ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

R T Vittalmurthy Column: ಅಮಿತ್‌ ಶಾ ಲೋಕಲ್‌ ರಿಪೋರ್ಟ್‌ ನಂಬಲ್ಲ

ಈ ಹಿಂದೆ, ಅಂದರೆ 2023ರ ವಿಧಾನಸಭೆ ಚುನಾವಣೆಯ ಮುನ್ನ ಕರ್ನಾಟಕದಿಂದ ಬರುತ್ತಿದ್ದ ಇಂತಹ ರಿಪೋರ್ಟುಗಳನ್ನು ನಂಬಿ ಸಿಕ್ಕಿದ್ದೇನು? ಎಂಬುದು ಅಮಿತ್ ಶಾ ಅವರಿಗೆ ಗೊತ್ತು. ಹೀಗಾಗಿ ಇಂತಹ ರಿಪೋರ್ಟುಗಳನ್ನು ಪಕ್ಕಕ್ಕಿಟ್ಟು ವಾರ್ ಫೀಲ್ಡಿಗೆ ಇಳಿಯಿರಿ ಅಂತ ರಾಜ್ಯದ ನಾಯಕರಿಗೆ ಅವರು ಸಿಗ್ನಲ್ಲು ರವಾನಿಸಿದ್ದಾರೆ ಎಂಬದು ಲೇಟೆಸ್ಟು ಸುದ್ದಿ.

R T Vittalmurthy Column: ಅಮಿತ್‌ ಶಾ ಲೋಕಲ್‌ ರಿಪೋರ್ಟ್‌ ನಂಬಲ್ಲ

-

ಮೂರ್ತಿಪೂಜೆ

ಕಳೆದ ವಾರ ಕೇರಳಕ್ಕೆ ಹೋದ ಕರ್ನಾಟಕದ ಕೆಲ ಪೊಲೀಸರು, ಕಲ್ಲಿಕೋಟೆ ಸಮೀಪದ ಒಂದು ಊರಿಗೆ ಭೇಟಿ ಕೊಟ್ಟಿದ್ದಾರೆ. ಹೀಗೆ ಭೇಟಿ ಕೊಟ್ಟವರು ರಾಜ್ಯದಲ್ಲಿ ಕೋಲಾಹಲವೆಬ್ಬಿಸಿದ ಯುವತಿ ಯೊಬ್ಬಳನ್ನು ಭೇಟಿ ಮಾಡಿದ್ದಾರೆ. ಅಂದ ಹಾಗೆ ಕೆಲ ದಿನಗಳ ಹಿಂದೆ ದೊಡ್ಡ ಸುದ್ದಿ ಮಾಡಿದ ವಿಡಿಯೋ ಒಂದರಲ್ಲಿದ್ದ ಈ ಯುವತಿ, ಹದಿನೈದು ವರ್ಷಗಳ ಹಿಂದೆ ಏನೋ ನಡೆಯಿತು ಅಂತ ಬಾಂಬು ಸಿಡಿಸಿ ಮಾಜಿ ಸಿಎಂ ಸಿದ್ದರಾಮಯ್ಯ ಅವರ ಬಗ್ಗೆ ಅನುಮಾನ ಮೂಡುವಂತೆ ಮಾಡಿದ್ದಳು. ಹೀಗೆ ಆ ವಿಡಿಯೋ ಬಾಂಬು ಸಿಡಿದ ಮೇಲೆ ಕರ್ನಾಟಕದ ರಾಜಕಾರಣದಲ್ಲಿ ದೊಡ್ಡ ಕೋಲಾಹಲವೇ ನಡೆದುಹೋಯಿತು.

ಯಾವಾಗ ಇದು ದಿನ ಕಳೆದಂತೆ ತಾರಕಕ್ಕೇರುತ್ತಾ, ತಮಗೆ ಮುಜುಗರ ಅತಿಯಾಗುವಂತೆ ಮಾಡಿತೋ? ಆಗ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಅವರ ಬಳಿ ತಮ್ಮ ಅಸಮಾಧಾನ ತೋಡಿಕೊಂಡಿದ್ದಾರೆ.

‘ಇದು ನನ್ನ ಹೆಸರಿಗೆ ಕಳಂಕ ತರುವ ಯತ್ನ. ಇದರ ಹಿಂದೆ ನಮ್ಮ ಪಕ್ಷದವರ ಕೈವಾಡ ಇದೆ. ತಕ್ಷಣ ಇದರ ವಿರುದ್ಧ ಕ್ರಮ ಕೈಗೊಂಡು ಆಗುತ್ತಿರುವ ಡ್ಯಾಮೇಜನ್ನು ಸರಿಪಡಿಸದಿದ್ದರೆ ಪಕ್ಷ ಗಂಭೀರ ಅಪಾಯಕ್ಕೆ ಸಿಲುಕುತ್ತದೆ’ ಎಂದು ಸ್ಪಷ್ಟವಾಗಿ ಹೇಳಿದ್ದಾರೆ. ಯಾವಾಗ ಅವರು ತಮ್ಮ ಅಸಮಾಧಾನವನ್ನು ತೋರ್ಪಡಿಸಿದರೋ? ಆಗ ಎಚ್ಚೆತ್ತುಕೊಂಡ ಕೆ.ಸಿ. ವೇಣುಗೋಪಾಲ್ ಅವರು ಮೊನ್ನೆ ದಿಲ್ಲಿಗೆ ಬಂದಿದ್ದ ಸಿಎಂ ಡಿ.ಕೆ. ಶಿವಕುಮಾರ್ ಅವರ ಜತೆ ಚರ್ಚಿಸಿ, ‘ಇದಕ್ಕೆಲ್ಲ ತಕ್ಷಣ ಬ್ರೇಕ್ ಹಾಕದಿದ್ದರೆ, ಸಿದ್ದರಾಮಯ್ಯ ಅವರಿಗೆ ಆಗುತ್ತಿರುವ ಮುಜುಗರವನ್ನು ತಪ್ಪಿಸದಿದ್ದರೆ ಪಕ್ಷಕ್ಕೆ ಹಾನಿಯಾಗುತ್ತದೆ’ ಎಂದು ಎಚ್ಚರಿಸಿದ್ದಾರೆ.

ಇದನ್ನೂ ಓದಿ: R T Vittalmurthy Column: ಕುಮಾರಣ್ಣನ ಅರ್ಜೆಂಟ್‌ ವಾರ್‌ ಮೀಟಿಂಗ್

ಯಾವಾಗ ಕೆ.ಸಿ.ವೇಣುಗೋಪಾಲ್ ಅವರು ಈ ಮಾತು ಹೇಳಿದರೋ? ಆಗ ಡಿ.ಕೆ. ಶಿವಕುಮಾರ್ ಅವರು, ‘ಸಾರ್, ಈ ಎಪಿಸೋಡಿನ ಬಗ್ಗೆ, ಸ್ಟಿಂಗ್ ಆಪರೇಷನ್ ಜಾಲದ ಬಗ್ಗೆ ಕಟ್ಟುನಿಟ್ಟಾದ ಆಕ್ಷನ್ ತೆಗೆದುಕೊಳ್ಳುವಂತೆ ಗೃಹ ಸಚಿವರಾದ ಪ್ರಿಯಾಂಕ್ ಖರ್ಗೆಯವರಿಗೆ ಹೇಳಿದ್ದೇನೆ. ಹೀ ಈಸ್ ವೆರಿ ಎಫಿಷಿಯೆಂಟ್. ಅವರು ಇಡೀ ಪ್ರಕರಣಕ್ಕೆ ತಾರ್ಕಿಕ ಅಂತ್ಯ ಕೊಡುತ್ತಾರೆ’ ಎಂದು ವಿವರಿಸಿದ್ದಾರೆ.

ಮೂಲಗಳ ಪ್ರಕಾರ, ದಿಲ್ಲಿಯಲ್ಲಿ ಡಿಕೆ ಮತ್ತು ಕೆಸಿ ನಡುವೆ ನಡೆದ ಈ ಮಾತುಕತೆಯ ಬೆನ್ನ ಕರ್ನಾಟಕದ ಕೆಲ ಪೋಲೀಸರು ತಮಗಿದ್ದ ಮಾಹಿತಿಯನ್ನು ಆಧರಿಸಿ ಕೇರಳಕ್ಕೆ ಹೋಗಿದ್ದಾರೆ. ಮತ್ತು ಕೇರಳದ ಕಲ್ಲಿಕೋಟೆಯ ಸಮೀಪದ ಊರೊಂದಕ್ಕೆ ಹೋಗಿದ್ದಾರೆ. ಇದೇ ಮೂಲಗಳ ಪ್ರಕಾರ, ಸದರಿ ಪೊಲೀಸರು ಈ ಊರಿನಲ್ಲಿದ್ದ ಯುವತಿಯೊಬ್ಬಳನ್ನು ಭೇಟಿ ಮಾಡಿ ವಿವರ ಪಡೆದಿದೆ.

‘ನೀವು ಹದಿನೈದು ವರ್ಷಗಳ ಹಿಂದೆ ಒಂದು ಘಟನೆ ನಡೆಯಿತು ಅಂತ ಹೇಳಿ ಕರ್ನಾಟಕದ ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರ ಹೆಸರು ಹೇಳಿದ್ದಿರಿ. ಆಕ್ಚುವಲಿ, ಆ ಸಂದರ್ಭದಲ್ಲಿ ನಡೆದಿದ್ದೇನು?’ ಎಂದು ಈ ಟೀಮು ಕೇಳಿದಾಗ ಅ ಯುವತಿ, ‘ನನಗೆ ಸಿದ್ದರಾಮಯ್ಯ ಅಂದರೆ ಯಾರು ಅಂತಲೇ ಗೊತ್ತಿಲ್ಲ. ಯಾರೋ ನನ್ನ ಬಳಿ ಬಂದು ಹೀಗೇ ಮಾತನಾಡಬೇಕು ಅಂತ ಹೇಳಿ ಮಾತನಾಡಿಸಿದ್ದಾರೆ’ ಎಂದಳಂತೆ. ಯಾವಾಗ ಆಕೆ ಇಂತಹ ಹೇಳಿಕೆ ನೀಡಿದಳೋ? ಆಗ ಅದನ್ನು ರೆಕಾರ್ಡು ಮಾಡಿಕೊಂಡ ಈ ಟೀಮು ವಾಪಸ್ಸು ಕರ್ನಾಟಕಕ್ಕೆ ಬಂದಿದೆ. ಅಷ್ಟೇ ಅಲ್ಲ, ಇನ್ನಷ್ಟು ನಡೆದಿದೆ ಎನ್ನಲಾದ ಸ್ಟಿಂಗ್ ಆಪರೇಷನ್ನಿನ ಜಾಲವನ್ನು ತಡಕುತ್ತಿದೆ.

RTV 2610

ಇಂತಹ ಕೆಲಸ ಯಾವಾಗ ಅಂತ್ಯವಾಗುತ್ತದೋ ಗೊತ್ತಿಲ್ಲ. ಆದರೆ ಕಳೆದ ಕೆಲ ದಿನಗಳಿಂದ ಸಿದ್ದರಾಮಯ್ಯ ಅವರಿಗೆ ತಗಲುತ್ತಿದ್ದ ಮಸಿಯನ್ನು ತೊಳೆಯುವ ಕೆಲಸ ಮಾತ್ರ ಶೀಘ್ರಗತಿಯಲ್ಲಿ ನಡೆಯಲಿದೆ.

ಅಮಿತ್ ಶಾ ಹೇಳಿದ್ದೇನು?

ಅಂದ ಹಾಗೆ ಕರ್ನಾಟಕದ ರಾಜಕಾರಣದಲ್ಲಿ ಅಲ್ಲೋಲ ಕಲ್ಲೋಲವಾಗುತ್ತಿದ್ದರೂ ರಾಜ್ಯ ಬಿಜೆಪಿಯ ನಾಯಕರು ರಣೋತ್ಸಾಹ ತೋರಿಸುತ್ತಿಲ್ಲ ಅಂತ ಬಿಜೆಪಿ ನಾಯಕ, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಕೋಪ ಬಂದಿದೆಯಂತೆ. ಕಳೆದ ಕೆಲ ದಿನಗಳಿಂದ ಒಂದಿಲ್ಲ ಒಂದು ಆರೋಪದ ಸುಳಿಗೆ ಸಿಲುಕುತ್ತಿರುವ ಆಡಳಿತಾರೂಢ ಕಾಂಗ್ರೆಸ್ ಈಗ ಸ್ಟಿಂಗ್ ಜಾಲಕ್ಕೆ ಸಿಲುಕಿ ತತ್ತರಿಸುತ್ತಿದೆ. ಇಂತಹ ಸಂದರ್ಭದಲ್ಲಿ ಜೆಡಿಎಸ್ ನಾಯಕ, ಕೇಂದ್ರ ಸಚಿವ ಹೆಚ್.ಡಿ.ಕುಮಾರ ಸ್ವಾಮಿ ರಣಾಕ್ರೋಶ ಮೆರೆಯುತ್ತಿದ್ದರೆ, ಬಿಜೆಪಿ ನಾಯಕರು ಮಾತ್ರ ವಾರ್ ಫೀಲ್ಡಿನ ಮುಂಚೂಣಿ ಯಲ್ಲಿ ಕಾಣುತ್ತಿಲ್ಲ ಎಂಬುದು ಅಮಿತ್ ಶಾ ಅವರಿಗೆ ತಲುಪಿದ ಫೀಡ್ ಬ್ಯಾಕು.

ಬಿಜೆಪಿ ಮೂಲಗಳ ಪ್ರಕಾರ, ‘ಅಮಿತ್ ಶಾ ಅವರ ಅಸಮಾಧಾನಕ್ಕೆ ಮತ್ತೊಂದು ಕಾರಣವೂ ಇದೆ. ಅದೆಂದರೆ ಕರ್ನಾಟಕದ ವಾರ್ ಫೀಲ್ಡಿನಲ್ಲಿ ನೋಡಿದರೆ ತಮ್ಮವರು ಹಿಂದಿದ್ದಾರೆ. ಆದರೆ ಇದನ್ನು ಮರೆಸಲು ಸರ್ವೆಗಳನ್ನು ಮಾಡಿಸುತ್ತಾ, ಈಗ ವಿಧಾನಸಭೆಗೆ ಚುನಾವಣೆ ನಡೆದರೂ ಬಿಜೆಪಿ ಸ್ವಯಂ ಬಲದ ಮೇಲೆ ಅಧಿಕಾರಕ್ಕೆ ಬರುತ್ತದೆ ಎಂಬ ಪುಂಗ್ಲು ರಿಪೋರ್ಟುಗಳು ದಿಲ್ಲಿಗೆ ತಲುಪುವಂತೆ ಮಾಡುತ್ತಿದ್ದಾರೆ.

ಈ ಹಿಂದೆ, ಅಂದರೆ 2023ರ ವಿಧಾನಸಭೆ ಚುನಾವಣೆಯ ಮುನ್ನ ಕರ್ನಾಟಕದಿಂದ ಬರುತ್ತಿದ್ದ ಇಂತಹ ರಿಪೋರ್ಟುಗಳನ್ನು ನಂಬಿ ಸಿಕ್ಕಿದ್ದೇನು? ಎಂಬುದು ಅಮಿತ್ ಶಾ ಅವರಿಗೆ ಗೊತ್ತು. ಹೀಗಾಗಿ ಇಂತಹ ರಿಪೋರ್ಟುಗಳನ್ನು ಪಕ್ಕಕ್ಕಿಟ್ಟು ವಾರ್ ಫೀಲ್ಡಿಗೆ ಇಳಿಯಿರಿ ಅಂತ ರಾಜ್ಯದ ನಾಯಕರಿಗೆ ಅವರು ಸಿಗ್ನಲ್ಲು ರವಾನಿಸಿದ್ದಾರೆ ಎಂಬದು ಲೇಟೆಸ್ಟು ಸುದ್ದಿ.

ಸುರ್ಜೇವಾಲಾ ಈಗ ಉತ್ಸುಕರಲ್ಲ

ಇನ್ನು ರಾಜ್ಯ ಕಾಂಗ್ರೆಸ್‌ನಲ್ಲಿ ಪಕ್ಷದ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಅವರ ವಿರುದ್ಧ ಅಸಮಾಧಾನ ಶುರುವಾಗಿದೆ. ಇಂತಹ ಅಸಮಾಧಾನಕ್ಕೆ ಸುರ್ಜೇವಾಲಾ ಅವರ ಹೆಜ್ಜೆಗಳೇ ಕಾರಣ. ಪಕ್ಷದ ಹಲವು ಶಾಸಕರ ಪ್ರಕಾರ, ರಾಜ್ಯದಲ್ಲಿ ನಾಯಕತ್ವ ಬದಲಾವಣೆಯ ಆಟ ಹೈ ಲೆವೆಲ್ಲಿಗೆ ಹೋಯಿತಲ್ಲ? ಆ ಸಂದರ್ಭದಲ್ಲಿ ಸುರ್ಜೇವಾಲಾ ವಿಪರೀತ ಆಸಕ್ತಿಯಿಂದ ಕರ್ನಾಟಕಕ್ಕೆ ಬರುತ್ತಿದ್ದರು. ಆದರೆ ಯಾವಾಗ ನಾಯಕತ್ವ ಬದಲಾವಣೆಯ ಕಸರತ್ತು ಮುಗಿಯಿತೋ? ಇದಾದ ನಂತರ ಸುರ್ಜೇವಾಲಾ ಅವರಿಗೆ ರಾಜ್ಯ ಕಾಂಗ್ರೆಸ್‌ನ ವ್ಯವಹಾರಗಳ ಬಗ್ಗೆ ಆಸಕ್ತಿಯೇ ಉಳಿದಿಲ್ಲ.

ಪರಿಣಾಮ? ಬೋರ್ಡು-ಕಾರ್ಪೊರೇಷನ್ನುಗಳು ಸೇರಿದಂತೆ ಸರ್ಕಾರದ ಲೆವೆಲ್ಲಿನಲ್ಲಿ ಖಾಲಿ ಉಳಿದಿರುವ ಸಾವಿರಾರು ನೇಮಕಾತಿಗಳ ಪಟ್ಟಿ ಹಾಗೆಯೇ ಉಳಿದಿದೆ. ಅಂದ ಹಾಗೆ ದೊಡ್ಡ ಲೆವೆಲ್ಲಿನ ನೇಮಕಾತಿಗಳನ್ನು ಹೊರತುಪಡಿಸಿದರೆ ಸಣ್ಣ ಲೆವೆಲ್ಲಿನ ನೇಮಕಾತಿಗಳ ಬಗ್ಗೆ ಸುರ್ಜೇವಾಲಾ ಅವರಿಗೆ ಆಸಕ್ತಿಯೇ ಇಲ್ಲ. ಈ ವಿಷಯದಲ್ಲಿ ತೀರಾ ಕಿರಿಕಿರಿ ಶುರುವಾದ ಮೇಲೆ ಸಿಎಂ ಡಿ.ಕೆ. ಶಿವಕುಮಾರ್ ದಿಲ್ಲಿಗೆ ಹೋಗಿ ಒಂದಷ್ಟು ನೇಮಕಾತಿಗಳ ಪ್ರಪೋಸಲ್ಲಿಗೆ ಒಪ್ಪಿಗೆ ಪಡೆದು ಬಂದಿದ್ದಾರಾದರೂ ಪೂರ್ಣ ಪ್ರಮಾಣದ ನೇಮಕಾತಿಗಳಿಗೆ ಕಸರತ್ತೇ ನಡೆದಿಲ್ಲ. ಅಂದ ಹಾಗೆ ಪಕ್ಷದ ಉಸ್ತುವಾರಿ ಹೊಣೆ ಹೊತ್ತವರಿಗೆ ಇದು ದೊಡ್ಡದಾಗಿ ಕಾಣಲಿಲ್ಲ ಎಂದರೆ ಅವರಿಗೀಗ ಆಸಕ್ತಿಯೇ ಇಲ್ಲ ಅಂತರ್ಥ. ಹೀಗಾಗಿ ಅವರನ್ನು ಉಸ್ತುವಾರಿ ಹೊಣೆಯಿಂದ ಮುಕ್ತಗೊಳಿಸುವುದು ಬೆಸ್ಟು ಎಂಬುದು ಹಲವು ಶಾಸಕರ ವಾದ. ಈ ವಾದ ಮುಂದಿನ ದಿನಗಳಲ್ಲಿ ಮತ್ತಷ್ಟು ತೀವ್ರತೆ ಪಡೆಯುವುದು ಬಹುತೇಕ ಗ್ಯಾರಂಟಿ.

ಬಾಂಬೆ ಬಾಯ್ಸ್ ಬರಲ್ಲ

ಈ ಮಧ್ಯೆ ಹಿರಿಯ ನಾಯಕ ಹೆಚ್.ವಿಶ್ವನಾಥ್ ಯೂ ಟರ್ನ್ ಹೊಡೆದಿದ್ದಾರೆ. ಅರ್ಥಾತ್, ತಾವು ಹೊರತರಬೇಕು ಅಂದುಕೊಂಡಿದ್ದ ‘ಬಾಂಬೆ ಬಾಯ್ಸ್’ ಕೃತಿಯನ್ನು ಪ್ರಕಟಿಸದೆ ಇರಲು ನಿರ್ಧರಿಸಿದ್ದಾರೆ. ಈ ಹಿಂದೆ 2018ರಲ್ಲಿ ಕುಮಾರಸ್ವಾಮಿ ನೇತೃತ್ವದ ಜೆಡಿಎಸ್- ಕಾಂಗ್ರೆಸ್ ಮೈತ್ರಿ ಸರ್ಕಾರ ಮರುವರ್ಷ ಉರುಳಿತಲ್ಲ? ಆ ಸಂದರ್ಭದಲ್ಲಿ ನಡೆದ ಆಪರೇಷನ್ ಕಮಲ ಕಾರ್ಯಾ ಚರಣೆಗೆ ಕಾಂಗ್ರೆಸ್ ಮತ್ತು ಜೆಡಿಎಸ್‌ನ ಹಲ ಶಾಸಕರು ಗುರಿಯಾಗಿದ್ದರು. ಆ ಸಂದರ್ಭದಲ್ಲಿ ಅಪರೇಷನ್ ಬಲೆಗೆ ಬಿದ್ದ ಈ ಶಾಸಕರನ್ನು ಬಾಂಬೆಗೆ ಕರೆದೊಯ್ದು ಆತಿಥ್ಯ ನೀಡಲಾಗಿತ್ತು. ಮತ್ತು ಈ ಸಂದರ್ಭದಲ್ಲಿ ಏನೇನು ನಡೆಯಿತು? ಎಂಬ ವಿವರಗಳನ್ನು ಅದೇ ಶಾಸಕರ ತಂಡದಲ್ಲಿದ್ದ ಹೆಚ್.ವಿಶ್ವನಾಥ್ ಅವರು ಪುಸ್ತಕ ರೂಪದಲ್ಲಿ ಹೊರತರಲು ನಿರ್ಧರಿಸಿ ದ್ದರು.

ಅಷ್ಟೇ ಅಲ್ಲ, ಇದಕ್ಕೆ ಅಗತ್ಯದ ತಯಾರಿಯನ್ನೂ ಮಾಡಿಕೊಂಡು ಪುಸ್ತಕಕ್ಕೆ ಬಾಂಬೆ ಬಾಯ್ಸ್ ಅಂತ ಹೆಸರಿಡಲು ತೀರ್ಮಾನಿಸಿದ್ದರು. ಅದರೆ ಈ ವಿಷಯ ತಿಳಿಯುತ್ತಿದ್ದಂತೆಯೇ ಅವತ್ತು ಮುಖ್ಯಮಂತ್ರಿ‌ ಗಳಾಗಿದ್ದ ಬಿ.ಎಸ್. ಯಡಿಯೂರಪ್ಪನವರು ವಿಶ್ವನಾಥ್ ಅವರಿಗೆ ಫೊನು ಮಾಡಿ, ‘ಯಾವ ಕಾರಣಕ್ಕೂ ಬಾಂಬೆ ಬಾಯ್ಸ್ ಪುಸ್ತಕ ಹೊರತರಬೇಡಿ’ ಅಂತ ವಿನಂತಿಸಿಕೊಂಡಿದ್ದರು. ‌

ಹೀಗೆ ಯಡಿಯೂರಪ್ಪನವರೇ ಕೋರಿಕೊಂಡಿದ್ದರಿಂದ ಸುಮ್ಮನಾಗಿದ್ದ ವಿಶ್ವನಾಥ್ ಅವರು ಮುಂದೆ ಯಡಿಯೂರಪ್ಪ ಅವರು ಅಧಿಕಾರದಿಂದ ಇಳಿದ ಮೇಲೆ ಮತ್ತೆ ಪುಸ್ತಕ ತರಲು ತಯಾರಾಗಿದ್ದರು. ಆದರೆ ಅಗ ಬಾಂಬೆಗೆ ಹೋದ ತಂಡದಲ್ಲಿದ್ದ ಕೆಲ ಶಾಸಕರು ವಿಶ್ವನಾಥ್ ಅವರಿಗೆ ದುಂಬಾಲು ಬಿದ್ದು, ‘ಇದೆಲ್ಲ ಬೇಡ ಪ್ಲೀಸ್’ ಅಂತ ವಿನಂತಿಸಿಕೊಂಡಿದ್ದರಂತೆ. ಯಥಾ ಪ್ರಕಾರ ವಿಶ್ವನಾಥ್ ಅವರು ಮೌನಕ್ಕೆ ಜಾರಿದರಾದರೂ ಇತ್ತೀಚೆಗೆ ಬಾಂಬೆ ಬಾಯ್ಸ್ ಪುಸ್ತಕದ ಮತ್ತಷ್ಟು ಅಧ್ಯಾಯ ಗಳನ್ನು ಬರೆದಿದ್ದರು. ಆದರೆ ಇನ್ನೇನು ಪುಸ್ತಕ ಹೊರತರಲು ಅಣಿಯಾಗಬೇಕು ಎಂಬಷ್ಟರಲ್ಲಿ ಸ್ಟಿಂಗ್ ಆಪರೇಷನ್ ಗಲಾಟೆ ಶುರುವಾಯಿತಲ್ಲ? ಆಗ ಇದ್ದಕ್ಕಿದ್ದಂತೆ ವಿಶ್ವನಾಥ್ ಬೋಧಿ ವೃಕ್ಷದ ಕೆಳಗೆ ಕುಳಿತ ಬುದ್ಧನಂತಾಗಿ ಹೋಗಿದ್ದಾರೆ.

ಅರ್ಥಾತ್, ಅವರಿಗೆ ಜ್ಞಾನೋದಯವಾಗಿದೆ. ಇವತ್ತು ರಾಜಕಾರಣ ಎಂದರೆ ಯುವ ಪೀಳಿಗೆ ಬೇಸತ್ತು ಹೋಗಿದೆ. ರಾಜಕಾರಣ ಎಂದರೆ ಅನಾಚಾರಗಳ ಸಂತೆ ಎಂಬ ನಿರ್ಧಾರಕ್ಕೆ ಬಂದಿದೆ. ಇಂತಹ ಸಂದರ್ಭದಲ್ಲಿ ತಾವು ‘ಬಾಂಬೆ ಬಾಯ್ಸ್’ ಪುಸ್ತಕವನ್ನು ಹೊರತಂದರೆ ಅ ಪೀಳಿಗೆಯ ಮನಃಸ್ಥಿತಿಗೆ ತುಪ್ಪ ಸುರಿದಂತಾಗುತ್ತದೆ. ಹೀಗೆ ಯುವ ಪೀಳಿಗೆ ವ್ಯವಸ್ಥೆಯ ಮೇಲೆ ನಂಬಿಕೆ ಕಳೆದುಕೊಳ್ಳುವಂತೆ ಮಾಡುವುದು ಸರಿಯಲ್ಲ ಎಂಬುದು ಹೆಚ್.ವಿಶ್ವನಾಥ್ ಅವರ ಯೋಚನೆ. ಹೀಗಾಗಿ ಈ ಸಲ ಯಾರು ಹೇಳದಿದ್ದರೂ ‘ಬಾಂಬೆ ಬಾಯ್ಸ್’ ಕೃತಿಯನ್ನು ಹೊರಗೆ ತರದಿರಲು ಅವರು ನಿರ್ಧರಿಸಿದ್ದಾರೆ.‌

ಲಾಸ್ಟ್ ಸಿಪ್ ‌

ಅಂದ ಹಾಗೆ ಕಾಂಗ್ರೆಸ್ ಹೈಕಮಾಂಡ್ ವರಿಷ್ಟರಿಗೆ ಸಿದ್ದರಾಮಯ್ಯ ಅವರಾಡುತ್ತಿರುವ ಒಂದು ಮಾತು ತುಂಬ ಚಿಂತೆ ತರುತ್ತಿದೆ. ಅದೆಂದರೆ ಇತ್ತೀಚೆಗೆ ತಮ್ಮ ಬಳಿ ಯಾರೇ ಬರಲಿ. ‘ನೋಡ್ರಯ್ಯ, ಈ ಸರ್ಕಾರದಲ್ಲಿ ನನ್ನ ಮಾತು ನಡೆಯುವುದಿಲ್ಲ. ನಾನು ಹೇಳುವ ಯಾವ ಕೆಲಸವೂ ಆಗುವುದಿಲ್ಲ. ಹೀಗಾಗಿ ಯಾರೂ ನನ್ನ ಬಳಿ ಕೆಲಸ ಮಾಡಿಕೊಡಿ ಅಂತ ಹೇಳಬೇಡಿ’ ಅಂತ ಹೇಳುತ್ತಿರುವುದು. ಹೀಗೆ ಅವರು ಬಂದ-ಬಂದವರ ಬಳಿ ಇಂತಹ ಮಾತು ಹೇಳುತ್ತಿದ್ದರೆ ಏನಾಗುತ್ತದೆ? ಕಾಂಗ್ರೆಸ್ ಸರ್ಕಾರ ದಲ್ಲಿ ಸಿದ್ದರಾಮಯ್ಯ ಅವರ ಮಾತು ನಡೆಯುವುದಿಲ್ಲ ಎಂದರೆ ಇಲ್ಲಿ ಅವರಿಗೆ ಪ್ರಾಮಿನೆನ್ಸು ಸಿಗುತ್ತಿಲ್ಲ ಅಂತ ಜನ ಭಾವಿಸುವಂತಾಗುತ್ತದೆ. ಮತ್ತು ಅವರಿಗೇ ಪ್ರಾಮಿನೆನ್ಸು ಇಲ್ಲ ಅಂದ ಮೇಲೆ ಕಾಂಗ್ರೆಸ್‌ನಲ್ಲಿ ತಮಗೆ ಭವಿಷ್ಯವಿಲ್ಲ ಅನ್ನಿಸುತ್ತದೆ. ಇಂತಹ ಅನ್ನಿಸಿಕೆಯೇ ಮತ ಬ್ಯಾಂಕ್‌ಗಳ ಪಲ್ಲಟಕ್ಕೆ ಮೂಲವಾಗಬಹುದು ಎಂಬುದು ವರಿಷ್ಟರ ಆತಂಕ.