆಸುವುದು, ಸೈನಿಕ ತರಬೇತಿಯ ಪರಿಚಯ, ಶಿಸ್ತಿನ ಜೀವನ ಶೈಲಿ ಕಲಿಸುವುದು ಇದರ ಮುಖ್ಯ ಉದ್ದೇಶವಾಗಿದೆ.
ಏಕತೆ ಮತ್ತು ಶಿಸ್ತು ಎಂಬುದು ಇದರ ಮಂತ್ರ ಮತ್ತು ಮುಖ್ಯಧ್ಯೇಯವಾಗಿದೆ. ಇದನ್ನು ಮೂರು ಪ್ರಮುಖ ವಿಭಾಗಗಳಲ್ಲಿ ರಚಿಸಲಾಗಿದ್ದು, ಆರ್ಮಿ ವಿಂಗ್ ಎಂಬುದರ ಅಡಿಯಲ್ಲಿ ಭೂಸೇನೆ ತರಬೇತಿ, ಡ್ರಿಲ್, ಆಯುಧ ತರಬೇತಿ ಇತ್ಯಾದಿಗಳಿದ್ದರೆ, ನೇವಿ ವಿಂಗ್‌ನಲ್ಲಿ ಸಮುದ್ರ ಸಂಬಂಧಿತ ತರಬೇತಿ, ನಾವಿಕ ಕೌಶಲ್ಯ ಸೇರಿವೆ. ಏರ್ ವಿಂಗ್ ವಿಭಾಗ ವಾಯು ಪಡೆ ತರಬೇತಿ, ವಿಮಾನ ಮತ್ತು ಏರೋಮಾಡೆಲಿಂಗ್ ಒಳಗೊಂಡಿದೆ.
ಶಾರೀರಿಕ ಪರೀಕ್ಷೆ, ಮೂಲ ಸಂದರ್ಶನದ ಮೂಲಕ, 13ರಿಂದ 18 ವರ್ಷದೊಳಗಿನ ಶಾಲಾ ಮಟ್ಟ (ಜೂನಿಯರ್ ಡಿವಿಷನ್/ವಿಂಗ್) ಮತ್ತು 19-26 ವರ್ಷದೊಳಗಿನ ಕಾಲೇಜು ಮಟ್ಟದ (ಸೀನಿಯರ್ ಡಿವಿಷನ್ ವಿಂಗ್) ಮೂಲಕ ಎನ್‌ಸಿಸಿ ಸೇರಲು ಆಯ್ಕೆ ಪ್ರಕ್ರಿಯೆ ನಡೆಯುತ್ತದೆ.
ದೇಶದ ಇತಿಹಾಸ, ಸೈನಿಕ ಜ್ಞಾನ, ನಕ್ಷೆ ಓದು ಸೇರಿದಂತೆ ಸಿದ್ಧಾಂತ ತರಬೇತಿ ಮತ್ತು ಡ್ರಿಲ್ (ಪರೇಡ್), ವೆಪನ್ ತರಬೇತಿ, ಫೀಲ್ಡ್ ಕ್ರಾಫ್ಟ್, ಅಡ್ವೆಂಚರ್ ಚಟುವಟಿಕೆಗಳು ಸೇರಿದಂತೆ ಪ್ರಾಯೋಗಿಕ ತರಬೇತಿಗಳು ನಡೆಯುತ್ತಿರುತ್ತವೆ.
ಇದನ್ನೂ ಓದಿ: Gururaj Gantihole Column: ಯುಡಿಐಡಿ: ದಿವ್ಯಾಂಗರ ಗುರುತೋ? ಗೌರವವೋ ?
ಇದರ ಪ್ರಮುಖ ಶಿಬಿರಗಳು ಮುಖ್ಯ ಆಕರ್ಷಣೆಯಾಗಿದ್ದು, ವಾರ್ಷಿಕ ತರಬೇತಿ ಕ್ಯಾಂಪ್ ( ATC)- (ಪ್ರತಿವರ್ಷ ನಡೆಯುವ ತರಬೇತಿ ಶಿಬಿರ), ರಿಪಬ್ಲಿಕ್ ಡೇ ಕ್ಯಾಂಪ್ (RDC)- ದೆಹಲಿ ಯಲ್ಲಿ ನಡೆಯುವ ಅತ್ಯಂತ ಗೌರವಾನ್ವಿತ ಶಿಬಿರ, ನ್ಯಾಷನಲ್ ಇಂಟಿಗ್ರೇಷನ್ ಕ್ಯಾಂಪ್ ( NIC) - ಭಾರತದ ವಿವಿಧ ರಾಜ್ಯಗಳ ವಿದ್ಯಾರ್ಥಿಗಳನ್ನು ಒಟ್ಟುಗೂಡಿಸುವ ಶಿಬಿರ, ಟ್ರೆಕ್ಕಿಂಗ್ ಅಡ್ವೆಂಚರ್ ಕ್ಯಾಂಪ್- ಪರ್ವತಾರೋಹಣ, ಕ್ಯಾಂಪಿಂಗ್ ಇತ್ಯಾದಿಗಳು ದೇಶಾದ್ಯಂತ ಮಹತ್ವ ತೋರಿದ್ದವು.
ಇದರಲ್ಲಿ ಭಾಗಿಯಾದವರಿಗೆ ಎನ್‌ಸಿಸಿ ಪ್ರಮಾಣಪತ್ರಗಳು ದೊರೆಯುತ್ತಿದ್ದು, ಶಾಲಾ ಮಟ್ಟದಲ್ಲಿ, ಕಾಲೇಜುಮಟ್ಟದಲ್ಲಿ ಪ್ರಮಾಣಪತ್ರಗಳನ್ನೂ ನೀಡಲಾಗುತ್ತದೆ. ಇವು ಸೇನೆಗೆ ಸೇರಲು ಅರ್ಹತಾಪತ್ರಗಳಾಗಿಯೂ ಕೆಲಸ ಮಾಡುತ್ತಿದ್ದವು. ಪ್ರತಿವರ್ಷ ನವೆಂಬರ್ ತಿಂಗಳ ನಾಲ್ಕನೇ ಭಾನುವಾರ ಎನ್‌ಸಿಸಿ ದಿನವನ್ನು ಆಚರಿಸಲಾಗುತ್ತದೆ.
ಆತ್ಮವಿಶ್ವಾಸ, ನಾಯಕತ್ವ ಗುಣಗಳನ್ನು ಬೆಳೆಸುವ ಮೂಲಕ ಸೇನೆ, ಪೊಲೀಸ್, ಸರ್ಕಾರಿ ಉದ್ಯೋಗಗಳಲ್ಲಿ ಸೇರುವುದಕ್ಕೆ ಈ ತರಬೇತಿಗಳು ಪೂರಕವಾಗಿದ್ದವು. ದೈಹಿಕ ಫಿಟ್ನೆಸ್, ಮಾನಸಿಕ ಬಲ ಎನ್‌ಸಿಸಿ ವಿದ್ಯಾರ್ಥಿಗಳನ್ನು ಕೇವಲ ನಾಗರಿಕರನ್ನಾಗಿ ಮಾಡುವುದಿಲ್ಲ, ದೇಶಪ್ರೇಮ, ತ್ಯಾಗ, ಸೇವಾ ಮನೋಭಾವಗಳ ಮೂಲಕ ಅವರನ್ನು ದೇಶದ ಜವಾಬ್ದಾರಿ ಯುತ ಸೈನಿಕರನ್ನಾಗಿ ರೂಪಿಸುವಲ್ಲೂ ಸಹಾಯಕವಾಗಿದೆ.
ಎನ್‌ಸಿಸಿ ಒಂದು ಸಂಸ್ಥೆಯಷ್ಟೇ ಅಲ್ಲ, ಅದು ಜೀವನದ ಒಂದು ಪಾಠಶಾಲೆ ಎಂಬಂತೆ, ಇಲ್ಲಿ ವಿದ್ಯಾರ್ಥಿಗಳು ಪುಸ್ತಕದ ಪಾಠವಲ್ಲ, ಜೀವನದ ಪಾಠ ಕಲಿಯುತ್ತಾರೆ. ಶಿಸ್ತು, ನಾಯಕತ್ವ, ದೇಶಭಕ್ತಿ ಈ ಮೂರು ಗುಣಗಳು ಎನ್‌ಸಿಸಿಯಿಂದ ದೊರೆಯುವ ಅಮೂಲ್ಯ ಸಂಪತ್ತು.
ಇಂದು ಯುವಕರು ಎನ್‌ಸಿಸಿಯಲ್ಲಿ ಭಾಗವಹಿಸಿದರೆ, ನಾಳೆ ದೇಶದ ಶಕ್ತಿಯಾಗಿ ಹೊರ ಹೊಮ್ಮುತ್ತಾರೆ. ಗ್ರಾಮೀಣ ಪ್ರದೇಶಗಳಲ್ಲಿ ಸೌಲಭ್ಯ ಕೊರತೆ, ತರಬೇತಿ ಮೂಲಸೌಕರ್ಯ ಸಮಸ್ಯೆಗಳು, ವಿದ್ಯಾರ್ಥಿಗಳ ಆಸಕ್ತಿ ಕಡಿಮೆ ಸೇರಿದಂತೆ ಹಲವು ಸವಾಲುಗಳು ಎನ್‌ಸಿಸಿ ಯನ್ನು ರಾಷ್ಟ್ರವ್ಯಾಪಿಯನ್ನಾಗಿಸಲು ತಡೆಯೊಡ್ಡಿದವು ಎನ್ನಬಹುದು.
ಪ್ರಸ್ತುತದಲ್ಲಿ, ಎನ್‌ಸಿಸಿಯ ಸಮಗ್ರ ಸುಧಾರಣೆ, ಹೊಸದೊಂದು ರೂಪರೇಖೆಯೊಂದಿಗೆ ಹೊಸ ತಲೆಮಾರಿನ ಯುವ ಮನಸುಗಳನ್ನು ತಲುಪುವ ಅಗತ್ಯವಿದೆ ಎಂದೆನಿಸುತ್ತದೆ. ಇದಕ್ಕಾಗಿ ನಿಗದಿತ ಅನುದಾನಗಳು, ಹೇಗೆ ಖರ್ಚು ಮಾಡಲಾಗುತ್ತಿದೆ? ಇದರ ಉತ್ಪನ್ನ ವೇನು? ಎಂದೆಲ್ಲ ಒರೆಗೆ ಹಚ್ಚಿ ನೋಡಬೇಕಾಗಿದೆ.
ರಚನಾತ್ಮಕ ಸುಧಾರಣೆಗಳ ಕಡೆಗೆ ಗಮನಿಸಿದಾಗ, ಗ್ರಾಮೀಣ ಮತ್ತು ಹಿಂದುಳಿದ ಪ್ರದೇಶ ಗಳಲ್ಲಿ ಎನ್‌ಸಿಸಿ ಯುನಿಟ್‌ಗಳ ಹೆಚ್ಚಳಕ್ಕೆ ಒತ್ತು ನೀಡಬೇಕಾಗಿದೆ. ಶಾಲಾಮಟ್ಟದಲ್ಲಿ ಹೆಚ್ಚು ವ್ಯಾಪ್ತಿ (13-18 ವಯಸ್ಸು), ಜೊತೆಗೆ ಡಿಜಿಟಲ್ ಎನ್‌ಸಿಸಿ ರೂಪದಲ್ಲಿ ಆನ್‌ಲೈನ್ ಎನ್-ರೋಲ್‌ಮೆಂಟ್ ಪೋರ್ಟಲ್, ತರಬೇತಿ ಮಾಡ್ಯೂಲ್ಸ್ (ತಂತ್ರಾಂಶ ಆಧಾರಿತ ಕಲಿಕೆ), ವರ್ಚ್ಯುವಲ್ ಕಲಿಕೆ (ಡ್ರಿಲ್, ಮ್ಯಾಪ್ ರೀಡಿಂಗ್) ಕಲಿಕೆ-ಕಲಿಸುವಿಕೆಗೆ ಆದ್ಯತೆ ನೀಡಬೇಕು.
ಇದರಿಂದಾಗಿ, ಸಂಪರ್ಕ-ಪಾರದರ್ಶಕತೆ-ಪ್ರಮಾಣತ್ವ ಹೆಚ್ಚುತ್ತದೆ. ಸದ್ಯ ನೀಡುತ್ತಿರುವ ತರಬೇತಿ ಪದ್ಧತಿಯಲ್ಲಿ ಸುಧಾರಣೆಗಳನ್ನು ತರಬೇಕಿದ್ದು, ಸ್ಕಿಲ್ ಆಧಾರಿತ ತರಬೇತಿ, ವಿಪತ್ತು ನಿರ್ವಹಣೆ, ಸೈಬರ್ ಭದ್ರತಾ ಮೂಲಗಳು, ಪ್ರಥಮ ಚಿಕಿತ್ಸೆ ಮತ್ತು ತುರ್ತು ಪ್ರತಿಕ್ರಿಯೆ, ಡ್ರೋನ್ ಕಾರ್ಯಾಚರಣೆಗಳು ಸೇರಿದಂತೆ ಎನ್ʼಸಿಸಿ ಒಂದು ಅತ್ಯಾಧುನಿಕ ಸ್ಕಿಲ್ ಅಕಾಡೆಮಿಯಂತೆ ಬದಲಾಗಬೇಕು.
ಮಹಿಳಾ ಭಾಗವಹಿಸುವಿಕೆಯನ್ನು ಹೆಚ್ಚಿಸಬೇಕಲ್ಲದೇ, ಇದಕ್ಕೆ ಪೂರಕವಾದ ವಾತಾವರಣ ನಿರ್ಮಿಸಬೇಕಿದೆ. ಇದಕ್ಕಾಗಿ, ಪ್ರತ್ಯೇಕ ಮೂಲಸೌಕರ್ಯಗಳನ್ನು, ಸುರಕ್ಷೆ ಮತ್ತು ಸಹಾಯಕ ವ್ಯವಸ್ಥೆಯನ್ನು ನಿರ್ಮಿಸಬೇಕಿದೆ. ಬುಡಕಟ್ಟು, ಕರಾವಳಿ ಪ್ರದೇಶಗಳ ಮೇಲೆ ಗಮನಹರಿಸಬೇಕಿದೆ.
ಹೊಸ ಉನ್ನತಮಟ್ಟದ ಪಾಲಿಸಿಯನ್ನು ಪರಿಚಯಿಸುವ ಮೂಲಕ ಮಹತ್ತರ ಸುಧಾರಣೆ ತರುವ ಅಗತ್ಯ ಈ ವಿಭಾಗಕ್ಕಿದೆ. ನ್ಯಾಷನಲ್ ಯೂಥ್ ಸರ್ವೀಸ್ ಫ್ರೇಮ್‌ವರ್ಕ್ ಅಡಿಯಲ್ಲಿ ಎನ್‌ಸಿಸಿಯನ್ನು ಸೆಮಿ-ಕಂಪಲ್ಸರಿ ಮಾಡುವುದು, ಎಜುಕೇಷನ್ ಇಂಟಿಗ್ರೇಷನ್ ಮೂಲಕ ಎನ್ʼಸಿಸಿಯನ್ನು ಅಕಾಡೆಮಿಕ್ ಕ್ರೆಡಿಟ್ಸ್ (ಎನ್‌ಇಪಿಗೆ ಹೊಂದಿಕೊಂಡಂತೆ)ಗೆ ಜೊತೆ ಗೂಡಿಸಿ ಬೆಳೆಸಬಹುದಾಗಿದೆ.
ಇಲ್ಲಿ ಎರಡು ಪ್ರಶ್ನೆಗಳು ನಮಗೆ ಕಂಡುಬರುತ್ತವೆ. (1) ಎನ್ಸಿಸಿ ಅವಶ್ಯಕತೆ ಏನು? (2) ಇಂದಿನ ಕಾಲದಲ್ಲಿ ಅದು ನಿಜವಾಗಿಯೂ ಅಗತ್ಯವೇ? ಎಂಬುದನ್ನು ವಿಶ್ಲೇಷಿಸಿದಾಗ, ಹೊಸ ಯೋಜನೆಗಳ ಅಗತ್ಯತೆ, ಬದಲಾದ ಕಾಲಘಟ್ಟದಲ್ಲಿ ಪರಿಷ್ಕರಿಸುವ ಮಹತ್ವ ಕಂಡುಬರುತ್ತದೆ.
ಎನ್‌ಸಿಸಿಯಂತಹ ಬಲವಾದ, ಅತ್ಯಂತ ಯೋಗ್ಯಪ್ರದವಾದ ಯೋಜನೆಗಳು ನಮ್ಮಲ್ಲಿದ್ದವು. ಆದರೂ, ಎನ್‌ಸಿಸಿ ದೇಶವ್ಯಾಪಿಯಾಗಲಿಲ್ಲ. ರಾಷ್ಟ್ರವನ್ನು ಯುವಜನತೆಯ ಜೊತೆಗೆ ಹೊಸದಾಗಿ ಕಟ್ಟುವ ಕಾರ್ಯಗಳು ನಡೆಯಲಿಲ್ಲ. ಕೋಟ್ಯಂತರ ಯುವಪಡೆ ರಾಷ್ಟ್ರಸೇವೆಗೆ ಪಣತೊಟ್ಟು ನಿಲ್ಲಬೇಕಿತ್ತು, ಅದಾಗಲಿಲ್ಲ.
ಸಮಾಜದಲ್ಲಿ ಜಾತಿಗಳ ಕಂದಕ, ಅಸ್ಪೃಶ್ಯತೆ ಆತ್ಯಾಧುನಿಕ ಯುಗ ಬರುವವರೆಗೂ ಇತ್ತು, ಇನ್ನೂ ಅಲ್ಲಲ್ಲಿ ಕಾಣಸಿಗುತ್ತದೆ. ಎನ್‌ಸಿಸಿ ತರಬೇತಿ ಎಂಬುದು ಕೇವಲ ಪ್ರಮಾಣಪತ್ರ ಪಡೆಯುವುದಕ್ಕೆ, ಮುಂದಿನ ಹಂತದ ಉದ್ಯೋಗಕ್ಕೆ ಒಂದು ಮೆಟ್ಟಿಲಾಗುವಂತೆ ಬಳಸಿ ಕೊಳ್ಳುವ ಯೋಜನೆಯಾಯಿತು. ತರಬೇತಿ ಪಡೆದ ಯುವಜನತೆ ಸೇನೆ ಸೇರುವುದು ಎಲ್ಲಾ ತುಂಬಾ ಅಪರೂಪ ಎಂಬಂತಾಯಿತು.
ಇದೇ ಸಂದರ್ಭದಲ್ಲಿ, ಉತ್ತರ ಕೊರಿಯಾ, ದಕ್ಷಿಣ ಕೊರಿಯಾ, ಇಸ್ರೇಲ್, ಸಿಂಗಾಪುರ, ಮತ್ತು ಸ್ವಿಜರ್ಲೆಂಡ್‌ನಂತಹ ದೇಶಗಳು ತಮ್ಮ ನಾಗರಿಕರಿಗೆ ಕಡ್ಡಾಯ ಮಿಲಿಟರಿ ಸೇವೆ ಕಾಯ್ದೆ ಯನ್ನು ಹೊಂದಿವೆ. ಈ ದೇಶಗಳಲ್ಲಿ ಒಂದು ನಿರ್ದಿಷ್ಟ ವಯಸ್ಸಿನ ಯುವಕರು/ಯುವತಿ ಯರು ಕಡ್ಡಾಯವಾಗಿ ಸೇನೆಯಲ್ಲಿ ಸೇವೆ ಸಲ್ಲಿಸಬೇಕು. ಇತರೆ ದೇಶಗಳನ್ನು ಗಮನಿಸಿದಾಗ, ಏಷ್ಯಾಖಂಡದಲ್ಲಿ ಉತ್ತರ ಕೊರಿಯಾ (10 ವರ್ಷಗಳವರೆಗೆ), ದಕ್ಷಿಣ ಕೊರಿಯಾ, ಸಿಂಗಾಪುರ, ಇರಾನ್, ತೈವಾನ್, ಥೈಲ್ಯಾಂಡ್ ದೇಶಗಳು, ಯುರೋಪ್ ಖಂಡದಲ್ಲಿ ನಾರ್ವೆ, ಸ್ವೀಡನ್, ಫಿನ್‌ಲೆಂಡ್, ಆಸ್ಟ್ರಿಯಾ, ಸ್ವಿಜರ್ಲೆಂಡ್, ಡೆನ್ಮಾರ್ಕ್, ಗ್ರೀಸ್, ಎಸ್ಟೋನಿಯಾ ರಾಷ್ಟ್ರಗಳು, ಮಧ್ಯಪ್ರಾಚ್ಯದಲ್ಲಿ ಇಸ್ರೇಲ್ (ಪುರುಷರಿಗೆ 3 ವರ್ಷ, ಮಹಿಳೆಯರಿಗೆ 2 ವರ್ಷ) ಮತ್ತು ಆಫ್ರಿಕಾ/ಅಮೆರಿಕ, ಕ್ಯೂಬಾ, ಎರಿಟ್ರಿಯಾಗಳಲ್ಲೂ ಸೇನಾಸೇವೆಯನ್ನು ಕಡ್ಡಾಯ ಗೊಳಿಸಲಾಗಿದೆ.
ಭದ್ರತೆಯ ಕಾರಣಕ್ಕಾಗಿ ಮತ್ತು ನಾಗರಿಕ ಕರ್ತವ್ಯದ ಭಾಗವಾಗಿ ಈ ಕಾಯ್ದೆಗಳನ್ನು ಜಾರಿಗೆ ತರಲಾಗಿದೆ. ಜಗತ್ತಿನಲ್ಲಿ ಇಷ್ಟೆಲ್ಲ ಬೆಳವಣಿಗೆ/ಬದಲಾವಣೆಗಳಾಗುತ್ತಿದ್ದರೂ, ನಮ್ಮ ಹಲವು ಯೋಜನೆಗಳು ಅತ್ಯಂತ ಪ್ರಭಾವಿಗಳಾಗಿದ್ದರೂ, ಜಾರಿಗೆ ತರುವಲ್ಲಿ ಸೋಲುತ್ತಿದ್ದವು ಮತ್ತು ಸುದೀರ್ಘ ಸಂಕಲ್ಪವಿಲ್ಲದೆ ಸೊರಗುತ್ತಿದ್ದವು.
ಇಂತಹ ಸಂದರ್ಭದಲ್ಲಿಯೇ, ನಮ್ಮ ಇಂದಿನ ಯುವಜನತೆ ತಲೆಯೆತ್ತಿ ನಿಲ್ಲವಂತೆ ಮಾಡಿದ ಯೋಜನೆಯೇ ಅಗ್ನಿವೀರ್ ಯೋಜನೆ. ಮೊದಲೇ ಇದ್ದ ಎನ್ʼಸಿಸಿ ತರಬೇತಿಯನ್ನು ಸಮರ್ಪಕವಾಗಿ, ಸೈನ್ಯಸೇವೆ, ರಾಷ್ಟ್ರಸೇವೆಯತ್ತ ತಿರುಗಿಸಿದ್ದರೆ, ಅಗ್ನಿವೀರ್ ಎಂಬಂತಹ ಯೋಜನೆಗಳ ಅಗತ್ಯವಿರುತ್ತಿರಲಿಲ್ಲವೇನೋ? ಕೇವಲ ಐಡೆಂಟಿಟಿಗಾಗಿ ಎನ್‌ಸಿಸಿಯಲ್ಲಿ ಗುರುತಿಸಿಕೊಳ್ಳುವಂತಾಯಿತು ಎಂಬುದನ್ನು ಬಿಟ್ಟರೆ, ಯುವಕರನ್ನು ಗಂಭೀರವಾಗಿ ದೇಶಸೇವೆಯತ್ತ ಸೆಳೆಯಲಿಲ್ಲವೆನ್ನಬಹುದು.
ಜೊತೆಗೆ, ಯೋಗ್ಯ ಹಣಕಾಸು ವ್ಯವಸ್ಥೆ, ಅಭ್ಯರ್ಥಿಗಳಿಗೆ ಆರ್ಥಿಕ ಸಹಾಯಗಳನ್ನು ಇದಕ್ಕೆ ಜೋಡಿಸಿದ್ದರೆ, ಇನ್ನೂ ಬಲವಾಗುತ್ತಿತ್ತೇನೋ? ಸದ್ಯಕ್ಕೆ, ಅಗ್ನಿವೀರ್ ಇಂದಿನ ಯುವ ಜನತೆಯನ್ನು ಸೈನ್ಯಸೇವೆಗೆ ಸೂಕ್ತ ಆರ್ಥಿಕ ಸಹಾಯ ಒಳಗೊಳ್ಳುವ ಮೂಲಕ, ಕೈಬೀಸಿ ಕರೆಯುತ್ತಿದೆ ಎನ್ನಬಹುದು.
2022ರಲ್ಲಿ ಪರಿಚಯವಾದ ಅಗ್ನಿಪಥ ಯೋಜನೆ ಭಾರತೀಯ ಸೇನೆಯ ಇತಿಹಾಸದ ದೊಡ್ಡ ಬದಲಾವಣೆ. ಇದು ಕೇವಲ ನೇಮಕಾತಿ ವಿಧಾನ ಅಲ್ಲ, ಇದು ಯುವಶಕ್ತಿಗೆ ಒಂದು ರಾಷ್ಟ್ರೀಯ ವೇದಿಕೆ. 17.5 ರಿಂದ 21 ವರ್ಷದ ಯುವಕರು ಯಾವುದೇ ದೊಡ್ಡ ಹಿನ್ನೆಲೆ ಇಲ್ಲದಿದ್ದರೂ ದೇಶ ಸೇವೆ ಮಾಡುವ ಅವಕಾಶ ಇದಾಗಿದೆ.
4 ವರ್ಷವೆಂಬುದು ಚಿಕ್ಕ ಅವಧಿ ಅಲ್ಲ, ದೊಡ್ಡ ಪರಿವರ್ತನೆಯಾಗಿದೆ. ಕೆಲವರು ಕೇಳ್ತಾರೆ 4 ವರ್ಷ ಮಾತ್ರ ಯಾಕೆ? ಈ ನಾಲ್ಕು ವರ್ಷದಲ್ಲಿ ಕಠಿಣ ತರಬೇತಿ, ಶಿಸ್ತಿನ ಜೀವನ, ದೇಶಭಕ್ತಿ ನೇರ ಅನುಭವವು ಒಬ್ಬ ಸಾಮಾನ್ಯ ಯುವಕ ಡಿಸಿಪ್ಲಿನ್ಡ್, ಕಾನ್ಫಿಡೆಂಟ್, ರಾಷ್ಟ್ರಭಕ್ತ ವ್ಯಕ್ತಿಯಾಗಿ ರೂಪಾಂತರವಾಗುತ್ತಾನೆ. ಇದು ಕೇವಲ ಸೇನಾ ತರಬೇತಿ ಅಲ್ಲ, ವ್ಯಕ್ತಿತ್ವ ನಿರ್ಮಾಣ ತರಬೇತಿಯಾಗಿಯೂ ಬದಲಾವಣೆ ತರುತ್ತದೆ.
ಸೇನೆಯಲ್ಲಿ ಸೇವೆ ಮಾಡುವುದು ಕೂಡ ಆರ್ಥಿಕ ಭದ್ರತೆ, ಹೊಸ ದಾರಿಗಳನ್ನು ಅಗ್ನಿವೀರ ರಿಗೆ ಒದಗಿಸಿಕೊಡುತ್ತದೆ. ಉತ್ತಮ ಸಂಬಳ, ಸೇವೆ ಮುಗಿದ ಮೇಲೆ ಸೇವಾನಿಧಿ ರೂಪದಲ್ಲಿ ಸಿಗುವ ಲಕ್ಷಾಂತರ ರೂಪಾಯಿಗಳು ಹೊಸ ಜೀವನ ಆರಂಭಿಸಲು ಬಂಡವಾಳವಾಗ ಬಲ್ಲದು.
ಅಗ್ನಿವೀರ್ ಯುವಕ, ಉದ್ಯಮ ಆರಂಭಿಸಬಹುದು, ಉನ್ನತ ಶಿಕ್ಷಣ ಪಡೆಯಬಹುದು ಅಥವಾ ಇನ್ನೊಂದು ವೃತ್ತಿಗೆ ಹೋಗಬಹುದು. ಇದು ಉದ್ಯೋಗ ಕೊಡುವ ಯೋಜನೆ ಅಲ್ಲ, ಜೀವನ ಕಟ್ಟಿಕೊಳ್ಳಲು ಶಕ್ತಿ ಕೊಡುವ ಯೋಜನೆ. ಅಗ್ನಿವೀರ್ ಯೋಜನೆಯ ದೊಡ್ಡ ಶಕ್ತಿ ಎಂದರೆ, ಸ್ಕಿಲ್ ಡೆವಲಪ್ಮೆಂಟ್. ಇದರಲ್ಲಿ ತಾಂತ್ರಿಕ ಜ್ಞಾನ, ನಾಯಕತ್ವ ಗುಣ, ತಂಡ ದಲ್ಲಿ ಕೆಲಸ ಮಾಡುವ ಕೌಶಲ್ಯಗಳನ್ನು ಕಲಿಯುತ್ತಾನೆ. ಸೇನೆ ಅದನ್ನೇ ಕೊಡ್ತಿದೆ.
ಇಂದು ಯುದ್ಧದ ಸ್ವರೂಪ ಬದಲಾಗಿದೆ. ಟೆಕ್ನಾಲಜಿ, ವೇಗ, ತ್ವರಿತ ನಿರ್ಧಾರ ಇವುಗಳಿಗೆ ಬೇಕಾದುದು ಯುವ ಮನಸ್ಸು, ಚುರುಕು ದೇಹ. ಅಗ್ನಿವೀರ್ ಮೂಲಕ ಸೇನೆ ಇನ್ನಷ್ಟು ಡೈನಾಮಿಕ್ ಆಗುತ್ತದೆ. ಹೊಸ ತಂತ್ರಜ್ಞಾನಗಳನ್ನು ವೇಗವಾಗಿ ಅಳವಡಿಸಿಕೊಳ್ಳುತ್ತದೆ.
ಇದು ಭಾರತದ ರಕ್ಷಣಾ ಶಕ್ತಿಗೆ ಹೊಸ ದಿಕ್ಕು. ಯೋಜನೆಯ ಮೂಲ ರಚನೆಯು ವಯೋ ಮಿತಿ 17.5 - 21 ವರ್ಷ, ಸೇವಾ ಅವಧಿ 4 ವರ್ಷ ಮತ್ತು 6 ತಿಂಗಳು ತರಬೇತಿ, 3.5 ವರ್ಷ ಸಕ್ರಿಯ ಸೇವೆ. 4 ವರ್ಷಗಳ ನಂತರ, 5% ಶಾಶ್ವತ ನೇಮಕಾತಿ, 75% ನಿವೃತ್ತಿ (ಸೇವಾನಿಧಿ ಜೊತೆ) ಕೊಡಲಾಗುತ್ತದೆ.
ಪ್ರತಿವರ್ಷ ಸರಾಸರಿ ನೇಮಕಾತಿ 45000-50000 ಅಗ್ನಿವೀರ್ʼಗಳು ಸೇರುತ್ತಿದ್ದು, ಮೂರು ವರ್ಷಗಳಲ್ಲಿ ಸುಮಾರು 1.5 ಲಕ್ಷ ಯುವಕರು ಸೇನೆಗೆ ಪ್ರವೇಶ ಹೊಂದುತ್ತಿದ್ದಾರೆ. ಕೇವಲ 6 ತಿಂಗಳಲ್ಲಿ ಸಾಮಾನ್ಯ ಯುವಕನೊಬ್ಬ ಸೈನಿಕನಾಗಿ ಬದಲಾಗುತ್ತಾನೆ. 2022-2025ರ ಅವಧಿಯಲ್ಲಿ ಕರ್ನಾಟಕದಿಂದ ಸುಮಾರು 8000-12000 ಯುವಕರು ಅಗ್ನಿವೀರ್ ಆಗಿ ಆಯ್ಕೆಯಾಗಿದ್ದು, ಪ್ರತಿ ವರ್ಷ ಸರಾಸರಿ 3000 - 4000 ಅಭ್ಯರ್ಥಿಗಳು ಎಂಬ ಅಂದಾಜಿದೆ.
ಸೇನೆ ಸೇರುವ ಯುವಕರಲ್ಲಿ ಕರ್ನಾಟಕ ಮುಂಚೂಣಿಯಲ್ಲಿದೆ. ಸೇನೆಗೆ ಹಳೆಯ ಪರಂಪರೆ, ಫಿಸಿಕಲ್ ಫಿಟ್ನೆಸ್ ಕಲ್ಚರ್, ಗ್ರಾಮೀಣ ಯುವಕರ ಉತ್ಸಾಹ ಇದಕ್ಕೆ ಕಾರಣವೆನ್ನಬಹುದು. ಸುಮಾರು 70%- 75% ಅಗ್ನಿವೀರ್ ಅಭ್ಯರ್ಥಿಗಳು ಗ್ರಾಮೀಣ ಭಾಗದಿಂದ ಹಾಗೂ 25%- 30%ಗಳಷ್ಟು ನಗರ ಪ್ರದೇಶದಿಂದ ಸೇನೆ ಸೇರುತ್ತಿದ್ದಾರೆ.
ಕರ್ನಾಟಕದ ಅಭ್ಯರ್ಥಿಗಳು ಬೆಳಗಾವಿ ರೆಜಿಮೆಂಟ್ ಸೆಂಟರ್, ಬೆಂಗಳೂರಿನ ಏರ್ ಫೋರ್ಸ್ ತರಬೇತಿ ವಿಭಾಗ, ಕರಾವಳಿ ಭಾಗದ ನೌಕಾ ತರಬೇತಿ ವಿಭಾಗದಲ್ಲಿ ತರಬೇತಿ ಪಡೆಯುವ ಪ್ರಮುಖ ಕೇಂದ್ರಗಳಾಗಿವೆ. ಅಗ್ನಿವೀರ್ ಯೋಜನೆ - ಇದು ಕೇವಲ ನಾಲ್ಕು ವರ್ಷದ ಸೇನಾ ಸೇವೆಯ ಕಥೆ ಅಲ್ಲ, ಇದು ಯುವಕರ ಕನಸು, ದೇಶದ ಭದ್ರತೆ, ಸಮಾಜದ ಶಿಸ್ತು ಇವೆಲ್ಲ ವನ್ನು ಒಂದೇ ಹಾದಿಯಲ್ಲಿ ಕೊಂಡೊಯ್ಯುವ ಹೊಸ ಪ್ರಯೋಗ.
ಕರ್ನಾಟಕದ ಮಣ್ಣಿನಿಂದ ಎದ್ದು ಬರುತ್ತಿರುವ ಸಾವಿರಾರು ಯುವಕರು ಈ ದಾರಿಯಲ್ಲಿ ನಡೆಯುತ್ತಿರುವುದು ಒಂದು ಯೋಜನೆಯ ಯಶಸ್ಸಿಗಿಂತ ದೊಡ್ಡದು; ದೇಶದ ಭವಿಷ್ಯದ ಮೇಲೆ ಇಟ್ಟಿರುವ ನಂಬಿಕೆ. ಇಂದು ಅವರು ಅಗ್ನಿವೀರರು, ನಾಳೆಯ ನಾಯಕರು, ಉದ್ಯಮಿ ಗಳು, ರಕ್ಷಕರು.
ಅಂತಿಮವಾಗಿ, ಈ ಯೋಜನೆ ನಮಗೆ ಹೇಳುವುದು ‘ದೇಶಸೇವೆಗೆ ಕಾಲಮಿತಿಯಿರಬಹುದು, ದೇಶಭಕ್ತಿಗಲ್ಲ’. ಎನ್‌ಸಿಸಿ ವಿಭಾಗವೂ ಸೈನ್ಯ-ದೇಶಸೇವೆಗೆ ನಮ್ಮ ಯುಜನತೆಯನ್ನು ತಯಾರುಗೊಳಿಸುವಂತಾಗಲಿ, ಹೊಸ ರೂಪ ತಳೆದು ಮತ್ತೆ ವಿಜೃಂಭಿಸುವಂತಾಗಲಿ ಎಂದು ಆಶಿಸೋಣ.