ಚೌತಿ ಹಬ್ಬ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Dr A Jayakumar Shetty Column: ಬೆನ್ನುಹುರಿಯ ಗಾಯದ ಗಂಭೀರತೆಯನ್ನು ನಿರ್ಲಕ್ಷಿಸುವಂತಿಲ್ಲ

ಪ್ರತಿ ವರ್ಷದ ಸೆಪ್ಟೆಂಬರ್ ೫ರಂದು ‘ವಿಶ್ವ ಬೆನ್ನುಹುರಿ ಗಾಯದ ದಿನ’ವಾಗಿ 2016ರಿಂದ ಆಚರಿಸಿಕೊಂಡು ಬರಲಾಗುತ್ತಿದೆ. ಇದು ಬೆನ್ನುಹುರಿಯ ಗಾಯದ ಅಪಾಯಗಳನ್ನು ತಡೆಯುವ ಮತ್ತು ಈ ಗಾಯದಿಂದ ಒದಗುವ ವೈಕಲ್ಯದ ತೀವ್ರತೆಯನ್ನು ಗುರುತಿಸಿ ಅದರ ಗಂಭೀರತೆಯ ಬಗ್ಗೆ ಬೆಳಕು ಚೆಲ್ಲುವ ದಿನವಾಗಿದೆ.

ಬೆನ್ನುಹುರಿಯ ಗಾಯದ ಗಂಭೀರತೆಯನ್ನು ನಿರ್ಲಕ್ಷಿಸುವಂತಿಲ್ಲ

-

Ashok Nayak Ashok Nayak Sep 3, 2025 9:44 AM

ವೈದ್ಯಲೋಕ

ಡಾ.ಎ.ಜಯಕುಮಾರ ಶೆಟ್ಟಿ

ವಿಶ್ವ ಆರೋಗ್ಯ ಸಂಸ್ಥೆಯ ಅಂದಾಜಿನ ಪ್ರಕಾರ, ಜಗತ್ತಿನ 15 ಮಿಲಿಯನ್‌ಗಿಂತಲೂ ಹೆಚ್ಚು ಜನರು ಬೆನ್ನುಹುರಿಯ ಆಘಾತ ಅಥವಾ ಗಾಯದೊಂದಿಗೇ ದಿನದೂಡುತ್ತಿದ್ದಾರೆ. ಪ್ರತಿ ವರ್ಷವೂ ಈ ಯಾದಿಗೆ ಹೊಸಬರ ಸೇರ್ಪಡೆ ಆಗುತ್ತಲೇ ಇರುವುದು ಆತಂಕದ ಸಂಗತಿ.

ಭಾರತದಲ್ಲಿ ಈಗಾಗಲೇ ಸುಮಾರು 15 ಲಕ್ಷ ಮಂದಿ ಬೆನ್ನುಹುರಿಯ ಗಾಯದಿಂದ ಬಳಲುತ್ತಿದ್ದು, ಪ್ರತಿ ವರ್ಷವೂ ಹೊಸದಾಗಿ 20000 ಕ್ಕೂ ಹೆಚ್ಚು ಪ್ರಕರಣಗಳು ವರದಿಯಾಗುತ್ತಿವೆ. 16ರಿಂದ 30ರ ವರೆಗಿನ ವಯೋಮಾನದವರು ಕೂಡ ಈ ಸಮಸ್ಯೆಗೆ ಒಳಗಾಗುತ್ತಿರುವುದು, ಅವರಲ್ಲಿ ಗ್ರಾಮೀಣ ಜನರು ಮತ್ತು ಅಕ್ಷರಜ್ಞಾನ ಇಲ್ಲದವರ ಸಂಖ್ಯೆಯೇ ಹೆಚ್ಚಾಗಿರುವುದು ದುಃಖಕರ ಸಂಗತಿ.

ಇದು ಸಮಾಜದ ಜೀವಂತಿಕೆಯೇ ಕುಸಿಯುತ್ತಿರುವುದರ ಮುನ್ಸೂ ಚನೆಯಲ್ಲವೇ? ಭಾರತದಲ್ಲಿ ಕಾಣಬರುವ ಬೆನ್ನುಹುರಿ ಗಾಯದ ಸಮಸ್ಯೆಗೆ ರಸ್ತೆ ಅಪಘಾತಗಳು (ಶೇ.45ರಷ್ಟು) ಮತ್ತು ಎತ್ತರ ದಿಂದ ಬೀಳುವಿಕೆ (ಶೇ.39ರಷ್ಟು) ಪ್ರಮುಖ ಕಾರಣಗಳಾಗಿವೆ ಎನ್ನಲಾಗುತ್ತದೆ.

Back in F

ಬೆನ್ನುಹುರಿಯ ಗಾಯ ( Spinal Cord Injury- SCI ) ಎಂದರೆ ಬೆನ್ನುಹುರಿಯ ನರಮೂಲಕ್ಕೆ ಸಂಭವಿಸುವ ಗಾಯ. ಈ ಗಾಯದ ಪರಿಣಾಮವಾಗಿ ದೇಹದ ಕೆಲವು ಭಾಗಗಳಲ್ಲಿ ಚಲನೆಯ ಚಟುವಟಿಕೆಗಳು ಮತ್ತು ಸಂವೇದನೆಗಳು ಸಂಪೂರ್ಣವಾಗಿ ಅಥವಾ ಭಾಗಶಃ ನಷ್ಟವಾಗಬಹುದು. ಬೆನ್ನುಹುರಿಯ ಆಘಾತ ಉಂಟಾದಾಗ ವ್ಯಕ್ತಿಯು ಸಾಮಾನ್ಯವಾಗಿ ತೀವ್ರ ದೈಹಿಕ ಅಂಗವೈಕಲ್ಯಕ್ಕೆ ತುತ್ತಾಗಿ ಮಾನಸಿಕ ಆಘಾತಕ್ಕೆ ಒಳಗಾಗುತ್ತಾನೆ. ಈ ಸಮಸ್ಯೆಯು ವಿನಾಶಕಾರಿಯಾಗಿದ್ದು, ದೈಹಿಕ, ಮಾನಸಿಕ, ಸಾಮಾಜಿಕ ಮುಂತಾದ ನೆಲೆಗಳಲ್ಲಿ ರೋಗಿಯ ಜೀವನದ ಮೇಲೆ ಪರಿಣಾಮವನ್ನು ಬೀರುತ್ತದೆ ಹಾಗೂ ಆತನ ಕುಟುಂಬದ ಆರ್ಥಿಕ ಹೊರೆಯನ್ನೂ ಹೆಚ್ಚಿಸುತ್ತದೆ.

ಪ್ರತಿ ವರ್ಷದ ಸೆಪ್ಟೆಂಬರ್ 5ರಂದು ‘ವಿಶ್ವ ಬೆನ್ನುಹುರಿ ಗಾಯದ ದಿನ’ವಾಗಿ 2016ರಿಂದ ಆಚರಿಸಿ ಕೊಂಡು ಬರಲಾಗುತ್ತಿದೆ. ಇದು ಬೆನ್ನುಹುರಿಯ ಗಾಯದ ಅಪಾಯಗಳನ್ನು ತಡೆಯುವ ಮತ್ತು ಈ ಗಾಯದಿಂದ ಒದಗುವ ವೈಕಲ್ಯದ ತೀವ್ರತೆಯನ್ನು ಗುರುತಿಸಿ ಅದರ ಗಂಭೀರತೆಯ ಬಗ್ಗೆ ಬೆಳಕು ಚೆಲ್ಲುವ ದಿನವಾಗಿದೆ. ಏಕೆಂದರೆ, ಈ ಗಾಯದಿಂದ ಒದಗುವ ನೋವು, ಅದಕ್ಕೆ ಒಳಗಾಗುವ ವ್ಯಕ್ತಿಗಷ್ಟೇ ಸೀಮಿತವಾಗುವುದಿಲ್ಲ; ಆತನ ಕುಟುಂಬ, ಆತ್ಮೀಯರು, ಅವಲಂಬಿತರು ಹೀಗೆ ಎಲ್ಲರ ಮೇಲೂ ಅದು ಪರಿಣಾಮವನ್ನು ಬೀರುತ್ತದೆ.

ಬೆನ್ನುಹುರಿಯ ಗಾಯಕ್ಕೆ ಒಳಗಾದವರು ದೈಹಿಕವಾಗಿ ಮಾತ್ರವಲ್ಲದೆ, ಮಾನಸಿಕ, ಆರ್ಥಿಕ, ಸಾಮಾ ಜಿಕವಾಗಿಯೂ ಕುಸಿಯುತ್ತಾರೆ. ಕೆಲಸ-ಕಾರ್ಯ ಇಲ್ಲದಿರುವುದು, ಸಮಾಜದ ನಿರಾಕರಣೆ, ಆತ್ಮ ವಿಶ್ವಾಸದ ಕೊರತೆ ಮುಂತಾದ ಅಂಶಗಳು ಇವರನ್ನು ಹತಾಶರನ್ನಾಗಿಸಬಹುದು. ಇಂಥ ಸಂದರ್ಭ ಗಳಲ್ಲಿ ಸಮಗ್ರ ಪುನರ್ವಸತಿ ಸೌಲಭ್ಯ ಇಲ್ಲದಿರುವುದು ಮತ್ತೊಂದು ದೊಡ್ಡ ಆಘಾತವಾಗಿ ಪರಿಣಮಿಸುತ್ತದೆ.

ಇದನ್ನೂ ಓದಿ: Dr A Jayakumar Shetty Column: ಮಾರ್ಕೆಟ್‌ ಫಾರ್‌ ಲೆಮನ್ಸ್‌ ಸಿದ್ಧಾಂತವೂ, ಬುರುಡೆ ಪುರಾಣವೂ...

ಬೆನ್ನುಹುರಿಯ ಗಾಯದ ಸಮಸ್ಯೆಯಿಂದ ಬಳಲುತ್ತಿರುವವರು, ದೈಹಿಕ ಸ್ಥಿತಿಗತಿಯಲ್ಲಿ ವ್ಯತ್ಯಯ ವಾದವರಷ್ಟೇ; ಅವರ ಅಂತರ್ಗತ ಶಕ್ತಿ, ಸಾಮರ್ಥ್ಯ, ಪ್ರತಿಭೆ ಮುಂತಾದವನ್ನು ನಮ್ಮ ಸಮಾಜವು ಬೆಂಬಲಿಸಿದರೆ ಅವರು ಉತ್ತಮ ಜೀವನವನ್ನು ನಡೆಸಬಹುದು. ಇದಕ್ಕೆ ಬೇಕಾಗಿರುವುದು- ಪುನರ್ವಸತಿ ವ್ಯವಸ್ಥೆ, ಜನಜಾಗೃತಿ ಮತ್ತು ಸಾಮಾಜಿಕ ಬೆಂಬಲ.

ಸಮರ್ಥ ಪುನರ್ವಸತಿ ಕೇಂದ್ರಗಳು, ಸಮುದಾಯದ ಬೆಂಬಲ, ಶಿಕ್ಷಣ ಮತ್ತು ಉದ್ಯೋಗಾವಕಾಶ ಗಳು ಇಂಥವರ ಬದುಕಿನ ಮರುಪ್ರಾರಂಭಕ್ಕೆ ನೆರವಾಗಬಲ್ಲವು. ಸಂರಕ್ಷಣೆಗೆ ಮಹತ್ವವಿದೆ: ವ್ಯಕ್ತಿ ಯೊಬ್ಬನು ಬೀಳುವಿಕೆ ಅಥವಾ ನೆಲಕ್ಕೆ ಅಪ್ಪಳಿಸುವಿಕೆಯನ್ನು ತಡೆಯಲು ಸಾಧ್ಯವಾಗುವು ದಾದರೆ ಬೆನ್ನುಹುರಿಯ ರಕ್ಷಣೆಯಾದಂತೆ. ಮಾತ್ರವಲ್ಲದೆ ತನ್ನ ಕನಸುಗಳು, ಆಕಾಂಕ್ಷೆಗಳು ಮತ್ತು ಬದುಕ ನ್ನು ಸಂಪೂರ್ಣವಾಗಿ ಅನುಭವಿಸುವ ಆತನ ಸಾಮರ್ಥ್ಯ ಇವುಗಳ ಸಂರಕ್ಷಣೆಯೂ ಆಗುತ್ತದೆ ಎಂಬುದನ್ನು ಬಿಡಿಸಿ ಹೇಳಬೇಕಿಲ್ಲ.

ಬೀಳುವಿಕೆ/ಅಪ್ಪಳಿಸುವಿಕೆ ಹಾಗೂ ಬೆನ್ನುಹುರಿಯ ಗಾಯದ ನಡುವಿನ ಸಂಬಂಧದ ಬಗ್ಗೆ ಸಾರ್ವ ಜನಿಕರಲ್ಲಿ ಜಾಗೃತಿ ಮೂಡಿಸಿ, ಈ ಅಪಾಯಗಳನ್ನು ತಡೆಗಟ್ಟುವ ಮತ್ತು ಅರಿವು ಮೂಡಿಸುವ ನಿಟ್ಟಿನಲ್ಲಿ ಸಮುದಾಯ ಮಟ್ಟದಲ್ಲಿ ಅಭಿಯಾನಗಳನ್ನು ನಡೆಸಬೇಕಾದ ಅಗತ್ಯವಿದೆ. ಬೀಳುವಿಕೆ ಯನ್ನು ತಡೆಯಲು ಮನೆ, ಕೆಲಸದ ಸ್ಥಳ ಮತ್ತು ಸಾರ್ವಜನಿಕ ಪ್ರದೇಶಗಳಲ್ಲಿ ಸುರಕ್ಷಿತ ವಿನ್ಯಾಸ ಮತ್ತು ರಕ್ಷಣಾತ್ಮಕ ಕ್ರಮಗಳ ಅಳವಡಿಕೆಗೆ ಉತ್ತೇಜಿಸಬೇಕಾಗಿದೆ. ಬೆನ್ನುಹುರಿಯ ಗಾಯದ ಸಮಸ್ಯೆ ಇರುವವರಿಗೆ ಮತ್ತು ಅವರ ಆರೈಕೆದಾರರಿಗೆ, ಬೀಳುವಿಕೆ ತಡೆಯಲು ಅಗತ್ಯವಾದ ಉಪಕರಣ ಗಳನ್ನು ಒದಗಿಸಿ, ಅಗತ್ಯ ತರಬೇತಿಯನ್ನು ನೀಡುವ ಮೂಲಕ ಅವರಿಗೆ ಶಕ್ತಿ ನೀಡಬೇಕಾದ್ದು ಇಂದಿನ ಅಗತ್ಯವಾಗಿದೆ.

ಬೆನ್ನುಹುರಿಯ ಗಾಯದ ರೋಗಿಗಳಿಗೆ ನಿರಂತರ ಆರೈಕೆಯ ಅಗತ್ಯವಿರುತ್ತದೆ. ಏಕೆಂದರೆ, ವೈದ್ಯ ಕೀಯ ಚಿಕಿತ್ಸೆ/ ಆರೈಕೆಯಿಂದ ಬಿಡುಗಡೆ ದೊರೆತ ನಂತರ ಅವರು ಅಲ್ಪಾವಧಿ ಅಥವಾ ದೀರ್ಘಾ ವಧಿಯ ತೊಡಕುಗಳನ್ನು ಎದುರಿಸಬೇಕಾಗುತ್ತದೆ. ಬೆನ್ನುಹುರಿಯ ಗಾಯದಂಥ ಸಮಸ್ಯೆಯ ಬಗೆಗಿನ ಅರಿವಿನ ಕೊರತೆಯಿಂದಾಗಿ ರೋಗಿಗಳು ಮತ್ತು ಅವರ ಕುಟುಂಬಿಕರು ಕೂಡ ತಮ್ಮ ಜೀವನಶೈಲಿಯಲ್ಲಿನ ಹಠಾತ್ ಬದಲಾವಣೆಗೆ ಸಾಕ್ಷಿಯಾಗಬೇಕಾಗುತ್ತದೆ ಮತ್ತು ಈ ಬದಲಾವಣೆ ಯನ್ನು ಸ್ವೀಕರಿಸಲು ಅವರು ದೀರ್ಘ ಸಮಯವನ್ನು ತೆಗೆದುಕೊಳ್ಳಬಹುದು.

ಇನ್ನು ರೋಗಿಗಳ ಪುನರ್ವಸತಿಯೂ ಒಂದು ಸುದೀರ್ಘ ಮತ್ತು ಸಂಕೀರ್ಣ ಪ್ರಕ್ರಿಯೆಯಾಗಿದ್ದು, ಇದು ಗಾಯವು ಕಾಣಿಸಿಕೊಂಡ ನಂತರದ ಕೆಲವೇ ಸಮಯದಲ್ಲಿ ಪ್ರಾರಂಭವಾಗುತ್ತದೆ ಮತ್ತು ಜೀವಿತಾವಧಿಯಲ್ಲಿ ಇದಕ್ಕೆ ಬಹುವಿಭಾಗೀಯ ತಂಡದ ಆರೈಕೆಯ ಅಗತ್ಯವಿರುತ್ತದೆ.

ಸೂಕ್ತ ಸಾಧನಗಳು ಅಗತ್ಯ: ಪ್ರಸ್ತುತ ಲಭ್ಯವಿರುವ ವೈದ್ಯಕೀಯ ಉಪಕರಣಗಳು, ಬೆನ್ನುಹುರಿಯ ಗಾಯದ ಸಮಸ್ಯೆಗೊಳಗಾದ ವ್ಯಕ್ತಿಯ ಜೀವನವನ್ನು ಸುಗಮಗೊಳಿಸಬಲ್ಲವು; ಆದರೆ ಅವುಗಳ ಭ್ಯತೆ ಮತ್ತು ವೆಚ್ಚವೇ ಇಂಥವರಿಗೆ ತಡೆಗೋಡೆಯಾಗಿ ಪರಿಣಮಿಸಿಬಿಡುತ್ತವೆ.

ಹೆಚ್ಚಿನ ಉಪಕರಣಗಳು ನಗರದ ಪರಿಸರಕ್ಕೆ ಸೂಕ್ತವಾಗಿದ್ದು, ಒರಟು/ಕಚ್ಚಾ ಭೂಪ್ರದೇಶಗಳನ್ನು ಹೊಂದಿರುವ ಗ್ರಾಮೀಣ ಪರಿಸರಕ್ಕೆ ಸೂಕ್ತವಾಗಿಲ್ಲ. ಸಾಲದೆಂಬಂತೆ, ರೋಗಿಯ ಅಗತ್ಯತೆಯನ್ನು ಪರಿಗಣಿಸದೆಯೇ ಇಂಥ ಕೆಲವು ಉಪಕರಣಗಳನ್ನು ಶಿಫಾರಸು ಮಾಡುವ ಅಭ್ಯಾಸವೂ ಕೆಲವರ ಲ್ಲಿದೆ.

ಖರೀದಿಗೆ ರೋಗಿಯ ಬಳಿ ಸಾಕಷ್ಟು ಹಣ ಇಲ್ಲದಿದ್ದಲ್ಲಿ, ನಿರ್ದಿಷ್ಟ ಗುಣಮಟ್ಟ ಮತ್ತು ಗಾತ್ರದ ಸಾಧನವೇ ಎಲ್ಲರಿಗೂ ಸರಿಹೊಂದುತ್ತದೆ ಎಂಬ ಮನೋಭಾವವು ಇಂಥ ಶಿಫಾರಸು ದಾರರಲ್ಲಿ ಸಾಮಾನ್ಯವಾಗಿರುತ್ತದೆ ಎನ್ನಲಡ್ಡಿಯಿಲ್ಲ. ಅಂತಿಮವಾಗಿ ಇದು ನಕಾರಾತ್ಮಕ ಪರಿಣಾಮಗಳಿಗೆ ಕಾರಣವಾಗುತ್ತದೆ.

ಬೆನ್ನುಹುರಿಯ ಗಾಯದ ಸಮಸ್ಯೆಯಿರುವ ರೋಗಿಗಳಲ್ಲಿ ಹೆಚ್ಚಿನವರು ಆರ್ಥಿಕವಾಗಿ ಸುಸ್ಥಿತಿಯಲ್ಲಿ ಇಲ್ಲದವರು. ಇಂಥವರು ದುಬಾರಿ ವೈದ್ಯಕೀಯ ಸಾಧನಗಳನ್ನು ಪಡೆಯಲು ಸಾಧ್ಯವಿಲ್ಲ. ಆದ್ದರಿಂದ ಇಂಥ ರೋಗಿಗಳಿಗೆ ತಕ್ಕನಾದ ಮತ್ತು ಸ್ಥಳೀಯ ಪರಿಸರಕ್ಕೆ ಸರಿಹೊಂದುವಂಥ ಸಾಧನಗಳನ್ನು ರೂಪಿಸುವ ಅಥವಾ ಲಭ್ಯವಿರುವ ಸಾಧನಗಳಲ್ಲಿ ಒಂದಿಷ್ಟು ಸುಧಾರಣೆ ಮಾಡುವ ಅಗತ್ಯವಿದೆ.

ಗಣರಾಜ್ಯೋತ್ಸವ, ಸ್ವಾತಂತ್ರ್ಯ ದಿನಾಚರಣೆ ಮುಂತಾದ ಸಂದರ್ಭಗಳಲ್ಲಿ ಸರಕಾರದ ವತಿಯಿಂದ ಮತ್ತು ಸರಕಾರೇತರ ಸಂಸ್ಥೆಗಳಿಂದ (ಎನ್‌ಜಿಒಗಳಿಂದ) ಒಂದಿಷ್ಟು ವೈದ್ಯಕೀಯ ಸಾಧನಗಳ ವಿತರಣೆಯಾಗುವುದು ವಾಡಿಕೆ; ಆದರೆ ರೋಗಿಯ ಅಗತ್ಯಗಳನ್ನು ಅರಿಯದೆಯೇ ಈ ಸಾಧನ ಗಳನ್ನು ವಿತರಿಸುವುದರಿಂದ ಅವು ಕೆಲವರಿಗೆ ಪ್ರಯೋಜನಕ್ಕೆ ಬರದಿರುವ ಸಾಧ್ಯತೆಗಳೂ ಇವೆ.

ಸಮಾನತೆಯ ದೃಷ್ಟಿ ಬೇಕು: ದಿವ್ಯಾಂಗರಿಗೆ ಬೇಕಿರುವುದು ಸಹಾನುಭೂತಿಯಲ್ಲ, ಸಮಾನತೆಯ ದೃಷ್ಟಿಕೋನ. ಯಾವುದೇ ವೈಕಲ್ಯಕ್ಕೆ ಒಳಗಾದವರು ಪರರ ಬೆಂಬಲವನ್ನಷ್ಟೇ ಅಲ್ಲದೆ, ಸಮಾನ ಅವಕಾಶ, ಗೌರವವನ್ನೂ ಬಯಸುತ್ತಾರೆ. ತಮ್ಮ ಸ್ವಾಭಿಮಾನಕ್ಕೆ ಮತ್ತು ಆತ್ಮವಿಶ್ವಾಸಕ್ಕೆ ಧಕ್ಕೆ ಯಾಗುವುದನ್ನು ಇವರು ಸಹಿಸುವುದಿಲ್ಲ. ಆದ್ದರಿಂದ, ಬೆನ್ನುಹುರಿಯ ಗಾಯದಿಂದ ಬಳಲು ತ್ತಿರುವವರನ್ನು ಸಮಾಜವು ದುರ್ಬಲರೆಂದೋ, ನಿಷ್ಪ್ರಯೋಜಕರೆಂದೋ ಪರಿಗಣಿಸುವ ಬದಲು, ಅವರಲ್ಲಿ ಕೆನೆಗಟ್ಟಿರುವ ಪ್ರತಿಭೆ, ಆತ್ಮವಿಶ್ವಾಸ, ಸಾಮರ್ಥ್ಯ ಮತ್ತು ಸಾಧನೆಯ ಉತ್ಸಾಹ ಮುಂತಾದ ಅಂಶಗಳತ್ತ ಗಮನ ಹರಿಸಬೇಕು. ನೆನಪಿರಲಿ, ಬೆನ್ನುಹುರಿಯ ಗಾಯದಿಂದ ಬಳಲುತ್ತಿರುವವರದು ಮೂಲಭೂತವಾಗಿ ಸಹಾನು ಭೂತಿಯ ಕಥೆಗಳಲ್ಲ, ಅವು ಪ್ರೇರಣೆಯ ಕಥೆಗಳು...

ಮರೆತ ಹಕ್ಕುಗಳು, ಅಗತ್ಯಗಳು: 21 ಬಗೆಯ ವೈಕಲ್ಯಗಳಲ್ಲಿ ಬೆನ್ನುಹುರಿಯ ಗಾಯವನ್ನು ಇನ್ನೂ ಪ್ರತ್ಯೇಕ ವೈಕಲ್ಯವಾಗಿ ಪರಿಗಣಿಸಲಾಗುತ್ತಿಲ್ಲ. ಇತರ ರಾಜ್ಯಗಳಿಗೆ ಹೋಲಿಸಿದರೆ, ಕರ್ನಾಟಕದಲ್ಲಿ ದಿವ್ಯಾಂಗರಿಗೆ ದೊರೆಯುವ ಮಾಸಾಶನ ಬಹಳ ಕಡಿಮೆ ಮೊತ್ತದ್ದಾಗಿದೆ. ಶೇ.75ಕ್ಕಿಂತ ಹೆಚ್ಚು ದಿವ್ಯಾಂಗರು ಪಡೆಯುವ 1400 ರುಪಾಯಿ ಮಾಸಾಶನವು ಅವರ ವೈದ್ಯಕೀಯ ಅಗತ್ಯಗಳ ನಿರ್ವಹಣೆಗೂ ಸಾಲದಾಗಿದೆ.

ಬೆನ್ನುಹುರಿಯ ಗಾಯದ ಕಾರಣದಿಂದಾಗಿ ಸಂಪೂರ್ಣವಾಗಿ ಆರೈಕೆದಾರರನ್ನು ಅವಲಂಬಿಸಿರು ವವರ ನಿದರ್ಶನಗಳಲ್ಲಿ, ಅಂಥ ಆರೈಕೆದಾರರಿಗೆ ಭತ್ಯೆ ನೀಡಬೇಕಾದ ಅಗತ್ಯವಿದೆ. ಸರಕಾರಗಳು ಇಂಥ ಸಮಸ್ಯೆ ಉಳ್ಳವರಿಗಾಗಿ ಪುನಶ್ಚೇತನ ಕೇಂದ್ರಗಳನ್ನು ಪ್ರಾರಂಭಿಸಬೇಕಿದೆ ಮತ್ತು ಈಗಾಗಲೇ ಈ ನಿಟ್ಟಿನಲ್ಲಿ ಸೇವೆ ಸಲ್ಲಿಸುತ್ತಿರುವ ಸ್ವಯಂಸೇವಾ ಸಂಸ್ಥೆಗಳಿಗೆ ಒತ್ತಾಸೆಯಾಗಿ ನಿಲ್ಲಬೇಕಿದೆ.

ಇದು ಬದುಕಿನ ಅಂತ್ಯವಲ್ಲ: ವೈಕಲ್ಯವೆಂದರೆ ಅಸಮರ್ಥತೆ ಅಥವಾ ಬಲಹೀನತೆ ಎಂದು ಒಂದೇ ಗುಕ್ಕಿಗೆ ನಿರ್ಧರಿಸಿ ಬಿಡುವುದು ಸಲ್ಲ. ಅದು ದೈಹಿಕ ಅಥವಾ ಮಾನಸಿಕ ವ್ಯತ್ಯಯ, ಅಷ್ಟೇ. ಅಂಗ ವೈಕಲ್ಯವು ದುರಂತವಲ್ಲ, ಅದು ಬದಲಾವಣೆಗೆ ಇಂಬು ಕೊಡುವ ಒಂದು ಅಂಶ. ಬದಲಾವಣೆಯ ನಿರ್ಧಾರ ಕೈಗೊಳ್ಳಲು, ಹೊಸಹಾದಿ ಹಿಡಿದು ನಿಂತು ಬದುಕಿಗೆ ಹೊಸ ಅರ್ಥ ನೀಡಲು ಎದುರಾದ ಒಂದು ಅವಕಾಶ ಎಂದು ಪರಿಭಾವಿಸಬೇಕು.

ವೈಕಲ್ಯವಿರುವವರದ್ದು ಮುಗಿದ ಬದುಕು ಎಂದು ನೋಡುವುದು ನಮ್ಮ ಸಮಾಜದ ಹಳೆಯ ಮತ್ತು ತಪ್ಪಾದ ದೃಷ್ಟಿಕೋನ. ವಿವಿಧ ತೆರನಾದ ವೈಕಲ್ಯವಿರುವ ಅನೇಕ ವ್ಯಕ್ತಿಗಳು ಇಂದು ಕಲೆ, ಕ್ರೀಡೆ, ಶಿಕ್ಷಣ, ಉದ್ಯಮ, ತಂತ್ರಜ್ಞಾನ ಮುಂತಾದ ಕ್ಷೇತ್ರಗಳಲ್ಲಿ ಅಪೂರ್ವ ಸಾಧನೆಗಳನ್ನು ಮಾಡುತ್ತಿದ್ದಾರೆ. ತಮ್ಮ ವೈಕಲ್ಯವನ್ನು ಹಿನ್ನಡೆ ಅಥವಾ ನ್ಯೂನತೆ ಎಂದು ಭಾವಿಸದೆ, ಶಕ್ತಿಯ ರೂಪವಾಗಿ ಬಳಸಿಕೊಂಡು ಸಮಾಜಕ್ಕೆ ಪ್ರೇರಣಾದಾಯಿಯಾಗಿದ್ದಾರೆ.

ಮಿಕ್ಕವರ ಪಾತ್ರವೇನು?: ದಿವ್ಯಾಂಗ ವ್ಯಕ್ತಿಗಳಿಗೆ ಸಹಾಯಹಸ್ತ ನೀಡುವುದು ಕೇವಲ ‘ದಯೆಯ ಚಟುವಟಿಕೆ’ ಆಗಿರಬಾರದು; ಅದು ಸಮಾನ ಅವಕಾಶ ಮತ್ತು ಗೌರವದ ಹಕ್ಕಿನ ಪ್ರಕ್ರಿಯೂ ಆಗಬೇಕು. ಶಿಕ್ಷಣ, ಉದ್ಯೋಗ, ಸಾರಿಗೆ, ಆರೋಗ್ಯ ಸೇವೆ ಹೀಗೆ ಎಲ್ಲ ಕ್ಷೇತ್ರಗಳಲ್ಲೂ ಈ ಸಮಾನತೆ ಪ್ರತಿಬಿಂಬಿಸಬೇಕು. ದಿವ್ಯಾಂಗರಿಗೆ ಅಗತ್ಯವಿರುವ ಸಹಾಯಧನ, ಸೌಲಭ್ಯಗಳು, ತಾಂತ್ರಿಕ ನೆರವು, ಪುನಶ್ಚೇತನ ಕೇಂದ್ರಗಳ ವ್ಯವಸ್ಥೆ ಮುಂತಾದವುಗಳ ಕಡೆಗೆ ಸಾಮಾಜಿಕ ನೆಲೆಯಲ್ಲಿ, ಸರಕಾರಿ ಮಟ್ಟದಲ್ಲೂ ಸಂಬಂಧಪಟ್ಟವರು ಗಮನಹರಿಸಬೇಕು.

ಸಮಾಜದಲ್ಲಿ ಎಲ್ಲರಂತೆ ಅವರಿಗೂ ಸ್ಥಾನಮಾನವನ್ನು ಕಲ್ಪಿಸುವ ನಿಟ್ಟಿನಲ್ಲಿ ಗಂಭೀರ ಚಿಂತನೆ ಯಾಗಬೇಕು. ಬೆನ್ನುಹುರಿಯ ಗಾಯದ ಕುರಿತಾದ ಅರಿವಿನ ಕೊರತೆಯನ್ನು ನೀಗಲು ನಾವೆಲ್ಲರೂ ಒಟ್ಟಾಗಿ ಶ್ರಮಿಸೋಣ.

(ಲೇಖಕರು ನಿವೃತ್ತ ಪ್ರಾಂಶುಪಾಲರು)