ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Vishweshwar Bhat Column: ಮಾಯವಾದ ಮ್ಯಾಜಿಷಿಯನ್‌ ಸಂಪಾದಕ

ಕೆಬಿಜಿ ಸಂಗ್ರಹದಲ್ಲಿ ಓಶೋ ಪುಸ್ತಕಗಳಿದ್ದವು, ಅವೆಲ್ಲವನ್ನೂ ಅವರು ಓದಿಕೊಂಡಿದ್ದರು. ಒಮ್ಮೆ ನಾನು ಮೈಸೂರಿನ ಸಿದ್ಧಾರ್ಥ ನಗರದಲ್ಲಿರುವ ಅವರ ಮನೆಗೆ ಹೋದಾಗ ಓಶೋ ಪುಸ್ತಕಗಳ ಸಂಗ್ರಹವನ್ನು ತೋರಿಸಿದ್ದರು. ಅದಾದ ಬಳಿಕ ನಾನು ಅವರ ಸಂಪರ್ಕಕ್ಕೆ ಬಂದೆ. ನಾನು ಸಂಪಾದಕ ನಾಗಿದ್ದ ‘ವಿಜಯ ಕರ್ನಾಟಕ’, ‘ಕನ್ನಡ ಪ್ರಭ’ ಮತ್ತು ಈಗಿನ ನನ್ನ ಸಂಪಾದಕತ್ವದ ‘ವಿಶ್ವವಾಣಿ’ಯಲ್ಲಿ ಒಳ್ಳೆಯ ಶೀರ್ಷಿಕೆ ಗಳನ್ನು ಓದಿದಾಗ, ಹೊಸ ಪ್ರಯೋಗ ಮಾಡಿದಾಗ, ಉತ್ತಮ ವರದಿಗಳನ್ನು ಕಂಡಾಗ, ಕೆಬಿಜಿ ತಪ್ಪದೇ ಫೋನ್ ಮಾಡುತ್ತಿದ್ದರು.

ಮಾಯವಾದ ಮ್ಯಾಜಿಷಿಯನ್‌ ಸಂಪಾದಕ

ಸಂಪಾದಕರ ಸದ್ಯಶೋಧನೆ

ಸುಮಾರು 15 ವರ್ಷಗಳ ಹಿಂದೆ ಓಶೋ ಸ್ಮರಣೆ ಕುರಿತು ಮೈಸೂರಿನಂದು ಕಾರ್ಯಕ್ರಮ. ವಕೀಲ ಮಿತ್ರ ವೇಣುಗೋಪಾಲ ಆ ಕಾರ್ಯಕ್ರಮ ಏರ್ಪಡಿಸಿದ್ದರು. ನಾನು ಮತ್ತು ‘ಸ್ಟಾರ್ ಆ- ಮೈಸೂರ್’ ಹಾಗೂ ‘ಮೈಸೂರು ಮಿತ್ರ’ ಪತ್ರಿಕೆಗಳ ಸಂಸ್ಥಾಪಕ ಸಂಪಾದಕ, ‘ಕೆಬಿಜಿ’ ಎಂದೇ ಜನಪ್ರಿಯ ರಾದ ಕೆ.ಬಿ.ಗಣಪತಿ ವೇದಿಕೆಯಲ್ಲಿ. “ನೀವು ಓಶೋ ಅನುಯಾಯಿ ಎಂಬುದು ಗೊತ್ತಿರಲಿಲ್ಲ" ಎಂದು ಇಬ್ಬರ ಪರಸ್ಪರ ಆರಂಭಿಕ

ಉವಾಚದೊಂದಿಗೆ ಮಾತುಕತೆ ಆರಂಭವಾಯಿತು.

ಆ ದಿನ ನಾವು ಒಂದು ಗಂಟೆಯನ್ನು ಪರಸ್ಪರ ಅರ್ಧರ್ಧ ಹಂಚಿಕೊಂಡವರಂತೆ ಮಾತಾಡಿದ್ದೆವು. ಓಶೋ ಕುರಿತ ‘ಕೆಬಿಜಿ’ ಸೂಕ್ಷ್ಮ ಗ್ರಹಿಕೆ ನನಗೆ ಇಷ್ಟವಾಯಿತು. ಅಲ್ಲಿ ತನಕ ನನ್ನ ಹಾಗೆ ಓಶೋ ಗೀಳು ಹತ್ತಿಸಿಕೊಂಡ ಕನ್ನಡದ ಇನ್ನೊಬ್ಬ ಪತ್ರಕರ್ತ ಅಂದ್ರೆ ರವಿ ಬೆಳಗೆರೆ ಮಾತ್ರ ಎಂದುಕೊಂಡಿದ್ದೆ.

ಕೆಬಿಜಿ ಸಂಗ್ರಹದಲ್ಲಿ ಓಶೋ ಪುಸ್ತಕಗಳಿದ್ದವು, ಅವೆಲ್ಲವನ್ನೂ ಅವರು ಓದಿಕೊಂಡಿದ್ದರು. ಒಮ್ಮೆ ನಾನು ಮೈಸೂರಿನ ಸಿದ್ಧಾರ್ಥ ನಗರದಲ್ಲಿರುವ ಅವರ ಮನೆಗೆ ಹೋದಾಗ ಓಶೋ ಪುಸ್ತಕಗಳ ಸಂಗ್ರಹವನ್ನು ತೋರಿಸಿದ್ದರು. ಅದಾದ ಬಳಿಕ ನಾನು ಅವರ ಸಂಪರ್ಕಕ್ಕೆ ಬಂದೆ. ನಾನು ಸಂಪಾದಕ ನಾಗಿದ್ದ ‘ವಿಜಯ ಕರ್ನಾಟಕ’, ‘ಕನ್ನಡ ಪ್ರಭ’ ಮತ್ತು ಈಗಿನ ನನ್ನ ಸಂಪಾದಕತ್ವದ ‘ವಿಶ್ವವಾಣಿ’ಯಲ್ಲಿ ಒಳ್ಳೆಯ ಶೀರ್ಷಿಕೆಗಳನ್ನು ಓದಿದಾಗ, ಹೊಸ ಪ್ರಯೋಗ ಮಾಡಿದಾಗ, ಉತ್ತಮ ವರದಿಗಳನ್ನು ಕಂಡಾಗ, ಕೆಬಿಜಿ ತಪ್ಪದೇ ಫೋನ್ ಮಾಡುತ್ತಿದ್ದರು.

ಇದನ್ನೂ ಓದಿ: Vishweshwar Bhat Column: ಆಟೋ ಪೈಲಟ್‌ ಬಗ್ಗೆ ಸಂದೇಹ

ಆ ನೆಪದಲ್ಲಿ ನಮ್ಮ ಮಾತುಕತೆ ವಿಸ್ತರಿಸುತ್ತಿತ್ತು. ಆದರೆ ಪತ್ರಿಕೋದ್ಯಮದ ಚೌಕಟ್ಟು ದಾಟುತ್ತಿರಲಿಲ್ಲ. ಅವರೊಂದಿಗೆ ಪತ್ರಿಕೋದ್ಯಮ ಬಿಟ್ಟು ಬೇರೆ ವಿಷಯಗಳ ಬಗ್ಗೆ ಮಾತಾಡಬೇಕು ಎಂದು ನನಗೂ ಅನಿಸುತ್ತಿರಲಿಲ್ಲ. ಕಾರಣ ಅವರೊಬ್ಬ ಪಕ್ಕಾ ಕಸುಬುದಾರಿ (ಪ್ರೊಫೆಷನಲ್) ಸಂಪಾದಕರಾಗಿ ದ್ದರು. ಅವರು ತಮ್ಮನ್ನು ಮಾಲೀಕತ್ವಕ್ಕಷ್ಟೇ ಸೀಮಿತಗೊಳಿಸಿಕೊಂಡು, ಸಂಪಾದಕೀಯ ಜವಾಬ್ದಾರಿಯನ್ನು ಬೇರೆಯವರಿಗೆ ವಹಿಸಿ ಕೊಡುವ ಕಾಟಾಚಾರದ ಅಥವಾ ಪದನಿಮಿತ್ತ ಸಂಪಾದಕ ಆಗಿರಲಿಲ್ಲ. ಹಾಗೆ ನೋಡಿದರೆ ನನಗೆ ಕೆಬಿಜಿ ಮೊದಲು ಪರಿಚಿತರಾಗಿದ್ದು ಮತ್ತು ಆಪ್ತರಾಗಿದ್ದು ‘ಸ್ಟಾರ್ ಆಫ್ ಮೈಸೂರ್ ’ನಲ್ಲಿ ಅವರು ಬರೆಯುತ್ತಿದ್ದ ‘ಅಬ್ರಕಡಬ್ರಾ’ ಮತ್ತು ‘ಮೈಸೂರು ಮಿತ್ರ’ದಲ್ಲಿ ಬರೆಯುತ್ತಿದ್ದ ‘ಛೂಮಂತ್ರ’ ಅಂಕಣ ಗಳಿಂದ. ನಾನು ಆ ಅಂಕಣವನ್ನು ತಪ್ಪದೇ ಓದಿದವನು. ಕಾರಿನ ಡ್ಯಾಶ್‌ಬೋರ್ಡ್ ಮೇಲೆ ಮುಚ್ಚಿದ ಪೇಪರ್ ಕಪ್‌ನಲ್ಲಿ ಕಾಫಿ ಇಟ್ಟ ಹಾಗೆ ಅವರ ಬರವಣಿಗೆ. ಕೊನೆ ತನಕ ಆರದ ಬಿಸಿ ಮತ್ತು ಎಲ್ಲೂ ತುಳುಕದ ಸಮತೋಲನ. ಬರವಣಿಗೆಯ ಚಮತ್ಕಾರಗಳನ್ನು ಮೇಳೈಸಿದ, ಹೇಳಬೇಕಾದ ವಿಷಯಗಳನ್ನು ಸ್ವಾರಸ್ಯವಾಗಿ ಹೇಳುವ ಕಲೆಗಾರಿಕೆ ಅವರಿಗೆ ಒಲಿದಿತ್ತು. ‌

ಅವರು ನಿರಂತರ ಬರೆಯುವ ಮೂಲಕ ‘ಬರೆಯುವ ಸಂಪಾದಕ’ರಾಗಿದ್ದರು. ಅಷ್ಟೇ ಅಲ್ಲ, ಓದುವ ಸಂಪಾದಕರೂ ಆಗಿದ್ದರು. ಅವರು ಅದೆಷ್ಟು ಓದುತ್ತಿದ್ದರು ಎಂಬುದು ಅವರ ಅಂಕಣಗಳಲ್ಲಿ ಗೊತ್ತಾಗುತ್ತಿತ್ತು. ಹಲವು ಸಂದರ್ಭಗಳಲ್ಲಿ, ಈಗ ತಾನೇ ಬಿಡುಗಡೆಯಾದ ಪುಸ್ತಕವನ್ನು ಆನ್‌ಲೈನ್‌ ನಲ್ಲಿ ತರಿಸಿಕೊಂಡು ನಾನು ಓದಬೇಕು ಎನ್ನುವ ಹೊತ್ತಿಗೆ ಕೆಬಿಜಿ ಆ ಕೃತಿಯ ಕುರಿತು ಆ ವಾರ ಬರೆದಿರುತ್ತಿದ್ದರು. ಬೆಂಗಳೂರಿನ ಇಂಗ್ಲಿಷ್ ಪತ್ರಿಕೆಗಳ ಯಾವ ಸಂಪಾದಕರೂ (ಟಿಜೆಎಸ್ ಜಾರ್ಜ್ ಹೊರತುಪಡಿಸಿ), ಕೆಬಿಜಿ ಥರ ಬರೆದಿದ್ದನ್ನು ನಾನು ನೋಡಿಲ್ಲ.

ಎರಡು ವರ್ಷಗಳ ಹಿಂದೆ ನಾನು, ‘ಜಗತ್ತಿನ ಸೆಕೆಂಡ್‌ಹ್ಯಾಂಡ್ ಪುಸ್ತಕಗಳ ಮಹಾಕಾಶಿ’ ಎಂದು ಹೆಸರುವಾಸಿಯಾದ ಬ್ರಿಟನ್‌ನ ವೇಲ್ಸ್‌ ನಲ್ಲಿರುವ ‘ಹೇ-ಆನ್-ವೈ’ಯಲ್ಲಿದ್ದಾಗ, ನನ್ನ ಫೇಸ್‌ಬುಕ್ ಪೋಸ್ಟ್ ನೋಡಿ ಕೆಬಿಜಿ ಫೋನ್ ಮಾಡಿ, “ಭಟ್ರೇ, ಅದೆಂಥ ಅದ್ಭುತ ಜಾಗದಲ್ಲಿದ್ದೀರಿ ನೀವು, ನನಗೂ ಅಲ್ಲಿಗೆ ಹೋಗಬೇಕು ಅಂತ ಅನಿಸುತ್ತಿದೆ" ಎಂದು ಹೇಳಿದ್ದರು. ಇದು ಒಬ್ಬ ಅಕ್ಷರಪ್ರೇಮಿಯ ಅಂತರಂಗದ ಹಪಾಹಪಿ. ಕೆಬಿಜಿ ಅಂಥ ಅಕ್ಷರ ಮೋಹಿಯಾಗಿದ್ದರು. ಈ ಕಾರಣಕ್ಕೆ ಅವರ ಬರವಣಿಗೆ ಸೋಲಲಿಲ್ಲ ಮತ್ತು ಬರೆದು ಬರೆದು ಅವರು ಬಳಲೂ ಇಲ್ಲ. ತಮ್ಮ ಬಳಲಿಕೆಯನ್ನು ಓದುಗರಿಗೆ ವರ್ಗಾಯಿಸಲೂ ಇಲ್ಲ. ಕೊನೆ ತನಕ ತಮ್ಮ ಅಂಕಣದ ಮೇಲಿನ ಮಂಜಿನ ಹನಿಯ ಆರ್ದ್ರವನ್ನು ಕಾಪಾಡಿಕೊಂಡರು.

ನಾನು ಅವರ ವ್ಯಕ್ತಿತ್ವದಿಂದ ಎರವಲು ಪಡೆದ ಬಹು ದೊಡ್ಡ ಕಾಣ್ಕೆ ಇದೂ ಹೌದು. ಮೊನ್ನೆಯಷ್ಟೇ, ಸ್ನೇಹಿತರಾದ ನಂಜನಗೂಡು ಮೋಹನ್ ಮತ್ತು ನಾನು, “ಕೆಬಿಜಿಯವರನ್ನು ನೋಡಿ ಬರೋಣ, ಬಹಳ ದಿನ ಆಯ್ತು" ಎಂದು ಮಾತಾಡಿಕೊಂಡಿದ್ದೆವು. ಆ ಅವಕಾಶ ಕೂಡಿ‌ ಬರಲೇ ಇಲ್ಲ. ಮೈಸೂರಿನ ‘ಪತ್ರಿಕೋದ್ಯಮದ ಮ್ಯಾಜಿಷಿಯನ್’ ಕಣ್ಮರೆಯಾಗಿರಬಹುದು, ಆದರೆ ಆತ ಸೃಷ್ಟಿಸಿದ ‘ಮಾಯಾಲೋಕ’ ಮಾತ್ರ ಜೀವಂತವಾಗಿದೆ.