Vishweshwar Bhat Column: ನ್ಯಾಷನಲ್ ಜಿಯಾಗ್ರಫಿಕ್ ಮುಖಪುಟ
‘ನ್ಯಾಷನಲ್ ಜಿಯಾಗ್ರಫಿಕ್’ ಪತ್ರಿಕೆಯ ಮುಖಪುಟದ ಅತಿ ದೊಡ್ಡ ದೃಶ್ಯ ವೈಶಿಷ್ಟ್ಯವೆಂದರೆ ಅದರ ದಪ್ಪನೆಯ ಗಾಢ ಹಳದಿ ಬಣ್ಣದ ಚೌಕಟ್ಟು (Yellow Border). 1910ರ ಸುಮಾರಿಗೆ ಪರಿಚಯಿಸಲಾದ ಈ ಆಯತಾಕಾರದ ಹಳದಿ ಚೌಕಟ್ಟು ಇಂದು ಜಾಗತಿಕ ಮಟ್ಟದ ಐಕಾನ್ ಆಗಿದೆ. ಈ ಹಳದಿ ಬಣ್ಣವು ಸೂರ್ಯನ ಬೆಳಕು, ಜ್ಞಾನ, ಅನ್ವೇಷಣೆಯ ಕಾಂತಿ ಮತ್ತು ಭೂಮಿಯ ಮೇಲಿನ ನಿರಂತರ ಕುತೂಹಲ ವನ್ನು ಸಂಕೇತಿಸುತ್ತದೆ.
-
ಸಂಪಾದಕರ ಸದ್ಯಶೋಧನೆ
ವಿಶ್ವ ಪತ್ರಿಕೋದ್ಯಮ ಹಾಗೂ ಛಾಯಾಗ್ರಹಣ ಇತಿಹಾಸದಲ್ಲಿ ‘ನ್ಯಾಷನಲ್ ಜಿಯಾಗ್ರಫಿಕ್’ ಪತ್ರಿಕೆ ಯ ಮುಖಪುಟಕ್ಕೆ ಅತ್ಯಂತ ವಿಶಿಷ್ಟ ಹಾಗೂ ಗೌರವಾನ್ವಿತ ಸ್ಥಾನವಿದೆ. ಮುಖಪುಟವು ಕೇವಲ ಒಂದು ಪತ್ರಿಕೆಯ ಹೊರಭಾಗವಾಗಿರದೇ, ಜಾಗತಿಕ ಅನ್ವೇಷಣೆ, ವಿಜ್ಞಾನ, ಪ್ರಕೃತಿ, ವನ್ಯಜೀವಿ ಮತ್ತು ಮಾನವ ಸಂಸ್ಕೃತಿಗಳ ಅದ್ಭುತ ಲೋಕಕ್ಕೆ ತೆರೆದುಕೊಳ್ಳುವ ಹೆಬ್ಬಾಗಿಲಾಗಿದೆ.
ಪ್ರತಿ ತಿಂಗಳು ವಿಶ್ವದೆಡೆ ಕೋಟ್ಯಂತರ ಓದುಗರ ಕೈಸೇರುವ ಈ ನಿಯತಕಾಲಿಕವನ್ನು ತನ್ನ ಅಪೂರ್ವ ಮುಖಪುಟ ವಿನ್ಯಾಸದಿಂದಲೇ ಮಾರುಕಟ್ಟೆಯಲ್ಲಿ ತಕ್ಷಣವೇ ಗುರುತಿಸುತ್ತಾರೆ. ಶತಮಾನಕ್ಕೂ ಹೆಚ್ಚು ಕಾಲದಿಂದ ಮುಖಪುಟದ ಸೌಂದರ್ಯ ಮತ್ತು ಗುಣಮಟ್ಟವನ್ನು ಕಾಯ್ದುಕೊಂಡು ಬಂದಿರುವ ನಿಖರತೆಯು ಇದನ್ನು ಜಗತ್ತಿನ ಶ್ರೇಷ್ಠ ನಿಯತಕಾಲಿಕೆಗಳ ಸಾಲಿನಲ್ಲಿ ಅಗ್ರಸ್ಥಾನದಲ್ಲಿ ನಿಲ್ಲಿಸಿದೆ.
‘ನ್ಯಾಷನಲ್ ಜಿಯಾಗ್ರಫಿಕ್’ ಪತ್ರಿಕೆಯ ಮುಖಪುಟದ ಅತಿ ದೊಡ್ಡ ದೃಶ್ಯ ವೈಶಿಷ್ಟ್ಯವೆಂದರೆ ಅದರ ದಪ್ಪನೆಯ ಗಾಢ ಹಳದಿ ಬಣ್ಣದ ಚೌಕಟ್ಟು (Yellow Border). 1910ರ ಸುಮಾರಿಗೆ ಪರಿಚಯಿಸ ಲಾದ ಈ ಆಯತಾಕಾರದ ಹಳದಿ ಚೌಕಟ್ಟು ಇಂದು ಜಾಗತಿಕ ಮಟ್ಟದ ಐಕಾನ್ ಆಗಿದೆ. ಈ ಹಳದಿ ಬಣ್ಣವು ಸೂರ್ಯನ ಬೆಳಕು, ಜ್ಞಾನ, ಅನ್ವೇಷಣೆಯ ಕಾಂತಿ ಮತ್ತು ಭೂಮಿಯ ಮೇಲಿನ ನಿರಂತರ ಕುತೂಹಲವನ್ನು ಸಂಕೇತಿಸುತ್ತದೆ.
ಇದನ್ನೂ ಓದಿ: Vishweshwar Bhat Column: ʼಸಿದ್ದುʼರಾಮನ ಹುಂಡಿಯೂ, ಸುತ್ತೂರು ಸನ್ನಿಧಾನವೂ
ಯಾವುದೇ ಭಾಷೆ ಅಥವಾ ಪಠ್ಯವಿಲ್ಲದಿದ್ದರೂ ಸಹ ಕೇವಲ ಆ ಹಳದಿ ಚೌಕಟ್ಟನ್ನು ಕಂಡ ತಕ್ಷಣವೇ ಜನರಿಗೆ ಇದು ನ್ಯಾಷನಲ್ ಜಿಯಾಗ್ರಫಿಕ್ ಎಂಬ ಅರಿವಾಗುತ್ತದೆ. ಪತ್ರಿಕೆಯ ಮುಖಪುಟದ ಮಧ್ಯದಲ್ಲಿ ಮೂಡುವ ಛಾಯಾಚಿತ್ರಕ್ಕೆ ಈ ಚೌಕಟ್ಟು ಒಂದು ಸುಂದರ ಛಾಯಾಚಿತ್ರ ಚೌಕಟ್ಟಿ ನಂತೆ (Photo Frame) ಕೆಲಸ ಮಾಡುತ್ತದೆ. ಆರಂಭಿಕ ದಿನಗಳಲ್ಲಿ, ಅಂದರೆ 1888ರಲ್ಲಿ ಪತ್ರಿಕೆ ಆರಂಭವಾದಾಗ, ಇದರ ಮುಖಪುಟವು ಇಂದಿನಂತೆ ವರ್ಣರಂಜಿತವಾಗಿರಲಿಲ್ಲ. ಕೇವಲ ಕಂದು ಅಥವಾ ಸರಳ ಬಣ್ಣದ ಕಾಗದದ ಮೇಲೆ ಪತ್ರಿಕೆಯ ಹೆಸರು, ಪ್ರಕಟಣೆಯ ವಿವರಗಳು ಮತ್ತು ಒಳಪುಟಗಳಲ್ಲಿರುವ ಲೇಖನಗಳ ಶೀರ್ಷಿಕೆಗಳ ಪಟ್ಟಿ ಮಾತ್ರ ಮುಖಪುಟದಲ್ಲಿ ಮುದ್ರಿತವಾಗುತ್ತಿತ್ತು.
ಯಾವುದೇ ಚಿತ್ರಗಳಿರದ ಆ ಕಾಲದ ಮುಖಪುಟವು ಕೇವಲ ಶೈಕ್ಷಣಿಕ ಸಂಶೋಧನಾ ಜರ್ನಲ್ನಂತೆ ಕಾಣಿಸುತ್ತಿತ್ತು. 1950ರ ನಂತರ ಛಾಯಾಗ್ರಹಣ ತಂತ್ರಜ್ಞಾನ ಬೆಳೆದಂತೆ, ಮುಖಪುಟದಲ್ಲಿ ಬಣ್ಣದ ಚಿತ್ರಗಳಿಗೆ ಪ್ರಾಧಾನ್ಯ ನೀಡಲಾಯಿತು. ಕ್ರಮೇಣ ಪಠ್ಯದ ಗಾತ್ರವನ್ನು ಕಡಿಮೆ ಮಾಡಿ, ಇಡೀ ಮುಖಪುಟವನ್ನು ವ್ಯಾಪಿಸುವಂಥ ಏಕೈಕ ಭಾವಪೂರ್ಣ ಛಾಯಾಚಿತ್ರವನ್ನು ಪ್ರಕಟಿಸುವ ಸಂಪ್ರದಾಯ ಸ್ಥಾಪಿತವಾಯಿತು. ಈ ಪತ್ರಿಕೆಯ ಮುಖಪುಟವನ್ನು ಅಲಂಕರಿಸುವುದು ಪ್ರಪಂಚದ ಯಾವುದೇ ವೃತ್ತಿಪರ ಛಾಯಾಗ್ರಾಹಕನಿಗೆ ಅತ್ಯುನ್ನತ ಕನಸು ಮತ್ತು ಜೀವಮಾನದ ಸಾಧನೆ ಯಾಗಿದೆ.
ಸಾವಿರಾರು ಅದ್ಭುತ ಚಿತ್ರಗಳಲ್ಲಿ ಕೇವಲ ಒಂದು ಚಿತ್ರ ಮಾತ್ರ ಅತ್ಯಂತ ಕಠಿಣ ಸಂಪಾದಕೀಯ ಪರೀಕ್ಷೆಗಳನ್ನು ದಾಟಿ ಮುಖಪುಟಕ್ಕೆ ಆಯ್ಕೆಯಾಗುತ್ತದೆ. ಇಲ್ಲಿ ಕೇವಲ ತಾಂತ್ರಿಕ ಕೌಶಲವಷ್ಟೇ ಸಾಲದು. ಆ ಚಿತ್ರವು ಹೇಳುವ ಕಥೆ, ಅದರಲ್ಲಿ ಅಡಗಿರುವ ಜೀವಂತಿಕೆ, ಭಾವನೆ ಮತ್ತು ವೀಕ್ಷಕರನ್ನು ಹಿಡಿದಿಟ್ಟುಕೊಳ್ಳುವ ಶಕ್ತಿ ಅತ್ಯಗತ್ಯ.
ಮುಖಪುಟಕ್ಕಾಗಿ ಛಾಯಾಗ್ರಾಹಕರು ಅತ್ಯಂತ ಪ್ರತಿಕೂಲ ಪರಿಸ್ಥಿತಿಗಳಲ್ಲಿ, ಅಪಾಯಕಾರಿ ಕಾಡುಗಳಲ್ಲಿ ಅಥವಾ ಹಿಮಪರ್ವತಗಳಲ್ಲಿ ತಿಂಗಳುಗಟ್ಟಲೆ ಕಾಯ್ದು ಅಪರೂಪದ ಕ್ಷಣಗಳನ್ನು ತಮ್ಮ ಕೆಮರಾದಲ್ಲಿ ಸೆರೆಹಿಡಿಯುತ್ತಾರೆ. ‘ನ್ಯಾಷನಲ್ ಜಿಯಾಗ್ರಫಿಕ್’ ಇತಿಹಾಸದ ಅತ್ಯಂತ ಪ್ರಸಿದ್ಧ ಹಾಗೂ ಚಿರಸ್ಮರಣೀಯ ಮುಖಪುಟವೆಂದರೆ ಜೂನ್ 1985ರ ಸಂಚಿಕೆಯಲ್ಲಿ ಪ್ರಕಟವಾದ ‘ಅಫ್ಘಾನ್ ಗರ್ಲ್’. ಸ್ಟೀವ್ ಮೆಕ್ಕರ್ರಿ ಅವರು ಪಾಕಿಸ್ತಾನದ ನಿರಾಶ್ರಿತರ ಶಿಬಿರದಲ್ಲಿ ಸೆರೆ ಹಿಡಿದ ಶರ್ಬತ್ ಗುಲಾ ಎಂಬ ಹನ್ನೆರಡು ವರ್ಷದ ಅಫ್ಘಾನ್ ಬಾಲಕಿಯ ತೀಕ್ಷ್ಣ ಹಸಿರು ಕಣ್ಣುಗಳ ಆ ಮುಖಚಿತ್ರ ಇಡೀ ಜಗತ್ತನ್ನೇ ಬೆಚ್ಚಿಬೀಳಿಸಿತು.
ಆಕೆಯ ಕಣ್ಣುಗಳಲ್ಲಿ ಭಯ, ಸ್ವಾಭಿಮಾನ ಮತ್ತು ಯುದ್ಧಪೀಡಿತ ಜನರ ನೋವು ಒಟ್ಟಿಗೆ ಪ್ರತಿಫಲಿಸುತ್ತಿತ್ತು. ಆ ಮುಖಪುಟವು ಜಾಗತಿಕ ನಿರಾಶ್ರಿತರ ಬಿಕ್ಕಟ್ಟಿಗೆ ಒಂದು ಮುಖವನ್ನು ನೀಡಿ, ನಿಯತಕಾಲಿಕೆಯ ಇತಿಹಾಸದ ಅತಿ ಹೆಚ್ಚು ಗುರುತಿಸಿದ ಮುಖಪುಟ ಎಂಬ ಹೆಗ್ಗಳಿಕೆಗೆ ಪಾತ್ರವಾಯಿತು. ಮುಖಪುಟದಲ್ಲಿ ಮಾನವ ಭಾವನೆಗಳಷ್ಟೇ ಅಲ್ಲದೆ, ವನ್ಯ ಜೀವಿಗಳ ಅದ್ಭುತ ಜಗತ್ತನ್ನು ಅನಾವರಣಗೊಳಿಸಲಾಗಿದೆ.
ಧ್ರುವಪ್ರದೇಶದ ಬಿಳಿ ಕರಡಿಗಳು, ಸಮುದ್ರದ ಆಳದ ತಿಮಿಂಗಿಲಗಳು, ದಟ್ಟ ಅರಣ್ಯದ ಬೇಟೆಗಾರ ಹುಲಿಗಳು ಅಥವಾ ಕೀಟಗಳ ಸೂಕ್ಷ್ಮ ನೋಟಗಳು ಮುಖಪುಟದಲ್ಲಿ ರಾರಾಜಿಸಿವೆ.