Raghava Sharma Nidle Column: ರಾಜಕೀಯ ಒತ್ತಡಕ್ಕೆ ಜಗ್ಗದೆ ಹೋರಾಡಿದ್ದ ಕಾನೂನು ದಿಗ್ಗಜ !
ತಮಿಳುನಾಡಿನ ಅಂದಿನ ಮುಖ್ಯಮಂತ್ರಿ ಜೆ.ಜಯಲಲಿತಾ ವಿರುದ್ಧದ ಅಕ್ರಮ ಆಸ್ತಿ ಗಳಿಕೆ ಪ್ರಕರಣ ಹಾಗೂ ಲಂಡನ್ ಹೋಟೆಲ್ ಪ್ರಕರಣಗಳನ್ನು ತಮಿಳುನಾಡಿನಿಂದ ಬೆಂಗಳೂರಿಗೆ ವರ್ಗಾಯಿಸ ಲಾಗಿತ್ತು. ಈ ಎರಡು ಮಹತ್ವದ ಪ್ರಕರಣಗಳಲ್ಲಿ ವಿಶೇಷ ಸರ್ಕಾರಿ ಅಭಿಯೋಜಕರಾಗಿ ಕಾರ್ಯ ನಿರ್ವಹಿಸುವ ಜವಾಬ್ದಾರಿಯನ್ನು ನೀವು (ಬಿ.ವಿ. ಆಚಾರ್ಯ) ಸ್ವೀಕರಿಸಬೇಕು ಎನ್ನುವುದು ಮುಖ್ಯ ನ್ಯಾಯಮೂರ್ತಿ ಸೋಧಿ ಅವರ ಆಶಯವಾಗಿತ್ತು
-
ಜನಪಥ
ರಾಜ್ಯೋತ್ಸವ ಪ್ರಶಸ್ತಿಗಾಗಿ ತೀವ್ರ ಲಾಬಿ ಹಾಗೂ ಒತ್ತಡಗಳ ಮಧ್ಯೆ ಕಾನೂನು ಕ್ಷೇತ್ರದಲ್ಲಿ ದಶಕಗಳ ಕಾಲ ಸೇವೆ ಸಲ್ಲಿಸಿರುವ ಹಿರಿಯ ನ್ಯಾಯವಾದಿ ಬಿ.ವಿ. ಆಚಾರ್ಯ ಅವರಂತಹ ಅನುಭವಿ, ತತ್ವನಿಷ್ಠ ಹಾಗೂ ಗೌರವಾನ್ವಿತ ವ್ಯಕ್ತಿಗೆ ರಾಜ್ಯೋತ್ಸವ ಪ್ರಶಸ್ತಿ ನೀಡಿ ಸನ್ಮಾನಿಸಿರುವುದು ಪ್ರಶಸ್ತಿಯ ಘನತೆಯನ್ನು ಮತ್ತಷ್ಟು ಹೆಚ್ಚಿಸಿದೆ.
ರಾಜ್ಯ ಕಾನೂನು ಕ್ಷೇತ್ರಕ್ಕೆ ತಮ್ಮದೇ ನೆಲೆಯಲ್ಲಿ ಕೊಡುಗೆ ನೀಡಿ ಹೆಜ್ಜೆ ಗುರುತು ಮೂಡಿಸಿರುವ ಸಾಲಿನಲ್ಲಿ ಪ್ರಮುಖರಲ್ಲೊಬ್ಬರಾಗಿರುವ ಬಿ.ವಿ.ಆಚಾರ್ಯರು Man of Intergrity ಎನ್ನುವುದರಲ್ಲಿ ಅನುಮಾನವೇ ಇಲ್ಲ. ಅಕ್ರಮ ಆಸ್ತಿ ಸಂಪಾದನೆ ಪ್ರಕರಣದಲ್ಲಿ ತಮಿಳುನಾಡಿನ ಮಾಜಿ ಸಿಎಂ ಜೆ. ಜಯಲಲಿತಾ ಅವರನ್ನು ಅಪರಾಧಿ ಎಂದು ಸಾಬೀತು ಮಾಡುವುದರಲ್ಲಿ ಅವರು ತೋರಿದ ಬದ್ಧತೆ ಹಾಗೂ ಕೆಚ್ಚೆದೆ ಇದಕ್ಕೊಂದು ಉದಾಹರಣೆ ಅಷ್ಟೇ.
ಈ ಪ್ರಕರಣಕ್ಕೆ ಸಂಬಂಧಿಸಿ ಸುಪ್ರೀಂ ಕೋರ್ಟ್ಗೆ ವಾದ ಮಂಡಿಸಲು ಬರುತ್ತಿzಗ ಅವರನ್ನು ಆಗಾಗ್ಗೆ ಭೇಟಿಯಾಗುವ ಅವಕಾಶ ನನಗೆ ಸಿಕ್ಕಿತ್ತು. ಜಯಲಲಿತಾ ಬೆಂಬಲಿಗರು ಹಾಗೂ ರಾಜಕೀಯ ವಲಯ ದಿಂದ ವ್ಯಾಪಕ ಬೆದರಿಕೆ, ಒತ್ತಡ ಬಂದರೂ ಜಗ್ಗದೆ ಹೋರಾಟ ಮಾಡಿದ್ದ ಬಿ.ವಿ. ಆಚಾರ್ಯರು ಈ ಪೀಳಿಗೆಯ ವಕೀಲರಿಗೆ ಮಾದರಿ. 2005ರ ಜನವರಿ ತಿಂಗಳ ಒಂದು ಮಧ್ಯಾಹ್ನ. ಬಿ.ವಿ. ಆಚಾರ್ಯರು ಮನೆಯಲ್ಲಿ ಊಟ ಮಾಡುತ್ತಿದ್ದಾಗ ಅಂದಿನ ಕರ್ನಾಟಕ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳ ಕಚೇರಿಯಿಂದ ತುರ್ತು ದೂರವಾಣಿ ಕರೆ ಬಂದು, ಮಧ್ಯಾಹ್ನ 2.30ಕ್ಕೆ ನ್ಯಾಯಾಲಯದ ಕಲಾಪ ಆರಂಭವಾಗುವ ಮೊದಲೇ ಮುಖ್ಯ ನ್ಯಾಯಮೂರ್ತಿಗಳನ್ನು ಭೇಟಿಯಾಗಬೇಕೆಂಬ ಸೂಚನೆ ದೊರೆಯುತ್ತದೆ. ಹೈಕೋರ್ಟ್ಗೆ ತೆರಳಿದ ಆಚಾರ್ಯರಿಗೆ ಅಲ್ಲಿ ಕಾದಿದ್ದದ್ದು ಅವರ ವೃತ್ತಿಜೀವನದ ಅತ್ಯಂತ ಮಹತ್ವದ ಜವಾಬ್ದಾರಿಗಳಂದಾಗಿತ್ತು.
ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ನವದೀಪ್ ಕುಮಾರ್ ಸೋಧಿ ಅವರ ಕೊಠಡಿಯಲ್ಲಿ ನ್ಯಾಯ ಮೂರ್ತಿಗಳಾದ ಎಸ್.ಆರ್. ಬನ್ನೂರ್ ಮಠ್, ಬಿ. ಪದ್ಮರಾಜ್ ಹಾಗೂ ಎ.ಎಂ.ಫಾರೂಕ್ ಕೂಡ ಇದ್ದರು.
ಇದನ್ನೂ ಓದಿ: Raghava Sharma Nidle Column: ಮೋದಿ ಕಾ ಬಾಪ್ ಎನ್ನುವಷ್ಟು ಹತಾಶೆಯೇಕೆ ?
ತಮಿಳುನಾಡಿನ ಅಂದಿನ ಮುಖ್ಯಮಂತ್ರಿ ಜೆ.ಜಯಲಲಿತಾ ವಿರುದ್ಧದ ಅಕ್ರಮ ಆಸ್ತಿ ಗಳಿಕೆ ಪ್ರಕರಣ ಹಾಗೂ ಲಂಡನ್ ಹೋಟೆಲ್ ಪ್ರಕರಣಗಳನ್ನು ತಮಿಳುನಾಡಿನಿಂದ ಬೆಂಗಳೂರಿಗೆ ವರ್ಗಾಯಿಸ ಲಾಗಿತ್ತು. ಈ ಎರಡು ಮಹತ್ವದ ಪ್ರಕರಣಗಳಲ್ಲಿ ವಿಶೇಷ ಸರ್ಕಾರಿ ಅಭಿಯೋಜಕರಾಗಿ ಕಾರ್ಯನಿರ್ವಹಿಸುವ ಜವಾಬ್ದಾರಿಯನ್ನು ನೀವು (ಬಿ.ವಿ. ಆಚಾರ್ಯ) ಸ್ವೀಕರಿಸಬೇಕು ಎನ್ನುವುದು ಮುಖ್ಯ ನ್ಯಾಯಮೂರ್ತಿ ಸೋಧಿ ಅವರ ಆಶಯವಾಗಿತ್ತು. ಇತರೆ ವಕೀಲರ ಹೆಸರುಗಳ ಪಟ್ಟಿಯನ್ನು ಸರ್ಕಾರ ಕಳುಹಿಸಿದ್ದರೂ, ಅದಕ್ಕೆ ಸಮ್ಮತಿ ನೀಡಲು ಚೀಫ್ ಜಸ್ಟಿಸ್ ಎನ್.ಕೆ.ಸೋಧಿ ಮನಸ್ಸು ಮಾಡಿರಲಿಲ್ಲ. ಈ ಪ್ರಕರಣಗಳು ಅತ್ಯಂತ ಸೂಕ್ಷ್ಮ ಹಾಗೂ ರಾಷ್ಟ್ರಮಟ್ಟದಲ್ಲಿ ಗಮನ ಸೆಳೆದವಾಗಿದ್ದು, ವಿವಿಧ ಕಡೆಯಿಂದ ಒತ್ತಡಗಳು ಎದುರಾಗುವ ಸಾಧ್ಯತೆ ಇದೆ.
ಅಂತಹ ಎಲ್ಲ ಒತ್ತಡಗಳನ್ನು ಎದುರಿಸುವ ಸಾಮರ್ಥ್ಯ, ಪ್ರಶ್ನಾತೀತ ಪ್ರಾಮಾಣಿಕತೆ ಹಾಗೂ ಕಾನೂನು ಪರಿಣತಿ ಹೊಂದಿರುವ ವ್ಯಕ್ತಿಯೇ ಈ ಜವಾಬ್ದಾರಿ ನಿರ್ವಹಿಸಬೇಕೆಂಬುದು ಎನ್.ಕೆ.ಸೋಧಿ ಅವರ ಅಭಿಪ್ರಾಯವಾಗಿತ್ತು. ನ್ಯಾಯಮೂರ್ತಿಗಳ ಈ ವಿಶ್ವಾಸ ಆಚಾರ್ಯ ಅವರಿಗೆ ಸಂತಸ ತಂದಿತ್ತು ಮತ್ತು ತಮ್ಮ ಪ್ರಾಮಾಣಿಕತೆ-ವೃತ್ತಿಪರ ಸಾಮರ್ಥ್ಯದ ಮೇಲೆ ನ್ಯಾಯಾಂಗದ ಹಿರಿಯರು ಇಟ್ಟಿದ್ದ ನಂಬಿಕೆ ಅವರಿಗೆ ಹೆಮ್ಮೆಯ ವಿಷಯವಾಗಿತ್ತು.
ಸುಪ್ರೀಂ ಕೋರ್ಟ್ ಕೂಡ ಪ್ರಕರಣಗಳನ್ನು ಕರ್ನಾಟಕಕ್ಕೆ ವರ್ಗಾಯಿಸುವ ಸಂದರ್ಭದಲ್ಲಿ ರಾಜ್ಯದ ಮುಖ್ಯ ನ್ಯಾಯಮೂರ್ತಿಗಳೊಂದಿಗೆ ಸಮಾಲೋಚಿಸಿ, ಅಪರಾಧ ಪ್ರಕರಣಗಳ ವಿಚಾರಣೆಯಲ್ಲಿ ಅನುಭವ ಹೊಂದಿರುವ ಹಿರಿಯ ವಕೀಲರನ್ನು ಸರ್ಕಾರಿ ಅಭಿಯೋಜಕರನ್ನಾಗಿ ನೇಮಿಸುವಂತೆ ನಿರ್ದೇಶಿಸಿತ್ತು.
ಅಂತಿಮವಾಗಿ ಬಿ.ವಿ. ಆಚಾರ್ಯ ಅವರನ್ನು 2005ರ ಫೆಬ್ರವರಿ 19ರಂದು ಕರ್ನಾಟಕ ಸರ್ಕಾರ ಅಧಿಕೃತ ಅಧಿಸೂಚನೆಯ ಮೂಲಕ ವಿಶೇಷ ಸರ್ಕಾರಿ ಅಭಿಯೋಜಕರನ್ನಾಗಿ ನೇಮಿಸಿತು. ಒಬ್ಬ ವಕೀಲನ ವೃತ್ತಿಜೀವನದಲ್ಲಿ ಹುದ್ದೆ, ಅಧಿಕಾರ ಹಾಗೂ ಪ್ರಶಸ್ತಿಗಳಿಗಿಂತ ನ್ಯಾಯಾಂಗದ ವಿಶ್ವಾಸ ಗಳಿಸುವುದು ಎಷ್ಟು ಮಹತ್ವದ್ದು ಎಂಬುದಕ್ಕೆ ಈ ಘಟನೆ ಒಂದು ಉದಾಹರಣೆ.
ಜಯಲಲಿತಾ ರಾಷ್ಟ್ರ ರಾಜಕಾರಣದಲ್ಲೂ ಪ್ರಭಾವಿಯಾಗಿದ್ದರಿಂದ ಅವರಿಗೆ ಸಂಬಂಧಿಸಿದ ಪ್ರಕರಣದಲ್ಲಿ ಆಚಾರ್ಯರ ಪಯಣ ಸುಲಭದ್ದಾಗಿರಲಿಲ್ಲ. ಹಲವು ಸವಾಲು, ಸಂಕಷ್ಟಗಳು ಹಾಗೂ ಒತ್ತಡಗಳನ್ನು ಎದುರಿಸಬೇಕಾಯಿತು. 2012ರ ಆಗ 13ರಂದು ವಿಶೇಷ ಸರ್ಕಾರಿ ಅಭಿಯೋಜಕ ಹುದ್ದೆಗೆ ರಾಜೀನಾಮೆ ನೀಡುವವರೆಗಿನ ತಮ್ಮ ಪಯಣ ಅತ್ಯಂತ ಕಠಿಣವಾಗಿತ್ತು ಎಂಬುದಾಗಿ ಆಚಾರ್ಯರು ತಮ್ಮ ಆತ್ಮಕಥನ All from Memory ಯಲ್ಲಿ ಬಹಳ ಚೆನ್ನಾಗಿ ವಿವರಿಸಿದ್ದಾರೆ.
2011ರ ಮೇ ತಿಂಗಳಲ್ಲಿ ಜಯಲಲಿತಾ ಮತ್ತೊಮ್ಮೆ ರಾಜ್ಯದ ಮುಖ್ಯಮಂತ್ರಿಯಾದರು. ಪರಿಣಾಮ ವಾಗಿ, ಜಯಲಲಿತಾರ ಅಕ್ರಮ ಆಸ್ತಿ ಸಂಪಾದನೆ ಪ್ರಕರಣದ ತನಿಖೆ ಮಾಡಿದ್ದ ತಮಿಳುನಾಡಿನ Directorate of Vigilence Anti Corruption (DVAC) ವಿಭಾಗದ ವರ್ತನೆಗಳೂ ಬದಲಾಗತೊಡಗಿ ದವು. ಪ್ರಕರಣದಲ್ಲಿ ಹೆಚ್ಚುವರಿ ತನಿಖೆಯಾಗಬೇಕು ಎಂಬ ಡಿವಿಎಸಿ ನಿಲುವನ್ನು ಆಚಾರ್ಯರು ಒಪ್ಪಲಿಲ್ಲ. ಇದು ಪ್ರಕರಣ ವನ್ನು ಮತ್ತಷ್ಟು ವಿಳಂಬಗೊಳಿಸುವ ಹುನ್ನಾರ ಎಂದು ಅವರು ಭಾವಿಸಿದ್ದರು. ಇದು ಕೋರ್ಟ್ ಮೆಟ್ಟಿಲೇರಿ, ಅಲ್ಲಿಂದಲೂ ಹೆಚ್ಚುವರಿ ತನಿಖೆ ಅಗತ್ಯವಿಲ್ಲ ಎಂದು ಆದೇಶ ಹೊರಬಿತ್ತು.
ಹೈಕೋರ್ಟ್ನಲ್ಲಿ ಡಿವಿಎಸಿ ಪ್ರತ್ಯೇಕ ವಕೀಲರನ್ನು ನೇಮಿಸಿಕೊಳ್ಳುವ ಅಗತ್ಯವೂ ಇಲ್ಲ ಎಂದು ಸ್ಪಷ್ಟಪಡಿಸಲಾಯಿತು. ಇದರಿಂದ ಆಚಾರ್ಯರ ನಿಲುವಿಗೆ ನ್ಯಾಯಾಲಯದ ಮುದ್ರೆ ಸಿಕ್ಕಿತ್ತು. ಪ್ರಕರಣದಲ್ಲಿ ಹೇಳಿಕೆ ದಾಖಲಿಸಿಕೊಳ್ಳಲು ವೈಯಕ್ತಿಕ ಹಾಜರಾತಿಯಿಂದ ವಿನಾಯಿತಿ ಪಡೆದುಕೊಳ್ಳಲೂ ಜಯಲಲಿತಾ ನ್ಯಾಯಾಂಗದ ವಿಫಲರಾಗಿದ್ದರು. ಇದಕ್ಕೆಲ್ಲವೂ ಎಸ್ಪಿಪಿ ಯಾಗಿದ್ದ ಆಚಾರ್ಯ ಅವರ ಪ್ರಖರ ವಾದ ಮಂಡನೆಯೇ ಕಾರಣವಾಗಿತ್ತು.
ಹೀಗಾಗಿ, ಆಚಾರ್ಯರನ್ನು ಎಸ್ಪಿಪಿ ಹುದ್ದೆಯಿಂದ ಕೆಳಗಿಳಿಸದಿದ್ದರೆ ಸೋಲು ಕಟ್ಟಿಟ್ಟಬುತ್ತಿ ಎಂದೂ ಜಯಲಲಿತಾ ಮತ್ತು ಬೆಂಬಲಿಗರಿಗೆ ಅನ್ನಿಸತೊಡಗಿತ್ತು. 2011ರಲ್ಲಿ ಆಚಾರ್ಯ ಅವರು ರಾಜ್ಯ ಸರ್ಕಾರದ ಅಡ್ವೊಕೇಟ್ ಜನರಲ್ ಆಗಿ ನೇಮಕಗೊಂಡದ್ದನ್ನೇ ನೆಪವಾಗಿಟ್ಟುಕೊಂಡು, ಅವರನ್ನು ಸ್ಪೆಷಲ್ ಪಬ್ಲಿಕ್ ಪ್ರಾಸಿಕ್ಯೂಟರ್ ಸ್ಥಾನದಿಂದ ಕೆಳಗಿಳಿಸುವ ಯತ್ನ ಮಾಡಲಾಯ್ತು.
ಜಯಲಲಿತಾ ಅವರ ಎಐಎಡಿಎಂಕೆ ಜತೆ ಸುದೀರ್ಘ ಸ್ನೇಹ ಹೊಂದಬೇಕೆಂಬುದು ಅಂದಿನ ಬಿಜೆಪಿ ಹೈಕಮಾಂಡ್ ಆಶಯವಾಗಿದ್ದ ಕಾರಣ, ದಿಲ್ಲಿ ಮೂಲಕ ರಾಜ್ಯ ಬಿಜೆಪಿ ಸರ್ಕಾರದ ಮೇಲೆ ಒತ್ತಡ ಹೇರಿ, ನೀವು 2 ಹುದ್ದೆಗಳಲ್ಲಿ ಇರುವಂತಿಲ್ಲ. ಹೀಗಾಗಿ, ಎಸ್ಪಿಪಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ತಿಳಿಸಲಾಯಿತು. ಆದರೆ, ಸುಪ್ರೀಂ ಕೋರ್ಟ್ ಮತ್ತು ಹೈಕೋರ್ಟ್ ತಮ್ಮ ಮೇಲೆ ವಿಶ್ವಾಸ ವಿಟ್ಟು ಎಸ್ಪಿಪಿ ಜವಾಬ್ದಾರಿಯನ್ನು ನೀಡಿದ್ದರಿಂದಾಗಿ ನಾನು ಅದರ ಮುಂದುವರಿಯ ಬಯಸುತ್ತೇನೆ ಎನ್ನುವುದು ಆಚಾರ್ಯರ ದಿಟ್ಟ ನಿಲುವಾಗಿತ್ತು. ಅಂದರೆ, ಎಸ್ಪಿಪಿ ಸ್ಥಾನದಲ್ಲಿ ಮುಂದುವರಿಯುವುದಕ್ಕಾಗಿ ಅವರ ಪ್ರತಿಷ್ಟಿತ ಅಡ್ವೊಕೇಟ್ ಜನರಲ್ ಹುದ್ದೆಗೇ ಅವರು ರಾಜೀನಾಮೆ ನೀಡಿದ್ದರು!
ಆಚಾರ್ಯರು ಇಂಥದ್ದೊಂದು ತೀರ್ಮಾನ ಮಾಡುತ್ತಾರೆ ಎಂದು ರಾಜ್ಯ ಸರ್ಕಾರ ಕಲ್ಪಿಸಿಯೂ ಇರಲಿಲ್ಲ. ಇದಕ್ಕೂ ಮುನ್ನ, ಅಂದಿನ ರಾಜ್ಯಪಾಲರಿಗೆ ದೂರೊಂದನ್ನು ಸಲ್ಲಿಸಿ ಬಿ.ವಿ. ಆಚಾರ್ಯರು ಎರಡು ಹುzಗಳಲ್ಲಿ ಇರುವಂತಿಲ್ಲ. ಎಸ್ಪಿಪಿ ಸ್ಥಾನಕ್ಕೆ ಅವರಿಂದ ರಾಜೀನಾಮೆ ಪಡೆದುಕೊಳ್ಳಬೇಕು ಎಂದು ಮನವಿ ಮಾಡಲಾಗಿತ್ತು. ಆದರೆ, ರಾಜ್ಯಪಾಲರು ಈ ದೂರನ್ನು ಕಸದಬುಟ್ಟಿಗೆ ಎಸೆದಿದ್ದರು.
ಅಷ್ಟಾಗಿಯೂ, ಜಯಲಲಿತಾ ಬೆಂಬಲಿಗರು ಸುಮ್ಮನಾಗಲಿಲ್ಲ. ಚೆನ್ನೈನ ಇಬ್ಬರು ವಕೀಲರು ಕರ್ನಾಟಕ ಹೈಕೋರ್ಟ್ನ ರಿಜಿಸ್ಟ್ರಾರ್ ಜನರಲ್ಗೆ ಅರ್ಜಿ ಸಲ್ಲಿಸಿ, ಆಚಾರ್ಯರನ್ನು ಎಸ್ಪಿಪಿ ಹುದ್ದೆಯಿಂದ ತೆರವುಗೊಳಿಸುವಂತೆ ಕೋರಿದರು. ಜಯಲಲಿತಾ ಬಗ್ಗೆ ಆಚಾರ್ಯ ಪಕ್ಷಪಾತೀಯ ಧೋರಣೆ ಹೊಂದಿದ್ದಾರೆ ಹಾಗೂ ನ್ಯಾಯಯುತವಾಗಿ ಕಾರ್ಯನಿರ್ವಹಿಸುತ್ತಿಲ್ಲ. ಅವರ ಬದಲಿಗೆ ನಿಷ್ಪಕ್ಷಪಾತ ಎಸ್ಪಿಪಿ ಒಬ್ಬರನ್ನು ನೇಮಿಸಬೇಕೆಂದು ಅರ್ಜಿದಾರರು ಒತ್ತಾಯಿಸಿದ್ದರು. ಆದರೆ, ಹೈಕೋರ್ಟ್ ಇದನ್ನು ಮಾನ್ಯ ಮಾಡಲಿಲ್ಲ.
ಆಚಾರ್ಯ ಅವರು ಬಿಎಂಎಸ್ ಎಜುಕೇಷನಲ್ ಟ್ರಸ್ಟ್ನ ಅಧ್ಯಕ್ಷರಾಗಿದ್ದರು. ಟ್ರಸ್ಟ್ನ ಆಡಳಿತದಲ್ಲಿ ಅಕ್ರಮಗಳು ನಡೆದಿವೆ ಎಂಬ ಆರೋಪದಡಿ ಬೆಂಗಳೂರಿನ ಲೋಕಾಯುಕ್ತ ವಿಶೇಷ ನ್ಯಾಯಾಲಯ ದಲ್ಲಿ ಅವರ ವಿರುದ್ಧ ಖಾಸಗಿ ದೂರು ಸಲ್ಲಿಸಲಾಯಿತು. ಈ ಮೂಲಕ ಅವರು ಎಸ್ಪಿಪಿ ಹುದ್ದೆ ಬಿಡುವಂತೆ ಒತ್ತಡ ಹೇರಲಾಯಿತು.
ಆಚಾರ್ಯರು ಅಡ್ವೊಕೇಟ್ ಜನರಲ್ ಆಗಿರುವುದರಿಂದ ಸಾರ್ವಜನಿಕ ಸೇವಕನ ವ್ಯಾಪ್ತಿಗೆ ಬರುತ್ತಾರೆ. ಇಲ್ಲಿ ತನಿಖೆಯಾಗಬೇಕು ಎಂಬ ವಾದವನ್ನು ದೂರಿನಲ್ಲಿ ಮುಂದಿಡಲಾಗಿತ್ತು. ದೂರಿನಲ್ಲಿನ ಆರೋಪಗಳು ಟ್ರಸ್ಟ್ನ ಆಡಳಿತಕ್ಕೆ ಸಂಬಂಧಿಸಿದ್ದಾಗಿದ್ದರಿಂದ ಅದು ಅಡ್ವೊಕೇಟ್ ಜನರಲ್ ಹುದ್ದೆಯ ಕರ್ತವ್ಯಗಳಿಗೆ ಸಂಬಂಧಿಸಿರಲಿಲ್ಲ. ಈ ಎಲ್ಲ ಪ್ರಯತ್ನಗಳ ಹಿಂದೆಯೂ ಆಚಾರ್ಯರನ್ನು ಪ್ರಕರಣದಿಂದ ದೂರ ಮಾಡುವ ಉದ್ದೇಶವಿತ್ತು. ಆದರೆ, ಅದ್ಯಾವುದಕ್ಕೂ ಆಚಾರ್ಯರು ಜಗ್ಗಲಿಲ್ಲ ಅಷ್ಟೇ.
ಬಿಎಂಎಸ್ ಟ್ರಸ್ಟ್ ವಿಷಯದಲ್ಲಿ ಲೋಕಾಯುಕ್ತ ವಿಶೇಷ ನ್ಯಾಯಾಧೀಶರು ಅಪರಾಧ ಪ್ರಕ್ರಿಯಾ ಸಂಹಿತೆಯ ಸೆಕ್ಷನ್ 156(3)ರ ಅಡಿಯಲ್ಲಿ ದೂರಿನ ತನಿಖೆಗೆ ಆದೇಶ ಮಾಡಿದ್ದು ಅವರ ವೃತ್ತಿಜೀವನದ ಮೇಲೆ ಗಂಭೀರ ಪರಿಣಾಮ ಬೀರಿತ್ತು. 56 ವರ್ಷಗಳ ಕಾಲ ಕಳಂಕರಹಿತವಾಗಿ ಸೇವೆ ಸಲ್ಲಿಸಿದ್ದ ಆಚಾರ್ಯರ ಪ್ರತಿಷ್ಠೆಗೆ ಅದು ಹಾನಿ ಮಾಡಿತ್ತು. ಈ ಬೆಳವಣಿಗೆಯ ಬಳಿಕ ಎಸ್ಪಿಪಿ ಹುದ್ದೆಯಿಂದ ನಿರ್ಗಮಿಸಲು ನಿರ್ಧರಿಸಿದರೂ, ಆರೋಪಗಳಿಂದ ಮುಕ್ತರಾಗುವವರೆಗೆ ರಾಜೀನಾಮೆ ನೀಡಬಾರದೆಂದು ನಿರ್ಧರಿಸಿದ್ದರು.
2012ರ ಏಪ್ರಿಲ್ 25ರಂದು ಈ ಪ್ರಕರಣವನ್ನು ವಿಚಾರಣೆಗೆ ಪರಿಗಣಿಸಿದ ಹೈಕೋರ್ಟ್ ನ್ಯಾಯ ಮೂರ್ತಿ ಎಚ್.ಎಸ್. ಕೆಂಪಣ್ಣ ಅವರು, ತನಿಖಾ ಆದೇಶದ ಜಾರಿಗೆ ತಡೆ ನೀಡಿದರು. ನಂತರ ಪ್ರತಿವಾದಿಯ ಮೇಲ್ಮನವಿ ಹಾಗೂ ತಡೆಯಾಜ್ಞೆ ತೆರವುಗೊಳಿಸುವ ಪ್ರಯತ್ನಗಳು ಯಶಸ್ವಿ ಯಾಗಲಿಲ್ಲ. ಇದರಿಂದ, ಲೋಕಾಯುಕ್ತ ನ್ಯಾಯಾಲಯದ ಆದೇಶದಿಂದ ಉಂಟಾಗಿದ್ದ ಮಾನಸಿಕ ಸಂಕಟದಿಂದಲೂ ಹೊರಬಂದರು.
ಕಾನೂನು ಹೋರಾಟದಲ್ಲಿ ಗೆದ್ದ ಅವರು, ವಿಶೇಷ ಸರ್ಕಾರಿ ಅಭಿಯೋಜಕ ಹುzಯಿಂದ ನಿರ್ಗಮಿಸಲು ನಿರ್ಧಾರ ಮಾಡಿದರು. ಎಸ್ಪಿಪಿಯಾಗಿ ಮುಂದುವರಿಯಿರಿ ಎಂದು ಅಂದಿನ ಮುಖ್ಯ ನ್ಯಾಯಮೂರ್ತಿ ಸಲಹೆಗೂ ಅವರು ಒಪ್ಪಲಿಲ್ಲ. ಅಂತಿಮವಾಗಿ, 2012ರ ಆಗ 13ರಂದು ಸರ್ಕಾರ ಅವರ ರಾಜೀನಾಮೆ ಅಂಗೀಕರಿಸಿತು. ಅಲ್ಲಿಗೆ ಜಯಲಲಿತಾ ವಿರುದ್ಧದ ಪ್ರಕರಣದಲ್ಲಿ ಅವರ ವಿಶೇಷ ಸರ್ಕಾರಿ ಅಭಿಯೋಜಕ ಸೇವೆಯ ಒಂದು ಮಹತ್ವದ ಅಧ್ಯಾಯ ಮುಕ್ತಾಯವಾಗಿತ್ತು.
ತ.ನಾಡು ಮಾಜಿ ಸಿಎಂ ಜಯಲಲಿತಾ ಈಗ ಇಲ್ಲದಿರಬಹುದು. ಆದರೆ, ಇತಿಹಾಸದ ಪುಟಗಳಲ್ಲಿ ಅವರು, ಅಕ್ರಮ ಆಸ್ತಿ ಸಂಪಾದನೆ ಮಾಡಿ, ನ್ಯಾಯಾಲಯದಲ್ಲಿ ಅಪರಾಧಿ ಎಂದು ಸಾಬೀತಾದ ವ್ಯಕ್ತಿ ಎಂದೇ ದಾಖಲಾಗುತ್ತಾರೆ. ನ್ಯಾಯದ ಕಣ್ಣಿಂದ ತಪ್ಪಿಸಿಕೊಳ್ಳುವ ಜಯಲಲಿತಾ ಮತ್ತು ಇತರೆ ಆರೋಪಿಗಳ ಯತ್ನಗಳನ್ನು ಸೋಲಿಸಿದ ಖ್ಯಾತಿ ಆಚಾರ್ಯರದ್ದು. ಅದಕ್ಕಾಗಿ ಅವರಿಗೆ ಹ್ಯಾಟ್ಸಆಫ್!
ಜಯಲಲಿತಾ 2016ರಲ್ಲಿ ನಿಧನರಾದ ಕಾರಣ, 2017ರಲ್ಲಿ ಸುಪ್ರೀಂ ಕೋರ್ಟ್ ಅವರ ವಿರುದ್ಧದ ಮೇಲ್ಮನವಿಯನ್ನು ಮುಕ್ತಾಯಗೊಳಿಸಿತು. ಇತರ ಆರೋಪಿಗಳ ಅಪರಾಧಿತ್ವವನ್ನು ಎತ್ತಿ ಹಿಡಿಯಿತು. ಜಿ. ಸೋಮಶೇಖರ ರಾವ್ರ ಉದಾಹರಣೆ: ವಕೀಲ ವೃತ್ತಿ ಹಣ ಗಳಿಸುವ ವ್ಯಾಪಾರ ವಲ್ಲ, ನ್ಯಾಯ ಒದಗಿಸುವ ಸೇವೆ ಎನ್ನುವುದು ಬಿ.ವಿ. ಆಚಾರ್ಯರ ಚಿಂತನಾರ್ಹ ಮಾತುಗಳು.
ಕಕ್ಷಿದಾರನ ಶ್ರೀಮಂತಿಕೆಯನ್ನು ನೋಡಿ ವಕೀಲರು ಶುಲ್ಕ ನಿಗದಿಪಡಿಸಬಾರದು. ಪ್ರಕರಣದ ಸ್ವರೂಪ, ಕೆಲಸದ ಪ್ರಮಾಣ ಹಾಗೂ ವಕೀಲರ ಅನುಭವಕ್ಕೆ ಅನುಗುಣವಾಗಿ ನ್ಯಾಯಯುತ ಶುಲ್ಕ ಪಡೆಯಬೇಕು. ವಕೀಲ ವೃತ್ತಿಯ ಮೂಲ ಉದ್ದೇಶ ಹಣ ಗಳಿಸುವುದಲ್ಲ, ನ್ಯಾಯಕ್ಕಾಗಿ ಬರುವವರಿಗೆ ಸೇವೆ ಸಲ್ಲಿಸುವುದಾಗಿದೆ ಎಂಬುದು ಅವರ ಸ್ಪಷ್ಟ ನಿಲುವು.
ಅತಿಯಾದ ಶುಲ್ಕ ವಸೂಲಿಯು ಸುಲಿಗೆಯ ಸ್ವರೂಪ ಪಡೆಯಬಾರದು ಎನ್ನುವ ಆಚಾರ್ಯರು, ಮಂಗಳೂರಿನ ಪ್ರಸಿದ್ಧ ಹಿರಿಯ ನ್ಯಾಯವಾದಿಯಾಗಿದ್ದ ದಿವಂಗತ ಜಿ. ಸೋಮಶೇಖರ ರಾವ್ ಅವರ ಬದುಕಿನ ಒಂದು ಘಟನೆಯನ್ನು ಉಲ್ಲೇಖಿಸುತ್ತಾರೆ.
ಸೋಮಶೇಖರ ರಾವ್ ಅವರನ್ನು ಒಮ್ಮೆ ಕೊಲೆ ಪ್ರಕರಣದ ಪ್ರಮುಖ ಆರೋಪಿಯ ಪರವಾಗಿ ವಾದಿಸಲು ಕೆಲವು ವಕೀಲರು ಸಂಪರ್ಕಿಸಿದ್ದರು. ಪ್ರಕರಣವನ್ನು ವಹಿಸಿಕೊಳ್ಳಲು ಒಪ್ಪಿದ ಸೋಮಶೇಖರ ಅವರು ತಮ್ಮ ಶುಲ್ಕವನ್ನು 1500 ರೂಪಾಯಿ ಎಂದು ನಿಗದಿಪಡಿಸಿದ್ದರು. ಆಗ ಅವರನ್ನು ಸಂಪರ್ಕಿಸಿದ್ದ ಕೆಲ ವಕೀಲರು, ಈ ಪ್ರಕರಣದ ಕಕ್ಷಿದಾರರು ಅತ್ಯಂತ ಶ್ರೀಮಂತ ಭೂಮಾಲೀಕರು. ಅವರಿಗೆ ಹೆಚ್ಚಿನ ಶುಲ್ಕ ನೀಡುವ ಸಾಮರ್ಥ್ಯವಿದೆ. ನೀವು ಕೇಳಿರುವ 1500 ರೂಪಾಯಿ ಬಹಳ ಕಡಿಮೆ. ಇನ್ನಷ್ಟು ಶುಲ್ಕ ಕೇಳಬಹುದು ಎಂದು ಸಲಹೆ ನೀಡಿದ್ದರು. ಅದಕ್ಕೆ ಸೋಮಶೇಖರ ರಾವ್ ಅವರ ಉತ್ತರ ವಿಭಿನ್ನವಾಗಿತ್ತು.
‘ನಾನು ನಿರ್ವಹಿಸಬೇಕಾದ ಕೆಲಸದ ಪ್ರಮಾಣವನ್ನು ಪರಿಗಣಿಸಿ ಶುಲ್ಕ ನಿಗದಿಪಡಿಸುತ್ತೇನೆ. ಕಕ್ಷಿದಾರನ ಸಂಪತ್ತು ಅಥವಾ ಆರ್ಥಿಕ ಸಾಮರ್ಥ್ಯಕ್ಕೂ ನನ್ನ ಶುಲ್ಕಕ್ಕೂ ಯಾವುದೇ ಸಂಬಂಧವಿಲ್ಲ’ ಎಂದಿದ್ದರು. ಕಕ್ಷಿದಾರ ಶ್ರೀಮಂತನಾಗಿದ್ದಾನೆ ಎಂಬ ಕಾರಣಕ್ಕೆ ಹೆಚ್ಚಿನ ಶುಲ್ಕ ಪಡೆಯುವುದು ಅಥವಾ ಆತನ ಆರ್ಥಿಕ ಪರಿಸ್ಥಿತಿಯನ್ನು ವಕೀಲರ ಆದಾಯ ಹೆಚ್ಚಿಸಿಕೊಳ್ಳುವ ಅವಕಾಶವಾಗಿ ಬಳಸಿಕೊಳ್ಳುವುದು ವೃತ್ತಿಧರ್ಮಕ್ಕೆ ಹೊಂದಿಕೆಯಾಗುವುದಿಲ್ಲ ಎಂಬ ಸಂದೇಶವನ್ನು ಈ ಘಟನೆ ಮೂಲಕ ಆಚಾರ್ಯರು ವಿವರಿಸಿದ್ದಾರೆ.
ವಕೀಲ ವೃತ್ತಿಯಲ್ಲಿ ಜ್ಞಾನ, ಅನುಭವ ಮತ್ತು ವಾದ ಸಾಮರ್ಥ್ಯ ಎಷ್ಟು ಮುಖ್ಯವೋ, ಪ್ರಾಮಾಣಿ ಕತೆ, ನ್ಯಾಯಪರತೆ ಹಾಗೂ ಮಾನವೀಯ ಮೌಲ್ಯಗಳೂ ಅಷ್ಟೇ ಮುಖ್ಯವಾಗುತ್ತವೆ. ಈ ಮೌಲ್ಯ ಗಳೊಂದಿಗೆ ಹೊಂದಾಣಿಕೆ ಮಾಡಿಕೊಳ್ಳದೆ ಸೇವೆ ಸಲ್ಲಿಸಿರುವುದೇ ಬಿ.ವಿ. ಆಚಾರ್ಯರ ಹೆಗ್ಗಳಿಕೆ. ಅವರನ್ನು ಗುರುತಿಸಿ, ರಾಜ್ಯೋತ್ಸವ ನೀಡಿ ಗೌರವಿಸಿದ ರಾಜ್ಯ ಸರ್ಕಾರಕ್ಕೂ ಧನ್ಯವಾದಗಳು!