ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ತೈವಾನ್‌ ಸುತ್ತುವರಿದ ಚೀನಾ ಸೇನೆ! ತೀವ್ರ ಸಮರಾಭ್ಯಾಸ, ಕಾರಣವೇನು?

China- Taiwan: ಚೀನಾ ತೈವಾನ್‌ ಸುತ್ತಮುತ್ತ ತನ್ನ ಸೇನೆಯಿಂದ ಸುತ್ತುವರಿದಿದೆ. ಸಮರಾಭ್ಯಾಸವನ್ನು ತೀವ್ರಗೊಳಿಸಿದೆ. ಆಕಾಶಕ್ಕೆ ರಾಕೆಟ್‌ಗಳ ಸುರಿಮಳೆಗೆರೆದಿದೆ. ಆಯಕಟ್ಟಿನ ಸ್ಥಳಗಳನ್ನು ಸುತ್ತುವರಿದಿದ್ದು, ಬೇರೆ ದೇಶಗಳ ಸೇನಾ ಪಡೆ ಬರದಂತೆ ತಡೆ ಒಡ್ಡಿದೆ. ಚೀನಾದ ಭೂ ಸೇನೆ-ನೌಕಾಪಡೆ ಮತ್ತು ವಾಯುಪಡೆ ಜಂಟಿಯಾಗಿ ತೈವಾನ್‌ ಸುತ್ತಲೂ ಸಮರಾಭ್ಯಾಸ ನಡೆಸಿವೆ.

ತೈವಾನ್‌ ಸುತ್ತುವರಿದ ಚೀನಾ ಸೇನೆ! ತೀವ್ರ ಸಮರಾಭ್ಯಾಸ, ಕಾರಣವೇನು?

ಚೀನಾ- ತೈವಾನ್‌ -

ಬೀಜಿಂಗ್‌: ಚೀನಾ ತೈವಾನ್‌ ಸುತ್ತಮುತ್ತ ತನ್ನ (China- Taiwan) ಸೇನೆಯಿಂದ ಸುತ್ತುವರಿದಿದೆ. ಸಮರಾಭ್ಯಾಸವನ್ನು ತೀವ್ರಗೊಳಿಸಿದೆ. ಆಕಾಶಕ್ಕೆ ರಾಕೆಟ್‌ಗಳ ಸುರಿಮಳೆಗೆರೆದಿದೆ. ಆಯಕಟ್ಟಿನ ಸ್ಥಳಗಳನ್ನು ಸುತ್ತುವರಿದಿದ್ದು, ಬೇರೆ ದೇಶಗಳ ಸೇನಾ ಪಡೆ ಬರದಂತೆ ತಡೆ ಒಡ್ಡಿದೆ. ಚೀನಾದ ಭೂ ಸೇನೆ-ನೌಕಾಪಡೆ ಮತ್ತು ವಾಯುಪಡೆ ಜಂಟಿಯಾಗಿ ತೈವಾನ್‌ ಸುತ್ತಲೂ ಸಮರಾಭ್ಯಾಸ ನಡೆಸಿವೆ. ಚೀನಿ ಮಿಲಿಟರಿ ಪಡೆಯೇ ಇದನ್ನು ದೃಢಪಡಿಸಿದೆ. ತೈವಾನ್‌ಗೆ ಇದೊಂದು ಎಚ್ಚರಿಕೆಯ ಗಂಟೆಯಾಗಿದೆ.

ಈ ಸಮರಾಭ್ಯಾಸವನ್ನು ಚೀನಾ " ಜಸ್ಟೀಸ್‌ ಮಿಶನ್‌ 2025'' ಎಂದು ಘೋಷಿಸಿದೆ. ಇದಕ್ಕೆ ಕಾರಣವೇನು ? ತೈವಾನ್‌ ವಿರುದ್ಧ ಚೀನಾಕ್ಕೆ ಏಕೆ ಇಷ್ಟು ಸಿಟ್ಟು? ಕಾರಣ ಇಲ್ಲದಿಲ್ಲ.

ತೈವಾನ್‌ ಇತ್ತೀಚೆಗೆ ಅಮೆರಿಕದಿಂದ 11 ಶತಕೋಟಿ ಡಾಲರ್‌ ಮೌಲ್ಯದ ಭಾರಿ ಶಸ್ತ್ರಾಸ್ತ್ರಗಳನ್ನು ಖರೀದಿಸಿದೆ. ರುಪಾಯಿ ಲೆಕ್ಕದಲ್ಲಿ 98 ಸಾವಿರ ಕೋಟಿ ರುಪಾಯಿಗಳಾಗುತ್ತದೆ. ಇದರ ವಿರುದ್ಧ ಚೀನಾ ಕಿಡಿ ಕಾರಿದೆ. ಇದರ ವಿರುದ್ಧ ಪ್ರತಿಭಟನೆಯ ಸಂಕೇತವಾಗಿ ಭಾರಿ ಸಮರಾಭ್ಯಾಸ ನಡೆಸುತ್ತಾ ತೈವಾನನ್ನು ಸುತ್ತುವರಿದಿದೆ.

ತೈವಾನ್‌ ಕೂಡ ಇದಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದು, ಚೀನಾದ ನಡೆಯನ್ನು ತೀವ್ರವಾಗಿ ಖಂಡಿಸಿದೆ. ಅಂತಾರಾಷ್ಟ್ರೀಯ ಕಾನೂನುಗಳನ್ನು ಚೀನಾ ಉಲ್ಲಂಘಿಸಿದೆ ಎಂದು ತೈವಾನ್‌ ಅಧ್ಯಕ್ಷರು ಹೇಳಿದ್ದಾರೆ. ತೈವಾನ್‌ ಹೈ ಅಲರ್ಟ್‌ ಘೋಷಿಸಿದ್ದು, ತನ್ನ ಪ್ರಜೆಗಳ ರಕ್ಷಣೆ ಮಾಡುವುದಾಗಿ ತಿಳಿಸಿದೆ.

ಚೀನಾ ಏನು ಹೇಳುತ್ತಿದೆ ಎಂದರೆ, ಪ್ರತ್ಯೇಕತಾವಾದಿಗಳನ್ನು ದಂಡಿಸಲು ಈ ಕ್ರಮ ಕೈಗೊಂಡಿರುವುದಾಗಿ ತಿಳಿಸಿದೆ. ಹಾಗಾದರೆ ಏನಿದು ಚೀನಾ-ತೈವಾನ್‌ ವಿವಾದ?

ಚೀನಾ ಯಾವತ್ತೂ ತೈವಾನ್‌ ತನಗೆ ಸೇರಿದ್ದು, ಒಂದಿಲ್ಲೊಂದು ದಿನ ತೈವಾನ್‌ ಚೀನಾದ ಜತೆ ವಿಲೀನವಾಗಬೇಕು ಎಂದು ಪ್ರತಿಪಾದಿಸುತ್ತದೆ. ತೈವಾನ್‌ ತನ್ನನ್ನು ಪ್ರತ್ಯೇಕ ದೇಶ ಎಂದು ಘೋಷಿಸಿಕೊಂಡಿದೆ. ಚೀನಾದ ಅಧಿಪತ್ಯವನ್ನು ಅದು ಒಪ್ಪುತ್ತಿಲ್ಲ.

ಚಾರಿತ್ರಿಕ ಹಿನ್ನೆಲೆಯನ್ನು ನೋಡುವುದಿದ್ದರೆ, ಕ್ವಿಂಗ್‌ ವಂಶದ ಕಾಲದಲ್ಲಿ ತೈವಾನ್‌ ಚೀನಾದ ನಿಯಂತ್ರಣದಲ್ಲಿತ್ತು. ಆದರೆ 1895ರಲ್ಲಿ ತೈವಾನನ್ನು ಜಪಾನ್‌ ವಶಪಡಿಸಿಕೊಂಡಿತ್ತು. 1945ರಲ್ಲಿ ಎರಡನೇ ಜಾಗತಿಕ ಯುದ್ಧದಲ್ಲಿ ಜಪಾನ್‌ ಸೋತ ಬಳಿಕ ಚೀನಾವು ತೈವಾನ್‌ ಮೇಲಿನ ನಿಯಂತ್ರಣ ಪಡೆದುಕೊಂಡಿತ್ತು. ಆದರೆ 1949ರಲ್ಲಿ ನಾಗರಿಕ ಯುದ್ಧ ನಡೆದು ಕಮ್ಯುನಿಸ್ಟರು ಮತ್ತು ತೈವಾನ್‌ ರಾಷ್ಟ್ರೀಯವಾದಿಗಳ ಸಂಘರ್ಷ ಹೆಚ್ಚಿತು. ತೈವಾನ್‌ ಸ್ವಯಂ ಪ್ರಜಾಪ್ರಭುತ್ವ ಆಡಳಿತ ನಡೆಸುತ್ತಿದ್ದು, ತನ್ನದೇ ಚುನಾಯಿತ ಸರಕಾರ, ಕರೆನ್ಸಿ, ಮಿಲಿಟರಿಯನ್ನು ಹೊಂದಿದೆ. ಚೀನಾದ ಜತೆಗೆ ಏಕೀಕರಣವನ್ನು ಅದು ವಿರೋಧಿಸುತ್ತಿದೆ.

ಈ ನಡುವೆ ತೈವಾನ್‌ ಮತ್ತು ಚೀನಾ ಬಿಕ್ಕಟ್ಟು ತೀವ್ರಗೊಂಡರೆ ಜಪಾನ್‌ ತನ್ನ ಮಿಲಿಟರಿ ಪಡೆಯನ್ನು ಕಳಿಸಬೇಕಾಗುತ್ತದೆ ಎಂದು ಜಪಾನ್‌ ಪ್ರಧಾನಿ ಸಾನಾಯೆ ಟಕೈಚಿ ಕಳೆದ ನವೆಂಬರ್‌ನಲ್ಲಿ ಹೇಳಿದ್ದಾರೆ. ಇದು ಚೀನಾ-ಜಪಾನ್‌ ಸಂಬಂಧವನ್ನು ಸಂಕೀರ್ಣಗೊಳಿಸಿದೆ.

ಮತ್ತೊಂದು ಕಡೆ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌, ಚೀನಾ ನಡೆಸುತ್ತಿರುವ ಸಮರಾಭ್ಯಾಸದಿಂದ ತೈವಾನ್‌ ಗೆ ಏನೂ ಧಕ್ಕೆಯಾಗುವುದಿಲ್ಲ ಎಂದಿದ್ದಾರೆ.

ನನಗೆ ಚೀನಾ ಅಧ್ಯಕ್ಷ ಕ್ಸಿ ಜಿನ್‌ ಪಿಂಗ್‌ ಜತೆಗೆ ಉತ್ತಮ ಸಂಬಂದ ಇದೆ. ಸಮರಾಭ್ಯಾಸದ ಬಗ್ಗೆ ಅವರು ನನಗೇ ಏನೂ ತಿಳಿಸಿಲ್ಲ. ನಾನಿದನ್ನು ಗಮನಿಸುತ್ತಿದ್ದೇನೆ. ಏನೂ ಸಮಸ್ಯೆ ಇಲ್ಲ ಎಂದಿದ್ದಾರೆ. ಕಳೆದ 20 ವರ್ಷದಿಂದಲೂ ಅದೇ ಪ್ರದೇಶದಲ್ಲಿ ಚೀನಾ ಸಮರಾಭ್ಯಾಸ ನಡೆಸುತ್ತಿದೆ ಎಂದಿದ್ದಾರೆ. ಆದರೆ ಚೀನಾದ 130ಕ್ಕೂ ಹೆಚ್ಚು ಯುದ್ಧ ವಿಮಾನಗಳು ತೈವಾನ್‌ ಅನ್ನು ಸುತ್ತುವರಿದಿವೆ. ಅವುಗಳಲ್ಲಿ 90 ವಿಮಾನಗಳು ಅನಧಿಕೃತ ಗಡಿ ನಿಯಂತ್ರಣ ರೇಖೆಯನ್ನು ದಾಟಿವೆ ಎಂದು ವರದಿಯಾಗಿವೆ.

ಇಲ್ಲೊಂದು ಸಂಗತಿಯನ್ನು ಗಮನಿಸಬಹುದು. ತೈವಾನ್‌ ಗೆ ಭಾರಿ ಶಸ್ತ್ರಾಸ್ತ್ರಗಳನ್ನು ಮಾರಾಟ ಮಾಡಿರುವ ಅಮೆರಿಕ ಇದೀಗ ಚೀನಾದ ಪರ ಮಾತನಾಡುತಿದೆ. ತೈವಾನ್‌ ವಿರುದ್ಧ ಇಷ್ಟು ದೊಡ್ಡ ಸಮರಾಭ್ಯಾಸ ನಡೆಸುತ್ತಿದ್ದರೂ, ಚಿಂತೆ ಇಲ್ಲ ಎಂದಿರುವುದು ತೈವಾನ್‌ ಅನ್ನು ಇಕ್ಕಟ್ಟಿಗೆ ಸಿಲುಕಿಸಿದೆ. ಇತ್ತೀಚೆಗೆ ಟ್ರಂಪ್‌, ಚೀನಾ ಅಧ್ಯಕ್ಷ ಕ್ಸಿ ಜಿನ್‌ ಪಿಂಗ್‌ ಬಗ್ಗೆ ಮೃದು ಧೋರಣೆ ವಹಿಸಿದ್ದಾರೆ. ಹಳೆಯ ಅಧ್ಯಕ್ಷರು ಸ್ಮಾರ್ಟ್‌ ಇರದಿದ್ದ ಕಾರಣ ಅಮೆರಿಕ-ಚೀನಾ ಸಂಘರ್ಷ ಆಗಿದೆಯೇ ಹೊರತು ಬೇರೇನೂ ಅಲ್ಲ ಎಂದಿದ್ದಾರೆ.

ಇತ್ತೀಚೆಗೆ ರಷ್ಯಾದಿಂದ ಕಚ್ಚಾ ತೈಲ ಖರೀದಿಸುತ್ತಿರುವ ಚೀನಾ ವಿರುದ್ಧ ಮತ್ತಷ್ಟು ಕಠಿಣ ನಿರ್ಬಂಧ ವಿಧಿಸುತ್ತೀರಾ ಎಂಬ ಸುದ್ದಿಗಾರರ ಪ್ರಶ್ನೆಗೆ, ಚೀನಾ ಜತೆಗೆ ಸಂಬಂಧ ಚೆನ್ನಾಗಿರಬೇಕು ಎಂಬುದೇ ನನ್ನ ಆಸೆ ಎಂದಿದ್ದರು.