Roopa Gururaj Column: ಬಿದಿರು ಕೃಷ್ಣನ ಕೈಯಲ್ಲಿ ಪವಿತ್ರ ವೇಣುವಾದ ಕಥೆ
ಬಿದಿರು ಕ್ಷಣವೂ ಯೋಚಿಸದೆ ಸಮ್ಮತಿಸಿತು. ಕೃಷ್ಣನು ಬಿದಿರನ್ನು ಕತ್ತರಿಸಿದನು, ಅದರ ಒಳಗಿದ್ದ ತಿರುಳನ್ನೆಲ್ಲ ತೆಗೆದು ಅದನ್ನು ಸಂಪೂರ್ಣವಾಗಿ ‘ಖಾಲಿ’ ಮಾಡಿದನು. ನಂತರ ಅದರ ಮೇಲೆ ರಂಧ್ರಗಳನ್ನು ಕೊರೆದನು. ಬಿದಿರು ಒಂದು ಹನಿ ಕಣ್ಣೀರು ಸಹ ಹಾಕದೆ ಆ ನೋವನ್ನು ನಗುನಗುತ್ತಾ ಸ್ವೀಕರಿಸಿತು. ಯಾವಾಗ ಬಿದಿರು ಸಂಪೂರ್ಣವಾಗಿ ತನ್ನನ್ನು ತಾನು ಕೃಷ್ಣನಿಗೆ ಅರ್ಪಿಸಿಕೊಂಡಿತೋ, ಆಗ ಕೃಷ್ಣನು ತನ್ನ ಉಸಿರನ್ನು ಆ ಬಿದಿರಿನ ಮೂಲಕ ಹರಿಸಿದನು. ಆಗ ಹುಟ್ಟಿದ್ದೇ ದಿವ್ಯವಾದ ವೇಣುನಾದ
-
ಒಂದೊಳ್ಳೆ ಮಾತು
ಒಂದು ದಿನ ಶ್ರೀಕೃಷ್ಣನು ಬೃಂದಾವನದ ನಂದನವನದಲ್ಲಿ ಸಂಚರಿಸುತ್ತಿದ್ದಾಗ, ಅಲ್ಲಿನ ಅತ್ಯಂತ ಸುಂದರವಾದ ಬಿದಿರಿನ ಮೆಳೆಯ ಬಳಿ ಬಂದನು. ಅಲ್ಲಿ ಒಂದು ಬಿದಿರಿನ ಗಿಡ ಬಹಳ ವರ್ಷಗಳಿಂದ ಕೃಷ್ಣನನ್ನು ಕಾಣುವ ಆಸೆಯಿಂದ ಅವನಿಗಾಗಿ ಪರಿತಪಿಸುತ್ತಾ ಇತ್ತು, ಅವನನ್ನು ಜಪಿಸುತ್ತಾ ಇತ್ತು. ಸುಕೃತದಿಂದ ಕೃಷ್ಣ ತನ್ನ ಬಳಿ ಬಂದಾಗ ಬಿದಿರು ಆನಂದ ಭಾಷ್ಪ ಸುರಿಸುತ್ತಾ, “ಭಗವಂತಾ, ಸೃಷ್ಟಿಯಲ್ಲಿರುವ ಎಲ್ಲಾ ಗಿಡಗಳಿಗೂ ಹೂವು-ಹಣ್ಣು ನೀಡುವ ಶಕ್ತಿ ಇದೆ.
ಹೂವುಗಳು ನಿನಗೆ ಅಲಂಕಾರವಾದರೆ, ಹಣ್ಣುಗಳು ನಿನಗೆ ನೈವೇದ್ಯವಾಗಿ ಪ್ರಸಾದ ವಾಗುತ್ತವೆ. ಮಾವು, ಬೇವಿನಂಥ ಎಲೆಗಳು ಬಾಗಿಲಿಗೆ ತೋರಣವಾಗುತ್ತವೆ. ಪ್ರಕೃತಿಯಲ್ಲಿ ರುವ ಎಲ್ಲ ಹಸಿರಿನ ಸೃಷ್ಟಿಗೂ ಉದ್ದೇಶವಿದೆ. ಆದರೆ ನಾನು ಯಾವ ಕೆಲಸಕ್ಕೂ ಬಾರದೆ ನಿಷ್ಪ್ರಯೋಜಕನಾಗಿದ್ದೇನೆ" ಎಂದು ದುಃಖಿಸಿತು.
ಕೃಷ್ಣನು ಆ ಬಿದಿರನ್ನು ನೋಡಿ ನಸು ನಗುತ್ತಾ, “ಏಕೆ ದುಃಖಿಸುವೆ, ನೀನು ಕೂಡ ಅನೇಕರಿಗೆ ಉಪಯೋಗವಾಗುತ್ತಿದ್ದೀ; ಆದರೂ ನಿನಗೆ ನನ್ನ ಜತೆ ಸದಾ ಇರಬೇಕೆಂಬ ಆಸೆಯಿದೆಯೇ?" ಎಂದು ಕೇಳಿದನು. ಬಿದಿರು ಅತ್ಯಂತ ವಿನಯದಿಂದ, “ಕೃಷ್ಣಾ, ನಿನ್ನ ಸಾನ್ನಿಧ್ಯಕ್ಕಿಂತ ಹೆಚ್ಚಿನ ಭಾಗ್ಯ ಬೇರೇನಿದೆ? ನೀನು ಬಯಸಿದರೆ ನಾನು ನಿನ್ನವನಾಗಲು ಸಿದ್ಧ" ಎಂದಿತು.
ಇದನ್ನೂ ಓದಿ: Roopa Gururaj Column: ವಿಶ್ವಾಮಿತ್ರನ ಪ್ರತಿಸೃಷ್ಟಿ, ತ್ರಿಶಂಕು ಸ್ವರ್ಗ
ಆದರೆ ಕೃಷ್ಣ ಒಂದು ಷರತ್ತನ್ನು ಹಾಕುತ್ತಾ, “ನಾನು ನಿನ್ನನ್ನು ನನ್ನ ಕೊಳಲನ್ನಾಗಿ ಮಾಡಿ ಕೊಳ್ಳಬೇಕಾದರೆ, ನೀನು ಬಹಳಷ್ಟು ನೋವನ್ನು ಸಹಿಸಬೇಕಾಗುತ್ತದೆ. ನಾನು ನಿನ್ನನ್ನು ಕತ್ತರಿಸಬೇಕು, ನಿನ್ನ ಒಳಗಿರುವ ಎಲ್ಲವನ್ನೂ ಅಗೆದು ತೆಗೆಯಬೇಕು (ಟೊಳ್ಳು ಮಾಡಬೇಕು), ಮತ್ತು ನಿನ್ನ ಮೈಮೇಲೆ ಎಂಟು ರಂಧ್ರಗಳನ್ನು ಕೊರೆಯಬೇಕು. ಈ ನೋವನ್ನು ಸಹಿಸಲು ನೀನು ಸಿದ್ಧವಿದ್ದೀಯಾ?" ಎಂದು ಕೇಳಿದನು.
ಬಿದಿರು ಕ್ಷಣವೂ ಯೋಚಿಸದೆ ಸಮ್ಮತಿಸಿತು. ಕೃಷ್ಣನು ಬಿದಿರನ್ನು ಕತ್ತರಿಸಿದನು, ಅದರ ಒಳಗಿದ್ದ ತಿರುಳನ್ನೆಲ್ಲ ತೆಗೆದು ಅದನ್ನು ಸಂಪೂರ್ಣವಾಗಿ ‘ಖಾಲಿ’ ಮಾಡಿದನು. ನಂತರ ಅದರ ಮೇಲೆ ರಂಧ್ರಗಳನ್ನು ಕೊರೆದನು. ಬಿದಿರು ಒಂದು ಹನಿ ಕಣ್ಣೀರು ಸಹ ಹಾಕದೆ ಆ ನೋವನ್ನು ನಗುನಗುತ್ತಾ ಸ್ವೀಕರಿಸಿತು. ಯಾವಾಗ ಬಿದಿರು ಸಂಪೂರ್ಣವಾಗಿ ತನ್ನನ್ನು ತಾನು ಕೃಷ್ಣನಿಗೆ ಅರ್ಪಿಸಿಕೊಂಡಿತೋ, ಆಗ ಕೃಷ್ಣನು ತನ್ನ ಉಸಿರನ್ನು ಆ ಬಿದಿರಿನ ಮೂಲಕ ಹರಿಸಿದನು. ಆಗ ಹುಟ್ಟಿದ್ದೇ ದಿವ್ಯವಾದ ವೇಣುನಾದ. ‘ಅಧರಂ ಮಧುರಂ ವದನಂ ಮಧುರಂ ನಯನಂ ಮಧುರಂ ಹಸಿತಂ ಮಧುರಮ್, ಹೃದಯಂ ಮಧುರಂ ಗಮನಂ ಮಧುರಂ ಮಧುರಾಧಿಪತೇರಖಿಲಂ ಮಧುರಮ್’- ಅವನ ಅಧರಗಳು ಮಧುರ, ಮುಖ ಮಧುರ, ಕಣ್ಣುಗಳು ಮಧುರ, ನಗು ಮಧುರ. ಅವನ ಹೃದಯ ಮತ್ತು ನಡಿಗೆಯೂ ಮಧುರ. ಆ ಮಧುರಾಧಿಪತಿಯಾದ ಶ್ರೀಕೃಷ್ಣನ ಎಲ್ಲವೂ ಮಧುರವೇ ಆಗಿದೆ. ಆ ಮಧುರ ವಾದ ಅಧರಗಳ ಮೇಲೆ ಶೋಭಿಸುವ ಬಿದಿರಿನ ಕೊಳಲು ಕೂಡ ಮಧುರವೇ.
ಆ ಬಿದಿರಿನಂತೆ ನಮಗೂ ನಮ್ಮ ಸಾಮರ್ಥ್ಯದ ಬಗ್ಗೆ, ನಮ್ಮ ಜೀವನದ ಗುರಿಯ ಬಗ್ಗೆ ಕೆಲವೊಮ್ಮೆ ಅನುಮಾನಗಳು ಹುಟ್ಟುತ್ತವೆ. ‘ಎಲ್ಲರೂ ಏನೇನೋ ಸಾಧನೆಯನ್ನು ಮಾಡುತ್ತಿದ್ದಾರೆ, ಆದರೆ ನಾವು ಎಲ್ಲಿಗೂ ತಲುಪಲಾಗುತ್ತಿಲ್ಲ, ಏನನ್ನೂ ಸಾಧಿಸಲಾಗುತ್ತಿಲ್ಲ’ ಎಂಬ ಖಿನ್ನತೆ ಕಾಡುತ್ತದೆ.
ಆದರೆ ಭಗವಂತನಲ್ಲಿ ಅಪರಿಮಿತ ವಿಶ್ವಾಸವಿದ್ದಾಗ, ಅವನಿಗೆ ನಮ್ಮನ್ನು ಸಂಪೂರ್ಣವಾಗಿ ಸಮರ್ಪಿಸಿಕೊಂಡಾಗ ಮಾತ್ರ ನಾವು ಅವನ ಕೈಯಲ್ಲಿನ ಬಿದಿರಾಗುತ್ತೇವೆ. ಇದು ಸುಲಭದ ಪಯಣವಲ್ಲ. ಇಲ್ಲಿ ಅನೇಕ ತ್ಯಾಗಗಳನ್ನು ಮಾಡಬೇಕಾಗುತ್ತದೆ, ನೋವುಗಳನ್ನು ಸಹಿಸ ಬೇಕಾಗುತ್ತದೆ. ಆದರೆ ಅದೆಲ್ಲಕ್ಕೂ ಕೂಡ ಸಾರ್ಥಕತೆ ದೊರೆಯುವ ಸಮಯ ಬಂದೇ ಬರುತ್ತದೆ.
ಸಾಮಾನ್ಯರಿಂದ ಅಸಾಮಾನ್ಯರಾಗುವುದಕ್ಕೆ ನಾವೆಲ್ಲರೂ ಉಳಿಪೆಟ್ಟಿನ ನೋವನ್ನು ಸಹಿಸಲೇಬೇಕು. ಆಗ ಮಾತ್ರವೇ ಕಚ್ಚಾಶಿಲೆಯೊಂದು ಸುಂದರ ಮೂರ್ತಿಯಾಗಿ ರೂಪು ಗೊಳ್ಳಲು ಸಾಧ್ಯ. ನಾವು ದೈವತ್ವವನ್ನು ಸಾಧಿಸಬೇಕಾದರೆ ಅಥವಾ ಜೀವನದಲ್ಲಿ ಸಾರ್ಥಕತೆಯನ್ನು ಪಡೆಯಬೇಕಾದರೆ, ನಮ್ಮ ಒಳಗಿರುವ ‘ಅಹಂಕಾರ’ ಮತ್ತು ‘ಮಮಕಾರ’ ಗಳನ್ನು ಸಂಪೂರ್ಣವಾಗಿ ತೊರೆದು ‘ಖಾಲಿ’ಯಾಗಬೇಕು.
ನಾವು ಯಾವಾಗ ಶೂನ್ಯ ವಾಗುತ್ತೇವೆಯೋ, ಆಗ ಭಗವಂತ ನಮ್ಮ ಮೂಲಕ ಸುಂದರ ವಾದ ಸಂಗೀತವನ್ನು ನುಡಿಸುತ್ತಾನೆ. ಕೃಷ್ಣಂ ವಂದೇ ಜಗದ್ಗುರುಂ....