ಚೌತಿ ಹಬ್ಬ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Marilinga Gowda Mali Patil Column: ಮಾಹಿತಿ ಹಕ್ಕು ಕಾಯಿದೆ ಎಂದರೆ ಭ್ರಷ್ಟರಿಗೆ ಭಯವೇಕೆ...?

ಮಾಹಿತಿ ಹಕ್ಕು ಕಾಯಿದೆಯಿಂದಾಗಿ ಆಡಳಿತದಲ್ಲಿ ಪಾರದರ್ಶಕತೆ ಮೂಡುತ್ತದೆ, ಅಧಿಕಾರಿಗಳು ಜನರಿಗೆ ಉತ್ತರಿಸಬೇಕಾದ ಪರಿಸ್ಥಿತಿ ನಿರ್ಮಾಣ ವಾಗುತ್ತದೆ, ಭ್ರಷ್ಟಾಚಾರದ ನಿಯಂತ್ರಣವಾಗುತ್ತದೆ. ಆರ್‌ಟಿಐ ನೆರವಿನಿಂದಾಗಿ ಹಲವಾರು ಹಗರಣ ಗಳು ಬೆಳಕಿಗೆ ಬಂದಿವೆ. ಆರ್‌ಟಿಐನಿಂದಾಗಿ ಸಾಮಾನ್ಯ ನಾಗರಿಕ ರೂ ತಮ್ಮ ಹಕ್ಕನ್ನು ಸಾಧಿಸಲು ಸಾಧ್ಯ, ದಾಖಲೆಗಳನ್ನು ಪಡೆದು ನ್ಯಾಯಾಲಯದಲ್ಲಿ ಹೋರಾಡಿ ನ್ಯಾಯ ಪಡೆಯಲು ಸಾಧ್ಯ.

ಮಾಹಿತಿ ಹಕ್ಕು ಕಾಯಿದೆ ಎಂದರೆ ಭ್ರಷ್ಟರಿಗೆ ಭಯವೇಕೆ...?

-

Ashok Nayak Ashok Nayak Sep 3, 2025 6:38 AM

ವಿಚಾರ ವೇದಿಕ

ಮರಿಲಿಂಗಗೌಡ ಮಾಲಿಪಾಟೀಲ್

ಮಾಹಿತಿ ಹಕ್ಕು ಕಾಯಿದೆಯು ತನಿಖಾ ಪತ್ರಿಕೋದ್ಯಮಕ್ಕೆ ಹೆಚ್ಚಿನ ಬಲ ತಂದುಕೊಟ್ಟಿತು. ಭ್ರಷ್ಟಾ ಚಾರಿಗಳಿಗೆ, ಸಮಾಜದ್ರೋಹಿಗಳಿಗೆ ಆರ್‌ಟಿಐ ಕಾರ್ಯಕರ್ತರು ಸಿಂಹಸ್ವಪ್ನ ರಾದರು. ಪರಿಣಾಮ ವಾಗಿ ಭ್ರಷ್ಟಾಚಾರದ ಹಲವು ನಿದರ್ಶನಗಳು ಬಯಲಾದವು. ಪ್ರಮುಖ ಪತ್ರಿಕೆಗಳ ಮುಖಪುಟದಲ್ಲಿ ಬಂದ ತನಿಖಾ ವರದಿಗಳಿಗೆ, ಮಾಹಿತಿ ಹಕ್ಕು ಕಾಯಿದೆಯ ಮೂಲಕ ಪಡೆದ ಮಾಹಿತಿಗಳೇ ಆಧಾರವಾಗಿದ್ದವು. ಹಾಗಾಗಿ ಇಂಥ ಅಗತ್ಯ ಮಾಹಿತಿ ಗಳನ್ನು ಕೇಳುವುದು ಕಾರ್ಯಕರ್ತರ ಹಕ್ಕಾಗಿದೆ.

ಮಾಹಿತಿ ಹಕ್ಕು ಕಾಯಿದೆ (ಆರ್‌ಟಿಐ) ಎಂಬುದು ಒಂದು ಕಾನೂನು ಮಾತ್ರವಲ್ಲ, ಅದು ಪ್ರಜಾಪ್ರಭುತ್ವದ ಪ್ರಾಣವೂ ಹೌದು. ಇದರ ಸರಿಯಾದ ಬಳಕೆಯು ಭ್ರಷ್ಟಾಚಾರವನ್ನು ಕಡಿಮೆ ಮಾಡುತ್ತದೆ, ಸಮಾಜದಲ್ಲಿ ನ್ಯಾಯವನ್ನು ಸ್ಥಾಪಿಸುತ್ತದೆ, ಜನಸಾಮಾನ್ಯರ ಬದುಕಿನಲ್ಲಿ ಬದಲಾವಣೆಯನ್ನು ತರುತ್ತದೆ. ಪ್ರಜಾಪ್ರಭುತ್ವವನ್ನು ಬಲಪಡಿಸಲು, ಜನರ ಪಾಲ್ಗೊಳ್ಳುವಿಕೆನ್ನು ಹೆಚ್ಚಿಸಲು ಮತ್ತು ಸಮಾಜದಲ್ಲಿ ಸಮಾನತೆಯನ್ನು ಸ್ಥಾಪಿಸಲು ಮಾಹಿತಿ ಹಕ್ಕು ಕಾಯಿದೆಯು ಒಂದು ‘ಎಂದೂ ಆರದ ದೀಪ’ವಾಗಿದೆ.

ಇಂಥ ಒಂದು ಒಳ್ಳೆಯ, ಸಮಾಜಪರ, ಭ್ರಷ್ಟವಿರೋಧಿ ಕಾಯಿದೆಯನ್ನು ಹಳ್ಳ ಹಿಡಿಸುವ ಯೋಜನೆಗೆ ಅಂಕುರಾರ್ಪಣ ಆದಂತೆ ಕಾಣಿಸುತ್ತಿದೆ. ಮಾಹಿತಿ ಹಕ್ಕು ಕಾರ್ಯಕರ್ತರ ಬಗ್ಗೆ ವಿಧಾನ ಸೌಧದಲ್ಲಿ ಇತ್ತೀಚೆಗೆ ಅಪಸ್ವರ ಕೇಳಿಬಂದಿತ್ತು. “ಆರ್‌ಟಿಐ ಕಾರ್ಯಕರ್ತರು ಬ್ಲ್ಯಾಕ್‌ಮೇಲರ್‌ಗಳು, ಬೆದರಿಕೆ ಹಾಕ್ತಾರೆ" ಎಂಬರ್ಥದಲ್ಲಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳರು ಆರೋಪಿಸಿದರು.

Marilinga M

26 ಮಂದಿ ಮಾಹಿತಿ ಹಕ್ಕು ಕಾರ್ಯಕರ್ತರುಗಳನ್ನು ಕಪ್ಪುಪಟ್ಟಿಗೆ ಸೇರಿಸಿರುವುದಾಗಿ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ.ಪಾಟೀಲರು ಮಾಹಿತಿ ನೀಡಿದರು. ಆರ್‌ಟಿಐ ಕಾರ್ಯಕರ್ತರು ಇದ್ದಕ್ಕಿದ್ದಂತೆ ಬ್ಲಾಕ್ ಮೇಲರ್‌ಗಳಾಗಿದ್ದು ಹೇಗೆ? ಕಾಯಿದೆಯನ್ನು ಅವರು ದುರುಪಯೋಗಪಡಿಸಿಕೊಳ್ಳುತ್ತಾರೆ ಎಂಬ ಭಾವನೆ ಬಂದಿದ್ದು ಹೇಗೆ? ಇವರು ಅಧಿಕಾರಿಗಳನ್ನು ಬ್ಲ್ಯಾಕ್‌ಮೇಲ್ ಮಾಡುತ್ತಾರೆ ಎನ್ನುವುದು ಸತ್ಯವೇ ಆಗಿದ್ದರೆ ಅಧಿಕಾರಿಗಳು ದೂರು ಕೊಡ ಬಹುದಿತ್ತಲ್ಲ?! ಮಾಹಿತಿ ಹಕ್ಕು ಕಾರ್ಯಕರ್ತರ ವಿರುದ್ಧ ಇಲ್ಲಿಯವರೆಗೆ ಎಷ್ಟು ದೂರುಗಳು ದಾಖಲಾಗಿವೆ? ಅಧಿಕಾರಿಗಳು ಬ್ಲ್ಯಾಕ್‌ಮೇಲ್‌ಗೆ ಒಳಗಾಗುವ ಅನಿವಾರ್ಯತೆಯಾದರೂ ಏನಿತ್ತು? ಕಾರ್ಯಕರ್ತರನ್ನು ಕರೆದು ಅಧಿಕಾರಿಗಳು ಮಾತುಕತೆ ನಡೆಸುವುದು ಯಾಕೆ? ಅದು ಸೆಟ್ಲ್‌ಮೆಂಟ್‌ ಗಾಗಿ ಎಂದು ಭಾವಿಸಿದರೆ ತಪ್ಪೇ? ಈ ಬಗ್ಗೆ ಚರ್ಚಿಸಲು ಸರಕಾರ ಮುಕ್ತ ಮನಸ್ಸು ಹೊಂದಿರುವುದಾಗಿ ಸದನಕ್ಕೆ ತಿಳಿಸಿದ ಸಚಿವ ಎಚ್.ಕೆ.ಪಾಟೀಲರು, “ಕಾರ್ಯಕರ್ತರು ಕಿರುಕುಳ ಕೊಡುತ್ತಿದ್ದರೆ, ಅವರಿಂದ ಕಾನೂನಿನ ದುರುಪಯೋಗ ಆಗುತ್ತಿದ್ದರೆ ಈ ಬಗ್ಗೆ ತಿದ್ದುಪಡಿ ತರುವ ಬಗ್ಗೆ ಸರಕಾರ ಚರ್ಚಿಸಲು ಸಿದ್ಧ" ಎಂದರು.

“ಮಾಹಿತಿ ಹಕ್ಕು ಕಾರ್ಯಕರ್ತರೊಬ್ಬರು ಇಷ್ಟೇ ಸಂಖ್ಯೆಯ ಅರ್ಜಿ ಸಲ್ಲಿಸಬಹುದು ಎನ್ನುವಂತೆ ಮಿತಿಹಾಕಬೇಕಿದೆ" ಎಂದು ಬಿಜೆಪಿಯ ಸುನೀಲ್ ಕುಮಾರ್ ಸೂಚಿಸಿದರೆ, ಅಧಿಕಾರಿಗಳನ್ನು ಗುರಿ ಯಾಗಿಸಿ ಕಾಯಿದೆಯ ದುರುಪಯೋಗಪಡಿಸಿಕೊಳ್ಳುವ ಕಾರ್ಯಕರ್ತರ ಮೇಲೆ ಸರಕಾರ ಏನು ಕ್ರಮ ಕೈಗೊಳ್ಳುವುದು ಎಂದು ತಿಳಿಯಲು ಬಯಸಿರುವುದಾಗಿ ಕಾಂಗ್ರೆಸ್ ಶಾಸಕ ಮಹಾಂತೇಶ್ ಕೌಜಲಗಿ ಹೇಳಿದರು. ಒಟ್ಟಿನಲ್ಲಿ ಸದನದ ಕಲಾಪದ ಬಹಳ ಸಮಯವನ್ನು ಮಾಹಿತಿ ಹಕ್ಕು ಕಾಯ್ದೆ ಸಂಬಂಧಿತ ಚರ್ಚೆ ಆಕ್ರಮಿಸಿತು.

ಕಾಯಿದೆಯ ಹಿನ್ನೆಲೆ: 1970ರ ದಶಕದಲ್ಲಿ, ರೈತರು ಮತ್ತು ಕಾರ್ಮಿಕರ ಹಕ್ಕುಗಳಿಗಾಗಿ, ರಾಜಸ್ಥಾನದ ‘ಮಜ್ದೂರ್ ಕಿಸಾನ್ ಶಕ್ತಿ ಸಂಘಟನಾ’ (ಎಂಕೆಎಸ್‌ಎಸ್) ಹೋರಾಟವನ್ನು ಆರಂಭಿಸಿತು.

ಇದನ್ನೂ ಓದಿ: MarilingaGowda Malipatil: ಕೈ ಕೊಡುತ್ತಿರುವ ಹೃದಯ...

‘ಸರಕಾರದ ಹಣವನ್ನು ಎಲ್ಲಿ ಖರ್ಚು ಮಾಡುತ್ತಿದ್ದಾರೆ?’ ಎಂಬ ಪ್ರಶ್ನೆಯಿಂದಲೇ ಮಾಹಿತಿ ಹಕ್ಕಿನ ಚಳವಳಿ ಹುಟ್ಟಿಕೊಂಡಿತು. ಭಾರತೀಯ ಸಂವಿಧಾನದ 19(1)(ಎ) ಕಲಂ ‘ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯ’ವನ್ನು ಖಾತ್ರಿಪಡಿಸುತ್ತದೆ. ಮಾಹಿತಿಯನ್ನು ತಿಳಿಯುವ ಹಕ್ಕು ಕೂಡ ಅಭಿವ್ಯಕ್ತಿ ಸ್ವಾತಂತ್ರ್ಯದ ಭಾಗವೇ ಎಂದು ಸುಪ್ರೀಂ ಕೋರ್ಟ್ ತನ್ನ ತೀರ್ಪುಗಳಲ್ಲಿ ಘೋಷಿಸಿತು.

ಕೊನೆಗೆ, 2005ರ ಅಕ್ಟೋಬರ್ 12ರಂದು ಮಾಹಿತಿ ಹಕ್ಕು ಕಾಯಿದೆ ಜಾರಿಗೆ ಬಂತು. ಇದರಿಂದಾಗಿ ಪ್ರತಿಯೊಬ್ಬ ಭಾರತೀಯ ನಾಗರಿಕನಿಗೂ ಸರಕಾರದ ಯಾವುದೇ ಸಾರ್ವಜನಿಕ ಮಾಹಿತಿಯನ್ನು ಕೇಳುವ ಕಾನೂನುಬದ್ಧ ಹಕ್ಕು ದೊರಕಿತು. ಮಾಹಿತಿ ಹಕ್ಕು ಕಾಯಿದೆಯಿಂದಾಗಿ ಆಡಳಿತದಲ್ಲಿ ಪಾರದರ್ಶಕತೆ ಮೂಡುತ್ತದೆ, ಅಧಿಕಾರಿಗಳು ಜನರಿಗೆ ಉತ್ತರಿಸಬೇಕಾದ ಪರಿಸ್ಥಿತಿ ನಿರ್ಮಾಣ ವಾಗುತ್ತದೆ, ಭ್ರಷ್ಟಾಚಾರದ ನಿಯಂತ್ರಣವಾಗುತ್ತದೆ.

ಆರ್‌ಟಿಐ ನೆರವಿನಿಂದಾಗಿ ಹಲವಾರು ಹಗರಣ ಗಳು ಬೆಳಕಿಗೆ ಬಂದಿವೆ. ಆರ್‌ಟಿಐನಿಂದಾಗಿ ಸಾಮಾನ್ಯ ನಾಗರಿಕರೂ ತಮ್ಮ ಹಕ್ಕನ್ನು ಸಾಧಿಸಲು ಸಾಧ್ಯ, ದಾಖಲೆಗಳನ್ನು ಪಡೆದು ನ್ಯಾಯಾ ಲಯದಲ್ಲಿ ಹೋರಾಡಿ ನ್ಯಾಯ ಪಡೆಯಲು ಸಾಧ್ಯ. ಪರಿಸರ, ಮಹಿಳಾ ಹಕ್ಕು, ಕಾರ್ಮಿಕ ಹಕ್ಕು ಚಳವಳಿಗಳಿಗೆ ಮಾಹಿತಿ ಹಕ್ಕು ಕಾಯಿದೆಯ ಮೂಲಕ ಬೆಂಬಲ ದೊರೆಯುತ್ತದೆ. ಇಷ್ಟೇ ಅಲ್ಲದೆ ಸರಕಾರವು ಜನರ ಮುಂದೆ ಉತ್ತರಿಸಬೇಕಾದ ಪರಿಸ್ಥಿತಿ ಸೃಷ್ಟಿಯಾಗಿದೆ.

ಮಾಹಿತಿ ಪಡೆಯುವ ಹಕ್ಕು ಎಲ್ಲರಿಗೂ ಸಮಾನವಾಗಿ ದೊರೆಯುವುದರಿಂದ, ಸರಕಾರದ ಯೋಜನೆ ಗಳು ಜನರಿಗೆ ತಲುಪುತ್ತಿವೆಯೇ ಎಂದು ಪರಿಶೀಲನೆ ಮಾಡುವುದು ಸಾಧ್ಯ. ಆಡಳಿತ ಸುಧಾರಣೆಗೂ ನೆರವಾಗುವ ಮಾಹಿತಿ ಹಕ್ಕು ಕಾಯಿದೆಯು, ಅಧಿಕಾರಿಗಳು ಎಚ್ಚರಿಕೆಯಿಂದ ಕೆಲಸ ಮಾಡುವಂತೆ ಒತ್ತಡ ಹೇರುತ್ತದೆ.

ಮಾಹಿತಿ ಕೇಳುವುದು ತಪ್ಪಾ?: 2005ರಲ್ಲಿ ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದಾಗ ಕಾಂಗ್ರೆಸ್ ಪಕ್ಷವು ತಂದಿದ್ದ ಮಾಹಿತಿ ಹಕ್ಕು ಕಾಯಿದೆಯು ಪ್ರಜಾಪ್ರಭುತ್ವವನ್ನು ಬಲಪಡಿಸಿದ ಒಂದು ಸಾಧನ ಎಂದು ಖಚಿತವಾಗಿ ಹೇಳಬಹುದು. ಈ ಕಾಯಿದೆ ತನ್ನ ಪ್ರಭಾವವನ್ನು ತೋರುತ್ತಿದ್ದಂತೆ ಭ್ರಷ್ಟರು ಪತರಗುಟ್ಟತೊಡಗಿದರು.

“ಇದನ್ನೆಲ್ಲಾ ನಾವು ಹೇಳಬೇಕಾ?" ಎಂದು ಮಾಹಿತಿ ನೀಡಲು ನಿರಾಕರಿಸಿದ ಅವರಿಗೆ, ಕಾಯಿದೆಯ ಬಗ್ಗೆ ಅರಿವಾದಾಗ ‘ಮಾಹಿತಿ ನೀಡಲೇಬೇಕು’ ಎಂಬುದು ತಿಳಿಯಿತು. ಸಾರ್ವಜನಿಕರ ತೆರಿಗೆ ಹಣವನ್ನು ಭ್ರಷ್ಟಾಚಾರಿಗಳು ನುಂಗಿ ನೀರು ಕುಡಿಯುತ್ತಿದ್ದುದಕ್ಕೆ ಕಡಿವಾಣ ಹಾಕಿದ್ದೇ ಮಾಹಿತಿ ಹಕ್ಕು ಕಾಯಿದೆ. ಇದರಿಂದಾಗಿ ಭ್ರಷ್ಟಾಚಾರಕ್ಕೆ ಆಸ್ಪದವಿಲ್ಲದಂತಾಗಿ, ಉಸಿರುಗಟ್ಟಿಸಿಕೊಂಡಿದ್ದವರು ಅದ್ಯಾವ ಲಾಬಿ ಮಾಡಿದರೋ ತಿಳಿಯದು, ಮಾಹಿತಿ ಹಕ್ಕು ಕಾರ್ಯಕರ್ತರ ವಿರುದ್ಧವಾಗಿ ಈಗ ಸದನದಲ್ಲಿ ಸುದ್ದಿಯಾಗಿದೆ.

ಅರ್ಜಿಗಳ ಹೆಚ್ಚಳಕ್ಕೆ ಕಾರಣ: ಮಾಹಿತಿ ಹಕ್ಕು ಕಾರ್ಯಕರ್ತರು ಹೆಚ್ಚೆಚ್ಚು ಅರ್ಜಿ ಸಲ್ಲಿಸುತ್ತಿದ್ದಾರೆ ಎಂಬ ಆರೋಪಗಳು ಕೇಳಿಬರುತ್ತಿವೆ. ಇದೇ ವಿಚಾರಕ್ಕೆ ಶಾಸಕರು ಕೂಡ ದನಿಯೆತ್ತಿದ್ದಾರೆ. ಆದರೆ, ಇದಕ್ಕೆ ಕಾರಣವೇನು ಎಂದು ಹುಡುಕ ಹೊರಟರೆ, ‘ಮಾಹಿತಿ ಆಯೋಗದ ಆಯುಕ್ತರು ನೀಡಿರುವ ಆದೇಶವೇ ಇದಕ್ಕೆ ಕಾರಣ’ ಎಂಬ ಉತ್ತರ ಸಿಗುತ್ತಿದೆ.

ಹೌದು, ‘ಪ್ರಕರಣ ವೊಂದಕ್ಕೆ ಸಂಬಂಧಿಸಿ ಅರ್ಜಿ ಸಲ್ಲಿಸುವವರು ಒಂದು ಅರ್ಜಿಗೆ ಒಂದೇ ಪ್ರಶ್ನೆ ಯನ್ನು ಕೇಳಬೇಕು; ಬೇರೆ ಬೇರೆ ಪ್ರಶ್ನೆಗಳಿದ್ದರೆ ಬೇರೆ ಅರ್ಜಿ ಸಲ್ಲಿಸಬೇಕು’ ಎಂಬುದಾಗಿ ಮಾಹಿತಿ ಆಯೋಗದ ಆಯುಕ್ತರು ಆದೇಶ ನೀಡಿದ್ದಾರೆ. ಹೀಗಾಗಿ ಅರ್ಜಿದಾರರು ಹೆಚ್ಚೆಚ್ಚು ಅರ್ಜಿ ಸಲ್ಲಿಸು ವಂತಾಗುತ್ತಿದೆ. ಉದಾಹರಣೆಗೆ, ಹಿಂದೆಲ್ಲಾ ಕಾಮಗಾರಿಯೊಂದರ ಬಗ್ಗೆ ಮಾಹಿತಿ ಬೇಕೆಂದರೆ, ಎಲ್ಲ ಪ್ರಶ್ನೆಗಳನ್ನೂ ಒಳಗೊಂಡ ಒಂದು ಅರ್ಜಿಯನ್ನು ಸಲ್ಲಿಸಿದರೆ ಸಾಕಿತ್ತು.

ಆದರೆ ಈಗ, ಒಂದು ಕಾಮಗಾರಿಯ ಆದೇಶ, ಎಂ.ಬಿ., ಎಸ್ಟಿಮೇಟ್, ಬಿಲ್, ಬಿಒಕ್ಯೂ, ಟೆಕ್ನಿಕಲ್ ಇವ್ಯಾಲ್ಯುಯೇಷನ್ ಹೀಗೆ ಪ್ರತಿ ಮಾಹಿತಿಗೆ ಪ್ರತ್ಯೇಕ ಅರ್ಜಿ ಸಲ್ಲಿಸಬೇಕಾಗಿದೆ. ಮಾಹಿತಿ ಹಕ್ಕು ಕಾರ್ಯಕರ್ತರಿಗೆ ಇಂಥ ಅನಿವಾರ್ಯ ಪರಿಸ್ಥಿತಿಯನ್ನು ಒಡ್ಡಿರುವುದು ಸ್ವತಃ ಆಯೋಗವೇ.

ಹೀಗಾಗಿ, ಆಯೋಗದ ಆದೇಶವನ್ನು ಯಥಾವತ್ತಾಗಿ ಪಾಲಿಸುವ ಅಧಿಕಾರಿಗಳು, ಒಂದೇ ಅರ್ಜಿ ಯಲ್ಲಿ ಹಲವು ಮಾಹಿತಿಯನ್ನು ಕೇಳಿದಾಗ, ಆಯೋಗದ ಆದೇಶವನ್ನು ಉಲ್ಲಂಘಿಸಿ ಜಾರಿಕೊಳ್ಳು ತ್ತಿದ್ದಾರೆ. ಈ ಪರಿಪಾಠವೂ ಅರ್ಜಿಗಳ ಸಂಖ್ಯೆಯಲ್ಲಿನ ಹೆಚ್ಚಳಕ್ಕೆ ಕಾರಣ ಎಂಬುದು ಬಹುತೇಕರಿಗೆ ತಿಳಿದಿಲ್ಲ!

ತನಿಖಾ ಪತ್ರಿಕೋದ್ಯಮದ ಅಸ್ತ್ರ: ಮಾಹಿತಿ ಹಕ್ಕು ಕಾಯಿದೆಯು ತನಿಖಾ ಪತ್ರಿಕೋದ್ಯಮಕ್ಕೆ ಹೆಚ್ಚಿನ ಬಲ ತಂದುಕೊಟ್ಟಿತು. ಭ್ರಷ್ಟಾಚಾರಿಗಳಿಗೆ, ಸಮಾಜದ್ರೋಹಿಗಳಿಗೆ ಆರ್‌ಟಿಐ ಕಾರ್ಯ ಕರ್ತರು ಸಿಂಹಸ್ವಪ್ನರಾದರು. ಇಂಥ ಕೆಲವು ಕಾರ್ಯಕರ್ತರ ಮೇಲೆ ದಾಳಿಗಳೂ ನಡೆದವು; ಆದರೆ ಅವು ಕಾರ್ಯಕರ್ತರ ಧೈರ್ಯವನ್ನು ಕುಗ್ಗಿಸಲಿಲ್ಲ. ಪರಿಣಾಮವಾಗಿ ಭ್ರಷ್ಟಾಚಾರದ ಹಲವು ನಿದರ್ಶನಗಳು ಬಯಲಾದವು.

ಪ್ರಮುಖ ಪತ್ರಿಕೆಗಳ ಮುಖಪುಟದಲ್ಲಿ ಬಂದ ತನಿಖಾ ವರದಿಗಳಿಗೆ, ಮಾಹಿತಿ ಹಕ್ಕು ಕಾಯಿದೆಯ ಮೂಲಕ ಪಡೆದ ಮಾಹಿತಿಗಳೇ ಆಧಾರವಾಗಿದ್ದವು. ಹಾಗಾಗಿ ಇಂಥ ಅಗತ್ಯ ಮಾಹಿತಿಗಳನ್ನು ಕೇಳುವುದು ಕಾರ್ಯಕರ್ತರ ಹಕ್ಕಾಗಿದೆ. ಅರವಿಂದ ಕೇಜ್ರಿವಾಲರು ದೆಹಲಿಯ ಮುಖ್ಯಮಂತ್ರಿ ಯಾಗಲು ಕಾರಣವಾದದ್ದೇ ಮಾಹಿತಿ ಹಕ್ಕು ಕಾಯ್ದೆ ಎಂಬುದನ್ನು ಮರೆಯಲಾಗದು.

ಆದರೆ ಮಾಹಿತಿಯನ್ನು ಕೇಳುವುದೇ ತಪ್ಪಾಗಿದ್ದರೆ, ಸರಕಾರವೇ ಅಗತ್ಯ ಮಾಹಿತಿಗಳನ್ನು ಪ್ರಕಟಿಸಲಿ, ಅವನ್ನು ವೆಬ್‌ಸೈಟ್‌ಗಳಲ್ಲಿ ಹಾಕಲಿ. ಎಲ್ಲಾ ಕಾಮಗಾರಿಗಳ ವಿವರ, ಅವಕ್ಕೆ ಬಿಡುಗಡೆಯಾ ಗಿರುವ ಹಣ, ಗುತ್ತಿಗೆದಾರರ ವಿವರ, ಎಸ್ಟಿಮೇಟ್, ಎಂ.ಬಿ. ಹೀಗೆ ವಿವಿಧ ಮಾಹಿತಿ ಗಳನ್ನು 3 ತಿಂಗಳಿಗೊಮ್ಮೆ ‘ಪಬ್ಲಿಕ್ ಡೊಮೈನ್’ಗೆ ಬಿಡುತ್ತಿದ್ದರೆ ಆಗ ಯಾರು ತಾನೇ ಮಾಹಿತಿ ಕೇಳುತ್ತಾರೆ?

ಅವ್ಯವಹಾರ ತಿಳಿಯುವುದು ಹೇಗೆ?: ಹಾಗೆ ನೋಡಿದರೆ, ಎಷ್ಟೋ ಮಂದಿ ಮಾಹಿತಿ ಹಕ್ಕು ಕಾರ್ಯಕರ್ತರು ಹಲವು ಶಾಸಕರೊಂದಿಗೆ ಮಧುರ ಬಾಂಧವ್ಯವನ್ನು ಹೊಂದಿದ್ದಾರೆ. ಎಲ್ಲ ಪಕ್ಷ ಗಳಲ್ಲಿಯೂ ‘ಆರ್‌ಟಿಐ ವಿಂಗ್’ ಇದೆ. ಆದರೆ ಸಮಾಜದಲ್ಲಿ ಭ್ರಷ್ಟಾಚಾರವು ಹಾಸುಹೊಕ್ಕಾಗಿದೆ ಎಂಬುದು ‘ಓಪನ್ ಸೀಕ್ರೆಟ್’. ವಿರೋಧಿಗಳ ಭ್ರಷ್ಟಾಚಾರವನ್ನು ಬಯಲಿಗೆಳೆಯುವುದರಲ್ಲಿ ಎಲ್ಲರಿಗೂ ಆಸಕ್ತಿ ಇದೆ; ಆದರೆ ಅದು ತಮ್ಮ ಬುಡಕ್ಕೆ ಸಂಚಕಾರ ತರುತ್ತದೆ ಎಂದಾದರೆ ಆ ಕಾಯಿದೆ ಇವರಿಗೆ ಬೇಡ!

ಎಷ್ಟೋ ಬಾರಿ ಕೆಲ ಶಾಸಕರೇ, ನಿರ್ದಿಷ್ಟ ಗುತ್ತಿಗೆದಾರರ ಬಗ್ಗೆ ಮಾಹಿತಿ ಹಕ್ಕು ಕಾರ್ಯಕರ್ತರಿಗೆ ಸೂಚನೆ ನೀಡಿ, ಮಾಹಿತಿ ಕೇಳಿಸುತ್ತಾರೆ ಎಂಬ ವದಂತಿಗಳಿವೆ. ವೃತ್ತಿವೈಷಮ್ಯದ ಕಾರಣಕ್ಕೆ ಬಿಬಿಎಂಪಿಯ ಕೆಲ ಎಂಜಿನಿಯರುಗಳೇ ಮಾಹಿತಿ ಹಕ್ಕು ಕಾರ್ಯಕರ್ತರನ್ನು ಛೂ ಬಿಡುವುದೂ ಇದೆಯಂತೆ. ಇದು ಸತ್ಯ ಎನಿಸುತ್ತದೆ. ಇಲ್ಲವಾದರೆ, ಎಲ್ಲೋ ಇರುವ ಮಾಹಿತಿ ಹಕ್ಕು ಕಾರ್ಯಕರ್ತ ರಿಗೆ ಆಡಳಿತದ ಒಳಹಂತಗಳಲ್ಲಿ ನಡೆದ ಅವ್ಯವಹಾರಗಳ ಬಗ್ಗೆ ತಿಳಿಯುವುದಾದರೂ ಹೇಗೆ?!

ಅಷ್ಟಕ್ಕೂ, ಮಾಹಿತಿ ಹಕ್ಕು ಕಾರ್ಯಕರ್ತರು ಹೊರಗೆಳೆಯುವುದು ಅವ್ಯವಹಾರಗಳನ್ನು ತಾನೇ? ಅದರಿಂದ ಸಮಾಜಕ್ಕೆ ಒಳ್ಳೆಯದೇ ತಾಬೇ? ಮಾಹಿತಿ ಹಕ್ಕು ಕಾಯಿದೆಯಿಂದಾಗಿ ಭ್ರಷ್ಟರು ಭಯ ಗೊಂಡಿರುವುದು ಸತ್ಯವಲ್ಲವೇ? ಈ ಕಾಯಿದೆ ಬಂದ ನಂತರ ಭ್ರಷ್ಟರ ಸಂಖ್ಯೆ ಕಡಿಮೆಯಾಗಿರು ವುದೂ ಅಷ್ಟೇ ಸತ್ಯವಲ್ಲವೇ?

ಇಷ್ಟವಿಲ್ಲದಿದ್ದರೆ ಬಿಡಿ: ಮಾಹಿತಿ ಹಕ್ಕು ಕಾಯಿದೆಯು ಅಷ್ಟೊಂದು ನೋವು ಕೊಡುತ್ತದೆ ಎಂದಾ ದರೆ ಅದನ್ನು ತೆಗೆದುಬಿಡಿ. ಮಾಹಿತಿ ಹಕ್ಕು ಕಾರ್ಯಕರ್ತನೊಬ್ಬ ಮಾಹಿತಿಯನ್ನು ಕೇಳುವುದು ಅಪರಾಧವಾಗಿದ್ದರೆ ಅಂಥ ಕಾಯಿದೆ ಯಾಕಾದರೂ ಇರಬೇಕು?

*ಸಮಾಜ ಏನಾದರೆ ನಮಗೇನು? ಸಮಾಜದಲ್ಲಿ ಭ್ರಷ್ಟಾಚಾರ ತಾಂಡವವಾಡಿದರೆ ಯಾರಿಗೇನು ಕಷ್ಟ? ಎಂಬ ಭಾವನೆ ಇರುವವರು ಈ ಕಾಯಿದೆಯನ್ನು ರದ್ದು ಮಾಡಲು ಯತ್ನಿಸುತ್ತಿದ್ದಾರೆ*. ಅದಕ್ಕೆ ಬೆಂಬಲ ಸಿಗಬಹುದು. ಆರ್‌ಟಿಐ ಕಾರ್ಯಕರ್ತರನ್ನು ವಿರೋಧಿಸುವ ಬದಲು, ಈ ಕಾಯಿದೆಯ ಸಮರ್ಥ ಬಳಕೆಗೆ ಅಧಿಕಾರಿಗಳಿಗೆ ತರಬೇತಿ ನೀಡಬೇಕು. ಕಾರ್ಯಕರ್ತರು ಯವ ಮಾಹಿತಿ ಕೇಳಿದ್ದಾರೆ ಎಂದು ಅರ್ಥಮಾಡಿಕೊಂಡು ಸರಿಯಾಗಿ ಮಾಹಿತಿ ನೀಡಿ ಕಳುಹಿಸುವುದು ಒಂದು ಜವಾಬ್ದಾರಿ.

ಏನಾದರೂ ಕುಂಟು ನೆಪ ಹೇಳಿ ಮಾಹಿತಿ ನೀಡದೆ ಬರಿಗೈಲಿ ಕಳುಹಿಸಿದರೆ, ಆ ಕಾರ್ಯಕರ್ತ ಮತ್ತೆ ಬರುತ್ತಾನೆ ಎನ್ನುವುದು ನೆನಪಿರಲಿ. ಮಾಹಿತಿ ಹಕ್ಕು ಕಾರ್ಯಕರ್ತರೂ ಸ್ವಲ್ಪ ಯೋಚಿಸಬೇಕು. ತಾವು ಯಾವ ಮಾಹಿತಿ ಕೇಳಬೇಕು, ಯಾವುದನ್ನು ಕೇಳಬಾರದು ಎಂಬುದು ಅವರಿಗೆ ಅರಿವಿರ ಬೇಕು.

ಅಧಿಕಾರಿಗಳನ್ನು ಬೆದರಿಸುವ ಉದ್ದೇಶವಿಟ್ಟುಕೊಂಡು ಅನವಶ್ಯಕ ಮಾಹಿತಿಯನ್ನು ಕೇಳುವ ಚಾಳಿಯನ್ನು ಕೈಬಿಡಬೇಕು. ಅಧಿಕಾರಿಯು ಅಕ್ರಮ ಎಸಗಿದ್ದ ಸುಳಿವು ಸಿಕ್ಕಿದರೆ, ಆ ಅಕ್ರಮವನ್ನು ಬಯಲಿಗೆಳೆ ಯಬಲ್ಲಂಥ ಮಾಹಿತಿಯನ್ನಷ್ಟೇ ಕೇಳಬೇಕು. ಬಡಪಾಯಿಯೊಬ್ಬ ತನ್ನ ಜೀವಮಾನದ ಉಳಿತಾಯವನ್ನೆಲ್ಲಾ ಸುರಿದು ಒಂದು ಸಣ್ಣ ಸೈಟಿನಲ್ಲಿ ಮನೆ ಕಟ್ಟಿಸುವಾಗ ಆತನಿಗೆ ಕಿರುಕುಳ ನೀಡಬಾರದು.

ಆತ ಕಾನೂನನ್ನು ಅತಿಕ್ರಮಿಸಿದ್ದರೆ ಆತನಿಗೆ ತಿಳಿವಳಿಕೆ ನೀಡಿ ಸರಿದಾರಿಯಲ್ಲಿ ನಡೆಸಬೇಕೇ ಹೊರತು, ಕಾನೂನಿನ ಬಲದಿಂದ ಆತನಿಗೆ ಕಾಟ ಕೊಡಬಾರದು. ‘ಜನರಿಂದ ಜನರಿಗಾಗಿ ಜನರ ಆಡಳಿತ’ ಎಂಬುದು ಪ್ರಜಾಪ್ರಭುತ್ವದ ಅಡಿಪಾಯ. ಆದರೆ ಜನರ ಹಣ ಹೇಗೆ ಬಳಕೆಯಾಗುತ್ತಿದೆ, ಅಧಿಕಾರಿಗಳು ಯಾವ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂಬುದರ ಬಗ್ಗೆ ತಿಳಿಯುವ ಅವಕಾಶವೇ ಇಲ್ಲದಿದ್ದರೆ ಅಂಥ ಪ್ರಜಾಪ್ರಭುತ್ವವು ನಿರರ್ಥಕವೆನಿಸುತ್ತದೆ.

ಒಟ್ಟಿನಲ್ಲಿ ಹೇಳುವುದಾದರೆ, ಮಾಹಿತಿ ಹಕ್ಕು ಕಾಯಿದೆಯು ಭ್ರಷ್ಟಾಚಾರವನ್ನು ನಿರ್ಮೂಲನೆ ಮಾಡಿದೆ ಎನ್ನುವಂತಿಲ್ಲ, ಆದರೆ ಅದಕ್ಕೆ ಒಂದು ಮಟ್ಟಿಗಿನ ಕಡಿವಾಣ ಹಾಕಿರುವುದಂತೂ ಹೌದು. ಅಷ್ಟರಮಟ್ಟಿಗೆ ಈ ಕಾಯಿದೆ ಯಶಸ್ವಿಯಾಗಿದೆ. ಆದರೆ, ಈ ಕಾಯಿದೆಯ ಬಲದಿಂದ ಆಗುವ ಸಣ್ಣ ಪುಟ್ಟ ಲೋಪಗಳನ್ನೇ ದೊಡ್ಡದಾಗಿ ಬಿಂಬಿಸಿ, ಕಾಯಿದೆಯನ್ನೇ ರದ್ದುಮಾಡಲು ಹೊರಟರೆ ಅದು ಖಂಡಿತವಾಗಿಯೂ ಸಮಾಜವಿರೋಧಿ ಕೆಲಸವೆನಿಸಿಕೊಳ್ಳುತ್ತದೆ.

(ಲೇಖಕರು ಸಾಮಾಜಿಕ ಹೋರಾಟಗಾರರು)