Ganesh S Hegde Column: ಮಿಶ್ರ ಇಂಧನ ಎಥೆನಾಲ್ʼಗೆ ಬದಲಿ ಆಶಾಕಿರಣದ ಹುಡುಕಾಟ
ಕೆಲ ಯುವಕರು ಪಾನೀಪುರಿಯಂತೆಯೆ ಇದನ್ನು ಬೆಂಗಳೂರಿನಲ್ಲಿ ಪ್ರಚುರಪಡಿಸಲು ಹೊಸೆದ ಹೊಸ ಹೆಸರೇ ‘ಬ್ರಾಹ್ಮಿನ್ಸ್ ಬಿಯರ್’! ಶರ್ಕರಪಿಷ್ಠ (ಕಾರ್ಬೋಹೈಡ್ರೇಟ್)ಯುಕ್ತ ಆಹಾರ ಪದಾರ್ಥ ಗಳನ್ನು ಕಿಣ್ವನ/ಹುದುಗಿಸಲು ಬಿಟ್ಟರೆ ಅದರಿಂದ ಹೊಮ್ಮುವುದೆ- ಹುಳಿಹೆಂಡ. ಹುದುಗುವಿಕೆಯಿಂದ (ಸೂಕ್ಷ್ಮಾ ಣುಜೀವಿಗಳ ಸಹಾಯದಿಂದ ನಡೆಯುವ ವಿಘಟನ ಜೀವ ರಾಸಾಯನಿಕ ಕ್ರಿಯೆ) ಹೆಂಡ(ಆಲ್ಕೊಹಾಲ್) ದೊಂದಿಗೆ ವಿವಿಧ ಹುಳಿ ಆಮ್ಲಗಳೂ ಉತ್ಪತ್ತಿಯಾಗುತ್ತವೆ.
-
ಇಂಧನಲೋಕ
ಗಣೇಶ್ ಎಸ್.ಹೆಗಡೆ
ಇತ್ತೀಚೆಗೆ ಬೆಂಗಳೂರಿನ ವ್ಯಾಪಾರಿ ಮಳಿಗೆಯ ಯುವತಂಡವೊಂದು ‘ಬ್ರಾಹ್ಮಿನ್ಸ್ ಬಿಯರ್’ ಎಂಬ ಶೀರ್ಷಿಕೆಯಲ್ಲಿ ಪಾನೀಯವೊಂದನ್ನು ಪ್ರಚುರಪಡಿಸುವ ರೀಲನ್ನು ಸಾಮಾಜಿಕ ಜಾಲತಾಣದಲ್ಲಿ ಸುತ್ತಿಬಿಟ್ಟಿತ್ತು! ಆ ಜಾಹೀರಾತಿನಲ್ಲಿ ಪಾನೀಯದ ಗುಣಗಾನ ಮಾಡುತ್ತಾ ಕೊನೆಗೆ ಅದು ಅಲ್ಕೋ ಹಾಲ್ ರಹಿತ ಎಂದು ಹೇಳುತ್ತಾರೆ! ಇದೇನಿದು, ಆಲ್ಕೋಹಾಲ್‌ರಹಿತವಾದದ್ದು ಬಿಯರ್ ಆಗಲು ಹೇಗೆ ಸಾಧ್ಯ? ಜೊತೆಗೆ ಬಿಯರ್ ಅಲ್ಲದ್ದಕ್ಕೆ ಬಿಯರ್ ಎಂದು ಹೆಸರಿಸುವ ದರ್ದು ಏನೆಂಬ ಪ್ರಶ್ನೆಯೂ ಸಹಜ. ವಾಸ್ತವದಲ್ಲಿ ಇದು ಹವ್ಯಕ ಬ್ರಾಹ್ಮಣರ ಪಾಕಶಾಲೆಯ ಶಿರೋಮಣಿಗಳಲ್ಲಿ ಒಂದಾದ ಅಪ್ಪೇಹುಳಿ ಎಂಬ ಪದಾರ್ಥ ಅಥವಾ ಪಾನೀಯ!
ಹದವಾದ ಹುಳಿ-ಸಿಹಿ-ಖಾರ ಹಾಗೂ ವಗ್ಗರಣೆಯ ಘಮ ಹೊಂದಿರುವ ಈ ಅಪ್ಪೇಹುಳಿ ಅತ್ಯಂತ ರುಚಿಕಾರಿ. ಸಾಮಾನ್ಯವಾಗಿ ಇದರ ಪ್ರಧಾನ ಭೂಮಿಕೆಯಲ್ಲಿರುವುದು- ಹುಳಿಮಾವಿನ(ಅಪ್ಪೆ) ರಸ, ಅದಿಲ್ಲದಿದ್ದರೆ ಕಂಚಿಕಾಯಿ (ಹೆರಳೆಕಾಯಿ), ಅದೂ ಇಲ್ಲದಿದ್ದರೆ ಹುಳಿಗಾಗಿ ನಿಂಬೆ/ಹುಣಸೆಯೂ ಆದೀತು. ಬೇಸಿಗೆ ಕಾಲದಲ್ಲಂತೂ ಹವ್ಯಕರ ಅಡುಗೆಯಲ್ಲಿ ಇದು ಇರಲೇಬೇಕು. ಇನ್ನು ಹಬ್ಬ ಹರಿದಿನಗಳಲ್ಲಿ ಅಪ್ಪೇಹುಳಿ ಇಲ್ಲದಿದ್ದರೆ ಅದು ಊಟವೇ ಅಲ್ಲ ಎಂಬಷ್ಟು ಸ್ಥಾನ-ಮಾನ ಈ ಪದಾರ್ಥಕೆ!
ಕೆಲ ಯುವಕರು ಪಾನೀಪುರಿಯಂತೆಯೆ ಇದನ್ನು ಬೆಂಗಳೂರಿನಲ್ಲಿ ಪ್ರಚುರಪಡಿಸಲು ಹೊಸೆದ ಹೊಸ ಹೆಸರೇ ‘ಬ್ರಾಹ್ಮಿನ್ಸ್ ಬಿಯರ್’! ಶರ್ಕರಪಿಷ್ಠ (ಕಾರ್ಬೋಹೈಡ್ರೇಟ್)ಯುಕ್ತ ಆಹಾರ ಪದಾರ್ಥ ಗಳನ್ನು ಕಿಣ್ವನ/ಹುದುಗಿಸಲು ಬಿಟ್ಟರೆ ಅದರಿಂದ ಹೊಮ್ಮುವುದೆ- ಹುಳಿಹೆಂಡ. ಹುದುಗುವಿಕೆ ಯಿಂದ (ಸೂಕ್ಷ್ಮಾಣುಜೀವಿಗಳ ಸಹಾಯದಿಂದ ನಡೆಯುವ ವಿಘಟನ ಜೀವ ರಾಸಾಯನಿಕ ಕ್ರಿಯೆ) ಹೆಂಡ(ಆಲ್ಕೊಹಾಲ್)ದೊಂದಿಗೆ ವಿವಿಧ ಹುಳಿ ಆಮ್ಲಗಳೂ ಉತ್ಪತ್ತಿಯಾಗುತ್ತವೆ. ಅಂದರೆ ಯಾವುದೇ ನಿರ್ದಿಷ್ಟ ರುಚಿಯಿಲ್ಲದ ಹೆಂಡಕ್ಕೆ ಹುಳಿ ಹಿಂಡುವ ಕೆಲಸ ಮಾಡುವುದು ಈ ಆಮ್ಲ! ಆದ್ದರಿಂದ ಹುದುಗಿದ ಪದಾರ್ಥ ಹುಳಿಯಾಗಿದೆ ಎಂದರೆ ಅಲ್ಲಿ ಹೆಂಡವೂ ಇದೆ ಎಂದರ್ಥ. ಆದ್ದರಿಂದಲೇ ಇಂತಹ ಪದಾರ್ಥಕ್ಕೆ ಹುಳಿಹೆಂಡ ಎಂಬ ಪದ ಹೊಮ್ಮಿರುವುದು!
ಇದನ್ನೂ ಓದಿ: Shishir Hegde Column: ಬ್ರೆಜಿಲ್ ನ ಕಾಡಿನಲ್ಲಿ ಲಕ್ಷ ವೀರಪ್ಪನ್ ಗಳಿದ್ದಾರೆ
ದೋಸೆ ಹಿಟ್ಟನ್ನೂ ಹದವಾಗಿ ಹುದುಗಿಸಿ ಹುಳಿ ಬರಿಸಿ ಮಾಡುವುದರಿಂದ ಮುಂಚೆ ಅದಕ್ಕೆ ದೋಷ ಎಂಬ ಹೆಸರು ಇತ್ತೆಂಬ ಐತಿಹ್ಯವಿದೆ. ಅಮಲುಕಾರಕ ಮದ್ಯವು ಬ್ರಾಹ್ಮಣರಿಗೆ ನಿಷಿದ್ಧವಾಗಿದ್ದರಿಂದ ಹುದುಗಿಸುವಿಕೆಯ ಉತ್ಪನ್ನಗಳನ್ನು ದೋಷವೆಂದೇ ಪರಿಗಣಿಸಲಾಗಿತ್ತು. ಸದಾ ಬೌದ್ಧಿಕ ಚಟುವಟಿಕೆಗಳಲ್ಲಿಯೆ ತೊಡಗಿರಬೇಕಾದ ಇವರಿಗೆ ಬುದ್ಧಿಮಂದಕಾರಿ ಮದಿರೆಯ ನಿಷೇಧ ಸಹಜವೇ ತಾನೆ? ಹೀಗಿದ್ದಾಗ, ಮದ್ಯವಿಲ್ಲದಿದ್ದರೂ ಅಪ್ಪೇಹುಳಿಗೆ ಬ್ರಾಹ್ಮಣರ ಬಿಯರ್ ಎಂಬ ಅಲ್ಪೋಪಮೆ ಯ ನಾಮಧೇಯದ ಕಾರಣವೆಂದರೆ- ನಿಷಿದ್ಧವಾದುದರ ಕುರಿತ ಕುತೂಹಲ ಎನ್ನಬಹುದು! ನಮ್ಮೂರಿನಲ್ಲಿ ಒಂದು ದನ ಸದಾ ಬೇಲಿ ಹಾರಿಹೋಗಿಯೇ ಮೇಯುತ್ತಿತ್ತು. ಅದರ ಪ್ರಕಾರ ಬೇಲಿಯೊಳಗೆ ಇರುವುದೆಲ್ಲಾ ಸ್ವಾದಿಷ್ಟವಾದುದು!
ಬೇಲಿ ಹಾರಿ ನೋಡುವ ಈ ಕುತೂಹಲ ಮನುಷ್ಯನಿಗೆ ಕಡಿಮೆ ಇರಲು ಸಾಧ್ಯವೇ? ಇದೇ ಈ ವ್ಯಾಪಾರದ ಬಂಡವಾಳ! ಹುದುಗುವಿಕೆ ಪ್ರಕ್ರಿಯೆಯನ್ನೇ ಮಾಡದೆ ಕೇವಲ ವಿಶಿಷ್ಟ ಪರಿಮಳಭರಿತ ಮಾವಿನಮಿಡಿಯ ಹುಳಿ ರಸದಿಂದ ತಯಾರಿಸುವ ಅಪ್ಪೇಹುಳಿಯಲ್ಲಿ ಆಲ್ಕೋಹಾಲ್ ಇರುವುದೇ ಇಲ್ಲ. ಆದರೆ ಹುದುಗಿಸಿದ ಉತ್ಪನ್ನಗಳಲ್ಲಿ ಮೇಲೆ ಹೇಳಿದಂತೆ ಆಲ್ಕೋಹಾಲ್ ಜೊತೆಗೆ ವಿವಿಧ ಆಮ್ಲ, ಅಥವಾ ಬಿಡುಗಡೆಯಾಗುವ ಕಾರ್ಬನ್ ಡೈಆಕ್ಷೈಡ್ ಅನಿಲವು ಮತ್ತೆ ಆ ದ್ರವದಲ್ಲಿ ಕರಗಿ ಕಾರ್ಬನಿಕ್ ಆಮ್ಲವಾಗಿ ಹುಳಿ ರುಚಿಯನ್ನು ನೀಡುತ್ತದೆ.
ಅಂದರೆ ಸಂಸ್ಕರಿಸದ ಮದ್ಯವು ಹುಳಿಯಾಗೇ ಇರುತ್ತದೆ. ಆದರೆ ರಾಸಾಯನಿಕವಾಗಿ ಆಲ್ಕೋ ಹಾಲನ್ನು ಪ್ರತ್ಯೇಕಿಸಿದಾಗ ಅದು ಹುಳಿಯನ್ನು ಕಳೆದುಕೊಳ್ಳುತ್ತದೆ. ಹಾಗೆ ನೋಡಿದರೆ ಹುಳಿ ಬಂದ ದೋಸೆಹಿಟ್ಟಿನಲ್ಲಿ ಸ್ವಲ್ಪ ಪ್ರಮಾಣದಲ್ಲಿ ಆಲ್ಕೋಹಾಲ್ ಉತ್ಪತ್ತಿಯಾಗಿದ್ದರೂ ಅದು ದೋಸೆಯಲ್ಲಿ ಇರುವುದಿಲ್ಲ, ಬಂಡಿಯ ಮೇಲೆ ಬೇಯಿಸುವಾಗ ನೀರಿಗಿಂತಲೂ ಕಡಿಮೆ ಕುದಿಯುವ ಬಿಂದು ಇರುವ ಆಲ್ಕೋಹಾಲ್ ಹಾರಿ ಹೋಗಿರುತ್ತದೆ. ಅಂದರೆ ಬೆಂದ ದೋಸೆ- ದೋಷಮುಕ್ತವಾಗಿ ಬಿಡುತ್ತದೆ!
ಒಟ್ಟಾರೆ ಹೇಳುವುದಾದರೆ ಹುಳಿ ಇರುವುದೆಲ್ಲದರಲ್ಲೂ ಆಲ್ಕೋಹಾಲ್ ಇರಬೇಕೆಂದಿಲ್ಲ, ಆದರೆ ಆಲ್ಕೋಹಾಲ್ ಉತ್ಪತ್ತಿಯಾಗುವಾಗ ಹುಳಿ ಬಂದೇಬರುವುದು. ಹಾಗಾಗಿ ಬರಿ ಹುಳಿಯನ್ನು ಆಸ್ವಾದಿಸಿಯೆ ಬಿಯರ್ ಕುಡಿದೆನೆಂದು ತಮಾಷೆ ಮಾಡಿಕೊಳ್ಳುವ ಪಾನೀಯವೇ- ಅಪ್ಪೇಹುಳಿ ಅಲಿಯಾಸ್ ಬ್ರಾಹ್ಮಿನ್ಸ್ ಬಿಯರ್.
ಹಾಗಾದರೆ ಮದ್ಯ ನಿಷೇಧವಿರದ ಬ್ರಾಹ್ಮಣೇತರರು ಕುಡಿಯುವ ನಿಜವಾದ ಬಿಯರ್ ಅನ್ನು- ‘ಅಬ್ರಾಹ್ಮಣರ ಅಪ್ಪೇಹುಳಿ’ ಎಂದು ಹೆಸರಿಸಬಹುದೇನೊ?! ಪ್ರಸ್ತುತ ಬರಹದ ಉದ್ದೇಶ ಯಾರ ಆಹಾರಕ್ರಮವನ್ನು ಟೀಕಿಸುವ, ಅಥವಾ ವಿಶ್ಲೇಷಿಸುವದು ಅಲ್ಲವೇ ಅಲ್ಲ. ಬದಲಿಗೆ, ಇಂದು ಇಡೀ ಭಾರತದ ವಾಹನಗಳ ದೇಹದಲ್ಲಿ ಹರಿಯುತಿರುವ ಇ-20 ಎಂಬ ಮಿಶ್ರಇಂಧನ ಅಥವಾ ಬೆರಕೆ ಇಂಧನ ಕುರಿತದ್ದು. ಅಂದರೆ ಆಲ್ಕೋಹಾಲನ್ನು ಪಾನೀಯದ ಹೊರತಾಗಿ ವಾಹನದ ಇಂಧನವಾಗಿ ಬಸುವ ಕುರಿತು.
ಕೆಲತಿಂಗಳ ಹಿಂದೆ ರಜೆಗೆ ಊರಿಗೆ ಬಂದಿದ್ದ ಮಗ ತಿರುಗಾಡಲು ನನ್ನ ಕಾರನ್ನು ಬಳಸಿದ. ತೀರಾ ಅಗತ್ಯವೆಸಿದಾಗ ಮಾತ್ರ ಏಸಿ ಬಳಸಿ, ಸದಾ ಮೈಲೇಜಿನ ಬಗ್ಗೆ ಅಪಾರ ಕಾಳಜಿಯಿಂದ ಕಾರು ಓಡಿಸುತ್ತಿದ್ದ ನನಗೆ, ಆತ ಬಳಸಿದ ಅನಂತರ ಸರಾಸರಿ ಮೈಲೇಜು ಗಣನೀಯವಾಗಿ ಕುಸಿದದ್ದು ಗಮನಕ್ಕೆ ಬಂತು. ಆ ಕುರಿತು ಕೊಂಚ ಜಟಾಪಟಿಯೂ ಆಯ್ತು! ಆದರೆ ವಾಹನ ವಾರಸುದಾರನ ತೆಕ್ಕೆಗೆ ಬಂದು ಅನೇಕ ದಿನಗಳಾದರೂ ಮೈಲೇಜು ಸಹಜ ಸ್ಥಿತಿಗೆ ಬಾ(ಏ)ರದಿದ್ದಾಗ ಚಕಿ(ಕುಪಿ)ತ ಗೊಂಡೆ!
ಕ್ರಮೇಣ ಮಾಧ್ಯಮಗಳಲ್ಲಿ ವರದಿಯಾಗುತ್ತಿದ್ದ ಸುದ್ದಿಗಳಿಂದ ವಾಸ್ತವದ ಅರಿವಾಯ್ತು. ಇದು ಮಗನ ಉಪಾದ್ಯಪಿಯಲ್ಲ, ಬದಲಿಗೆ ಸರಕಾರದ್ದು, ಎಂದು! ಹೌದು ಇ-20 ಪೆಟ್ರೋಲ್‌ದಿಂದ ಜನಸಾಮಾನ್ಯರಿಗೆ ನಿಧಾನವಾಗಿ ಮೊದಲು ಗೋಚರವಾದ ಸಂಗತಿಯೆಂದರೆ ವಾಹನದ ಮೈಲೇಜು ಸ್ವಲ್ಪಮಟ್ಟಿಗೆ ಇಳಿದಿರುವುದು. ವಾಯುಮಾಲಿನ್ಯ ಕಡಿಮೆ ಆಗುವ ಧನಾತ್ಮಕ ಪರಿಣಾಮ ಇರುವು ದಾದರೂ ಅದು ಅಷ್ಟು ಬೇಗ ಗಮನಕ್ಕೆ ಬರುವಂತದ್ದಲ್ಲ.
ಇ-20 ಮಿಶ್ರಪೆಟ್ರೋಲ್ ಕುರಿತು ಈಗಾಲೆ ಮಾಧ್ಯಮಗಳಲ್ಲಿ ಸಾಕಷ್ಟು ಲೇಖನಗಳು, ಚರ್ಚೆಗಳೂ ಬಂದಿವೆ, ಬರುತ್ತಲೂ ಇವೆ. ಆದರೆ ಪ್ರಸ್ತುತ ಬರಹವು ರಾಜಕೀಯ ಚರ್ಚೆಯನ್ನು ಪಕ್ಕಕಿಟ್ಟು ಕೇವಲ ವೈಜ್ಞಾನಿಕ ವಿಶ್ಲೇಷಣಾ ಕೇಂದ್ರಿತವಾದದ್ದು. ಈಗ ನಮ್ಮ ವಾಹನಗಳೆಲ್ಲಾ ಸಂಚಾರಕ್ಕಾಗಿ ದಿನನಿತ್ಯ ಕುಡಿಯುತ್ತಿರುವುದು ಇ-20 ಪೆಟ್ರೋಲನ್ನು. ಅಂದರೆ 20 ಪ್ರತಿಶತ ಎಥೆನಾಲ್ (C2H5OH) ಮಿಶ್ರಣಗೊಳಿಸಿದ ಪೆಟ್ರೋಲ್. ಎಥೆನಾಲ್- ಆಲ್ಕೋಹಾಲ್ ವರ್ಗಕ್ಕೆ ಸೇರಿದ ಒಂದು ರಾಸಾಯನಿಕ ಸಾವಯವ ಸಂಯುಕ್ತ. ಇದು ಸಕ್ಕರೆ ಉದ್ದಿಮೆಯಲ್ಲಿ ಬರುವ ಪರಿತ್ಯಕ್ತ ದ್ರಾವಣವಾದ ಮೊಲಾಸಿಸ್ ಅನ್ನು ಹುದುಗಿಸಿ ಅನಂತರ ಭಟ್ಟಿ ಇಳಿಸುವಿಕೆಯಿಂದ ಹೊಮ್ಮುವ ಒಂದು ಲಾಭದಾಯಕ ಉಪಉತ್ಪನ್ನ.
ಹಾಳಾದ ಅಕ್ಕಿ ಅಥವಾ ಧಾನ್ಯ, ಮೆಕ್ಕೆಜೋಳ, ಜೈವಿಕ ಕೃಷಿತ್ಯಾಜ್ಯ, ಅಥವಾ ಕಾರ್ಬೋಹೈಡ್ರೇಟ್ ಜಾಸ್ತಿ ಇರುವ ಯಾವುದೇ ಸಾವಯವ ಪದಾರ್ಥಗಳನ್ನು ಕೊಳೆಯಿಸಿ ಕೂಡ ಇದನ್ನು ಉತ್ಪಾದಿಸು ತ್ತಾರೆ. ಈ ಹುದುಗುವಿಕೆ ಅಥವಾ ಕಿಣ್ವನ ಪ್ರಕ್ರಿಯೆಯನ್ನು- ನೀರು ಹಾಗೂ ಸೂಕ್ಷ್ಮಜೀವಿಗಳೆಂಬ ಜೈವಿಕ ಕತ್ತರಿಯ ಸಹಾಯದಿಂದ ಸೂಕ್ತ ಉಷ್ಣತೆ ಹಾಗೂ ವಾತಾವರಣದಲ್ಲಿ ಸಂಕೀರ್ಣ ಅಣುಗಳನ್ನು ನಿರ್ದಿಷ್ಟ ಚಿಕ್ಕ ಚಿಕ್ಕ ಅಣುಗಳನ್ನಾಗಿ ಕತ್ತರಿಸುವ ಕ್ರಿಯೆ ಎನ್ನಬಹುದು.
ಎಥೆನಾಲ್ ಅಥವಾ ಮದ್ಯ(ಆಲ್ಕೋಹಾಲ್) ಉತ್ಪಾದನೆ ಅನಾದಿ ಕಾಲದಿಂದಲೂ ಪರಿಚಿತವಿದ್ದ ಸಂಗತಿ. ಆದರೆ ಇದನ್ನು ಇಂಧನವಾಗಿ ಎಂಜಿನ್ ದಲ್ಲಿ ಬಳಸಬಹುದೆಂದು ಮೊದಲು ತೋರಿದಾತ- 1876ರಲ್ಲಿ ಪೆಟ್ರೋಲ್ ಎಂಜಿನ್ ಆವಿಷ್ಕರಿಸಿದ ಜರ್ಮನಿಯ ನಿಕೋಲಾಸ್ ಒಟ್ಟೊ . ಅನಂತರ ಹೆನ್ರಿ ಫೋರ್ಡ್ 1908ರಲ್ಲಿ ಹೊರತಂದ ಮಾಡೆಲ್ -ಟಿ ಎಂಬ ಕಾರುಗಳನ್ನು ಪೆಟ್ರೋಲ್ ಅಥವಾ ಎಥೆನಾಲ್ ಬೆರೆಸಿದ ಪೆಟ್ರೋಲಿನಲ್ಲಿ ಚಲಾಯಿಸುವಂತೆ ಸಿದ್ಧಪಡಿಸಲಾಗಿತ್ತು. ಆದರೆ ಅನಂತರದ 20ನೇ ಶತಮಾನದ ಆರಂಭದ ಕಾಲದಲ್ಲಿ ನೈಸರ್ಗಿಕ ಪೆಟ್ರೋಲಿಯಂ ಸಾಕಷ್ಟು ಪ್ರಮಾಣದಲ್ಲಿ ದೊರೆತದ್ದರಿಂದ ಇಂಧನವಾಗಿ ಎಥೆನಾಲ್‌ನ ಬಳಕೆ ನಿಂತುಹೋಯ್ತು. ಇದನ್ನು ಮತ್ತೆ ಪರಿಚಯಿಸಿದ್ದು ಅತಿಹೆಚ್ಚು ಕಬ್ಬು ಬೆಳೆಯುತ್ತಿದ್ದ ಬ್ರೆಝಿಲ್ ದೇಶ. ಈಗ ಬ್ರೆಝಿಲ್ ದೇಶದಲ್ಲಿ ಇ-20, ಇ-85 ಹಾಗೂ ಇ-100 ಈ ಎಲ್ಲಾ ಪ್ರಕಾರದ ಮಿಶ್ರಇಂಧನ ಜನಸಾಮಾನ್ಯರ ಬಳಕೆಗೆ ಲಭ್ಯವಿದೆ. ಭಾರತದಲ್ಲಿ ಬಳಸುವ ಒಟ್ಟೂ ತೈಲ ಆಧಾರಿತ ಇಂಧನದಲ್ಲಿ 88.5 ಪ್ರತಿಶತದಷ್ಟನ್ನು ಆಮದು ಮಾಡಿಕೊಳ್ಳಲಾಗುತ್ತಿದೆ!
ತಕ್ಕಮಟ್ಟಿಗಾದರೂ ಈ ಪರಾವಲಂಬಿ ಹೊರೆ ತನ್ಮೂಲಕ ವಿದೇಶಿ ವಿನಿಮಯ ತಗ್ಗಿಸುವ ಪ್ರಮುಖ ಉದ್ದೇಶದಿಂದ ಎಥೆನಾಲ್ ಮಿಶ್ರಿತ ಪೆಟ್ರೋಲ್ ಕಾರ್ಯಕ್ರಮವನ್ನು 2003ರಲ್ಲಿಯೇ ಭಾರತ ಸರಕಾರವು ಘೋಷಿಸಿತ್ತು. ಆದರೆ 2014ರಲ್ಲಿ ಇದಕ್ಕೆ ವಿಶೇಷ ಚಾಲನೆ ದೊರೆಯಿತು. ಇದು 1.5 ಪ್ರತಿಶತ ಮಿಶ್ರಣದಿಂದ ಆರಂಭವಾಗಿ, ಎಥೆನಾಲ್ ಉದ್ಯಮಕ್ಕೆ ಉತ್ತಮ ಪ್ರೋತ್ಸಾಹ ದೊರೆತು ಸಾಕಷ್ಟು ಉತ್ಪಾದನೆಯೂ ಆದ ಕಾರಣ ಈಗ 20 ಪ್ರತಿಶತಕ್ಕೆ ತಲುಪಿದ್ದಾಗಿದೆ. ದೇಶೀಯವಾಗಿ ಉತ್ಪಾದಿಸಲಾಗುವ ನವೀಕರಿಸಬಹುದಾದ ಇಂಧನವಾದ್ದರಿಂದ ಇದೊಂದು ಸ್ವಾವಲಂಬಿ ಹೆಜ್ಜೆಯಾಗಿ ಪ್ರಾಮುಖ್ಯತೆ ಪಡೆದಿದೆ.
ಎಥೆನಾಲ್ ಬಳಕೆಯ ಇನ್ನೊಂದು ಮುಖ್ಯ ವಿಷಯವೆಂದರೆ ಇದು ಪರಿಸರ ಸ್ನೇಹಿ. ಕಾರಣ ಪೆಟ್ರೋಲಿನ ಆಕ್ಟೇನ್ ಸಂಖ್ಯೆಗಿಂತ (91-95) ಎಥೆನಾಲ್ (108) ಹೆಚ್ಚಿರುವುದರಿಂದ ಇಂಜಿನ್ ನಾಕಿಂಗ್ ಸಮಸ್ಯೆ ಕಡಿಮೆಯಾಗುತ್ತದೆ (ನಾಕಿಂಗ್ ಎಂಬುದು ಪೆಟ್ರೋಲ್ ಎಂಜಿನ್‌ಗಳಲ್ಲಿ ಕಂಡು ಬರುವ ಎಂಜಿನ್‌ನ ದಕ್ಷತೆಯನ್ನು ಕುಗ್ಗಿಸುವ ಒಂದು ಸಮಸ್ಯೆ. ಇದು ಆಕ್ಟೇನ್ ನಂಬರ್ ಹೆಚ್ಚಿರುವ ಇಂಧನವನ್ನು ಬಳಸಿದಾಗ ಕಡಿಮೆ ಆಗುತ್ತದೆ.
ಉದಾಹರಣೆಗೆ ಬಂಕ್‌ಗಳಲ್ಲಿ ಹೆಚ್ಚಿನ ಬೆಲೆಗೆ ದೊರಕುವ ಪವರ್ ಪೆಟ್ರೋಲ್‌ನ ಆಕ್ಟೇನ್ ನಂಬರ್ ಹೆಚ್ಚಿರುತ್ತದೆ). ಜೊತೆಗೆ ಎಥೆನಾಲ್ ಅಣುವಿನಲ್ಲಿಯೆ ಆಕ್ಸಿಜನ್ ಪರಮಾಣುವೂ ಇರುವುದರಿಂದ ಒಟ್ಟಾರೆ ಈ ಮಿಶ್ರಇಂಧನವು ದಕ್ಷದಹನವಾಗಿ ತ್ಯಾಜ್ಯ ಅನಿಲದಲ್ಲಿ ಕಾರ್ಬನ್ ಮೊನಾಕ್ಸೈಡ್ ಹಾಗೂ ಹೈಡ್ರೋಕಾರ್ಬನ್ ಕಣಗಳ ಪ್ರಮಾಣ ಕಡಿಮೆಯಾಗುತ್ತದೆ. ಆದ್ದರಿಂದ ಇದು ದೇಶಾದ್ಯಂತ ವಾಯುಮಾಲಿನ್ಯ ತಗ್ಗಿಸುವ ನಿಟ್ಟಿನಲ್ಲಿ ಪ್ರಮುಖ ಹೆಜ್ಜೆಯಾಗಿದೆ.
ಎಲ್ಲವೂ ಪ್ರಯೋಜನಕಾರಿಯೇ ಆಗಿದ್ದರೆ ಇ-20ಯಿಂದ ಯಾವ ವಿವಾದವಾಗಲಿ, ಅದರ ಕುರಿತು ವಿಶೇಷ ಚರ್ಚೆಯಾಗಲಿ ಆಗುತ್ತಿರಲಿಲ್ಲ. ಆದರೆ ಈ ಮಿಶ್ರಣದಲ್ಲಿ ಕೆಲವು ನ್ಯೂನತೆಗಳೂ ಇರುವು ದರಿಂದ ದೇಶಾದ್ಯಂತ ಚರ್ಚೆಯ ಬಿಸಿ ಏರಿದೆ. ಮೊದಲನೆಯದಾಗಿ ಮುಂಚೆ ಹೇಳಿದಂತೆ ವಾಹನದ ಮೈಲೇಜು ಕಡಿಮೆ ಆಗಿರುವುದು.
ದಕ್ಷದಹನವಾದ ಮೇಲೆ, ಮೈಲೇಜು ಹೆಚ್ಚಾಗಬೇಕಿತ್ತಲ್ಲವೆ? ಇಲ್ಲ, ಎಥೆನಾಲಿನ ಇಂಧನ ಸಾಂದ್ರತೆ/ ಸಾಮರ್ಥ್ಯ ಪೆಟ್ರೋಲಿಗಿಂತ ಕಡಿಮೆ. ಪೆಟ್ರೋಲಿನದು 34 ಮೆಗಾ ಜೋಲ್ಸ್ ಪ್ರತಿ ಲೀಟರ್‌ಗೆ ಆದರೆ ಎಥೆನಾಲ್ ಲೀಟರ್‌ಗೆ 21 ಮೆಗಾ ಜೋಲ್ಸ್ ಶಕ್ತಿಯನ್ನು ಮಾತ್ರ ನೀಡುತ್ತದೆ. ಆದ್ದರಿಂದ ವಾಹನದ ಮೈಲೇಜಿನಲ್ಲಿ ಕೊಂಚ ಇಳಿಕೆ ಸಹಜ. ಪೆಟ್ರೋಲ್ ಒಂದು ಏಕೈಕ ರಾಸಾಯನಿಕ ಸಂಯುಕ್ತವಲ್ಲ. ಭೂಮಿಯ ಆಳದಲ್ಲಿ ದೊರೆತ ಕಚ್ಚಾತೈಲವನ್ನು ಸಂಸ್ಕರಣೆ ಮಾಡುವುದರ ಮೂಲಕ ಪಡೆಯ ಲಾಗುತ್ತದೆ.
ಸಾಮಾನ್ಯವಾಗಿ 4 ರಿಂದ 12 ಕಾರ್ಬನ್ ಪರಮಾಣುಗಳನ್ನು ( C4–C12) ಒಳಗೊಂಡಿರುವ ವಿವಿಧ ಹೈಡ್ರೋಕಾರ್ಬನ್‌ಗಳ ಎಚ್ಚರಿಕೆಯಿಂದ ಮಾಡಿದ ಒಂದು ಸಂಯೋಜನೆಯೆ- ಪೆಟ್ರೋಲ್. ಎಥೆನಾಲಿಗೆ ಹೋಲಿಸಿದರೆ ಪೆಟ್ರೋಲಿನಲ್ಲಿ ದಹಿಸಬಲ್ಲ ಹೆಚ್ಚು ಕಾರ್ಬನ್ ಹಾಗೂ ಹೈಡ್ರೋಜನ್ ಪರಮಾಣುಗಳಿರುವುದರಿಂದ ಇದರ ಶಕ್ತಿ ಸಾಂದ್ರತೆ ಹೆಚ್ಚು.
ಇ-20ಯಲ್ಲಿ ಪೆಟ್ರೋಲಿಗಿಂತ ಕಡಿಮೆ ಶಕ್ತಿ ಸಾಂದ್ರತೆ ಹೊಂದಿರುವ ಎಥೆನಾಲ್ ಬೆರೆಸುವುದರಿಂದ ಇದರ ದಹನದಿಂದ ಬರುವ ಸರಾಸರಿ ಶಕ್ತಿ ಕಡಿಮೆ, ಆದ್ದರಿಂದ ವಾಹನದ ಮೈಲೇಜು ಕಡಿಮೆ ಯಾಗುತ್ತದೆ. ಇ-20ಯಿಂದ ಎಂಜಿನ್ನಿನ ಭಾಗಗಳು ಹಾಳಾಗುತ್ತವೆ ಎಂಬ ಆರೋಪವಿದೆ. ಇದನ್ನು ತಿಳಿಯಲು ಎಥೆನಾಲ್ ಹಾಗೂ ಪೆಟ್ರೋಲಿನ ಭೌತಿಕ ಲಕ್ಷಣದ ಅರಿವು ಅಗತ್ಯ. ಮುಂಚೆ ಹೇಳಿದಂತೆ ಪೆಟ್ರೋಲ್ ವಿವಿಧ ಹೈಡ್ರೋಕಾರ್ಬನ್‌ಗಳ ಒಂದು ಸಂಯೋಜನೆ. ಆದರೆ ಇವೆಲ್ಲವೂ ನೀರನ್ನು ದ್ವೇಷಿಸುವ ಹೈಡ್ರೋಫೋಬಿಕ್ ಗುಣ ಹೊಂದಿವೆ. ಅಂದರೆ ಹೇಗೆ ಎಣ್ಣೆ ನೀರಿನೊಂದಿಗೆ ಬೆರೆಯದೊ, ಹಾಗೆಯೆ ಪೆಟ್ರೋಲ್ ಕೂಡ ನೀರಿನಲ್ಲಿ ಸೇರದು. ಆದರೆ ಎಥೆನಾಲ್ ಹಾಗಲ್ಲ. ಅದು ಹೈಡ್ರೋಫಿಲಿಕ್, ಅಂದರೆ ನೀರಿನಲ್ಲಿ ಸರಾಗವಾಗಿ ವಿಲೀನವಾಗಬಲ್ಲದು.
ಇದರಲ್ಲಿರುವ -OH ಬಂಧವೇ ಇದಕ್ಕೆ ಕಾರಣ. ಆದರೆ ಎಥೆನಾಲಿನ ವಿಶೇಷವೆಂದರೆ ಈ ಒಂದೇ ಸಂಯುಕ್ತದಲ್ಲಿ ಪೆಟ್ರೋಲು ಅಥವಾ ಎಣ್ಣೆಯಲ್ಲಿ ಕರಗಬಲ್ಲ ಹೈಡ್ರೋಫೋಬಿಕ್ ಆದ ಹೈಡ್ರೋ ಕಾರ್ಬನ್ ಭಾಗ ( C2H5 ), ಹಾಗೂ ನೀರಿನಲ್ಲಿ ವಿಲೀನವಾಗಬಲ್ಲ ಹೈಡ್ರೋಫಿಲಿಕ್ ಭಾಗ ( OH) ಎರಡೂ ಇವೆ! ಆದ್ದರಿಂದ ಇದು ಪೆಟ್ರೋಲಿನಲ್ಲಿ ಸರಾಗವಾಗಿ ಬೆರೆತರೂ ನೀರಿನ ಆಸೆ ತೊರೆದಿಲ್ಲ!