ಕರ್ನಾಟಕ ಬಜೆಟ್​ ವಿದೇಶ ಮಹಿಳಾ ದಿನಾಚರಣೆ ಫ್ಯಾಷನ್​ ಕ್ರೈಂ ಧಾರ್ಮಿಕ ಹೋಳಿ ಹಬ್ಬ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Dr Karaveera Prabhu Kyalakonda Column: ಸದ್ದಿಲ್ಲದೆ ದೃಷ್ಟಿ ಕದಿಯುವ ಕಳ್ಳ: ಗ್ಲಾಕೋಮಾ

ಕಣ್ಣುಗಳನ್ನು ನಿಯತವಾಗಿ ಪರೀಕ್ಷೆ ಮಾಡಿಸಿಕೊಳ್ಳದೆ ತೀರಾ ದೃಷ್ಟಿ ಮಂದವಾದಾಗ ಮಾತ್ರವೇ ವೈದ್ಯರ ಸಲಹೆ ಪಡೆಯಲು ಮುಂದಾಗುವುದು ಕೆಲವರ ಜಾಯಮಾನ. ಶೇ.50 ರಷ್ಟು ದೃಷ್ಟಿ ಮಾಂದ್ಯತೆಯು ‘ಕಣ್ಣಿನ ಪೊರೆ’ (ಕ್ಯಾಟರಾಕ್ಟ್) ಕಾಯಿಲೆಯಿಂದ ಆಗುವುದರಿಂದ, ಕಣ್ಣಿನ ಪೊರೆಯ ಶಸ್ತ್ರಚಿಕಿತ್ಸೆಯ ಮೂಲಕ ಮರಳಿ ದೃಷ್ಟಿ ಪಡೆಯಲು ಸಾಧ್ಯವಿದೆ

ಸದ್ದಿಲ್ಲದೆ ದೃಷ್ಟಿ ಕದಿಯುವ ಕಳ್ಳ: ಗ್ಲಾಕೋಮಾ

ಅಂಕಣಕಾರ ಡಾ.ಕರವೀರ ಪ್ರಭು ಕ್ಯಾಲಕೊಂಡ

Profile Ashok Nayak Mar 11, 2025 8:07 AM

ಆರೋಗ್ಯ ಭಾಗ್ಯ

(ಮಾ.9ರಿಂದ ವಿಶ್ವ ಗ್ಲಾಕೋಮಾ ಸಪ್ತಾಹ)

ಡಾ.ಕರವೀರ ಪ್ರಭು ಕ್ಯಾಲಕೊಂಡ

ನಮ್ಮ ಪೂರ್ವಜರು ‘ಸರ್ವೇಂದ್ರಿಯಾಣಾಂ ನಯನಂ ಪ್ರಧಾನಂ’ ಎಂದಿದ್ದಾರೆ. ಮನುಷ್ಯನ ದೇಹದ ಸರ್ವಾಂಗಗಳ ಪೈಕಿ ಕಣ್ಣುಗಳಿಗೆ ಅತಿ ಹೆಚ್ಚು ಪ್ರಾಮುಖ್ಯವಿದೆ. ಬಹಳಷ್ಟು ಶಾಸ್ತ್ರ-ಪುರಾಣಗಳಲ್ಲೂ ಕಣ್ಣುಗಳ ಮಹತ್ವದ ಬಗ್ಗೆ ಪ್ರಸ್ತಾಪವಿದೆ. ಪ್ರಕೃತಿಯ ಸೌಂದರ್ಯವನ್ನು ಆಸ್ವಾದಿಸಲು, ಜ್ಞಾನ ಸಂಪಾದಿಸಲು ಹಾಗೂ ಅನೇಕ ವಿಷಯಗಳನ್ನು ಕಲಿಯಲು ಕಣ್ಣು ಗಳು ಸಹಕರಿಸುತ್ತವೆ. ಮಿದುಳಿನ ಜತೆ ನೇರಸಂಪರ್ಕ ಹೊಂದಿರುವ ಕಣ್ಣುಗಳು, ಮಿದುಳಿನ ಹಾಗೆಯೇ ಅವಿಶ್ರಾಂತವಾಗಿ ಕಾರ್ಯ ನಿರ್ವಹಿಸುತ್ತಾ, ನಮ್ಮ ಸುತ್ತಮುತ್ತಲಿನ ಪ್ರಪಂಚ ವನ್ನು ಅವಲೋಕಿಸುತ್ತಿರುತ್ತವೆ. ಇಂಥ ಮಹತ್ವದ ಕಾರ್ಯನಿರ್ವಹಿಸುವ ಕಣ್ಣುಗಳನ್ನು ಎಚ್ಚರಿಕೆಯಿಂದ ನೋಡಿಕೊಳ್ಳಬೇಕಾದ ಅಗತ್ಯವಿದೆ.

ಕಣ್ಣುಗಳನ್ನು ನಿಯತವಾಗಿ ಪರೀಕ್ಷೆ ಮಾಡಿಸಿಕೊಳ್ಳದೆ ತೀರಾ ದೃಷ್ಟಿ ಮಂದವಾದಾಗ ಮಾತ್ರವೇ ವೈದ್ಯರ ಸಲಹೆ ಪಡೆಯಲು ಮುಂದಾಗುವುದು ಕೆಲವರ ಜಾಯಮಾನ. ಶೇ.50 ರಷ್ಟು ದೃಷ್ಟಿಮಾಂದ್ಯತೆಯು ‘ಕಣ್ಣಿನ ಪೊರೆ’ (ಕ್ಯಾಟರಾಕ್ಟ್) ಕಾಯಿಲೆಯಿಂದ ಆಗುವು ದರಿಂದ, ಕಣ್ಣಿನ ಪೊರೆಯ ಶಸ್ತ್ರಚಿಕಿತ್ಸೆಯ ಮೂಲಕ ಮರಳಿ ದೃಷ್ಟಿ ಪಡೆಯಲು ಸಾಧ್ಯ ವಿದೆ.

ಇದನ್ನೂ ಓದಿ: Dr Karaveera Prabhu Kyalakonda Column: ಮಕ್ಕಳ ಸಾಧನೆಗೆ ಮಾನ್ಯತೆ ಬೇಕು

ಇಂಥವರನ್ನು ಅದೃಷ್ಟಶಾಲಿಗಳೆಂದೇ ಕರೆಯಬೇಕು. ಆದರೆ ಶೇ.20ರಷ್ಟು ಮಂದಿಗೆ ತಾವು ಗ್ಲಾಕೋಮಾ ಕಾಯಿಲೆಯಿಂದ ದೃಷ್ಟಿ ಕಳೆದುಕೊಳ್ಳುತ್ತಿರುವುದು ಗಮನಕ್ಕೇ ಬಂದಿರುವು ದಿಲ್ಲ. ಇವರು ಕ್ರಮೇಣವಾಗಿ ಮತ್ತು ಶಾಶ್ವತವಾಗಿ ದೃಷ್ಟಿ ಕಳೆದುಕೊಳ್ಳುವ ಸಂಭವವಿದ್ದು, ಸೂಕ್ತ ಸಮಯದಲ್ಲಿ ತಜ್ಞರ ಸಲಹೆ-ಸೂಚನೆ ಪಡೆಯುವ ಅಗತ್ಯವಿರುತ್ತದೆ. ಅರಿವಿಗೆ ಬಾರ ದಂತೆ ವ್ಯಕ್ತಿಯ ದೃಷ್ಟಿ ಕದಿಯುವ ಸಂಭವವಿರುವುದರಿಂದ ಈ ಕಾಯಿಲೆಗೆ ‘ದೃಷ್ಟಿ ಕಳ್ಳ’ ಎಂದು ಕರೆಯುತ್ತಾರೆ.

ವಿಶ್ವದಾದ್ಯಂತ ಅನೇಕ ಜನರು ಈ ಕುರಿತು ಅರಿವಿರದೆ ದೃಷ್ಟಿಯನ್ನು ಳೆದುಕೊಳ್ಳುತ್ತಿದ್ದಾರೆ. ಹೆಚ್ಚಿನ ಸಂದರ್ಭಗಳಲ್ಲಿ ನೋವು ಇಲ್ಲದಿರುವುದರಿಂದ, ಒದಗಿರುವ ದೃಷ್ಟಿಮಾಂದ್ಯತೆಯು ಕಣ್ಣಿನ ಪೊರೆಯಷ್ಟೇ ಎಂದು ಭಾವಿಸಿ ವೈದ್ಯರಲ್ಲಿಗೆ ಹೋಗುವುದನ್ನು ಜನರು ಮುಂದೂ ಡುವುದಿದೆ. ಗ್ಲಾಕೋಮಾವು ಕಣ್ಣಿನ ಮುಖ್ಯ ನರವಾದ ‘ಆಪ್ಟಿಕ್ ನರ’ಕ್ಕೆ ಧಕ್ಕೆಯುಂಟು ಮಾಡುವುದರಿಂದ, ನೋಡಿದ ದೃಶ್ಯ ಸಂಕೇತಗಳನ್ನು ಮಿದುಳಿಗೆ ತಲುಪಿಸುವಲ್ಲಿ ವಿಫಲ ವಾಗುತ್ತದೆ.

ಈ ಸಮಸ್ಯೆಯಲ್ಲಿ ಕಣ್ಣಿನ ಒಳಗಿನ ಒತ್ತಡ ಹೆಚ್ಚಾಗುತ್ತದೆ, ಒತ್ತಡ ಹೆಚ್ಚಾದಂತೆ ಹಾನಿಯೂ ಹೆಚ್ಚಾಗಿರುತ್ತದೆ. ಈ ಕಾಯಿಲೆಯಿಂದ ಹಾಳಾದ ನರವನ್ನು ಪುನಶ್ಚೇತನಗೊಳಿಸಲು ಸಾಧ್ಯ ವಿಲ್ಲ. ಹೀಗಾಗಿ ಈ ಕಾಯಿಲೆಯಿಂದ ನಾಶವಾದ ದೃಷ್ಟಿಯು ಮತ್ತೆ ಬರುವ ಸಾಧ್ಯತೆಯಿಲ್ಲ. ಪ್ರಪಂಚದಲ್ಲಿ ಪ್ರಸ್ತುತ 60 ಮಿಲಿಯನ್‌ಗೂ ಹೆಚ್ಚು ಜನರು ಗ್ಲಾಕೋಮಾದಿಂದ ಬಳಲು ತ್ತಿದ್ದಾರೆ.

ಭಾರತದಲ್ಲಿ ಗ್ಲಾಕೋಮಾದಿಂದ ಬಳಲುತ್ತಿರುವವರ ಸಂಖ್ಯೆ ಸರಿಸುಮಾರು 12 ಮಿಲಿಯನ್ ಎನ್ನಲಾಗುತ್ತದೆ. ಈ ಸಮಸ್ಯೆಯನ್ನು ಗುಣಪಡಿಸಲಾಗದಿದ್ದರೂ, ಅದರ ಪ್ರಗತಿಯನ್ನು ತಡೆ ಯಬಹುದು ಮತ್ತು ಶುರುವಿನ ಹಂತದಲ್ಲೇ ಪತ್ತೆಯಾದರೆ ಕುರುಡುತನವನ್ನು ತಡೆಯ ಬಹುದು. ಕರ್ನಾಟಕದಲ್ಲಿ ಒಂದು ಅಂದಾಜಿನ ಪ್ರಕಾರ 85 ಲಕ್ಷ ಮಂದಿ ಗ್ಲಾಕೋಮಾದಿಂದ ನರಳುತ್ತಿದ್ದಾರೆ. ಇದು ಸಣ್ಣ ಪ್ರಮಾಣವೇನಲ್ಲ. ಈ ಪೈಕಿ ಚಿಕಿತ್ಸೆ ಪಡೆಯುತ್ತಿರುವವರು ಕೇವಲ ಶೇ.10ರಷ್ಟು ಮಂದಿ; ಉಳಿದವರು ಕಾಯಿಲೆ ಪತ್ತೆಯಾಗದೆ ಅಥವಾ ಚಿಕಿತ್ಸೆ ಪಡೆ ಯದೆ ಬಳಲುತ್ತಿದ್ದಾರೆ ಅಥವಾ ನಿಯತವಾಗಿ ಪರೀಕ್ಷೆ ಮಾಡಿಸಿಕೊಳ್ಳುತ್ತಿಲ್ಲ.

ಗ್ಲಾಕೋಮಾ ಕಾಯಿಲೆ ಉಂಟಾಗಲು ಒಂದಿಷ್ಟು ಪೂರ್ವನಿಯೋಜಿತ ಅಂಶಗಳು ಪೂರಕ ವಾಗುತ್ತವೆ. ಅವೆಂದರೆ, 40 ವರ್ಷಗಳಿಗೆ ಮೇಲ್ಪಟ್ಟ ವಯಸ್ಸು, ಗ್ಲಾಕೋಮಾ ಇತಿಹಾಸ ಹೊಂದಿರುವ ಕುಟುಂಬದ ಸದಸ್ಯರು, ದೃಷ್ಟಿದೋಷ (ಸಮೀಪದೃಷ್ಟಿ ಮತ್ತು ದೂರ ದೃಷ್ಟಿಯ ಸಮಸ್ಯೆ ಉಳ್ಳವರು), ಅಧಿಕ ರಕ್ತದೊತ್ತಡ ಮತ್ತು ಮಧುಮೇಹ, ಅಪಘಾತ ದಿಂದಾಗಿ ಕಣ್ಣಿಗೆ ಆದ ಗಾಯ, ಕಣ್ಣಿನ ಒತ್ತಡವು ಅಧಿಕವಾಗಿರುವಿಕೆ (Intraocular pressure ) ಇತ್ಯಾದಿ.

ಗ್ಲಾಕೋಮಾವನ್ನು ಕಂಡುಹಿಡಿಯುವ ಏಕೈಕ ಮಾರ್ಗವೆಂದರೆ ನಿಯತವಾಗಿ ನೇತ್ರಪರೀಕ್ಷೆ ಮಾಡಿಸಿಕೊಳ್ಳುವುದು. ಗ್ಲಾಕೋಮಾದಲ್ಲಿ ದೃಷ್ಟಿ ತೊಂದರೆಯು ಬೇಗನೆ ಉಂಟಾದರೂ ರೋಗಿಯ ಗಮನಕ್ಕೆ ಬಂದಿರುವುದಿಲ್ಲ. ಏಕೆಂದರೆ, ಮೊದಲು ಹೊರಗಿನ ದೃಷ್ಟಿಯನ್ನು ( Peripheral Vision) ನಾಶಪಡಿಸಿ ನಂತರ ಮಧ್ಯದ ದೃಷ್ಟಿಯನ್ನು ( Central Vision) ಇದು ಹಾಳುಗೆಡವುತ್ತದೆ.

ಆದ್ದರಿಂದ ಗ್ಲಾಕೋಮಾವನ್ನು ಬೇಗ ಕಂಡುಹಿಡಿಯುವುದು ಕಷ್ಟಕರ. ಹೀಗಾಗಿ, ಭಾರತೀ ಯರಲ್ಲಿ ದೃಷ್ಟಿಹೀನತೆಯನ್ನು ಉಂಟುಮಾಡುತ್ತಿರುವ ಕಾಯಿಲೆಗಳ ಪೈಕಿ ಗ್ಲಾಕೋಮಾ ಎರಡನೇ ಸ್ಥಾನವನ್ನು ಪಡೆದಿದೆ. ಇನ್ನು ಗ್ಲಾಕೋಮಾದ ರೋಗಲಕ್ಷಣಗಳನ್ನು ಗಮನಿ ಸುವುದಾದರೆ, ಮೇಲಿಂದ ಮೇಲೆ ತಲೆನೋವು, ವಿಪರೀತ ಕಣ್ಣುನೋವು, ಕಣ್ಣಮುಂದೆ ಕಾಮನಬಿಲ್ಲು/ ಬಣ್ಣಬಣ್ಣದ ಹ್ಯಾಲೋಸ್ ಕಾಣಿಸುವುದು, ಕಣ್ಣು ಕೆಂಪಗಾಗುವುದು, ಏಕಾಏಕಿ ಕಣ್ಣು ಮಂಜಾಗುವುದು, ಒಮ್ಮಿಂದೊಮ್ಮೆಲೆ ದೃಷ್ಟಿಯಲ್ಲಿ ತೊಂದರೆ ಕಾಣಿಸು ವುದು, ವಾಂತಿಯೊಂದಿಗೆ ಕಣ್ಣಗುಡ್ಡೆಯ ಸುತ್ತ ನೋವು ಕಾಣಿಸಿಕೊಳ್ಳುವುದು ಇವುಗಳಲ್ಲಿ ಸೇರಿವೆ.

ಈ ಪೈಕಿಯ ಕೆಲವು ಇಲ್ಲವೇ ಎಲ್ಲ ಲಕ್ಷಣಗಳೂ ರೋಗಿಗಳಲ್ಲಿ ಕಂಡುಬರಬಹುದು. ಮೊದಲೇ ತಿಳಿಸಿದಂತೆ, ಹೆಚ್ಚಿನವರಿಗೆ ತಮಗೆ ಗ್ಲಾಕೋಮಾ ಇರುವುದು ತಡವಾಗಿ ಗೊತ್ತಾ ಗುತ್ತಿರುವುದರಿಂದ, ಚಿಕಿತ್ಸೆಗೆ ಮುಂದಾಗುವಷ್ಟರ ಹೊತ್ತಿಗಾಗಲೇ ಬಹಳಷ್ಟು ಪ್ರಮಾಣ ದಲ್ಲಿ ದೃಷ್ಟಿನಷ್ಟವಾಗಿರುತ್ತದೆ.

ದೇಹದಲ್ಲಿ ರಕ್ತದ ಒತ್ತಡ ಇರುವ ಹಾಗೆಯೇ, ಕಣ್ಣಿಗೂ ಒಂದು ನಿರ್ದಿಷ್ಟ ಒತ್ತಡ ಇರುತ್ತದೆ. ಈ ಒತ್ತಡವನ್ನು ಒತ್ತಡಮಾಪಕ ತಂತ್ರದಿಂದ ಅಳೆಯುತ್ತಾರೆ. ಕಣ್ಣಿನ ಒತ್ತಡವು ಸಾಮಾನ್ಯ ವಾಗಿ 10ರಿಂದ 20 ಮಿ.ಮಿಲಿಯನ್‌ನಷ್ಟು (ಪಾದರಸ ಮಟ್ಟ) ಇರುತ್ತದೆ. ಇದಕ್ಕಿಂತ ಹೆಚ್ಚಿನ ಒತ್ತಡ ಕಂಡುಬಂದರೆ, ಗ್ಲಾಕೋಮಾ ಸಮಸ್ಯೆ ಇರಬಹುದು ಎಂದು ನೇತ್ರತಜ್ಞರು ಅನು ಮಾನಿಸುವರು. ಗ್ಲಾಕೋಮಾದಲ್ಲಿ ತೆರೆದ ಕೋನದ ಗ್ಲಾಕೋಮಾ, ಮುಚ್ಚಿದ ಕೋನದ ಗ್ಲಾಕೋಮಾ ಮತ್ತು ಜನ್ಮಜಾತ ಗ್ಲಾಕೋಮಾ ಎಂಬ ಮೂರು ಪ್ರಕಾರಗಳಿವೆ.

ತೆರೆದ ಕೋನದ ಗ್ಲಾಕೋಮಾ: ಯಾವ ರೋಗಲಕ್ಷಣಗಳಿಲ್ಲದೆ ಇದು ಕಾಣಿಸಿಕೊಳ್ಳುವು ದರಿಂದ, ರೋಗವಿದೆಯೆಂದು ಗೊತ್ತಾಗುವ ಹೊತ್ತಿಗೆ ಆಪ್ಟಿಕ್ ನರಕ್ಕೆ ಬಹಳಷ್ಟು ಹಾನಿ ಯುಂಟಾಗಿರುತ್ತದೆ. ತಡವಾಗಿ ಗೊತ್ತಾಗಲು ಇನ್ನೊಂದು ಕಾರಣವೆಂದರೆ, ರೋಗಿಯ ದೃಷ್ಟಿಯ ಮಧ್ಯಭಾಗದ ಕ್ಷೇತ್ರವು, ನರವು ಸಂಪೂರ್ಣ ನಾಶವಾಗುವವರೆಗೂ ಉಳಿದಿರು ತ್ತದೆ.

60-70ರ ವಯೋಮಾನದವರಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುವ ಇದಕ್ಕೆ ಲಿಂಗ ತಾರತಮ್ಯ ವಿಲ್ಲ. ಕಣ್ಣು ಮಂಜಾಗುವಿಕೆ, ಓದುವುದು ಕಷ್ಟವಾಗುವಿಕೆ ಇದರ ಲಕ್ಷಣಗಳು ಮತ್ತು ಪದೇ ಪದೆ ಕನ್ನಡಕ ಬದಲಾವಣೆ ಅನಿವಾರ್ಯ.

ಮುಚ್ಚಿದ ಕೋನದ ಗ್ಲಾಕೋಮಾ: ಇದು ಹೆಂಗಸರಲ್ಲಿ, ಚಿಂತೆ/ಮಾನಸಿಕ ಒತ್ತಡ ಹೆಚ್ಚು ಇರುವವರಲ್ಲಿ, 50-60ರ ವಯೋಮಾನದವರಲ್ಲಿ ಸಾಮಾನ್ಯವಾಗಿ ಕಂಡುಬರುತ್ತದೆ. ರೋಗ ಲಕ್ಷಣಗಳಲ್ಲಿ ಕಣ್ಣು ಸ್ವಲ್ಪ ಮಂಜಾಗುವಿಕೆ, ಕೆಲವೊಮ್ಮೆ ತಲೆನೋವು ಬರುವಿಕೆ, ಕಣ್ಣಿನ ಮುಂದೆ ಬಣ್ಣದ ಚಕ್ರಗಳು ಕಾಣಿಸುವಿಕೆ ಸೇರಿವೆ. ಸಕಾಲದಲ್ಲಿ ಸೂಕ್ತ ಚಿಕಿತ್ಸೆಗೆ ಮುಂದಾ ಗದಿದ್ದಲ್ಲಿ ಸಂಪೂರ್ಣ ಅಂಧತ್ವ ಆವರಿಸುವ ಸಾಧ್ಯತೆಯಿರುತ್ತದೆ.

ಜನ್ಮಜಾತ ಗ್ಲಾಕೋಮಾ: ಇದಕ್ಕೆ ‘ಗೂಳಿಕಣ್ಣು’ ಎಂದೂ ಕರೆಯಲಾಗುತ್ತದೆ. ಕೆಲವು ಅಂಗಾಂಶಗಳ ಕೊರತೆಯಿಂದ ಅಕ್ವಿಯಸ್ ದ್ರವದ ಚಲನೆಗೆ ತೊಂದರೆಯುಂಟಾಗಿ, ಕಣ್ಣಿನ ಒತ್ತಡವು ಹೆಚ್ಚಾಗುತ್ತದೆ. ಹೆಚ್ಚಾದ ಒತ್ತಡವು ಕಣ್ಣಿನ ಎಲ್ಲಾ ಭಾಗಗಳ ಮೇಲೆ ತನ್ನ ಪ್ರಭಾವ ಬೀರುವುದರಿಂದ ಮತ್ತು ಕಣ್ಣಿನ ಹೊರಗಿನ ಕವಚಗಳು ಬಹಳ ತೆಳುವಾಗಿರುವು ದರಿಂದ ಇಡೀ ಕಣ್ಣೇ ದೊಡ್ಡದಾಗಿಬಿಡುತ್ತದೆ. ಇದಕ್ಕೆ ಚಿಕಿತ್ಸೆ ಮಾಡುವುದು ಕ್ಲಿಷ್ಟಕರ, ಆದರೂ ಶಸಕ್ರಿಯೆಯ ಮೂಲಕ ಪ್ರಯತ್ನಿಸಬಹುದು.

ಗ್ಲಾಕೋಮಾವನ್ನು ಕಂಡುಹಿಡಿಯಲು ಹಲವಾರು ಪರೀಕ್ಷೆಗಳನ್ನು ಮಾಡಲಾಗುತ್ತದೆ. ಮುಖ್ಯವಾಗಿ ಟೋನೋಮೆಟ್ರಿ, ಆಪ್ತಾಲ್ಮೋಸ್ಕೋಪಿ, ಪೆರಿಮೆಟ್ರಿ, ಪಾಚಿಮೆಟ್ರಿ, ಆಪ್ಟಿಕ್ ಚಕ್ರದ ಬದಲಾವಣೆಗಳು ಮುಂತಾದ ಪರೀಕ್ಷೆಗಳು ರೋಗ ಪತ್ತೆ ಹಚ್ಚಲು ಸಹಾಯಕ ವಾಗುವುವು.

ಇನ್ನು ವೈದ್ಯಕೀಯ ಚಿಕಿತ್ಸೆಯಲ್ಲಿ ಕಣ್ಣಿನ ಒಳ ಒತ್ತಡವನ್ನು ಕಡಿಮೆ ಮಾಡಲು ಸ್ಥಳೀಯ ವಾಗಿ ಕಣ್ಣಿನ ಔಷಧಿ ಹನಿಗಳನ್ನು ಮತ್ತು ಮಾತ್ರೆಗಳನ್ನು ನೀಡಲಾಗುತ್ತದೆ. ಕಣ್ಣಿನ ಒಳ ಒತ್ತಡವನ್ನು ಕಡಿಮೆ ಮಾಡಿದ ನಂತರ ಶಸಚಿಕಿತ್ಸೆಯನ್ನು ಮಾಡಲಾಗುತ್ತದೆ. ಕೆನಲೋ ಪ್ಲಾಸ್ಟಿ, ಲೇಸರ್ ಶಸಚಿಕಿತ್ಸೆ (ಆರ್ಗನ್ ಲೇಸರ್ ಟ್ರಾಬೆಕ್ಯುಲೋಪ್ಲಾಸ್ಟಿ), ಟ್ರಾಬೆಕ್ಯುಲೆಕ್ಟಮಿ, ಗ್ಲಾಕೋಮಾ ಡ್ರೇನೇಜ್ ಇಂಪ್ಲಾಂಟ್ಸ್, ಲೇಸರ್ ನೆರವಿನ ಚುಚ್ಚುವಿಕೆಯಿಲ್ಲದ ಆಳವಾದ ಸ್ಕಿರೆಕ್ಟಮಿ ಮುಂತಾದವು ಇವುಗಳಲ್ಲಿ ಸೇರಿದೆ.

Don't let Glucoma darken life! ಎಂದಿದ್ದಾರೆ ರೆವರೆಂಡ್ ಬಾಯ್ಡ್ ಎಂಬ ತಜ್ಞರು. ಆದ್ದರಿಂದ, ಪ್ರಾರಂಭಿಕ ದೆಸೆಯ ರೋಗನಿರ್ಣಯ ಮತ್ತು ಪರಿಣಾಮಕಾರಿ ಚಿಕಿತ್ಸೆ ಅತ್ಯಂತ ಅವಶ್ಯ. ದೃಷ್ಟಿಗೆ ಮಾರಕವಾದ ಗ್ಲಾಕೋಮಾವನ್ನು ಬೇಗ ಪತ್ತೆಹಚ್ಚಿಕೊಂಡು, ತ್ವರಿತವಾಗಿ ಚಿಕಿತ್ಸೆಯನ್ನು ಪಡೆಯಬೇಕು. ಗ್ಲಾಕೋಮಾ ಚಿಕಿತ್ಸೆಯಿಂದ ಹೋದ ದೃಷ್ಟಿಯನ್ನು ಮರಳಿ ಪಡೆಯಲಾಗದಿದ್ದರೂ, ಇರುವಷ್ಟು ದೃಷ್ಟಿಯನ್ನು ಉಳಿಸಿಕೊಳ್ಳಬಹುದಾಗಿದೆ.

(ಲೇಖಕರು ವಿಶ್ರಾಂತ ಜಿಲ್ಲಾ ಶಸ್ತ್ರ ಚಿಕಿತ್ಸಕರು)