ಚೌತಿ ಹಬ್ಬ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Chikkaballapur News: ಮಾನವಿಕ ಶಾಸ್ತ್ರ ಸಮಾಜ ವಿಜ್ಞಾನಗಳ ಅಧ್ಯಯನದಲ್ಲಿ ನಿರಾಸಕ್ತಿ ಮೂಡದಂತೆ ಎಚ್ಚರ ಅಗತ್ಯ : ಕುಲಪತಿ ನಿರಂಜನವಾನಳ್ಳಿ ಅಭಿಮತ

ಸಾಂಪ್ರದಾಯಿಕ ಪದವಿಯೆನಿಸಿರುವ ಕಲಾಭಾಗಕ್ಕೆ ದಾಖಲಾಗುವ ವಿದ್ಯಾರ್ಥಿಗಳ ಅನುಪಾತ ವರ್ಷಾನುವಷೆ ಕ್ಷೀಣಿಸುತ್ತಿದೆ.ಎಐ ತಂತ್ರಜ್ಞಾನದ ಈ ಹೊತ್ತಿನಲ್ಲಿ ಪದವಿ ಮತ್ತು ಉನ್ನತ ಶಿಕ್ಷಣವು ತನ್ನ ಸಾಂಸ್ಥಿಕ ಚೌಕಟ್ಟನ್ನು ಮೀರಿ ಮುನ್ನಡೆಯುತ್ತಿರುವುದನ್ನು ಮನಗಂಡು ವಿದ್ಯಾರ್ಥಿಗಳನ್ನು ಸಜ್ಜು ಗೊಳಿಸುವ ಕೆಲಸವನ್ನು ಅಧ್ಯಾಪಕರು ಮಾಡಬೇಕಿದೆ.

ಅಧ್ಯಯನದಲ್ಲಿ ನಿರಾಸಕ್ತಿ ಮೂಡದಂತೆ ಎಚ್ಚರ ಅಗತ್ಯ

ಮಾನವಿಕಶಾಸ್ತ್ರ ಸಮಾಜವಿಜ್ಞಾನಗಳ ಅಧ್ಯಯನದಲ್ಲಿ ವಿದ್ಯಾರ್ಥಿಗಳಿಗೆ ನಿರಾಸಕ್ತಿ ಮೂಡದಂತೆ ಪ್ರಾಧ್ಯಾಪಕರಿಗೆ ಎಚ್ಚರ ಅಗತ್ಯ  ಎಂದು ಕುಲಪತಿ ನಿರಂಜನವಾನಳ್ಳಿ ಅಭಿಪ್ರಾಯಪಟ್ಟರು. -

Ashok Nayak Ashok Nayak Aug 30, 2025 8:08 PM

ಚಿಕ್ಕಬಳ್ಳಾಪುರ : ಎನ್‌ಇಪಿ, ಎಸಿಪಿ ಇತ್ಯಾದಿ ನೂತನ ಶಿಕ್ಷಣ ನೀತಿಗಳು ಬಂದರೂ ಕೂಡ ಮಾನವಿಕ ಶಾಸ್ತ್ರ ಮತ್ತು ಸಮಾಜ ವಿಜ್ಞಾನ ಇತ್ಯಾದಿ ಕಲಾನಿಕಾಯದ ಅಧ್ಯಯನ ಸಂಶೋಧನೆಯ ಬಗ್ಗೆ ವಿದ್ಯಾರ್ಥಿಗಳಲ್ಲಿ ನಿರಾಸಕ್ತಿ ಮೂಡುತ್ತಿದೆ. ಈ ವಿಚಾರದ ಬಗ್ಗೆ ಪ್ರಾಧ್ಯಾಪಕರು ಜಾಗ್ರತೆ ವಹಿಸುವ ಅಗತ್ಯವಿದೆ ಎಂದು ಬೆಂಗಳೂರು ಉತ್ತರ ವಿಶ್ದವಿದ್ಯಾಲಯದ ಕುಲಪತಿ ನಿರಂಜನ ವಾನಳ್ಳಿ ತಿಳಿಸಿದರು.

ನಗರದ ಮಹಿಳಾ ಪ್ರಥಮದರ್ಜೆ ಕಾಲೇಜಿನಲ್ಲಿ ಬೆಂಗಳೂರು ಉತ್ತರವಿಶ್ವದ್ಯಾಲಯದ ರಾಜ್ಯ ಶಾಸ್ತ್ರ ಬೋಧಕರ ಸಂಘವು "ಭಾರತದಲ್ಲಿ ರಾಜಕೀಯ ಚಿಂತನೆ,ಸಾರ್ವಜನಿಕ ನೀತಿ ಮತ್ತು ಉತ್ತಮ ಆಳ್ವಿಕೆಯ ಪ್ರಸ್ತುತತೆ" ಎಂಬ ವಿಷಯದಲ್ಲಿ ಏರ್ಪಡಿಸಿದ್ದ ಒಂದು ದಿನದ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಮಾತನಾಡಿದರು.

ಸಾಂಪ್ರದಾಯಿಕ ಪದವಿಯೆನಿಸಿರುವ ಕಲಾಭಾಗಕ್ಕೆ ದಾಖಲಾಗುವ ವಿದ್ಯಾರ್ಥಿಗಳ ಅನುಪಾತ ವರ್ಷಾನುವಷೆ ಕ್ಷೀಣಿಸುತ್ತಿದೆ.ಎಐ ತಂತ್ರಜ್ಞಾನದ ಈ ಹೊತ್ತಿನಲ್ಲಿ ಪದವಿ ಮತ್ತು ಉನ್ನತ ಶಿಕ್ಷಣವು ತನ್ನ ಸಾಂಸ್ಥಿಕ ಚೌಕಟ್ಟನ್ನು ಮೀರಿ ಮುನ್ನಡೆಯುತ್ತಿರುವುದನ್ನು ಮನಗಂಡು ವಿದ್ಯಾರ್ಥಿಗಳನ್ನು ಸಜ್ಜುಗೊಳಿಸುವ ಕೆಲಸವನ್ನು ಅಧ್ಯಾಪಕರು ಮಾಡಬೇಕಿದೆ. ಆಧುನಿಕ ತಂತ್ರಜ್ಞಾನದ ಪರಿಕರ ಗಳನ್ನು ಬಳಸಿಕೊಂಡರೆ ಕಲಾನಿಕಾಯವನ್ನು ಕೂಡ ಸಶಕ್ತವಾಗಿ ಇವತ್ತಿಗೆ ಬೇಕಾದ ರೀತಿಯಲ್ಲಿ ನಮುರಿದು ಕಟ್ಟುವ ಕೆಲಸವನ್ನು ನಾವು ನೀವೆಲ್ಲಾ ಕೂಡಿ ಮಾಡೋಣ. ರಾಜ್ಯಶಾಸ್ತ್ರ ಅಧ್ಯಾಪಕರ ಒಕ್ಕೂಟವು ಏರ್ಪಡಿಸಿರುವ ಈ ಕಾರ್ಯಗಾರವು ಈ ನಿಟ್ಟಿನಲ್ಲಿ ನಿಮಗೆ ಹೊಸ ಹೊಳಹುಗಳನ್ನು ನೀಡಲಿ ಎಂದು ಆಶಿಸಿದರು.

ಇದನ್ನೂ ಓದಿ: Chikkamagaluru News: ಚಿಕ್ಕಮಗಳೂರಿನಲ್ಲಿ ವಾಹನಗಳ ಪ್ರವೇಶಕ್ಕೆ ಮಿತಿ; ಆನ್‌ಲೈನ್ ಬುಕ್ಕಿಂಗ್ ಕಡ್ಡಾಯ

ಎಸ್‌ಇಪಿ ಪಠ್ಯಕ್ರಮದ ಬಗ್ಗೆಯೂ ಅಲ್ಲಲ್ಲಿ ವಿಚಾರ ಸಂಕಿರಣಗಳು ನಡೆಯುತ್ತಿವೆ.ಇಂತಹುಗಳನ್ನು ಸಂಘಟಿಸಲು ವಿಶ್ವವಿದ್ಯಾಲಯವು ಕೈಜೋಡಿಸಲಿದೆ.ರಾಜ್ಯಶಾಸ್ತç ಅಧ್ಯಾಪಕರ ಸಂಘವು ಚಿಕ್ಕಬಳ್ಳಾಪುರದಲ್ಲಿ ವಿಚಾರ ಸಂಕಿರಣ ಏರ್ಪಡಿಸಿರುವುದು ಒಳ್ಳೆಯ ಬೆಳವಣಿಗೆಯಾಗಿದೆ ಎಂದರು.

ಯುಜಿಸಿ ವೇತನ ಪಡೆಯುವ ಪ್ರಾಧ್ಯಾಪಕರು ನಿಮ್ಮ ಜವಾಬ್ದಾರಿಯನ್ನು ಅರಿತು ಶೈಕ್ಷಣಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಿ. ಪರಿಸ್ಥಿತಿ ಹೇಗಿದೆ ಎಂದರೆ ಖಾಯಂ ಅಧ್ಯಾಪಕರಾಗಿ ನೇಮಕಾತಿ ಹೊಂದಿದರೆ ಸಾಕು ಬಹಳಷ್ಟು ಮಂದಿ ಓದುವುದನ್ನೇ ನಿಲ್ಲಿಸುತ್ತಾರೆ, ಇನ್ನೂ ಒಂದಷ್ಟು ಮಂದಿ ಪಾಠಮಾಡುವುದು, ಮೌಲ್ಯಮಾಪನ ಮಾಡುವುದನ್ನೂ ಮರೆತು ಬಿಡುತ್ತಾರೆ. ಇದು ಒಳ್ಳೆಯ ಬೆಳವಣಿಗೆ ಅಲ್ಲವೇ ಅಲ್ಲ ಎಂದು ಬೇಸರಿಸಿದರು.

ಪತ್ರಿಕೋದ್ಯಮ ರಂಗವು ಇಂದು ಸಂಕರ ಸ್ಥಿತಿಯಲ್ಲಿದೆ. ಪದವಿ ಸ್ನಾತಕೋತ್ತರ ಪದವಿ ಪಡೆದು ಈ ರಂಗಕ್ಕೆ ಬರುವವರಿಗಿಂತ ಯಾವೊಂದು ಜ್ಞಾನ ಶಿಸ್ತುಗಳ ಅಗತ್ಯವೂ ಇಲ್ಲದೆ ಮೊಬೈಲ್ ಹಿಡಿದು ಕೊಂಡು ಯೂಟೂಬ್ ಮೂಲಕ ಪತ್ರಕರ್ತರರಾಗಿ ವಿಜೃಂಭಿಸುವವರ ಸಂಖ್ಯೆಯೇ ಅಧಿಕವಾಗಿದೆ. ಅತಿಯಾದರೆ ಅಮೃತವೂ ವಿಷ ಎಂಬ ಮಾತು ನಿಜವಾಗುವ ಕಾಲಘಟ್ಟದಲ್ಲಿ ಮಾಧ್ಯಮ ಜಗತ್ತು ನಿಂತಿದೆ.ಮೊಬೈಲ್ ಒಂದಿದ್ದರೆ ಸಾಕು ಯಾವುದನ್ನು ಬೇಕಾದರೂ ಸುದ್ಧಿಯಾಗಿಸಿ ಪ್ರಚಾರ ಮಾಡುವ ಮೂಲಕ ಸಮಾಜದ ನೆಮ್ಮದಿ ಕದಡುವ ಪರಿಸ್ಥಿತಿ ನಿರ್ಮಾಣವಾಗಿರುವುದು ಆತಂಕಕಾರಿ ಬೆಳವಣಿಗೆಯೇ ಸರಿ ಎಂದು ವಿಷಾಧಿಸಿದರು.

ಕುಲಸಚಿವ ಪ್ರೊ.ಲೋಕನಾಥ್ ಮಾತನಾಡಿ ನಾವಿಂದು ಒಳ್ಳೆಯ ವೈದ್ಯರನ್ನು, ಇಂಜನಿಯರ್‌ ಗಳನ್ನು ತಯಾರಿಸಲು ಹೊರಟಿದ್ದೇವೆ. ಇದರ ಜತೆಗೆ ಪ್ರಾಮಾಣಿಕವಾದ ರಾಜಕಾರಣಿಗಳ ಅವಶ್ಯಕತೆಯಿದೆ. ದೇಶದ ಬೆಳವಣಿಗೆ, ಆರ್ಥಿಕತೆ, ಶಿಕ್ಷಣ, ವಿಜ್ಞಾನ, ಸಮಾಜ, ದೇಶಭಕ್ತಿ ಇತ್ಯಾದಿ ಎಲ್ಲದರ ಬಗ್ಗೆಯೂ ಸಮಗ್ರ ತಿಳುವಳಿಕೆಯಿರುವ ರಾಜಕಾರಣಿಗಳು ಬೇಕಾಗಿದೆ. ಉತ್ತಮ ರಾಜಕಾರಣಿಗಳು ರಾಜಕೀಯರಂಗದಲ್ಲಿದ್ದರೆ, ಉತ್ತಮ ಆಡಳಿತದ ಜತೆಗೆ ಉತ್ತಮ ಕಾನೂನು ಕಟ್ಟಳೆಗಳು ನಿರ್ಮಾಣ ಆಗಲಿವೆ. ಇಂತಹ ಜ್ವಲಂತ ಸಂಗತಿಗಳ ಬಗ್ಗೆ ರಾಜ್ಯಶಾಸ್ತ್ರ ವಿಭಾಗದ ಅಧ್ಯಾಪಕರ ಸಂಘವು ಏರ್ಪಡಿಸಿರುವ ಒಂದು ದಿನದ ವಿಚಾರ ಸಂಕಿರಣವು ಬೆಳಕು ಚೆಲ್ಲಲಿ ಎಂದು ಹೇಳಿದರು.

ಬೆಂಗಳೂರು ಉತ್ತರ ವಿಶ್ವವಿದ್ಯಾಲಯವು ವಿದ್ಯಾರ್ಥಿಸ್ನೇಹಿಯಾಗಿ ಬದಲಾಗಿದ್ದು,ಪರೀಕ್ಷೆ ಮುಗಿದ ಕೂಡಲೇ ಫಲಿತಾಂಶ ನೀಡುವ ಮೂಲಕ ವಿದ್ಯಾರ್ಥಿಗಳಲ್ಲಿ ಅಧ್ಯಯನ ಆಶಕ್ತಿ ಬೆಳೆಯುವಂತೆ ಮಾಡಿದೆ.ಅಧ್ಯಾಪಕರು ಕೇವಲ ಪಾಠ ಮಾತ್ರ ಮಾಡಿದರೆ ಸಾಲದು, ಅದಕ್ಕೆ ತಕ್ಕಂತೆ ಮೌಲ್ಯ ಮಾಪನವನ್ನೂ ಕೂಡ ಮಾಡಬೇಕಿದೆ. ಅತಿಥಿ ಉಪನ್ಯಾಸರ ಜತೆಗೆ ಯುಜಿಸಿ ಉಪನ್ಯಾಸಕರು ಕೂಡ ಪರೀಕ್ಷಾ ಕಾರ್ಯಗಳು ಮತ್ತು ಮೌಲ್ಯಮಾಪನಕ್ಕೆ ಬಂದಲ್ಲಿ ಬೇಗ ಫಲಿತಾಂಶ ಪ್ರಕಟಿಸಲು ಅನುಕೂಲ ಆಗಲಿದೆ ಎಂದು ಸಲಹೆ ನೀಡಿದರು.

ಈ ವೇಳೆ ಕಾಲೇಜಿನ ಪ್ರಾಂಶುಪಾಲ ಜಿ.ಡಿ.ಚಂದ್ರಯ್ಯ, ರಾಜ್ಯಶಾಸ್ತ್ರ ಬೋಧಕರ ಸಂಘದ ಅಧ್ಯಕ್ಷ ಡಾ.ಎಸ್. ಅಮೀರ್‌ಪಾಷ, ರಾಜ್ಯಶಾಸ್ತ್ರ ಪ್ರಾಧ್ಯಾಪಕರಾದ ಡಾ.ಪದ್ಮಕುಮಾರಿ, ಬೋರ್ಡ್ ಆಫ್ ಸ್ಟಡೀಸ್ ಅಧ್ಯಕ್ಷ ಚಂದ್ರಶೇಖರ್,ಮೈಸೂರು ವಿಶ್ವವಿದ್ಯಾಲಯದ ಹಿರಿಯ ಪ್ರಾಧ್ಯಾಪಕ ಡಾ.ಜೆ.ಸೋಮಶೇಖರ್, ಪ್ರಾಧ್ಯಾಪಕ ಡಾ.ಈರಣ್ಣ ಮತ್ತಿತರರು ಇದ್ದರು.