Kiran Upadhyay Column: ಯುದ್ಧ ಮಾಡದೇ ಗೆದ್ದ ಯುನೈಟೆಡ್ ಅರಬ್ ಎಮಿರೇಟ್ಸ್
ಯುಎಇಯ ಹಡಗುಗಳು ದಕ್ಷಿಣ ಯಮನ್‌ನಲ್ಲಿರುವ ಎಸ್‌ಟಿಸಿ (ಸದರ್ನ್ ಟ್ರಾನ್ಸಿಷನಲ್ ಕೌನ್ಸಿಲ್) ಪ್ರತ್ಯೇಕತಾವಾದಿಗಳಿಗಾಗಿ ಶಸ್ತ್ರಾಸ್ತ್ರ ಹೊತ್ತು ತಂದಿವೆ ಎಂದು ಆರೋಪಿಸಿದ ಸೌದಿ ಅರೇಬಿಯಾ ಬಾಂಬ್ ಹಾಕಿತ್ತು. ಹಡಗಿನಲ್ಲಿ ತಂದ ವಾಹನಗಳು ತಮ್ಮ ಕೆಲಸಕ್ಕಾಗಿ ಎಂದು ಯುಎಇ ಹೇಳಿದರೂ ಸೌದಿ ಒಪ್ಪಲಿಲ್ಲ. ಅಲ್ಲದೇ, ಇನ್ನು 36 ಗಂಟೆಗಳ ಒಳಗೆ ಯುಎಇ ಪ್ರತ್ಯೇಕತಾವಾದಿಗಳಿಗೆ ನೀಡುವ ಸಹಕಾರವನ್ನು ನಿಲ್ಲಿಸಬೇಕು ಎಂದು ಅಲ್ಲಿಯ ಸರಕಾರದ ಮುಖೇನ ಸಂದೇಶ ಕಳುಹಿಸಿತು. ಅದಕ್ಕೆ ಯುಎಇ ಒಪ್ಪಿತು. ಈ ವಿಷಯದಲ್ಲಿ ತನ್ನ ಪ್ರತಿಷ್ಠೆಗೆ ಧಕ್ಕೆಯುಂಟಾಗುತ್ತದೆ ಎಂದಾಗಲಿ, ಗೌರವ ಕಡಿಮೆಯಾಗುತ್ತದೆ ಎಂದಾಗಲಿ ಅದು ಪರಿಗಣಿಸ ಲಿಲ್ಲ. ಬದಲಾಗಿ, ಇನ್ನೊಂದು ಯುದ್ಧ ಆರಂಭವಾಗುವುದನ್ನು ತಡೆದು, ಈ ಪ್ರದೇಶದಲ್ಲಿ ಶಾಂತಿ ನೆಲೆಸುವಂತೆ ಮಾಡಿತು.
-
ವಿದೇಶವಾಸಿ
ಹೊಸ ವರ್ಷ ಎಲ್ಲರಿಗೂ ಶುಭ ತರಲಿ, ಬರಗಾಲ ಬರದಿರಲಿ, ಬಿರುಗಾಳಿ ಬೀಸದಿರಲಿ, ಬಾಂಬುಗಳು ಬೀಳದಿರಲಿ ಎಂದು ಬಯಸುತ್ತಿರುವಾಗಲೇ ಡಿಸೆಂಬರ್ 31ರಂದು ಇನ್ನೊಂದು ಹೊಸ ಯುದ್ಧ ಆರಂಭವಾಗುವ ಸೂಚನೆ ಕಂಡುಬಂದಿತ್ತು. ಅದೂ ಹೇಗೆಂದರೆ, ಪರಸ್ಪರ ಮಿತ್ರರಾಗಿರುವ ಸೌದಿ ಅರೇಬಿಯಾ ಮತ್ತು ಯುಎಇ (ಯುನೈಟೆಡ್ ಅರಬ್ ಎಮಿರೇಟ್ಸ) ನಡುವೆ.
ದೇಶವಾಗಿ ಗುರುತಿಸಿಕೊಂಡಾಗಿನಿಂದ ಸಹೋದರ ಸಂಬಂಧ ಹೊಂದಿದ ಎರಡು ದೇಶಗಳು ಯುದ್ಧಕ್ಕೆ ಮುಂದಾದವೇ ಎಂಬುದು ಕಳವಳವಾಗಿತ್ತು. ಜಗತ್ತಿನಾದ್ಯಂತ ಇಂದು ಸಾಕಷ್ಟು ಯುದ್ಧಗಳು ನಡೆಯುತ್ತಿವೆ. ಇಸ್ರೇಲ್ ಮತ್ತು ಪ್ಯಾಲೆಸ್ತೀನ್, ರಷ್ಯಾ ಮತ್ತು ಉಕ್ರೇನ್ ಯುದ್ಧ ಗಳು ಆರಂಭವಾಗಿ ದಶಕವೇ ಕಳೆದರೂ, ಕಳೆದ 2-3 ವರ್ಷದಿಂದ ಉಚ್ಛ್ರಾಯ ಸ್ಥಿತಿ ತಲುಪಿವೆ.
ಇತ್ತೀಚೆಗೆ, ಶಾಂತಿಯುತ ದೇಶಗಳೆಂದು ಕರೆಸಿಕೊಳ್ಳುವ ಥಾಯ್ಲೆಂಡ್ ಮತ್ತು ಕಾಂಬೋಡಿಯಾ ಕೂಡ ಯುದ್ಧ ಶುರು ಹಚ್ಚಿಕೊಂಡಿವೆ. ಚೀನಾ ಮತ್ತು ತೈವಾನ್, ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನ, ಭಾರತ ಮತ್ತು ಪಾಕಿಸ್ತಾನ, ಉತ್ತರ ಕೊರಿಯಾ ಮತ್ತು ದಕ್ಷಿಣ ಕೊರಿಯಾ, ಹೀಗೆ ಸಾಕಷ್ಟು ದೇಶಗಳ ನಡುವಿನ ಸಂಬಂಧ ಬೂದಿ ಮುಚ್ಚಿದ ಕೆಂಡದಂತಿದೆ.
ಇವೆಲ್ಲದರ ಹೊರತಾಗಿ ಬಾಂಗ್ಲಾದೇಶ, ಮ್ಯಾನ್ಮಾರ್, ಸುಡಾನ್, ಸೊಮಾಲಿಯಾ, ಸಿರಿಯಾ, ಪಾಕಿಸ್ತಾನ ಇತ್ಯಾದಿ ಸುಮಾರು 50 ದೇಶಗಳಲ್ಲಿ ಅಂತರ್ಯುದ್ಧ ನಡೆಯುತ್ತಿದೆ. ಇದನ್ನು ಬರೆಯುವ ಹೊತ್ತಿಗೆ, ವೆನಿಝುವೆಲಾದ ಅಧ್ಯಕ್ಷರನ್ನು ಪತ್ನಿ ಸಮೇತ ಅಮೆರಿಕದ ಡೆಲ್ಟಾ ಪಡೆ ಹೊತ್ತುಕೊಂಡು ಹೋಗಿದೆ ಎಂಬ ವಾರ್ತೆ ಬರುತ್ತಿದೆ.
ಇದನ್ನೂ ಓದಿ: Kiran Upadhyay Column: ತಾಳಮದ್ದಳೆ ಬಾಲಿವುಡ್, ಅರ್ಥಧಾರಿಗಳು ಐಟಂ ಡ್ಯಾನ್ಸರ್ʼಗಳಾಗಬಾರದು
ಹಾಗಿರುವಾಗ, ಶಾಂತಿಯುತವಾದ ಕೊಲ್ಲಿ ರಾಷ್ಟ್ರಗಳಲ್ಲಿ, ಅದರಲ್ಲೂ ಪರಸ್ಪರ ಅವರವ ರಲ್ಲಿಯೇ ಯುದ್ಧ ಆರಂಭವಾದರೆ, ಅದೂ ಮತ್ತೊಂದು ದೇಶದ ಸಲುವಾಗಿ ಎಂದರೆ ಯಾರಿಗಾದರೂ ಕಳವಳ ಉಂಟು ಮಾಡುವ ವಿಷಯವೇ ಆಗಿತ್ತು. ಈ ಎಲ್ಲ ಆತಂಕವೂ ಒಂದೇ ದಿನದಲ್ಲಿ ಇತ್ಯರ್ಥವಾದದ್ದು ಸಮಾಧಾನಕರವಷ್ಟೇ ಅಲ್ಲ, ಶ್ಲಾಘನೀಯವೂ ಹೌದು.
ಸಾಮಾನ್ಯವಾಗಿ ಯುದ್ಧ ಆರಂಭವಾಗುವುದು ಯಾವುದೋ ಒಂದು ಕಾರಣಕ್ಕೆ. ಮುಂದು ವರಿಯುತ್ತಿದ್ದಂತೆ, ಅಯಾ ದೇಶದ ಅಥವಾ ಆಡಳಿತಗಾರರ ಪ್ರತಿಷ್ಠೆಯಾಗಿ ಮಾರ್ಪಾಡಾ ಗುತ್ತದೆ. ಯುದ್ಧದಲ್ಲಿನ ಸೋಲು-ಗೆಲುವು ದಾಖಲೆಯಾಗಿ ಇತಿಹಾಸದ ಪುಟಗಳಲ್ಲಿ ಸೇರಿಕೊಳ್ಳುತ್ತದೆ.
ಸೋತವರ ಪಟ್ಟಿಯಲ್ಲಿ ತನ್ನ ಹೆಸರು ಸೇರಬಾರದು ಎಂಬ ಪ್ರತಿಷ್ಠೆ ಅಥವಾ ಗೆದ್ದವರ ಪಟ್ಟಿಯಲ್ಲಿ ತನ್ನ ಹೆಸರು ಸೇರಬೇಕು ಎಂಬ ಪ್ರತಿಷ್ಠೆ. ಇಲ್ಲವಾದರೆ, ವರ್ಷಾನುಗಟ್ಟಲೆ ಯುದ್ಧ ಮಾಡಿ ಕೊನೆಗೊಮ್ಮೆ ರಾಜಿ ಮಾಡಿಕೊಳ್ಳಬಹುದು ಎಂದಾದರೆ, ಅದನ್ನು ಮೊದಲೇ ಮಾಡಿಕೊಳ್ಳಬಹುದಾಗಿತ್ತಲ್ಲ? ಅದರಲ್ಲೂ ಮೂರನೆಯವರ ಪ್ರವೇಶ ವಾದರಂತೂ ಕೇಳುವುದೇ ಬೇಡ, ಪರಸ್ಪರ ಯುದ್ಧ ಮಾಡುತ್ತಿರುವವರು ರಾಜಿ ಮಾಡಿ ಕೊಳ್ಳಬೇಕು, ಯುದ್ಧ ನಿಲ್ಲಿಸಬೇಕು ಅಂದುಕೊಂಡರೂ ಮೂರನೆಯವರು ಬಿಡುವುದಿಲ್ಲ!
2025ನೇ ವರ್ಷದ ಕೊನೆಯ ದಿನದಂದು ಇದ್ದಕ್ಕಿದ್ದಂತೆ ಸೌದಿ ಅರೇಬಿಯಾ ಯಮನ್‌ನ ಮಕಾಲಾ ಬಂದರಿನ ಮೇಲೆ ಬಾಂಬ್ ದಾಳಿ ನಡೆಸಿತು ಎಂದು ಮೊದಲು ಕೇಳಿದಾಗ ಆಶ್ಚರ್ಯವೇನೂ ಆಗಿರಲಿಲ್ಲ. ಏಕೆಂದರೆ ಯಮನ್ ಮೇಲೆ ಸೌದಿ ಅರೇಬಿಯಾ ಬಾಂಬ್ ದಾಳಿ ನಡೆಸುವುದು ಇದೇ ಮೊದಲ ಬಾರಿಯೇನೂ ಅಲ್ಲ. ಈ ಮೊದಲೂ ಸಾಕಷ್ಟು ಸಲ ಸೌದಿ ಯಮನ್ ಮೇಲೆ, ಅದರಲ್ಲೂ ಹೌತಿಗಳ ಮೇಲೆ ಬಾಂಬ್ ಎಸೆದಿದೆ. ಆದರೆ ಮೊನ್ನೆ ಬಾಂಬ್ ಹಾಕಲು ಕಾರಣ ಯುಎಇ ಎಂದು ಕೇಳಿದಾಗ ಆಶ್ಚರ್ಯವಾಯಿತು.
ಅಂದು ಯುಎಇಯ ಫುಜೇರಾ ಬಂದರಿನಿಂದ ಹೊರಟ 2 ಹಡಗುಗಳು ದಕ್ಷಿಣ ಯಮನ್‌ನ ಮಕಾಲಾ ಬಂದರು ತಲುಪಿದ್ದವು. ಹಡಗಿನೊಳಗಿಂದ ಒಂದಷ್ಟು ಕಾರು, ಜೀಪುಗಳು ಸಾಲಾಗಿ ಹೊರಗೆ ಬಂದು ಸಮೀಪದ ಯಾರ್ಡ್‌ನಲ್ಲಿ ನಿಲ್ಲಲು ಆರಂಭವಾಗುತ್ತಿದ್ದಂತೆಯೇ ಮೇಲಿನಿಂದ ಬಾಂಬ್ ಬೀಳಲಾರಂಭವಾಯಿತು.
ಯುಎಇಯ ಹಡಗುಗಳು ದಕ್ಷಿಣ ಯಮನ್‌ನಲ್ಲಿರುವ ಎಸ್‌ಟಿಸಿ (ಸದರ್ನ್ ಟ್ರಾನ್ಸಿಷನಲ್ ಕೌನ್ಸಿಲ್) ಪ್ರತ್ಯೇಕತಾವಾದಿಗಳಿಗಾಗಿ ಶಸ್ತ್ರಾಸ್ತ್ರ ಹೊತ್ತು ತಂದಿವೆ ಎಂದು ಆರೋಪಿಸಿದ ಸೌದಿ ಅರೇಬಿಯಾ ಬಾಂಬ್ ಹಾಕಿತ್ತು. ಹಡಗಿನಲ್ಲಿ ತಂದ ವಾಹನಗಳು ತಮ್ಮ ಕೆಲಸಕ್ಕಾಗಿ ಎಂದು ಯುಎಇ ಹೇಳಿದರೂ ಸೌದಿ ಒಪ್ಪಲಿಲ್ಲ. ಅಲ್ಲದೇ, ಇನ್ನು 36 ಗಂಟೆಗಳ ಒಳಗೆ ಯುಎಇ ಪ್ರತ್ಯೇಕತಾವಾದಿಗಳಿಗೆ ನೀಡುವ ಸಹಕಾರವನ್ನು ನಿಲ್ಲಿಸಬೇಕು ಎಂದು ಅಲ್ಲಿಯ ಸರಕಾರದ ಮುಖೇನ ಸಂದೇಶ ಕಳುಹಿಸಿತು. ಅದಕ್ಕೆ ಯುಎಇ ಒಪ್ಪಿತು. ಈ ವಿಷಯದಲ್ಲಿ ತನ್ನ ಪ್ರತಿಷ್ಠೆಗೆ ಧಕ್ಕೆಯುಂಟಾಗುತ್ತದೆ ಎಂದಾಗಲಿ, ಗೌರವ ಕಡಿಮೆಯಾಗುತ್ತದೆ ಎಂದಾಗಲಿ ಅದು ಪರಿಗಣಿಸಲಿಲ್ಲ. ಬದಲಾಗಿ, ಇನ್ನೊಂದು ಯುದ್ಧ ಆರಂಭವಾಗುವುದನ್ನು ತಡೆದು, ಈ ಪ್ರದೇಶದಲ್ಲಿ ಶಾಂತಿ ನೆಲೆಸುವಂತೆ ಮಾಡಿತು.
ಯಮನ್ ವಿಷಯದಲ್ಲಿ ಈ ಎರಡು ದೇಶಗಳು ಯಾಕೆ ಜಗಳ ಮಾಡಿಕೊಳ್ಳಬೇಕು ಎಂದು ತಿಳಿಯಬೇಕಾದರೆ ಸ್ವಲ್ಪ ಹಿಂದಕ್ಕೆ ಹೋಗಬೇಕು. ಅರಬ್ ರಾಷ್ಟ್ರಗಳು ಮತ್ತು ಯಮನ್‌ನ ಜಗಳ ನಿನ್ನೆ-ಮೊನ್ನೆಯದಲ್ಲ. ಇದು 1400 ವರ್ಷಗಳಿಗಿಂತಲೂ ಹಿಂದಿನದ್ದು ಎಂದು ಕೆಲವು ದಾಖಲೆಗಳು ಹೇಳುತ್ತವೆ.
ಮೊದಲಿನಿಂದಲೂ ಯಮನ್ ಉತ್ತರ ಮತ್ತು ದಕ್ಷಿಣವಾಗಿ ಎರಡು ಭಾಗವಾಗಿತ್ತು. ನಕಾಶೆ ಯಲ್ಲಿ ನೋಡಿದರೆ ಅದು ಪೂರ್ವ ಮತ್ತು ಪಶ್ಚಿಮ ಎಂದು ಆಗಬೇಕಿತ್ತು. ಅದನ್ನೇಕೆ ಉತ್ತರ ಮತ್ತು ದಕ್ಷಿಣ ಎಂದು ಕರೆದರೋ ಗೊತ್ತಿಲ್ಲ. ಇರಲಿ ನಾವು ಹಾಗೆಯೇ ಮುಂದುವರಿ ಸೋಣ. ಆಟೋಮನ್ ಸಾಮ್ರಾಜ್ಯದ ಆಡಳಿತದಲ್ಲಿದ್ದ ಉತ್ತರ ಯಮನ್ 1918ರಲ್ಲಿ ಸ್ವತಂತ್ರವಾಯಿತು.
ಅಲ್ಲಿ ಯಮನ್ ಅರಬ್ ರಿಪಬ್ಲಿಕ್ ಹೆಸರಿನಲ್ಲಿ ಸರಕಾರವೂ ಸ್ಥಾಪಿತವಾಯಿತು. ಅದೇ ದಕ್ಷಿಣ ಯಮನ್‌ನಲ್ಲಿ 1936ರಿಂದ ಬ್ರಿಟಿಷ್ ವಸಹಾತುಶಾಹಿ ಆಡಳಿತ ಆರಂಭವಾಯಿತು. ಸುಮಾರು 30 ವರ್ಷಗಳ ನಂತರ, 1967ರಲ್ಲಿ ಬ್ರಿಟಿಷರಿಂದ ಮುಕ್ತಿ ಪಡೆದು ಪಿಡಿಆರ್‌ವೈ (ಪೀಪಲ್ಸ್ ಡೆಮಾಕ್ರೆಟಿಕ್ ರಿಪಬ್ಲಿಕ್ ಆಫ್ ಯಮನ) ಸರಕಾರ ಸ್ಥಾಪಿತವಾಯಿತು.
ಬ್ರಿಟಿಷ್ ಆಡಳಿತದ ಅವಧಿಯಲ್ಲಿ, ಭಾರತಕ್ಕೆ ಸ್ವಾತಂತ್ರ್ಯ ಸಿಗುವವರೆಗೂ ಬ್ರಿಟಿಷರು ಭಾರತದಿಂದಲೇ ಯಮನ್‌ನ ಆಡಳಿತವನ್ನೂ ನಡೆಸುತ್ತಿದ್ದರು. 1990ರಲ್ಲಿ ಉತ್ತರ ಮತ್ತು ದಕ್ಷಿಣ ಯಮನ್ ಎರಡೂ ಒಂದಾಗಿ, ಒಂದೇ ರಾಷ್ಟ್ರವಾಗುವತ್ತ ಮನ ಮಾಡಿದವು.
ದೇಶದ ರಾಷ್ಟ್ರಪತಿ ಉತ್ತರದಿಂದಲೂ, ಪ್ರಧಾನ ಮಂತ್ರಿ ದಕ್ಷಿಣದಿಂದಲೂ ಸೇರಿ ಆಡಳಿತ ನಡೆಸುವುದೆಂದು ನಿರ್ಣಯಿಸಲಾಯಿತು. ಆದರೆ ಅದು ಬಹುಕಾಲ ನಡೆಯಲಿಲ್ಲ. 1994ರ ವೇಳೆಗೆ ಉತ್ತರ ಯಮನ್ ತಕ್ಕ ಮಟ್ಟಿಗೆ ಪ್ರಗತಿ ಹೊಂದಿತ್ತು. ಆದರೆ ದಕ್ಷಿಣದಲ್ಲಿ ಯಾವ ಪ್ರಗತಿಯೂ ಆಗುತ್ತಿರಲಿಲ್ಲ. ಅಭಿವೃದ್ಧಿಗೆ ಬೇಕಾದ ಹಣವಾಗಲಿ ಅಥವಾ ರಾಜಕೀಯ ಸಹಯೋಗವಾಗಲಿ ದಕ್ಷಿಣಕ್ಕೆ ಸಿಗುತ್ತಿರಲಿಲ್ಲ. ಆದ್ದರಿಂದ ಜಗಳ ಮತ್ತು ಆಂತರಿಕ ಕಲಹ ಪುನಃ ಆರಂಭವಾಯಿತು. 2011ರಲ್ಲಿ ಆರಬ್ ಸ್ಪ್ರಿಂಗ್ ಆರಂಭವಾದಾಗ, ನಮ್ಮ ದೇಶ ದಲ್ಲೂ ಪ್ರಜಾಪ್ರಭುತ್ವ ಬರುತ್ತದೆ, ಚುನಾವಣೆ ನಡೆಯುತ್ತದೆ, ನಾವೂ ಮತ ಹಾಕಿ ನಮಗೆ ಬೇಕಾದವರನ್ನು ಆರಿಸಿಕೊಳ್ಳುತ್ತೇವೆ ಎಂಬ ಕನಸು ಕಂಡ ಕೆಲವರು ಅದರ ಹೋರಾಟ ಕ್ಕಾಗಿ ಇನ್ನೊಂದು ಗುಂಪು ಕಟ್ಟಿಕೊಂಡರು.
ಆದರೆ ಅವರ ಕನಸು ಸಾಕಾರವಾಗಲಿಲ್ಲ. 2014ರ ವೇಳೆಗೆ ಯಮನ್‌ನಲ್ಲಿ ಆಂತರಿಕ ಕಲಹ ಆರಂಭವಾಯಿತು. ಉತ್ತರ ಭಾಗದಲ್ಲಿ ಹೌತಿ ಸಂಘಟನೆ ಹುಟ್ಟಿಕೊಂಡಿತು. ಅದುವರೆಗೂ ಎರಡು ಸುನ್ನಿ ಬಣಗಳ ನಡುವೆ ನಡೆಯುತ್ತಿದ್ದ ಕಲಹಕ್ಕೆ ಶಿಯಾ ಮುಸ್ಲಿಮ್ ಸಂಘಟನೆಯ ಪ್ರವೇಶವಾಯಿತು.
ಹೌತಿಗೆ ಇರಾನ್‌ನಿಂದ ಸಹಕಾರವೂ ದೊರೆತಿದ್ದರಿಂದ ಶೀಘ್ರವಾಗಿ ಬೆಳೆಯಲಾರಂಭಿಸಿತು. ಆರಂಭದಲ್ಲಿ ಇವರ ಬೇಡಿಕೆ- ಇಂಧನದ ಬೆಲೆ ಇಳಿಸಬೇಕು ಮತ್ತು ಹೊಸ ಸರಕಾರ ರಚಿಸ ಬೇಕು ಎಂಬುದಾಗಿತ್ತು. ಕೆಲವು ಸುತ್ತು ಮಾತುಕತೆಯೂ ಆದವು. ಆದರೆ ಅವೆಲ್ಲ ಹೊಳೆ ಯಲ್ಲಿ ಹೋಮ ಮಾಡಿದಂತೆ ನಿಷ್ಪ್ರಯೋಜಕವಾದವು.
ಇರಾನ್‌ನಿಂದ ಸಿಗುತ್ತಿದ್ದ ಹಣ ಮತ್ತು ಶಸ್ತ್ರಾಸ್ತ್ರಗಳಿಂದ ಹೌತಿಯು ಉತ್ತರ ಯಮನ್ ನಲ್ಲಿರುವ ತೈಲ ನಿಕ್ಷೇಪಗಳನ್ನು ವಶಪಡಿಸಿಕೊಳ್ಳಲು ಆರಂಭಿಸಿತು. ಸಣ್ಣ-ಪುಟ್ಟ ಗಲಭೆ, ಗಲಾಟೆಗಳ ನಡುವೆ ಹೌತಿ ಯಮನ್‌ನ ಅತಿ ದೊಡ್ಡ ನಗರ ಮತ್ತು ರಾಜಧಾನಿಯಾದ ಸನಾ ನಗರವನ್ನು ವಶಪಡಿಸಿಕೊಂಡಿತು. ಅಧ್ಯಕ್ಷರ ಮನೆ, ದರ್ಬಾರುಗಳೂ ಅವರ ವಶವಾದವು. ಆಗ ಕೊಲ್ಲಿ ರಾಷ್ಟ್ರಗಳಾದ ಸೌದಿ ಅರೇಬಿಯಾ, ಕತಾರ್, ಕುವೈತ್, ಬಹ್ರೈನ್, ಯುಎಇ ಮತ್ತು ಒಮನ್ ದೇಶಗಳು ಒಂದಾಗಿ, ಹೌತಿ ವಿರುದ್ಧ ಹೋರಾಡುವುದಕ್ಕೆ ಮುಂದಾದವು.
ಈ ನಡುವೆ ಅಂದಿನ ಅಧ್ಯಕ್ಷ ಅಬ್ದ್ ರಬ್ ಮನ್ಸೂರ್ ಹಾದಿ ಅನಿವಾರ್ಯವಾಗಿ ರಾಜೀನಾಮೆ ನೀಡುವಂತಾಗಿತ್ತು. ಸೌದಿ ಅರೇಬಿಯಾ ನೇತೃತ್ವದ ಕೊಲ್ಲಿ ರಾಷ್ಟ್ರಗಳ ಒಕ್ಕೂಟ ಅಮೆರಿಕದ ಗುಪ್ತಚರ ದಳದ ಬೆಂಬಲದೊಂದಿಗೆ ಹೌತಿ ವಿರುದ್ಧ ವಾಯುದಾಳಿ ಯನ್ನು ಆರಂಭಿಸಿತು. ಜತೆಗೆ ಆರ್ಥಿಕ ನಿರ್ಬಂಧವೂ ಹೇರಲ್ಪಟ್ಟಿತು.
2018ರಲ್ಲಿ ಸೌದಿ ಅರೇಬಿಯಾ ಹೌತಿಗಳ ಮೇಲೆ ಪುನಃ ಬಾಂಬ್ ದಾಳಿ ನಡೆಸಿತು. ಹಾಗೆಯೇ ದಕ್ಷಿಣದಲ್ಲಿರುವ ಸರಕಾರವನ್ನು ನಡೆಸಲು ಸಹಾಯ ನೀಡಿತು. ಈ ನಡುವೆ 2017ರ ವೇಳೆಗೆ ಯಮನ್‌ನ ದಕ್ಷಿಣ ಭಾಗದಲ್ಲಿ ‘ಎಸ್‌ಟಿಸಿ’ ತಲೆಯೆತ್ತಿ ನಿಂತಿತು. ಉದ್ದೇಶ? ಸ್ವಾತಂತ್ರ್ಯಕ್ಕಾಗಿ ಹೋರಾಟ! ಅದಕ್ಕೆ ಯುಎಇ ಸಹಕಾರ ನೀಡಲು ಮುಂದೆ ಬಂತು. ಎಸ್ ಟಿಸಿಗೆ ಯುಎಇ ಕಡೆಯಿಂದ ಕೆಲವು ಶಸ್ತ್ರಾಸ್ತ್ರಗಳು ಹಾಗೂ ತಕ್ಕಮಟ್ಟಿನ ಹಣಕಾಸಿನ ಸಹಾಯವೂ ಒದಗಿ ಬರುತ್ತಿತ್ತು.
ಮೊನ್ನೆ ಯಮನ್ ಬಂದರಿಗೆ ಬಂದದ್ದೂ ಅದೇ ರೀತಿಯ ಶಸ್ತ್ರಾಸ್ತ್ರ ಎಂಬುದು ಸೌದಿ ಅರೇಬಿಯಾದ ಅಂಬೋಣ. ಇಲ್ಲಿ ಗಮನಿಸಬೇಕಾದ ಅಂಶವೊಂದಿದೆ. ಯಮನ್ ನ ಶೇ.50 ಕ್ಕೂ ಹೆಚ್ಚಿನ ಭೂಮಿ ಸ್ವಾತಂತ್ರ್ಯ ಬೇಕು ಎಂದು ಹೋರಾಡುವ ಎಸ್‌ಟಿಸಿ ಬಳಿ ಇದೆ. ಶೇ.20-25ರಷ್ಟು ಭೂಮಿ ಹೌತಿ ವಶದಲ್ಲಿದೆ.
ಶೇ.10-15ರಷ್ಟು ಇತರೆ ಬಂಡುಕೋರರ ಕೈಯಲ್ಲಿದೆ. ಅಸಲಿಗೆ ಅಲ್ಲಿಯ ಸರಕಾರ ಪಿಎಂಸಿ (ಪ್ರಾವಿಷನ್ ಲೀಡರ್‌ಶಿಪ್ ಕೌನ್ಸಿಲ್) ಕೈಯಲ್ಲಿ ಇರುವುದು ಶೇ.5-10 ಜಾಗ ಮಾತ್ರ. ಅದಕ್ಕೆ ಸೌದಿ ಅರೇಬಿಯಾದ ಸಹಕಾರವಿದೆ. ಯುಎಇ ಹೌತಿ ಬಿಟ್ಟು ಉಳಿದವರಿಗೆ ಸಹಕಾರ ನೀಡುತ್ತಾ ಬಂದಿದೆ.
ಯಮನ್‌ನಲ್ಲಿ ಸಂಘರ್ಷ ಆರಂಭವಾಗಿ 3 ದಶಕಗಳಾಗಿವೆ. ಇದುವರೆಗೆ 5 ಲಕ್ಷಕ್ಕೂ ಹೆಚ್ಚು ಜನ ಇದರಲ್ಲಿ ಮೃತರಾಗಿದ್ದಾರೆ. ಸಂಘರ್ಷ ಆರಂಭವಾದ ಲಾಗಾಯ್ತು 50 ಲಕ್ಷದಷ್ಟು ಜನ ತಮ್ಮ ಮೂಲಸ್ಥಾನವನ್ನು ಬಿಟ್ಟು ಚೆಲ್ಲಾಪಿಲ್ಲಿಯಾಗಿ ಹೋಗಿದ್ದಾರೆ. 1 ಕೋಟಿ ಮಕ್ಕಳೂ ಸೇರಿದಂತೆ 2 ಕೋಟಿಗಿಂತಲೂ ಹೆಚ್ಚು ಜನರಿಗೆ ಸಹಾಯ ಬೇಕಾಗಿದೆ. ಮೂಲಭೂತ ಸೌಕರ್ಯಗಳಾದ ಮನೆ, ಔಷಽ, ಶಿಕ್ಷಣ ಇತ್ಯಾದಿಗಳ ಅವಶ್ಯಕತೆಯಿದೆ.
ಇಂಥ ಸಂದರ್ಭದಲ್ಲಿ ಇನ್ನೊಂದು ಯುದ್ಧವನ್ನು ಎದುರಿಸಬೇಕು ಎಂದರೆ ಹೇಗಾಗಬೇಡ?ಈ ನಿಟ್ಟಿನಲ್ಲಿ ಯೋಚಿಸಿದಾಗ, ಮೊನ್ನೆ ಯುಎಇ ಕೈಗೊಂಡ ನಿರ್ಧಾರ ಸರಿ ಅನಿಸುತ್ತದೆ. ಯಾವುದೇ ಅಹಂಭಾವಕ್ಕೆ ಒಳಗಾಗದೇ, ಸೌದಿ ಅರೇಬಿಯಾದ ಮಾತನ್ನು ಒಪ್ಪಿ ಹಿಂದೆ ಸರಿದು, ಇನ್ನೊಂದು ಯುದ್ಧ, ಇನ್ನಷ್ಟು ನಷ್ಟ, ಇನ್ನಷ್ಟು ಜೀವಹಾನಿಯಾಗುವುದನ್ನು ತಪ್ಪಿಸಿದೆ ಅನಿಸುತ್ತಿದೆ. ಯುದ್ಧ ಮಾಡದೇ ಯುಎಇ ಗೆದ್ದಿದೆ ಅನಿಸುತ್ತಿದೆ.